Home Blog Page 145

ಮನೆ ಮುಂದೆ ಹಾರ್ನ್ ಹಾಕಿದ್ದಕ್ಕೆ ಗಲಾಟೆ; ಯುವಕನಿಗೆ ಚಾಕು ಇರಿತ, ಗಂಭೀರ

0

ಗದಗ: ಮನೆ ಮುಂದೆ ಹಾರ್ನ್ ಹಾಕಿದ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದು, ತಂದೆ–ಮಗ ಸೇರಿ ಮೂವರ ಮೇಲೆ ದಾಳಿ ಮಾಡಿರುವ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮಗನಿಗೆ ಚಾಕು ಇರಿತವಾದರೆ, ತಂದೆಗೆ ಕಬ್ಬಿಣದ ಹುಕ್ ‌ನಿಂದ ಹಲ್ಲೆ ಮಾಡಲಾಗಿದೆ. ಜಗಳ ಬಿಡಿಸಲು ಬಂದ ಮಲ್ಲಪ್ಪನಿಗೆ ಬಡಿಗೆಯಿಂದ ಹೊಡೆದಿದ್ಧರಿಂದ ಗಂಭೀರವಾಗಿ ಗಾಯಗೊಂಡ ಮೂವರು ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಂಬಳಿ ಕುಟುಂಬ ಮತ್ತು ಚಕ್ರಣ್ಣವರ ಕುಟುಂಬದ ನಡುವೆ ಈ ಗಲಾಟೆ ನಡೆದಿದೆ.

ಚಕ್ರಣ್ಣವರ ಕುಟುಂಬದ ಈರಪ್ಪ, ಚಿನ್ನಪ್ಪ, ದೊಡ್ಡ ಯಲ್ಲಪ್ಪ ಮತ್ತು ರಮೇಶ್ ಅವರು ಚಾಕು ಹಾಗೂ ಕಬ್ಬಿಣದ ಹುಕ್ ಬಳಸಿ ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.

ಪ್ರತಿದಾಳಿಯಲ್ಲಿ ಇನ್ನೊಂದು ಗುಂಪಿನ ಈರವ್ವ ಹಾಗೂ ದೊಡ್ಡ ಯಲ್ಲಪ್ಪನಿಗೂ ಗಾಯಗಳಾಗಿವೆ. ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದು, ಈ ಹಿಂದೆ ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ನಡೆಸಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.15/2026, ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಮರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿ ಸೇರಿ ಹಲವೆಡೆ ಇಡಿ ದಾಳಿ

0

ಬೆಂಗಳೂರು: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪವಿತ್ರ ಚಿನ್ನ ಕಳವು ಪ್ರಕರಣ ಇದೀಗ ರಾಷ್ಟ್ರಮಟ್ಟದ ತನಿಖೆಗೆ ತಿರುಗಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ 4.5 ಕೆಜಿ ಚಿನ್ನ ಕಳವು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನ, ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರ ಮನೆ, ಟ್ರಸ್ಟಿಗಳ ನಿವಾಸಗಳು – ಎಲ್ಲೆಡೆ ಇಡಿ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಪ್ರತಿಷ್ಠಿತ ರೊದ್ದಂ ಜ್ಯುವೆಲ್ಲರಿ ಅಂಗಡಿ ಹಾಗೂ ಅದರ ಮಾಲೀಕ ಗೋವರ್ಧನ್ ನಿವಾಸದ ಮೇಲೂ ರೇಡ್ ನಡೆದಿದೆ.

ಒಟ್ಟು 9 ಮಂದಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಹಣಕಾಸಿನ ಅಕ್ರಮ ವರ್ಗಾವಣೆ, ಕಪ್ಪು ಹಣ ಮತ್ತು ಲಿಂಕ್‌ಗಳ ಮೇಲೆ ಕಣ್ಣಿಟ್ಟಿದೆ. ಇದೇ ಕಾರಣಕ್ಕೆ ಇಡಿ ಇದೀಗ ಮನಿ ಲಾಂಡರಿಂಗ್ ಕಾಯ್ದೆ (PMLA) ಅಡಿಯಲ್ಲಿ ಅಧಿಕೃತ ತನಿಖೆ ಆರಂಭಿಸಿದೆ.

