Home Blog Page 131

ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿದ ಸಿದ್ದರಾಮಯ್ಯ

0

ಬೆಂಗಳೂರು: ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ (Old Original Vinayaka Mylari) ಹೋಟೆಲ್‌ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಇಂದಿರಾನಗರದ 80 ಅಡಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಹೋಟೆಲ್ ಉದ್ಘಾಟಿಸಿದ ಬಳಿಕ, ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ಕುಳಿತು ಪ್ರಸಿದ್ಧ ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾವನ್ನು ಸವಿದರು. ದೋಸೆಯ ರುಚಿಗೆ ತಲೆದೂಗಿದ ಅವರು, “ನಾನು ಮೈಸೂರಿನಲ್ಲಿ ಅನೇಕ ಬಾರಿ ಈ ದೋಸೆ ಸವಿದಿದ್ದೇನೆ. ಈಗ ಬೆಂಗಳೂರಿನಲ್ಲೂ ಅದೇ ಅಪ್ಪಟ ರುಚಿ ಸಿಗುತ್ತಿದೆ. ಆಹಾರ ಪ್ರಿಯರು ಇನ್ನುಮುಂದೆ ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗುವ ಅಗತ್ಯವಿಲ್ಲ, ಅದು ಈಗ ನಮ್ಮ ಇಂದಿರಾನಗರದಲ್ಲೇ ಸಿಗುತ್ತಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣ್ಯಾತಿಗಣ್ಯರ ಸಾಕ್ಷಿ:
ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಿನಿಮಾ ರಂಗದ ಹಲವು ಗಣ್ಯರು ಉಪಸ್ಥಿತರಿದ್ದು, 87 ವರ್ಷಗಳ ಇತಿಹಾಸವಿರುವ ಮೈಲಾರಿ ಪರಂಪರೆ ಬೆಂಗಳೂರಿಗೆ ಕಾಲಿಟ್ಟಿರುವುದಕ್ಕೆ ಶುಭ ಹಾರೈಸಿದರು. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮತ್ತು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ಅವರು ಸಾನ್ನಿಧ್ಯ ವಹಿಸಿದ್ದರು.

ನಾಲ್ಕನೇ ತಲೆಮಾರಿನ ಸಾರಥ್ಯ:

1938ರಲ್ಲಿ ಗೌರಮ್ಮನವರು ಮೈಸೂರಿನ ನಜರ್‌ಬಾದ್‌ನಲ್ಲಿ ಆರಂಭಿಸಿದ್ದ ಈ ರುಚಿಯ ಪರಂಪರೆಯನ್ನು, ಇದೀಗ ನಾಲ್ಕನೇ ತಲೆಮಾರಿನ ಸಚಿನ್ ಮತ್ತು ಸಿಂಧು ದಂಪತಿ ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಬಾಳೆ ಎಲೆ ಊಟ ಮತ್ತು ಹಳ್ಳಿ ಸೊಗಡಿನ ದೇಸಿ ರುಚಿಯನ್ನು ಉಳಿಸಿಕೊಂಡು ಹೋಗುವುದು ತಮ್ಮ ಗುರಿ ಎಂದು ಹೋಟೆಲ್ ಮಾಲೀಕರು ತಿಳಿಸಿದರು. ಡಾ. ರಾಜ್‌ಕುಮಾರ್‌ರಿಂದ ಹಿಡಿದು ಸಚಿನ್ ತೆಂಡೂಲ್ಕರ್‌ವರೆಗೆ ಮತ್ತು ಬಿಬಿಸಿ (BBC) ಪಟ್ಟಿಯಲ್ಲೂ ಸ್ಥಾನ ಪಡೆದಿದ್ದ ಈ ಹೋಟೆಲ್, ಇಂದಿನಿಂದ ಅಧಿಕೃತವಾಗಿ ಬೆಂಗಳೂರಿಗರ ಸೇವೆಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

0

ಬೆಂಗಳೂರು: ರಾಜ್ಯದಲ್ಲಿ ನಿಯಮ ರಚನೆ ಇಲ್ಲದೆ ಬೈಕ್ ಟ್ಯಾಕ್ಸಿಗಳನ್ನು ಬಳಸಲು ಅನುಮತಿಸದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೀಗಾಗಿ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ (ಟ್ಯಾಕ್ಸಿ)ಗಳಾಗಿ ಬಳಸಲು ಅವಕಾಶ ನೀಡಲಾಗಿದೆ.

