Home Blog Page 146

ಸರ್ಕಾರಿ ಕಚೇರಿಯಲ್ಲಿ ರಾಸಲೀಲೆ ವಿಡಿಯೋ ವೈರಲ್; ರಾಮಚಂದ್ರ ರಾವ್‌ಗೆ 10 ದಿನಗಳ ಕಡ್ಡಾಯ ರಜೆ

0

ಬೆಂಗಳೂರು:- ಒಂದೆಡೆ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ಡಿಜಿಪಿ ರಾಮಚಂದ್ರರಾವ್ 10 ದಿನಗಳ ಕಡ್ಡಾಯ ರಜೆಯ ಮೇಲೆ ತೆರಳಿದ್ದಾರೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕಚೇರಿಯಲ್ಲೇ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಡಿಯೋ ಸಹ ಹರಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಮಚಂದ್ರರಾವ್, “ನನಗೆ ಇದು ಗೊತ್ತಿಲ್ಲ, ಯಾರೋ ಎಐ ಮೂಲಕ ಷಡ್ಯಂತ್ರ ಮಾಡಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ” ಎಂದಿದ್ದಾರೆ.

ಆದರೆ ಮತ್ತೊಂದು ಸ್ಥಳದಲ್ಲಿ ಈ ವಿಡಿಯೋ 8 ವರ್ಷ ಹಳೆಯದಾಗಿದೆ ಎಂಬ ಮಾಹಿತಿ ನೀಡಿರುವುದರಿಂದ ಡಿಜಿಪಿ ಹೇಳಿಕೆ ಅನುಮಾನಾಸ್ಪದವಾಗಿದೆ. ಇನ್ನೂ ವಿಡಿಯೋ ಹೊರಬೀಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಪ್ರಯತ್ನಿಸಿದರೂ ಅವರು ಮನೆಗೆ ಇದ್ದರೂ ಅವಕಾಶ ನೀಡಿರಲಿಲ್ಲ. ಹೀಗಾಗಿ ರಾಮಚಂದ್ರರಾವ್ 10 ದಿನ ಕಡ್ಡಾಯ ರಜೆಯ ಮೇಲೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಸ್ತು ಕ್ರಮದ ಸೂಚನೆ ನೀಡಿ, ಕಾನೂನಿಗಿಂತ ಯಾರೂ ದೊಡ್ಡವರು ಅಲ್ಲ ಎಂದು ಹೇಳಿದ್ದಾರೆ. ಈ ನಡುವೆ ಡಿಸಿಎಂ ಡಿಕೆಶಿ ಅವರು “ನನಗೆ ಗೊತ್ತಿಲ್ಲ, ಪರಮೇಶ್ವರ್ ಅವರನ್ನು ಕೇಳಿ” ಎಂದು ತಿಳಿಸಿದ್ದಾರೆ.

