Home Blog Page 145

ಜೂ. 14ರಂದು ರಾಜ್ಯ ಮಟ್ಟದ ಗಾಣಿಗ ಸಮಾಜದ ವಧು-ವರರ ಮಹಾ ಸಮಾವೇಶ

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಸಮಾಜ ಬಾಂಧವರ ಸಹಕಾರದೊಂದಿಗೆ ರಾಜ್ಯ ಮಟ್ಟದ ವಧು-ವರರ ಉಚಿತ ಸಮಾವೇಶವನ್ನು ಜೂನ್ 14, 2026ರಂದು ಬೆಳಿಗ್ಗೆ 9 ಗಂಟೆಗೆ ನಗರದ ಗಾಣಿಗ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗದಗ ಜಿಲ್ಲಾ ಗಾಣಿಗ ಸಂಘವು ಹಲವು ವರ್ಷಗಳಿಂದ ಸಮಾಜಮುಖಿ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಈಗಾಗಲೇ ಅನೇಕ ರಾಜ್ಯ ಮಟ್ಟದ ವಧು-ವರರ ಸಮಾವೇಶಗಳನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟಿದೆ.
ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ವಧು-ವರರ ಸಮಾವೇಶಗಳು ಸಮಾಜ ಬಾಂಧವರಿಗೆ ಅತ್ಯಂತ ಉಪಯುಕ್ತವಾಗಿದ್ದು, ಯುವಜನರ ಭವಿಷ್ಯ ರೂಪಿಸುವ ಸೇತುವೆಯಾಗಿ ಪರಿಣಮಿಸಿವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವ ಗಾಣಿಗ ಸಮಾಜದ ವಧು-ವರರು ಜೂನ್ 10, 2026ರೊಳಗಾಗಿ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಬಯೋಡೇಟಾ ಸಹಿತ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಸಮಾವೇಶದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಧು-ವರರೊಂದಿಗೆ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9741648546, 9591066921, 9880369245, 9448103739 ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಬಸವರಾಜ ಬಿಂಗಿ ಹಾಗೂ ಕಾರ್ಯದರ್ಶಿ ಮುರುಗೇಶ ಬಡ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಣ್ಣಗಳಲ್ಲೇ ಭಾವನೆಗಳ ಅನಾವರಣ

