Home Blog Page 16

Lokayukta Raid: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ FDA.!

0

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಸತೀಶ್ ರಾಠೋಡ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಭೂ ದಾಖಲೆ ಸಂಬಂಧಿತ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟು, ಫೋನ್‌ಪೇ ಮೂಲಕ ₹10,000 ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚ ನೀಡಿದವರು ಜೇವರ್ಗಿ ತಾಲ್ಲೂಕಿನ ಶಿವಕುಮಾರ್ ಹೆಗಡೆ ಎನ್ನಲಾಗಿದೆ.

ಶಿವಕುಮಾರ್ ಹೆಗಡೆ ಅವರ ಜಮೀನಿನ ಪಹಣಿಯಲ್ಲಿ ‘ಸರ್ಕಾರಿ ಜಮೀನು’ ಎಂದು ನಮೂದಾಗಿದ್ದ ದಾಖಲೆಯನ್ನು ತೆಗೆಯಲು ಎಫ್‌ಡಿಎ ಸತೀಶ್ ರಾಠೋಡ್ ಲಂಚ ಕೇಳಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ನಾನ್‌ ವೆಜ್, ಚಿಕನ್ ಪ್ರಿಯರಿಗೆ ಶಾಕ್: ಕೋಳಿ ಮಾಂಸದ ಬೆಲೆ ಭಾರೀ ಏರಿಕೆ

0

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ನಾನ್‌ವೆಜ್ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ದಿನನಿತ್ಯದ ಆಹಾರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಳಿ ಮಾಂಸದ ಬೆಲೆ ಏಕಾಏಕಿ ಗಗನಕ್ಕೇರಿದ್ದು, ವಿಶೇಷವಾಗಿ ವಿದೌಟ್ ಸ್ಕಿನ್ ಚಿಕನ್ ಸೇವಿಸುವ ಗ್ರಾಹಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿಗೆ 260ರಿಂದ 280 ರೂಗಳ ನಡುವೆ ಲಭ್ಯವಿದ್ದ ಕೋಳಿ ಮಾಂಸ, ಇದೀಗ 340ರಿಂದ 350 ರೂಗಳ ಗಡಿ ದಾಟಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 370–380 ರೂವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚಿನ ಬೆಲೆ ನೀಡಬೇಕು ಎಂದು ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ.

ಇದೇ ವೇಳೆ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಕೊರತೆ ಉಂಟಾಗಿ, ಬೆಲೆ ಏರಿಕೆಗೆ ಕಾರಣವಾಗಿದೆ.

ಬಾಂಗ್ಲಾ ಅಕ್ರಮ ವಲಸಿಗರ ಪತ್ತೆ ಬಳಿಕ ಪೊಲೀಸರಿಂದ ಕಿರುಕುಳ ಆರೋಪ: ವಿಧಾನಸೌಧ ಎದುರೇ ಆತ್ಮಹತ್ಯೆ ಯತ್ನ

0

ಬೆಂಗಳೂರು: ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಪತ್ತೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಕ್ಕೆ ಪೊಲೀಸರೇ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡಾ. ನಾಗೇಂದ್ರಪ್ಪ ಎಂಬವರು ವಿಧಾನಸೌಧದ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಘಟನೆ ವೇಳೆ ಸ್ಥಳದಲ್ಲಿದ್ದ ವಿಧಾನಸೌಧ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಪಂದಿಸಿ, ವಿಷದ ಬಾಟಲಿಯನ್ನು ಕಿತ್ತುಕೊಂಡು ಡಾ. ನಾಗೇಂದ್ರಪ್ಪ ಅವರನ್ನು ತುರ್ತುವಾಗಿ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ, ಡಾ. ನಾಗೇಂದ್ರಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಡಾ. ನಾಗೇಂದ್ರಪ್ಪ ಹಾಗೂ ಪುನೀತ್ ಕೆರೆಹಳ್ಳಿ ಅವರು ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶ ಮೂಲದ ವಲಸಿಗರನ್ನು ಪತ್ತೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಆದರೆ ಈ ಹಿನ್ನಲೆಯಲ್ಲಿ ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಾಗಿದ್ದು, ನಂತರ ಸೂಲದೇವನಹಳ್ಳಿ ಪೊಲೀಸರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರ ಕಿರುಕುಳದಿಂದ ಮನನೊಂದ ಡಾ. ನಾಗೇಂದ್ರಪ್ಪ ಅವರು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಚಾರ್ಮಾಡಿ ಘಾಟ್‌ನಲ್ಲಿ ಭಾರಿ ಅವಾಂತರ: ಮೂರು ಲಾರಿಗಳು ಪಲ್ಟಿ, ಡೀಸೆಲ್ ಸೋರಿಕೆ, ಸಂಚಾರ ಅಸ್ತವ್ಯಸ್ತ