ವೇಮನರ ತತ್ವ-ಸಿದ್ಧಾಂತಗಳು ಇನ್ನಷ್ಟು ಪಸರಿಸಲಿ: ಸಚಿವ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ. ಅವುಗಳನ್ನು ಇನ್ನಷ್ಟು ಪಸರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ಮತ್ತು ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನ್ಯಾಯದ ವಿರುದ್ಧ ಹೋರಾಡುವ ಸ್ವಭಾವದ ಸಮಾಜ ನಮ್ಮದು. ಭೂಮಿಯ ಮೇಲೆ ಅಪಾರ ಮೋಹ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದು ಬದುಕುವವರು ನಮ್ಮವರು. ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿರುವ ರೆಡ್ಡಿ ಸಮಾಜ ಶ್ರೇಷ್ಠ ಸಮಾಜವಾಗಿದೆ. ಜನರ ಪ್ರೀತಿಗೆ ಪಾತ್ರರಾದ ರೆಡ್ಡಿ ಸಮುದಾಯದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರಂತಹ ಮಹಾನ್ ವ್ಯಕ್ತಿತ್ವಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಸಾರಸ್ವತ ಲೋಕಕ್ಕೆ ವೇಮನರ ವಿಚಾರಧಾರೆಯನ್ನು ಪರಿಚಯಿಸುವ ಉದ್ದೇಶದಿಂದ ವೇಮನರ ಕುರಿತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಮುಂದಿನ 15 ದಿನಗಳೊಳಗೆ ರೆಡ್ಡಿ ಸಮಾಜದ ಸಮುದಾಯ ಭವನಕ್ಕೆ ಜಾಗ ದೊರೆಯಲಿದೆ. ಮುಂದಿನ ವರ್ಷ ಅಲ್ಲಿಯೇ ಮಹಾಯೋಗಿ ವೇಮನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ತಮಗಾಗಿ ಬದುಕದೇ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ನಾವು ಆಚರಿಸುತ್ತೇವೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಮಹಾಯೋಗಿ ವೇಮನರು ಒಬ್ಬರು. ವೇಮನರು ಸಾಕಷ್ಟು ಕವನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಕವನಗಳು ಸರಿಯಾಗಿ ದಾಖಲೀಕರಣವಾಗಿರಲಿಲ್ಲ. ಅನೇಕ ಕವನಗಳು ತಾಳೆಗರಿಗಳಲ್ಲಿ ಇದ್ದು, ಅವುಗಳನ್ನು ಸಂರಕ್ಷಿಸಲು ಬ್ರಿಟಿಷ್ ಸರ್ಕಾರವೇ ಮುಂದಾಯಿತು ಎಂದರೆ ವೇಮನರ ಕವಿತೆಗಳ ಶಕ್ತಿ ಎಷ್ಟಿತ್ತು ಎಂಬುದನ್ನು ಅರಿಯಬಹುದು. ಈ ಶತಮಾನ ಜ್ಞಾನದ ಯುಗ, ಪಾಂಡಿತ್ಯದ ಯುಗ. ಸಮಾಜದ ಎಲ್ಲ ಮಕ್ಕಳಿಗೂ ಸಮರ್ಪಕ ಜ್ಞಾನ ಹಾಗೂ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ಮಹಾಯೋಗಿ ವೇಮನ ವಿಚಾರಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲಕ್ಕೆ ಸಾರ್ವಕಾಲಿಕವಾಗಿವೆ. ವೇಮನರು ತಮ್ಮ ವಚನಗಳ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಹಾಯೋಗಿ ವೇಮನರ ಜಯಂತಿ ಆಚರಣೆಯ ಮೂಲಕ ವೇಮನರ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಎಲ್ಲರೂ ಸಂಘಟಿತರಾಗಬೇಕು ಎಂದರು.

