Home Blog Page 14

ಪಟಾಕಿ ಕಾರ್ಖಾನೆ ಸ್ಫೋಟ: 13 ಮಂದಿ ಸಾವು, ಕೆಲವರ ಸ್ಥಿತಿ ಗಂಭೀರ!

0

ತಿರುವನಂತಪುರಂ: ಕೇರಳದ ತ್ರಿಶೂರ್‌ನಲ್ಲಿ ನಡೆಯುತ್ತಿರುವ ಪ್ರಸಿದ್ಧ ʻತ್ರಿಶೂರ್ ಪೂರಂ ಉತ್ಸವʼಕ್ಕಾಗಿ ಪಟಾಕಿ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಮಂಗಳವಾರ (ಏ.21) ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ದೃಢಪಡಿಸಿದೆ.

ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿಯ ಪ್ರಕಾರ, ಉತ್ಸವದ ಹಿನ್ನೆಲೆಯಲ್ಲಿ ಪಟಾಕಿ ತಯಾರಿಕಾ ಕಾರ್ಯಗಳು ನಡೆಯುತ್ತಿದ್ದಾಗ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಕಾರ್ಖಾನೆಯ ಶೆಡ್‌ನಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ಒಂದರ ನಂತರ ಒಂದರಂತೆ ಮತ್ತಷ್ಟು ಸ್ಫೋಟಗಳು ಸಂಭವಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆಯ ಸಮಯದಲ್ಲಿ ಕಾರ್ಖಾನೆಯಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಪರಿಸ್ಥಿತಿಯನ್ನು ನಿಗಾ ವಹಿಸಿ ನಿರಂತರ ಮಾಹಿತಿ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ, ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಚೇರಿ ಕೂಡ ಸಂತಾಪ ಸೂಚಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಪಟಾಕಿ ಕಾರ್ಖಾನೆಗಳ ಸುರಕ್ಷತಾ ನಿಯಮಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

CRPFನಲ್ಲಿ ಬೃಹತ್ ನೇಮಕಾತಿ: 9,175 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶದ ಪ್ರಮುಖ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್‌ಟೇಬಲ್ (ತಾಂತ್ರಿಕ ಮತ್ತು ಟ್ರೇಡ್ಸ್‌ಮನ್) ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಭಿಯಾನವನ್ನು ಆರಂಭಿಸಿದೆ.

ಒಟ್ಟು 9,175 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 9,096 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಹಾಗೂ 79 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿವೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಏಪ್ರಿಲ್ 20ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು CRPF ಅಧಿಕೃತ ವೆಬ್‌ಸೈಟ್ rect.crpf.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅರ್ಹತೆ ವಿವರಗಳ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಹುದ್ದೆಗೆ ಅನುಗುಣವಾಗಿ ಸಂಬಂಧಿತ ಕ್ಷೇತ್ರದಲ್ಲಿ ಐಟಿಐ (ITI) ಪ್ರಮಾಣಪತ್ರ ಅಥವಾ ಅಗತ್ಯ ಕೌಶಲ್ಯ ಹೊಂದಿರಬೇಕು. ಚಾಲಕ ಹುದ್ದೆಗೆ ಭಾರಿ ಮೋಟಾರ್ ವಾಹನ ಚಾಲನಾ ಪರವಾನಗಿ (HMV License) ಕಡ್ಡಾಯವಾಗಿದ್ದು, ಕೆಲವು ತಾಂತ್ರಿಕ ಹುದ್ದೆಗಳಿಗೆ ಅನುಭವವೂ ಅಗತ್ಯವಿದೆ.

ವಯೋಮಿತಿಯಂತೆ ಚಾಲಕ ಹುದ್ದೆಗೆ 21 ರಿಂದ 27 ವರ್ಷ, ಇತರೆ ಟ್ರೇಡ್ಸ್‌ಮನ್ ಹುದ್ದೆಗಳಿಗೆ 18 ರಿಂದ 23 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಸಡಿಲಿಕೆ ಲಭ್ಯವಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಹಲವು ಹಂತಗಳನ್ನು ಎದುರಿಸಬೇಕು. ಮೊದಲಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ, ನಂತರ ದೈಹಿಕ ಪರೀಕ್ಷೆ, ತದನಂತರ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅಂತಿಮವಾಗಿ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ವೇತನ ಶ್ರೇಣಿಯಂತೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹21,700 ರಿಂದ ₹69,100 (ಪೇ ಲೆವೆಲ್-3) ವೇತನ ಹಾಗೂ ಸರ್ಕಾರದ ಇತರ ಭತ್ಯೆಗಳು ಲಭ್ಯವಾಗಲಿವೆ.

