Home Blog Page 147

ನಮ್ಮ ಸರ್ಕಾರದಿಂದ ಇಡೀ ದೇಶವೇ ಮೆಚ್ಚುವಂತಹ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಳಗಾವಿ: ದೇಶಕ್ಕಾಗಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ‌ವೀರ ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿ ನಂದಗಡದಲ್ಲಿ ವೀರ ಭೂಮಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಇಡೀ ದೇಶವೇ ಮೆಚ್ಚುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ (ವೀರಭೂಮಿ) ಲೋಕಾರ್ಪಣೆ, ಸಮಾಧಿ ಬಳಿಯ ಕೆರೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭ ಮತ್ತು ವಿವಿಧ ಕಾಮಗಾರಿಗಳ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸರ್ಕಾರಕ್ಕೆ ಮತ್ತು ನಮ್ಮ ಮುಖ್ಯಮಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂದು ಇಡೀ ರಾಷ್ಟ್ರ ಹೆಮ್ಮೆ ಪಡುವ ಕೆಲಸ ಆಗಿದೆ ಎಂದರು.

ಸಂಗೊಳ್ಳಿ ರಾಯಣ್ಣ ಅಂದರೆ ಧೈರ್ಯ, ಸಂಗೊಳ್ಳಿ ರಾಯಣ್ಣ ಎಂದರೆ ವಿಶ್ವಾಸ, ಅವರ ತ್ಯಾಗ, ದೇಶ ಭಕ್ತಿ ನಮ್ಮ ಕಣ್ಣ ಮುಂದೆ ಕಾಣುತ್ತದೆ.‌ ಸಂಗೊಳ್ಳಿ ರಾಯಣ್ಣನವರ ಹೆಸರು ಹೇಳಿದರೆ ಸಾಕು ಮೈ ರೋಮಾಂಚನ ಆಗುತ್ತೆ. ಇಂಥ ಕ್ರಾಂತಿ ವೀರ‌‌ನನ್ನು 33ನೇ ವಯಸ್ಸಿನಲ್ಲಿ ಗಲ್ಲಿಗೆ ಏರಿಸಲಾಯಿತು. ‌ಕೇವಲ‌ 33ನೇ ವಯಸ್ಸಿನಲ್ಲಿ ತನ್ನ ಕೊರಳನ್ನು ಒಡ್ಡಿದ್ದಾರೆ ಅಂದರೆ ಎಂತಹ ಕ್ರಾಂತಿಕಾರಿ ಇರಬೇಕು ಎಂದು ಸಚಿವರು ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಹೋರಾಟವನ್ನು ಸ್ಮರಿಸಿದರು.

ಆಧುನಿಕ ಕಾಲದಲ್ಲಿ ಸ್ವಾತಂತ್ರ್ಯ ತಂದು ಕೊಟ್ಟುವರನ್ನು ನಾವು ಬೆಳಕಿಗೆ ತರಬೇಕು. ಇಂದು ಚುನಾವಣೆ ಸಂದರ್ಭದಲ್ಲಿ ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾವು ಅಭಿವೃದ್ಧಿ ಕೆಲಸದ ಕಡೆ ಮಾತ್ರ ಗಮನ ಕೊಡುತ್ತೇವೆ ಎಂದ ಅವರು, ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದರು.‌

ರಾಮಚಂದ್ರರಾವ್ ರಾಸಲೀಲೆ ವಿಡಿಯೋ: ಗೃಹ ಇಲಾಖೆಗೆ ವರದಿ ನೀಡಲು ಸಿಎಂ ಸೂಚನೆ

0

ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ರಾಸಲೀಲೆ ವಿಡಿಯೋ ವೈರಲ್ ಆದ ಪ್ರಕರಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಇಲಾಖೆಗೆ ತ್ವರಿತ ವರದಿ ನೀಡಲು ಸೂಚನೆ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ, ರಾಮಚಂದ್ರರಾವ್ ತನ್ನ ಕಚೇರಿಯೊಳಗೆ ಮಹಿಳೆಯನ್ನು ತಪ್ಪಿಕೊಂಡಿರುವ ದೃಶ್ಯಗಳು ದೃಢವಾಗಿದೆ. ಈ ಹಿನ್ನೆಲೆ, ಪ್ರಾಥಮಿಕ ತನಿಖೆ ನಡೆಸಿ ವರದಿ ತಯಾರಿಸಲು ಗೃಹ ಇಲಾಖೆ ನಿರ್ದೇಶನ ಪಡೆದಿದೆ. ವರದಿ ಬಂದ ತಕ್ಷಣಲೇ ರಾಮಚಂದ್ರರಾವ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯತೆ ಇದೆ.