0

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಇಂದು ಒಂದರ ಮೇಲೊಂದು ಮೂರು ರಸ್ತೆ ಅಪಘಾತಗಳು ಸಂಭವಿಸಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಇರುವ ಚಾರ್ಮಾಡಿ ಘಾಟ್‌ನಲ್ಲಿ ಲಾರಿಗಳು ಪಲ್ಟಿಯಾದ ಪರಿಣಾಮ ಸುಮಾರು 10 ಕಿಲೋಮೀಟರ್‌ಗೂ ಅಧಿಕ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ.

ಚಿಕ್ಕಮಗಳೂರು–ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಸಾವಿರಾರು ವಾಹನಗಳು ಪ್ರತಿದಿನ ಇಲ್ಲಿ ಸಂಚರಿಸುತ್ತವೆ. ಆದರೆ ಘಾಟ್‌ನ ತಿರುವುಗಳು ಮತ್ತು ಇಳಿಜಾರಿನ ಹಿನ್ನೆಲೆ ಅಪಘಾತಗಳು ನಿರಂತರವಾಗುತ್ತಲೇ ಇವೆ. ಇಂದು ನಡೆದ ಮೂರು ಅಪಘಾತಗಳು ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುಸಿತಗೊಳಿಸಿವೆ.

ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಲಿ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿಯಾಗಿದೆ. ರಸ್ತೆ ಪಕ್ಕದ ತಡೆಗೋಡೆ ಇಲ್ಲದಿದ್ದರೆ ಲಾರಿ ಪ್ರಪಾತಕ್ಕೆ ಬೀಳುವ ಅಪಾಯ ಇತ್ತು. ಚಾಲಕನಿಗೆ ಸಣ್ಣ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲಾರಿಯಿಂದ ಡೀಸೆಲ್ ಹಾಗೂ ಆಯಿಲ್ ರಸ್ತೆಗೆ ಹರಿದಿದ್ದು, ಒಂದು ವೇಳೆ ಬೆಂಕಿ ಹೊತ್ತಿಕೊಂಡಿದ್ದರೆ ಲಾರಿ ಮಾತ್ರವಲ್ಲದೆ ಸುತ್ತಲಿನ ಅರಣ್ಯ ಪ್ರದೇಶವೂ ಹೊತ್ತಿ ಉರಿಯುವ ಭೀತಿ ಇತ್ತು. ಅದೃಷ್ಟವಶಾತ್ ಲಾರಿಯಲ್ಲಿ ಖಾಲಿ ಸಿಲಿಂಡರ್‌ಗಳೇ ಇದ್ದುದರಿಂದ ದೊಡ್ಡ ದುರಂತ ತಪ್ಪಿದೆ.

ಇದಕ್ಕೂ ಮುನ್ನ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಲಾರಿ ಪಲ್ಟಿಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಮತ್ತೊಂದು ಲಾರಿ ಕೂಡ ತಿರುವಿನಲ್ಲಿ ಪಲ್ಟಿಯಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವಾಹನಗಳ ಉದ್ದ ಸಾಲು ನಿರ್ಮಾಣವಾಗಿದೆ.

ಪರಿಸ್ಥಿತಿ ನಿಯಂತ್ರಣಕ್ಕಾಗಿ ಬಣಕಲ್ ಪೊಲೀಸರು ಕೊಟ್ಟಿಗೆಹಾರ ಬಳಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ವಾಹನಗಳ ನಿಯಂತ್ರಣ, ಜನರ ಸುರಕ್ಷತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಪೌರಾಯುಕ್ತೆಗೆ ಬೆದರಿಕೆ: 10 ದಿನಗಳಿಂದ ರಾಜೀವ್ ಗೌಡ ಪರಾರಿ , ಪೊಲೀಸರಿಂದ ತೀವ್ರ ಶೋಧ

