Home Blog Page 148

ಜಂತುಹುಳು ಮುಕ್ತ ಮಗು ಆರೋಗ್ಯವಂತ ಮಗು: ಡಾ. ಕೆ.ಎಸ್. ಮೀನಾಕ್ಷಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಂತುಹುಳು ಸೋಂಕಿನಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ, ರಕ್ತಹೀನತೆ ಹಾಗೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ೧ರಿಂದ ೧೯ ವರ್ಷದೊಳಗಿನ ಎಲ್ಲ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ಸೇವಿಸುವ ಮೂಲಕ ಸೋಂಕಿನಿಂದ ಮುಕ್ತರಾಗಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ ಹೇಳಿದರು.

ಬೆಟಗೇರಿಯ ಸೇಂಟ್ ಜಾನ್ಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್ ಕಚೇರಿ, ಗದಗ ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೇಂಟ್ ಜಾನ್ಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಂತುಹುಳುಗಳು ಮಕ್ಕಳ ದೇಹದಲ್ಲಿನ ಆಹಾರ ಹಾಗೂ ರಕ್ತದ ಪೌಷ್ಟಿಕಾಂಶವನ್ನು ಹೀರಿಕೊಳ್ಳುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸೋಂಕಿನ ಲಕ್ಷಣಗಳನ್ನು ಅರಿತು, ನಿಗದಿತ ಅವಧಿಯಲ್ಲಿ ಜಂತುಹುಳು ನಿವಾರಣಾ ಮಾತ್ರೆ ಸೇವಿಸುವುದು ಅಗತ್ಯ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಮಾತನಾಡಿ, ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ಶುದ್ಧ ನೀರು ಸೇವಿಸುವುದು ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಜಂತುಹುಳು ಸೋಂಕಿನಿಂದ ದೂರವಿರಬಹುದು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕರುಳಿನ ಜಂತುಹುಳು ಸೋಂಕು ನಿಯಂತ್ರಿಸುವುದು, ರಕ್ತಹೀನತೆ ಹಾಗೂ ಅಪೌಷ್ಟಿಕತೆ ಕಡಿಮೆ ಮಾಡುವುದು ಮತ್ತು ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ನೆರವಾಗುವುದು ಜಂತುಹುಳು ನಿವಾರಣಾ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಸೇಂಟ್ ಜಾನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಫಾದರ್ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯೆ ಮೇರಿ ಮಸ್ಕರೇನಸ್, ಬೆಟಗೇರಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಮತಿ ಪಂಚಮುಖಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಯಿತು.

ಅಂಬೇಡ್ಕರ್, ಗಾಂಧೀಜಿ ಭಾವಚಿತ್ರ ಅಳವಡಿಸದ ಆರೋಪ: ಕ್ರಮಕ್ಕೆ ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಳಗುಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಅಳವಡಿಸಿಲ್ಲ ಎಂದು ಆರೋಪಿಸಿ, ಜೈ ಭೀಮ ರಾಜ್ಯ ಸಂಘರ್ಷ ಸಮಿತಿಯ ಗದಗ ಜಿಲ್ಲಾ ಘಟಕವು ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಸಮಿತಿಯ ಜಿಲ್ಲಾಧ್ಯಕ್ಷ ಗಣೇಶ ವೈ. ಹುಬ್ಬಳ್ಳಿ ಮಾತನಾಡಿ, ಕಾಲೇಜಿನಲ್ಲಿ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಅಳವಡಿಸದಿರುವುದು ಖಂಡನೀಯ. ಈ ಕುರಿತು ಸ್ಥಳೀಯ ದಲಿತ ಯುವ ಮುಖಂಡರು ಎರಡು ತಿಂಗಳ ಹಿಂದೆಯೇ ಕಾಲೇಜಿನ ಪ್ರಭಾರಿ ಪ್ರಾಚಾರ್ಯೆ ಮಂಜುಳಾದೇವಿ ಹಕ್ಕಂಡಿ ಅವರ ಗಮನಕ್ಕೆ ತಂದಿದ್ದರೂ, ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸರ್ಕಾರದ ಆದೇಶದಂತೆ ಸರ್ಕಾರಿ ಶಾಲೆ, ಕಾಲೇಜು ಹಾಗೂ ಕಚೇರಿಗಳಲ್ಲಿ ಮಹನೀಯರ ಭಾವಚಿತ್ರಗಳನ್ನು ಅಳವಡಿಸುವುದು ಅಗತ್ಯವಾಗಿದ್ದರೂ, ಕಾಲೇಜಿನ ಆಡಳಿತದ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು. ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಪ್ರಾಚಾರ್ಯರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೂ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ದಲಿತ ಮುಖಂಡ ಶರೀಫ ಬಿಳೆಯಲಿ, ಡಿಎಸ್‌ಎಸ್ ಮುಖಂಡ ಬಾಲರಾಜ ಅರಬರ, ಛಲವಾದಿ ಮಹಾಸಭಾ ಅಧ್ಯಕ್ಷ ಆನಂದ ಸಿಂಗಾಡಿ, ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಘವೇಂದ್ರ ಪಿ. ಪರಾಪೂರ, ಪ್ರಜಾಶಕ್ತಿ ವೇದಿಕೆ ಅಧ್ಯಕ್ಷ ಮಂಜುನಾಥ ಎಫ್. ತೌಜಲ್, ರೋಣ ತಾಲೂಕು ಅಧ್ಯಕ್ಷ ಬಸವರಾಜ ಬದಾಮಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಲ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಂದ ಚಿತ್ರಕಲಾ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಲ ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಗದಗ ನಗರದ ಸಿ.ಡಿ.ಓ. ಜೈನ್ ಶಾಲೆಯಲ್ಲಿ ನಡೆಯಿತು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿಜಯನಗರ ಶುಗರ್ಸ್ ಪ್ರೈವೇಟ್ ಲಿಮಿಟೆಡ್, ಗಂಗಾಪುರ ಇವರ ಸಂಯುಕ್ತ ಆಶ್ರಯದಲ್ಲಿ ‘ನಮ್ಮ ಭೂಮಿ–ನಮ್ಮ ನೀರು–ನಮ್ಮ ಶಕ್ತಿ’ ಹಾಗೂ ‘ನೀರಿದ್ದರೆ–ನಾಳೆ’ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಜಿಲ್ಲಾ ಅಂತರ್ಜಲ ಕಚೇರಿಯ ಭೂವಿಜ್ಞಾನಿ ಪ್ರವೀಣ ಕರಬಸಣ್ಣವರ ಸ್ವಾಗತಿಸಿದರು. ಭೂವಿಜ್ಞಾನಿ ಮಲ್ಲಪ್ಪ ಕಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಗೆ ಜಲ ಪ್ರತಿಜ್ಞೆ ಬೋಧಿಸಲಾಯಿತು.

