Home Blog Page 17

ರೆಡ್ಡಿ, ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್​ʼಗೆ ಬೆಂಕಿ: ಇಬ್ಬರು ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ

0

ಬಳ್ಳಾರಿ: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲುಗೆ ಸಂಬಂಧಿಸಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದ ಎಂಟು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೀಲ್ಸ್ ಮಾಡುವ ಉದ್ದೇಶದಿಂದಲೇ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರುಕ್ಮಿಣಿ ಅವೆನ್ಯೂ ಲೇಔಟ್ (ಜಿ ಸ್ಕ್ವೇರ್) ನ ಸೈಟ್ ಎಂಜಿನಿಯರ್ ರಿಜ್ವಾನ್ ಈ ಕುರಿತು ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಸುಮಾರು 5:30ರ ವೇಳೆಗೆ 20 ರಿಂದ 25 ವರ್ಷ ವಯಸ್ಸಿನ 8ರಿಂದ 10 ಮಂದಿ ಕಿಡಿಗೇಡಿಗಳು ಬಂದು ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಕಿಗೆ ಆಹುತಿಯಾದ ಮಾಡೆಲ್ ಹೌಸ್, ಜನಾರ್ದನ ರೆಡ್ಡಿ ಅವರ ಪತ್ನಿ ಜಿ. ಲಕ್ಷ್ಮೀ ಅವರಿಗೆ ಸೇರಿದೆ. ದುರುದ್ದೇಶದಿಂದಲೇ ಬೆಂಕಿ ಹಚ್ಚಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮನೆಗೆ ಬೆಂಕಿ ಬಿದ್ದ ಪರಿಣಾಮ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಏಸಿ, ಫ್ರಿಡ್ಜ್, ಪಿಓಪಿ ಕೆಲಸ, ವುಡನ್ ಬಾಗಿಲುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂದಾಜು ₹1.25 ಕೋಟಿ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರು ನೀಡಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇತ್ತೀಚಿನ ಬ್ಯಾನರ್ ಗಲಭೆ ವೇಳೆ ಶಾಸಕ ಭರತ್ ರೆಡ್ಡಿ ‘ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ’ ಎಂಬ ಹೇಳಿಕೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿ, ಆ ದಿಕ್ಕಿನಲ್ಲಿ ತನಿಖೆ ನಡೆಸುವಂತೆ ದೂರುದಲ್ಲಿ ಮನವಿ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದು, ಇಬ್ಬರು ಎಫ್‌ಎಸ್‌ಎಲ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ತಂಡದಿಂದ ತನಿಖೆ ನಡೆಯುತ್ತಿದೆ.

ಉಗ್ರ ಸಂಘಟನೆಗೆ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!

0

ಉತ್ತರ ಕನ್ನಡ: ಯುವಕರನ್ನು ತೀವ್ರವಾದ ಚಟುವಟಿಕೆಗಳತ್ತ ಸೆಳೆಯಲು ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸೇರ್ಪಡೆಗೊಳಿಸುವ ಸಂಚು ರೂಪಿಸಿದ್ದ ಆರೋಪದಡಿ, ಶಿರಸಿ ನಿವಾಸಿ ಸಯ್ಯದ್ ಎಂ. ಇದ್ರಿಸ್ ಅವರಿಗೆ ವಿಶೇಷ ಎನ್ಐಎ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಾಲಯ ಈ ತೀರ್ಪನ್ನು ಭಾರತೀಯ ದಂಡ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (UAPA) ಅಡಿ ನೀಡಿದ್ದು, ಜೊತೆಗೆ ಅಪರಾಧಿಗೆ 70,000 ರೂ. ದಂಡವನ್ನು ವಿಧಿಸಲಾಗಿದೆ.

ಈ ಪ್ರಕರಣವು ಮೊದಲಿಗೆ 2020 ರ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ಪೊಲೀಸ್ ಠಾಣೆಯಿಂದ ದಾಖಲಾಗಿದ್ದು, ಹೆಚ್ಚಿನ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರ ಮಾಡಲಾಗಿತ್ತು. ತನಿಖೆಯ ವೇಳೆ ಎನ್ಐಎ ಶಿರಸಿಯಲ್ಲಿ ಸಯ್ಯದ್ ಇದ್ರಿಸ್ ಹಾಗೂ ಜಮ್ಮು–ಕಾಶ್ಮೀರ ನಿವಾಸಿ ಅಲ್ತಾಫ್ ಅಹ್ಮದ್ ರಾಥೆರ್ ಅವರನ್ನು ಬಂಧಿಸಿತ್ತು.

ಎನ್ಐಎ ಆರೋಪದಂತೆ, ಈ ಇಬ್ಬರು ತಾನಿಯಾ ಪರ್ವೀನ್ ಎಂಬ ಮಹಿಳೆಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಘಟಕ ಸ್ಥಾಪಿಸಲು ಸಂಚು ರೂಪಿಸಿದ್ದರು. ಹಿಂದಿನ ಶೋಧ ಕಾರ್ಯಾಚರಣೆಯಲ್ಲಿ, ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಬದೂರಿಯಾ ಪ್ರದೇಶದಲ್ಲಿ ತಾನಿಯಾ ಪರ್ವೀನ್ನನ್ನು ಪೊಲೀಸರು ಬಂಧಿಸಿದ್ದರು.