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ. ಆರೋಪಿಯಾಗಿರುವ ರಾಜೀವ್ ಗೌಡ ಬಂಧನ ಭೀತಿಯಿಂದ ಪರಾರಿಯಾಗಿ ಈಗಾಗಲೇ 10 ದಿನಗಳು ಕಳೆದಿದ್ದು, ಅವರನ್ನು ಬಂಧಿಸಲು ಪೊಲೀಸರು ಭಾರೀ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪೊಲೀಸರು ಹಗಲು–ರಾತ್ರಿ ಶೋಧ ಕಾರ್ಯ ಮುಂದುವರೆಸಿದ್ದು, ಶುಕ್ರವಾರ ರಾತ್ರಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಬೆಂಗಳೂರಿನ ಸಂಜಯ್ ನಗರದಲ್ಲಿರುವ ರಾಜೀವ್ ಗೌಡ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಕೂಡ ಆರೋಪಿಯ ಸುಳಿವು ಲಭಿಸಿಲ್ಲ.

ಇನ್ನು ರಾಜೀವ್ ಗೌಡ ವಿದೇಶಕ್ಕೆ ಪರಾರಿಯಾಗುವ ಆತಂಕ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಮೇಲೆ ಕೂಡ ಪೊಲೀಸರು ನಿಗಾ ವಹಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಈ ನಡುವೆ ಇಂದು ನ್ಯಾಯಾಲಯದಲ್ಲಿ ರಾಜೀವ್ ಗೌಡ ಬೇಲ್ ಅರ್ಜಿ ವಿಚಾರಣೆ ನಡೆಯಲಿದ್ದು, ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಮತ್ತೊಂದು ಬೆಳವಣಿಗೆಯಲ್ಲಿ, ಪೌರಾಯುಕ್ತೆ ಅಮೃತಗೌಡ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿರುವ ಪತ್ರ ನಗರಸಭೆ ಕಚೇರಿಗೆ ಅಂಚೆ ಮೂಲಕ ಬಂದಿದೆ. ಈ ಬಗ್ಗೆ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಬೆದರಿಕೆ ಪತ್ರದ ನಂತರ ಹಾಗೂ ಕೆಪಿಸಿಸಿ ವತಿಯಿಂದ ರಾಜೀವ್ ಗೌಡ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ, ಅಮೃತಗೌಡ ಮೇಲೆ ದಾಳಿ ಸಂಭವಿಸಬಹುದೆಂಬ ಆತಂಕ ತೀವ್ರಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಶಿಡ್ಲಘಟ್ಟ ನಗರಸಭೆ ಕಚೇರಿ ಹಾಗೂ ಪೌರಾಯುಕ್ತೆಯ ನಿವಾಸದ ಸುತ್ತ ಪೊಲೀಸ್ ಗಸ್ತು ಹೆಚ್ಚಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

‘45 ಟೈಟಲ್ ಕೊಟ್ಟಿದ್ದು ನಾನು, ಸೌಜನ್ಯಕ್ಕೂ ನನ್ನ ಹೆಸರು ಹಾಕಿಲ್ಲ: ಖ್ಯಾತ ನಟನ ಅಸಮಾಧಾನ

ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜ್ ಕುಮಾರ್–ಉಪೇಂದ್ರ–ರಾಜ್ ಬಿ ಶೆಟ್ಟಿ ಅಭಿನಯದ ‘45’ ಸಿನಿಮಾ ಈಗ ಒಟಿಟಿ ಪ್ಲಾಟ್‌ಫಾರ್ಮ್ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಸಿನಿಮಾದ ಟೈಟಲ್ ವಿಚಾರವಾಗಿ ಈಗ ಹೊಸ ವಿವಾದ ಸದ್ದು ಮಾಡುತ್ತಿದೆ.

ನಟ ಹಾಗೂ ಕಿರುತೆರೆ ಕಲಾವಿದ ಮಿತ್ರ, ‘45’ ಟೈಟಲ್ ಮೂಲತಃ ತಮ್ಮದಾಗಿತ್ತು ಎಂದು ಬಹಿರಂಗವಾಗಿ ಹೇಳಿದ್ದಾರೆ. ಸಿನಿಮಾಕ್ಕೆ ಈ ಶೀರ್ಷಿಕೆ ಫೈನಲ್ ಮಾಡಿದಾಗ, ಈ ಟೈಟಲ್ ಈಗಾಗಲೇ ಮಿತ್ರ ಅವರ ಬ್ಯಾನರ್ ಅಡಿಯಲ್ಲಿ ನೋಂದಾಯಿತವಾಗಿತ್ತು. ಹೀಗಾಗಿ ನಿರ್ಮಾಪಕ ರಮೇಶ್ ರೆಡ್ಡಿ ಮಿತ್ರರನ್ನು ಸಂಪರ್ಕಿಸಿ ಟೈಟಲ್ ಕೇಳಿಕೊಂಡಿದ್ದರು.

