Home Blog Page 13

ಮದುವೆಯಾಗದ ಭಾವನಾ ರಾಮಣ್ಣ ಈಗ 6 ತಿಂಗಳ ಗರ್ಭಿಣಿ: ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ನಟಿ

ಕನ್ನಡ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ಒಂಟಿಯಾಗಿ ತಾಯಿಯಾಗಲು ರೆಡಿಯಾಗಿದ್ದಾರೆ. ಐವಿಎಫ್‌ ಮೂಲಕ ಗರ್ಭಿಣಿಯಾಗಿರುವ ಭಾವನಾ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ ನಟಿ ಭಾವನಾ ರಾಮಣ್ಣ.

ತಾವು ತಾಯಿಯಾಗುತ್ತಿರುವ ಬಗ್ಗೆ ಮಾತನಾಡಿರುವ ನಟಿ ಭಾವನಾ ರಾಮಣ್ಣ, ತಾನು ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದೆ. ಆದರೆ ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದಿದ್ದಾರೆ.

ತಾಯಿಯಾಗುವ ತಮ್ಮ ಆಸೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಪೂರೈಸಲು ಮೊದಲು ಯೋಚಿಸಿದೆ. ಆದರೆ ಅದು ಸಾಧ್ಯವಾಗದಿದ್ದಾಗ ಸಹಾಯಕ ಗರ್ಭಧಾರಣೆ ಕಡೆಗೆ ಗಮನ ಹರಿಸಿದರು. ಆದರೆ, ಈ ದಾರಿಯೂ ಸುಲಭವಾಗಿರಲಿಲ್ಲ. ಒಂಟಿ ಮತ್ತು ಅವಿವಾಹಿತ ಮಹಿಳೆಯಾಗಿ ಐವಿಎಫ್‌ ಚಿಕಿತ್ಸೆ ಪಡೆಯಲು ಹಲವು ಅಡೆತಡೆಗಳನ್ನು ಎದುರಿಸಿದೆ. “ನನ್ನ ಮಕ್ಕಳಿಗೆ ತಂದೆ ಇರದಿರಬಹುದು, ಆದರೆ ಅವರು ದಯಾಳು ಪುರುಷರ ಸುತ್ತಲಿರುತ್ತಾರೆ” ಎಂದಿದ್ದಾರೆ.

ನಮ್ಮ ಮನೆ ಬಳಿ ಇರುವ ಕ್ಲಿನಿಕ್‌ ಹೋಗಿ ಅಲ್ಲಿ ಚಿಕಿತ್ಸೆ ಪಡೆದೆ. ವೈದ್ಯರು ನನಗೆ ತುಂಬ ಸಲಹೆ ಕೊಟ್ಟರು. ಮೊದಲ ಪ್ರಯತ್ನದಲ್ಲೇ ನಾನು ತಾಯಿಯಾಗಿರೋದು ಖುಷಿ ಕೊಟ್ಟಿದೆ. ನಾನು ತಾಯಿ ಆಗ್ತಿದೀನಿ ಅಂತ ಗೊತ್ತಾದಾಗ ನನ್ನ ತಂದೆ ತುಂಬ ಖುಷಿಪಟ್ಟರು. ನೀನು ಮಹಿಳೆ, ನಿನಗೆ ತಾಯಿ ಆಗುವ ಹಕ್ಕಿದೆ ಎಂದು ನನ್ನ ತಂದೆ ಹೇಳಿದ್ದಾರೆ. ನನ್ನ ಕನಸು, ಆಸೆಗೆ ನನ್ನ ತಂದೆ, ಒಡಹುಟ್ಟಿದವರು ಬೆಂಬಲ ನೀಡಿದ್ದಾರೆ. ಇನ್ನೂ ಕೆಲವರು ಇದರ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ನೋಡಿ ಓರ್ವ ಮಹಿಳೆಗೆ ಪ್ರೇರಣೆ ಸಿಕ್ಕಿ, ಆಕೆ ನಾನು ಜೀವನದಲ್ಲಿ ಒಂಟಿಯಲ್ಲ ಎಂದು ಯೋಚಿಸಿದರೆ ಅದುವೇ ನನ್ನ ಜಯ ಎಂದುಕೊಳ್ಳುತ್ತೇನೆ ಎಂದು ಭಾವನಾ ಹೇಳಿದ್ದಾರೆ.