ಹುಲಕೋಟಿಯ ಶ್ರೀ ರಾಜರಾಜೇಶ್ವರಿ ವಿದ್ಯಾನಿಕೇತನದ ಅನಿಲ ವೈದ್ಯ ಉಪನ್ಯಾಸ ನೀಡಿ, ವೇಮನರ ವಚನಗಳ ಪೂಜೆಯಾಗಬೇಕು. ಮಾನವ ಮಹಾಮಾನವ ಆಗಬೇಕು. ಪೂಜೆಯೆನ್ನುವುದು ಸಂಸ್ಕಾರವಾಗಬೇಕು. ಸಂಸ್ಕಾರವು ಸಾಕ್ಷಾತ್ಕಾರವಾಗಬೇಕು. ವೇಮನರು ಮೋಹಕ್ಕೆ ಬಿದ್ದು ಅದರಿಂದ ಹೊರಬರುತ್ತಾರೆ. ಮಹಾಯೋಗಿ ವೇಮನರು ತಮ್ಮ ವಚನಗಳಲ್ಲಿ ನಿಜವನ್ನರಿತವನು ನೀತಿವಂತನು ಎಂದು ಹೇಳಿದ್ದಾರೆ. ಅಜ್ಞಾನದಲ್ಲಿರುವ ತನಕ ಸುಜ್ಞಾನ ಸಿಗುವುದಿಲ್ಲ. ಆಸೆಗಳನ್ನು ತ್ಯಜಿಸಿ ಸತ್ಯವನ್ನರಿತು ನಿಜಮಾನವರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ವೇಮನರ ಕುರಿತು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಎಚ್.ಎಸ್. ಶಿವನಗೌಡ್ರ, ವಾಸಣ್ಣ ಕುರಡಗಿ, ಶ್ರೀನಿವಾಸ ದ್ಯಾವನಗೌಡ್ರ, ಮುಚ್ಚಂಡಿ, ಆರ್.ಎಸ್. ಪಾಟೀಲ, ಕರಬಸಪ್ಪ ಹಂಚಿನಾಳ, ಲಕ್ಷಣಗೌಡ ಪಾಟೀಲ, ತಮ್ಮನಗೌಡ ಶಿರಿಯಪ್ಪಗೌಡ್ರ, ಶೇಖರಡ್ಡಿ ಗದ್ದಿಕೇರಿ, ಶಿವನಗೌಡ ಹಳ್ಳೂರ, ಜಯಶ್ರೀ ಕೋಲಕಾರ, ರವಿಂದ್ರನಾಥ ಕುಲಕರ್ಣಿ, ಜೆ.ಕೆ. ಜಮಾದಾರ, ಜಿ.ಬಿ. ಆದಾಪೂರ, ಪ್ರೊ. ಕೆ.ಎಚ್. ಬೇಲೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಮಲ್ಲಣ್ಣ ಪರಡ್ಡಿ, ಹೇಮರೆಡ್ಡಿ ನೀಲಗುಂದ, ಪ್ರೇಮಕ್ಕ ಮೇಟಿ, ವಿ.ಆರ್. ದೇವರಡ್ಡಿ ಸೇರಿದಂತೆ ಗದಗ ಜಿಲ್ಲಾ ರೆಡ್ಡಿ ಸಮಾಜದ ಪದಾಧಿಕಾರಿಗಳು, ಗಣ್ಯರು, ಹಿರಿಯರು ಹಾಜರಿದ್ದರು.

ರವಿ ಮೂಲಿಮನಿ ಸ್ವಾಗತಿಸಿದರು. ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ವಂದಿಸಿದರು.

ಎಲ್ಲ ಜಯಂತಿಗಳು ದೊಡ್ಡ ಪ್ರಮಾಣದಲ್ಲಿ ಹಾಗೂ ಅರ್ಥಪೂರ್ಣವಾಗಿ ಜರುಗಬೇಕು. ಕನ್ನಡ ನಾಡಿಗೆ ಮಹಾಯೋಗಿ ವೇಮನರನ್ನು ಪರಿಚಯಿಸಿದವರು ಎಸ್.ಆರ್. ಪಾಟೀಲರು ಎಂಬುದನ್ನು ನಾವೆಲ್ಲರೂ ಅರಿಯಬೇಕು. ಬಾಯಿಂದ ಬಾಯಿಗೆ ಹರಿದಾಡುತ್ತಿದ್ದ ವೇಮನರ ಸಾಹಿತ್ಯವನ್ನು ಸಿ.ಪಿ. ಬ್ರೌನ್ ಅವರು ಆಂಗ್ಲ ಭಾಷೆಗೆ ಅನುವಾದಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ವೇಮನರ 20 ಸಾವಿರಕ್ಕೂ ಅಧಿಕ ಪ್ರತಿಗಳನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ ಎಂಬುದು ಸಂತಸದ ಸಂಗತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಪೀಠ ಸ್ಥಾಪನೆಯಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.

ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.

