Home Blog Page 13

ಗಂಟಲು ಸೋಂಕು, ಜ್ವರ–ಕೆಮ್ಮಿನಿಂದ ಅನಾರೋಗ್ಯ: ಎನ್‌ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು:

0

ಪುಣೆ: ಎನ್‌ಸಿಪಿ ನಾಯಕ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಅನಾರೋಗ್ಯದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಟಲು ಸಂಬಂಧಿತ ಸೋಂಕು, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಶರದ್ ಪವಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಾರಾಮತಿಯಲ್ಲಿರುವ ತಮ್ಮ ನಿವಾಸದಲ್ಲಿದ್ದಾಗಲೇ ಶರದ್ ಪವಾರ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಅವರನ್ನು ಪುಣೆಗೆ ಸ್ಥಳಾಂತರಿಸಲಾಯಿತು.

ಪ್ರಸ್ತುತ ಶರದ್ ಪವಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ತಂಡವು ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದು, ಅವರ ಪ್ರತಿಕ್ರಿಯೆ ಆಧರಿಸಿ ಮುಂದಿನ ಚಿಕಿತ್ಸಾ ಕ್ರಮ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಶರದ್ ಪವಾರ್ ಅವರ ಪುತ್ರಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಅಳಿಯ ಸದಾನಂದ ಸುಳೆ ಅವರು ಹಾಜರಿದ್ದು, ಕುಟುಂಬದವರು ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿದ್ದಾರೆ.

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಮುಂಬೈಯನ್ನು ಮಣಿಸಿದ ಕರ್ನಾಟಕ! ಸೆಮಿಫೈನಲ್‌ʼಗೆ ಲಗ್ಗೆ

0

ಮುಂಬೈ: ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ 2025–26ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ, ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಮುಂಬೈ ನೀಡಿದ್ದ 326 ರನ್‌ಗಳ ಗುರಿಯನ್ನು ಕರ್ನಾಟಕ ನಾಲ್ಕನೇ ದಿನದಾಟದ ಎರಡನೇ ಸೆಷನ್‌ನಲ್ಲಿ 6 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಮಹತ್ವದ ಗೆಲುವು ದಾಖಲಿಸಿದೆ.

ಕರ್ನಾಟಕದ ಈ ಐತಿಹಾಸಿಕ ಜಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದರು. ರಾಹುಲ್ 130 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅವರಿಗೆ ಸಾಥ್ ನೀಡಿದ ಆರ್. ಸ್ಮರಣ್ ಅಜೇಯ 83 ರನ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಕರ್ನಾಟಕದ ಕಟ್ಟುನಿಟ್ಟಿನ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಖಿಲ್ ಹೆರ್ವಾಡ್ಕರ್ 60 ರನ್ ಗಳಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗಮನಾರ್ಹ ಕೊಡುಗೆ ನೀಡಲಿಲ್ಲ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕವೂ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. ತಂಡದ ಪರ ಮಯಾಂಕ್ ಅಗರ್ವಾಲ್ 92 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿ ತಂಡಕ್ಕೆ ಆಧಾರ ಒದಗಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕರ್ನಾಟಕ 173 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕಕ್ಕೆ 53 ರನ್‌ಗಳ ಮುನ್ನಡೆ ಲಭಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ ಭರ್ಜರಿ ಪ್ರದರ್ಶನ ತೋರಿ 377 ರನ್‌ಗಳನ್ನು ಕಲೆಹಾಕಿತು. ಆಕಾಶ್ ಆನಂದ್ 70 ರನ್‌ಗಳ ಇನ್ನಿಂಗ್ಸ್ ಆಡಿದರೆ, ಇತರ ಆಟಗಾರರು ಸಹ ಉಪಯುಕ್ತ ಕೊಡುಗೆ ನೀಡಿದರು. ಇದರಿಂದ ಕರ್ನಾಟಕದ ಮುಂದಿಟ್ಟ ಗುರಿ 325 ರನ್‌ಗಳಾಗಿತ್ತು.