ತನಿಖೆಯಲ್ಲಿ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಪ್ರಮುಖ ಪಾತ್ರ ವಹಿಸಿರುವುದು ಬಹಿರಂಗವಾಗಿದೆ. ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದೇವಸ್ಥಾನದಿಂದ ಕಳವು ಮಾಡಿದ ಚಿನ್ನವನ್ನು ಗೋವರ್ಧನ್‌ಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪವಿದ್ದು, ಅಕ್ರಮವಾಗಿ 470 ಗ್ರಾಂ ಚಿನ್ನ ಖರೀದಿಸಿದ್ದ ಪ್ರಕರಣದಲ್ಲಿ ಗೋವರ್ಧನ್ ಅವರನ್ನು ಕೇರಳ ಎಸ್‌ಐಟಿ ಈಗಾಗಲೇ ಬಂಧಿಸಿದೆ.

ಈ ಪ್ರಕರಣ ಕೇವಲ ಚಿನ್ನ ಕಳ್ಳತನಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಪ್ರಭಾವಿಗಳ ಕೈವಾಡವಿದೆ ಎಂಬ ಗಂಭೀರ ಆರೋಪಗಳು ಆರಂಭದಿಂದಲೇ ಕೇಳಿಬರುತ್ತಿದ್ದು, ತನಿಖೆ ಗಂಭೀರ ತಿರುವು ಪಡೆದುಕೊಂಡಿದೆ.

2019ರಲ್ಲಿ ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆಯ ಮಾಜಿ ಮುಖ್ಯ ಅರ್ಚಕ (ತಂತ್ರಿ) ಕಂದರಾರು ರಾಜೀವ್, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಇದುವರೆಗೆ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಡಿಜಿಪಿ ರಾಸಲೀಲೆ ವಿಡಿಯೋ: ರಾಮಚಂದ್ರರಾವ್ ಅಮಾನತು

0

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಿಜಿಪಿ ರಾಮಚಂದ್ರರಾವ್ ಪ್ರಕರಣದಲ್ಲಿ ಕೊನೆಗೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಕಚೇರಿಯೊಳಗೇ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ನಡೆಸುತ್ತಿರುವುದಾಗಿ ಆರೋಪಿಸಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಪ್ರಕರಣ ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೇವಲ ವಿಡಿಯೋ ಮಾತ್ರವಲ್ಲದೆ, ಸಂಬಂಧಿತ ಆಡಿಯೋ ಕ್ಲಿಪ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎಸ್. ಸಲೀಂ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಇನ್ನು, ಡಿಜಿಪಿ ರಾಮಚಂದ್ರರಾವ್ ಅವರು ಮಾಧ್ಯಮಗಳ ಮುಂದೆ, “ಇವೆಲ್ಲವೂ ಎಐ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳು. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು.

ಆದರೆ, ಸಾರ್ವಜನಿಕ ಒತ್ತಡ, ರಾಜಕೀಯ ಪ್ರತಿಕ್ರಿಯೆಗಳು ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸರ್ಕಾರ, ನಿವೃತ್ತಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಅವರನ್ನು ಅಮಾನತುಗೊಳಿಸಿ ಸ್ಪಷ್ಟ ಸಂದೇಶ ನೀಡಿದೆ.

ಈ ಬೆಳವಣಿಗೆ ಪೊಲೀಸ್ ಇಲಾಖೆಯ ಶಿಸ್ತು, ಗೌರವ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ಮಹತ್ವದ ಪ್ರಕರಣವಾಗಿ ಪರಿಗಣಿಸಲಾಗುತ್ತಿದೆ.