ಹಾಸನದಲ್ಲಿ ನಿಲ್ಲದ ಹೃದಯಾಘಾತ ಪ್ರಕರಣಗಳು: ಹಾರ್ಟ್ ಅಟ್ಯಾಕ್’ಗೆ ಮಹಿಳೆ ಸಾವು..!

ಹಾಸನ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಜಸ್ಟ್​​ 40 ದಿನಗಳಲ್ಲಿ ಹೃದಯಾಘಾತದಿಂದ ಹಲವಾರು ಮಂದಿ ಬಲಿಯಾಗಿದ್ದಾರೆ. ಇದೀಗ ಹೃದಯಾಘಾತದಿಂದ ಮತ್ತೋರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ನಗರದ ದಾಸರಕೊಪ್ಪಲಿನಲ್ಲಿ ನಡೆದಿದೆ.

ಬಿ.ಎನ್.ವಿಮಲಾ (55) ಹೃದಯಾಘಾತದಿಂದ ಮೃತಪಟ್ಟ ಗೃಹಿಣಿಯಾಗಿದ್ದು, ಬಿ.ಎನ್.ವಿಮಲಾ ಸಕಲೇಶಪುರ ತೋಟದಗದ್ದೆ ಗ್ರಾಮದ ಕುಮಾರ್ ಎಂಬುವವರ ಪತ್ನಿಯಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದ ಒಂದೂವರೆ ತಿಂಗಳಿನಲ್ಲಿ 35 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಇದರ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಹಠಾತ್ ನಿಧನಕ್ಕೆ ಏನು ಕಾರಣ ಎಂಬುದನ್ನು ಹೇಳಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ: ಡಿಕೆ ಶಿವಕುಮಾರ್

ಮೈಸೂರು: ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಚಾಮುಂಡಿ ದರ್ಶನ ಪಡೆದ ನಂತರ ಮಾತನಾಡಿದ ಅವರು,

ಯಾವುದೇ ಕೆಲಸ ಆರಂಭಿಸುವ ಮೊದಲು ಚಾಮುಂಡಿ ತಾಯಿಗೆ ಸಲ್ಲಿಸುವುದು ನಮ್ಮಲ್ಲಿರುವ ಪದ್ಧತಿ, ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ, ನನಗೇನು ಬೇಕೋ ಅದನ್ನು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ಎಂದರು.

ಇನ್ನು ನನಗೆ ಏನು ಬೇಕು ಅನ್ನೋದನ್ನ ನಾನು ದೇವರ ಬಳಿ ಪ್ರಾರ್ಥನೆ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ನಮಗೆ ಬುದ್ಧಿವಾದ ಹೇಳಿದ್ದಾರೆ. ಹೈಕಮಾಂಡ್ ಕೂಡ ಕೆಲ ವಿಚಾರದ ಕುರಿತು ಚರ್ಚೆ ಮಾಡಿದೆ. ದೇವಸ್ಥಾನದಲ್ಲಿ ರಾಜಕೀಯ ಚರ್ಚೆ ಬೇಡ ಎಂದು ಹೇಳಿದ್ದಾರೆ.

ರವಿಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರ: ಐಎಎಸ್ ಅಸೋಸಿಯೇಷನ್ ದೂರಿಗೆ ವಿಜಯೇಂದ್ರ ಆಕ್ಷೇಪ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಎಮ್‌ಎಲ್‌ಸಿ ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಭಾರೀ ಚರ್ಚೆಗೆ ಗುರಿಯಾಗಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,

ಈಗಾಗ್ಲೇ ಎಂಎಲ್ಸಿ ರವಿಕುಮಾರ್ ಅವರು ಅವರ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ‌. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಸೋಸಿಯೇಷನ್ ನವರು ಸಿಎಂಗೆ ದೂರು ಕೊಟ್ಟಿದ್ದಾರೆ‌‌. ಆದರೆ ಖುದ್ದು ಸಿಎಂ ಅವರೇ ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ನಡೆದುಕೊಂಡಾಗ ಆಗ ಎಲ್ಲಿ‌ ಹೋಗಿದ್ವು ಈ ಅಸೋಸಿಯೇಷನ್ ಗಳು.? ಎಂದು ಪ್ರಶ್ನಿಸಿದ್ದಾರೆ. ಸಿಎಂ ವಿರುದ್ಧ ಯಾಕೆ ದೂರು ನೀಡಿರಲಿಲ್ಲ ಎಂದಿದ್ದಾರೆ.

