Home Blog Page 12

ಕೇದಾರನಾಥ ದೇಗುಲದ ಬಾಗಿಲು ತೆರೆದು ಭಕ್ತರಿಗೆ ದರ್ಶನ: ‘ಹರ ಹರ ಮಹಾದೇವ’ ಘೋಷಣೆ

ಉತ್ತರಾಖಂಡ್: ಪವಿತ್ರ ಕೇದಾರನಾಥ ದೇವಸ್ಥಾನದ ದ್ವಾರವನ್ನು ಇಂದು ಶಾಸ್ತ್ರೋಕ್ತವಾಗಿ ಭಕ್ತರಿಗೆ ತೆರೆಯಲಾಯಿತು. ಈ ವೇಳೆ ಭಕ್ತರಿಂದ ‘ಹರ ಹರ ಮಹಾದೇವ’ ಹಾಗೂ ‘ಜೈ ಬಾಬಾ ಕೇದಾರ’ ಘೋಷಣೆಗಳು ಮೊಳಗಿದವು. ಬೆಳಗ್ಗೆ 8 ಗಂಟೆಗೆ ವೈದಿಕ ಮಂತ್ರೋಚ್ಚಾರಣೆಗಳ ನಡುವೆ ಧಾರ್ಮಿಕ ಆಚರಣೆಗಳೊಂದಿಗೆ ದೇಗುಲದ ಬಾಗಿಲು ತೆರೆಯಲಾಯಿತು.

ದೇಗುಲವನ್ನು 51 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದ್ದು, ಈ ಕ್ಷಣ ಭವ್ಯ, ರೋಮಾಂಚಕ ಹಾಗೂ ದೈವಿಕ ವಾತಾವರಣವನ್ನು ಸೃಷ್ಟಿಸಿತು. ಪವಿತ್ರ ಚಾರ್ಧಾಮ್ ಯಾತ್ರೆಯ ಭಾಗವಾಗಿರುವ ಈ ಕ್ಷೇತ್ರದಲ್ಲಿ ಶಿವನ ಆಶೀರ್ವಾದ ಪಡೆಯಲು ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಕಠಿಣ ಯಾತ್ರೆಯನ್ನು ಕೈಗೊಳ್ಳುತ್ತಾರೆ.

ಕೇದಾರನಾಥ ದೇಗುಲದ ಉದ್ಘಾಟನೆ ವಾರ್ಷಿಕ ಧಾರ್ಮಿಕ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪ್ರಮುಖ ಕ್ಷಣವಾಗಿದೆ. ಚಳಿಗಾಲದಲ್ಲಿ ಆರು ತಿಂಗಳ ಕಾಲ ಮುಚ್ಚಿರುವ ದೇಗುಲ ಇದೀಗ ಪುನಃ ತೆರೆಯಲ್ಪಟ್ಟಿದ್ದು, ಹಿಮಾಲಯ ಪ್ರದೇಶದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಿದೆ.

ಏಪ್ರಿಲ್ 19ರಂದು ಅಕ್ಷಯ ತೃತೀಯ ದಿನ ಗಂಗೋತ್ರಿ ದೇವಸ್ಥಾನ ಹಾಗೂ ಯಮುನೋತ್ರಿ ದೇವಸ್ಥಾನಗಳನ್ನು ತೆರೆಯುವುದರೊಂದಿಗೆ ಚಾರ್ ಧಾಮ್ ಯಾತ್ರೆ ಆರಂಭವಾಗಿತ್ತು. ಕೇದಾರನಾಥ ದೇಗುಲ ಇದೀಗ ತೆರೆದಿರುವ ಹಿನ್ನೆಲೆ, ಬದರಿನಾಥ ದೇವಸ್ಥಾನದ ಬಾಗಿಲುಗಳು ಏಪ್ರಿಲ್ 23ರಂದು ತೆರೆಯಲಿವೆ.