 

ಹಿಂದೂ ಸಂಘಟನೆಗಳಿಂದ ಬೈಕ್ ರ‍್ಯಾಲಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾ ಯಾತ್ರೆಯ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ ಹಿಂದೂ ಸಂಘಟನೆಗಳ ನೂರಾರು ಯುವಕರು ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಿ, ಸಮ್ಮೇಳನ ಯಶಸ್ವಿಗೆ ಎಲ್ಲರೂ ಭಾಗವಹಿಸುವಂತೆ ಸಂದೇಶ ನೀಡಿದರು.

ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಬೈಕ್‌ಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಶ್ರೀ ರಾಮ, ಹನುಮಾನ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್, ಇಮ್ಮಡಿ ಪುಲಿಕೇಶಿ, ಸಿಂಧೂರ ಲಕ್ಷ್ಮಣ, ಮಾದವ ಗೋಲ್ವಾಲ್ಕರ, ಕೇಶವ ಬಲಿರಾಂ ಹೆಡ್ಗೆವಾರ, ಅವರ ಭಾವಚಿತ್ರಗಳನ್ನು ಬೈಕ್ ಮೇಲೆ ಹಿಡಿದು ಘೋಷಣೆ ಮೊಳಗಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಸೋಮೇಶ್ವರ ತೇರಿನ ಮನೆ ಹತ್ತಿರ ಹಿಂದೂ ಸಮ್ಮೇಳನ ನಡೆಯುವ ವೇದಿಕೆ ಬಳಿ ಮುಕ್ತಾಯಗೊಳಿಸಿದರು.

ಬೈಕ್ ರ‍್ಯಾಲಿಗೆ ಯುವ ಮುಖಂಡರು, ಸಮ್ಮೇಳನದ ಪದಾಧಿಕಾರಿಗಳು ಚಾಲನೆ ನೀಡಿದರು. ಬೈಕ್ ರ‍್ಯಾಲಿ ಪಂಪ ವೃತ್ತದಿಂದ ಬಸ್ತಿಕೇರಿ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಮ್ಯಾಗೇರಿ ಓಣಿ, ಕೋರ್ಟ್ ಸರ್ಕಲ್, ತಹಸೀಲ್ದಾರ ಆಫೀಸ್, ದೂದ ನಾನಾ ದರ್ಗಾ, ಭರಮದೇವರ ಸರ್ಕಲ್, ಬಜಾರ ರಸ್ತೆ, ಪುರಸಭೆ, ಶಿಗ್ಲಿ ಕ್ರಾಸ್, ಹೊಸ ಬಸ್ ಸ್ಟಾಂಡ್, ಗದಗ ನಾಕಾ ಮುಖಾಂತರ ಸೋಮೇಶ್ವರ ತೇರಿನ ಮನೆಗೆ ಮುಕ್ತಾಯಗೊಂಡಿತು.

