ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ನಟ ದರ್ಶನ್ 59ನೇ ಸಿಸಿಹೆಚ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ವಿಚಾರಣೆಯಲ್ಲಿ ತಮ್ಮ ವಾದವನ್ನೂ ಆಲಿಸಬೇಕೆಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರೂ, ಆರೋಪಿಗಳ ವಾದ ಕೇಳುವ ಅಗತ್ಯವಿಲ್ಲ ಎಂದು ಸಿಸಿಹೆಚ್ ನ್ಯಾಯಾಲಯ ಸ್ಪಷ್ಟಪಡಿಸಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದೇ ಆದೇಶವನ್ನು ಪ್ರಶ್ನಿಸಿ ಇದೀಗ ಹೈಕೋರ್ಟ್ ಮೆಟ್ಟಿಲೇರಲಾಗಿದೆ.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದು, ಮಾಫಿ ಸಾಕ್ಷಿ ಪ್ರಕ್ರಿಯೆಯಲ್ಲಿ ಆರೋಪಿಗಳಿಗೆ ವಾದ ಮಂಡಿಸುವ ಅವಕಾಶ ನಿರಾಕರಿಸಿರುವುದು ಕಾನೂನುಬದ್ಧವಲ್ಲ ಎಂದು ವಾದಿಸಿದ್ದಾರೆ. ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಅರ್ಜಿಯ ವಿಚಾರಣೆಯನ್ನು ಇಂದು (ಆಗಸ್ಟ್ 13) ಮಧ್ಯಾಹ್ನ 2:30ಕ್ಕೆ ನಿಗದಿಪಡಿಸಿದೆ. ಜೊತೆಗೆ ರಾಜ್ಯದ ವಿಶೇಷ ಅಭಿಯೋಜಕರಿಗೆ ಈ ಕುರಿತು ಮಾಹಿತಿ ನೀಡುವಂತೆ ದರ್ಶನ್ ಪರ ವಕೀಲರಿಗೆ ಸೂಚನೆ ನೀಡಿದೆ.
ಪ್ರಕರಣದ 14ನೇ ಆರೋಪಿ ಪ್ರದೋಷ್, ಕೊಲೆ ನಡೆದ ದಿನದ ಸಂಪೂರ್ಣ ಘಟನೆ ಬಗ್ಗೆ ನ್ಯಾಯಾಲಯದ ಮುಂದೆ ಸತ್ಯಾಂಶ ಬಿಚ್ಚಿಡಲು ಸಿದ್ಧನಿದ್ದೇನೆ ಎಂದು ಹೇಳಿ, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇರುವುದರಿಂದ, ಅದಕ್ಕೂ ಮೊದಲು ಉಳಿದ ಆರೋಪಿಗಳ ಅಭಿಪ್ರಾಯ ಕೇಳಬೇಕೇ ಎಂಬ ಪ್ರಶ್ನೆ ಸಿಸಿಹೆಚ್ ನ್ಯಾಯಾಲಯದ ಮುಂದೆ ಉದ್ಭವಿಸಿತ್ತು.
ಆದರೆ 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ, ಮಾಫಿ ಸಾಕ್ಷಿ ವಿಚಾರದಲ್ಲಿ ಇತರ ಆರೋಪಿಗಳ ಆಕ್ಷೇಪಣೆ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಆದೇಶ ನೀಡಿದ್ದರು. ಈ ಆದೇಶ ದರ್ಶನ್‌ಗೆ ಹಿನ್ನಡೆಯಾದ ಬೆನ್ನಲ್ಲೇ, ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಿದ್ದಾರೆ.

