Home Blog Page 134

ವಿಶ್ವ ಶಾಂತಿಗೆ ಮಹತ್ವದ ಹೆಜ್ಜೆ; ಇಸ್ರೇಲ್–ಲೆಬನಾನ್ ಕದನ ವಿರಾಮಕ್ಕೆ ಒಪ್ಪಿಗೆ, ಇರಾನ್ ಮಾತುಕತೆಗೆ ಹೊಸ ದಾರಿ

ಟೆಲ್ ಅವಿವ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ನಾಲ್ಕನೇ ಸುತ್ತಿನ ಮಾತುಕತೆಗಳ ಬಳಿಕ ಇಸ್ರೇಲ್ ಮತ್ತು ಲೆಬನಾನ್ ಕದನ ವಿರಾಮ ಒಪ್ಪಂದವನ್ನು ನವೀಕರಿಸಲು ಒಪ್ಪಿಗೆ ಸೂಚಿಸಿವೆ. ಈ ಬೆಳವಣಿಗೆ ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಜಂಟಿ ಹೇಳಿಕೆಯ ಪ್ರಕಾರ, ದಕ್ಷಿಣ ಲೆಬನಾನ್‌ನಲ್ಲಿ ವಿಶೇಷ ಭದ್ರತಾ ವಲಯಗಳನ್ನು ರಚಿಸಲಾಗುವುದು. ಲಿಟಾನಿ ನದಿಯ ದಕ್ಷಿಣ ಭಾಗದಿಂದ ಹಿಜ್ಬೊಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಜಾರಿಯಾಗಲಿದ್ದು, ಆ ಪ್ರದೇಶಗಳ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಲೆಬನಾನ್ ಸಶಸ್ತ್ರ ಪಡೆಗಳು ವಹಿಸಿಕೊಳ್ಳಲಿವೆ.

ಇದೇ ವೇಳೆ, ಲೆಬನಾನ್‌ನ ಆಂತರಿಕ ಮತ್ತು ಭವಿಷ್ಯದ ನಿರ್ಧಾರಗಳನ್ನು ಅದರ ಸಾರ್ವಭೌಮ ಸರ್ಕಾರವೇ ಕೈಗೊಳ್ಳಬೇಕು ಎಂಬ ತತ್ವಕ್ಕೆ ಎರಡೂ ದೇಶಗಳು ಬದ್ಧತೆ ವ್ಯಕ್ತಪಡಿಸಿವೆ. ಹೊರಗಿನ ಹಸ್ತಕ್ಷೇಪವನ್ನು ತಿರಸ್ಕರಿಸುವ ನಿಲುವನ್ನೂ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಈ ಕದನ ವಿರಾಮ ಒಪ್ಪಂದವು ಇರಾನ್‌ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಾತುಕತೆಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇದೆ. ಲೆಬನಾನ್‌ನಲ್ಲಿ ನಡೆಯುತ್ತಿದ್ದ ಸಂಘರ್ಷವು ಇರಾನ್ ಹಾಗೂ ಪಾಶ್ಚಾತ್ಯ ರಾಷ್ಟ್ರಗಳ ನಡುವಿನ ಸಂವಾದಕ್ಕೆ ಪ್ರಮುಖ ಅಡ್ಡಿಯಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ನಿರ್ಬಂಧಗಳ ವಿಚಾರದಲ್ಲಿ ಇರಾನ್ ಮತ್ತೆ ಮಾತುಕತೆಗಳಿಗೆ ಮರಳುವ ಸಾಧ್ಯತೆ ಹೆಚ್ಚಾಗಿದೆ.

ರಾಜತಾಂತ್ರಿಕ ವಲಯಗಳ ಪ್ರಕಾರ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಈ ಹೊಸ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಜಾಗತಿಕ ಶಾಂತಿ ಮತ್ತು ಆರ್ಥಿಕ ಸ್ಥಿರತೆಯ ದೃಷ್ಟಿಯಿಂದಲೂ ಆಶಾದಾಯಕ ಬೆಳವಣಿಗೆಯಾಗಿದೆ.

ಆದಾಗ್ಯೂ, ಒಪ್ಪಂದದ ಅನುಷ್ಠಾನ ಮತ್ತು ಭದ್ರತಾ ವ್ಯವಸ್ಥೆಗಳ ಪರಿಣಾಮಕಾರಿತ್ವದ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿರಲಿದ್ದು, ಅಂತರರಾಷ್ಟ್ರೀಯ ಸಮುದಾಯದ ಗಮನ ಈಗ ಈ ಪ್ರದೇಶದತ್ತ ಕೇಂದ್ರೀಕೃತವಾಗಿದೆ.