ಹುಟ್ಟೂರಿಗೆ ಮರಳಿದ BBK12 ವಿನ್ನರ್ ಗಿಲ್ಲಿ ನಟ: ಜನಸಾಗರ, ರಸ್ತೆ ಜಾಮ್, ಕಪ್ ಹಿಡಿದುಕೊಂಡೇ ಭಾವುಕ ಮಾತು

ಬಿಗ್ ಬಾಸ್ ಕಪ್ ಕೈಯಲ್ಲಿ ಹಿಡಿದು ಹುಟ್ಟೂರಿನ ರಸ್ತೆಯಲ್ಲಿ ಗಿಲ್ಲಿ ನಟ ಸಾಗಿದ ದೃಶ್ಯ, ಅಭಿಮಾನಿಗಳಿಗೆ ಕಣ್ಣೀರು ತರಿಸುವಂತಹ ಕ್ಷಣವಾಗಿ ಮೂಡಿಬಂದಿದೆ.

ಒಂದು ಕಾಲದಲ್ಲಿ ಸರ್ಕಾರಿ ಬಸ್ ಪಾಸ್ ಹಿಡಿದು ಓಡಾಡುತ್ತಿದ್ದ ಹುಡುಗ, ಇಂದು ಅದೇ ರಸ್ತೆಯಲ್ಲಿ ಟ್ರೋಫಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾನೆ. ಈ ದೃಶ್ಯವೇ ಗಿಲ್ಲಿ ಜೀವನದ ದೊಡ್ಡ ಸಿಂಬಲ್ ಆಗಿದೆ.

ಜನರ ಮಧ್ಯೆ ಮಾತನಾಡಿದ ಗಿಲ್ಲಿ ನಟ, “ನಾನು ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದೆ. ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇವತ್ತು ಇದೇ ಊರಲ್ಲಿ ಕಪ್ ಹಿಡಿದು ಜನರ ಮಧ್ಯೆ ನಿಂತಿದ್ದೀನಿ ಅಂದ್ರೆ, ಅದು ಜನರ ಪ್ರೀತಿಯ ಫಲ” ಎಂದರು.

ಪ್ರೀತಿ ಮಾತ್ರವಲ್ಲ, ಭಯವೂ ಇದೆ

ಗಿಲ್ಲಿ ನಟನ ಮಾತಿನಲ್ಲಿ ಪ್ರಾಮಾಣಿಕತೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. “ಜನರ ಪ್ರೀತಿ ಹೆಚ್ಚಾದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಖುಷಿಗಿಂತ ಭಯ ಜಾಸ್ತಿ ಆಗಿದೆ. ಈ ಪ್ರೀತಿಗೆ ನ್ಯಾಯ ಕೊಡಬೇಕೆಂಬ ಒತ್ತಡ ಯಾವಾಗಲೂ ಇರುತ್ತದೆ” ಎಂದು ಹೇಳಿದ್ದಾರೆ.

ಅಂಬರೀಷ್ ಹೆಸರು ಕೇಳಿದಾಗ ತಲೆಬಾಗಿದ ಗಿಲ್ಲಿ

ದೊಡ್ಡಅರಸಿನ ಕೆರೆ ಗೇಟ್ ಬಳಿ ಅಭಿಮಾನಿಗಳು ಗಿಲ್ಲಿಯನ್ನು ಅಂಬರೀಷ್ ಅವರ ಜೊತೆ ಹೋಲಿಕೆ ಮಾಡಿದಾಗ, ಗಿಲ್ಲಿ ನಟ ತಕ್ಷಣವೇ ವಿನಯದಿಂದ ಪ್ರತಿಕ್ರಿಯಿಸಿದರು.
“ಅಂಬರೀಷಣ್ಣನ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರ ಮಟ್ಟಕ್ಕೆ ನಮ್ಮನ್ನು ಹೋಲಿಸಬೇಡಿ. ಅವರ ಊರಿನ ಪಕ್ಕ ನಮ್ಮ ಊರು ಇರೋದೇ ಭಾಗ್ಯ” ಎಂದು ಹೇಳಿದರು.