ವಿಜಯಸಾಕ್ಷಿ ಸುದ್ದಿ, ಗದಗ: “ಮನಸ್ಸು ಒಂದು ಕ್ಯಾನ್ವಾಸ್ ಇದ್ದಂತೆ. ಅದರ ಮೇಲೆ ಭಾವನೆಗಳೆಂಬ ಬಣ್ಣಗಳಿಂದ ಚಿತ್ರ ಮೂಡಿಸಿದಾಗ ಜೀವನ ಸುಂದರವಾಗುತ್ತದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಹೇಳಿದರು.
ನಗರದ  ಬಣ್ಣದಮನೆ ಆರ್ಟ್ ಅಡ್ಡಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದೊಂದಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಚಿತ್ರಕಲಾವಿದೆ ಸಂಗೀತಾ ಕೆ. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಂಗೀತಾ ಅವರ ಕಲಾಕೃತಿಗಳು ಮನಸ್ಸಿನ ಭಾವನೆಗಳನ್ನು ಸಹಜವಾಗಿ ಮತ್ತು ಅದ್ಭುತವಾಗಿ ಅಭಿವ್ಯಕ್ತಿಸಿವೆ. ಚಿತ್ರಕಲೆ ಸೇರಿದಂತೆ ಎಲ್ಲ ಕಲೆಗಳು ಮನುಷ್ಯನಿಗೆ ಆತ್ಮಸಂತೃಪ್ತಿ ನೀಡುವುದರ ಜೊತೆಗೆ ನಮ್ಮ ನಾಡಿನ ಹೆಮ್ಮೆಯ ಪ್ರತೀಕಗಳಾಗಿವೆ” ಎಂದು ಹೇಳಿದರು.
“ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವೈಯಕ್ತಿಕವಾಗಿಯೂ ಸಹಕಾರ ನೀಡಲು ಸದಾ ಸಿದ್ಧ” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಮಾತನಾಡಿ, “ಕಲೆ ಎಲ್ಲರಲ್ಲೂ ಅಡಗಿರುತ್ತದೆ. ಆದರೆ ಅದನ್ನು ಅಭ್ಯಾಸ ಮತ್ತು ಪರಿಶ್ರಮದಿಂದ ಬೆಳೆಸಿಕೊಂಡವರು ಮಾತ್ರ ಶ್ರೇಷ್ಠ ಕಲಾವಿದರಾಗುತ್ತಾರೆ” ಎಂದರು.
“ರಾಜ್ಯದ ಅನೇಕ ಚಿತ್ರಕಲಾವಿದರು ಮತ್ತು ಕಲಾಶಿಕ್ಷಕರು ತಮ್ಮ ಅದ್ಭುತ ಕೃತಿಗಳ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ” ಎಂದು ಹೇಳಿದರು.
ಸಾಹಿತಿ ಮರಳುಸಿದ್ದಪ್ಪ ದೊಡ್ಡಮನಿ ಮಾತನಾಡಿ, “ಕಲೆ ಮತ್ತು ಕವಿತೆ ಎರಡೂ ಭಾವನೆಗಳ ಅಭಿವ್ಯಕ್ತಿ. ಒಂದು ಅಕ್ಷರಗಳ ಮೂಲಕ ಮಾತನಾಡಿದರೆ, ಇನ್ನೊಂದು ಬಣ್ಣ ಮತ್ತು ರೇಖೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತದೆ” ಎಂದರು.
ಬಳ್ಳಾರಿಯ ರಾಜ್ಯಮಟ್ಟದ ಕಲಾವಿದ ಹಾಗೂ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ವಿಕ್ರಂ ನಿಹಾಲ್ ರಾಜು ಮಾತನಾಡಿ, “ಚಿತ್ರವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಅದನ್ನು ಓದಲು ಕಲಿಯಬೇಕು. ಸಂಗೀತಾ ಅವರ ಚಿತ್ರಗಳಲ್ಲಿ ಸೂಕ್ಷ್ಮ ಸಂವೇದನೆ ಹಾಗೂ ಅಮೂರ್ತ ಸೌಂದರ್ಯ ಅಡಗಿದೆ” ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ ಮಾತನಾಡಿ, “ಕಲೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜನಜೀವನವನ್ನು ಪ್ರತಿಬಿಂಬಿಸುತ್ತದೆ. ಕಲೆಯ ಮೂಲಕವೇ ಇತಿಹಾಸ ಮತ್ತು ಕಾಲಘಟ್ಟವನ್ನು ಅರ್ಥಮಾಡಿಕೊಳ್ಳಬಹುದು” ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಕುಮಾರ ಭಜಂತ್ರಿ ಮಾತನಾಡಿ, “ಬಣ್ಣದಮನೆ ಆರ್ಟ್ ಅಡ್ಡಾ ಕಲಾಪ್ರಿಯರಿಗೆ ಉತ್ತಮ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯ ಮತ್ತು ಲಲಿತಕಲೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು” ಎಂದು ತಿಳಿಸಿದರು.
ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, “ಸಂಗೀತಾ ಅವರ ಚಿತ್ರಪ್ರದರ್ಶನ ಇತರೆ ಕಲಾವಿದರಿಗೂ ಮಾದರಿಯಾಗಿದೆ. ಇಂತಹ ಪ್ರತಿಭೆಗಳನ್ನು ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಈ ಸಂದರ್ಭದಲ್ಲಿ ಕಲಾವಿದೆ ಸಂಗೀತಾ ಕೆ. ಅವರನ್ನು ಬಣ್ಣದಮನೆ ವತಿಯಿಂದ ಸನ್ಮಾನಿಸಲಾಯಿತು.
