Home Blog Page 129

ಕೆಎಸ್ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ; ಸೀಟ್‌ ಬೆಲ್ಟ್‌ ನಿಂದ ಉಳೀತು ವೃದ್ದ ದಂಪತಿ ಜೀವ!

0

ರಾಮನಗರ:- ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವೃದ್ಧ ದಂಪತಿ ಪ್ರಯಾಣಿಸುತ್ತಿದ್ದ ಕಾರು ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ ಮೂರ್ನಾಲ್ಕು ಪಲ್ಟಿಯಾದ ಘಟನೆ ಜರುಗಿದೆ.

ಕಳೆದ ಡಿಸೆಂಬರ್‌ನಲ್ಲಿ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬಳಿ ಈ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಸೀಟ್ ಬೆಲ್ಟ್ ಧರಿಸಿದ್ದರಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಮೂಲದ 84 ವರ್ಷದ ಅಬ್ದುಲ್ ಫಜಲ್ ತಮ್ಮ ಪತ್ನಿ ಜೊತೆ ಸಂಬಂಧಿಕರ ಮದುವೆಗೆ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಎಕ್ಸ್‌ಪ್ರೆಸ್‌ವೇ ಎಕ್ಸಿಟ್ ಬಳಿ ಬಸ್ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿಯಾಗಿತ್ತು. ಡಿಕ್ಕಿ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದಿತ್ತು.

ವೃದ್ಧ ದಂಪತಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಲಿಚೆಂಟೈನ್ ಪ್ರಧಾನಿಗೆ ಸಚಿವ ಎಂ.ಬಿ.ಪಾಟೀಲ್ ಮನವಿ!

0

ದಾವೋಸ್‌: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಸಂದರ್ಭದಲ್ಲಿ, ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ರಾಜ್ಯ ಸರ್ಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಲಿಚೆಂಟೈನ್ ಪ್ರಧಾನಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿ ಮಾಡಿ, ಆ ದೇಶದ ಕೈಗಾರಿಕಾ ಪರಿಣತಿಯನ್ನು ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದೊಂದಿಗೆ ಸಮರ್ಥವಾಗಿ ಬಳಸಿಕೊಳ್ಳುವ ಕುರಿತು ಫಲಪ್ರದ ಚರ್ಚೆ ನಡೆಸಿದರು. ಈ ವೇಳೆ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಲಿಚೆಂಟೈನ್ ಪ್ರಧಾನಿಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಲಾಯಿತು.

ಇದೇ ವೇಳೆ ಜಾಗತಿಕ ಕ್ಲೌಡ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪನಿಗಳನ್ನು ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅಮೆಜಾನ್ ವೆಬ್ ಸರ್ವಿಸಸ್ ಉಪಾಧ್ಯಕ್ಷ ಮೈಕಲ್ ಪುಂಕೆ ಅವರೊಂದಿಗೆ ವಿವರವಾದ ಮಾತುಕತೆ ನಡೆಸಲಾಗಿದ್ದು, ಕರ್ನಾಟಕದಲ್ಲಿನ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲಸೌಲಭ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಸೆಂಟರ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಅಲ್ಲದೆ ಉದ್ಯಮ ಸ್ನೇಹಿ ವಾತಾವರಣದ ಬಗ್ಗೆ ವೋಲ್ವೊ ಕಂಪನಿಯೂ ತೃಪ್ತಿ ವ್ಯಕ್ತಪಡಿಸಿದ್ದು, ತಯಾರಿಕೆ, ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆಯ ಮೂಲಕ ರಾಜ್ಯದಲ್ಲಿನ ವಾಹನ ತಯಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಸರ್ಕಾರ ಆಹ್ವಾನ ನೀಡಿದೆ.

ಕುಡಿದು ವಾಹನ ಚಾಲನೆ: ಬೆಂಗಳೂರಿನಲ್ಲಿ 11,500 ಡಿಎಲ್ ರದ್ದು, ಶಾಲಾ ಬಸ್ ಚಾಲಕರ ಮೇಲೂ ಕಠಿಣ ಕ್ರಮ!

0

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ವರ್ಷ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ದ 12,900 ಚಾಲಕರ ಪೈಕಿ 11,500 ಜನರ ಚಾಲನಾ ಪರವಾನಗಿಯನ್ನು (ಡಿಎಲ್) ರದ್ದು ಮಾಡಲಾಗಿದೆ.