 

ಆತ್ಮಹತ್ಯೆಗೆ ಯತ್ನ: ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ!

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ಕಾವೇರಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಸ್ಥಳೀಯರ ಸಹಾಯದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾನೂನು ವಿದ್ಯಾರ್ಥಿ ಪವಿತ್ರ(20) ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯಾಗಿದ್ದು,

ಆತ್ಮಹತ್ಯೆಗೆಂದು ನಿಮಿಷಾಂಭ ದೇಗುಲದ ಸೇತುವೆ ಬಳಿ ನದಿಗೆ ಹಾರಿದ್ದಳು. ನದಿ ಪ್ರವಾಹದಲ್ಲಿ ಐದಾರು ಕಿ.ಮೀ ಕೊಚ್ಚಿಹೋಗಿ ನದಿ ಮಧ್ಯೆ ನಡುಗಡ್ಡೆಗೆ ಸಿಲುಕಿ ಇಡೀ ರಾತ್ರಿ ನರಳಾಡಿದ್ದಾಳೆ. ಮುಂಜಾನೆ ಯುವತಿಯ ಕಿರುಚಾಟ ಕೇಳಿ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಯಿತು. ಮನೆಯಲ್ಲಿನ ಗಲಾಟೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ರಕ್ಷಣೆ ನಂತರ ಆಕೆಯನ್ನು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ನಟಿ ಜಾಕ್ವೆಲಿನ್‌ ಗೆ ಮತ್ತಷ್ಟು ಸಂಕಷ್ಟ: ಹೈಕೋರ್ಟ್‌ನಿಂದ ಅರ್ಜಿ ವಜಾ

ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ವಂಚಕ ಸುಖೇಶ್ ಚಂದ್ರಶೇಖರ್ ಜೊತೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಭಾಗಿಯಾಗಿದ್ದಾರೆ ಎಂಬ ಆರೋಪ ಈ ಮೊದಲಿನಿಂದಲೂ ಕೇಳಿ ಬಂದಿದೆ, ಹೀಗಾಗಿ ಇಡಿ ಅಧಿಕಾರಿಗಳು ನಟಿಯ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ್ನು ರದ್ದುಗೊಳಿಸಬೇಕು ಎಂದು ನಟಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಹೈಕೋರ್ಟ್ ನಟಿಯ ಅರ್ಜಿಯನ್ನ ವಜಾಗೊಳಿಸಿದೆ.

ಈ ಕೇಸ್​​ನಲ್ಲಿ ಸುಖೇಶ್ ಚಂದ್ರಶೇಖರ್ ತನ್ನನ್ನು ಸಿಲುಕಿಸಿದ್ದಾರೆ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೈಕೋರ್ಟ್​​ನಲ್ಲಿ ವಾದಿಸಿದ್ದರು. ತಾನು ಯಾವುದೇ ಆಕ್ರಮ ಹಣ ವರ್ಗಾವಣೆ ಮಾಡಿಲ್ಲ. ಅಪರಾಧದ ಹಣವೂ ನನ್ನ ಬಳಿ ಇಲ್ಲ ಎಂದು ಹೈಕೋರ್ಟ್​​ನಲ್ಲಿ ಜಾಕ್ವೆಲಿನ್ ವಾದಮಂಡನೆ ಮಾಡಿದ್ದರು. ಸುಕೇಶ್‌ ಜೊತೆ ವಂಚನ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಇದ್ದಾರೆ ಎಂದು ಇಡಿ ಇಡಿ ಸೂಕ್ತ ಆಧಾರದ ಮೇಲೇನೆ ಜಾಕ್ವಲಿನ್ ವಿರುದ್ಧ ಕೇಸ್‌ ದಾಖಲಿಸಿತ್ತು.