ಭಾರತಿ ಕಿರೇಸೂರ ಪ್ರಾರ್ಥಿಸಿದರು. ಬಸವರಾಜ ಈರಣ್ಣವರ ಕಾರ್ಯಕ್ರಮ ನಿರೂಪಿಸಿದರು. ಬಿ.ಎನ್. ಬೇಂದ್ರೆ ವಂದಿಸಿದರು.
ಕಾರ್ಯಕ್ರಮದಲ್ಲಿ ರಮೇಶ ಮುರುಗೋಡ, ಸರೋಜಾ ಮುಂಡೇವಾಡಿ, ಮಹೇಶ್ ಶಟವಾಜಿ, ನದಾಫ್ ಹಾಗೂ ಮಡಿವಾಳ ಉಪಸ್ಥಿತರಿದ್ದರು.
“ಚಿತ್ರಗಳು ಕೇವಲ ಬಣ್ಣಗಳ ಸಂಯೋಜನೆ ಅಲ್ಲ; ಅವು ಮನಸ್ಸಿನ ಮಾತುಗಳನ್ನು ಮೌನವಾಗಿ ಹೇಳುವ ಕಲಾತ್ಮಕ ಭಾಷೆ.”
ಡಾ. ಬಸವರಾಜ ಬಳ್ಳಾರಿ
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡರ ಆಗ್ರಹ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಮತಕ್ಷೇತ್ರದ ಶಾಸಕ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಾತ್ಯಾತೀತ ನಾಯಕ ಜಿ.ಎಸ್. ಪಾಟೀಲ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿ.ಎಸ್. ಪಾಟೀಲ ಅವರು ಕಳೆದ ನಾಲ್ಕೂವರೆ ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ” ಎಂದು ಹೇಳಿದರು.
“ಹೈಕಮಾಂಡ್ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ಅವರ ಪಕ್ಷನಿಷ್ಠೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಕಾರ್ಯವೈಖರಿಯನ್ನು ಪರಿಗಣಿಸಿ ಈ ಬಾರಿ ಸಚಿವ ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದರು.
“ಈ ಬಾರಿಯೂ ಅವಕಾಶ ತಪ್ಪಿದರೆ ಹೋರಾಟ”
“ಪ್ರತಿ ಬಾರಿ ಸಚಿವ ಸ್ಥಾನದಿಂದ ವಂಚಿತರಾಗುತ್ತಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದರೆ ಕಾರ್ಯಕರ್ತರು ಹೋರಾಟಕ್ಕೆ ಇಳಿಯಬೇಕಾಗುತ್ತದೆ” ಎಂದು ಶರಣಪ್ಪ ಬೆಟಗೇರಿ ಎಚ್ಚರಿಸಿದರು.
“ಐವತ್ತು ವರ್ಷಗಳ ಬಳಿಕ ಅವಕಾಶ”
ಮುಖಂಡ ಅಲ್ಲಾಬಕ್ಷಿ ನದಾಫ್ ಮಾತನಾಡಿ, “ಕಾಂಗ್ರೆಸ್ ಪಕ್ಷದಿಂದ ದೊಡ್ಡಮೇಟಿ ಅವರನ್ನು ಹೊರತುಪಡಿಸಿದರೆ ಕಳೆದ ಐವತ್ತು ವರ್ಷಗಳಲ್ಲಿ ಜಿಲ್ಲೆಯ ಬೇರೆ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಆ ಅವಕಾಶ ಜಿ.ಎಸ್. ಪಾಟೀಲರಿಗೆ ದೊರಕಬೇಕು” ಎಂದು ಹೇಳಿದರು.
“ಗದಗ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿರುವ, ನಾಲ್ಕು ಬಾರಿ ಶಾಸಕರಾಗಿರುವ ಜಿ.ಎಸ್. ಪಾಟೀಲರಿಗೆ ಪದೇಪದೇ ಸಚಿವ ಸ್ಥಾನ ಕೈತಪ್ಪುತ್ತಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ” ಎಂದರು.
ಮುಖಂಡ ನಿಂಗನಗೌಡ ಲಕ್ಕನಗೌಡ್ರ ಮಾತನಾಡಿ, “ಈ ಹಿಂದೆ ರೋಣಕ್ಕೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಜಿ.ಎಸ್. ಪಾಟೀಲರಿಗೆ ಸಚಿವರಾಗುವ ಎಲ್ಲ ಅರ್ಹತೆಗಳಿವೆ ಎಂದು ಹೇಳಿದ್ದರು. ಈಗ ಆ ಮಾತನ್ನು ನಿಜ ಮಾಡುವ ಸಮಯ ಬಂದಿದೆ” ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಸಂತೋಷ ಮಣ್ಣೊಡ್ಡರ ಉಪಸ್ಥಿತರಿದ್ದರು.
 “ಪಕ್ಷನಿಷ್ಠೆ, ಅಭಿವೃದ್ಧಿ ಕಾರ್ಯ ಹಾಗೂ ಜನಪರ ರಾಜಕಾರಣಕ್ಕೆ ಈ ಬಾರಿ ಸಚಿವ ಸ್ಥಾನ ರೂಪದಲ್ಲಿ ನ್ಯಾಯ ಸಿಗಬೇಕು.”
ಶರಣಪ್ಪ ಬೆಟಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ರಾಜ್ಯದಲ್ಲಿ ಮಳೆ ಅಬ್ಬರ: ಬೀದರ್, ಶಿವಮೊಗ್ಗ, ದಾಂಡೇಲಿ ಜನಜೀವನ ಅಸ್ತವ್ಯಸ್ತ!