ಹಿರಿಯ ಭೂವಿಜ್ಞಾನಿ ಸಂತೋಷ ಪ್ಯಾಟಿಗಾಣಿಗೇರ ಅವರು ನೀರಿನ ಮಹತ್ವ ಹಾಗೂ ಪ್ರಸ್ತುತ ಜಲ ಪರಿಸ್ಥಿತಿ ಕುರಿತು ಮಾತನಾಡಿದರು.

ವಿಜಯನಗರ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ಶಂಕರಗೌಡ್ರ ಅವರು ನೀರಿನ ಅಗತ್ಯತೆ ಹಾಗೂ ಸದ್ಬಳಕೆಯ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಗೀತಾ ಕುಲಕರ್ಣಿ ಅವರು ನೀರು ಸಂರಕ್ಷಣೆ, ಸದ್ಬಳಕೆ ಹಾಗೂ ಮಳೆನೀರು ಸಂಗ್ರಹಣೆಯ ಮಹತ್ವವನ್ನು ವಿವರಿಸಿದರು.

ನಂತರ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆಯ ಕುರಿತು ಚಿತ್ರಗಳನ್ನು ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ಪ್ರಶಂಸಾಪತ್ರ ನೀಡಿ ಅಭಿನಂದಿಸಲಾಯಿತು.

ತಿರುಮಲರೆಡ್ಡಿ, ಟಿ.ಆರ್. ಬೇವಿನಮರದ, ಎನ್.ಎಂ. ಚಿತ್ರಗಾರ, ಎಚ್.ಎಸ್. ಬ್ಯಾಳಿ, ಮಲ್ಲಪ್ಪ ಕಲ್ಲಾಪೂರ, ಪ್ರವೀಣ ಕರಬಸಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಶೋಭಾ ಹುಲಿ ನಿರೂಪಿಸಿದರು. ಪ್ರವೀಣ ಕರಬಸಣ್ಣವರ ವಂದಿಸಿದರು.

“ನೀರಿನ ಸಂರಕ್ಷಣೆ ಇಂದಿನ ಅಗತ್ಯ ಮಾತ್ರವಲ್ಲ; ಮುಂದಿನ ಪೀಳಿಗೆಯ ಬದುಕಿನ ಭದ್ರತೆಗೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.”

— ಸಂತೋಷ ಪ್ಯಾಟಿಗಾಣಿಗೇರ, ಹಿರಿಯ ಭೂವಿಜ್ಞಾನಿ

Exclusive: ಜೈಲಲ್ಲೂ ಪ್ರಜ್ವಲ್ ಕರ್ಮಕಾಂಡ? ಮೊಬೈಲ್‌ನಲ್ಲಿ 90ಕ್ಕೂ ಹೆಚ್ಚು ಅಶ್ಲೀಲ ವೀಡಿಯೊ ಪತ್ತೆ! ಜನರಲ್ ಸೆಲ್‌ಗೆ ಮಾಜಿ ಸಂಸದ ಶಿಫ್ಟ್

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಫೋನ್‌ನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ 90ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಪತ್ತೆಯಾಗಿವೆ.

ಮೊಬೈಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಅಶ್ಲೀಲ ವೀಡಿಯೊಗಳು ಡೌನ್‌ಲೋಡ್ ಆಗಿದ್ದವು ಎನ್ನಲಾಗಿದ್ದು, ಸದ್ಯ ಅಧಿಕಾರಿಗಳು ಮೊಬೈಲ್‌ನಲ್ಲಿರುವ ಸಂಪೂರ್ಣ ಡೇಟಾವನ್ನು ಪರಿಶೀಲಿಸುತ್ತಿದ್ದಾರೆ.