ಜಗ್ಗೇಶ್ ಮಾತು ನಿಜವಾದ ಕ್ಷಣ

ನಟ ಜಗ್ಗೇಶ್ ನೀಡಿದ್ದ ಭವಿಷ್ಯ ಇದೀಗ ನಿಜವಾಗಿದೆ. ಇಂದು ಗಿಲ್ಲಿ ನಟ ಪೊಲೀಸ್ ಭದ್ರತೆಯಲ್ಲಿ ಸಂಚರಿಸುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, “ಜಗ್ಗೇಶ್ ಅವರ ಆಶೀರ್ವಾದದಿಂದಲೇ ಇದು ಸಾಧ್ಯವಾಗಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಪವಿತ್ರಾ ಗೌಡಗೆ ಮನೆ ಊಟ ಬೇಡಿಕೆ – ಕೋರ್ಟ್ ಆದೇಶಕ್ಕೆ ರಾಜ್ಯ ಸರ್ಕಾರವೇ ತಡೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪವಿತ್ರಾ ಗೌಡ ಇದೀಗ ಮತ್ತೊಂದು ಕಾರಣದಿಂದ ಸುದ್ದಿಯಾಗಿದ್ದಾರೆ. ಜೈಲಿನಲ್ಲಿ ಮನೆ ಊಟ ಪಡೆಯಲು ಸಲ್ಲಿಸಿದ ಮನವಿ ಇದೀಗ ಕಾನೂನು ಹಾಗೂ ಆಡಳಿತಾತ್ಮಕ ಚರ್ಚೆಗೆ ಕಾರಣವಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಪವಿತ್ರಾ ಗೌಡ, ಜೈಲಿನ ಆಹಾರದಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ನ್ಯಾಯಾಲಯದ ಮುಂದೆ ವಾದಿಸಿದ್ದರು. “ಜೈಲೂಟದಿಂದ ಚರ್ಮರೋಗ, ಗುಳ್ಳೆಗಳು ಹಾಗೂ ಫುಡ್ ಪಾಯ್ಸನಿಂಗ್ ಸಮಸ್ಯೆ ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ 57ನೇ ಸಿಸಿಹೆಚ್ ಕೋರ್ಟ್ ಮೊದಲಿಗೆ ಮನೆ ಊಟಕ್ಕೆ ಅನುಮತಿ ನೀಡಿತ್ತು. ಬಳಿಕ ಜೈಲಾಧಿಕಾರಿಗಳ ಆಕ್ಷೇಪದ ಹಿನ್ನೆಲೆಯಲ್ಲಿ, ಕೋರ್ಟ್ ಆದೇಶವನ್ನು ತಿದ್ದುಪಡಿ ಮಾಡಿ ವಾರಕ್ಕೆ ಒಮ್ಮೆ ಮಾತ್ರ ಅವಕಾಶ ನೀಡಿತ್ತು. ಆದರೆ ಇದೀಗ ಈ ಆದೇಶವನ್ನೇ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.

ಸರ್ಕಾರದ ಆತಂಕ ಏನು?

ಸರ್ಕಾರದ ವಾದದ ಪ್ರಕಾರ, ಕೊಲೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಆರೋಪಿಗಳಿಗೆ ಮನೆ ಊಟದಂತಹ ವಿಶೇಷ ಸೌಲಭ್ಯ ನೀಡಲು ಯಾವುದೇ ಜೈಲು ನಿಯಮಗಳಿಲ್ಲ.
ಒಬ್ಬರಿಗೆ ಈ ಅವಕಾಶ ನೀಡಿದರೆ, ಇತರೆ ಕೈದಿಗಳೂ ಅದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ಜೈಲು ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ ಎಂಬುದು ಸರ್ಕಾರದ ವಾದ.

ಇದಕ್ಕೆ ಜೊತೆಗೆ, ಜೈಲಿನ ಆಹಾರಕ್ಕೆ FSSAI 4 ಸ್ಟಾರ್ ರೇಟಿಂಗ್ ನೀಡಿರುವುದು ಕೂಡ ಸರ್ಕಾರದ ವಾದಕ್ಕೆ ಬಲ ನೀಡುತ್ತಿದೆ.

ಈ ಪ್ರಕರಣ ಇದೀಗ ಕೇವಲ ಪವಿತ್ರಾ ಗೌಡ ಅವರ ವೈಯಕ್ತಿಕ ಬೇಡಿಕೆಗೆ ಸೀಮಿತವಾಗದೆ, ಜೈಲು ನಿಯಮಗಳು, ಕೈದಿಗಳ ಹಕ್ಕು ಮತ್ತು ಸಮಾನತೆ ಕುರಿತ ದೊಡ್ಡ ಚರ್ಚೆಯಾಗಿ ಪರಿಣಮಿಸಿದೆ.