ಬೇಸಿಗೆಯ ತಾಪಕ್ಕೆ ಶ್ವಾನದಳಕ್ಕೂ ಕಷ್ಟ: ರಾಯಚೂರಿನಲ್ಲಿ ಪೊಲೀಸ್ ನಾಯಿಗಳಿಗೆ ಕೂಲರ್ ಸೌಲಭ್ಯ

ರಾಯಚೂರು: ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಬೇಸಿಗೆಯ ತಾಪಮಾನದಿಂದ ಮನುಷ್ಯರು ಮಾತ್ರವಲ್ಲ, ಪೊಲೀಸ್ ಇಲಾಖೆಯ ಶ್ವಾನದಳವೂ ತತ್ತರಿಸಿದೆ. ಈ ಹಿನ್ನೆಲೆ ಶ್ವಾನಗಳ ಆರೈಕೆಗೆ ಪೊಲೀಸ್ ಅಧಿಕಾರಿಗಳು ವಿಶೇಷ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನದಳದ ಐದು ನಾಯಿಗಳಿಗೆ ಪ್ರತ್ಯೇಕವಾಗಿ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಶ್ವಾನಗಳಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ.

ಲೂಸಿ, ರೀಟಾ, ಚೆರ್ರಿ, ಡಾರ್ಬಿ ಹಾಗೂ ಸಿರಿ ಎಂಬ ಹೆಸರಿನ ಐದು ಶ್ವಾನಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ, ಪ್ರತಿಯೊಂದಕ್ಕೂ ಕೂಲರ್ ಅಳವಡಿಸಲಾಗಿದೆ. ಎಕ್ಸ್‌ಪ್ಲೋಸಿವ್ ಡಿಟೆಕ್ಷನ್ ಮತ್ತು ಕ್ರೈಂ ಡಿಟೆಕ್ಷನ್ ತರಬೇತಿ ಪಡೆದಿರುವ ಈ ಶ್ವಾನಗಳು ಪ್ರಮುಖ ಪ್ರಕರಣಗಳ ಭೇದನೆಯಲ್ಲಿ ಸಹಕಾರಿಯಾಗಿವೆ.

ಬೇಸಿಗೆಯನ್ನು ಮನಗಂಡು ಶ್ವಾನಗಳ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ವಿದೇಶಿ ತಳಿಯ ಶ್ವಾನಗಳು ಬಿಸಿಲಿಗೆ ಹೆಚ್ಚು ತೊಂದರೆ ಅನುಭವಿಸುತ್ತಿವೆ.

ಶ್ವಾನದಳದಲ್ಲಿರುವ ಲ್ಯಾಬ್ರಡಾರ್, ರಿಟ್ರೀವರ್ ಮತ್ತು ಡೊಬರ್ಮನ್ ಪಿನ್ಷರ್ ತಳಿಯ ನಾಯಿಗಳಿಗೆ ಬಿಸಿಲಿನ ತಾಪದಿಂದ ರಕ್ಷಣೆ ನೀಡಲು ಈ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ಶ್ವಾನಗಳ ಆರೋಗ್ಯ ಕಾಪಾಡಲು ಹೆಚ್ಚಿನ ಒತ್ತು ನೀಡುತ್ತಿದೆ.

ಭಾರಿ ಇಳಿಕೆ ಕಂಡ ಚಿನ್ನದ ಬೆಲೆ: ಖರೀದಿಗೆ ಇದೇ ಸುವರ್ಣಾವಕಾಶ! ಹೀಗಿದೆ ನೋಡಿ ಬಂಗಾರದ ದರ

ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರುಪೇರಾಗುತ್ತಿದ್ದು, ಬುಧವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಅಮೆರಿಕ ಕದನ ವಿರಾಮ ವಿಸ್ತರಿಸಿರುವುದು ಮತ್ತು ಇರಾನ್ ಜಲದಿಗ್ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಸಂಧಾನ ಮಾತುಕತೆಗಳಿಂದ ಹಿಂದೆ ಸರಿದಿರುವ ಬೆಳವಣಿಗೆಗಳ ನಡುವೆ ತೈಲ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ ₹540 ಇಳಿಕೆಯಾಗಿದ್ದು, ₹1,54,750ಕ್ಕೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ ₹54 ಇಳಿಕೆಯಾಗಿದ್ದು, ₹15,475 ಆಗಿದೆ.