ಮೊಬೈಲ್ ಸೀಜ್ ಬಳಿಕ ಪ್ರಜ್ವಲ್ ಎತ್ತಂಗಡಿ:

ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಜೈಲು ಆಡಳಿತ ಮಹತ್ವದ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈವರೆಗೆ VIP ಸೆಲ್ ಅಥವಾ VIP ಬ್ಯಾರಕ್‌ನಲ್ಲಿ ಇರಿಸಲಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಇದೀಗ ಸಾಮಾನ್ಯ ಕೈದಿಗಳಿರುವ ಜನರಲ್ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು 20 ಮಂದಿ ಕೈದಿಗಳು ಇರುವ ಬ್ಯಾರಕ್‌ಗೆ ಪ್ರಜ್ವಲ್ ಅವರನ್ನು ಶಿಫ್ಟ್ ಮಾಡಲಾಗಿದೆ ಎನ್ನಲಾಗಿದ್ದು, ಶಿಕ್ಷೆಗೆ ಗುರಿಯಾಗಿರುವ ಕೈದಿಗಳೂ ಈ ಬ್ಯಾರಕ್‌ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಜನರಲ್ ಬ್ಯಾರಕ್‌ನಲ್ಲಿ ಕೈದಿಗಳು ಸಾಮಾನ್ಯ ಸೌಲಭ್ಯಗಳನ್ನು ಹಂಚಿಕೊಳ್ಳಬೇಕಿದ್ದು, ಸುಮಾರು 20 ಮಂದಿ ಕೈದಿಗಳಿಗೆ ಒಂದೇ ಶೌಚಾಲಯದ ವ್ಯವಸ್ಥೆ ಇದೆ ಎನ್ನಲಾಗಿದೆ. ಹೀಗಾಗಿ VIP ಸೌಲಭ್ಯದಿಂದ ಹೊರಬಂದು ಸಾಮಾನ್ಯ ಕೈದಿಗಳೊಂದಿಗೆ ಒಂದೇ ಬ್ಯಾರಕ್‌ನಲ್ಲಿ ಇರುವ ಪರಿಸ್ಥಿತಿ ಪ್ರಜ್ವಲ್‌ಗೆ ಎದುರಾಗಿದೆ ಎನ್ನಲಾಗಿದೆ.

ಯೂನಿಫಾರ್ಮ್ ಧರಿಸಿ ಲೈಬ್ರರಿ ಕೆಲಸ?

ಜೈಲಿನ ನಿಯಮಾವಳಿಯಂತೆ ಪ್ರಜ್ವಲ್ ರೇವಣ್ಣ ಅವರಿಗೆ ಕಡ್ಡಾಯ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಜೈಲಿನ ಲೈಬ್ರರಿ ವಿಭಾಗದಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಕಾರಾಗೃಹ ನಿಯಮಗಳಡಿ ಕೈದಿಗಳಿಗೆ ವಹಿಸುವ ಕೆಲಸದ ಭಾಗವಾಗಿ ಲೈಬ್ರರಿ ಕೆಲಸ ನೀಡಲಾಗಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಅವರು ಜೈಲಿನ ಸಮವಸ್ತ್ರದಲ್ಲೇ ಈ ಕೆಲಸ ನಿರ್ವಹಿಸಬೇಕಾಗಬಹುದು.

ಮೊಬೈಲ್ ಸೀಜ್ ಮಾಡುವಾಗ ಮನವಿ?

ಮೊಬೈಲ್ ಫೋನ್‌ನ್ನು ಅಧಿಕಾರಿಗಳು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರು ತಪ್ಪಾಗಿದೆ, ಮೊಬೈಲ್‌ನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಅಧಿಕಾರಿಗಳು ಯಾವುದೇ ಮನವಿಗೆ ಮಣಿಯದೆ ಮೊಬೈಲ್‌ನ್ನು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.

ಮೊಬೈಲ್ ಜೈಲಿನೊಳಗೆ ಹೇಗೆ ಬಂದಿತು? ಅದನ್ನು ಪ್ರಜ್ವಲ್‌ಗೆ ಯಾರು ನೀಡಿದರು? ಮೊಬೈಲ್ ಬಳಕೆಗೆ ಯಾರಾದರೂ ನೆರವು ನೀಡಿದ್ದರೇ? ಎಂಬ ಹಲವು ಪ್ರಶ್ನೆಗಳು ಇದೀಗ ಎದ್ದಿವೆ. ಈ ಎಲ್ಲಾ ಅಂಶಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದೆ.

ಮೊಬೈಲ್‌ನಲ್ಲಿರುವ ಡೇಟಾ ಪರಿಶೀಲನೆ:

ಮೊಬೈಲ್‌ನಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ 90ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳ ಜೊತೆಗೆ ಇತರ ಡಿಜಿಟಲ್ ಡೇಟಾವನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ ಎನ್ನಲಾಗಿದೆ. ವೀಡಿಯೊಗಳು ಯಾವಾಗ ಡೌನ್‌ಲೋಡ್ ಆಗಿವೆ, ಅವುಗಳ ಮೂಲವೇನು ಮತ್ತು ಮೊಬೈಲ್ ಅನ್ನು ಎಷ್ಟು ಸಮಯ ಬಳಸಲಾಗಿದೆ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸುವ ಸಾಧ್ಯತೆಯಿದೆ.

ಇದಲ್ಲದೆ, ಅರೆಬರೆ ಬಟ್ಟೆ ಧರಿಸಿರುವ ಯುವತಿಯರ ಚಿತ್ರಗಳಿರುವ ಪತ್ರಿಕೆಗಳ ಕಟಿಂಗ್ಸ್‌ಗಳನ್ನು ಪ್ರಜ್ವಲ್ ಬಳಿ ಇಟ್ಟುಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ, ಜೈಲಿನೊಳಗೆ ಮೊಬೈಲ್ ಫೋನ್ ಪತ್ತೆಯಾಗಿರುವುದು ಮತ್ತು ಅದರಲ್ಲಿ ಅಶ್ಲೀಲ ವೀಡಿಯೊಗಳಿವೆ ಎಂಬ ಆರೋಪ ಹೊಸ ಚರ್ಚೆಗೆ ಕಾರಣವಾಗಿದೆ. ಮೊಬೈಲ್‌ನಲ್ಲಿರುವ ಡೇಟಾದ ಸಂಪೂರ್ಣ ಪರಿಶೀಲನೆ ಹಾಗೂ ಅಧಿಕಾರಿಗಳ ಅಧಿಕೃತ ತನಿಖಾ ವರದಿ ಹೊರಬಂದ ಬಳಿಕವಷ್ಟೇ ಈ ಆರೋಪಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಕಾವೇರಿ ಕಿಚ್ಚಿಗೆ ಕರ್ನಾಟಕ ಬಂದ್: ನಾಳೆ ಯಾವ ಸೇವೆ ಲಭ್ಯ? ಯಾವುದು ಸ್ಥಗಿತ? ಇಲ್ಲಿದೆ ವಿವರ

0

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.