ಹಿಂದೆಯೂ ರಾಮಚಂದ್ರರಾವ್ ಹೆಸರು ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಸರ್ಕಾರದ ಗಮನ ಸೆಳೆದಿದ್ದು, ಈಗ ಈ ಹೊಸ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ʼನಲ್ಲಿಯೇ ಇದ್ದೇನೆ, ಮುಂದಿನ ಚುನಾವಣೆಯಲ್ಲೂ ಅದೇ ಪಕ್ಷದಿಂದ ಸ್ಪರ್ಧೆ: ಜಿ.ಟಿ. ದೇವೇಗೌಡ ಸ್ಪಷ್ಟನೆ

0

ಮೈಸೂರು: ನಾನು ಜೆಡಿಎಸ್‌ನಲ್ಲಿಯೇ ಇದ್ದೇನೆ, ಎಲ್ಲಿಯೂ ಹೋಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಬೇರೆಯವರಿಗೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜೆಡಿಎಸ್ ಪಕ್ಷವನ್ನು ಕಟ್ಟಿದ ವಿಚಾರವನ್ನು ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ. ನಾನು ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದೇನೆ. ಮುಂದೆಯೂ ಜೆಡಿಎಸ್‌ನಲ್ಲಿಯೇ ಇರುತ್ತೇನೆ ಮತ್ತು ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತೇನೆ. ಇದರಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ನನಗೂ ಆತಂಕವಿಲ್ಲ, ಕಾರ್ಯಕರ್ತರಿಗೂ ಇಲ್ಲ ಎಂದು ಹೇಳಿದರು.

ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ನಿರಂತರವಾಗಿ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಕೆಲವು ಕಾರ್ಯಗಳಿಂದ ನಾನು ಏಕೆ ದೂರವಾಗಿದ್ದೇನೆ, ನನಗೆ ಏಕೆ ನೋವಾಗಿದೆ ಎಂಬುದು ನಮ್ಮ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಆದರೂ ನಾನು ಪಕ್ಷದಲ್ಲಿಯೇ ಇದ್ದೇನೆ. ಎಲ್ಲದಕ್ಕೂ ಕಾಲ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು.

ನಾನು ಯಾವುದೇ ನಾಯಕರಿಗೂ ದ್ರೋಹ ಮಾಡಿಲ್ಲ. ಐದು ಬಾರಿ ಶಾಸಕನಾಗಿದ್ದೇನೆ. ಇದರಲ್ಲಿ ಎರಡು ಬಾರಿ ಹುಣಸೂರು ಹಾಗೂ ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದೇನೆ. ಜೆಡಿಎಸ್ ಪಕ್ಷದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಈಗಲೂ ಪಕ್ಷದಿಂದ ದೂರ ಉಳಿದಿಲ್ಲ. ಯಾರನ್ನೂ ಟೀಕಿಸಿಲ್ಲ, ಕ್ಷೇತ್ರದ ಕೆಲಸವನ್ನೇ ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುವುದು ನಿಶ್ಚಿತ: ಸಚಿವ ಬೋಸರಾಜು

0

ಬೆಂಗಳೂರು: ನೂರಕ್ಕೆ ನೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಸಚಿವ ಬೋಸರಾಜು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಹೇಳಿದ್ದಾರೆ.

ವಿಕಾಸಸೌಧದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೋಸರಾಜು, ಇದು ಮುಗಿದ ಅಧ್ಯಾಯ ಅಂತಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಪ್ರಸ್ತುತ ಯಾವುದೇ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ. ಮುಂದೆ ಅಂತಹ ಸಂದರ್ಭ ಬಂದರೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ಬಿಜೆಪಿಯವರು ಬೆಳಿಗ್ಗೆಯಿಂದ ಸಂಜೆ ತನಕ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲೋಪದೋಷಗಳಿದ್ದರೆ ಸ್ಪಷ್ಟವಾಗಿ ಹೇಳಲಿ. ಸುಮ್ಮನೆ ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ. ಹೊಸದಾಗಿ ಆಯ್ಕೆಯಾದ ಕೆಲ ಶಾಸಕರು ಉತ್ಸಾಹದಲ್ಲಿ ಹೇಳಿಕೆ ನೀಡಿರಬಹುದು. ಆದರೆ ನೂರಕ್ಕೆ ನೂರು ಪರ್ಸೆಂಟ್ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಬೋಸರಾಜು ಪುನರುಚ್ಚರಿಸಿದರು.