ನೂತನ ಮನೆಗಳ ವಿತರಣೆ ಕಾರ್ಯಕ್ರಮ ಜ.24ಕ್ಕೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಎಂಬ ಕನಸನ್ನು ನನಸಾಗಿಸುವ ಮಹತ್ವದ ಯೋಜನೆಯನ್ನು ಜನವರಿ 24ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮನೆಗಳ ಲೋಕಾರ್ಪಣೆ ಕಾರ್ಯಕ್ರಮವು ಸರ್ಕಾರದ ಜನಪರ ಕಾರ್ಯಗಳ ಪ್ರತೀಕವಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಹೇಳಿದರು.

ಅವರು ಸೋಮವಾರ ಜಿ.ಪಂ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜ. 24ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಮನೆಗಳ ಲೋಕಾರ್ಪಣೆ ಕಾರ್ಯಕ್ರಮದ ಸಿದ್ಧತೆಯ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,169 ಮನೆಗಳನ್ನು ಮಂಜೂರು ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಮನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ 3 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಟ್ಟು 1,80,253 ಮನೆಗಳು ಮಂಜೂರಾಗಿವೆ. 86,651 ಮನೆಗಳ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಅಬಕಾರಿ ಡಿಸಿ ಲಂಚ ಪ್ರಕರಣ: ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು!

0

ಬೆಂಗಳೂರು: ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಂಕಷ್ಟ ಎದುರಾಗಿದೆ.

ಲೈಸೆನ್ಸ್ ನೀಡುವ ನೆಪದಲ್ಲಿ ಕೇಳಲಾದ ಲಂಚದ ಬಹುಪಾಲು ಹಣವನ್ನು ಸಚಿವರಿಗೆ ನೀಡಬೇಕೆಂದು ಅಬಕಾರಿ ಡಿಸಿ ಹೇಳಿರುವ ಆಡಿಯೋ ಆಧಾರದ ಮೇಲೆ, ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಇದರಿಂದ ಅಬಕಾರಿ ಲೈಸೆನ್ಸ್‌ಗೆ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಪ್ರಕರಣ ಇದೀಗ ಸಚಿವರ ಮಟ್ಟಕ್ಕೂ ತಲುಪಿದೆ.