‘ಕನ್ನಡ ಪಿಚ್ಚರ್’ ಸಂದರ್ಶನದಲ್ಲಿ ಮಾತನಾಡಿದ ಮಿತ್ರ, “ನಾನು ಈ ಟೈಟಲ್ ಹಣಕ್ಕಾಗಿ ನೀಡಿಲ್ಲ. ಪ್ರೀತಿಯಿಂದ ಬಿಟ್ಟುಕೊಟ್ಟೆ. ಹಣ ಕೊಡಲು ಬಂದರೂ ಬೇಡ ಎಂದೆ. ಆದರೆ ಕನಿಷ್ಠಪಕ್ಷ ಥ್ಯಾಂಕ್ಸ್ ಕಾರ್ಡ್‌ನಲ್ಲಿ ಹೆಸರು ಹಾಕಬಹುದಿತ್ತು. ಅರ್ಜುನ್ ಜನ್ಯ ಒಮ್ಮೆ ನನೆಪಿಸಿಕೊಳ್ಳಬಹುದು ಎಂದುಕೊಂಡಿದ್ದೆ. ಆದರೆ ಏನೂ ಆಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಕಥೆಗೆ ‘45’ ಟೈಟಲ್ ಅತ್ಯಂತ ಸೂಕ್ತವಾಗಿದ್ದು, ಚಿತ್ರ ವೀಕ್ಷಿಸಿದವರಿಗೆ ಇದರ ಮಹತ್ವ ಸ್ಪಷ್ಟವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

‘45’ ಸಿನಿಮಾ ಡಿಸೆಂಬರ್ 25ರಂದು ಥಿಯೇಟರ್‌ಗೆ ಎಂಟ್ರಿ ನೀಡಿ, ಕೆಲ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಜನವರಿ 23ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ – ಆದರೆ ಈ ಬಾರಿ ಕಥೆಗೆಲ್ಲ ಅಲ್ಲ, ಟೈಟಲ್ ವಿವಾದಕ್ಕೆ!

25 ಲಕ್ಷ ರೂ. ಲಂಚ ಪ್ರಕರಣ: ಅಬಕಾರಿ ಡಿಸಿ ಸೇರಿ ಮೂವರಿಗೆ ಜಾಮೀನು

0

ಬೆಂಗಳೂರು: 25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯವು ಅಬಕಾರಿ ಇಲಾಖೆಯ ಡಿಸಿ ಜಗದೀಶ್, ತಮ್ಮಣ್ಣ ಹಾಗೂ ಕಾನ್ಸಟೇಬಲ್ ಲಕ್ಕಪ್ಪ ಅವರಿಗೆ ಜಾಮೀನು ನೀಡಿದೆ.

ನಿನ್ನೆ ನ್ಯಾಯಾಲಯ ಈ ಮೂವರು ಆರೋಪಿಗಳಿಗೆ ಜಾಮೀನು ನೀಡಿದ್ದು, ಪ್ರಮುಖ ಆರೋಪಿ ಆಗಿರುವ ಅಬಕಾರಿ ಡಿಸಿ ಜಗದೀಶ್ ಅವರಿಗೆ ಆರೋಗ್ಯ ಕಾರಣಗಳನ್ನು ಆಧಾರವಾಗಿಸಿಕೊಂಡು ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಇತ್ತೀಚೆಗೆ ಜಗದೀಶ್ ಅವರ ಕುಟುಂಬದ ಸದಸ್ಯರೊಬ್ಬರು ನಿಧನರಾಗಿರುವುದನ್ನೂ ನ್ಯಾಯಾಲಯ ಪರಿಗಣಿಸಿದೆ ಎನ್ನಲಾಗಿದೆ.