ಬಿಜೆಪಿಯವರು ಪಾದಯಾತ್ರೆ ಮಾಡುವುದಕ್ಕೂ ತಮ್ಮ ಹೈಕಮಾಂಡ್ ಅನುಮತಿ ಪಡೆಯಬೇಕು. ಪಾದಯಾತ್ರೆಗೆ ಮ್ಯಾಪ್ ಕೂಡ ತಯಾರಿಸಿದ್ದರೂ ಅದು ನಡೆಯಲಿಲ್ಲ. ನಮ್ಮ ಹೈಕಮಾಂಡ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದರು.

ಸಿಎಂ ಬದಲಾಗುತ್ತಾರೆ ಎಂದು ವಿಜಯೇಂದ್ರ ನೂರಾರು ಬಾರಿ ಹೇಳಿದ್ದಾರೆ. ಅದರಿಂದ ಏನಾದರೂ ಆಯಿತಾ? ವಿಜಯೇಂದ್ರ ಕೇವಲ ಬಂಡಲ್ ಹೊಡೆಯುತ್ತಿದ್ದಾರೆ. ಅವರನ್ನೊಬ್ಬ ‘ಇಮ್ಯಾಚ್ಯುರ್ಡ್ ಅಧ್ಯಕ್ಷ’ ಎಂದು ಕಿಡಿಕಾರಿದರು.

2,500 ಕೋಟಿ ರೂ. ಅಬಕಾರಿ ಲಂಚ ಹಗರಣ ಆರೋಪ: ಸಿಎಂ ಸಿದ್ದರಾಮಯ್ಯ ನೇರ ಹೊಣೆ – ಆರ್. ಅಶೋಕ್

0

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದ 2,500 ಕೋಟಿ ರೂ. ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಗಾರರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್, ಸರ್ಕಾರವು ಇಲಾಖೆಗೆ ಆದಾಯ ಗುರಿ ನಿಗದಿಪಡಿಸುವ ನೆಪದಲ್ಲಿ ಅಬಕಾರಿ ಪರವಾನಗಿಗಳನ್ನು ಹರಾಜು ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಆರೋಪಿಸಿದರು. ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಅವರು 25 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದು ಈ ಭ್ರಷ್ಟಾಚಾರದ ಸ್ಪಷ್ಟ ಉದಾಹರಣೆ ಎಂದರು.

ತಿಮ್ಮಾಪುರ ರಾಜೀನಾಮೆ ನೀಡದಿದ್ದರೆ, ಈ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷವು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಗೆ ವಿರೋಧ ವ್ಯಕ್ತಪಡಿಸಲು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ ಮತ್ತೊಂದೆಡೆ ರಾಜ್ಯವನ್ನು ವ್ಯಸನದ ಗೂಡಾಗಿಸುವ ಮೂಲಕ ಗಾಂಧಿಯವರ ಆದರ್ಶಗಳಿಗೆ ದ್ರೋಹ ಮಾಡುತ್ತಿದೆ ಎಂದು ಅವರು ಟೀಕಿಸಿದರು.

CL-7 ಪರವಾನಗಿಗೆ 1.25 ಕೋಟಿ ರೂ., CL-2 ಪರವಾನಗಿಗೆ 1.5 ಕೋಟಿ ರೂ. ಲಂಚ ವಸೂಲಿ ಮಾಡಲಾಗಿದೆ. CL-9 ಪರವಾನಗಿಗಳ ಮೂಲಕ 92 ಕೋಟಿ ರೂ. ಹಾಗೂ ಮೈಕ್ರೋಬ್ರೂವರಿ ಪರವಾನಗಿಗೆ 2.5 ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ಆರೋಪಿಸಿದರು.