ನಾಲ್ಕನೇ ದಿನ ಗುರಿ ಬೆನ್ನಟ್ಟಿದ ಕರ್ನಾಟಕ, ಕೆಎಲ್ ರಾಹುಲ್ ಅವರ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕದ ನೆರವಿನಿಂದ ಆತ್ಮವಿಶ್ವಾಸದ ಆಟವಾಡಿತು. 147 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ ಶತಕ ಪೂರೈಸಿದ ರಾಹುಲ್, ನಂತರವೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡವನ್ನು 250 ರನ್‌ಗಳ ಗಡಿ ದಾಟಿಸಿದರು. ಸ್ಮರಣ್ 123 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 83 ರನ್‌ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ವಿದ್ಯಾದರ್ ಪಾಟೀಲ್ ಅಜೇಯ 31 ರನ್‌ಗಳ ಸಹಾಯದಿಂದ ಕರ್ನಾಟಕವನ್ನು ಸೆಮಿಫೈನಲ್‌ಗೆ ಕರೆದೊಯ್ದರು.

ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

0

ಬೆಂಗಳೂರು: “ಕಳೆದ 12 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಖಾಲಿ ಟ್ರಂಕ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ಹಿಡಿದಿರುವುದು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿರುಗೇಟು ನೀಡಿದ್ದಾರೆ.ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ಅವರು ಮೆಟ್ರೋ ನಿಲ್ದಾಣ ಬಳಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಮೆಟ್ರೋ ದರ ಏರಿಕೆ ಬಗ್ಗೆ ಅವರು ಮಾತನಾಡುವುದೇನೆ ಇದ್ದರೂ ಅದು ಪ್ರಧಾನಮಂತ್ರಿಗಳ ಮುಂದೆ ಮಾತನಾಡಲಿ.

ಮೆಟ್ರೋ ನಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಿರುವವರು ಯಾರು? ತೇಜಸ್ವಿ ಸೂರ್ಯ ಅವರು ಮೆಟ್ರೋ ನಮ್ಮ ಕೊಡುಗೆ ರಾಜ್ಯ ಸರ್ಕಾರದ್ದಲ್ಲ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಮೆಟ್ರೋ ಕೇಂದ್ರ ಸರ್ಕಾರದ ಸಮಿತಿ ಕೈಯಲ್ಲಿದೆ. ಆ ಸಮಿತಿ ತೀರ್ಮಾನದಂತೆ ಮೆಟ್ರೋ ದರ ಏರಿಕೆ ಮಾಡಲಾಗುತ್ತದೆ. ದರ ಏರಿಕೆ ಆಗಬಾರದು ಎಂಬುದೂ ನಮ್ಮ ಇಚ್ಛೆ. ತೇಜಸ್ವಿ ಸೂರ್ಯ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಅವರು ತೀರ್ಮಾನ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ” ಎಂದು ಸುರೇಶ್ ಅವರು ವಾಗ್ದಾಳಿ ನಡೆಸಿದರು.

“ಅವರು ಖಾಲಿ ಟ್ರಂಕ್ ಹಿಡಿದಿರುವುದು, ಕರ್ನಾಟಕದ 4.5- 5 ಲಕ್ಷ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿಕೊಂಡು ಹೋಗುತ್ತಿರುವುದನ್ನು ತೋರಿಸಲು. ಕೇಂದ್ರ ಸರ್ಕಾರ ಕಳೆದ 12 ವರ್ಷಗಳಿಂದ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಪಟ್ಟಿ ಹೇಳಲಿ. ಬೆಂಗಳೂರಿಗೆ ಅವರ ಕೊಡುಗೆ ಖಾಲಿ ಡಬ್ಬ ಎಂದು ತೇಜಸ್ವಿ ಸೂರ್ಯ ತೋರಿಸುತ್ತಿರುವುದನ್ನು ಮಾಧ್ಯಮಗಳು ಚೆನ್ನಾಗಿ ತೋರಿಸಿ” ಎಂದು ಕಿಡಿಕಾರಿದರು.