ಆದರೆ, ಇದನ್ನ ಪ್ರಶ್ನಿಸಿ ಜಾಕ್ವೆಲಿನ್ ಫರ್ನಾಂಡಿಸ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ಮೇಲಿನ ಕೇಸ್ ಅನ್ನ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿದ್ದರು. ಆದರೆ ನಟಿ ಸಲ್ಲಿಸುರವ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು ಸದ್ಯಕ್ಕಂತು ನಟಿಗೆ ಈ ಕೇಸ್‌ ನಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಈ ಕೇಸ್​​ನಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಪೂರಕ ಚಾರ್ಜ್​ಶೀಟ್ ಕೂಡ ಕೆಳ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಈ ಹಂತದಲ್ಲಿ ಕೇಸ್ ರದ್ದತಿಯನ್ನು ಕೋರಿ ಜಾಕ್ವೆಲಿನ್ ಫರ್ನಾಂಡೀಸ್ ಸಲ್ಲಿಸಿರುವ ಈ ಅರ್ಜಿಯೇ ವಿಚಾರಣೆಗೆ ಯೋಗ್ಯವಲ್ಲ ಎಂದು ಇಡಿ ವಾದಿಸಿದೆ.

‘ಅವಳು ಕೃಪೆಯಿಂದ ಆವೃತವಾದ ಬೆಂಕಿಯಾಗಿದ್ದಳುʼ: ಶೆಫಾಲಿ ಬಗ್ಗೆ ಭಾವುಕ ಪೋಸ್ಟ್‌ ಹಂಚಿಕೊಂಡ ಪತಿ ಪರಾಗ್‌ ತ್ಯಾಗಿ

ಬಾಲಿವುಡ್‌ ನಟಿ ಹಾಗೂ ಮಾಡೆಲ್‌ ಶೆಫಾಲಿ ಜರಿವಾಲಾ ಕೇವಲ 42 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಟಿಯ ಸಾವು ಪ್ರತಿಯೊಬ್ಬರಿಗೂ ಶಾಕ್‌ ನೀಡಿದೆ. ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಪತ್ನಿಯ ನಿಧನದ ಬಳಿಕ ಶೆಫಾಲಿ ಪತಿ ಪರಾಗ್‌ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಶೆಫಾಲಿ ನಿಧನರಾದ 5 ದಿನಗಳ ನಂತರ, ಪರಾಗ್ ತಮ್ಮ ಪತ್ನಿ ಶೆಫಾಲಿಗೆ ತುಂಬಾ ಭಾವನಾತ್ಮಕ ಪೋಸ್ಟ್ ಬರೆದಿದ್ದಾರೆ. ಪತ್ನಿಯ ಅಪರೂಪದ ಚಿತ್ರವನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ.

“ಶೆಫಾಲಿ ಕೇವಲ ಕಾಂಟಾ ಲಗಾ ಹುಡುಗಿಯಲ್ಲ, ಅವಳು ಅದಕ್ಕಿಂತ ಹೆಚ್ಚಿನವಳು. ಅವಳು ಘನತೆಯಿಂದ ಸುತ್ತುವರಿದ ಬೆಂಕಿ. ತೀಕ್ಷ್ಣ, ಕೇಂದ್ರೀಕೃತ ಮತ್ತು ದೃಢನಿಶ್ಚಯ ಹೊಂದಿರುವಾಕೆ ಎಂದಿದ್ದಾರೆ.

ಉದ್ದೇಶ, ತನ್ನ ವೃತ್ತಿ, ಮನಸ್ಸು, ದೇಹದೊಂದಿಗೆ ಬದುಕಿದ ಮಹಿಳೆ. ಶೆಫಾಲಿ ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧಳಾಗಿದ್ದಳು. ಶೆಫಾಲಿ ಜರಿವಾಲಾ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು. “ಆದರೆ ಅವರ ಎಲ್ಲಾ ಬಿರುದುಗಳು ಮತ್ತು ಸಾಧನೆಗಳನ್ನು ಮೀರಿ, ಶೆಫಾಲಿ ಅತ್ಯಂತ ನಿಸ್ವಾರ್ಥ ರೀತಿಯಲ್ಲಿ ಪ್ರೀತಿಯಿಂದ ಕೂಡಿದ್ದರು. ಅವರು ಯಾವಾಗಲೂ ಇತರರನ್ನು ಮೊದಲು ಇಡುತ್ತಿದ್ದರು, ತಮ್ಮ ಉಪಸ್ಥಿತಿಯಿಂದ ಸಾಂತ್ವನ ಮತ್ತು ಸಂತೋಷವನ್ನು ನೀಡುತ್ತಿದ್ದರು. ಉದಾರ ಮನಸಿನವಳು ಎಂದು ಪರಾಗ್ ತ್ಯಾಗಿ ಪತ್ನಿಯ ಬಗ್ಗೆ ಬರೆದುಕೊಂಡಿದ್ದಾರೆ..