ಶ್ರೀಮಠ ಶ್ರೇಷ್ಠ ಪರಂಪರೆಯನ್ನು ಹೊಂದಿದೆ: ಸಚಿವ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ನಾಡಿನಲ್ಲಿ ಶ್ರೇಷ್ಠ, ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ಪರಮಪೂಜ್ಯ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಇಳಿವಯಸ್ಸಿನಲ್ಲೂ ಶ್ರೀಮಠ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಜ.ಅ. ವಿದ್ಯಾ ಸಂಸ್ಥೆಯ ಮೂಲಕ 30ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿ ಲಕ್ಷಾಂತರ ಮಕ್ಕಳಿಗೆ ಅಕ್ಷರ, ಅರಿವು, ಸಂಸ್ಕಾರ ನೀಡಿದ್ದಾರೆ. ಶ್ರೀಮಠ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಶ್ರೀಗಳು ಮಾನವೀಯ ಮೌಲ್ಯಗಳು, ಸ್ಪಂದನೆಯ ಭಾವನೆಯನ್ನು ಹೊಂದಿದ್ದಾರೆ. ಅವರಿಂದ ಸಮಾಜಕ್ಕೆ ಪಾರ ಅನುಕೂಲವಾಗಿದೆ. ಇಡೀ ಸಮಾಜಕ್ಕೆ ಜ.ಅ. ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಜರುಗಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಗಳು ಶಾಲೆ ಪ್ರಾರಂಭಿಸಿದಾಗ ಮಕ್ಕಳನ್ನು ಶಾಲೆಗೆ ಕಳಿಸಲೂ ಹಿಂದೆ ಮುಂದೆ ನೋಡುವ ಕಾಲವಿತ್ತು. ಆಗಲೂ ಶ್ರೀಗಳು ಜನತೆಗೆ ಅಕ್ಷರದ ಮಹತ್ವವನ್ನು ತಿಳಿಸಿ ಶಾಲೆಗೆ ಕರೆತರುವ ಮೂಲಕ ಯಶಸ್ವಿಯಾಗಿದ್ದಾರೆ. ಶ್ರೀಗಳು ಊರಿಂದೂರಿಗೆ ಜೋಳಿಗೆ ಹಾಕಿಕೊಂಡು ಹೋಗಿ ಭಕ್ತರಿಂದ ಸಂಗ್ರಹಿಸಿದ ಕಾಣಿಕೆಯಲ್ಲಿ ಶಾಲೆ ನಡೆಸಬೇಕಿತ್ತು. ಇಂದಿಗೂ ಊರೂರಿಗೆ ತೆರಳಿ, ಬರುವ ಹಣದಲ್ಲಿ ವಿದ್ಯಾ ಸಂಸ್ಥೆ, ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳವರು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಶ್ರೀಮಠದ ಉತ್ತರಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ಸುಜಾತಾ ದೊಡ್ಡಮನಿ, ಡಿ.ಡಿ. ಮೋರನಾಳ, ಡಾ. ಬಿ.ಜಿ. ಜವಳಿ, ಆನಂದಗೌಡ ಪಾಟೀಲ, ಡಾ. ಪ್ರಕಾಶ ಹೊಸಮನಿ, ವೆಂಕಟಪ್ಪ ನಾಯಕ, ಮಹೇಶಗೌಡ ಪಾಟೀಲ, ಹಿರಿಯ ವಿದ್ಯಾರ್ಥಿಗಳು ಇದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ ಮಾತನಾಡಿ, ದೇಶದ ಶಕ್ತಿ ಉಳಿದಿದ್ದು ಗ್ರಾಮೀಣ ಭಾಗದಲ್ಲಿ ಮಾತ್ರ. ಮಠ-ಮಾನ್ಯಗಳು ಚಾರಿತ್ರ‍್ಯ ಕಲಿಸುತ್ತವೆ. ಪತ್ರಿಕೋದ್ಯಮ ಎಂದರೆ ತಪಸ್ಸು ಇದ್ದಂತೆ. ಚಾರಿತ್ರ‍್ಯಿಕ ನಿರ್ಮಾಣ ಮಾಡುವ ಕೆಲಸ ಮಾಡಬೇಕು. ಮಠಕ್ಕೆ ಋಣಿಯಾಗಬೇಕು. ಈ ದೇಶಕ್ಕೆ ಮಠಮಾನ್ಯಗಳು ಏನು ಕೊಡುಗೆ ನೀಡಿವೆ ಎಂದು ಪ್ರಶ್ನಿಸುವವರನ್ನು ಇಂತಹ ಮಠಗಳಿಗೆ ಕರೆತಂದು ತೋರಿಸಬೇಕು. 1924ರಲ್ಲಿ ಒಂದೇ ಇದ್ದ ಶಾಲೆಯು ಇದೀಗ 33 ಅಂಗ ಸಂಸ್ಥೆಗಳನ್ನು ಹೊಂದುವಂತೆ ಶ್ರೀಗಳು ಮಾಡಿದ್ದು ದೊಡ್ಡ ಸಾಧನೆ ಎಂದರು.

ಕರೋನಾ ರೀತಿಯ ಮಾರಕ ರೋಗ ಶಂಕೆ; ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಬಂದ್!