ದರ ಏರಿಕೆಗೆ ಕಾರಣ ಯಾರು? ಎಂದು ಕೇಳಿದಾಗ, “ರಾಜ್ಯ ಸರ್ಕಾರದ ಪಾತ್ರ ಇದೆ. ದರ ಇಳಿಕೆ ಬಗ್ಗೆ ಕೇಂದ್ರದ ಸಮಿತಿ ಮುಂದೆ ಪ್ರಸ್ತಾವನೆ ನೀಡಲಾಗಿದೆ. ಕೇಂದ್ರ ಸಮಿತಿಯ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದ ಮೇರೆಗೆ ಈ ತೀರ್ಮಾನ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರು ತಮ್ಮ ಬದ್ಧತೆಯನ್ನು ಕೇಂದ್ರ ಸರ್ಕಾರದ ಮುಂದೆ ಪ್ರದರ್ಶಿಸಲಿ” ಎಂದು ತಿಳಿಸಿದರು.

ಮೆಟ್ರೋ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ನೀಡದಿರುವುದಕ್ಕೆ ದರ ಏರಿಕೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೆಟ್ರೋ ಯೋಜನೆಗಳಿಗೆ 10% ಹಣ ನೀಡುತ್ತದೆ. ರಾಜ್ಯ ಸರ್ಕಾರ 10% ಹಣದ ಜೊತೆಗೆ ಯೋಜನೆ ಜಾರಿಗೆ ಅಗತ್ಯವಿರುವ ಭೂಸ್ವಾಧೀನ ಪರಿಹಾರ ಮೊತ್ತವನ್ನು ಭರಿಸಬೇಕು. ಇದರಿಂದ ರಾಜ್ಯ ಸರ್ಕಾರದ ಪಾಲು ಸುಮಾರು 17%ರಷ್ಟು ಇರುತ್ತದೆ. ಉಳಿದ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುವುದು. ಅದರ ಹೊರೆ ಪ್ರಯಾಣಿಕರ ಮೇಲೆ ಬೀಳುತ್ತದೆ. ಸಮಯ ಸಿಕ್ಕಾಗ ಮೆಟ್ರೋ ನಮ್ಮದು ಎಂದು ಶೋ ಕೊಟ್ಟು, ಈಗ ಖಾಲಿ ಡಬ್ಬ ತೋರುತ್ತಿದ್ದಾರೆ” ಎಂದು ಹರಿಹಾಯ್ದರು

ಕೊರೋನಾದಿಂದ ಟ್ರಾವೆಲ್ಸ್ ಲಾಸ್: ಮಾಸ್ಕ್ ಧರಿಸಿ ಮನೆಗಳ್ಳತನಕ್ಕಿಳಿದ ಆರೋಪಿ ಅರೆಸ್ಟ್!

0

ಬೆಂಗಳೂರು: ಕೊರೋನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ರಾಜಾ ಬಂಧಿತ ಆರೋಪಿಯಾಗಿದ್ದು, ದಾವಣಗೆರೆ ಭಾಗದಲ್ಲಿ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ರಾಜಾ,

ಕೊರೋನಾ ಸಮಯದಲ್ಲಿ ಭಾರೀ ನಷ್ಟ ಅನುಭವಿಸಿದ್ದ. ಜೀವನ ಸಾಗಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆ ಮಾಸ್ಕ್ ಧರಿಸಿ ಕಳ್ಳತನ ಮಾಡಲು ಆರಂಭಿಸಿದ್ದ. ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಈತನ ವಿರುದ್ಧ ಈಗಾಗಲೇ 18 ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಸದ್ಯ ಬಂಧಿತನಿಂದ ಸುಮಾರು 1.84 ಕೋಟಿ ರೂ. ಮೌಲ್ಯದ 1.25 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧನದ ಬಳಿಕ ಬೆಂಗಳೂರಿನ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೈಯಪ್ಪನಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಪಂದ್ಯಗಳಿಗೆ ಅವಕಾಶ: ಬುಧವಾರ ಅಧಿಕಾರಿಗಳ ಸಭೆ ಬಳಿಕ ತೀರ್ಮಾನ – ಸಚಿವ ಜಿ.ಪರಮೇಶ್ವರ್