ಈ ಕುರಿತು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ದು, ಪದೇ ಪದೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಚಾಲಕರ ಡಿಎಲ್‌ಗಳನ್ನು ಪರಿಶೀಲಿಸಿ ರದ್ದುಗೊಳಿಸಲಾಗಿದೆ ಎಂದರು. ಉಳಿದ ಪ್ರಕರಣಗಳ ಪರಿಶೀಲನೆಯೂ ಮುಂದುವರಿದಿದೆ. ಇತ್ತೀಚೆಗೆ ಶಾಲಾ ವಾಹನ ಚಾಲಕರು ಕುಡಿದು ವಾಹನ ಚಾಲನೆ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 5,110 ಶಾಲಾ ವಾಹನಗಳ ತಪಾಸಣೆಯಲ್ಲಿ 26 ಬಸ್ ಚಾಲಕರು ಮದ್ಯಪಾನ ಮಾಡಿಕೊಂಡು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ ಚಾಲಕರ ವಿರುದ್ಧ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಡಿಎಲ್ ರದ್ದುಗೊಳಿಸುವಂತೆ ಆರ್‌ಟಿಒಗೆ ವರದಿ ಸಲ್ಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ: ನಿಖಿಲ್ ಕುಮಾರಸ್ವಾಮಿ

0

ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತ ಮಾತಗಳನ್ನಾಡಲಿ. ಅವರು ರಾಜಕೀಯವಾಗಿ ಬೆಳೆದು ಬಂದ ದಾರಿಯನ್ನ ಮರೆತಿದ್ದಾರೆ. ಆ ದಾರಿಯನ್ನ ಮರೆತಿರುವವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಮಂಡ್ಯದ ಹನಕೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ನಮಗೂ ನಾಲಿಗೆಯಿದೆ ಅವರ ತರ ಹರಿಬಿಡುವುದಿಲ್ಲ. ಸಮಯ ಬಂದಾಗ ಜಿಲ್ಲೆಯ ಜನ ಇದಕ್ಕೆ ಉತ್ತರ ಕೊಡ್ತಾರೆ. ಅವರು ಹೇಳಿಕೆ ಕೊಡುವುದಕ್ಕಿಂತ ಮುಂಚೆ ಯೋಚನೆ ಮಾಡಿ ಮಾತನಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಅನ್ನು ಓಡಿಸುವಂತ ಶಕ್ತಿ ಇರುವುದು ಜಿಲ್ಲೆಯ ಜನತೆಗೆ. ಯಾರನ್ನ ಜಿಲ್ಲೆಯಲ್ಲಿ ಉಳಿಸಿಕೊಬೇಕು ಯಾರನ್ನ ಕಳಿಸಬೇಕು ಎಂದು ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಕಳೆದ ಎರಡೂವರೆ ವರ್ಷದ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನ ನೋಡಿದ್ದಾರೆ. ಇವತ್ತು ಗಲ್ಲಿ ಗಲ್ಲಿ ಗಲ್ಲಿಯಲ್ಲಿ ರಾಜ್ಯ ಸರ್ಕಾರವನ್ನು ಬಾಯಿಗೆ ಬಂದಂಗೆ ಬೈತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ರಾಷ್ಟ್ರಮಟ್ಟದ ನಾಯಕರ ಜೊತೆ ನಮ್ಮ ಮೈತ್ರಿ ಆಗಿದೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ ಮೈತ್ರಿ ಗಟ್ಟಿಯಾಗಿದೆ. ಇಲ್ಲಿನ ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳೋ ಭೀತಿಯಲ್ಲಿ ಮೈತ್ರಿ ಬೇಡ ಅಂತಿದ್ದಾರೆ. ನಾವು ನೀವು ಮೈತ್ರಿ ಬಗ್ಗೆ ಚರ್ಚೆ ಮಾಡಿದ್ರೆ ಏನು ಸಿಗುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಹನಕೆರೆ, ಬೂದನೂರು. ಕೊಮ್ಮೇರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಿದರು.ಕಾರ್ಯಕರ್ತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು. ಮಂಡ್ಯದ ಹನಕರೆ ಬಳಿ ಟ್ರ್ಯಾಕ್ಟರ್ ಗಳ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ, ಹಾರ ಹಾಕಿ ನಿಖಿಲ್ ಕುಮಾರಸ್ವಾಮಿ ಅವರನ್ನ ಜೆಡಿಎಸ್ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಪ್ರಮುಖ ಮುಖಂಡರು ಅದ್ದೂರಿಯಾಗಿ ಸ್ಚಾಗತ ಕೋರಿದರು.