ಶೆಫಾಲಿ ಪ್ರೀತಿಯ ಹೆಂಡತಿ ಮತ್ತು ಅದ್ಭುತ ತಾಯಿ. ರಕ್ಷಣಾತ್ಮಕ ಮತ್ತು ಮಾರ್ಗದರ್ಶಕ ಸಹೋದರಿ ಮತ್ತು ಚಿಕ್ಕಮ್ಮ. ಧೈರ್ಯ ಮತ್ತು ಸಹಾನುಭೂತಿಯಿಂದ ತಾನು ಪ್ರೀತಿಸಿದವರ ಜೊತೆ ನಿಂತಿದ್ದ ಪ್ರೀತಿಯ ಸ್ನೇಹಿತೆ ಎಂದಿದ್ದಾರೆ.

“ಈ ದುಃಖದ ಸಮಯದಲ್ಲಿ, ಶಬ್ದ ಮತ್ತು ಊಹಾಪೋಹಗಳಿಂದ ದೂರವಾಗುವುದು ಸುಲಭ. ಆದರೆ ಶೆಫಾಲಿಯನ್ನು ಅವರ ಬೆಳಕಿನಿಂದ ನೆನಪಿಸಿಕೊಳ್ಳಬೇಕು – ಅವರು ಜನರನ್ನು ಅನುಭವಿಸುವಂತೆ ಮಾಡಿದ ರೀತಿ. ಅವರು ಹುಟ್ಟಿಸಿದ ಸಂತೋಷ. ಅವರು ಎತ್ತಿದ ಜೀವನಗಳು. ಇದು ಅವರ ಪರಂಪರೆಯಾಗಿರಲಿ – ಅವರನ್ನು ಎಂದಿಗೂ ಮರೆಯಲಾಗದು ಎಂದಿದ್ದಾರೆ.

ಕಾಂಗ್ರೆಸ್ ಶಾಸಕಿ ಮನೆ ರಸ್ತೆಗೆ ಇಲ್ಲ ಕಾಂಕ್ರೀಟ್ ಭಾಗ್ಯ: ಇದೆಂಥಾ ಅವ್ಯವಸ್ಥೆ!

ರಾಯಚೂರು:- ಗ್ಯಾರಂಟಿ ಹೆಸರೇಳಿಕೊಂಡು ಕಾಂಗ್ರೆಸ್ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಒಂದೆಡೆ ಅನುದಾನ ಸಿಗುತ್ತಿಲ್ಲ ಎಂದು ಸ್ವಪಕ್ಷದವರೇ ಸರ್ಕಾರದ ಕಿಡಿಕಾರುತ್ತಿದ್ದಾರೆ.

ಈ ಹೊತ್ತಲ್ಲೇ ರಾಯಚೂರಿನಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುಳಾ ಮನೆ ಮುಂದಿನ ಸಾರ್ವಜನಿಕ ಮಾರ್ಗಕ್ಕೆ ಕಾಂಕ್ರೀಟ್ ಹಾಕದೇ ಬಿಜೆಪಿ ಕೌನ್ಸಿಲರ್ ನಾಗರಾಜ್ ಠಕ್ಕರ್ ಕೊಟ್ಟಿದ್ದಾರೆ. ವಾರ್ಡ್​​ನ ಎಲ್ಲಾ ದಿಕ್ಕಿನಲ್ಲೂ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ.