 

ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಅಪಾಯವೇ? ತಜ್ಞರು ಏನು ಹೇಳ್ತಾರೆ ಕೇಳಿ!

0

ಒಂದು ಕಾಲದಲ್ಲಿ ದೊಡ್ಡವರ ಮುಂದೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ತಪ್ಪು ಎಂದು ಹೇಳಲಾಗುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕುಳಿತುಕೊಳ್ಳುತ್ತಾರೆ. ಆದರೂ ಈ ಭಂಗಿ ಆರೋಗ್ಯಕ್ಕೆ ಹಾನಿಕರವೇ ಎಂಬ ಪ್ರಶ್ನೆ ಇನ್ನೂ ಹಲವರಲ್ಲಿ ಇದೆ.

ಹಳೆಯ ನಂಬಿಕೆಗಳ ಪ್ರಕಾರ, ಈ ರೀತಿ ಕೂತರೆ ಬೆನ್ನೆಲುಬು ವಕ್ರವಾಗುತ್ತದೆ, ರಕ್ತ ಸಂಚಲನ ಕಡಿಮೆಯಾಗುತ್ತದೆ ಮತ್ತು ಕಾಲಿನ ನರಗಳು ಉಬ್ಬಿ ಕಾಣಿಸುವ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಈ ಮಾತುಗಳನ್ನು ಸಂಪೂರ್ಣವಾಗಿ ಸಮರ್ಥಿಸುವುದಿಲ್ಲ.

ತಜ್ಞರ ಪ್ರಕಾರ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ನರಗಳ ಮೇಲೆ ಸ್ವಲ್ಪ ಒತ್ತಡ ಬೀಳಬಹುದು. ಇದರಿಂದ ಕೆಲವೊಮ್ಮೆ ಕಾಲಿನಲ್ಲಿ ಜುಮ್ಮೆನಿಸುವುದು ಅಥವಾ ಸಣ್ಣ ನೋವು ಕಾಣಬಹುದು. ಆದರೆ ಇದು ತಾತ್ಕಾಲಿಕವಾಗಿದ್ದು, ದೀರ್ಘಕಾಲದ ಹಾನಿಗೆ ಕಾರಣವಾಗುವುದಿಲ್ಲ.

ಹೆಚ್ಚಿನವರು ಈ ಭಂಗಿ ಬೆನ್ನಿಗೆ ಹಾನಿ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ಮಾನವ ದೇಹದ ಬೆನ್ನೆಲುಬು ಬಹಳ ಬಲವಾಗಿದ್ದು, ವಿವಿಧ ರೀತಿಯ ಕುಳಿತ ಭಂಗಿಗಳನ್ನು ಸಹಿಸಬಲ್ಲದು. ಬೆನ್ನುನೋವು ಅಥವಾ ಸೊಂಟದ ನೋವಿಗೆ ಪ್ರಮುಖ ಕಾರಣ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕೂತಿರುವುದೇ ಆಗಿದೆ.

ಇನ್ನು ಕಾಲಿನ ನರಗಳು ಉಬ್ಬಿ ಕಾಣಿಸುವ ಸಮಸ್ಯೆಯ ಬಗ್ಗೆ ಹೇಳುವುದಾದರೆ, ಇದು ಕೇವಲ ಕುಳಿತ ರೀತಿಯಿಂದ ಮಾತ್ರ ಉಂಟಾಗುವುದಿಲ್ಲ. ವಯಸ್ಸು, ಜನ್ಯ ಕಾರಣಗಳು, ಅತಿಯಾದ ತೂಕ, ಗರ್ಭಾವಸ್ಥೆ ಮತ್ತು ದೀರ್ಘಕಾಲ ನಿಂತಿರುವುದು ಮುಖ್ಯ ಕಾರಣಗಳಾಗಿವೆ.

ಹೀಗಾಗಿ ಏನು ಮಾಡಬೇಕು?
ಯಾವ ರೀತಿಯಲ್ಲಿ ಕೂತರೂ ಸರಿ. ಆದರೆ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಇರಬಾರದು. ಮಧ್ಯ ಮಧ್ಯದಲ್ಲಿ ಎದ್ದು ನಡೆಯುವುದು ಮತ್ತು ಭಂಗಿ ಬದಲಾಯಿಸುವುದು ಉತ್ತಮ.

ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಅಪಾಯಕರವಲ್ಲ. ಆದರೆ ದೀರ್ಘಕಾಲ ಒಂದೇ ಸ್ಥಿತಿಯಲ್ಲಿ ಕೂತಿರುವುದನ್ನು ತಪ್ಪಿಸುವುದು ಆರೋಗ್ಯಕರ ಜೀವನದ ಪ್ರಮುಖ ಗುಟ್ಟು.

ಸಿದ್ದರಾಮಯ್ಯ ಬದಲಾಗಿಲ್ಲ, ಟಗರು ಯಾವತ್ತೂ ಟಗರೇ: ಸಚಿವ ಜಮೀರ್ ಅಹಮದ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಹೇಗಿದ್ದರೋ ಈಗಲೂ ಅದೇ ರೀತಿ ಇದ್ದಾರೆ. “ಟಗರು ಟಗರೇ” ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರು ಟಾರ್ಗೆಟ್ ಆದರೂ ಮೌನವಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿಎಂಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿ. ಈಗ ಮೌನವಾಗಿರಬಹುದು, ಆದರೆ ಮಾತನಾಡಿದರೆ ಬೇರೆ ರೀತಿಯಲ್ಲಿ ಪ್ರತಿಧ್ವನಿಸುತ್ತದೆ. ಈಗ ಮಾತನಾಡುವ ಅಗತ್ಯ ಇಲ್ಲ ಎಂದು ಹೇಳಿದರು.

ಮುಸ್ಲಿಂ ಗುರುಗಳು ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಆ ಪತ್ರವನ್ನು ನೋಡಿದ್ದೇನೆ. ಸುಮಾರು 15–16 ಮಂದಿ ಗುರುಗಳು ರಾಹುಲ್ ಗಾಂಧಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಬೇಕಿದ್ದರೆ ಪತ್ರ ಬರೆದವರನ್ನೇ ಕೇಳಬೇಕು ಎಂದರು.

ಯಾವುದೇ ತಾರತಮ್ಯ ನಡೆಯುತ್ತಿಲ್ಲ. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಒಬ್ಬೊಬ್ಬರು ಒಬ್ಬೊಬ್ಬರ ಪರವಾಗಿ ಮಾತನಾಡುವುದು ಸಾಮಾನ್ಯ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.

ಸಿಡಿಲು ಬಡಿದು ವೃದ್ಧೆ ಸಾವು; ನೀರಿನಲ್ಲಿ ಮುಳುಗಿ ನಾಲ್ವರು ದುರ್ಮರಣ

0

ಹಾಸನ: ಜಿಲ್ಲೆಯಲ್ಲಿ ಮಳೆ-ಗಾಳಿ ತೀವ್ರಗೊಂಡಿರುವ ಹಿನ್ನೆಲೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಐವರು ಸಾವನ್ನಪ್ಪಿರುವ ದುರ್ಘಟನೆಗಳು ಸಂಭವಿಸಿವೆ.

ಆಲೂರು ತಾಲೂಕಿನಲ್ಲಿನ ಘಟನೆಯಲ್ಲಿ, ಜಾನುವಾರು ಮೇಯಿಸಲು ತೆರಳಿದ್ದ ನೀಲಮ್ಮ (70) ಮಳೆಯಿಂದ ರಕ್ಷಣೆ ಪಡೆಯಲು ಮರದ ಬಳಿ ಆಶ್ರಯ ಪಡೆದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಭಾರೀ ಮಳೆ ಮತ್ತು ಬಿರುಗಾಳಿಯಿಂದ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹೋಬಳಿಯ ಕಾರೆಹಳ್ಳಿ, ನಾಗರನವಿಲೆ, ಚಿಕ್ಕೋನಹಳ್ಳಿ ಹಾಗೂ ರೇಚಿಹಳ್ಳಿ ರಸ್ತೆಗಳುದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚೆಸ್ಕಾಂ ಸಿಬ್ಬಂದಿ ದಿನಪೂರ್ತಿ ಮರ ತೆರವು ಕಾರ್ಯಾಚರಣೆ ನಡೆಸಿದರು.