ಇದಕ್ಕಾಗಿ, ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಸಂಸ್ಥೆಗಳು ಸೇವೆ ಬಳಸಲು ಅನುಮತಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಸರ್ಕಾರಿ ನಿಯಮಾನುಸಾರ, ಕಾನೂನಿನ ಪ್ರಕಾರ ಸರ್ಕಾರ ಪರವಾನಿಗೆ ನೀಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರವು ರೈಡ್ ಶೇರಿಂಗ್ ಕಂಪನಿಗಳಾದ ಓಲಾ, ಉಬರ್ ಹಾಗೂ ಬೈಕ್ ಟ್ಯಾಕ್ಸಿ ಮಾಲೀಕರಿಗೆ ನಿಷೇಧ ಹೊರಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದು ಮಾಡಲು ಸಂಸ್ಥೆಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ಅರ್ಜಿಗಳನ್ನು ಮಾನ್ಯ ಮಾಡಿ, ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಮಾರ್ಗ ತೆರೆಯುವಂತೆ ಆದೇಶ ಹೊರಡಿಸಿದೆ.

ಹೆಂಡತಿಯನ್ನು ಅಕ್ಕ ಎಂದೇ ಪರಿಚಯಿಸಿ ಕೋಟಿ ಕೋಟಿ ವಂಚನೆ: ಮ್ಯಾಟ್ರಿಮೋನಿ ಮೋಸಗಾರನ ಕರಾಳ ಮುಖ ಬಹಿರಂಗ

0

ಬೆಂಗಳೂರು: ನಗರದಲ್ಲಿ ವೈವಾಹಿಕ ಜಾಲತಾಣದ ಮೂಲಕ ಯುವತಿಯರನ್ನು ಮೋಸಗೊಳಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಭಾರೀ ಪ್ರಕರಣ ಬೆಳಕಿಗೆ ಬಂದಿದೆ. ಹೆಂಡತಿಯನ್ನು ತನ್ನ ಅಕ್ಕ ಎಂದು ಪರಿಚಯಿಸಿಕೊಂಡು ಯುವತಿಯ ವಿಶ್ವಾಸ ಗೆದ್ದ ಆರೋಪಿ ವಿಜಯ್ ರಾಜ್ ಗೌಡ ಇದೀಗ ಪೊಲೀಸರ ಬಂಧನದಲ್ಲಿದ್ದಾನೆ.

ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇರೆಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸ್ಥಳಾಧಿಕಾರದ ಆಧಾರದಲ್ಲಿ ಪ್ರಕರಣವನ್ನು ಕೆಂಗೇರಿ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ವೇಳೆ ೨೦೧೯ರಿಂದ ಹಲವಾರು ಮಹಿಳೆಯರನ್ನು ಇದೇ ರೀತಿಯಲ್ಲಿ ಮೋಸಗೊಳಿಸಿರುವುದು ಬಹಿರಂಗವಾಗಿದೆ.

ಕುಣಿಗಲ್, ಅತ್ತಿಬೆಲೆ, ಶಿವಮೊಗ್ಗ, ಆನೇಕಲ್, ಕಾಡುಗೋಡಿ ಸೇರಿದಂತೆ ಹಲವು ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿವೆ. ದೊಡ್ಡ ಉದ್ಯಮಿ ಎಂದು ತಾನು ಬಿಂಬಿಸಿಕೊಂಡು, ಹಣ ಪ್ರೀಜ್ ಆಗಿದೆ ಎಂದು ನಕಲಿ ದಾಖಲೆ ತೋರಿಸಿ ಹಣ ಪಡೆದುಕೊಳ್ಳುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಇತ್ತೀಚಿನ ಪ್ರಕರಣದಲ್ಲಿ ಯುವತಿಯೊಬ್ಬಳಿಂದ ೧ ಕೋಟಿ ೫೩ ಲಕ್ಷ ರೂಪಾಯಿ ವಂಚಿಸಿರುವುದು ದೃಢಪಟ್ಟಿದೆ. ಮಾಜಿ ಸಂಸದರ ಹೆಸರು ಬಳಸಿ ಟೆಂಡರ್ ಕೊಡಿಸುವುದಾಗಿ ನಂಬಿಸಿ, ನಕಲಿ ಸಹಿ-ಮುದ್ರೆಗಳ ಮೂಲಕ ಕೂಡ ವಂಚನೆ ನಡೆಸಿರುವ ಆರೋಪವೂ ಇದೆ. ಈ ಬಗ್ಗೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣ: ಶಿಕ್ಷೆ ಕೊಡಿಸಿದ ಪೊಲೀಸ್ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ!

