Home Blog Page 15

ಶ್ರೀ ಶಿವಶಾಂತವೀರ ಶರಣರ ತುಲಾಭಾರ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಬಳೂಟಿಗಿ ಹಿರೇಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಮಹಾತ್ಮರ ಜೀವನ ದರ್ಶನ, ಪ್ರವಚನ ಜರುಗಿತು.

ಇದೇ ಸಂದರ್ಭದಲ್ಲಿ ದಾಟನಾಳ ಗ್ರಾಮದ ಹಾಗೂ ಬಳಗಾನೂರಿನ ಶಾಂಭವಿ ಅಕ್ಕನ ಬಳಗ ಹಾಗೂ ಚನ್ನವೀರ ಶರಣರ ಭೀಮಾಂಬಿಕಾ ಸೇವಾ ಸಮಿತಿ ಹಳೆ ಮಸೂತಿ ಬಡಾವಣೆಯ ಸಮಸ್ತ ಸದ್ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು.

ಉತ್ತಮ ಫಸಲಿಗೆ ಮಣ್ಣು ಪರೀಕ್ಷೆ ಅಗತ್ಯ: ಚೇತನಾ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರೈತರು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಅದರಿಂದ ಗೊಬ್ಬರ ತಯಾರಿಸಿ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಬಾಸಲಾಪೂರ ಗ್ರಾಮದ ಬಳಿ ಶಿವಯೋಗಿ ನಡುವಿನಮನಿ ಇವರ ಜಮೀನಿನಲ್ಲಿ ಹಿಂಗಾರು ಹಂಗಾಮಿನ ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಿನ ಕಾಲಘಟ್ಟದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಹೆಚ್ಚಾಗಿದ್ದು, ಇದು ಸಮಂಜಸವಲ್ಲ. ಬದಲಾಗಿ ರೈತರು ಸಾವಯವ ಗೊಬ್ಬರ ಬಳಕೆಯತ್ತ ಮುಖ ಮಾಡಬೇಕು. ಮನೆಗಳಲ್ಲಿ ಜಾನುವಾರುಗಳ ಸಾಕಾಣಿಕೆ ಮಾಡಬೇಕು. ಇದರಿಂದ ಕುಟುಂಬ ನಿರ್ವಹಣೆ ಜೊತೆಗೆ ಜಮೀನುಗಳಿಗೆ ಗೊಬ್ಬರ ಸಹ ಸಿಗುತ್ತದೆ. ಅಲ್ಲದೆ ಬೇವಿನ ಮರದ ಎಲೆಗಳಿಂದ ಕ್ರಿಮಿನಾಶಕ ಔಷಧಿಗಳನ್ನು ತಯಾರಿಸಬಹುದು. ಕೃಷಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ ಹಾಗೆ ಪತ್ರಿ ಕಾಯಿಗಳಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಸಾವಯವ ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ತಗಲುವ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದರು.

ಕೃಷಿ ಸಂಪನ್ಮೂಲ ವ್ಯಕ್ತಿ ಸುರೇಶಗೌಡ ಪಾಟೀಲ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದು ಭೂಮಿಗೆ ವಿಷ ಹಾಕಿದಂತೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ರುಚಿಕಟ್ಟಾದ ಧಾನ್ಯಗಳನ್ನು ಬೆಳೆಯಲು ಅಸಾಧ್ಯ. ಅಲ್ಲದೆ ಭೂಮಿಯ ಸತ್ವ ಕೂಡ ಬರಡಾಗುತ್ತದೆ. ಇದರಿಂದ ಮನುಷ್ಯನಿಗೂ ಅನೇಕ ರೋಗಗಳು ತಗಲಬಹುದು ಎಂದು ಎಚ್ಚರಿಸಿದ ಅವರು, ಸಾವಯವ ಗೊಬ್ಬರದತ್ತ ರೈತರು ಮುಖ ಮಾಡಬೇಕು ಎಂದರು.

ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬೆಳೆಯುವ ಬೆಳೆಗಳು ಬಾಳಿಕೆ ಬರುವುದಿಲ್ಲ. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯೂ ಸಿಗುವುದಿಲ್ಲ ಎಂಬ ಸತ್ಯವನ್ನು ಮೊದಲು ರೈತರು ತಿಳಿಯುವುದು ಅವಶ್ಯಕವಾಗಿದೆ. ಉತ್ತಮ ಮತ್ತು ಪೌಷ್ಠಿಕತೆಯಿರುವ ಬೆಳೆಗಳು ಬರಲು ಸಾವಯವ ಗೊಬ್ಬರದಿಂದ ಮಾತ್ರ ಸಾಧ್ಯ. ಹೀಗಾಗಿ, ತಮ್ಮ ಜಮೀನುಗಳಲ್ಲಿಯೇ ಸಿಗುವ ಕಸ ಕಡ್ಡಿಗಳಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡಬಹುದು. ಅಗತ್ಯ ಮಾಹಿತಿ ಬೇಕಿದ್ದಲ್ಲಿ ಹುಲಕೋಟಿ ಗ್ರಾಮದಲ್ಲಿರುವ ನಮ್ಮ ಜಮೀನುಗಳನ್ನು ನೋಡಬಹುದು ಎಂದರು.

ಇದೇ ಸಂದರ್ಭದಲ್ಲಿ ಜಮೀನಿನ ಮಾಲಕರಾದ ಶಿವಯೋಗಿ ನಡುವಿನಮನಿ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಅಂದಪ್ಪ ಗಡಗಿ, ಮೇಘರಾಜ ಭಾವಿ, ಎಸ್.ಎಫ್. ತಹಸೀಲ್ದಾರ, ಪ್ರಮೋದ ಕುಲಕರ್ಣಿ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳು ಮತ್ತು ರೈತರು ಉಪಸ್ಥಿತರಿದ್ದರು.

ರೈತರು ತಮ್ಮ ಜಮೀನುಗಳಲ್ಲಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕಾರಣ ಯಾವ ಮಣ್ಣಿನಲ್ಲಿ ಎಷ್ಟು ಸತ್ವಯುತ ಅಂಶಗಳಿವೆ ಎನ್ನುವುದು ಮಣ್ಣು ಪರೀಕ್ಷೆಯಿಂದ ತಿಳಿಯುತ್ತದೆ ಹಾಗೂ ಈ ಮಣ್ಣಿನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂಬ ನಿಖರತೆಯನ್ನು ತಿಳಿಯಲು ಸಹಾಯವಾಗುತ್ತದೆ. ಇದರಿಂದ ರೈತರಿಗೂ ಲಾಭವಾಗಲಿದೆ. ಮುಖ್ಯವಾಗಿ ಮಹಿಳೆಯರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಬೇಕು. ಕುಟುಂಬಕ್ಕೆ ಬೇಕಾದ ವಸ್ತುಗಳನ್ನು ಜಮೀನುಗಳಲ್ಲಿ ಬೆಳೆಯುವ ಆಸಕ್ತಿಯನ್ನು ಇಟ್ಟುಕೊಳ್ಳಬೇಕು ಎಂದು ಚೇತನಾ ಪಾಟೀಲ ತಿಳಿಸಿದರು.

ಕೆಆರ್ ಪುರಂನಲ್ಲಿ ಹಿಟ್ ಅಂಡ್ ರನ್: ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

0

ಬೆಂಗಳೂರು: ಹಿಟ್ ಅಂಡ್ ರನ್ ಅಪಘಾತದಲ್ಲಿ ಡೆಲಿವರಿ ಬಾಯ್ ಒಬ್ಬರು ಸಾವನ್ನಪ್ಪಿರುವ ದುರ್ಘಟನೆ ಕೆಆರ್ ಪುರಂನ ಭಟ್ಟರಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ನೇಪಾಳ ಮೂಲದ ಸುರೇಂದರ್ ಬಹದ್ದೂರ್ (38) ಎಂದು ಗುರುತಿಸಲಾಗಿದೆ. ಸುರೇಂದರ್ ಕಳೆದ ಮೂರು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.