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ ಒಂದು ಗಂಟೆಯಿಂದ ಸಿಡಿಲು-ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಬಿರುಗಾಳಿಯ ಪರಿಣಾಮವಾಗಿ ಹಲವು ಕಡೆ ತಂಪಾದ ವಾತಾವರಣ ನಿರ್ಮಾಣವಾಗಿದೆ. ಬೀದರ್, ಔರಾದ್, ಭಾಲ್ಕಿ, ಹುಮ್ನಾಬಾದ್, ಚಿಟ್ಟಗುಪ್ಪ ಮತ್ತು ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ದಿನಗಳಲ್ಲಿಯೂ ಜಿಲ್ಲೆಯಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ.

ಶಿವಮೊಗ್ಗದಲ್ಲಿಯೂ ಸಿಡಿಲು-ಗುಡುಗಿನೊಂದಿಗೆ ಜೋರಾಗಿ ಮಳೆಯಾಗಿದ್ದು, ಕಳೆದ ಅರ್ಧ ಗಂಟೆಯಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಬಿರುಬಿಸಿಲಿನಿಂದ ಕಾದಿದ್ದ ನಗರವನ್ನು ಮಳೆರಾಯ ತಂಪುಗೊಳಿಸಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದೇ ವೇಳೆ ದಾಂಡೇಲಿಯಲ್ಲಿ ಗಾಳಿ ಸಹಿತ ಮಳೆಯ ಅಬ್ಬರ ಹೆಚ್ಚಾಗಿದ್ದು, ಹಲವೆಡೆ ರಸ್ತೆಗಳ ಮೇಲೆ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಲವಾದ ಗಾಳಿಗೆ ಅಂಗಡಿಗಳ ಬೋರ್ಡ್‌ಗಳು ಹಾರಿ ಹಾನಿಯಾಗಿದ್ದು, ಕೆಲ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಮರದ ಕೊಂಬೆಗಳು ಹಾಗೂ ಗಿಡಗಂಟೆಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಸ್ಪತ್ರೆ ಮುಂಭಾಗಕ್ಕೂ ಮಳೆ ನೀರು ನುಗ್ಗಿದ ವರದಿಯಾಗಿದೆ. ಭಾರೀ ಮಳೆಯಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಕೆಲಕಾಲ ಪರದಾಡಿದ ಘಟನೆ ನಡೆದಿದೆ.

ಒಟ್ಟಾರೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಮುಂದಿನ ಗಂಟೆಗಳಲ್ಲಿ ಮತ್ತಷ್ಟು ಮಳೆಯ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಸೂಚಿಸಿದೆ.

ರಾಜಣ್ಣ, ಪರಮೇಶ್ವರ್ ಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ಮಹತ್ವದ ನಿರ್ಧಾರ!