ಆದರೆ, ಬಂದ್‌ಗೆ ಆರಂಭದಲ್ಲಿ ಬೆಂಬಲ ಘೋಷಿಸಿದ್ದ ಕೆಲವು ಸಂಘಟನೆಗಳು ಇದೀಗ ತಮ್ಮ ಬೆಂಬಲವನ್ನು ಹಿಂಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಬಂದ್‌ನ ಪರಿಣಾಮದ ಬಗ್ಗೆ ಕುತೂಹಲ ಮೂಡಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಬೇಕು ಎಂದು ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ರೈತ ಸಂಘಟನೆಗಳನ್ನು ಹೊರತುಪಡಿಸಿ ಪ್ರಮುಖ ಸಂಘಟನೆಗಳಿಂದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿಲ್ಲ.

ಇತ್ತೀಚೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಜಲಾಶಯಗಳ ಒಳಹರಿವಿನಲ್ಲೂ ಏರಿಕೆಯಾಗಿದೆ. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ಹಿತದ ಪರವಾಗಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುವುದು ಕೂಡ ಕೆಲವು ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿಯಲು ಕಾರಣವಾಗಿದೆ ಎನ್ನಲಾಗಿದೆ.

ನಾಳೆ ಶಾಲಾ-ಕಾಲೇಜುಗಳು ಬಂದ್ ಆಗುತ್ತವೆಯೇ?

ಬಂದ್‌ಗೆ ಖಾಸಗಿ ಶಾಲಾ ಸಂಘಟನೆಗಳು ನೇರ ಬೆಂಬಲ ನೀಡಿಲ್ಲ. ಕ್ಯಾಮ್ಸ್ ಹಾಗೂ ರುಪ್ಸಾ ಸೇರಿದಂತೆ ಖಾಸಗಿ ಶಾಲಾ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿವೆ. ಹೀಗಾಗಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಸಾರಿಗೆ ಸೇವೆ ಇರಲಿದೆಯೇ?

KSRTC, BMTC ಬಸ್‌ಗಳು ಎಂದಿನಂತೆ ಸಂಚರಿಸುವ ಸಾಧ್ಯತೆ ಇದೆ. ನಮ್ಮ ಮೆಟ್ರೋ, ರೈಲು ಸೇವೆಗಳು, ಆಟೋ ರಿಕ್ಷಾ ಹಾಗೂ ಕ್ಯಾಬ್ ಸೇವೆಗಳೂ ಯಥಾಸ್ಥಿತಿಯಲ್ಲಿ ಇರಲಿವೆ ಎಂದು ಸಂಘಟನೆಗಳ ನಿಲುವಿನಿಂದ ತಿಳಿದುಬಂದಿದೆ.

ಆಸ್ಪತ್ರೆ, ಮೆಡಿಕಲ್‌ ಶಾಪ್‌ಗಳು ಓಪನ್:

ಆರೋಗ್ಯ ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗುವ ಸಾಧ್ಯತೆ ಇಲ್ಲ. ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.

ಅಂಗಡಿ-ಮುಂಗಟ್ಟುಗಳು ತೆರೆಯಲಿವೆ:

ದಿನಸಿ ಅಂಗಡಿಗಳು, ಹಾಲಿನ ಮಳಿಗೆಗಳು, ತರಕಾರಿ ಮಾರುಕಟ್ಟೆಗಳು, ಬೇಕರಿಗಳು, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರವೂ ಎಂದಿನಂತೆ ನಡೆಯುವ ನಿರೀಕ್ಷೆಯಿದೆ.

ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕೆಗಳು ಹಾಗೂ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯಲ್ಲೂ ಯಾವುದೇ ದೊಡ್ಡ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಬಂದ್‌ಗೆ ಯಾರ ಬೆಂಬಲ?

ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಸೇರಿದಂತೆ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ರೈತ ಸಂಘಟನೆಗಳೂ ಬಂದ್‌ಗೆ ಬೆಂಬಲ ನೀಡಿವೆ.

ಇನ್ನು ಕೆಲವು ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಮಾತ್ರ ಘೋಷಿಸಿವೆ. ಖಾಸಗಿ ಬಸ್ ಸಂಘಟನೆಗಳು, ಕ್ಯಾಮ್ಸ್, ರುಪ್ಸಾ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.

ಬಂದ್‌ಗೆ ಯಾರ ಬೆಂಬಲ ಇಲ್ಲ?

ಕರವೇಯ ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣ ಹಾಗೂ ನಾರಾಯಣಗೌಡ ಬಣ ಸೇರಿದಂತೆ ಕೆಲವು ಪ್ರಮುಖ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿಲ್ಲ. BMTC, KSRTC, ಆಟೋ ಹಾಗೂ ಕ್ಯಾಬ್ ಸಂಘಟನೆಗಳಿಂದಲೂ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ.