ಪ್ರಚೋದನಕಾರಿ ಹೇಳಿಕೆ ವಿವಾದ; ಮಾಜಿ ಶಾಸಕ ರೆವೂರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲು

ಕಲಬುರಗಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೆವೂರ್ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲಾಗಿದೆ.

ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ರೆವೂರ್ ಭಾಷಣ ಮಾಡಿದ್ದರು. ಈ ವೇಳೆ ಅವರು ಮಾಡಿದ ಕೆಲ ಹೇಳಿಕೆಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಅಜಗರ್ ಪೊಲೀಸ್ ದೂರು ಸಲ್ಲಿಸಿದ್ದರು.

ದೂರಿನ ಆಧಾರದ ಮೇಲೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾಷಣದಲ್ಲಿ ಪ್ರಚೋದನಕಾರಿ ಹಾಗೂ ದ್ವೇಷಪೂರಿತ ಅಂಶಗಳಿವೆ ಎಂಬ ಆರೋಪವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಕುರಿತು ಮಾಡಿದ ಹೇಳಿಕೆಗಳೇ ಪ್ರಕರಣ ದಾಖಲಿಸಲು ಪ್ರಮುಖ ಕಾರಣವಾಗಿದ್ದು, ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕನ್ನಡಿಗರ ಹಬ್ಬ ಮತ್ತೆ ಶುರು; ‘ಬಿಗ್ ಬಾಸ್ ಕನ್ನಡ 13’ ಪ್ರೋಮೋ ರಿಲೀಸ್

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಡುಗಡೆ ಮಾಡಿ ಮುಂದಿನ ಸೀಸನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ.

ಕಳೆದ ಸೀಸನ್‌ನಲ್ಲಿ ಗಿಲ್ಲಿ ನಟ ಟ್ರೋಫಿ ಗೆದ್ದ ನಾಲ್ಕು ತಿಂಗಳಲ್ಲೇ ಹೊಸ ಸೀಸನ್ ಘೋಷಣೆಯಾಗಿರುವುದು ವೀಕ್ಷಕರಲ್ಲಿ ಅಚ್ಚರಿ ಮತ್ತು ಉತ್ಸಾಹ ಮೂಡಿಸಿದೆ. ಸಾಮಾನ್ಯವಾಗಿ ಸೀಸನ್‌ಗಳ ನಡುವೆ ದೀರ್ಘ ಅಂತರವಿರುವುದಾದರೂ, ಈ ಬಾರಿ ಕಾರ್ಯಕ್ರಮವನ್ನು ಬೇಗ ಆರಂಭಿಸಲು ವಾಹಿನಿ ನಿರ್ಧರಿಸಿರುವುದು ವಿಶೇಷವಾಗಿದೆ.

‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ’ ಎಂಬ ಸಂದೇಶದೊಂದಿಗೆ ಬಿಡುಗಡೆಯಾದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ಪಡೆಯುತ್ತಿದೆ. ಅಭಿಮಾನಿಗಳು ಹೊಸ ಸೀಸನ್‌ನ ಸ್ಪರ್ಧಿಗಳ ಬಗ್ಗೆ ಈಗಾಗಲೇ ಊಹಾಪೋಹ ಆರಂಭಿಸಿದ್ದಾರೆ.

ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಶಶಿಕುಮಾರ್, ಶೈನ್ ಶೆಟ್ಟಿ, ಮಂಜು ಪಾವಗಡ, ರೂಪೇಶ್ ಶೆಟ್ಟಿ, ಕಾರ್ತಿಕ್ ಮಹೇಶ್, ಹನುಮಂತ ಹಾಗೂ ಗಿಲ್ಲಿ ನಟ ಸೇರಿದಂತೆ ಹಲವು ಜನಪ್ರಿಯ ಸ್ಪರ್ಧಿಗಳು ಈ ಹಿಂದೆ ಟ್ರೋಫಿ ಗೆದ್ದಿದ್ದಾರೆ.