0

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗ ಹರಡುವ ಶಂಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಸಂಪೂರ್ಣ ಪಾರ್ಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಉಳಿದ ಜಿಂಕೆಗಳಿಗೆ ಸೋಂಕು ಹರಡದಂತೆ ತಡೆಯಲು ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಅಧಿಕಾರಿಗಳು ನಿರಂತರ ನಿಗಾವಹಿಸಿದ್ದಾರೆ. ಪ್ರಾಥಮಿಕವಾಗಿ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಮಾರಣಾಂತಿಕ ರೋಗದ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಹಾಗೂ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆಎಸ್ ಬಸವಂತಪ್ಪ ಅವರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಜ್ಞರನ್ನು ತಕ್ಷಣ ಕರೆಸಿ ಉಳಿದ ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಹಿಂದೇಟು ಯಾಕೆ? ಸಿದ್ದರಾಮಯ್ಯಗೆ ರೆಡ್ಡಿ ಪ್ರಶ್ನೆ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಾಮಾಣಿಕತೆ ತೋರಿಸಲು ಈ ಹಿಂದೆ 7 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ದರೆ ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕ ನಾ.ರಾ. ಭರತ್ ರೆಡ್ಡಿ ಸೇರಿದಂತೆ ಸಾವಿರಾರು ಜನರು ತಮ್ಮ ಮನೆ ಮೇಲೆ ದಾಳಿ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಒಬ್ಬ ಅಮಾಯಕ ಮೃತಪಟ್ಟಿದ್ದಾನೆ. ಇದು ತನ್ನ ಮೇಲೆ ನಡೆದ ಕೊಲೆ ಯತ್ನವಾಗಿದ್ದು, ಕಾಂಗ್ರೆಸ್ ಶಾಸಕರ ಬಂಧನ ತಪ್ಪಿಸಲು ಸಿಐಡಿಗೆ ವಹಿಸುವ ಮೂಲಕ ಪ್ರಕರಣವನ್ನು ಮುಚ್ಚುವ ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ನಿರ್ಣಯದ ಮೂಲಕ ಒತ್ತಾಯಿಸಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ನಿಜವಾದ ಮತದಾರರ ಹಕ್ಕು ರಕ್ಷಣೆ ಸರ್ಕಾರದ ಹೊಣೆ; ಮುಖ್ಯಮಂತ್ರಿ ಸಿದ್ದರಾಮಯ್ಯ!

0

ಬೆಳಗಾವಿ:- ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಜವಾದ ಮತದಾರರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬುದೇ ಸರ್ಕಾರದ ಮುಖ್ಯ ಕಾಳಜಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಆದರೆ ಮತದಾರರ ಹೆಸರುಗಳು ಪಟ್ಟಿಯಿಂದ ತಪ್ಪಿಹೋಗದಂತೆ ಎಚ್ಚರಿಕೆಯಿಂದ ಪ್ರಕ್ರಿಯೆ ನಡೆಯಬೇಕು ಎಂದು ಬಿಎಲ್‌ಒಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇದೇ ವೇಳೆ ಡಿಜಿಪಿ ರಾಮಚಂದ್ರರಾವ್ ಅವರ ಮಹಿಳೆಯರೊಂದಿಗಿನ ಅನುಚಿತ ವರ್ತನೆ ಆರೋಪದ ಕುರಿತು ಮಾತನಾಡಿ, ವಿಚಾರಣೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಇನ್ನೂ ವಿರೋಧಪಕ್ಷಗಳು ಸುಳ್ಳು ಆರೋಪಗಳಿಂದ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಟೀಕಿಸಿದ ಅವರು, ಮಹಾರಾಷ್ಟ್ರ–ಕರ್ನಾಟಕ ಗಡಿವಿವಾದದ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ರಾಜ್ಯದ ಕಾನೂನು ತಂಡ ಸಿದ್ಧವಾಗಿದೆ ಎಂದರು.