ವಾಟಾಳ್ ನಾಗರಾಜ್ ಅಸಮಾಧಾನ:

ಬಂದ್‌ಗೆ ಆರಂಭದಲ್ಲಿ ಬೆಂಬಲ ಘೋಷಿಸಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಸಂಘಟನೆಗಳ ವಿರುದ್ಧ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಬಂದ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದವರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. “9 ತಿಂಗಳ ಗರ್ಭಿಣಿ ಕೊನೆಯ ಕ್ಷಣದಲ್ಲಿ ಹೆರಿಗೆ ಬೇಡ ಎನ್ನುವಂತಾಗಿದೆ” ಎಂದು ವ್ಯಂಗ್ಯವಾಡಿದರು.

ತಾನು ಈಗಾಗಲೇ 53 ಬಂದ್‌ಗಳನ್ನು ಮಾಡಿದ್ದೇನೆ ಎಂದು ಹೇಳಿದ ವಾಟಾಳ್, ಕರ್ನಾಟಕ ಬಂದ್ ಯಾರೊಬ್ಬರ ಕೈಯಲ್ಲೂ ಇಲ್ಲ. ಬಂದ್‌ಗೆ ಕೈಕೊಟ್ಟವರೊಂದಿಗೆ ಮತ್ತೆ ಸಂಬಂಧ ಬೆಳೆಸುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.

ಹೋಟೆಲ್ ಮಾಲೀಕರು ಆರಂಭದಲ್ಲಿ ಬಂದ್‌ಗೆ ಬೆಂಬಲ ನೀಡುವುದಾಗಿ ಹೇಳಿ ಇದೀಗ ನೈತಿಕ ಬೆಂಬಲಕ್ಕೆ ಸೀಮಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ವಿಚಾರವಾಗಿಯೂ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜನಜೀವನದ ಮೇಲೆ ಪರಿಣಾಮ ಎಷ್ಟಿರಲಿದೆ?

ಪ್ರಮುಖ ಸಾರಿಗೆ, ಶಿಕ್ಷಣ, ಆರೋಗ್ಯ ಹಾಗೂ ವಾಣಿಜ್ಯ ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡದಿರುವ ಹಿನ್ನೆಲೆಯಲ್ಲಿ ಆಗಸ್ಟ್ 13ರ ಕರ್ನಾಟಕ ಬಂದ್‌ನ ಪರಿಣಾಮ ಸೀಮಿತವಾಗಿರುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಬಹುತೇಕ ಕಡೆ ಜನಜೀವನ ಹಾಗೂ ವ್ಯಾಪಾರ-ವಹಿವಾಟುಗಳು ಎಂದಿನಂತೆ ನಡೆಯುವ ನಿರೀಕ್ಷೆಯಿದೆ.

ಆದಾಗ್ಯೂ, ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ಪ್ರತಿಭಟನೆ, ಮೆರವಣಿಗೆ ಅಥವಾ ರಸ್ತೆ ತಡೆ ನಡೆಸುವ ಸಾಧ್ಯತೆ ಇರುವುದರಿಂದ ಪ್ರಮುಖ ನಗರಗಳು ಹಾಗೂ ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು.

19 ತಿಂಗಳ ಬಳಿಕ ಸಿಕ್ಕಿಬಿದ್ದ ATM ದರೋಡೆಕೋರರು; ಬಿಹಾರದಲ್ಲಿ ಇಬ್ಬರ ಬಂಧನ!

0

ಬೀದರ್: ಬೀದರ್ ನಗರದಲ್ಲಿ 2025ರ ಜನವರಿ 16ರಂದು ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ.

ಬರೋಬ್ಬರಿ 19 ತಿಂಗಳ ಬಳಿಕ ಬೀದರ್ ಪೊಲೀಸರು ಬಿಹಾರದಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಲೋಕ್ ಹಾಗೂ ಅಮನ್ ಎಂದು ಗುರುತಿಸಲಾಗಿದೆ.

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ ಸುಮಾರು 50 ಸಿಬ್ಬಂದಿಯನ್ನು ಒಳಗೊಂಡ ವಿಶೇಷ ಪೊಲೀಸ್ ತಂಡ ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳನ್ನು ಬೀದರ್‌ಗೆ ಕರೆತರಲಾಗುತ್ತಿದೆ.

ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಬೀದರ್ ನಗರದ ಜನರು ಪಟಾಕಿ ಸಿಡಿಸಿ ಪೊಲೀಸರ ಕಾರ್ಯಾಚರಣೆಯನ್ನು ಸ್ವಾಗತಿಸಿ ಸಂಭ್ರಮಿಸಿದರು.

2025ರ ಜನವರಿ 16ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಬೀದರ್‌ನ ಶಿವಾಜಿ ವೃತ್ತದ ಬಳಿ ಇರುವ ಎಸ್‌ಬಿಐ ಎಟಿಎಂಗೆ ನಗದು ತುಂಬಿಸಲು ಸಿಬ್ಬಂದಿ ವಾಹನದಲ್ಲಿ ಆಗಮಿಸಿದ್ದರು. ಈ ವೇಳೆ ಪಿಸ್ತೂಲ್ ಹಿಡಿದು ಬಂದಿದ್ದ ದುಷ್ಕರ್ಮಿಗಳು ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು ₹83 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದರು.

ದರೋಡೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಬೀದರ್ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ ಗಾಯಗೊಂಡಿದ್ದರು. ಹಾಡಹಗಲೇ ನಡೆದಿದ್ದ ಈ ಘಟನೆ ರಾಜ್ಯಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಪೊಲೀಸರ ತನಿಖೆಯಲ್ಲಿ ದರೋಡೆಕೋರರು ಕೃತ್ಯಕ್ಕೂ ಮುನ್ನವೇ ಸಂಪೂರ್ಣ ಸಂಚು ರೂಪಿಸಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿತ್ತು. ದರೋಡೆಗೆ ಎರಡು ದಿನ ಮುನ್ನವೇ ಆರೋಪಿಗಳು ಬೀದರ್‌ನಲ್ಲಿ ತಂಗಿದ್ದರು. ಹಣ ದೋಚಿದ ಬಳಿಕ ಯಾವ ಮಾರ್ಗದಲ್ಲಿ ಪರಾರಿಯಾಗಬೇಕು ಎಂಬುದನ್ನೂ ಮೊದಲೇ ಯೋಜಿಸಿಕೊಂಡಿದ್ದರು ಎನ್ನಲಾಗಿದೆ.