ಇಂದು ಬೆಳಗ್ಗೆ ಸುಮಾರು 3:30ರ ವೇಳೆಗೆ, ಸುರೇಂದರ್ ಡೆಲಿವರಿ ನೀಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ವೇಗವಾಗಿ ಬಂದ ಕಾರೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಡಿಕ್ಕಿಯ ತೀವ್ರತೆಯಿಂದ ಸುರೇಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಹಿಟ್ ಅಂಡ್ ರನ್ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

PUC ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

0

ಬೆಂಗಳೂರು: ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರ್ ಟಿ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಕಾನ್ಸ್‌ಟೇಬಲ್ ಫ್ರೀಡಂ ಪಾರ್ಕ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವೇಳೆ, ಪ್ರಥಮ ಪಿಯುಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ದೂರು ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಆರೋಪಿತ ಕಾನ್ಸ್‌ಟೇಬಲ್ ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ಪೊಲೀಸ್ ಇಲಾಖೆಯ ವಲಯದಲ್ಲೇ ತೀವ್ರ ಚರ್ಚೆಗೆ ಕಾರಣವಾಗಿದೆ.

ಚಾಮರಾಜನಗರ: ಫಾಸ್ಟ್ ಫುಡ್ ಅಂಗಡಿಗೆ ಆಕಸ್ಮಿಕ ಬೆಂಕಿ; ಮಾಲೀಕನಿಗೆ ಗಂಭೀರ ಗಾಯ

0

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿ ಗ್ರಾಮದಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಂಗಡಿ ಮಾಲೀಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ತೊಂಡವಾಡಿ ಗ್ರಾಮದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಮಣಿಕಂಠ ಎಂಬುವವರು ಇಂದು ಮಧ್ಯಾಹ್ನ ಗೋಬಿ ಸೇರಿದಂತೆ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತೀವ್ರವಾಗುತ್ತಿದ್ದಂತೆ ಅಂಗಡಿಯಲ್ಲಿ ಅವಘಡ ಸಂಭವಿಸಿದ್ದು,

ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಬೆಂಕಿ ಅನಾಹುತದಿಂದ ಆಹಾರ ಪದಾರ್ಥಗಳು, ಬಟ್ಟೆಬರೆಗಳು ಹಾಗೂ ಧವಸಧಾನ್ಯಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ.ಘಟನೆಯಲ್ಲಿ ಅಂಗಡಿ ಮಾಲೀಕ ಮಣಿಕಂಠನ ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.

Republic Day 2026: ಈ ಬಾರಿ ಕೇವಲ ಮೆರವಣಿಗೆಯಲ್ಲ, ಕಣ್ಣೆದುರು ಮೂಡಲಿದೆ ಯುದ್ಧಭೂಮಿ!

0

ನವದೆಹಲಿ: ಈ ಬಾರಿ ಗಣರಾಜ್ಯೋತ್ಸವವನ್ನು ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಸಾಂಪ್ರದಾಯಿಕ ಮಿಲಿಟರಿ ಮೆರವಣಿಗೆಯಷ್ಟೇ ಅಲ್ಲದೆ, ನೈಜ ಯುದ್ಧಭೂಮಿಯನ್ನು ನೆನಪಿಸುವ ದೃಶ್ಯಾವಳಿ ಕರ್ತವ್ಯ ಪಥದಲ್ಲಿ ಮೂಡಿಬರಲಿದೆ.

ಸ್ವಾತಂತ್ರ್ಯ ಹೋರಾಟದಿಂದ ಆರಂಭಿಸಿ ಸ್ವಾವಲಂಬಿ ಭಾರತವರೆಗೆ ದೇಶ ಕೈಗೊಂಡಿರುವ ಮಹತ್ವದ ಹೆಜ್ಜೆಗಳು ಮೆರವಣಿಗೆಯ ಮೂಲಕ ಜನರ ಕಣ್ಣಮುಂದೆ ಅನಾವರಣಗೊಳ್ಳಲಿವೆ. ಕಲಾವಿದರು ತಮ್ಮ ಪ್ರದರ್ಶನಗಳಿಗೆ ಅಂತಿಮ ಪೂರ್ವಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಗಣರಾಜ್ಯೋತ್ಸವ ಮೆರವಣಿಗೆಯ ಪ್ರಮುಖ ಥೀಮ್ ‘ವಂದೇ ಮಾತರಂ’ ಆಗಿದೆ. ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ದೇಶ ಸಾಧಿಸಿರುವ ಆರ್ಥಿಕ ಅಭಿವೃದ್ಧಿ, ವಿಜ್ಞಾನ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸಲಿವೆ. ಕಲಾವಿದರು ಅಭಿವೃದ್ಧಿ ಹೊಂದಿದ ಭಾರತದ ರೂಪುಗಳನ್ನು ಜೀವಂತವಾಗಿ ಮೂಡಿಸಲಿದ್ದಾರೆ.