22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹50 ಇಳಿಕೆಯಾಗಿದ್ದು, ₹14,185 ಆಗಿದೆ. ಇದೇ ವೇಳೆ 10 ಗ್ರಾಂ ಬೆಲೆಯಲ್ಲಿ ₹500 ಇಳಿಕೆಯಾಗಿದ್ದು, ₹1,41,850ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಲೆ ₹265 ಇದ್ದು, ಪ್ರತಿ ಕಿಲೋಗ್ರಾಂ ಬೆಲೆ ₹2,65,000 ಆಗಿದೆ.

ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಪ್ರಕರಣ: ರಿಕ್ಕಿ ರೈ ವಿರುದ್ಧ ತ್ವರಿತ ಕ್ರಮ ಬೇಡ – ಹೈಕೋರ್ಟ್ ಸೂಚನೆ

ಬೆಂಗಳೂರು: ಐಷಾರಾಮಿ ಲ್ಯಾಂಬೊರ್ಗಿನಿ ಕಾರಿಗೆ ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ, ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ವಿರುದ್ಧ ಆತುರದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಾರಿಗೆ ಪ್ರಾಧಿಕಾರದಿಂದ ಫ್ಯಾನ್ಸಿ ನಂಬರ್ ಮಾನ್ಯವಾಗಿ ನೀಡಲಾಗಿದ್ದು, ಅದಕ್ಕಾಗಿ ರಿಕ್ಕಿ ರೈ ನಾಲ್ಕು ಲಕ್ಷ ರೂಪಾಯಿ ಪಾವತಿಸಿರುವುದಕ್ಕೆ ದಾಖಲೆಗಳಿವೆ ಎಂದು ತಿಳಿಸಿದರು. ಆದ್ದರಿಂದ ನಕಲಿ ನಂಬರ್ ಪ್ಲೇಟ್ ಬಳಕೆ ಆರೋಪ ಅನ್ವಯಿಸುವುದಿಲ್ಲ ಎಂದು ವಾದಿಸಿದರು.

ಇನ್ನೂ, ಲ್ಯಾಂಬೊರ್ಗಿನಿ ಕಾರು ರಸ್ತೆ ಮೇಲೆ ಸದ್ದು ಮಾಡುತ್ತಾ ಹೋಗುತ್ತಿರುವುದರಿಂದ ಕಿರಿಕಿರಿಗೆ ಒಳಗಾದ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಿಸಿದ್ದರಿಂದ ಪ್ರಕರಣ ದಾಖಲಾಗಿದೆ. ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ದಂಡ ಕಟ್ಟಲು ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ ಇದೆ. ಹೀಗಿರುವಾಗ ಎರಡನೇ ಎಫ್‌ಐಆರ್ ದಾಖಲಿಸುವ ಅಗತ್ಯವಿಲ್ಲ ಎಂದು ವಕೀಲರು ತಿಳಿಸಿದರು.

ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಕೀಲರು, ರಿಕ್ಕಿ ರೈ ಖರೀದಿಸಿರುವ ವಾಹನಕ್ಕೆ ಫ್ಯಾನ್ಸಿ ನಂಬರ್ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ ಎಂದು ವಾದಿಸಿದರು. ದೆಹಲಿಯಲ್ಲಿ ವಾಹನ ಖರೀದಿಸಿ, ಬೆಂಗಳೂರಿನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸದೇ ಇಂತಹ ನಂಬರ್ ಪ್ಲೇಟ್ ಬಳಕೆ ಮಾಡಿರುವುದು ವಂಚನೆ ಹಾಗೂ ದಾಖಲೆ ತಿರುಚಿದ ಪ್ರಕರಣವಾಗುತ್ತದೆ ಎಂದು ಹೇಳಿದರು.

ಇರುವ ಎರಡೂ ವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ತನಿಖೆಗೆ ರಿಕ್ಕಿ ರೈ ಸಹಕರಿಸಬೇಕು ಎಂದು ಸೂಚಿಸಿತು. ಜೊತೆಗೆ ತನಿಖೆ ನೆಪದಲ್ಲಿ ಪೊಲೀಸರು ತ್ವರಿತ ಅಥವಾ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.

ಕೊಡಗಿನಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ಬಂಧನ

0

ಕೊಡಗು: ಜಿಲ್ಲೆಯ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿರುವ ವೃಜೇಶ್ ಕುಮಾರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ವಿಶಾಲ್ ಮೇಲೂ ಆರೋಪಗಳು ಕೇಳಿಬಂದಿದ್ದು, ಅವರನ್ನು ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬೆಳಗಾವಿಯಲ್ಲಿ ದಾರುಣ ಘಟನೆ: ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಕ್ರೂರ ಪತಿ!

0

ಬೆಳಗಾವಿ: ಪತ್ನಿ ನೈಟಿ ಧರಿಸಿದ್ದ ವಿಚಾರಕ್ಕೆ ಕೋಪಗೊಂಡ ಪತಿಯೋರ್ವಳು ಆಕೆಗೆ ಬೆಂಕಿ ಹಚ್ಚಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ನಂದಗಡದಲ್ಲಿ ನಡೆದಿದೆ.

ಆರೋಪಿಯನ್ನು ಕೃಷ್ಣಾಜಿ ಪಾಟೀಲ್ ಎಂದು ಗುರುತಿಸಲಾಗಿದ್ದು, ಪತ್ನಿ ಮಂಜುಳಾ ಪಾಟೀಲ್ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಆಕೆಗೆ ಸುಮಾರು 80 ಶೇಕಡಾ ಸುಟ್ಟ ಗಾಯಗಳಾಗಿವೆ. ಆರಂಭದಲ್ಲಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು ಸಹ ಹೆಚ್ಚಿನ ಚಿಕಿತ್ಸೆಗಾಗಿ ನಂತರ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.

ಮಂಜುಳಾ ಮತ್ತು ಕೃಷ್ಣಾಜಿ ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಪತ್ನಿ ಸೀರೆ ಬದಲು ನೈಟಿ ಅಥವಾ ಗೌನ್ ಧರಿಸುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ಉಂಟಾಗುತ್ತಿತ್ತು.ವಾಗ್ವಾದ ಅತೀರೇಖಕ್ಕೆ ಹೋಗಿ ಪತಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಗಲಾಟೆ ಶಬ್ದ ಕೇಳಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ವಿಸ್ತರಣೆ: ಟ್ರಂಪ್ ಘೋಷಣೆ

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಮನವಿ ಹಿನ್ನೆಲೆಯಲ್ಲಿ ಕದನ ವಿರಾಮವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಘೋಷಿಸಿದ್ದ ಕದನ ವಿರಾಮದ ಗಡುವು ಮುಕ್ತಾಯವಾಗುತ್ತಿದ್ದ ಹಿನ್ನೆಲೆಯಲ್ಲಿ, ಅಮೆರಿಕ ಅದನ್ನು ಮುಂದುವರಿಸಲು ನಿರ್ಧರಿಸಿದೆ. ಆದರೆ ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮುಂದುವರಿಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಸುಮಾರು ಏಳು ವಾರಗಳ ಕಾಲ ನಡೆದ ಯುದ್ಧದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದು, ಜಾಗತಿಕ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಯುದ್ಧಕ್ಕೆ ತೆರೆ ಎಳೆಯಲು ಅಮೆರಿಕ ಸಂಧಾನ ಮಾತುಕತೆಗಳಿಗೆ ಮುಂದಾಗಿದೆ. ಸದ್ಯಕ್ಕೆ ಸೈನಿಕ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕದನ ವಿರಾಮ ವಿಸ್ತರಣೆ ಬಗ್ಗೆ ಮಾತನಾಡಿದ ಟ್ರಂಪ್, “ಪಾಕಿಸ್ತಾನದ ಮನವಿಯನ್ನು ಸ್ವೀಕರಿಸಿ, ಅದರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಇರಾನ್ ನಾಯಕರು ಒಪ್ಪಂದಕ್ಕೆ ಮುಂದಾಗುವವರೆಗೂ ದಾಳಿಗಳನ್ನು ನಿಲ್ಲಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಇದೇ ವೇಳೆ, ಇರಾನ್ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯ ದಿಗ್ಬಂಧನ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗೆ ಇರಾನ್ ನಾಯಕರು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಕದನ ವಿರಾಮಕ್ಕಾಗಿ ಟೆಹ್ರಾನ್ ಯಾವುದೇ ಮನವಿ ಮಾಡಿಲ್ಲವೆಂದು ತಿಳಿದುಬಂದಿದೆ. ಇರಾನ್ ಜೊತೆಗಿನ ಸಂಧಾನ ಪೂರ್ಣಗೊಳ್ಳುವವರೆಗೆ ಕದನ ವಿರಾಮ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ತೀವ್ರ ಉಷ್ಣತೆಗೆ ಆರೋಗ್ಯ ಅಪಾಯ: ಹೀಟ್ ಸ್ಟ್ರೋಕ್ ಕುರಿತ ಮಾಹಿತಿ ಇಲ್ಲಿದೆ!