ಹೊಸ ಸೀಸನ್‌ನಲ್ಲಿ ಯಾರು ಭಾಗವಹಿಸಲಿದ್ದಾರೆ, ಯಾವ ಹೊಸ ಟ್ವಿಸ್ಟ್‌ಗಳು ಇರಲಿವೆ ಹಾಗೂ ಮುಂದಿನ ಚಾಂಪಿಯನ್ ಯಾರು ಎಂಬುದರ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರ್ಯಕ್ರಮದ ಮುಂದಿನ ಅಧಿಕೃತ ಅಪ್‌ಡೇಟ್‌ಗಾಗಿ ವೀಕ್ಷಕರು ಕಾದಿದ್ದಾರೆ.

ಲಾಕ್ ಡೌನ್ ವೇಳೆ ಕಾರ್ಮಿಕರ ವಜಾ ಪ್ರಕರಣ: ಕಂಪನಿ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ನೀಡಿದ್ದ ಅನುಮತಿ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕಾರ್ಮಿಕ ಕಾಯ್ದೆ ಉಲ್ಲಂಘನೆ ಆರೋಪದಡಿ ಯಾವುದೇ ಕಂಪನಿ ಅಥವಾ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡುವ ಮೊದಲು ಸರ್ಕಾರವು ಸ್ವತಂತ್ರವಾಗಿ ವಿಚಾರಣೆ ನಡೆಸಿ, ಸೂಕ್ತ ಕಾರಣಗಳನ್ನು ದಾಖಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರನ್ನು ಕೆಲಸದಿಂದ ತಾತ್ಕಾಲಿಕವಾಗಿ ವಜಾಗೊಳಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಕಂಪನಿಯೊಂದರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲು ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಆದೇಶವನ್ನು ರದ್ದುಗೊಳಿಸಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ‘ಇಂಟರ್‌ನ್ಯಾಷನಲ್ ಟ್ರಿಮ್ಮಿಂಗ್ಸ್ ಆಂಡ್ ಲೇಬಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ನ್ಯಾಯಾಲಯ, ಕೇವಲ ಕಾರ್ಮಿಕ ಇಲಾಖೆಯ ವರದಿ ಅಥವಾ ದೂರು ಆಧರಿಸಿ ಯಾಂತ್ರಿಕವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರವು ತನ್ನ ಸ್ವತಂತ್ರ ವಿವೇಚನೆಯನ್ನು ಬಳಸಿಕೊಂಡು ನಿರ್ಧಾರ ಕೈಗೊಳ್ಳಬೇಕು. ಯಾವುದೇ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಅನುಮತಿ ನೀಡುವಾಗ ಅಥವಾ ನಿರಾಕರಿಸುವಾಗ ಅದರ ಹಿಂದಿನ ಕಾರಣಗಳನ್ನು ಆದೇಶದಲ್ಲಿ ದಾಖಲಿಸುವುದು ಕಡ್ಡಾಯ ಎಂದು ಪೀಠ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ‘ನೈಸರ್ಗಿಕ ವಿಕೋಪ’ ಎಂದು ಪರಿಗಣಿಸಿ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ವಿವಾದ ಈಗಾಗಲೇ ಕಾರ್ಮಿಕ ನ್ಯಾಯಾಲಯದ ಪರಿಶೀಲನೆಯಲ್ಲಿರುವುದರಿಂದ, ಸರ್ಕಾರವು ಯಾವುದೇ ಸಮರ್ಪಕ ಕಾರಣ ನೀಡದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಪ್ರಕರಣವನ್ನು ಮರುಪರಿಶೀಲಿಸಿ ನಿಯಮಾನುಸಾರ ಹೊಸ ಆದೇಶ ಹೊರಡಿಸಲು ಅವಕಾಶವಿದ್ದು, ಮೂರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಸೂಚಿಸಿದೆ.

ಪ್ರಕರಣದ ಹಿನ್ನೆಲೆ

ಕೊರೊನಾ ಲಾಕ್‌ಡೌನ್ ಜಾರಿಯಲ್ಲಿದ್ದ 2020ರ ಮೇ ತಿಂಗಳಲ್ಲಿ ಅರ್ಜಿದಾರ ಕಂಪನಿಯು ತನ್ನ 112 ಕಾರ್ಮಿಕರ ಪೈಕಿ 61 ಮಂದಿಯನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಕಾರ್ಮಿಕ ಸಂಘಟನೆ ಕಾರ್ಮಿಕ ಆಯುಕ್ತರಿಗೆ ದೂರು ನೀಡಿತ್ತು.