25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಈ ಮೂವರು ಆರೋಪಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ಮುಂದುವರಿದಿದ್ದು, ಮುಂದಿನ ವಿಚಾರಣೆಗೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ಬಿಜೆಪಿ ಗೆಲುವು ಕೇರಳದ ಬದಲಾವಣೆಗೆ ಸಂಕೇತ: ಪ್ರಧಾನಿ ನರೇಂದ್ರ ಮೋದಿ

0

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ರಾಜಕೀಯ ಬದಲಾವಣೆ ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಿರುವನಂತಪುರಂ ನಗರಸಭೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ರಾಜ್ಯ ರಾಜಧಾನಿಗೆ ಭೇಟಿ ನೀಡಿದ ಅವರು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ಸುಮಾರು ನಾಲ್ಕು ದಶಕಗಳ ಹಿಂದೆ ಒಂದೇ ನಗರವನ್ನು ಗೆಲ್ಲುವುದರೊಂದಿಗೆ ಎಂದು ನೆನಪಿಸಿಕೊಂಡರು ಮತ್ತು ಕೇರಳದಲ್ಲೂ ಅದೇ ಆಗುತ್ತದೆ ಎಂದು ಹೇಳಿದರು. 1987 ರ ಮೊದಲು, ಗುಜರಾತ್‌ನಲ್ಲಿ ಬಿಜೆಪಿ ಒಂದು ಸಣ್ಣ ಪಕ್ಷವಾಗಿತ್ತು. 1987 ರಲ್ಲಿ, ಮೊದಲ ಬಾರಿಗೆ, ಬಿಜೆಪಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಹಿಡಿತ ಸಾಧಿಸಿತು, ಇತ್ತೀಚೆಗೆ ತಿರುವನಂತಪುರದಲ್ಲಿ ಪಕ್ಷದ ಗೆಲುವಿನಂತೆಯೇ.

ಅಂದಿನಿಂದ, ಗುಜರಾತ್‌ನ ಜನರು ನಮಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದ್ದಾರೆ ಮತ್ತು ನಾವು ದಶಕಗಳಿಂದ ಅದನ್ನು ಮುಂದುವರೆಸಿದ್ದೇವೆ. ನಮ್ಮ ಪ್ರಯಾಣ ಗುಜರಾತ್‌ನ ಒಂದು ನಗರದಲ್ಲಿ ಪ್ರಾರಂಭವಾಯಿತು, ಮತ್ತು ಅದೇ ರೀತಿ, ಕೇರಳದಲ್ಲಿ, ನಮ್ಮ ಆರಂಭವು ಒಂದೇ ನಗರದಿಂದ ಪ್ರಾರಂಭವಾಗಿದೆ. ತಿರುವನಂತಪುರಂ ನಗರಸಭೆಯಲ್ಲಿ ತಮ್ಮ ಪಕ್ಷದ ಗೆಲುವು ಕೇರಳವನ್ನು ಎಲ್‌ಡಿಎಫ್ ಮತ್ತು ಯುಡಿಎಫ್‌ನ ಭ್ರಷ್ಟ ಆಡಳಿತದಿಂದ ಮುಕ್ತಗೊಳಿಸುವ ದೃಢ ಸಂಕಲ್ಪದ ವಿಜಯವಾಗಿದೆ ಎಂದು ಅವರು ಹೇಳಿದರು.

ಸೋಶಿಯಲ್ ಮೀಡಿಯಾ ತೇಜೋವಧೆಗೆ ಬಲಿ: ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣದಲ್ಲಿ ವಿಡಿಯೋ ವೈರಲ್ ಮಾಡಿದ ಇಬ್ಬರ ಬಂಧನ

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇರೆಗೆ ಸುಭಾಷ್ ಮತ್ತು ಹರಿಶ್ಚಂದ್ರ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ರಾಜೀವ್ ಪಿಕಳೆ, ಸೋಶಿಯಲ್ ಮೀಡಿಯಾದ ತೇಜೋವಧೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೈರಲ್ ಆಗಿದ್ದ ವಿಡಿಯೋದಲ್ಲಿ, ಪಿಕಳೆ ರೋಗಿಗೆ ಅವಧಿ ಮೀರಿದ ಔಷಧ ನೀಡಿದ ವಿಚಾರ ಉಲ್ಲೇಖವಾಗಿತ್ತು.