0

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಸೇರಿದಂತೆ ವಿವಿಧ ಮಹತ್ವದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ಉತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ಒಟ್ಟು ₹35 ಲಕ್ಷ ನಗದು ಬಹುಮಾನ ಮಂಜೂರು ಮಾಡಲಾಗಿದೆ.

ಡಿಜಿ ಮತ್ತು ಐಜಿಪಿ ದರ್ಜೆ ಅಧಿಕಾರಿಗಳಿಗೆ ತಲಾ ₹20,000, ಒಟ್ಟು ₹25 ಲಕ್ಷ, ಡಿಜಿಪಿ, ಎಡಿಜಿಪಿ ಮತ್ತು ರಾಜ್ಯ ವ್ಯಾಪ್ತಿಯ ಐಜಿಪಿ ಅಧಿಕಾರಿಗಳಿಗೆ ತಲಾ ₹8,000, ಒಟ್ಟು ₹3 ಲಕ್ಷ, ಇತರೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲಾ ₹5,000, ಒಟ್ಟು ₹2 ಲಕ್ಷ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ ₹5,000, ಒಟ್ಟು ₹1 ಲಕ್ಷ ನಗದು ಬಹುಮಾನವಾಗಿ ನೀಡಲಾಗಿದೆ.

ಈ ಬಹುಮಾನವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಮನೆ ಕೆಲಸದ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಇತರ ಪ್ರಕರಣಗಳಲ್ಲಿ ನ್ಯಾಯಸಮ್ಮತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡಿದ ಪ್ರಮುಖ ಕಾರ್ಯಕ್ಕೆ ಗೌರವ ಸೂಚಿಸುತ್ತದೆ.

ಪ್ರಜ್ವಲ್ ರೇವಣ್ಣರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಮತ್ತು ₹11.6 ಲಕ್ಷ ದಂಡ ವಿಧಿಸಲಾಗಿದೆ. ಪ್ರಜ್ವಲ್ ರೇವಣ್ಣ ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರೂ, ಜಾಮೀನು ಮತ್ತು ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಿರಾಕರಿಸಿದೆ.

ನಗದು ಬಹುಮಾನ ಪಡೆದ ಅಧಿಕಾರಿಗಳಲ್ಲಿ ಎಸ್ ಐ ಟಿ ಮುಖ್ಯಸ್ಥ ಬಿಕೆ ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್ ಪಿ ಸುಮನ್ ಡಿ. ಪೆನ್ನೇಕರ್, ಎಸ್ ಪಿ ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್, ಇನ್ಸ್ಪೆಕ್ಟರ್ ಶೋಭಾ ಜಿ, ಸುಮಾರಾಣಿ ಮತ್ತು ಹೇಮಂತ್ ಕುಮಾರ್ ಸೇರಿದ್ದಾರೆ.

ಭಕ್ತನ ಜೀವ ತೆಗೆದ ಚಿರತೆ ಕೊನೆಗೂ ಸೆರೆ: ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ

0

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಕೈಗೆ ಸಿಕ್ಕಿದೆ. ತಾಳು ಬೆಟ್ಟದಿಂದ ಪಾದಯಾತ್ರೆ ಮೂಲಕ ಎಂ.ಎಂ. ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಪ್ರಕರಣ ಜನರಲ್ಲಿ ಆತಂಕ ಮೂಡಿಸಿತ್ತು.

ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ವಿಶೇಷ ಚಿರತೆ ಕಾರ್ಯಪಡೆ, ಡ್ರೋನ್ ಮೇಲ್ವಿಚಾರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ಮೂಲಕ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಲಾಯಿತು. ಕೊನೆಗೆ ಅರವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಾರ್ಯಾಚರಣೆಯಲ್ಲಿ ಪಶುವೈದ್ಯರಾದ ಆದರ್ಶ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು. ಸೆರೆ ಸಿಕ್ಕಿರುವುದು ಸುಮಾರು 2ರಿಂದ 3 ವರ್ಷದ ಗಂಡು ಚಿರತೆ ಎಂದು ತಿಳಿದುಬಂದಿದೆ. ಈ ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.

ಇದೇ ವೇಳೆ, ಚಿರತೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ ಅವರು 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ.