ನಂತರ ಮಂಡ್ಯ ಹುಲಿವಾನ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ಮಹಾದ್ವಾರ, ಶ್ರೀ ಹಿರಿದೇವಮ್ಮ ಶ್ರೀ ಅಚ್ಚಾಳಮ್ಮ ಮತ್ತು ಶ್ರೀ ಅಟ್ಟಿಲಕ್ಕಮ್ಮನವರ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಾಮಸ್ಥರು ಎತ್ತಿನಗಾಡಿ ಮೂಲಕ ಅದ್ದೂರಿ ಸ್ವಾಗತ ಕೋರಿದರು.

KLE ಚೇರ್ಮನ್ ಹುದ್ದೆಯಿಂದ ಪ್ರಭಾಕರ ಕೋರೆ ನಿರ್ಗಮನ: ಪ್ರೀತಿ ಕೋರೆ ನೂತನ ಕಾರ್ಯಾಧ್ಯಕ್ಷ

0

ಬೆಳಗಾವಿ: ಸುದೀರ್ಘ 40 ವರ್ಷಗಳ ಕಾಲ ಕರ್ನಾಟಕ ಲಿಂಗಾಯತ ಎಜುಕೇಶನ್ ಸಂಸ್ಥೆ (ಕೆಎಲ್ಇ)ಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಾ. ಪ್ರಭಾಕರ ಕೋರೆ ಇದೀಗ ಆ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಅಚ್ಚರಿಯಾಗಿ ವಾಪಸ್ ಪಡೆದಿದ್ದಾರೆ.

ಕೆಎಲ್ಇ ನಿರ್ದೇಶಕ ಹುದ್ದೆಗೆ ಡಾ. ಪ್ರಭಾಕರ ಕೋರೆ ಮೊದಲು ನಾಮಪತ್ರ ಸಲ್ಲಿಸಿದ್ದರು. ಆದರೆ, ನಂತರ ದಿಢೀರ್ ನಿರ್ಧಾರವಾಗಿ ನಾಮಪತ್ರ ಹಿಂಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. 1984ರಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಅವರು, ಬಳಿಕ ದೀರ್ಘಕಾಲ ಕಾರ್ಯಾಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದರು.

ಡಾ. ಪ್ರಭಾಕರ ಕೋರೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಕೇವಲ 40 ಅಂಗ ಸಂಸ್ಥೆಗಳನ್ನು ಹೊಂದಿತ್ತು. ಅವರ ನಾಯಕತ್ವದಲ್ಲಿ ಸಂಸ್ಥೆ ಗಣನೀಯವಾಗಿ ವಿಸ್ತರಿಸಿಕೊಂಡು, ಪ್ರಸ್ತುತ 240ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿರುವ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.

ಕೆಎಲ್ಇ ನಿರ್ದೇಶಕ ಹುದ್ದೆಗೆ ಸ್ಪರ್ಧಿಸಿದ್ದ ಮಹಾಂತೇಶ ಕೌಜಲಗಿ, ಅಮಿತ್ ಕೋರೆ, ಡಾ. ವಿಶ್ವನಾಥ್ ಪಾಟೀಲ ಸೇರಿದಂತೆ ಒಟ್ಟು 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ, ಡಾ. ಪ್ರಭಾಕರ ಕೋರೆ ಅವರ ಪುತ್ರಿ ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್ಇ ಸಂಸ್ಥೆಯ ಮುಂದಿನ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ.

ಗೋ ಬ್ಯಾಕ್ ಗವರ್ನರ್ ಅನ್ನೋದು ರಾಜಕೀಯ ನಾಟಕ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

0

ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನು ಸಾಧಿಸುವುದಿಲ್ಲ. ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಬದಲಿಗೆ ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಅವರು ದೂರಿದರು. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರುಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಒಮ್ಮೆ ನೆನಪು ಮಾಡಿಕೊಂಡರೆ ಅವರ ಬಣ್ಣ ಏನೆಂದು ಗೊತ್ತಾಗುತ್ತದೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸಮಯ ಪೋಲು ಮಾಡುತ್ತಿದ್ದಾರೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಿಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿದ್ದು ಅಲ್ಲ.