ಇದರ ಜೊತೆಗೆ, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ನಿಲಗುಂದ-ಹೊಸಳ್ಳಿ ಗ್ರಾಮದ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಅಳಿಯ ಪ್ರತೀಕ್ (10) ಮತ್ತು ಮಾವ ಪ್ರಭಾಕರ್ (45) ಈಜು ಬರದೇ ಮುಳುಗಿ ಮೃತಪಟ್ಟಿದ್ದಾರೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರತೀಕ್ ಮಾವನ ಮನೆಗೆ ಬಂದಿದ್ದ ಎನ್ನಲಾಗಿದೆ.

ಮತ್ತೊಂದು ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲೂ ಸಂಭವಿಸಿದ್ದು, ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಳೆಗಾಲದ ಅವಘಡಗಳಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿದೆ: ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರ: ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ತನಿಖಾ ದಾಳಿಗಳನ್ನು ನಡೆಸುತ್ತಿದೆ, ಬಿಜೆಪಿಯವರ ಮೇಲೆ ಇಂತಹ ಕ್ರಮಗಳು ಕಾಣಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಗುಂಡ್ಲುಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿ ಕುರಿತು ಪ್ರತಿಕ್ರಿಯಿಸಿ ಈ ಆರೋಪ ಮಾಡಿದರು.

ಮೂಢನಂಬಿಕೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಚಾಮರಾಜನಗರಕ್ಕೆ ಬಂದರೆ ಕುರ್ಚಿ ಹೋಗುತ್ತದೆ ಎಂಬ ಮಾತು ತಪ್ಪು. ನಾನು ಇಲ್ಲಿ ಹಲವು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಎಂದರು. ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಮೊದಲು ವಿರೋಧಿಸಿದ್ದವರೇ ಈಗ ಅದನ್ನು ಅನುಸರಿಸುತ್ತಿದ್ದಾರೆ. ಗ್ಯಾರಂಟಿಗಳು ಬಡವರ ಪರ ಯೋಜನೆಗಳೆಂಬುದು ಅವರಿಗೆ ಈಗ ಅರಿವಾಗಿದೆ ಎಂದು ಹೇಳಿದರು.

ನಾರಿ ಶಕ್ತಿ ವಂದನ್ ಮಸೂದೆ ಕುರಿತು ಬಿಜೆಪಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಮಹಿಳಾ ಮೀಸಲಾತಿಗೆ ವಿರೋಧಿಗಳು ಬಿಜೆಪಿಯವರೇ. ರಾಜೀವ್‌ ಗಾಂಧಿ ಅವಧಿಯಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತರಲಾಗಿತ್ತು. ಆದರೆ ಅದನ್ನು ರಾಜ್ಯಸಭೆಯಲ್ಲಿ ತಡೆದವರು ಬಿಜೆಪಿಯವರೇ ಎಂದು ಹೇಳಿದರು. ನಮ್ಮ ವಿರೋಧ ಕ್ಷೇತ್ರ ಮರುವಿಂಗಡಣೆಗೆ ಮಾತ್ರ, ಮಹಿಳಾ ಮೀಸಲಾತಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ತೃತೀಯ ಭಾಷೆಗೆ ಅಂಕ ನೀಡುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುವುದು. ಹಿಂದಿನ ವರ್ಷಗಳಂತೆ ಮೌಲ್ಯಮಾಪನ ಮಾಡಿ ಅಂಕ ನೀಡಬೇಕು ಎಂದು ಉಚ್ಚ ನ್ಯಾಯಾಲಯ ಸೂಚಿಸಿರುವುದಾಗಿ ಹೇಳಿದರು.

ಅಲ್ಪಸಂಖ್ಯಾತರು ಹೈಕಮಾಂಡ್ಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಿರ್ಧಾರ ಕೈಗೊಳ್ಳುವಾಗ ಅವರೇ ಉಪಸ್ಥಿತರಿದ್ದರು. ನಂತರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಇದೇ ವೇಳೆ, ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮುಂಬೈ ಇಂಡಿಯನ್ಸ್ ಭರ್ಜರಿ ಜಯ: ‘ಇದು ತಂಡದ ಟರ್ನಿಂಗ್ ಪಾಯಿಂಟ್’ ಎಂದ ಹಾರ್ದಿಕ್ ಪಾಂಡ್ಯ

0

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 199 ರನ್ ಗಳಿಸಿತು.

ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 15.5 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಆಗಿ, ಮುಂಬೈ ಇಂಡಿಯನ್ಸ್‌ಗೆ 99 ರನ್‌ಗಳ ಭಾರೀ ಜಯ ಒಲಿಯಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಈ ಗೆಲುವು ಕೇವಲ ಎರಡು ಅಂಕಗಳಲ್ಲ, ಇದು ತಂಡದ ಆತ್ಮವಿಶ್ವಾಸವನ್ನು ಬದಲಿಸುವ ಟರ್ನಿಂಗ್ ಪಾಯಿಂಟ್. ಮುಂದಿನ ಪಂದ್ಯಗಳಲ್ಲಿ ಇದರ ಪರಿಣಾಮ ಕಾಣುತ್ತದೆ ಎಂದು ಹೇಳಿದರು.

ಯುವ ಆಟಗಾರರ ಪ್ರದರ್ಶನವನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ತಿಲಕ್ ವರ್ಮಾ ಅವರ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರು. ತಿಲಕ್ ಅದ್ಭುತ ಪ್ರತಿಭಾವಂತ. ಚೆಂಡನ್ನು ನೋಡಿ ಹೊಡೆಯುವಂತೆ ಹೇಳಿದ್ದೆ, ಅದನ್ನು ಅವರು ನಿಖರವಾಗಿ ಅನುಸರಿಸಿದರು ಎಂದು ಹೇಳಿದರು.

ಇದಲ್ಲದೆ, ಚೊಚ್ಚಲ ಪಂದ್ಯವಾಡಿದ ಕ್ರಿಶ್ ಹಾಗೂ ನಾಲ್ಕು ವಿಕೆಟ್ ಪಡೆದ ಅಶ್ವನಿ ಅವರ ಶಿಸ್ತಿನ ಬೌಲಿಂಗ್ ಗೆಲುವಿಗೆ ಬಲವಾಯಿತು. ಈ ಜಯದ ಶ್ರೇಯಸ್ಸು ನಮ್ಮ ಯುವ ಆಟಗಾರರದ್ದು ಎಂದು ಪಾಂಡ್ಯ ಹೇಳಿದರು.

ಬುಮ್ರಾ ಅವರಿಗೆ ಮೊದಲ ಓವರ್ ನೀಡಿದ ಬಗ್ಗೆ ಮಾತನಾಡಿದ ಪಾಂಡ್ಯ, ಬುಮ್ರಾ ವಿಶೇಷ ಬೌಲರ್. ತಂಡಕ್ಕೆ ಯಾವಾಗ ಅಗತ್ಯವೋ ಅಲ್ಲಿ ಬಳಸುತ್ತೇವೆ. ಇಂದು ಆರಂಭದಲ್ಲೇ ವಿಕೆಟ್ ಬೇಕಿತ್ತು, ಅದಕ್ಕಾಗಿ ಅವರನ್ನು ಬಳಸಿದೆವು. ಇದು ತಂಡದ ನಿರ್ಧಾರ ಎಂದು ಸ್ಪಷ್ಟಪಡಿಸಿದರು.

ಪಂದ್ಯದ ನಂತರ ದಣಿದಂತೆ ಕಾಣಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪಾಂಡ್ಯ, ಪಂದ್ಯದುದ್ದಕ್ಕೂ ನಾನು ಜೋರಾಗಿ ಕಿರುಚುತ್ತಿದ್ದೆ. ಒಂದು ಕ್ಷಣ ತಲೆ ಸುತ್ತಿದಂತೆ ಅನಿಸಿತು. ಆದರೆ ತಂಡದಲ್ಲಿ ಉತ್ಸಾಹ ತುಂಬುವುದು ಅಗತ್ಯವಿತ್ತು ಎಂದು ಹೇಳಿದರು.

ಮೋದಿ ಒಬ್ಬ ಭಯೋತ್ಪಾದಕ- ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ, ಬಿಜೆಪಿ ಆಕ್ರೋಶ

0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ರಾಜಕೀಯ ತಾಪಮಾನ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಐಡಿಎಂಕೆ-ಬಿಜೆಪಿ ಮೈತ್ರಿಯನ್ನು ಟೀಕಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಎಐಡಿಎಂಕೆ ಪಕ್ಷವು ಮೋದಿಯವರೊಂದಿಗೆ ಕೈಜೋಡಿಸಿರುವುದನ್ನು ಪ್ರಶ್ನಿಸಿ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಬಿಜೆಪಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಬಳಸಿದ ಪದಪ್ರಯೋಗ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ.

ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ರಾಜಕೀಯ ಶಿಷ್ಟಾಚಾರ ಮೀರಲಾಗಿದೆ ಎಂದು ಆರೋಪಿಸಿದೆ. ವಿವಾದ ತೀವ್ರಗೊಂಡ ಬೆನ್ನಲ್ಲೇ ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಮೋದಿಯವರು ತಮ್ಮ ವಿರೋಧಿಗಳನ್ನು ಬೆದರಿಸುತ್ತಾರೆ ಎಂಬ ಅರ್ಥದಲ್ಲಿ ‘ಭಯೋತ್ಪಾದಕ’ ಎಂಬ ಪದ ಬಳಸಿದ್ದಾಗಿ ಹೇಳಿದ ಖರ್ಗೆ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ತಾವು ಹೇಳಲು ಯತ್ನಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ: ಕೊಲೆ ಶಂಕೆ

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ರಬ್ಬರ್ ತೋಟವೊಂದರಲ್ಲಿ ಯುವಕನ ಅಸ್ಥಿಪಂಜರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಘಟನೆಗೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅರಳಿಕೊಪ್ಪ ನಿವಾಸಿ ಎಲ್ಡೋ ಅವರಿಗೆ ಸೇರಿದ ತೋಟದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೂಳೆಗಳು ಮಾತ್ರ ಉಳಿದಿರುವ ಸ್ಥಿತಿ ಕಂಡುಬಂದಿದೆ. ತೋಟದ ಕೆಲಸಗಾರರು ಈ ದೃಶ್ಯ ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ಅಸ್ಥಿಪಂಜರವು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಕಾರ್ಮಿಕ ಬಿಬಿನ್‌ನದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಿಬಿನ್ ಇದೇ ತೋಟದಲ್ಲಿ ಕೆಲಸ ಮಾಡುತ್ತಿದ್ದನು. ಘಟನೆ ಸ್ಥಳದಲ್ಲಿ ಅವನು ಬಳಸುತ್ತಿದ್ದ ಜರ್ಕಿನ್ ಪತ್ತೆಯಾಗಿರುವುದು ಅನುಮಾನಕ್ಕೆ ಬಲ ನೀಡಿದೆ. ಈ ಸಂಬಂಧ ಬಿಬಿನ್ ಕುಟುಂಬಸ್ಥರು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ.

ಎಫ್‌ಎಸ್‌ಎಲ್ ತಂಡದ ಸಹಾಯದಿಂದ ತನಿಖೆ ಮುಂದುವರಿದಿದ್ದು, ಪ್ರಕರಣದ ಸೂಕ್ಷ್ಮ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ʼಗೆ ಮತ್ತೊಂದು ಶಾಕ್: IPL ಟೂರ್ನಿಯಿಂದ ಯುವ ಬ್ಯಾಟ್ಸ್ʼಮನ್ ಔಟ್!

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19ರಲ್ಲಿ ಸೋಲು-ಗೆಲುವಿನ ಹೋರಾಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಯುವ ಸ್ಫೋಟಕ ಬ್ಯಾಟರ್ ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್​  ಪರ ಆಡುತ್ತಿದ್ದ ಆಯುಷ್ ಮ್ಹಾತ್ರೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ನಂತರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಗಂಭೀರವಾಗಿರುವುದು ದೃಢಪಟ್ಟಿದೆ.

ವೈದ್ಯಕೀಯ ವರದಿಯ ಪ್ರಕಾರ, ಸಂಪೂರ್ಣ ಗುಣಮುಖರಾಗಲು ಕನಿಷ್ಠ 6 ರಿಂದ 12 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಹಿನ್ನೆಲೆ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.

ಈ ಸೀಸನ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಆಯುಷ್ ಮ್ಹಾತ್ರೆ, 6 ಪಂದ್ಯಗಳಲ್ಲಿ 177.88 ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿ ತಂಡದ ಪರ ಅಗ್ರ ರನ್‌ಸ್ಕೋರರ್ ಆಗಿದ್ದರು. ಅವರ ಅನುಪಸ್ಥಿತಿ ಸಿಎಸ್‌ಕೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಇದೀಗ ಅವರ ಬದಲಿಗೆ ಹೊಸ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದೆ.

error: Content is protected !!