ಡಿಜಿಪಿ ರಾಸಲೀಲೆ ವಿವಾದ: ಸಿಎಂ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳಲಿ – ಜೆಡಿಎಸ್ ಆಗ್ರಹ

0

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, ಗೃಹ ಸಚಿವ ಪರಮೇಶ್ವರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಗೃಹ ಸಚಿವರ ಆಪ್ತರಾಗಿರುವ ಡಿಜಿಪಿ ರಾಮಚಂದ್ರ ರಾವ್ ಅವರ ಅಸಭ್ಯ ವರ್ತನೆಯ ವಿಡಿಯೋ ಬಯಲಾಗಿರುವುದು ರಾಜ್ಯ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿದೆ ಎಂದು ಜೆಡಿಎಸ್ ಆರೋಪಿಸಿದೆ.

ಪೊಲೀಸ್ ಸಮವಸ್ತ್ರದ ಗೌರವ ಮರೆತು ಕಚೇರಿಯಲ್ಲೇ ಮಹಿಳೆಯರೊಂದಿಗೆ ಇಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದರಿಂದ ಸಂಪೂರ್ಣ ಪೊಲೀಸ್ ಇಲಾಖೆಯ ಮಾನ ಹರಾಜಾಗಿದೆ ಎಂದು ಟೀಕಿಸಿದೆ. ಜೊತೆಗೆ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನೆರವು ನೀಡಿದ ಆರೋಪವೂ ಡಿಜಿಪಿ ಮೇಲಿದ್ದುದನ್ನು ನೆನಪಿಸಿದ ಜೆಡಿಎಸ್, ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತ ಮತ್ತು ಅಸಮರ್ಥ ಗೃಹ ಸಚಿವರ ಕಾರಣದಿಂದ ರಾಜ್ಯದ ಹೆಮ್ಮೆಯ ಪೊಲೀಸ್ ವ್ಯವಸ್ಥೆಗೆ ಮರುಮೆಚ್ಚುಗೆ ಬಾರದಂತಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.

ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: “ಸಿಎಂ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು, ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನಿಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದಾಗ, “ಯಾರು ಹೇಳಿದರು? 140 ಶಾಸಕರು ಕೂಡ ನನ್ನ ಬೆಂಬಲಿಗರೇ. ಸಿಎಂ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ.

ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ಮಾಧ್ಯಮಗಳು ರಾಹುಲ್ ಗಾಂಧಿ ಭೇಟಿಯಾಗಿಲ್ಲ ಎಂದು ಬರೆದಿದ್ದೀರಿ. ಒಂದು ದಿನ ನಾವು ಜೊತೆಯಲ್ಲಿ ಕೂತು ಚರ್ಚೆ ಮಾಡಿರುವ ಫೋಟೋ ವರದಿ ಮಾಡಿದ್ದೀರಿ, ಮರುದಿನ ಭೇಟಿಯೇ ಆಗಿಲ್ಲ ಎಂದು ಹೇಳುತ್ತಿದ್ದೀರಿ. ಈ ವಿಚಾರದಲ್ಲಿ ಕಾಲ ಉತ್ತರ ನೀಡಲಿದೆ ಎಂದು ಹೇಳಿದ್ದೇನೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.

ಹೈಕಮಾಂಡ್ ಒಳ್ಳೆಯ ಸುದ್ದಿ ನೀಡಲಿದೆ ಎಂದು ನಿಮ್ಮ ಸಹೋದರ ಹೇಳಿದ್ದಾರೆ ಎಂದು ಕೇಳಿದಾಗ, “ನನ್ನ ತಮ್ಮ, ನಮ್ಮ ಕಾರ್ಯಕರ್ತರು, ಮಾಧ್ಯಮಗಳು ಕೂಡ ಹೇಳುತ್ತಿವೆ” ಎಂದರು.