0

ದೇಶದ ಹಲವೆಡೆ ಉಷ್ಣಾಂಶ ದಿನೇ ದಿನೇ ಏರುತ್ತಿರುವ ಹಿನ್ನೆಲೆ ಹೀಟ್ ಸ್ಟ್ರೋಕ್ (Heat Stroke) ಎಂಬ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯವೂ ಹೆಚ್ಚುತ್ತಿದೆ.

ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.

ಹೀಟ್ ಸ್ಟ್ರೋಕ್ ಎಂದರೆ ದೇಹದ ತಾಪಮಾನ ಅತಿಯಾಗಿ ಏರಿಕೆ ಆಗಿ, ಅದನ್ನು ನಿಯಂತ್ರಿಸಲು ದೇಹಕ್ಕೆ ಸಾಧ್ಯವಾಗದ ಸ್ಥಿತಿ. ಸಾಮಾನ್ಯವಾಗಿ ಹೆಚ್ಚು ಸಮಯ ತೀವ್ರ ಬಿಸಿಲಿನಲ್ಲಿ ಅಥವಾ ಉಷ್ಣ ವಾತಾವರಣದಲ್ಲಿ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.

ಇದರ ಪ್ರಮುಖ ಲಕ್ಷಣಗಳಲ್ಲಿ ದೇಹದ ತಾಪಮಾನ ಏರಿಕೆ, ಚರ್ಮ ಬಿಸಿ ಮತ್ತು ಒಣಗಿರುವುದು, ತಲೆ ಸುತ್ತು, ತಲೆನೋವು, ದುರ್ಬಲತೆ ಮತ್ತು ಗಾಬರಿ ಸೇರಿವೆ. ಕೆಲವರಿಗೆ ವಾಂತಿ, ಅಸ್ವಸ್ಥತೆ ಹಾಗೂ ಹೃದಯ ಬಡಿತ ವೇಗವಾಗುವುದು ಕಾಣಿಸಿಕೊಳ್ಳಬಹುದು. ಗಂಭೀರ ಸಂದರ್ಭಗಳಲ್ಲಿ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುವ ಅಪಾಯವೂ ಇರುತ್ತದೆ.

ಮಕ್ಕಳು, ವೃದ್ಧರು ಹಾಗೂ ಹೊರಗಡೆ ಕೆಲಸ ಮಾಡುವವರು ಹೀಟ್ ಸ್ಟ್ರೋಕ್‌ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಹಸಿರು ಪ್ರದೇಶಗಳ ಕೊರತೆಯೂ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಹೀಟ್ ಸ್ಟ್ರೋಕ್ ತಪ್ಪಿಸಲು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅಗತ್ಯ. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಹೋಗುವಾಗ ಹಗುರ ಹಾಗೂ ಸಡಿಲ ಬಟ್ಟೆ ಧರಿಸಿ ತಲೆಯನ್ನು ಮುಚ್ಚಿಕೊಳ್ಳುವುದು ಉತ್ತಮ. ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಎಳನೀರು, ನಿಂಬೆಹಣ್ಣಿನ ರಸ ಮತ್ತು ಮಜ್ಜಿಗೆ ದೇಹವನ್ನು ತಂಪಾಗಿಡಲು ಸಹಕಾರಿ.

ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವವರು ಮಧ್ಯಂತರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಬಿಸಿಲಿನ ಸಮಯದಲ್ಲಿ ಹಗುರ ಆಹಾರ ಸೇವಿಸುವುದು ಉತ್ತಮ, ತೈಲಯುಕ್ತ ಹಾಗೂ ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಬೇಕು. ಮನೆಗೆ ಬಂದ ತಕ್ಷಣ ತಣ್ಣೀರು ಕುಡಿಯದೇ ದೇಹ ತಂಪಾಗಲು ಸ್ವಲ್ಪ ಸಮಯ ನೀಡುವುದು ಸಹ ಉತ್ತಮ ಅಭ್ಯಾಸವಾಗಿದೆ.

ಲಕ್ಷಣಗಳು ಗಂಭೀರವಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ. ಸಮಯಕ್ಕೆ ಸರಿಯಾದ ಎಚ್ಚರಿಕೆ ಮತ್ತು ಕಾಳಜಿಯಿಂದ ಹೀಟ್ ಸ್ಟ್ರೋಕ್‌ನಂತಹ ಅಪಾಯಕಾರಿ ಸ್ಥಿತಿಯನ್ನು ತಪ್ಪಿಸಿಕೊಳ್ಳಬಹುದು.

ಕಬಡ್ಡಿ ಬೆಟ್ಟಿಂಗ್ ಪ್ರಕರಣ: ಗೃಹ ಸಚಿವ ಪರಮೇಶ್ವರ್ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

ಬೆಂಗಳೂರು: ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಚಿಕ್ಕೋಡಿ ಮತ್ತು ವಿಜಯಪುರ ತಂಡಗಳ ನಡುವೆ ನಡೆದ ಕಬಡ್ಡಿ ಪಂದ್ಯಾವಳಿ ವೇಳೆ, ಚಿಕ್ಕೋಡಿ ತಂಡ ಗೆಲ್ಲುತ್ತದೆ ಎಂದು ನಂಬಿ ಸಚಿವ ಪರಮೇಶ್ವರ್ ಅವರು 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದರೆಂದು ಆರೋಪಿಸಲಾಗಿದೆ. ಆದರೆ ಪಂದ್ಯದಲ್ಲಿ ವಿಜಯಪುರ ತಂಡ ಗೆಲುವು ಸಾಧಿಸಿದ ನಂತರ, ಅವರು 500 ರೂಪಾಯಿ ಹಣವನ್ನು ಸಂಬಂಧಿತ ಅಧಿಕಾರಿಗೆ ನೀಡಿದ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಈ ಸಂಬಂಧ ನಾಗಭೂಷಣ್ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿ, ಪ್ರಕರಣ ದಾಖಲಿಸಲು ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಗೃಹ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.

ಅದರಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಈ ಪ್ರಕರಣ ಇದೀಗ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಸಿಲಿನ ತಾಪಕ್ಕೆ ಮತ್ತೊಂದು ಬಲಿ: ಬಸವ ಜಯಂತಿ ವೇಳೆ ಕುಸಿದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾವು!

ಬೆಳಗಾವಿ: ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ನಡುವೆ ಹಿಟ್‌ಸ್ಟ್ರೋಕ್‌ಗೆ ಮತ್ತೊಂದು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೆಂಕಟೇಶ್ ಬಳ್ಳಾರಿ (35) ಬಿಸಿಲಿನ ತಾಪಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವೆಂಕಟೇಶ್ ಬಳ್ಳಾರಿ ಅವರು ರಾಯಬಾಗ ಪಟ್ಟಣದ ನಿವಾಸಿಯಾಗಿದ್ದು, ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ (ಏ.21) ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಫೋಟೋ ಪೂಜೆ ಬಳಿಕ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ಅವರಿಗೆ ತೀವ್ರ ತಲೆ ಸುತ್ತು ಉಂಟಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಪ್ತರ ಪ್ರಕಾರ, ಬಿಸಿಲಿನ ತೀವ್ರತೆಯಿಂದಾಗಿ ಅವರಿಗೆ ಹೃದಯಾಘಾತ ಸಂಭವಿಸಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಈ ಘಟನೆ ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ಹಿಟ್‌ಸ್ಟ್ರೋಕ್‌ ಅಪಾಯದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ಮೂಡಿಸಿದೆ. ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಬಿಸಿಲಿನ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

error: Content is protected !!