ಬ್ಯಾಟರಾಯನಪುರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವ ಕೆಲವೇ ನಿಮಿಷಗಳ ಮುನ್ನ ದೂರುದಾರ ಲಕ್ಷ್ಮೀನಾರಾಯಣ ಮತ್ತು ಅಬಕಾರಿ ಡಿಸಿ ಜಗದೀಶ್ ನಾಯ್ಕ್ ನಡುವೆ ಲೈಸೆನ್ಸ್ ಡೀಲಿಂಗ್ ಕುರಿತು ಮಾತುಕತೆ ನಡೆದಿದೆ. ಈ ವೇಳೆ, ಲಂಚದ ಹಣವನ್ನು ಕೆಲವು ಅಧಿಕಾರಿಗಳ ಜೊತೆಗೆ ಸಚಿವರಿಗೂ ಹಂಚಬೇಕು ಎಂದು ಡಿಸಿ ಹೇಳಿದ್ದಾಗಿ ಆರೋಪಿಸಲಾಗಿದೆ. ಈ ಸಂಭಾಷಣೆಯನ್ನು ದೂರುದಾರರು ತಮ್ಮ ಮೊಬೈಲ್‌ನಲ್ಲಿ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದು, ಅದನ್ನೇ ಆಧಾರವಾಗಿ ಇದೀಗ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಇದರ ನಡುವೆ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಅವರ ಪುತ್ರರು ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್–7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಷಯದಲ್ಲಿ ಮುಖ್ಯಮಂತ್ರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಅಬಕಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇನ್ನೊಂದೆಡೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, “ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು. ನಾನು ಕಾನೂನು ಹೋರಾಟ ನಡೆಸುತ್ತೇನೆ. ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಅಧಿಕಾರಿಗಳಲ್ಲಿ ಸೌಜನ್ಯಪೂರ್ಣ ವರ್ತನೆ ಕಾಣಿಸಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಆತ್ಮಾವಲೋಕನ ಅತ್ಯಗತ್ಯವಾಗಿದೆ. ಕಚೇರಿಗೆ ಆಗಮಿಸುವ ನಾಗರಿಕರ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ಅಧಿಕಾರಿಗಳ ನಡೆ ಮತ್ತು ವರ್ತನೆ ಇರಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಗದಗ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಗದಗ ತಾಲೂಕು ಪ್ರಜಾಸೌಧ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ತಾಲೂಕು ಉತ್ತಮ ಶಿಸ್ತು ಮತ್ತು ಆಡಳಿತ ಕ್ರಮಗಳಿಂದ ಹೆಸರು ಪಡೆದಿದೆ. ನಿರ್ಮಾಣವಾಗುತ್ತಿರುವ ಹೊಸ ಪ್ರಜಾಸೌಧ ಕಟ್ಟಡವು ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಗೌರವ ತರುವ ಕಟ್ಟಡವಾಗಲಿದೆ. ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೆ ನೆಮ್ಮದಿಯ ಹಾಗೂ ಸುಗಮ ಸೇವೆ ಒದಗಿಸುವ ಕೇಂದ್ರವಾಗಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ಅನೇಕ ನಾಗರಿಕರು ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳೊಂದಿಗೆ ದಾಖಲೆಗಳನ್ನೂ ತೆಗೆದುಕೊಂಡು ನ್ಯಾಯಕ್ಕಾಗಿ ಆಗಮಿಸಿದ್ದರು. ಸರ್ಕಾರದ ಕೆಲಸಗಳು ವಿಳಂಬವಾಗುತ್ತಿದ್ದರೆ ಅಥವಾ ಇತ್ಯರ್ಥವಾಗದೆ ಉಳಿಯುತ್ತಿದ್ದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿಯೇ ಲೋಪದೋಷಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅವುಗಳನ್ನು ಗುರುತಿಸಿ ಸರಿಪಡಿಸಲು ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಆಡಳಿತ ಸಾಧ್ಯವಾಗಬೇಕು ಎಂಬುದು ಸರ್ಕಾರದ ಇಚ್ಛಾಶಕ್ತಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ತಹಸೀಲ್ದಾರರ ಕಚೇರಿಗಳಲ್ಲಿನ ಬಾಕಿ ಫೈಲ್‌ಗಳ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಚೇರಿ ಸ್ಥಳಾಂತರಗೊಳ್ಳುವ ಮುನ್ನ ಎಲ್ಲಾ ಬಾಕಿ ಕಡತಗಳನ್ನು ಇತ್ಯರ್ಥಪಡಿಸಿ, ಹೊಸ ಕಚೇರಿಗೆ ಪ್ರವೇಶಿಸಬೇಕು. ಹೊಸ ಪ್ರಜಾಸೌಧದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ ಮತ್ತು ಜನಪರ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

ಕಂದಾಯ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಅಧಿಕಾರಿಗಳ ಬಗ್ಗೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಬಾರದು. ಏಜೆಂಟರ ಹಾವಳಿ ಸಂಪೂರ್ಣವಾಗಿ ನಿಲ್ಲಿಸಬೇಕು. ತಾತ್ಕಾಲಿಕ ಕಚೇರಿಗಳಲ್ಲೂ ಏಜೆಂಟರ ಪ್ರವೇಶ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕೆಂದು ಸೂಚಿಸಿದರು.

ಆಡಳಿತ ಸುಧಾರಣೆ ಒಬ್ಬರಿಂದ ಸಾಧ್ಯವಿಲ್ಲ, ಜವಾಬ್ದಾರಿ ಹೊತ್ತಿರುವ ಎಲ್ಲ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಅಧಿಕಾರಿಗಳಲ್ಲಿ ಸೌಜನ್ಯಪೂರ್ಣ ವರ್ತನೆ ಕಾಣಿಸಬೇಕು. ನಾಗರಿಕರು ಕಚೇರಿಗೆ ಗೌರವಯುತವಾಗಿ ಬಂದು ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಂಡು ಹೋಗುವಂತಾಗಬೇಕು. ಸಾರ್ವಜನಿಕರನ್ನು ಕಚೇರಿಯಲ್ಲಿ ನಿಲ್ಲಿಸಿ ಮಾತನಾಡಿಸುವ ಅಧಿಕಾರಿಗಳಿಗೆ ತಕ್ಷಣ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಸಿದರು.

ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ನಾಗರಿಕರಿಗೆ ಸ್ವೀಕೃತಿ ನೀಡುವ ವ್ಯವಸ್ಥೆ ಕಡ್ಡಾಯವಾಗಬೇಕು. 2027ರ ಜನವರಿ 26ರೊಳಗೆ ಪ್ರಜಾಸೌಧ ಕಟ್ಟಡ ಲೋಪಾರ್ಪಣೆ ಆಗಬೇಕು. ಕಟ್ಟಡವು ಉತ್ತಮ ಗುಣಮಟ್ಟದಿಂದ ನಿರ್ಮಾಣವಾಗಬೇಕು. ಗುತ್ತಿಗೆದಾರರು ಯಾರಿಗೂ ಲಂಚ ನೀಡಬಾರದು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಟಿಷ್ ಆಡಳಿತ ಕಾಲದಲ್ಲಿ ತಾಲೂಕು ಕಚೇರಿಯಿಂದಲೇ ಭೂಮಿಗೆ ಸಂಬಂಧಿಸಿದ ಹಾಗೂ ಇತರೆ ಆಡಳಿತ ಕಾರ್ಯಗಳು ನಡೆಯುತ್ತಿದ್ದು, ನಂತರ ವಿಕೇಂದ್ರೀಕರಣದೊಂದಿಗೆ ವಿವಿಧ ಇಲಾಖೆಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಪ್ರಜಾಸೌಧ ಕಟ್ಟಡವನ್ನು ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಗುತ್ತಿಗೆದಾರರು 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಇಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಒಂದೇ ಕಟ್ಟಡದಲ್ಲಿ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷರಾದ ಸಿದ್ದು ಪಾಟೀಲ ಹಾಗೂ ವಾಸಣ್ಣ ಕುರಡಗಿ, ಎಸ್.ಎನ್. ಬಳ್ಳಾರಿ, ಬಸವರಾಜ ಕಡೇಮನಿ, ಫಾರುಕ್ ಹುಬ್ಬಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ರಾಜಾರಾಮ್ ಪವಾರ, ಮಲ್ಲಯ್ಯ ಕೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಗದಗ ತಾಲೂಕಿನ ಎಲ್ಲ ಗ್ರಾಮಗಳಿಗೆ ಸ್ಮಶಾನ ವ್ಯವಸ್ಥೆ ಕಲ್ಪಿಸಲು ಸ್ವಾತಂತ್ರ್ಯನಂತರ 80 ವರ್ಷ ಬೇಕಾಯಿತು. ದಾಖಲೆಗಳು ಸರಿಯಾಗಿದ್ದರೂ ನಾಗರಿಕರು ಗುಲಾಮಗಿರಿ ಮನೋಭಾವದಿಂದ ಹೊರಬಂದು ತಮ್ಮ ಹಕ್ಕುಗಳನ್ನು ತಾವೇ ಪಡೆದುಕೊಳ್ಳಬೇಕು. ಇಂದಿನ ತಂತ್ರಜ್ಞಾನ ಮತ್ತು ಕಾನೂನು ವ್ಯವಸ್ಥೆ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಿದೆ. ಬಡತನ ಅಥವಾ ಅಜ್ಞಾನ ಇರಬಹುದು, ಆದರೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದುಕೊಳ್ಳಬಾರದು.

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

ಗದಗ ಐಎಂಎ ಜನಮುಖಿ ಕಾರ್ಯ ಕೈಗೊಳ್ಳಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಐಎಂಎ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿ ಜನಮುಖಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ. ವೀರಭದ್ರಯ್ಯ ಅಭಿಪ್ರಾಯಪಟ್ಟರು.