ಕಾರ್ಮಿಕ ಇಲಾಖೆಯ ವರದಿ ಆಧರಿಸಿ, ಕೈಗಾರಿಕಾ ವಿವಾದಗಳ ಕಾಯ್ದೆ-1947ರ ಸೆಕ್ಷನ್ 34 ಅಡಿಯಲ್ಲಿ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ 2020ರ ಡಿಸೆಂಬರ್ 7ರಂದು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಂಪನಿಯು ಹೈಕೋರ್ಟ್ ಮೊರೆ ಹೋಗಿತ್ತು.

ರೋಹಿತ್ ಡಾಬಾದಲ್ಲಿ ಮಧ್ಯರಾತ್ರಿ ಮದ್ಯದ ಪಾರ್ಟಿ: ಪೊಲೀಸರ ದಾಳಿ, ಡಾಬಾ ಮಾಲೀಕನ ವಿರುದ್ಧ ಕೇಸ್!

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದ ರೋಹಿತ್ ಡಾಬಾದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದ ಆರೋಪದ ಮೇರೆಗೆ ಗಜೇಂದ್ರಗಡ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಗಜೇಂದ್ರಗಡ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಸಂದೀಪ್ ಎಂ. ದೊಡ್ಡಮನಿ ಅವರಿಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ಸೋಮವಾರ ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಮುಶಿಗೇರಿ ಗ್ರಾಮದ ರೋಹಿತ್ ಡಾಬಾದ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸಾರ್ವಜನಿಕರಿಗೆ ಅನಧಿಕೃತವಾಗಿ ಮದ್ಯ ಸೇವನೆ ಮಾಡಲು ಅವಕಾಶ ನೀಡಲಾಗುತ್ತಿರುವುದು ಬೆಳಕಿಗೆ ಬಂದಿದೆ.

ಡಾಬಾದ ಮಾಲೀಕ ಕೃಷ್ಣಪ್ಪ ರಾಮಯ್ಯ ಮುಂಡಾಸ್ ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.102/2026 ಅಡಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32(3) ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಕ್ರಮ ಮದ್ಯ ಸೇವನೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು, ಡಾಬಾ ಹಾಗೂ ಹೋಟೆಲ್‌ಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಶುಭಾ ಪೂಂಜಾ ದಾಂಪತ್ಯ ಜೀವನದಲ್ಲಿ ಬಿರುಕು; 4 ವರ್ಷದಲ್ಲೇ ವಿಚ್ಛೇದನಕ್ಕೆ ಅರ್ಜಿ!

0

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ದಂಪತಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮದುವೆಯಾಗಿ ಕೇವಲ ನಾಲ್ಕು ವರ್ಷಗಳಲ್ಲೇ ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ಕಾನೂನು ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಕಳೆದ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದ ಈ ಜೋಡಿ 2022ರ ಜನವರಿ 5ರಂದು ತಮ್ಮ ಕುಟುಂಬದ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ಅಚಾನಕ್ ಆಗಿ ವಿಚ್ಛೇದನದ ನಿರ್ಧಾರಕ್ಕೆ ಬಂದಿರುವುದು ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟುಮಾಡಿದೆ.

ವಿಚ್ಛೇದನಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಈ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ, ಸುಮಂತ್ ಬಿಲ್ಲವ ಅವರು ವೈಯಕ್ತಿಕ ಕಾರಣಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ತಮ್ಮ ಖಾಸಗಿ ಜೀವನದ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರರಂಗದಲ್ಲಿ “ಮೊಗ್ಗಿನ ಮನಸ್ಸು”, “ಚಂಡ” ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ಹಾಗೂ “ಬಿಗ್ ಬಾಸ್ ಸೀಸನ್ 8”ರಲ್ಲಿ ಗಮನಸೆಳೆದಿದ್ದ ಶುಭಾ ಪೂಂಜಾ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ವಿಷಾದ ಮೂಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಕಾನೂನು ಪ್ರಕ್ರಿಯೆ ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆಯಲಿದ್ದು, ಮುಂದಿನ ವಿಚಾರಣೆಗೆ ದಂಪತಿ ಖುದ್ದಾಗಿ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 

ಸೌರವ್ ಗಂಗೂಲಿ VIP ಭದ್ರತೆಯಲ್ಲಿ ಬದಲಾವಣೆ: ಸರ್ಕಾರದಿಂದ ಮಹತ್ವದ ನಿರ್ಧಾರ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ಭಾರತೀಯ ಕ್ರಿಕೆಟ್ ದಂತಕಥೆ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.