ಏಪ್ರಿಲ್ ತಿಂಗಳಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನೋಡೋಣ, ಈಗ ಆ ಮಾತು ಯಾಕೆ?” ಎಂದು ತಿಳಿಸಿದರು. ರಾಜಕೀಯಕ್ಕಾಗಿ ದಾವೋಸ್ ಪ್ರವಾಸ ಕೈಬಿಟ್ಟಿರುವುದು ಸರಿಯಲ್ಲ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಅವರ ಮಾತಿನಲ್ಲಿ ಅರ್ಥವಿದೆ. ತಪ್ಪು ಎಂದು ನಾನು ಹೇಳುವುದಿಲ್ಲ. ನಾಳೆ ಬೆಳಗ್ಗೆ ಈ ಪ್ರಶ್ನೆ ಕೇಳಿ” ಎಂದು ಉತ್ತರಿಸಿದರು.

ನಮ್ಮ ಸರ್ಕಾರದಿಂದ ಇಡೀ ದೇಶವೇ ಮೆಚ್ಚುವಂತಹ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಳಗಾವಿ: ದೇಶಕ್ಕಾಗಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ‌ವೀರ ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿ ನಂದಗಡದಲ್ಲಿ ವೀರ ಭೂಮಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಇಡೀ ದೇಶವೇ ಮೆಚ್ಚುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ (ವೀರಭೂಮಿ) ಲೋಕಾರ್ಪಣೆ, ಸಮಾಧಿ ಬಳಿಯ ಕೆರೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭ ಮತ್ತು ವಿವಿಧ ಕಾಮಗಾರಿಗಳ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸರ್ಕಾರಕ್ಕೆ ಮತ್ತು ನಮ್ಮ ಮುಖ್ಯಮಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂದು ಇಡೀ ರಾಷ್ಟ್ರ ಹೆಮ್ಮೆ ಪಡುವ ಕೆಲಸ ಆಗಿದೆ ಎಂದರು.

ಸಂಗೊಳ್ಳಿ ರಾಯಣ್ಣ ಅಂದರೆ ಧೈರ್ಯ, ಸಂಗೊಳ್ಳಿ ರಾಯಣ್ಣ ಎಂದರೆ ವಿಶ್ವಾಸ, ಅವರ ತ್ಯಾಗ, ದೇಶ ಭಕ್ತಿ ನಮ್ಮ ಕಣ್ಣ ಮುಂದೆ ಕಾಣುತ್ತದೆ.‌ ಸಂಗೊಳ್ಳಿ ರಾಯಣ್ಣನವರ ಹೆಸರು ಹೇಳಿದರೆ ಸಾಕು ಮೈ ರೋಮಾಂಚನ ಆಗುತ್ತೆ. ಇಂಥ ಕ್ರಾಂತಿ ವೀರ‌‌ನನ್ನು 33ನೇ ವಯಸ್ಸಿನಲ್ಲಿ ಗಲ್ಲಿಗೆ ಏರಿಸಲಾಯಿತು. ‌ಕೇವಲ‌ 33ನೇ ವಯಸ್ಸಿನಲ್ಲಿ ತನ್ನ ಕೊರಳನ್ನು ಒಡ್ಡಿದ್ದಾರೆ ಅಂದರೆ ಎಂತಹ ಕ್ರಾಂತಿಕಾರಿ ಇರಬೇಕು ಎಂದು ಸಚಿವರು ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಹೋರಾಟವನ್ನು ಸ್ಮರಿಸಿದರು.

ಆಧುನಿಕ ಕಾಲದಲ್ಲಿ ಸ್ವಾತಂತ್ರ್ಯ ತಂದು ಕೊಟ್ಟುವರನ್ನು ನಾವು ಬೆಳಕಿಗೆ ತರಬೇಕು. ಇಂದು ಚುನಾವಣೆ ಸಂದರ್ಭದಲ್ಲಿ ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾವು ಅಭಿವೃದ್ಧಿ ಕೆಲಸದ ಕಡೆ ಮಾತ್ರ ಗಮನ ಕೊಡುತ್ತೇವೆ ಎಂದ ಅವರು, ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದರು.‌

error: Content is protected !!