ಮಹಿಳೆ ಮರೆತ ಪರ್ಸ್–ಐಫೋನ್ ಹಿಂದಿರುಗಿಸಿದ ಆಟೋ ಚಾಲಕ; ಎಲ್ಲೆಡೆ ಮೆಚ್ಚುಗೆ

0

ಬೆಂಗಳೂರು: ಮಹಿಳೆ ಮರೆತು ಹೋಗಿದ್ದ ಪರ್ಸ್ ಹಾಗೂ ಐಫೋನ್ ಅನ್ನು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ ಆಟೋ ಚಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ರ‍್ಯಾಪಿಡೊ ಮೂಲಕ ಆಟೋ ಬುಕ್ ಮಾಡಿಕೊಂಡು ಪ್ರಯಾಣಿಸಿದ್ದರು. ಪ್ರಯಾಣ ಮುಗಿದ ಬಳಿಕ ಆಟೋದಿಂದ ಇಳಿದ ಮಹಿಳೆ, ತನ್ನ ಪರ್ಸ್ ಮತ್ತು ಐಫೋನ್ ಅನ್ನು ಆಟೋದಲ್ಲೇ ಮರೆತು ಹೋಗಿದ್ದರು. ಕೆಲ ಸಮಯದ ನಂತರ ಈ ವಿಷಯ ಗಮನಕ್ಕೆ ಬಂದಾಗ ಮಹಿಳೆ ಕೊತ್ತನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು.

ಪೊಲೀಸರು ತಕ್ಷಣವೇ ಆಟೋ ಚಾಲಕನಿಗೆ ಕರೆ ಮಾಡಿದಾಗ, ಚಾಲಕ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಪರ್ಸ್ ಮತ್ತು ಮೊಬೈಲ್ ಫೋನ್ ಅನ್ನು ಮಹಿಳೆಗೆ ಸುರಕ್ಷಿತವಾಗಿ ಮರಳಿಸಿದರು. ಆಟೋ ಚಾಲಕನ ಪ್ರಾಮಾಣಿಕತೆಗೆ ಮಹಿಳೆ ಹಾಗೂ ಪೊಲೀಸ್ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ; ಮುಂದೇನಾಯ್ತು?

0

ಜಾರ್ಖಂಡ್:- ಜಾರ್ಖಂಡ್​ನ ನವದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಮುಂದಕ್ಕೆ ಹೋಗಲಾಗದೆ ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ಜರುಗಿದೆ.

ರೈಲು, ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ಟ್ರಕ್ ಈ ಕಡೆಯಿಂದ ಹಳಿ ದಾಟಿದಾಗ ಗೇಟ್ ತೆರೆದಿತ್ತು ಅತ್ತ ಹೋಗುವಷ್ಟರಲ್ಲಿ ಮುಚ್ಚಿತ್ತು ಹೀಗಾಗಿ ಅರ್ಧದಾರಿಯಲ್ಲಿ ನಿಂತ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿತ್ತು.

ರೈಲು ಡಿಕ್ಕಿ ಹೊಡೆದು ತಳ್ಳಿದ ಪರಿಣಾಮ ಟ್ರಕ್​ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಘಟನೆ ಪರಿಣಾಮ, ಜಸಿದಿಹ್-ಅಸನ್ಸೋಲ್ ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು ಎಂದು ತಿಳಿದು ಬಂದಿದೆ.

ಕೈ ತಪ್ಪಿದ ಆಸ್ಕರ್ ಕನಸು! ‘ಕಾಂತಾರ ಚಾಪ್ಟರ್ 1’ ಮತ್ತು ‘ಮಹಾವತಾರ ನರಸಿಂಹ’ ಫೈನಲ್ ಲಿಸ್ಟ್‌ನಿಂದ ಔಟ್

ಕನ್ನಡ ಸಿನಿಪ್ರಿಯರಿಗೆ ನಿರಾಸೆ ಸುದ್ದಿ ಕೇಳಿಬಂದಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್ ರೇಸ್ನಲ್ಲಿ ಸ್ಪರ್ಧಿಸಿದ್ದ ಕನ್ನಡದ ಎರಡು ಭರವಸೆಯ ಚಿತ್ರಗಳಾದ — ‘ಕಾಂತಾರ ಚಾಪ್ಟರ್ 1’ ಮತ್ತು ‘ಮಹಾವತಾರ ನರಸಿಂಹ’ — ಅಂತಿಮ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ.

ಭಾರತದಿಂದ ಐದು ಸಿನಿಮಾಗಳು ಆಸ್ಕರ್ ರೇಸ್ನಲ್ಲಿ ಇದ್ದರೂ, ಕನ್ನಡದಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಎರಡು ಚಿತ್ರಗಳು ಕೊನೆಯ ಹಂತದಲ್ಲಿ ಹೊರಬಿದ್ದಿವೆ.