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ಪಂದ್ಯಗಳಿಗೆ ಅವಕಾಶ ನೀಡುವ ಕುರಿತು ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಅದರ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಐಪಿಎಲ್ ಕ್ರಿಕೆಟ್ ಪಂದ್ಯಗಳ ಆಯೋಜನೆ ಸಂಬಂಧ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ನಿಯೋಗವು ಬುಧವಾರ ಸದಾಶಿವನಗರದಲ್ಲಿರುವ ಗೃಹ ಸಚಿವರ ನಿವಾಸದಲ್ಲಿ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, “ಪಂದ್ಯಗಳಿಗೆ ಅವಕಾಶ ನೀಡುವ ಬಗ್ಗೆ ಬುಧವಾರ ಅಧಿಕಾರಿಗಳ ಸಭೆ ಕರೆದಿದ್ದೇವೆ. ಅಲ್ಲಿ ಈ ವಿಷಯವನ್ನು ವಿವರವಾಗಿ ಚರ್ಚಿಸಲಾಗುತ್ತದೆ. ನಮ್ಮ ಶಿಫಾರಸುಗಳನ್ನು ಎಷ್ಟರಮಟ್ಟಿಗೆ ಪಾಲಿಸಲಾಗಿದೆ ಎಂಬುದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಂಗಳೂರಿನಲ್ಲಿ ಪಂದ್ಯ ನಡೆಯಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕಾಲ್ತುಳಿತದಂತಹ ಘಟನೆಗಳು ಮರುಕಳಿಸಬಾರದು. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರ ಮಾಡುತ್ತೇವೆ” ಎಂದು ಹೇಳಿದರು.

ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸರ್ಕಾರದ ಮಟ್ಟದಲ್ಲಿಯೂ ಜಿಬಿಎ ಹಾಗೂ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯೂ ಹಲವು ಶಿಫಾರಸುಗಳನ್ನು ನೀಡಿದೆ ಎಂದರು.

“ಐಪಿಎಲ್ ಪಂದ್ಯಗಳು ಸಮೀಪಿಸುತ್ತಿದ್ದು, ಸರ್ಕಾರದ ಕಡೆಯಿಂದ ಅನುಮತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿಸಿದವರಿಗೆ ಯಾವ ರೀತಿಯ ಸೂಚನೆ ನೀಡಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೂ ಚರ್ಚಿಸಲಾಗುವುದು” ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಮದುವೆ ಮಾತುಕತೆ ನಡುವೆಯೇ ಕೆನಡಾದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕನ್ನಡಿಗ

0

ನೆಲಮಂಗಲ: ಕೆನಡಾದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನ್ನಡಿಗ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ನೆಲಮಂಗಲ ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ (37) ಅವರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡಗಟ್ಟಿ ಹತ್ತಾರು ಬಾರಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದ ಚಂದನ್, ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲೂ ಸಾರುತ್ತಿದ್ದ ಚಂದನ್, ಸ್ನೇಹವಂತ ಮತ್ತು ಶಾಂತ ಸ್ವಭಾವದ ವ್ಯಕ್ತಿ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ತಿಳಿಸಿದ್ದಾರೆ.