ಜೆ‌.ಹೆಚ್. ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಈಗ ನೋಡಿದರೆ ಅನಗತ್ಯವಾಗಿ ವಿಧಾನಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ವಿಷಯ ಇಟ್ಟಿಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ‌ ಎಂದ ಕೇಂದ್ರ ಸಚಿವರು; ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ‌. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಕಿಡಿಕಾರಿದರು.

ಕಾಫಿನಾಡಲ್ಲೊಂದು ಸಾಗರ ದಾಟಿದ ಪ್ರೇಮ‌ ಕಥೆ: ಪ್ರೀತಿ ಮೂಲಕ ಒಂದಾದ ಭಾರತದ ರಾಮ, ಚೀನಾದ ಬುದ್ಧ!

0

ಚಿಕ್ಕಮಗಳೂರು: ಕಾಫಿನಾಡಲ್ಲಿ ಸಾಗರ ದಾಟಿ ಬಂದ ಅಪರೂಪದ ಪ್ರೇಮಕಥೆಯೊಂದು ಇದೀಗ ಮದುವೆಯಾಗಿ ಮುಕ್ತಾಯ ಕಂಡಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ರೂಪಕ್ ಹಾಗೂ ಚೀನಾ ಮೂಲದ ಯುವತಿ ಜಡೆ ಪ್ರೀತಿಯ ಮೂಲಕ ಒಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ, ಬಳಿಕ ಅದೇ ಪ್ರೀತಿ ಮದುವೆಯವರೆಗೆ ತಲುಪಿದೆ. ಕಾಫಿನಾಡ ಹುಡುಗ ಮತ್ತು ಚೀನಾ ಹುಡುಗಿ ಆಸ್ಟ್ರೇಲಿಯಾದಲ್ಲಿ ಪ್ರೀತಿಸಿ, ಭಾರತದಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಇವರ ಅದ್ಧೂರಿ ವಿವಾಹ ಸಮಾರಂಭವು ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಚೀನಾ ಮೂಲದ ಯುವತಿ ಜಡೆ ಕೈಹಿಡಿದ ರೂಪಕ್‌ಗೆ, ವಧುವಿನ ತಂದೆ-ತಾಯಿ ಚೀನಾದಿಂದಲೇ ಆಗಮಿಸಿ ಧಾರೆ ಎರೆದಿದ್ದು ವಿಶೇಷವಾಗಿತ್ತು.

ಭಾರತ ಮತ್ತು ಚೀನಾದ ಸಂಪ್ರದಾಯಗಳಲ್ಲಿ ಹಲವು ಸಾಮ್ಯತೆಗಳಿವೆ ಎಂದು ಹೇಳಿದ ಜಡೆ, ಎರಡು ದೇಶಗಳ ಸಂಸ್ಕೃತಿಯ ಒಗ್ಗೂಡಿಕೆಗೆ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಚಿಕ್ಕಮಗಳೂರಿನ ನೈಸರ್ಗಿಕ ಸೌಂದರ್ಯ ನೋಡಿ ಫಿದಾ ಆಗಿರುವುದಾಗಿ ಹೇಳಿದರು.

ಇಬ್ಬರ ಮದುವೆಗೆ ಕುಟುಂಬಸ್ಥರು ಸಂಪೂರ್ಣ ಒಪ್ಪಿಗೆ ನೀಡಿದ್ದು, ಸಂಬಂಧಿಕರೆಲ್ಲರನ್ನು ಕರೆದು ರೂಪಕ್ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಯುವಕ-ಯುವತಿ ಇಬ್ಬರೂ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ. ಕಾಫಿನಾಡಲ್ಲಿ ನಡೆದ ಈ ಭಾರತ–ಚೀನಾ ಪ್ರೇಮವಿವಾಹವು ಎಲ್ಲರ ಗಮನ ಸೆಳೆದಿದೆ.

ಕನಿಷ್ಠ ವೇತನಕ್ಕೆ ಆಗ್ರಹಿಸಿ ಉತ್ಖನನ ಜಾಗದಲ್ಲೇ ಕಾರ್ಮಿಕರ ಪ್ರತಿಭಟನೆ: 3 ಮಂದಿ ವಶಕ್ಕೆ

0

ಗದಗ: ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಕಾರ್ಮಿಕರು ಕನಿಷ್ಠ ವೇತನ ಹಾಗೂ ಸುರಕ್ಷಾ ಕಿಟ್ ನೀಡುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಇದು ಉತ್ಖನನ ಕಾರ್ಯದ 8ನೇ ದಿನದಂದು ನಡೆದಿದೆ.