ಒಟ್ಟಿನಲ್ಲಿ 2,500 ಕೋಟಿ ರೂ. ಲಂಚ ಸಂಗ್ರಹವಾಗಿದ್ದು, ಈ ಹಣವನ್ನು ಅಸ್ಸಾಂ ಚುನಾವಣೆಗೆ ಕಳುಹಿಸಲಾಗುತ್ತಿದೆ. ಸಚಿವರಿಗೆ ಅಥವಾ ಅವರ ಮಗನಿಗೆ ಹಣ ನೀಡಬೇಕೆಂದು ಉಲ್ಲೇಖಿಸುವ ಆಡಿಯೋ ದಾಖಲೆ ಬಹಿರಂಗವಾಗಿದೆ ಎಂದು ಅಶೋಕ್ ಆರೋಪಿಸಿದರು. ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದು ಸ್ಪಷ್ಟಪಡಿಸಿದರು.

ಮೈಸೂರಿನ ಹೋಟೆಲ್ʼನಲ್ಲಿ RFO ಶವ ಪತ್ತೆ: ಸರ್ಕಾರಿ ಅಧಿಕಾರಿ ಸಾವಿನ ಸುತ್ತ ಅನುಮಾನದ ಹುತ್ತ!

0

ಮೈಸೂರು: ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ಆರ್ಎಫ್ (ರೇಂಜ್ ಫಾರೆಸ್ಟ್ ಆಫೀಸರ್) ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಟಿ. ನರಸೀಪುರದ ಆರ್ಎಫ್ ಕಾಂತರಾಜ್ ಚೌಹಾಣ್ ಮೃತರಾಗಿರುವುದು ದೃಢಪಟ್ಟಿದೆ.

ಮೈಸೂರು ನಗರದ ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪ, ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ನಲ್ಲಿ ಕಾಂತರಾಜ್ ಚೌಹಾಣ್ ಅವರ ಶವ ಪತ್ತೆಯಾಗಿದೆ. ಘಟನೆ ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಂತರಾಜ್ ಚೌಹಾಣ್ ಕೇವಲ 15 ದಿನಗಳ ಹಿಂದಷ್ಟೇ ಟಿ. ನರಸೀಪುರಕ್ಕೆ ವರ್ಗಾವಣೆಯಾಗಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ತಮ್ಮ ಸ್ನೇಹಿತ ಮಲ್ಲನಗೌಡ ಪಾಟೀಲ್ ಅವರೊಂದಿಗೆ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ ಅವರು ಏಕಾಏಕಿ ಮೃತಪಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನೂ ಆತಂಕಕಾರಿ ಅಂಶವೆಂದರೆ, ಕಾಂತರಾಜ್ ಚೌಹಾಣ್ ಅವರೊಂದಿಗೆ ಇದ್ದ ಸ್ನೇಹಿತ ಮಲ್ಲನಗೌಡ ಪಾಟೀಲ್ ಸದ್ಯ ನಾಪತ್ತೆಯಾಗಿದ್ದಾರೆ. ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮತ್ತಷ್ಟು ತಿರುವು ದೊರೆತಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ..! ವಿಡಿಯೋ ವೈರಲ್

0

ಬೆಂಗಳೂರು: ರಾಜ್ಯದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋ ಒಂದು, ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರ ರಾವ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಚೇರಿ ಆವರಣದಲ್ಲೇ ಮಹಿಳೆಯರೊಂದಿಗೆ ಅನುಚಿತ ವರ್ತನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಈ ಘಟನೆಗಳು ಕರ್ತವ್ಯದ ವೇಳೆಯಲ್ಲೇ ನಡೆದಿವೆ ಎಂಬುದು ಜನರಲ್ಲಿ ಹೆಚ್ಚು ಆಕ್ರೋಶ ಹುಟ್ಟಿಸಿದೆ.

ಪೊಲೀಸ್ ಇಲಾಖೆ ಎಂಬುದು ಶಿಸ್ತು, ನೈತಿಕತೆ ಮತ್ತು ಜನರ ನಂಬಿಕೆಯ ಮೇಲೆ ನಿಂತಿರುವ ವ್ಯವಸ್ಥೆ. ಇಂತಹ ಆರೋಪಗಳು ಇಲಾಖೆ ಗೌರವಕ್ಕೆ ಧಕ್ಕೆ ತರುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದು ಕಡೆ, ಈ ವಿಡಿಯೋದ ಸತ್ಯಾಸತ್ಯತೆ ಕುರಿತು ಅಧಿಕೃತ ತನಿಖೆಯ ಅಗತ್ಯವಾಗಿದೆ. ಯಾವುದೇ ಅಂತಿಮ ತೀರ್ಮಾನ ತನಿಖೆಯ ನಂತರ ಮಾತ್ರ ಹೊರಬರಬೇಕು ಎಂಬುದು ಕಾನೂನು ತತ್ವ.