77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರ್ತವ್ಯ ಪಥವನ್ನು ವಿಶೇಷವಾಗಿ ಅಲಂಕರಿಸಲಾಗುತ್ತಿದ್ದು, ಪೂರ್ಣ ಡ್ರೆಸ್ ರಿಹರ್ಸಲ್ ನಡೆಯುತ್ತಿದೆ. ಈ ಬಾರಿ ಮೆರವಣಿಗೆ ಕೇವಲ ಆಚರಣೆಯಲ್ಲದೆ, ಶಕ್ತಿ ಪ್ರದರ್ಶನವೂ ಆಗಲಿದೆ.

ಈ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಯುದ್ಧಭೂಮಿಯಲ್ಲಿ ಬಳಸುವ ತಂತ್ರಗಳು ಹಾಗೂ ಸೇನಾ ಕಾರ್ಯಾಚರಣೆಗಳ ದೃಶ್ಯಾವಳಿಯನ್ನು ಪ್ರದರ್ಶಿಸಲಾಗುತ್ತದೆ. ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಷನ್ ಸಿಂಧೂರ್’ ನಂತರ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವವಾಗಿರುವುದರಿಂದ, ಭಾರತೀಯ ಸೇನೆ ನೈಜ ಯುದ್ಧಭೂಮಿ ಅನುಭವವನ್ನು ಪ್ರತಿಬಿಂಬಿಸಲು ಅಭ್ಯಾಸ ನಡೆಸುತ್ತಿದೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಪ್ರಗತಿ ಮತ್ತು ದೇಶಭಕ್ತಿಯ ಮನೋಭಾವ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅದ್ಭುತ ಪಥಸಂಚಲನ ದೇಶದ ಶಿಸ್ತು ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಪ್ರತಿಬಿಂಬಿಸಲಿದೆ.

ಕಾಂಗ್ರೆಸ್ ದುರಾಡಳಿತ ಮೇರೆ ಮೀರಿದೆ: ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು: ಕಾಂಗ್ರೆಸ್ ದುರಾಡಳಿತ ಮೇರೆ ಮೀರಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಎಂದರೆ ಕಮಿಷನ್, ಕರಪ್ಶನ್, ಲೂಟಿ, ದುಂಡಾವರ್ತಿ ಎಂದು ಮಾತನಾಡುತ್ತಿದ್ದೆವು. ಕಾಂಗ್ರೆಸ್ ಇದೀಗ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಅಧಿಕಾರವೊಂದಿದ್ದರೆ ಸಾಕು; ಏನು ಬೇಕಾದರೂ ಮಾಡಬಹುದು; ಹೇಗೆ ಬೇಕಾದರೂ ಮೆರೆಯಬಹುದು ಎಂಬ ದುರ್ನಡತೆಯನ್ನು ಮೈಗೂಡಿಸಿಕೊಂಡಂತೆ ಕಾಣುತ್ತಿದೆ ಎಂದು ಟೀಕಿಸಿದರು.

ಹೊರದೇಶದಿಂದ ಪ್ರವಾಸಕ್ಕಾಗಿ ಬಂದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇದೊಂದು ದೊಡ್ಡ ವಿಷಯವಾಗಿತ್ತು. ಇದು ಕೇವಲ ರಾಷ್ಟ್ರೀಯ ವಿಚಾರವಲ್ಲ; ಅಂತರರಾಷ್ಟ್ರೀಯ ವಿಚಾರ. ಇದನ್ನು ಗೌರವಾನ್ವಿತ ಎಂಪಿ (ಸಂಸದ) ರಾಜಶೇಖರ ಹಿಟ್ನಾಳ್ ಅವರು ಎಷ್ಟು ಕೇವಲವಾಗಿ ಹೇಳಿದ್ದಾರೆಂದರೆ, ಅದೊಂದು ಸಣ್ಣ (ಮೈನರ್) ಘಟನೆಯಂತೆ. ಈ ಕಾಂಗ್ರೆಸ್ಸಿನ ಸಂಸ್ಕøತಿ ಎಂಥದ್ದೆಂದು ಗೊತ್ತಾಯಿತಲ್ಲವೇ? ಎಂದು ಪ್ರಶ್ನಿಸಿದರು.