ಉತ್ಖನನ ಕಾರ್ಯದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು, ಜೊತೆಗೆ ಸುರಕ್ಷತಾ ಕಿಟ್ ಒದಗಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಕಾರ್ಮಿಕರು ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದರು.

ಈ ಹೋರಾಟಕ್ಕೆ ನೆರವು ಕಟ್ಟಡ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ನೇತೃತ್ವ ವಹಿಸಿದ್ದರು. ಕಾರ್ಮಿಕರ ಬೆಂಬಲದೊಂದಿಗೆ ಉತ್ಖನನ ಸ್ಥಳದಲ್ಲಿಯೇ ಧರಣಿ ನಡೆಸಲಾಯಿತು.
ಆದರೆ, ಈ ಪ್ರತಿಭಟನೆಗೆ ಸಂಬಂಧಿಸಿ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ.

ಉತ್ಖನನ ಕಾರ್ಯದಲ್ಲಿ ಸುಮಾರು 35ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಭಾಗಿಯಾಗಿದ್ದು, ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಮಿಕರಿಗೆ ಕೈಗೆ ಹೆಡ್‌ಲೈಟ್, ಕಾಲಿಗೆ ಶೂ ಸೇರಿದಂತೆ ಅಗತ್ಯ ಸುರಕ್ಷತಾ ಕಿಟ್ ನೀಡಿಲ್ಲ ಎಂದು ತಿಳಿದುಬಂದಿದೆ.

ಈ ವಿಷಯ ತಿಳಿದ ನಂತರ ನೆರವು ಕಟ್ಟಡ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ಬೆಂಗಳೂರಿನಿಂದ ಲಕ್ಕುಂಡಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. “ವರದಿ ನೋಡಿ ನಾನು ಇಲ್ಲಿ ಬಂದಿದ್ದೇನೆ. ಕಾರ್ಮಿಕರ ಜೀವದ ಜೊತೆ ಆಟ ಆಡಬಾರದು. ಕೂಡಲೇ ಸುರಕ್ಷತಾ ಕಿಟ್ ಹಾಗೂ ಅಗತ್ಯ ಸೌಲಭ್ಯ ನೀಡಬೇಕು” ಎಂದು ಅವರು ಆಗ್ರಹಿಸಿದರು.

ಸ್ಥಿತಿಗತಿ ಬಿಗಡಾಯಿಸುತ್ತಿದ್ದಂತೆ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ಸೇರಿದಂತೆ ಒಟ್ಟು ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಮುಖ್ಯ ಶಿಕ್ಷಕ ಸೇರಿ 6 ಮಂದಿಯ ವಿರುದ್ಧ FIR !

0

ಯಾದಗಿರಿ: ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೃತ ವಿದ್ಯಾರ್ಥಿಯನ್ನು ಪವನ್ (15) ಎಂದು ಗುರುತಿಸಲಾಗಿದ್ದು, ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಜ.21ರಂದು ಶಾಲಾ ಆವರಣದ ಹಿಂಭಾಗದಲ್ಲಿ ಪವನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಾಥಮಿಕವಾಗಿ ವರದಿಯಾಗಿತ್ತು.

ಈ ಘಟನೆ ಬಳಿಕ ಪವನ್ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಪೋಷಕರು, ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪವನ್ ತಂದೆ ಮಲ್ಲಪ್ಪ ನೀಡಿದ ದೂರಿನ ಆಧಾರದ ಮೇಲೆ, ಶಾಲೆಯ ಮುಖ್ಯ ಶಿಕ್ಷಕ ಅಯ್ಯಪ್ಪ ಸೇರಿದಂತೆ ಆರು ಮಂದಿ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಪ್ರಕರಣದಲ್ಲಿ ನಿಜವಾಗಿಯೂ ಶಿಕ್ಷಕರ ವರ್ತನೆಯಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ʻಅಪ್ಪ ನನಗೆ ಜೀವನ ಸಾಕಾಗಿದೆ, ಹುಡುಕ್ಬೇಡಿʼ- ಝಾಕಿಯಾಳನ್ನು ಕೊಂದು ಅವಳದ್ದೇ ಮೊಬೈಲ್‌ನಿಂದ ಮೆಸೇಜ್‌ ಕಳ್ಸಿದ್ದ ಆರೋಪಿ