ಈ ಪ್ರಕರಣ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ತನಿಖೆ, ಸ್ಪಷ್ಟನೆ ಮತ್ತು ಕ್ರಮಗಳೇ ಈ ಪ್ರಕರಣದ ದಿಕ್ಕು ನಿರ್ಧರಿಸಲಿವೆ.

ಪವಾಡದ ಹೆಸರಿನಲ್ಲಿ ನಾಟಕ: ನಾನು ಚೆನ್ನಮ್ಮ ವಂಶಸ್ಥ ಎಂದು ಹೇಳಿಕೊಂಡ ಸ್ವಾಮಿಗೆ ಲಕ್ಕುಂಡಿ ಗ್ರಾಮಸ್ಥರಿಂದ ಶಾಕ್!

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳ ಇದೀಗ ಅಚ್ಚರಿ ಘಟನೆಯ ಸಾಕ್ಷಿಯಾಗಿದೆ. ನಾನೊಬ್ಬ ಪವಾಡ ಪುರುಷ ಎಂದು ಹೇಳಿಕೊಂಡು ಬಂದ ಸ್ವಯಂ ಘೋಷಿತ ಸ್ವಾಮಿಯೊಬ್ಬ ಉತ್ಖನನ ಸ್ಥಳಕ್ಕೆ ಬಂದು ಹೈಡ್ರಾಮ ನಡೆಸಿದ್ದಾನೆ.

ತಾನು ಎಸ್.ಸಿ. ಹಿರೇಮಠ ಎಂದು ಪರಿಚಯಿಸಿಕೊಂಡ ಸ್ವಾಮಿ, “ನಾನು ರಾಣಿ ಚೆನ್ನಮ್ಮ ವಂಶಸ್ಥ” ಎಂದು ಹೇಳಿಕೊಂಡು, ತಾನು ನಿಂತಿರುವ ಜಾಗದಲ್ಲಿ ಸಾವಿರ ಕೆಜಿ ತೂಕದ ಚಾಮುಂಡಿ ಮೂರ್ತಿ ಇದೆ ಎಂದು ಹೇಳಿದ್ದಾನೆ.

ಇನ್ನೂ ಮುಂದೆ ಹೋಗಿ, “ಈ ಮೂರ್ತಿ ಬಂಗಾರ ಹಾಗೂ ವಜ್ರಖಚಿತವಾಗಿದೆ. ಹತ್ತು ಅಡಿ ಆಳಕ್ಕೆ ತೆಗಿದರೆ ಮೂರ್ತಿ ಸಿಗುತ್ತದೆ” ಎಂದು ಹೇಳಿ ಜನರ ಗಮನ ಸೆಳೆದಿದ್ದಾನೆ. ಕೈಯಲ್ಲಿ ಪತ್ರಿಕಾಯಿ ಹಿಡಿದುಕೊಂಡು ನಾಟಕೀಯವಾಗಿ ವರ್ತಿಸಿದ ಸ್ವಾಮಿ, ಸ್ಥಳದಲ್ಲಿ ಪವಾಡ ತೋರಿಸುವಂತೆ ವರ್ತನೆ ನಡೆಸಿದ್ದಾನೆ. ಆದರೆ ಸ್ಥಳೀಯರು ಈ ಹೇಳಿಕೆಗಳನ್ನು ಸಂಪೂರ್ಣ ಸುಳ್ಳು ಎಂದು ತಿರಸ್ಕರಿಸಿದ್ದಾರೆ. ಲಕ್ಕುಂಡಿಯ ಇತಿಹಾಸಕ್ಕೂ, ಚಾಮುಂಡಿಗೂ ಯಾವುದೇ ಸಂಬಂಧವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮ್ಮ ಊರಿಗೆ ಬಂದು ಸುಳ್ಳು ಹೇಳ್ತಿಯಾ?” ಎಂದು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಸ್ವಾಮಿಯನ್ನು ಸ್ಥಳದಿಂದ ಓಡಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ವಯಂಘೋಷಿತ ಸ್ವಾಮಿ ಹಿಂಬದಿಯಿಂದ (ರಿವರ್ಸ್) ಓಡಿ ಪರಾರಿಯಾಗಿದ್ದಾನೆ.