ಸುದೀರ್ಘ ತನಿಖೆ ಹಾಗೂ ಕಾರ್ಯಾಚರಣೆಯ ಬಳಿಕ ಇದೀಗ ಬಿಹಾರದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

ಕಾವೇರಿ ನೀರು ವಿಚಾರ: ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ರಾಜ್ಯದ ಮುಂದಿನ ನಡೆ – ರಾಮಲಿಂಗಾರೆಡ್ಡಿ

0

ಬೆಂಗಳೂರು: ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್‌ ನೀರನ್ನು 15 ದಿನಗಳ ಕಾಲ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ವಿರುದ್ಧ ತಮಿಳುನಾಡು ಸಲ್ಲಿಸಿರುವ ಅರ್ಜಿ ಕುರಿತು ಸುಪ್ರೀಂಕೋರ್ಟ್‌ ನೀಡುವ ತೀರ್ಪನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಕೂಡ ರಾಜ್ಯದ ವಕೀಲರೊಂದಿಗೆ ಮಾತುಕತೆ ನಡೆಸಿದ್ದಾರೆ. ಸದ್ಯ 15 ದಿನಗಳ ಕಾಲ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಸರ್ಕಾರ ತನ್ನ ಆಕ್ಷೇಪಣೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಿದೆ. ರಾಜ್ಯದ ಪರ ವಕೀಲರು ಹಾಗೂ ತಜ್ಞರು ವಿಚಾರಣೆಗೆ ಸಿದ್ಧರಾಗಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 3,500 ಕ್ಯೂಸೆಕ್‌ ನೀರು ಹರಿಸುವಂತೆ ಶಿಫಾರಸು ಮಾಡಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನೀರಿನ ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರಲಿಲ್ಲ. ಆದರೆ, ಪ್ರಸ್ತುತ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಮಲೆನಾಡು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಇದರಿಂದ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ ತಮಿಳುನಾಡಿನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿಗೆ ಹಿಂಗಾರು ಮಳೆಯಾಗುವ ಹಿನ್ನೆಲೆಯಲ್ಲಿ ನೀರಿನ ಲಭ್ಯತೆ ಉತ್ತಮವಾಗಿದೆ ಎಂದು ಸಚಿವರು ವಿವರಿಸಿದರು.

ಕಾವೇರಿ ನೀರಿನ ವಿಚಾರವಾಗಿ ಕರೆ ನೀಡಿರುವ ಕರ್ನಾಟಕ ಬಂದ್‌ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ನೆಲ-ಜಲದ ವಿಚಾರ ಬಂದಾಗ ಇಂತಹ ಹೋರಾಟಗಳು ನಡೆಯುವುದು ಸಹಜ. ರೈತರ ಆಕ್ರೋಶವೂ ಸಹಜವಾಗಿದೆ ಎಂದರು.

ಅಲ್ಪ ಪ್ರಮಾಣದ ನೀರು ಹರಿಸುವಂತೆ ಸೂಚಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು. ರಾಜ್ಯದ ಜಲ ಪರಿಸ್ಥಿತಿಯನ್ನೂ ಪರಿಗಣಿಸಬೇಕು ಎಂದು ಸಚಿವರು ಹೇಳಿದರು.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ನಡೆಸುವಂತೆ ಸೂಚಿಸಿದ್ದು ತಾನೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೈಲಿನಲ್ಲಿ ದಾಳಿ ನಡೆಸಬೇಕಾದರೆ ಗೃಹ ಇಲಾಖೆಯ ಅನುಮತಿ ಅಗತ್ಯವಿದೆ. ಎರಡು ವಾರಗಳ ಹಿಂದೆ ತಾವು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಲೋಪಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಅನುಮತಿ ಪಡೆದು ಸಿಸಿಬಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಅಕ್ರಮಗಳಿಗೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಿರುವುದಾಗಿ ಸಚಿವರು ಹೇಳಿದರು.

ಪರಪ್ಪನ ಅಗ್ರಹಾರ ಮಾತ್ರವಲ್ಲದೆ ರಾಜ್ಯದ ಎಲ್ಲ ಕಾರಾಗೃಹಗಳಲ್ಲೂ ಇಂತಹ ದಿಢೀರ್ ಕಾರ್ಯಾಚರಣೆಗಳನ್ನು ನಡೆಸಲಾಗುವುದು. ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ನಿರಂತರ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕೆಲವು ಅಧಿಕಾರಿಗಳು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳನ್ನು ಅಮಾನತು ಮಾಡುವುದು ಅಥವಾ ಸೇವೆಯಿಂದ ವಜಾಗೊಳಿಸುವುದಕ್ಕೆ ನಿರ್ದಿಷ್ಟ ಮಾನದಂಡಗಳಿದ್ದು, ಅದರಂತೆ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಜೈಲಿನಲ್ಲಿ ಜಾಮರ್ ವ್ಯವಸ್ಥೆ ಇದ್ದರೂ ಕೆಲವು ಪ್ರದೇಶಗಳಲ್ಲಿ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಡಿಜಿಟಲ್ ವ್ಯವಸ್ಥೆಯ ಆಡಿಟ್ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಜೈಲಿನಲ್ಲಿ ಯಾರಿಗೂ ವಿಐಪಿ ಸೌಲಭ್ಯ ನೀಡಬಾರದು. ದಾಳಿಯಲ್ಲಿ ಪತ್ತೆಯಾದ ವಸ್ತುಗಳ ಕುರಿತು ಸದ್ಯ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಮಹಜರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು ಮತ್ತು ಇದಕ್ಕೆ ಯಾರ ಸಹಕಾರವಿತ್ತು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಯಲಿದೆ ಎಂದರು.