ಅವರು ರವಿವಾರ ಗದಗಿನ ಐಎಂಎ ರಕ್ತಭಂಡಾರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರಿಗೆ ಆರೋಗ್ಯದ ಸಂದೇಶ ಸಾರುವ ಎಲ್‌ಇಡಿ ಫಲಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗದಗ ಐಎಂಎಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ರಾಜ್ಯ ಐಎಂಎಗೆ ಬಹು ದೊಡ್ಡ ಕೊಡುಗೆಯನ್ನೂ ನೀಡಿರುವ ಗದಗ ಶಾಖೆಯು ನಡೆದು ಬಂದ ದಾರಿ ತುಂಬಾ ರೋಚಕವಾಗಿದ್ದು, ಹಲವಾರು ರಚನಾತ್ಮಕ ಕಾರ್ಯ ಯೋಜನೆಗಳ ಮೂಲಕ ಇಲ್ಲಿನ ಹಿರಿ-ಕಿರಿಯ ವೈದ್ಯರು ವೈದ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಗದಗ ಐಎಂಎ 2026ನೇ ವರ್ಷವನ್ನು ಶತಮಾನೋತ್ಸವದ ವರ್ಷವನ್ನಾಗಿ ಆಚರಿಸುತ್ತಿದ್ದು, ಈ ಅವಧಿಯಲ್ಲಿ ಜನರ ಆರೋಗ್ಯವನ್ನು ಸುಧಾರಿಸುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.

ಗದಗಿನ ಮಧ್ಯವರ್ತಿ ಸ್ಥಳದಲ್ಲಿರುವ ಐಎಂಎ ರಕ್ತಭಂಡಾರದ ಆವರಣದಲ್ಲಿ ಅಳವಡಿಸಿರುವ ಈ ಎಲ್‌ಇಡಿ ಫಲಕವು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಂತಾಗಲಿ. ಇಲ್ಲಿ ಬಿತ್ತರಗೊಳ್ಳುವ ಸಂದೇಶಗಳಲ್ಲಿ ಕೆಲವು ಸಂದೇಶಗಳು ಜನತೆಯ ಬದುಕಿನಲ್ಲಿ ಆರೋಗ್ಯ ಜಾಗೃತಿ ಮೂಡಿಸಿದಲ್ಲಿ ಯೋಜನೆ ಸಾರ್ಥಕತೆ ಪಡೆದುಕೊಳ್ಳುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಡಾ. ರಾಜಶೇಖರ ಪವಾಡಶೆಟ್ಟರ ಸಂದರ್ಭೋಚಿತವಾಗಿ ಮಾತನಾಡಿದರು. ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಡಾ. ಎಸ್.ಆರ್. ನಾಗನೂರ ಉಪಸ್ಥಿತರಿದ್ದರು.

ಅಕ್ರಮವಾಗಿ ಗೋಮಾಂಸ ಸಾಗಾಟ; ಆರೋಪಿ ಅರೆಸ್ಟ್!

0

ಮಡಿಕೇರಿ:-ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹಿದ್ ಅಹ್ಮದ್ (47) ಬಂಧಿತ ಆರೋಪಿ. ಈತ ಹುಣಸೂರಿನ ರತ್ನಪುರಿ ನಿವಾಸಿ ಎನ್ನಲಾಗಿದೆ. ಜಾಹಿದ್‌ ಆಲ್ಟೊ-800 ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ತುಂಬಿಸಿಕೊಂಡು ಕಾರಿನಲ್ಲಿ ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರು ಪರಿಶೀಲಿಸಿದಾಗ ಕಾರಿನಲ್ಲಿ 150 ಕೆಜಿ ಗೋಮಾಂಸ ಪತ್ತೆಯಾಗಿದ್ದು, ಇದನ್ನ ವಿರಾಜಪೇಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಎನ್ನಲಾಗಿದೆ. ಈತ ಹುಣಸೂರಿನ ರತ್ನಪುರಿ ಯಿಂದ ಮಾಂಸವನ್ನ ತಂದಿರೋದಾಗಿ ಪೊಲೀಸರಿಗೆ ಹೇಳಿದ್ದಾನೆ.

ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು, ಗೋಮಾಂಸ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ.

error: Content is protected !!