ಸ್ಥಳೀಯರ ಮಾತಿನಲ್ಲಿ, “ಇವನು ಪವಾಡ ಪುರುಷ ಅಲ್ಲ, ಸುಳ್ಳು ಸ್ವಾಮಿ” ಎಂಬುದೇ ಈಗ ಲಕ್ಕುಂಡಿಯಲ್ಲಿ ಚರ್ಚೆಯ ವಿಷಯವಾಗಿದೆ.

ತಂತ್ರಜ್ಞಾನಕ್ಕೆ ಜಯ: ಸೇಫ್ ಸಿಟಿ ಯೋಜನೆಯಿಂದ ಪೋಷಕರಿಂದ ಬೇರ್ಪಟ್ಟ ಮಕ್ಕಳ ರಕ್ಷಣೆ

0

ಬೆಂಗಳೂರು: ಸೇಫ್ ಸಿಟಿ ಯೋಜನೆಯಡಿ ನಗರಾದ್ಯಂತ ತಂತ್ರಜ್ಞಾನ ಆಧಾರಿತ ತ್ವರಿತ ಕಾರ್ಯಾಚರಣೆಗಳನ್ನು ಕೈಗೊಂಡಿರುವ ಬೆಂಗಳೂರು ಪೊಲೀಸರು, ಕಾಣೆಯಾಗಿದ್ದ ಹಾಗೂ ಪೋಷಕರಿಂದ ತಪ್ಪಿಸಿಕೊಂಡಿದ್ದ ಹಲವು ಮಕ್ಕಳನ್ನು ಕೆಲವೇ ನಿಮಿಷಗಳಲ್ಲಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

ಸೇಫ್ ಸಿಟಿ ಯೋಜನೆ ಹಾಗೂ 112 ತುರ್ತು ಸಹಾಯವಾಣಿ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಜಿಪಿಎಸ್ ಆಧಾರಿತ ಹೊಯ್ಸಳ ಗಸ್ತು ವಾಹನಗಳನ್ನು ತ್ವರಿತವಾಗಿ ನಿಯೋಜಿಸಲು ಸಾಧ್ಯವಾಗಿದೆ ಎಂದು ಬೆಂಗಳೂರು ಪೊಲೀಸ್ ಇಲಾಖೆಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 27ರಂದು ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕವಾಗಿ ಅಸ್ವಸ್ಥ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಕರೆದೊಯ್ಯಲು ಯತ್ನಿಸಿದ ಘಟನೆ ವರದಿಯಾಗಿತ್ತು. ಇದನ್ನು ಗಮನಿಸಿದ ಸಹಾಯಕ ಉಪನಿರೀಕ್ಷಕರು ತಕ್ಷಣ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಕೇವಲ ಐದು ನಿಮಿಷಗಳಲ್ಲಿ ಹೊಯ್ಸಳ ಗಸ್ತು ವಾಹನ ಸ್ಥಳಕ್ಕೆ ತಲುಪಿ ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದರು.

ಅದೇ ದಿನ ರಾತ್ರಿ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 16 ವರ್ಷದ ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದ ಬಾಲಕನನ್ನು ತುರ್ತು ಕರೆ ಬಂದ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ತಾಯಿಯೊಂದಿಗೆ ಮರುಸೇರಿಸಲಾಗಿದೆ.

ಜನವರಿ 3ರಂದು ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯ ಸಂಜೀವಿನಿ ನಗರ ಬಳಿ ನಾಲ್ಕು ವರ್ಷದ ಮಗು ರಸ್ತೆ ಬದಿಯಲ್ಲಿ ಒಂಟಿಯಾಗಿ ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. 11 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದರು.

ಜನವರಿ 4ರಂದು ಕಾಡುಗೋಡಿ ಠಾಣಾ ವ್ಯಾಪ್ತಿಯ ನಾಗುಂದಳ್ಳಿಯಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಇಬ್ಬರು ಮಕ್ಕಳ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, 17 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ ಮಕ್ಕಳನ್ನು ರಕ್ಷಿಸಿ ಮನೆಗೆ ತಲುಪಿಸಿದ್ದಾರೆ.