ಕೆಪಿಸಿಸಿ ಸೆಕ್ರೆಟರಿ ಮನೆ ರಸ್ತೆಗೆ ಮಾತ್ರ ಕಾಂಕ್ರೀಟ್ ಹಾಕದೆ ಬಿಜೆಪಿ ಕೌನ್ಸಿಲರ್ ತಿರುಗೇಟು ಕೊಟ್ಟಿದ್ದಾರೆ. ಸದ್ಯ ಅನುದಾನ ಖಾಲಿ ಆಗಿದೆ, ನಿಮ್ಮ ಸಿಎಂ ಸಿದ್ದರಾಮಯ್ಯಗೆ ಹೇಳಿ ಅನುದಾನ ಕೊಡಿಸಿ. ಆ ಮೇಲೆ ನಿಮ್ಮ ಮನೆ ಮುಂದಿನ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ಮಾಡಿಸುತ್ತೇನೆ ಎಂದು ಕೌನ್ಸಿಲರ್ ನಾಗರಾಜ್ ಹೇಳಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದ ನಟ ದರ್ಶನ್‌

ಆಷಾಢ ಮಾಸದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಮೈಸೂರಿನ ಚಾಮುಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಆಷಾಢ ಮಾಸದಲ್ಲಿ ಪ್ರತಿವರ್ಷವೂ ದರ್ಶನ್‌ ಚಾಮುಂಡಿಯ ಆಶೀರ್ವಾದ ಪಡೆಯುತ್ತಾರೆ. ಆದರೆ ಕಳೆದ ಬಾರಿ ಜೈಲಿನಲ್ಲಿದ್ದ ಕಾರಣ ದೇವಿಯ ದರ್ಶನ ಸಾಧ್ಯವಾಗಿರಲಿಲ್ಲ. ಈ ಬಾರಿ ದಂಪತಿ ಸಮೇತ ಆಗಮಿಸಿ ಚಾಮುಂಡಿ ತಾಯಿ ದರ್ಶನ ಪಡೆದಿದ್ದಾರೆ.

ಇಂದು ಎರಡನೇ ಆಷಾಡ ಶುಕ್ರವಾರವಾದ ಹಿನ್ನೆಲೆಯಲ್ಲಿ ಅದಿದೇವತೆಯ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ದೇಗುಲದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕಾರ್ಯ ಶುರುವಾಗಿವೆ. ಮುಂಜಾನೆ 3:30ಕ್ಕೆ ವಿವಿಧ ಅಭಿಷೇಕಗಳು ನಡೆದಿವೆ. ಬೆಳಗ್ಗೆ 6ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ.

ಇನ್ನೂ ದರ್ಶನ್‌ ಕಾರು ಚಾಮುಂಡಿ ಬೆಟ್ಟಕ್ಕೆ ಬರ್ತಿದ್ದಂತೆ ಅಭಿಮಾನಿಗಳು ಕಾರಿನ ಸುತ್ತ ಸುತ್ತವರಿದ್ರು. ದರ್ಶನ್‌ ಕಾರಿನಿಂದ ಇಳಿಯುತ್ತಿದ್ದಂತೆ ಡಿಬಾಸ್, ಡಿಬಾಸ್​ ಎಂದು ಕೂಗಿದ್ದಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡಲು ಮುಂದಾದರು. ಈ ವೇಳೆ ದರ್ಶನ್‌ ಅಭಿಮಾನಿಗಳಿಗೆ ಕೈ ಮುಗಿದು ದೇವಸ್ಥಾನದ ಒಳಗೆ ತೆರಳಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು: ನಿಖಿಲ್ ಕುಮಾರಸ್ವಾಮಿ

ಬೀದರ್: ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು. ನಿರಂತರವಾಗಿ ಜನರೊಂದಿಗೆ ಬೆರತು ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು.ಬೀದರ್ ನಗರದ ಲಾವಣ್ಯ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ನಡೆದ, ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರು ಜನರೊಂದಿಗೆ ಬೆರೆತು, ಜನರೊಂದಿಗೆ ಇದ್ದು ಕೆಲಸ ಮಾಡಬೇಕು ಎಂದರು.

ಮುಂದಿನ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಕೂಡ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ ಅಗತ್ಯವಾಗಿರುತ್ತದೆ. ಜನರೊಂದಿಗೆ ಜನತಾದಳ ಎಂಬ ಗುರಿಯೊಂದಿಗೆ ಸಾಗುತ್ತಿರುವ ನಾವು ನಿರಂತರವಾಗಿ ಜನರೊಂದಿಗೆ ಇರುವುದು ಅಗತ್ಯವಾಗಿರುತ್ತದೆ.