ಘಟನೆ ಕುರಿತು ನಿನ್ನೆ ಟೊರೊಂಟೋ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಹತ್ಯೆಯ ಹಿನ್ನೆಲೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಾವುದೇ ವೈಷಮ್ಯ, ಬೆದರಿಕೆ ಅಥವಾ ಅಪರಾಧ ಹಿನ್ನೆಲೆ ಬಗ್ಗೆ ಕುಟುಂಬಕ್ಕೆ ಮಾಹಿತಿ ಇಲ್ಲ.

ಮೃತನ ತಂದೆ ನಂದ ಕುಮಾರ್ ಅವರ ನೋವಿನ ಮಾತುಗಳು ಹೃದಯವನ್ನೇ ಹಿಂಡುತ್ತವೆ.
“ಮಗನಿಗೆ ಹುಡುಗಿಯನ್ನು ನೋಡುತ್ತಿದ್ದೆವು. ಭಾರತಕ್ಕೆ ಬರ್ತೀನಿ ಅಂತ ಹೇಳಿದ್ದ. ಈಗ ಈ ದುಃಖ… ಮಗನ ಶವವನ್ನಾದರೂ ನಮ್ಮ ಮನೆಗೆ ತಂದು ಕೊಡಿ” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಟುಂಬಸ್ಥರು ಯಾವುದೇ ಮಾಹಿತಿ ಇಲ್ಲದೆ ಪರದಾಡುತ್ತಿದ್ದು, ಕೆನಡಾದಿಂದ ಮೃತದೇಹವನ್ನು ಭಾರತಕ್ಕೆ ತರಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಗೊಂದಲದಲ್ಲಿದ್ದಾರೆ. ವಿದೇಶದಲ್ಲಿ ಕನ್ನಡಿಗರ ಸುರಕ್ಷತೆ ಪ್ರಶ್ನೆಯಾಗಿ ಮತ್ತೆ ಎದ್ದಿರುವ ಈ ಪ್ರಕರಣದ ಬಗ್ಗೆ ಕೆನಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯಂತ ಪುಕ್ಕಲ, ಹೇಡಿ ಮುಖ್ಯಮಂತ್ರಿ: ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

0

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಕಂಡಂತಹ ಅತ್ಯಂತ ಪುಕ್ಕಲ ಮತ್ತು ಹೇಡಿ ಮುಖ್ಯಮಂತ್ರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಹರಿಹರದಲ್ಲಿರುವ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜನಪ್ರತಿನಿಧಿಯಾಗಿ ಜನರ ಪರ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು. ಆದರೆ, ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಈ ಸರ್ಕಾರ, ಪ್ರತಿಭಟನೆಗೆ ಆಗಮಿಸಿದವರನ್ನೇ ಬಂಧಿಸುವ ಮೂಲಕ ತನ್ನ ನೈಜ ಸ್ವರೂಪವನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದೊಳಗೆ ಎರಡು ಬಾರಿ ಮೆಟ್ರೋ ದರ ಏರಿಕೆ ಮಾಡಿರುವುದು ಜನರ ತಾಳ್ಮೆಯ ಕಟ್ಟೆಯನ್ನು ಒಡೆದಿದೆ. ಅದನ್ನು ತಡೆಯಲು ಸಂಸದ ತೇಜಸ್ವಿ ಸೂರ್ಯ ಹೋರಾಟ ನಡೆಸಿದ್ದು, ದರ ಏರಿಕೆಯನ್ನು ತಡೆ ಹಿಡಿದಿದ್ದಾರೆ ಎಂದು ಹೇಳಿದರು.