ಜನವರಿ 14ರಂದು ಗಿರಿನಗರ ಠಾಣಾ ವ್ಯಾಪ್ತಿಯ ಹೊಸಕೆರಹಳ್ಳಿ ಫ್ಲೈಓವರ್ ಸಮೀಪ ರಸ್ತೆಯಲ್ಲಿ ಮಗು ಓಡಾಡುತ್ತಿರುವುದು ಕಮ್ಯಾಂಡ್ ಸೆಂಟರ್ ಸಿಬ್ಬಂದಿಯ ಗಮನಕ್ಕೆ ಬಂದಿದೆ. ನಾಲ್ಕು ನಿಮಿಷಗಳೊಳಗೆ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಶೀಲನೆ ನಡೆಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲಿಯೂ 20 ನಿಮಿಷಗಳೊಳಗೆ ಪೊಲೀಸ್ ಸಿಬ್ಬಂದಿ ಸ್ಪಂದಿಸಿರುವುದು ಗಮನಾರ್ಹ ವಾಗಿದೆ. ಸೇಫ್ ಸಿಟಿ ಯೋಜನೆಯ ತಂತ್ರಜ್ಞಾನಾಧಾರಿತ ಪೊಲೀಸ್ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಇದು ಉತ್ತಮ ಉದಾಹರಣೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಂಟನೇ ಚಾಲಕರಹಿತ ರೈಲು ಹೆಬ್ಬಗೊಡಿಗೆ ಆಗಮನ

0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ಕೋಲ್ಕತ್ತಾದ ಟಿಟಾಘರ್‌ನಿಂದ ಹೊರಟಿದ್ದ ಎಂಟನೇ ಚಾಲಕರಹಿತ ಮೆಟ್ರೋ ರೈಲು ಇಂದು ಬೆಳಿಗ್ಗೆ ಬೆಂಗಳೂರಿನ ಹೆಬ್ಬಗೊಡಿ ಮೆಟ್ರೋ ಡಿಪೋಗೆ ಸುರಕ್ಷಿತವಾಗಿ ಆಗಮಿಸಿದೆ.

ಆರು ಕೋಚ್‌ಗಳನ್ನು ಒಳಗೊಂಡ ಈ ಮೆಟ್ರೋ ರೈಲು ಜನವರಿ 10ರಂದು ಟಿಟಾಘರ್‌ನಿಂದ ಹೊರಟಿದ್ದು, ಇದೀಗ ಬೆಂಗಳೂರು ಮೆಟ್ರೋದ ಯೆಲ್ಲೋ ಲೈನ್ ಕಾರ್ಯಾಚರಣೆಗೆ ಸಿದ್ಧಗೊಳ್ಳುತ್ತಿದೆ. ಹೊಸದಾಗಿ ಬಂದಿರುವ ರೈಲಿನ ತಾಂತ್ರಿಕ ಮತ್ತು ಸುರಕ್ಷತಾ ಪರಿಶೀಲನೆಗಳನ್ನು ನಾಳೆಯಿಂದ (ಜನವರಿ 20) ಆರಂಭಿಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಯೆಲ್ಲೋ ಲೈನ್‌ನಲ್ಲಿ ಏಳು ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಈ ಎಂಟನೇ ರೈಲಿಗೆ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.

ಆರ್.ವಿ. ರಸ್ತೆದಿಂದ ಬೊಮ್ಮಸಂದ್ರದವರೆಗೆ 19.15 ಕಿಲೋಮೀಟರ್ ಉದ್ದದ ಯೆಲ್ಲೋ ಲೈನ್‌ನಲ್ಲಿ ಒಟ್ಟು 16 ನಿಲ್ದಾಣಗಳಿವೆ. ಈ ಮಾರ್ಗದ ಸುಗಮ ಕಾರ್ಯಾಚರಣೆಗೆ ಒಟ್ಟು 16 ಚಾಲಕರಹಿತ ಮೆಟ್ರೋ ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಈಗಾಗಲೇ ಎಂಟು ರೈಲುಗಳು ನಗರ ತಲುಪಿವೆ.

ಪ್ರಸ್ತುತ 10ರಿಂದ 12 ನಿಮಿಷಗಳಿಗೊಮ್ಮೆ ಮೆಟ್ರೋ ಸಂಚಾರ ನಡೆಯುತ್ತಿದ್ದು, ಹೊಸ ರೈಲು ಸೇವೆಗೆ ಸೇರಿದ ಬಳಿಕ 8ರಿಂದ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸುವ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

error: Content is protected !!