ಇಷ್ಟೊಂದು ನೀಚತನಕ್ಕೆ ಅಧಿಕಾರ ನಡೆಸುವವರು ಇಳಿದರೆ ಏನೆನ್ನಬೇಕು? ಒಬ್ಬರು ಮಹಿಳೆಯ ಮೇಲೆ ಆಗಿರುವ ಅತ್ಯಾಚಾರವನ್ನೇ ನಾವು ಖಂಡಿಸಬೇಕು. ಅದು ಸಣ್ಣ ವಿಷಯ ಎಂದು ಯಾರೂ ಭಾವಿಸಬಾರದು. ಅದರಲ್ಲೂ ಅವರನ್ನು ಕೊಲೆ ಮಾಡಿದ ಘಟನೆ; ಎಷ್ಟೊಂದು ನೀಚತನದಿಂದ ಕಾಂಗ್ರೆಸ್ಸಿನವರು ಈ ಮಾತುಗಳನ್ನು ಆಡಿದ್ದಾರೆಂದರೆ, ಅವರ ನೀಚತನಕ್ಕೆ ಜನರು ಉತ್ತರ ಕೊಡಬೇಕಿದೆ; ಬುದ್ಧಿ ಕಲಿಸುವ ಕೆಲಸ ಮಾಡಲೇಬೇಕಾಗಿದೆ ಎಂದು ಮನವಿ ಮಾಡಿದರು.

ಇವತ್ತು ಕರ್ನಾಟಕವೇ ದೇಶದ ಮುಂದೆ ತಲೆತಗ್ಗಿಸುವ ಕೆಲಸವನ್ನು ರಾಜಶೇಖರ ಹಿಟ್ನಾಳ್ ಅವರು ಮಾಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಬೇಕು. ಕರ್ನಾಟಕದ ಗೌರವ ಹರಾಜಾಗಿದೆ; ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಅವರನ್ನು ಉಚ್ಚಾಟಿಸಿದರೆ ನಿಮ್ಮ ಪಕ್ಷ ಮಹಿಳೆಯರಿಗೆ ಗೌರವ ಕೊಡುತ್ತದೆ; ಇಂಥ ವಿಷಯದಲ್ಲಿ ಗಂಭೀರತೆ ಹೊಂದಿದೆ ಎಂದು ತಿಳಿಸಬಹುದು. ಇಲ್ಲವಾದರೆ, ನಿಮ್ಮ ಯೋಗ್ಯತೆ ಅಷ್ಟೇ ಎಂಬುದನ್ನು ನಾವು ಹೇಳಲೇಬೇಕಾಗುತ್ತದೆ ಎಂದು ನುಡಿದರು.

 ಸೈಬರ್ ಸೆಂಟರ್ ಮಾಲೀಕನಿಂದ ಮಹಿಳೆ ಮೇಲೆ ದರ್ಪ; ಅವಾಚ್ಯ ಶಬ್ದಗಳಿಂದ ನಿಂದನೆ – ಆರೋಪಿ ಅರೆಸ್ಟ್!