ತುಮಕೂರು: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಜೂನ್ 3ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದಿರಲು ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣ ಅವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರೂ ನಾಯಕರು ವಿಶ್ವವಿದ್ಯಾಲಯಕ್ಕೆ ನೀಡಿರುವ ಕೊಡುಗೆ ಮಹತ್ವದ್ದು. ಆರಂಭದಲ್ಲಿ ಅವರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಆದರೆ ಪರಿಶೀಲನಾ ಸಮಿತಿ ದೇಶದ ಇತರ ರಾಜ್ಯಗಳಲ್ಲಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿಯಮಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಉದಾಹರಣೆಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸತೀಶ್ ಜಾರಕಿಹೊಳಿ ಅವರು ತಮಗೆ ನೀಡಲಾಗಿದ್ದ ಗೌರವ ಡಾಕ್ಟರೇಟ್ ಅನ್ನು ತಿರಸ್ಕರಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರಿಗೂ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡುವ ವಿಷಯದಲ್ಲಿ ಅವರು ಸ್ವತಃ ವಿನಮ್ರವಾಗಿ ನಿರಾಕರಿಸಿದ್ದರು ಎಂಬುದನ್ನೂ ಸಮಿತಿ ಪರಿಗಣಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇನ್ಮುಂದೆ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡಬಾರದು ಎಂಬ ತೀರ್ಮಾನಕ್ಕೆ ಸಮಿತಿ ಬಂದಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಈ ಬಾರಿ ಸ್ವಾತಂತ್ರ್ಯ ಹೋರಾಟಗಾರ ಟಿ. ಆರ್. ರೇವಣ್ಣ, ಕನ್ನಡದ ಕವಿ ಹಾಗೂ ಚಿಂತಕ ದ್ವಾರನಕುಂಟೆ ಪಾತಣ್ಣ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವಕೀಲ ಎನ್. ಆರ್. ಪ್ರದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಇನ್ನೂ ಅಂತಿಮ ಮಾಹಿತಿ ಲಭ್ಯವಾಗಿಲ್ಲ. ಘಟಿಕೋತ್ಸವಕ್ಕೂ ಮುನ್ನ ಅವರು ನೂತನವಾಗಿ ಸ್ಥಾಪಿತವಾದ ತುಮಕೂರು ಇನ್ನೋವೇಶನ್ ಇನ್ ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್ ಹಾಗೂ ಗೋ ಗ್ರೀನ್ – ಬೈಸಿಕಲ್ ಇನಿಶಿಯೇಟಿವ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಒಟ್ಟು 29 ಲಕ್ಷ ರೂ. ವೆಚ್ಚದಲ್ಲಿ ಘಟಿಕೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ ಒಬ್ಬರಿಗೆ ಡಿ.ಲಿಟ್, 59 ಪಿಎಚ್.ಡಿ ಪದವಿಗಳು, 2,058 ಸ್ನಾತಕೋತ್ತರ ಪದವಿಗಳು ಹಾಗೂ 8,781 ಸ್ನಾತಕ ಪದವಿಗಳು ಪ್ರದಾನವಾಗಲಿದೆ. ಜೊತೆಗೆ 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕುಲಪತಿ ತಿಳಿಸಿದ್ದಾರೆ.

ನಕಲಿ ಸಹಿ ಆರೋಪ: ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಟಿಎಂಸಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನಕಲಿ ಸಹಿ ಆರೋಪದ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ತೃಣಮೂಲ ಕಾಂಗ್ರೆಸ್ ತನ್ನ ಇಬ್ಬರು ಶಾಸಕರಾದ ಸಂದೀಪನ್ ಸಹಾ ಮತ್ತು ಋತಬ್ರತ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಎಂಸಿ ಪ್ರಕಟಿಸಿದೆ. ಪಕ್ಷದ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಅವರು ಸಹಿ ಮಾಡಿರುವ ಅಧಿಕೃತ ಪತ್ರದಲ್ಲಿ, ಇಬ್ಬರು ಶಾಸಕರು ಸಭೆಗಳಿಗೆ ಪದೇಪದೇ ಗೈರಾಗುತ್ತಿದ್ದು, ಪಕ್ಷದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಬೆಳವಣಿಗೆಗೂ ಮುನ್ನ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಬೆಂಬಲ ಸೂಚಿಸುವ ಪತ್ರದಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಇಬ್ಬರು ಶಾಸಕರು ದೂರು ನೀಡಿದ್ದರು ಎಂಬ ಮಾಹಿತಿ ಹೊರಬಿದ್ದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಟಿಎಂಸಿಯೊಳಗೇ ಶಾಸಕರ ಸಹಿ ನಕಲಿ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಘಟನೆಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆಯ ಬಳಿಕ ಟಿಎಂಸಿಯೊಳಗಿನ ಅಸಮಾಧಾನ ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವ ಚರ್ಚೆಗಳ ನಡುವೆ ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಂಡಿದೆ.