ಹಿಂದಿನಿಂದ ನೀಡಲಾಗಿದ್ದ ಅತ್ಯುನ್ನತ ಮಟ್ಟದ Zʼ ಶ್ರೇಣಿಯ ಭದ್ರತೆಯನ್ನು ಇದೀಗ ಮರುಪರಿಶೀಲನೆಯ ನಂತರ Yʼ ಶ್ರೇಣಿಗೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ಭದ್ರತಾ ವಿಭಾಗವು ಇತ್ತೀಚೆಗೆ ನಡೆಸಿದ ಸಮಗ್ರ VIP ಭದ್ರತಾ ಮರುಮೌಲ್ಯಮಾಪನದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯ ಪ್ರಸ್ತುತ ಅಪಾಯ ಮಟ್ಟ, ಸಾರ್ವಜನಿಕ ಸ್ಥಿತಿ, ಅಧಿಕೃತ ಪಾತ್ರ ಹಾಗೂ ಇತ್ತೀಚಿನ ಬೆದರಿಕೆ ವರದಿಗಳನ್ನು ಆಧಾರವಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ 2023ರಲ್ಲಿ ಗಂಗೂಲಿ ಅವರ ಭದ್ರತೆಯನ್ನು Yʼ ಶ್ರೇಣಿಯಿಂದ Zʼ ಶ್ರೇಣಿಗೆ ಹೆಚ್ಚಿಸಲಾಗಿತ್ತು. ಆ ಸಮಯದಲ್ಲಿ ಅವರ ಸಾಮಾಜಿಕ ಸ್ಥಾನಮಾನ ಮತ್ತು ಸುರಕ್ಷತಾ ಅಗತ್ಯಗಳನ್ನು ಗಮನದಲ್ಲಿಟ್ಟು ಹೆಚ್ಚುವರಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. Z-ಕೇಟಗರಿಯಲ್ಲಿ ಸಾಮಾನ್ಯವಾಗಿ 20ಕ್ಕೂ ಹೆಚ್ಚು ಸಿಬ್ಬಂದಿ, ವಿಶೇಷ ಕಮಾಂಡೋಗಳು ಹಾಗೂ ಎಸ್ಕಾರ್ಟ್ ವಾಹನದ ವ್ಯವಸ್ಥೆ ಒಳಗೊಂಡಿರುತ್ತದೆ.

ಆದರೆ ಈಗ ನಡೆದ ಮರುಪರಿಶೀಲನೆಯ ನಂತರ, ಗಂಗೂಲಿ ಅವರಿಗೆ ಇನ್ನುಮುಂದೆ `Yʼ ಶ್ರೇಣಿಯ ಭದ್ರತೆ ಸಾಕು ಎಂದು ಭದ್ರತಾ ಮಂಡಳಿ ತೀರ್ಮಾನಿಸಿದೆ. ಈ ಶ್ರೇಣಿಯಲ್ಲಿ ಸಾಮಾನ್ಯವಾಗಿ ಸುಮಾರು 11 ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, 24 ಗಂಟೆಗಳ ವೈಯಕ್ತಿಕ ರಕ್ಷಣಾ ಅಧಿಕಾರಿಗಳು, ಸಶಸ್ತ್ರ ಪೊಲೀಸ್ ಸಿಬ್ಬಂದಿ ಮತ್ತು ಅಗತ್ಯವಿದ್ದರೆ ಒಂದು ಅಥವಾ ಎರಡು ಭದ್ರತಾ ವಾಹನಗಳ ವ್ಯವಸ್ಥೆ ಇರಲಿದೆ.