ಸಚಿವ ಬಿ. ನಾಗೇಂದ್ರ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದ ನಾಯಕರ ವಿರುದ್ಧದ ಆರೋಪಗಳಿಗೆ ಉತ್ತರಿಸಬೇಕು ಎಂದು ತಿರುಗೇಟು ನೀಡಿದರು.

ವಿಜಯೇಂದ್ರ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಮೊದಲು ಅವರು ಯತ್ನಾಳ್ ಅವರ ಹೇಳಿಕೆಗಳ ಬಗ್ಗೆ ಗಮನ ಹರಿಸಲಿ ಎಂದು ಹೇಳಿದರು. ಬಿಜೆಪಿ ನಾಯಕರು ನೈತಿಕತೆಯ ಬಗ್ಗೆ ಮಾತನಾಡುವ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ಕುರಿತು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಹಲವು ಶಾಸಕರ ವಿರುದ್ಧವೂ ವಿವಿಧ ಪ್ರಕರಣಗಳಿವೆ ಎಂದು ಆರೋಪಿಸಿದ ಅವರು, ಇತರರತ್ತ ಬೆರಳು ತೋರಿಸುವ ಮೊದಲು ತಮ್ಮ ಪಕ್ಷದ ನಾಯಕರ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಸ್ವಯಂ ಪರಿಶೀಲನೆ ನಡೆಸಿಕೊಳ್ಳಲಿ ಎಂದು ಹೇಳಿದರು.

ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯಂತಹ ತನಿಖಾ ಸಂಸ್ಥೆಗಳು ಆರೋಪ ಮಾಡಿವೆ ಎಂಬ ಕಾರಣಕ್ಕೆ ಮಾತ್ರ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲು ಸಾಧ್ಯವಿಲ್ಲ. ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಆರೋಪಗಳನ್ನು ಮಾಡುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ದೀರ್ಘಕಾಲದ ಗೆಳತಿ ಜಾರ್ಜಿನಾ ಕೈಹಿಡಿದ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ!

0

ಲಿಸ್ಬನ್: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್‌ನ ಲಿಸ್ಬನ್ ಸಮೀಪದ ಐಷಾರಾಮಿ ಕರಾವಳಿ ಪಟ್ಟಣ ಕ್ಯಾಸ್ಕೈಸ್‌ನಲ್ಲಿ ಆಗಸ್ಟ್ 11, 2026ರಂದು ಈ ಜೋಡಿಯ ವಿವಾಹ ನೆರವೇರಿದೆ.

ಯಾವುದೇ ಅದ್ಧೂರಿ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡದೆ ರೊನಾಲ್ಡೊ ಹಾಗೂ ಜಾರ್ಜಿನಾ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ರೊನಾಲ್ಡೊ ಅವರ ಐದು ಮಕ್ಕಳು ಹಾಗೂ ಆಪ್ತ ಕುಟುಂಬ ಸದಸ್ಯರು ಮಾತ್ರ ಉಪಸ್ಥಿತರಿದ್ದರು.

ವಿವಾಹದ ಬಳಿಕ ರೊನಾಲ್ಡೊ ಹಾಗೂ ಜಾರ್ಜಿನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ವಿವಾಹದ ಉಂಗುರಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ “C❤️G” ಎಂಬ ಸರಳ ಶೀರ್ಷಿಕೆಯ ಮೂಲಕ ತಮ್ಮ ವಿವಾಹದ ಸುದ್ದಿಯನ್ನು ಅಭಿಮಾನಿಗಳಿಗೆ ಖಚಿತಪಡಿಸಿದ್ದಾರೆ.

ನಿಶ್ಚಿತಾರ್ಥದ ಒಂದು ವರ್ಷದ ಬಳಿಕ ವಿವಾಹ

ಜಾರ್ಜಿನಾ ರೋಡ್ರಿಗಸ್ ಅವರು 2025ರ ಆಗಸ್ಟ್ 11ರಂದು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ, 2026ರ ಆಗಸ್ಟ್ 11ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿವಾಹ ಸಮಾರಂಭದಲ್ಲಿ ರೊನಾಲ್ಡೊ ಅವರ ಐದು ಮಕ್ಕಳು ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಕ್ರಿಸ್ಟಿಯಾನೊ ಜೂನಿಯರ್ (16), ಅವಳಿ ಮಕ್ಕಳಾದ ಇವಾ ಮಾರಿಯಾ ಹಾಗೂ ಮಾಟಿಯೊ (9), ಅಲಾನಾ ಮಾರ್ಟಿನಾ (8) ಮತ್ತು ಬೆಲ್ಲಾ ಎಸ್ಮೆರಾಲ್ಡಾ (4) ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

₹41 ಕೋಟಿಗೂ ಅಧಿಕ ಮೌಲ್ಯದ ಉಂಗುರ?