ಸದಸ್ಯತ್ವ ನೋಂದಣಿ ಅಭಿಯಾನವನ್ನು ನಾವು ತುಮಕೂರು ಜಿಲ್ಲೆಯಿಂದ ಆರಂಭಿಸಿದ್ದೇವೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಈಗ ಐದನೇ ಜಿಲ್ಲೆಯಾಗಿ ಬೀದರ್ ನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡ್ತಿದ್ದೇವೆ. ಇನ್ನೂ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲೇ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ.

ನಾವು ಜನತಾದಳ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕಾಗಿದೆ. ನಿಮ್ಮ ಚುನಾವಣೆಗಳಲ್ಲಿ ನೀವು ಗೆಲುವು ಸಾಧಿಸುವುದು ಅಗತ್ಯವಾಗಿರುತ್ತದೆ. ಆಗಾಗಿ ತಾ.ಪಂ, ಜಿ.ಪಂ ಚುನಾವಣೆಗಳ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚೆಚ್ಚು ಸ್ಥಾನ ಪಡೆದುಕೊಳ್ಳಬೇಕು ಎಂದರೇ ನಾವೆಲ್ಲರೂ ಶ್ರಮವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿರವರು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಪಕ್ಷ ಸಂಘಟನೆಯ ಕೆಲಸವನ್ನು ನಿಖಿಲ್ ಕುಮಾರಸ್ವಾಮಿರವರು ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡ್ತಿದ್ದಾರೆ. ನಾವು ಅವರೊಂದಿಗೆ ಕೈಜೋಡಿಸೋಣ ಎಂದರು.

ನಾವು ರಾಜಕೀಯದಲ್ಲಿ ಜನರ ಹತ್ತಿರ ಇದ್ದು ಸೇವೆ ಮಾಡಿದಾಗ ಜನರೇ ನಮಗೆ ಅಧಿಕಾರ ಕೊಡ್ತಾರೆ. ನಾವು ಜನರೊಂದಿಗೆ ಇರೋಣ. ಗ್ಯಾರಂಟಿ ಮುಖ ತೋರಿಸಿ ಕಾಂಗ್ರೆಸ್ ಸರ್ಕಾರ ಏನ್ ಮಾಡ್ತಿದೆ ಎಂಬುದನ್ನು ಜನ ನೋಡ್ತಿದ್ದಾರೆ. ಅವರ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಸಾಗ್ತಿವೆ ಎಂಬುದನ್ನು ಕೂಡ ರಾಜ್ಯದ ಜನರು ನೋಡ್ತಿದ್ದಾರೆ.

ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದೋಖಾ ಮಾಡ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ಸರ್ಕಾರ ಬಂದು ಎರಡು ವರ್ಷವಾದ್ರು ಜಿ.ಪಂ, ತಾ.ಪಂ ಚುನಾವಣೆ ಮಾಡುವ ಧೈರ್ಯ ಅವರಿಗೆ ಇಲ್ಲದಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು‌‌. ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾರವರು ಸೇರಿದಂತೆ ಅನೇಕರು ಮಾತನಾಡಿ, ಜೆಡಿಎಸ್ ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಉಮಕಾಂತ್ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೂರಗೇರಿ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ಅಶೋಕ್ ಕೊಡ್ಗೆ, ರಾಜು ಕಡ್ಯಾಳ, ಸುದರ್ಶನ್ ಸುಂದರರಾಜ್, ಸಿದ್ರಾಮಪ್ಪ ವಂಕ್ಕೆ, ಐಲಿಂಜಾನ್ ಮಠಪತಿ, ಬಸವರಾಜ ಪಾಟೀಲ್ ಹಾರೂರಗೇರಿ, ಮಲ್ಲಿಕಾರ್ಜುನ ನೆಳ್ಗೆ, ರಾಜು ಕಡ್ಯಾಳ್, ಅಭಿ ಕಾಳೆ, ಜಾಫೇಡ್ ಕಡ್ಯಾಳ, ಪ್ರಶಾಂತ್ ವಿಶ್ವಕರ್ಮರವರು ಸೇರಿದಂತೆ ಅನೇಕರಿದ್ದರು.

error: Content is protected !!