0

ಧಾರವಾಡ: ಧಾರವಾಡ ಹೊರವಲಯದಲ್ಲಿ ನಡೆದ ಯುವತಿ ಝಾಕಿಯಾ ಕೊಲೆ ಪ್ರಕರಣ ಇದೀಗ ರಾಜ್ಯವನ್ನೇ ಬೆಚ್ಚಿಬೀಳಿಸುವ ಹಂತ ತಲುಪಿದೆ. ಪ್ರಕರಣದ ತನಿಖೆಯಲ್ಲಿ ಒಂದಕ್ಕೊಂದು ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿವೆ.

ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಝಾಕಿಯಾ ಹಾಗೂ ಸಾಬೀರ್ ಸಂಬಂಧಕ್ಕೆ ಎರಡೂ ಕುಟುಂಬಗಳೂ ಒಪ್ಪಿಗೆ ನೀಡಿದ್ದು, ಮದುವೆಗೂ ನಿಶ್ಚಯವಾಗಿತ್ತು. ಆದರೆ ಪ್ರೇಮ ಕಥೆಯೇ ಕೊನೆಯಲ್ಲಿ ಭೀಕರ ಅಂತ್ಯ ಕಂಡಿದೆ.

ಜನವರಿ 21ರಂದು ಸಾಬೀರ್ ಪರಿಚಯಸ್ಥರ ಕಾರಿನಲ್ಲಿ ಝಾಕಿಯಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದ. ಬಳಿಕ ಇಬ್ಬರೂ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕಾರಿನೊಳಗೆ ಜಗಳ ನಡೆದಿದೆ. ಮಾತಿನ ಜಗಳ ಕ್ರಮೇಣ ವಿಕೋಪಕ್ಕೆ ತಿರುಗಿ, ಆಕ್ರೋಶದ ಭರದಲ್ಲಿ ಸಾಬೀರ್ ಝಾಕಿಯಾಳ ವೇಲ್ ಬಳಸಿ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ.

ಹತ್ಯೆ ಮಾಡಿದ ನಂತರ ಶವವನ್ನು ಅಲ್ಲಿಯೇ ಬಿಟ್ಟು, ಝಾಕಿಯಾಳ ಮೊಬೈಲ್‌ನಿಂದಲೇ ಆಕೆಯ ತಂದೆಗೆ ‘ನನಗೆ ಜೀವನ ಸಾಕಾಗಿದೆ, ಮನೆಗೆ ಬರೋದಿಲ್ಲ, ನನ್ನನ್ನು ಹುಡುಕಬೇಡಿ’ ಎಂಬ ಮೆಸೇಜ್ ಕಳುಹಿಸಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ.

ಶವ ಪತ್ತೆಯಾದ ಮಾರನೇ ದಿನ, ಸಾಬೀರ್ ತನಗೆ ಏನೂ ಗೊತ್ತಿಲ್ಲ ಎಂಬಂತೆ ಘಟನಾ ಸ್ಥಳಕ್ಕೆ ಬಂದಿದ್ದಾನೆ. ಆದರೆ ಈ ನಡುವೆ ಆತ ತನ್ನ ಮೊಬೈಲ್‌ನಲ್ಲಿದ್ದ ಝಾಕಿಯಾಳ ಫೋಟೋಗಳು, ಕಾಲ್ ಹಿಸ್ಟರಿ ಹಾಗೂ ವಾಟ್ಸಪ್ ಚಾಟಿಂಗ್‌ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದ. ಈ ಅನುಮಾನಾಸ್ಪದ ನಡೆ ಪೊಲೀಸರ ಗಮನ ಸೆಳೆದು, ತನಿಖೆ ತೀವ್ರಗೊಂಡಿತು.

ಪೊಲೀಸರು ಸಾಬೀರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿದ ಸಂಪೂರ್ಣ ಸತ್ಯ ಬಯಲಾಗಿದ್ದು, ಇದೀಗ ಹೆಚ್ಚಿನ ವಿಚಾರಣೆ ಮುಂದುವರೆದಿದೆ. ಧಾರವಾಡ ಪೊಲೀಸರು ಸ್ಥಳ ಮಹಜರು ಕೂಡ ಪೂರ್ಣಗೊಳಿಸಿದ್ದಾರೆ.

error: Content is protected !!