ಮೆಟ್ರೋ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದೆ. ಆದರೆ, ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಮೆಟ್ರೋಗೆ ಅಗತ್ಯ ಅನುದಾನ ನೀಡದೇ, ಜನರ ಮೇಲೆ ದರ ಏರಿಕೆಯ ಹೊರೆ ಹಾಕಿದೆ ಎಂದು ಆರೋಪಿಸಿದರು. ಈ ಅನ್ಯಾಯದ ವಿರುದ್ಧ ಹೋರಾಟ ಮಾಡಿ ತೇಜಸ್ವಿ ಸೂರ್ಯ ಜನರಿಗೆ ನ್ಯಾಯ ಕೊಡಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ತಂತ್ರಜ್ಞಾನಕ್ಕೆ ಗುಲಾಮರಾಗಬೇಡಿ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ

0

ನವದೆಹಲಿ: ವಿದ್ಯಾರ್ಥಿಗಳು ತಂತ್ರಜ್ಞಾನ ತಮ್ಮನ್ನು ಗುಲಾಮರನ್ನಾಗಿಸಲು ಬಿಡಬಾರದು. ಬದಲಿಗೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತಂತ್ರಜ್ಞಾನವನ್ನು ಉಪಯೋಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ಇಂದು ಕೊಯಮತ್ತೂರು, ರಾಯ್ಪುರ, ಗುವಾಹಟಿ ಹಾಗೂ ಗುಜರಾತ್‌ನ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಂತ್ರಜ್ಞಾನ ಬಳಕೆಯ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.

ಇಂದಿನ ದಿನಗಳಲ್ಲಿ ಕೆಲವು ಮಕ್ಕಳನ್ನು ಮೊಬೈಲ್ ಫೋನ್‌ಗಳು ಆಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಧಾನಿ, “ಕೆಲವು ಮಕ್ಕಳು ಊಟ ಮಾಡುವಾಗಲೂ ಮೊಬೈಲ್ ಅಥವಾ ಟಿವಿ ಬೇಕು ಎನ್ನುತ್ತಾರೆ. ಇದರರ್ಥ ಅವರು ತಂತ್ರಜ್ಞಾನಕ್ಕೆ ಗುಲಾಮರಾಗುತ್ತಿದ್ದಾರೆ. ತಂತ್ರಜ್ಞಾನ ನಿಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳುವ ದೃಢ ಸಂಕಲ್ಪವನ್ನು ಮಾಡಬೇಕು” ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಮೋದಿ ತಿಳಿಸಿದರು.

ಪರೀಕ್ಷಾ ಸಿದ್ಧತೆಯ ಕುರಿತು ಮಾತನಾಡಿದ ಪ್ರಧಾನಿ, ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. “ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರೆ ಪರೀಕ್ಷೆಯ ಬಗ್ಗೆ ಭಯ ಅಥವಾ ಚಿಂತೆ ಇರುವುದಿಲ್ಲ” ಎಂದು ಹೇಳಿದರು.

ಅಲ್ಲದೆ, ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟು ಓದುವುದಕ್ಕಿಂತ ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ. “ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ಮುಂದಿನ ದಿನ ಉಲ್ಲಾಸವಾಗಿರಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು.

Gold Rate: ಭಾರಿ ಏರಿಕೆ ಕಂಡ ಚಿನ್ನದ ಬೆಲೆ: 2240 ರೂ ಹೆಚ್ಚಳ, ಬೆಳ್ಳಿ ಬೆಲೆಯೂ 3 ಲಕ್ಷಕ್ಕೇರಿಕೆ!

0

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಳಿತ ಮುಂದುವರಿದಿದ್ದು, ಫೆಬ್ರವರಿ ತಿಂಗಳ ಎರಡನೇ ವಾರದ ವಹಿವಾಟು ಚಿನ್ನದ ಬೆಲೆ ಏರಿಕೆಯೊಂದಿಗೆ ಆರಂಭವಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಜೊತೆಗೆ ಬೆಳ್ಳಿ ದರವೂ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ ₹224 ಏರಿಕೆಯಾಗಿದ್ದು, 10 ಗ್ರಾಂಗೆ ಒಟ್ಟಾರೆ ₹2,240 ಹೆಚ್ಚಳವಾಗಿದೆ. ಇದರೊಂದಿಗೆ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹15,884 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,58,840ಕ್ಕೆ ಏರಿಕೆಯಾಗಿದೆ.