ಬುದ್ದಿವಾದ ಹೇಳಿದ್ದೇ ತಪ್ಪಾಯ್ತಾ? ಬಿಯರ್ ಬಾಟಲಿಯಿಂದ ತಿವಿದು ಚಿಕ್ಕಪ್ಪನ ಭೀಕರ ಕೊಲೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ಅಣ್ಣನ ಮಗನಿಂದಲೇ ಚಿಕ್ಕಪ್ಪನನ್ನು ಬಿಯರ್ ಬಾಟಲಿಯಿಂದ ತಿವಿದು ಹತ್ಯೆಗೈದ ಭೀಕರ ಘಟನೆ ನಡೆದಿದೆ.

37 ವರ್ಷದ ಮಧುಸೂದನ್ ಮೃತ ದುರ್ದೈವಿ. ಆರೋಪಿಯಾಗಿರುವ ರಾಹುಲ್ ತನ್ನ ಚಿಕ್ಕಪ್ಪನ ಮೇಲೆ ದಾಳಿ ನಡೆಸಿದವನು ಎಂದು ತಿಳಿದುಬಂದಿದೆ.

ಮೇ 31ರ ರಾತ್ರಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕೆಲಸದ ವಿಚಾರವಾಗಿ ಮಧುಸೂದನ್ ಅವರು ರಾಹುಲ್‌ಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಕಾರ್ಯಕ್ರಮದಿಂದ ಹೊರನಡೆದಿದ್ದಾನೆ ಎಂದು ಹೇಳಲಾಗಿದೆ.

ಕಾರ್ಯಕ್ರಮ ಮುಗಿದ ಬಳಿಕ ಮನೆ ಸಮೀಪ ಮಧುಸೂದನ್ ಮೇಲೆ ರಾಹುಲ್ ಏಕಾಏಕಿ ದಾಳಿ ನಡೆಸಿದ್ದಾನೆ. ಬಿಯರ್ ಬಾಟಲಿಯಿಂದ ಕುತ್ತಿಗೆ ಭಾಗಕ್ಕೆ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರನ್ನು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದನು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜೂನ್ 1 ರಿಂದ 4ರವರೆಗೆ ಒಳನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಒಂದು ಅಥವಾ ಎರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದೇ ರೀತಿ ಜೂನ್ 3 ರಿಂದ 5ರವರೆಗೆ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಲಾಗಿದೆ.

ಈ ಅವಧಿಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸುಮಾರು 64.5 ಮಿ.ಮೀ ರಿಂದ 115.5 ಮಿ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇನ್ನು ಮುಂದಿನ 3 ದಿನಗಳವರೆಗೆ ರಾಜ್ಯದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಒಣ ಹವಾಮಾನ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.

ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವ ಸಾಧ್ಯತೆ ಇದ್ದು, ಗಾಳಿಯ ದಿಕ್ಕಿನ ಬದಲಾವಣೆಯಿಂದ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ.

ಜೂನ್ 1 ರಿಂದ 3ರವರೆಗೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ರಿಂದ 38 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗುವ ಸಾಧ್ಯತೆ ಇದೆ. ಅದೇ ವೇಳೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬೆಳಿಗ್ಗೆ ತಾಪಮಾನ ತುಸು ಕಡಿಮೆಯಾಗಿ 28 ಡಿಗ್ರಿ ಸೆಲ್ಸಿಯಸ್ ರಿಂದ 32 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದೆ.

ಯುವಕರಲ್ಲೂ ಹೆಚ್ಚುತ್ತಿರುವ ಹೈ ಬಿಪಿ: ಪದೇಪದೇ ತಲೆನೋವು ನಿರ್ಲಕ್ಷ್ಯ ಮಾಡಬೇಡಿ!