ಈ ವಿಡಿಯೋ ವೈರಲ್ ಆದ ಬಳಿಕ ಪಿಕಳೆ ತೀವ್ರವಾಗಿ ನೊಂದಿದ್ದು, ಸಾರ್ವಜನಿಕವಾಗಿ ಕ್ಷಮೆಯನ್ನೂ ಕೇಳಿದ್ದರು. ಆದರೆ ಜಾಲತಾಣಗಳಲ್ಲಿ ನಿರಂತರ ಟೀಕೆ ಮತ್ತು ಅವಮಾನ ಮುಂದುವರಿದ ಕಾರಣ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ದಿನ ಪಿಕಳೆ ತಮ್ಮ ನಿವಾಸದಲ್ಲಿಯೇ ಡಬಲ್ ಬ್ಯಾರಲ್ ಗನ್ ಬಳಸಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟಿನಲ್ಲಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ದುರ್ಬಳಕೆ ಯಾವ ಮಟ್ಟಿಗೆ ಮಾನಸಿಕ ಹಾನಿ ಉಂಟು ಮಾಡಬಹುದು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಗಂಭೀರ ಉದಾಹರಣೆಯಾಗಿದೆ.

ಓಶಿವಾರಾ ಫೈರಿಂಗ್ ಪ್ರಕರಣದಲ್ಲಿ KRK ಅರೆಸ್ಟ್: ತಮ್ಮದೇ ಬಂದೂಕಿನಿಂದ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡ ನಟ

ಅಂಧೇರಿ ಓಶಿವಾರಾದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಬಾಲಿವುಡ್ ನಟ ಹಾಗೂ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್‌ಕೆ ಅವರನ್ನು ಓಶಿವಾರಾ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ವಸತಿ ಕಟ್ಟಡದ ಮೇಲೆ ನಡೆದ ಫೈರಿಂಗ್‌ಗೆ ಬಳಸಲಾದ ಬಂದೂಕು ಕೆಆರ್‌ಕೆ ಅವರ ಲೈಸೆನ್ಸ್ ಪಡೆದ ವೈಯಕ್ತಿಕ ಬಂದೂಕು ಎಂಬುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದ ಪ್ರಮುಖ ಶಂಕಿತನಾಗಿ ಪರಿಗಣಿಸಲಾಗಿದೆ.

ಶುಕ್ರವಾರ ಸಂಜೆ ಕೆಆರ್‌ಕೆ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ತಾವು ಗುಂಡು ಹಾರಿಸಿದ್ದನ್ನು ಒಪ್ಪಿಕೊಂಡಿದ್ದು, ಲೈಸೆನ್ಸ್ ಬಂದೂಕನ್ನೇ ಬಳಸಿದ್ದಾಗಿ ಹೇಳಿದ್ದಾರೆ. ಆದರೆ, ಯಾರಿಗೂ ಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೆಆರ್‌ಕೆ ಅವರ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಜನವರಿ 18ರಂದು ನಳಂದ ಸೊಸೈಟಿಯ ವಸತಿ ಕಟ್ಟಡದ ಮೇಲೆ ಎರಡು ಗುಂಡುಗಳು ಹಾರಿದ ಘಟನೆ ನಡೆದಿದೆ. ಒಂದನ್ನು ಎರಡನೇ ಮಹಡಿಯಿಂದ, ಮತ್ತೊಂದನ್ನು ನಾಲ್ಕನೇ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ.

ಎರಡನೇ ಮಹಡಿಯಲ್ಲಿ ಬರಹಗಾರ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ (45) ವಾಸವಿದ್ದು, ನಾಲ್ಕನೇ ಮಹಡಿಯಲ್ಲಿ ಮಾಡೆಲ್ ಪ್ರತೀಕ್ ಬೈದ್ ವಾಸಿಸುತ್ತಿದ್ದಾರೆ. ಫೈರಿಂಗ್ ಬಳಿಕ ಎರಡೂ ಫ್ಲಾಟ್‌ಗಳಲ್ಲಿ ಗುಂಡಿನ ಗುರುತುಗಳು ಕಂಡುಬಂದಿವೆ.

ಪ್ರಕರಣದ ತನಿಖೆಗೆ ಅಪರಾಧ ವಿಭಾಗದ ಹಲವು ತಂಡಗಳು ತೊಡಗಿಸಿಕೊಂಡಿದ್ದವು. ಆರಂಭದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಕೊರತೆಯಿಂದ ಸಾಕ್ಷ್ಯ ಸಂಗ್ರಹಕ್ಕೆ ಅಡ್ಡಿಯಾಗಿತ್ತು. ಆದರೆ ನಂತರ ವಿಧಿವಿಜ್ಞಾನ ವರದಿ ಮೂಲಕ ಗುಂಡುಗಳು ಕೆಆರ್‌ಕೆ ಅವರ ಬಂದೂಕಿನಿಂದಲೇ ಹೊರಬಂದಿರುವ ಸಾಧ್ಯತೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ.

error: Content is protected !!