ಸರ್ಕಾರದ ಮೂಲಗಳ ಪ್ರಕಾರ, ಈ ನಿರ್ಧಾರವು ಯಾವುದೇ ನಿರ್ದಿಷ್ಟ ಬೆದರಿಕೆ ಹಿನ್ನೆಲೆಯಲ್ಲಿ ತೆಗೆದುಕೊಂಡದ್ದಲ್ಲ. ಬದಲಾಗಿ ರಾಜ್ಯಾದ್ಯಂತ VIP ಭದ್ರತಾ ವ್ಯವಸ್ಥೆಯನ್ನು ಪುನರ್‌ಸಂರಚಿಸುವ ಯೋಜನೆಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅನಗತ್ಯವಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದೇ, ನಿಜವಾದ ಅಪಾಯ ಮಟ್ಟಕ್ಕೆ ಅನುಗುಣವಾಗಿ ಭದ್ರತೆ ನೀಡುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬದಲಾವಣೆ ಜಾರಿಯಾದ ನಂತರವೂ ಗಂಗೂಲಿ ಅವರಿಗೆ ಮೂಲಭೂತ ಪೊಲೀಸ್ ರಕ್ಷಣೆಯನ್ನು ಮುಂದುವರಿಸಲಾಗುತ್ತದೆ. ಅವರ ಕೋಲ್ಕತ್ತಾದ ನಿವಾಸ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಾಮಾನ್ಯ ಭದ್ರತಾ ವ್ಯವಸ್ಥೆ ಇರಲಿದೆ ಎಂದು ತಿಳಿದುಬಂದಿದೆ.

 

ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗೆ ಕ್ಯಾಂಟರ್ ಡಿಕ್ಕಿ! ತಪ್ಪಿದ ಭಾರೀ ದುರಂತ

ನೆಲಮಂಗಲ: ಕುಣಿಗಲ್ ಬೈಪಾಸ್ ಬಳಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ.

ಆ್ಯಂಬುಲೆನ್ಸ್ ಹಾಸನ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಈ ಅಪಘಾತ ಸಂಭವಿಸಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ ಹಾಗೂ ಚಾಲಕ ಸೇರಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ತೀವ್ರತೆ ಗಮನಿಸಿದರೆ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದ ಬಳಿಕ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಯನ್ನು ಸುರಕ್ಷಿತವಾಗಿ ಬೇರೆ ವಾಹನಕ್ಕೆ ಸ್ಥಳಾಂತರಿಸಿ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಆ್ಯಂಬುಲೆನ್ಸ್ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಕ್ಯಾಂಟರ್‌ಗೂ ಅಲ್ಪ ಪ್ರಮಾಣದ ಹಾನಿಯಾಗಿದೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ! ಜೂ.9ರವರೆಗೆ ವರುಣನ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಜೂನ್ 9ರವರೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಭಾರಿ ಮಳೆಯ ಜೊತೆಗೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಹಾಗೂ ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಗುಡುಗು-ಮಿಂಚು ಹಾಗೂ ಕೆಲವೆಡೆ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ತಿಳಿಸಲಾಗಿದೆ. ಉತ್ತರ ಒಳನಾಡಿನ ಹಾವೇರಿ, ಬೆಳಗಾವಿ, ರಾಯಚೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹ ಮಳೆಯ ನಿರೀಕ್ಷೆ ಇದೆ.

ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ನಾಗರಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಇನ್ನು ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರು ಜಾಗೃತರಾಗಿರಲು ಸಲಹೆ ನೀಡಲಾಗಿದೆ.

ಕೋಲಾರದಲ್ಲಿ ದಾರುಣ ಘಟನೆ: ಚಿಕ್ಕ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕೋಲಾರ: ಪತಿಯ ಸಾವಿನ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಹತ್ಯೆ ಮಾಡಿದ ಮನಕಲುಕುವ ಘಟನೆ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಬುಜ್ಜಮ್ಮ (22) ತನ್ನ ಮಕ್ಕಳಾದ 3 ವರ್ಷದ ಸರಸ್ವತಿ ಹಾಗೂ 1 ವರ್ಷದ ಹೇಮಾಶ್ರೀಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಮೂಲಗಳ ಪ್ರಕಾರ, ದಂಪತಿ ಕಳೆದ ಒಂದು ವರ್ಷದಿಂದ ಆಲಂಗೂರಿನ ಮಾವಿನ ತೋಪಿನಲ್ಲಿ ಕೆಲಸ ಮಾಡುತ್ತಿದ್ದರು. 20 ದಿನಗಳ ಹಿಂದೆ ಪತಿ ಬಾಬು ಅಪಘಾತದಲ್ಲಿ ಮೃತಪಟ್ಟಿದ್ದು, ಇದರಿಂದ ಮಹಿಳೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಹೇಳಲಾಗಿದೆ.

ಘಟನೆ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.