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ ಸಮಸ್ಯೆ ಯುವಕರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ.

ಅದರಲ್ಲಿಯೂ ಅನೇಕರು ಪದೇಪದೇ ತಲೆನೋವು ಕಾಣಿಸಿಕೊಂಡರೂ ಅದನ್ನು ಸಾಮಾನ್ಯ ದಣಿವು, ಒತ್ತಡ ಅಥವಾ ನಿದ್ರಾಹೀನತೆ ಎಂದು ನಿರ್ಲಕ್ಷಿಸುತ್ತಿದ್ದಾರೆ. ಆದರೆ ವೈದ್ಯರ ಪ್ರಕಾರ, ಇದು ಕೆಲವೊಮ್ಮೆ ದೇಹ ನೀಡುವ ಎಚ್ಚರಿಕೆಯ ಸೂಚನೆಯಾಗಿರಬಹುದು.

ಹೈ ಬಿಪಿ ಮತ್ತು ತಲೆನೋವಿಗೆ ನೇರ ಸಂಬಂಧ ಯಾವಾಗಲೂ ಇರುವುದಿಲ್ಲ. ಮೈಗ್ರೇನ್, ಮಾನಸಿಕ ಒತ್ತಡ, ನೀರಿನ ಕೊರತೆ, ನಿದ್ರೆಯ ಅಭಾವ ಸೇರಿದಂತೆ ಹಲವು ಕಾರಣಗಳಿಂದ ತಲೆನೋವು ಉಂಟಾಗಬಹುದು. ಆದರೆ ರಕ್ತದೊತ್ತಡ ಅತಿಯಾಗಿ ಏರಿದ ಸಂದರ್ಭಗಳಲ್ಲಿ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೇವಲ ತಲೆನೋವಿನ ಆಧಾರದ ಮೇಲೆ ಹೈ ಬಿಪಿ ಇದೆ ಎಂದು ನಿರ್ಧರಿಸುವುದು ಸರಿಯಲ್ಲ.

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಬಿಪಿ ಪರೀಕ್ಷೆ ಮಾಡಿಸಬೇಕು:

  • ಪದೇಪದೇ ತಲೆನೋವು
  • ತಲೆಸುತ್ತು
  • ದೃಷ್ಟಿ ಮಸುಕಾಗುವುದು
  • ಎದೆನೋವು
  • ಉಸಿರಾಟದ ತೊಂದರೆ
  • ಅತಿಯಾದ ದಣಿವು
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು

ಕುಟುಂಬದಲ್ಲಿ ಹೈ ಬಿಪಿ ಇತಿಹಾಸ ಇರುವವರು, ಮಧುಮೇಹ, ಸ್ಥೂಲಕಾಯ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳಿರುವವರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಹೈ ಬಿಪಿಯನ್ನು ನಿಯಂತ್ರಣದಲ್ಲಿ ಇಡುವ ವಿಧಾನಗಳು:

ಆರೋಗ್ಯಕರ ಜೀವನಶೈಲಿ ರೂಡಿಸಿಕೊಳ್ಳುವುದು, ಸಮತೋಲಿತ ಆಹಾರ ಸೇವನೆ, ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು, ದಿನನಿತ್ಯ ವ್ಯಾಯಾಮ, ಸಾಕಷ್ಟು ನಿದ್ರೆ, ಒತ್ತಡ ನಿಯಂತ್ರಣ, ಧೂಮಪಾನ-ಮದ್ಯಪಾನದಿಂದ ದೂರವಿರುವುದು ಮತ್ತು ವೈದ್ಯರ ಸಲಹೆ ಪಾಲಿಸುವುದು ಮುಖ್ಯ.