ಇನ್ನು 22 ಕ್ಯಾರೆಟ್ ಚಿನ್ನದ ದರವೂ ಹೆಚ್ಚಳ ಕಂಡಿದ್ದು, 1 ಗ್ರಾಂಗೆ ₹205 ಹಾಗೂ 10 ಗ್ರಾಂಗೆ ₹2,050 ಏರಿಕೆಯಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹1,45,600 ಆಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್ ಶುದ್ಧ ಚಿನ್ನದ 1 ಗ್ರಾಂ ಬೆಲೆ ₹15,884 ಇದ್ದು, 10 ಗ್ರಾಂಗೆ ₹1,58,840 ದರ ನಿಗದಿಯಾಗಿದೆ. ಈ ದರಗಳಲ್ಲಿ ಜಿಎಸ್‌ಟಿ ಸೇರಿಲ್ಲ. ಹೀಗಾಗಿ ಚಿನ್ನಾಭರಣ ಮಳಿಗೆಗಳಲ್ಲಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ.

ಇತ್ತ ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ ದಾಖಲಾಗಿದ್ದು, ಇಂದು ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹15 ಏರಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಗ್ರಾಂ ಬೆಲೆ ₹300 ಆಗಿದೆ. ಕೆಜಿ ಬೆಲೆಯಲ್ಲಿ ₹15,000 ಹೆಚ್ಚಳವಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ ₹3,00,000ಕ್ಕೆ ತಲುಪಿದೆ.

ವಿವಾಹಿತನೊಂದಿಗೆ ಪ್ರೀತಿ: ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ.!

0

ಮಂಡ್ಯ: ವಿವಾಹಿತನೊಂದಿಗೆ ಯುವತಿಯ ಪ್ರೀತಿ  ಹಿನ್ನೆಲೆ ತಾಯಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಂಕುತಲಾದೇವಿ (46) ಹಾಗೂ ಮಗಳು ಪ್ರಿಯಾಂಕ (19) ಎಂದು ಗುರುತಿಸಲಾಗಿದೆ.

ದಳವಾಯಿ ಕೋಡಿಹಳ್ಳಿ ಗ್ರಾಮದ ಮುತ್ತುರಾಜ್ (34) ಎಂಬ ವಿವಾಹಿತನೊಂದಿಗೆ ಪ್ರಿಯಾಂಕ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮುತ್ತುರಾಜ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮುತ್ತುರಾಜ್ ಪ್ರತಿದಿನ ಪ್ರಿಯಾಂಕ ಮನೆಗೆ ಬರುತ್ತಿದ್ದರೂ, ಆರಂಭದಲ್ಲಿ ಇದನ್ನು ಮನೆಯವರು ಸಾಮಾನ್ಯವೆಂದುಕೊಂಡಿದ್ದರು.

ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿರುವುದು ಪೋಷಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ತಂದೆ-ತಾಯಿ ಇಬ್ಬರಿಗೂ ಬುದ್ಧಿ ಹೇಳಿ, ಪ್ರಿಯಾಂಕನಿಗೆ ಮದುವೆ ಸಂಬಂಧ ಹುಡುಕಲಾಗಿತ್ತು. ಆದರೂ ಸಹ ಮುತ್ತುರಾಜ್ ನಿರಂತರವಾಗಿ ಪ್ರಿಯಾಂಕಳನ್ನು ಪೀಡಿಸುತ್ತಿದ್ದನು ಎಂದು ಆರೋಪಿಸಲಾಗಿದೆ.

ಇದರಿಂದಾಗಿ ಮರ್ಯಾದೆಗೆ ಅಂಜಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮೃತ ಶಂಕುತಲಾದೇವಿಯ ಪತಿ ಮಹೇಶ್ ಹಲಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹಲಗೂರು ಠಾಣೆ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.

error: Content is protected !!