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸುಮಾರು 850 ಕೋಟಿ ರೂಪಾಯಿ ವಹಿವಾಟು ಮಾಡಿ, ಭಾರತೀಯ ಚಿತ್ರರಂಗದ ಮಟ್ಟವನ್ನು ಮತ್ತೊಮ್ಮೆ ಎತ್ತಿಹಿಡಿದಿತ್ತು. ಭಾರತೀಯ ಸಂಸ್ಕೃತಿ, ಜನಪದ ಅಸ್ಮಿತೆಯನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದ ಈ ಚಿತ್ರವು ಆಸ್ಕರ್ ಗೆಲ್ಲಬಹುದು ಎಂಬ ಭರವಸೆ ಹುಟ್ಟಿಸಿತ್ತು.

ಇನ್ನೊಂದೆಡೆ, ‘ಮಹಾವತಾರ ನರಸಿಂಹ’ ಸಿನಿಮಾ ಅನಿಮೇಶನ್ ವಿಭಾಗದಲ್ಲಿ ಭಾರತದ ಮೊದಲ ಆಯ್ಕೆಯಾದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಈ ಚಿತ್ರಕ್ಕೂ ಸ್ಥಾನ ಸಿಗದೆ ನಿರಾಸೆ ಮೂಡಿಸಿದೆ.

ಆದರೂ, ಆಸ್ಕರ್ ವೇದಿಕೆಯಲ್ಲಿ ಕನ್ನಡ ಚಿತ್ರಗಳು ಚರ್ಚೆಗೆ ಬಂದಿರುವುದೇ ದೊಡ್ಡ ಸಾಧನೆ ಎಂಬುದಾಗಿ ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಾಧನೆ ಕನ್ನಡ ಚಿತ್ರರಂಗದ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.

ಒಂದು ವರ್ಷದ ಕಡ್ಡಾಯ ಸೇವೆ, ವೇತನ ಕಡಿತ ವಿವಾದ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

0

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆದು, 2024 ಮತ್ತು 2025ನೇ ಸಾಲಿನಲ್ಲಿ ಕೋರ್ಸ್ ಪೂರ್ಣಗೊಳಿಸಿದ ನಂತರ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನವನ್ನು ಕಡಿತಗೊಳಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಬುರಗಿ ನಿವಾಸಿ ಡಾ. ಶಶಿಕುಮಾರ್ ಸೇರಿದಂತೆ, ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 38 ಮಂದಿ ಎಂಬಿಬಿಎಸ್ ಪದವಿಧರರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ಗುರುವಾರ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ನ್ಯಾಯಪೀಠದ ಮುಂದೆ ನಡೆಯಿತು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ,

ನಾಲ್ಕು ವಾರಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರೆ ಅರ್ಜಿಗಳನ್ನೂ ಈ ಅರ್ಜಿಯೊಂದಿಗೆ ಸೇರಿಸಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸೂಚಿಸಿ, ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಬಿಗ್​​ ಶಾಕ್​; ಟಿಕೆಟ್ ದರ ಭಾರೀ ಏರಿಕೆ!

0

ಮಂಗಳೂರು: ಮಂಗಳೂರು–ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಿಗ್ ಶಾಕ್ ನೀಡಿದೆ.

ಕುಂಬಳ ಟೋಲ್ ಗೇಟ್‌ನಲ್ಲಿ ಅಧಿಕೃತ ಸಂಗ್ರಹ ಆರಂಭಕ್ಕೂ ಮುನ್ನವೇ ಟೋಲ್ ಮೊತ್ತವನ್ನು ಸೇರಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಜ.20ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಕುಂಬಳ–ಮಂಗಳೂರು ಪ್ರಯಾಣ ದರ 67ರಿಂದ 75 ರೂ.ಗೆ ಏರಿಕೆಯಾಗಿದೆ.

ರಾಜಹಂಸ ಬಸ್‌ಗಳ ದರವೂ 80ರಿಂದ 90 ರೂ.ಗೆ ಹೆಚ್ಚಿದೆ. ಪ್ರತಿದಿನ ಸುಮಾರು 35 ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಟೋಲ್ ಪಾವತಿಗೆ ದಿನಕ್ಕೆ ಸುಮಾರು 48 ಸಾವಿರ ರೂ. ವ್ಯಯವಾಗುತ್ತಿದೆ. ಹೆದ್ದಾರಿ ಬಳಸದಿದ್ದರೂ ಟೋಲ್ ಪಾವತಿಸಬೇಕಾದ ಅನಿವಾರ್ಯತೆಯಿಂದ ದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ವಿನಾಯಿತಿ ಕೋರಿ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

error: Content is protected !!