ಬೆಂಗಳೂರು: ಬಡ ಹಾಗೂ ಕಷ್ಟದಲ್ಲಿರುವ ರೋಗಿಗಳನ್ನು ಗುರಿಯಾಗಿಸಿಕೊಂಡು ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್‌ಗಳನ್ನು ಭಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಡಿಮೆ ವೆಚ್ಚದಲ್ಲಿ ತಯಾರಿಸಿ ಅಥವಾ ಆಸ್ಪತ್ರೆಗಳಿಗೆ ಪೂರೈಕೆ ಮಾಡುವ ಉತ್ಪನ್ನಗಳಿಗೆ ರೋಗಿಗಳಿಂದ ಅತಿಯಾದ ದರ ವಸೂಲಿ ಮಾಡುತ್ತಿರುವ 254 ಔಷಧ ತಯಾರಿಕಾ ಕಂಪನಿಗಳ ಪಟ್ಟಿಯನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಸಿದ್ಧಪಡಿಸಿದೆ.
ಔಷಧ ತಯಾರಿಕಾ ಅಥವಾ ಪೂರೈಕೆ ವೆಚ್ಚಕ್ಕೂ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸಲಾಗುತ್ತಿರುವ ಎಂಆರ್‌ಪಿ ದರಕ್ಕೂ ಭಾರಿ ವ್ಯತ್ಯಾಸವಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂದು ಎಫ್‌ಡಿಎ ತಿಳಿಸಿದೆ. ಕೆಲವು ಔಷಧಗಳ ಬೆಲೆಯಲ್ಲಿ ಹಲವು ಪಟ್ಟು ವ್ಯತ್ಯಾಸ ಕಂಡುಬಂದಿದ್ದು, ಇದರಿಂದ ಚಿಕಿತ್ಸೆಗೆ ಬರುವ ರೋಗಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಎಫ್‌ಡಿಎ ಆಯುಕ್ತ ಕೆ. ಶ್ರೀನಿವಾಸ್ ಅವರು 254 ಔಷಧ ಕಂಪನಿಗಳ ದರ ಏರಿಕೆಯ ಸಮಗ್ರ ಪಟ್ಟಿಯನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ, ಅಂದರೆ ಎನ್‌ಪಿಪಿಎಗೆ ಸಲ್ಲಿಸಿದ್ದಾರೆ. ಔಷಧಗಳ ಅತಿಯಾದ ಬೆಲೆ ನಿಗದಿಗೆ ಕಡಿವಾಣ ಹಾಕುವಂತೆ ಕೇಂದ್ರ ಮಟ್ಟದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಡ್ರಗ್ಸ್ ಪ್ರೈಸಸ್ ಕಂಟ್ರೋಲ್ ಆರ್ಡರ್, 2013ರ ನಿಯಮಗಳ ಅಡಿಯಲ್ಲಿ ಅತಿಯಾದ ದರ ಮತ್ತು ಟ್ರೇಡ್ ಮಾರ್ಜಿನ್‌ಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಎಫ್‌ಡಿಎ ತಿಳಿಸಿದೆ. ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಕನ್ಸ್ಯೂಮಬಲ್ಸ್‌ಗಳ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.