ರೊನಾಲ್ಡೊ ಹಾಗೂ ಜಾರ್ಜಿನಾ ಅವರ ನಿಶ್ಚಿತಾರ್ಥದ ಸಂದರ್ಭದಲ್ಲೇ ಜಾರ್ಜಿನಾ ಅವರ ಕೈಯಲ್ಲಿದ್ದ ವಜ್ರದ ಉಂಗುರ ಭಾರಿ ಗಮನ ಸೆಳೆದಿತ್ತು. ವರದಿಗಳ ಪ್ರಕಾರ, ಈ ಉಂಗುರದ ಅಂದಾಜು ಮೌಲ್ಯ ಸುಮಾರು 5 ಮಿಲಿಯನ್ ಡಾಲರ್ ಆಗಿದ್ದು, ಭಾರತೀಯ ಕರೆನ್ಸಿಯಲ್ಲಿ ₹41 ಕೋಟಿಗೂ ಅಧಿಕವಾಗುತ್ತದೆ ಎಂದು ಹೇಳಲಾಗಿದೆ.

ಸುಳ್ಳು ಮದುವೆ ಸುದ್ದಿಗಳಿಗೆ ತೆರೆ

ರೊನಾಲ್ಡೊ-ಜಾರ್ಜಿನಾ ವಿವಾಹದ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದವು. ವಿಶೇಷವಾಗಿ ಎಐ ಸೃಷ್ಟಿಸಿದ ನಕಲಿ ಫೋಟೋಗಳು ಹಾಗೂ ವಿವಾಹಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ರೊನಾಲ್ಡೊ ಅವರು ಮಡೈರಾದ ಫಂಚಲ್ ಕ್ಯಾಥೆಡ್ರಲ್‌ನಲ್ಲಿ ಸುಮಾರು 12 ಮಿಲಿಯನ್ ಡಾಲರ್ ವೆಚ್ಚದಲ್ಲಿ ಅದ್ಧೂರಿ ವಿವಾಹ ಮಾಡಿಕೊಳ್ಳಲಿದ್ದಾರೆ ಎಂಬ ವರದಿಗಳೂ ಹರಿದಾಡಿದ್ದವು. ಈ ಸುದ್ದಿಯನ್ನು ನಂಬಿ ಆಗಸ್ಟ್ 8ರಂದು ನೂರಾರು ಅಭಿಮಾನಿಗಳು ಚರ್ಚ್ ಬಳಿ ಜಮಾಯಿಸಿದ್ದರು. ಆದರೆ ಅಲ್ಲಿ ರೊನಾಲ್ಡೊ ಅವರ ವಿವಾಹ ನಡೆಯದೆ, ಮತ್ತೊಂದು ಜೋಡಿಯ ವಿವಾಹ ಸಮಾರಂಭ ನಡೆದಿತ್ತು.

ಇದರ ಜತೆಗೆ ಫುಟ್‌ಬಾಲ್ ದಿಗ್ಗಜರಾದ ಲಿಯೋನೆಲ್ ಮೆಸ್ಸಿ ಹಾಗೂ ಕೈಲಿಯನ್ ಎಂಬಾಪೆ ಅವರು ರೊನಾಲ್ಡೊ-ಜಾರ್ಜಿನಾ ವಿವಾಹಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು.

ಆದರೆ ಇದೀಗ ಕ್ಯಾಸ್ಕೈಸ್‌ನಲ್ಲಿ ಆಪ್ತ ಕುಟುಂಬದ ಸದಸ್ಯರು ಹಾಗೂ ಐದು ಮಕ್ಕಳ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗುವ ಮೂಲಕ ರೊನಾಲ್ಡೊ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೊ ಅವರ ವಿವಾಹದ ಸುದ್ದಿ ಇದೀಗ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಭುಜದ ಗಾಯಕ್ಕೆ ಶಸ್ತ್ರಚಿಕಿತ್ಸೆ; ಜೂನಿಯರ್ ಎನ್‌ಟಿಆರ್‌ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್

ಭುಜದ ಗಾಯದಿಂದ ಬಳಲುತ್ತಿದ್ದ ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರಿಗೆ ಇಂದು (ಆಗಸ್ಟ್ 12) ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಚಿಕಿತ್ಸೆ ಅಗತ್ಯವೆಂದು ವೈದ್ಯರು ಸೂಚಿಸಿದ್ದು, ಈ ಕುರಿತು ಎನ್‌ಟಿಆರ್ ತಂಡ ಅಧಿಕೃತ ಪ್ರಕಟಣೆ ಹೊರಡಿಸಿದೆ.

ವೈದ್ಯರ ಸಲಹೆಯಂತೆ ಎನ್‌ಟಿಆರ್ ಅವರ ಭುಜದ ಶಸ್ತ್ರಚಿಕಿತ್ಸೆ ನಿಗದಿಯಾಗಿದ್ದು, ಚಿಕಿತ್ಸೆ ಬಳಿಕ ಅವರ ಆರೋಗ್ಯದ ಮೇಲೆ ತಜ್ಞ ವೈದ್ಯರ ತಂಡ ನಿರಂತರ ನಿಗಾ ವಹಿಸಲಿದೆ.

“ಎನ್‌ಟಿಆರ್ ಅವರು ಶೀಘ್ರವಾಗಿ ಗುಣಮುಖರಾಗಲು ವೈದ್ಯರು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, ಚೇತರಿಕೆಯ ಅವಧಿಯಲ್ಲಿ ಎನ್‌ಟಿಆರ್ ಅವರ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ತಂಡ ಮನವಿ ಮಾಡಿದೆ.

ಸದ್ಯ ಜೂನಿಯರ್ ಎನ್‌ಟಿಆರ್ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾ ಹಾಗೂ ‘ದೇವರ: ಪಾರ್ಟ್ 2’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಯ ಕಾರಣದಿಂದ ಕೆಲವು ದಿನಗಳ ಕಾಲ ಶೂಟಿಂಗ್‌ಗೆ ವಿರಾಮ ನೀಡಲಾಗುವ ಸಾಧ್ಯತೆ ಇದೆ.