ಹೈ ಬ್ಲಡ್ ಪ್ರೆಶರ್ ಅನ್ನು “ಸೈಲೆಂಟ್ ಕಿಲ್ಲರ್” ಎಂದು ಕರೆಯಲಾಗುತ್ತದೆ. ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದ ಕಾರಣ, ನಿರ್ಲಕ್ಷ್ಯ ಮಾಡಿದರೆ ಹೃದಯ, ಕಿಡ್ನಿ ಮತ್ತು ಮೆದುಳಿನ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಪದೇಪದೇ ತಲೆನೋವು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಸುಕೇಶ್ ಕೇಸ್‌ನಲ್ಲಿ ಹೊಸ ತಿರುವು! ‘ಬಲಿಪಶು’ ಎಂದ ಜಾಕ್ವೆಲಿನ್‌ಗೆ ಕೋರ್ಟ್‌ನಿಂದ ಭಾರೀ ಹಿನ್ನಡೆ

ನವದೆಹಲಿ: ಹಲವು ವರ್ಷಗಳಿಂದ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದೀಗ ನಿರ್ಣಾಯಕ ಹಂತ ತಲುಪಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ದೆಹಲಿ ನ್ಯಾಯಾಲಯದಿಂದ ದೊಡ್ಡ ಹಿನ್ನಡೆ ಎದುರಾಗಿದೆ.

ಜಾಕ್ವೆಲಿನ್ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ರೂಪಿಸಲು ನ್ಯಾಯಾಲಯ ಆದೇಶ ನೀಡಿದ್ದು, ಜೂನ್ 3ರಂದು ಖುದ್ದಾಗಿ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ನಟಿಯ ಕಾನೂನು ಹೋರಾಟ ಮತ್ತಷ್ಟು ಸಂಕೀರ್ಣವಾಗಿದೆ.

ಪ್ರಕರಣದ ವಿಚಾರಣೆ ವೇಳೆ ತಾನು ಮೋಸಕ್ಕೊಳಗಾದ ವ್ಯಕ್ತಿ, ಬಲಿಪಶು ಮಾತ್ರ ಎಂಬ ವಾದವನ್ನು ಜಾಕ್ವೆಲಿನ್ ಮುಂದಿಟ್ಟಿದ್ದರು. ಆದರೆ ನ್ಯಾಯಾಲಯ ಈ ವಾದವನ್ನು ಒಪ್ಪದೆ, ತನಿಖಾ ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿಗಳು ಅವರ ವಿರುದ್ಧ ಗಂಭೀರ ಅನುಮಾನ ಮೂಡಿಸುತ್ತವೆ ಎಂದು ಸ್ಪಷ್ಟಪಡಿಸಿದೆ.

ಕೋಟ್ಯಂತರ ರೂಪಾಯಿ ಮೌಲ್ಯದ ದುಬಾರಿ ಉಡುಗೊರೆಗಳು, ಕುಟುಂಬ ಸದಸ್ಯರಿಗೆ ಹಣಕಾಸು ನೆರವು ಹಾಗೂ ಐಷಾರಾಮಿ ಕಾರುಗಳನ್ನು ಜಾಕ್ವೆಲಿನ್ ಮತ್ತು ಅವರ ಆಪ್ತರು ಪಡೆದಿರುವ ಆರೋಪ ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ. ಸುಕೇಶ್ ಚಂದ್ರಶೇಖರ್‌ನ ಅಪರಾಧ ಹಿನ್ನೆಲೆ ತಿಳಿದಿದ್ದರೂ ಆತನೊಂದಿಗೆ ಸಂಪರ್ಕ ಮುಂದುವರಿದಿತ್ತು ಎಂಬ ಅಂಶವನ್ನೂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಗೆ ಕೂಡ ತೀವ್ರ ವಿರೋಧ ವ್ಯಕ್ತವಾಗಿತ್ತು. ಮುಖ್ಯ ಆರೋಪಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ವ್ಯಕ್ತಿಗೆ ಅಂತಹ ಸೌಲಭ್ಯ ನೀಡಬಾರದು ಎಂದು ಜಾರಿ ನಿರ್ದೇಶನಾಲಯ ವಾದಿಸಿತ್ತು.

ಜೈಲಿನಲ್ಲಿದ್ದಾಗಲೇ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಕರೆ ಮಾಡಿ ಉದ್ಯಮಿ ಕುಟುಂಬದಿಂದ ₹200 ಕೋಟಿಗೂ ಅಧಿಕ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ, ಇದೀಗ ಜಾಕ್ವೆಲಿನ್ ವಿರುದ್ಧದ ಕಾನೂನು ಹೋರಾಟ ಹೊಸ ತಿರುವು ಪಡೆದುಕೊಂಡಿದೆ.