0

ಬೆಂಗಳೂರು: ಕೆಲಸ ಬಿಟ್ಟು ಹೋಗುವುದಾಗಿ ಹೇಳಿದ್ದಕ್ಕೆ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಡು ರಸ್ತೆಯಲ್ಲೇ ಹಲ್ಲೆ ಮಾಡುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ ಸೈಬರ್ ಸೆಂಟರ್ ಮಾಲೀಕನನ್ನು ಕೆಂಗೇರಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕೆಂಗೇರಿಯಲ್ಲಿರುವ ಮುಸ್ಕಾನ್ ಟೈಮ್ಸ್ ಸೈಬರ್ ಸೆಂಟರ್‌ನ ಮಾಲೀಕ ಸೈಯದ್ ಎಂಬಾತನೇ ಆರೋಪಿಯಾಗಿದ್ದು, ಕಳೆದ ಐದು ವರ್ಷಗಳಿಂದ ಅದೇ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಎಂಬ ಯುವತಿಗೆ ಈ ರೀತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಲಕ್ಷ್ಮಿ ಅವರು ಕಾರಣಾಂತರಗಳಿಂದ ಕೆಲ ದಿನಗಳ ಕಾಲ ರಜೆ ಪಡೆದಿದ್ದರು. ಇದರಿಂದ ಕೋಪಗೊಂಡ ಮಾಲೀಕ ಸೈಯದ್, ಜನವರಿ 22ರಂದು ಸಂಜೆ ಸುಮಾರು 7.30ರ ಸುಮಾರಿಗೆ ನಡು ರಸ್ತೆಯಲ್ಲೇ ಲಕ್ಷ್ಮಿ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ರೋಡ್‌ನಲ್ಲೇ ಕತ್ತರಿಸಿ ಹಾಕ್ತೀನಿ”, “ಬಟ್ಟೆ ಬಿಚ್ಚಿ ಹೊಡಿತೀನಿ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಮಾಲೀಕನ ಅಸಭ್ಯ ವರ್ತನೆ ಗಮನಿಸಿದ ಸ್ಥಳೀಯರು ತಕ್ಷಣ ಪ್ರಶ್ನೆ ಮಾಡಿದ್ದು, ಸರಿಯಾಗಿ ಮಾತನಾಡುವಂತೆ ಎಚ್ಚರಿಸಿದ್ದಾರೆ. ಬಳಿಕ ಸ್ಥಳೀಯರು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿ ಸೈಯದ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆ ಬಳಿಕ ಸ್ಟೇಷನ್ ಬೆಲ್ ಮೇಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Lokayukta Raid: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ FDA.!

0

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಸತೀಶ್ ರಾಠೋಡ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಭೂ ದಾಖಲೆ ಸಂಬಂಧಿತ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟು, ಫೋನ್‌ಪೇ ಮೂಲಕ ₹10,000 ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚ ನೀಡಿದವರು ಜೇವರ್ಗಿ ತಾಲ್ಲೂಕಿನ ಶಿವಕುಮಾರ್ ಹೆಗಡೆ ಎನ್ನಲಾಗಿದೆ.

ಶಿವಕುಮಾರ್ ಹೆಗಡೆ ಅವರ ಜಮೀನಿನ ಪಹಣಿಯಲ್ಲಿ ‘ಸರ್ಕಾರಿ ಜಮೀನು’ ಎಂದು ನಮೂದಾಗಿದ್ದ ದಾಖಲೆಯನ್ನು ತೆಗೆಯಲು ಎಫ್‌ಡಿಎ ಸತೀಶ್ ರಾಠೋಡ್ ಲಂಚ ಕೇಳಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ನಾನ್‌ ವೆಜ್, ಚಿಕನ್ ಪ್ರಿಯರಿಗೆ ಶಾಕ್: ಕೋಳಿ ಮಾಂಸದ ಬೆಲೆ ಭಾರೀ ಏರಿಕೆ

0

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ನಾನ್‌ವೆಜ್ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ದಿನನಿತ್ಯದ ಆಹಾರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಳಿ ಮಾಂಸದ ಬೆಲೆ ಏಕಾಏಕಿ ಗಗನಕ್ಕೇರಿದ್ದು, ವಿಶೇಷವಾಗಿ ವಿದೌಟ್ ಸ್ಕಿನ್ ಚಿಕನ್ ಸೇವಿಸುವ ಗ್ರಾಹಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿಗೆ 260ರಿಂದ 280 ರೂಗಳ ನಡುವೆ ಲಭ್ಯವಿದ್ದ ಕೋಳಿ ಮಾಂಸ, ಇದೀಗ 340ರಿಂದ 350 ರೂಗಳ ಗಡಿ ದಾಟಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 370–380 ರೂವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚಿನ ಬೆಲೆ ನೀಡಬೇಕು ಎಂದು ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ.

ಇದೇ ವೇಳೆ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಕೊರತೆ ಉಂಟಾಗಿ, ಬೆಲೆ ಏರಿಕೆಗೆ ಕಾರಣವಾಗಿದೆ.

error: Content is protected !!