ಶೋಧದ ವೇಳೆ ಕಾನೂನುಬಾಹಿರ ಸಾಹಿತ್ಯ ಸೇರಿದಂತೆ ಹಲವು ಅಕ್ರಮ ವಸ್ತುಗಳನ್ನು ವಶಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಿದೆ.

ಮುಡಾ ಹಗರಣದಲ್ಲಿ ಮತ್ತೊಂದು ಶಾಕ್: ಮರೀಗೌಡರ 6 ಸೈಟ್‌, 3 ಅಪಾರ್ಟ್‌ಮೆಂಟ್ ಜಪ್ತಿ – 460 ಕೋಟಿ ಆಸ್ತಿ ಇಡಿ ವಶಕ್ಕೆ

0

ಮೈಸೂರು/ಬೆಂಗಳೂರು: ಮುಡಾ ಸೈಟ್ ಹಂಚಿಕೆ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತೊಂದು ದೊಡ್ಡ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಸ್.ಕೆ. ಮರೀಗೌಡ ಅವರಿಗೆ ಸೇರಿದ 20.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇಡಿ ತನಿಖೆಯ ಪ್ರಕಾರ, ಮುಡಾ ಅಧ್ಯಕ್ಷರಾಗಿದ್ದ ಕಾಲದಲ್ಲಿ ಮರೀಗೌಡ ಅವರು ಆಗಿನ ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಸಹಾಯದಿಂದ ಅಕ್ರಮ ಮಾರ್ಗದಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮರೀಗೌಡ ಹೆಸರಲ್ಲಿ ಇದ್ದ 6 ನಿವೇಶನಗಳು ಹಾಗೂ 3 ವಸತಿ ಸಂಕೀರ್ಣ ಕಟ್ಟಡಗಳನ್ನು ಇಡಿ ಜಪ್ತಿ ಮಾಡಿದೆ.

ತನಿಖೆಯಲ್ಲಿ ವಕ್ರತುಂಡ ಲೇಔಟ್ ಅಭಿವೃದ್ಧಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ವಕ್ರತುಂಡ ಸೊಸೈಟಿ ಮರೀಗೌಡ ಅವರ ಪತ್ನಿ ಜಯಶ್ರೀ ಹೆಸರಿನಲ್ಲಿ ಇದ್ದರೂ, ಅದರ ನಿಯಂತ್ರಣ ಜಯರಾಂ ಎಂಬ ವ್ಯಕ್ತಿಯ ಕೈಯಲ್ಲಿತ್ತು ಎಂದು ವರದಿಯಾಗಿದೆ. ಇದೇ ವೇಳೆ ಜಯರಾಂ ಅವರು ಸಂಬಂಧಿಕರ ಹೆಸರಲ್ಲಿ 53 ಲಕ್ಷ ರೂ. ಹಣ ವರ್ಗಾವಣೆ ನಡೆಸಿರುವುದೂ ಪತ್ತೆಯಾಗಿದೆ.

ಮರೀಗೌಡ ಅವರು ಸೊಸೈಟಿಯಿಂದ 50 ಲಕ್ಷ ರೂ. ಸಾಲ ಪಡೆದಿರುವಂತೆ ಲೆಕ್ಕ ತೋರಿಸಿ, ಮುಡಾದಲ್ಲಿ ಅಕ್ರಮ ನಡೆಸಲು ಈ ವ್ಯವಸ್ಥೆ ರೂಪಿಸಲಾಗಿದೆ ಎಂಬ ಗಂಭೀರ ಅಂಶಗಳನ್ನು ಇಡಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಇದುವರೆಗೆ ಒಟ್ಟು 460 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಈ ಹಿಂದೆ ಜಿ.ಟಿ. ದಿನೇಶ್‌ಕುಮಾರ್ ಸೇರಿದಂತೆ ಹಲವು ಆರೋಪಿಗಳಿಂದ ಅಕ್ರಮವಾಗಿ ಸಂಪಾದನೆ ಮಾಡಿದ 283 ನಿವೇಶನಗಳನ್ನು ವಶಕ್ಕೆ ಪಡೆದುಕೊಂಡಿತ್ತು.

ಇನ್ನೊಂದೆಡೆ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ಐವರಿಗೆ ನೀಡಲಾಗಿದ್ದ ‘ಬಿ’ ರಿಪೋರ್ಟ್ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜನವರಿ 28ಕ್ಕೆ ಮುಂದೂಡಿದೆ.

ಹುಬ್ಬಳ್ಳಿ- ಮನೆ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ಅವಘಡ: ಸಿಎಂ–ಜಮೀರ್ ಕಟೌಟ್ ಕುಸಿದು ಮೂವರಿಗೆ ಗಂಭೀರ ಗಾಯ

0

ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಕಟೌಟ್‌ಗಳು ಕುಸಿದು ಬಿದ್ದು ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುವ ವೇಳೆ ಕಾಂಗ್ರೆಸ್ ಪಕ್ಷದಿಂದ ರಸ್ತೆ ಪಕ್ಕಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ನಾಯಕರ ದೊಡ್ಡ ಗಾತ್ರದ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಬೆಳಗ್ಗೆ ಅಚಾನಕವಾಗಿ ಸಿಎಂ ಹಾಗೂ ಸಚಿವ ಜಮೀರ್ ಅವರ ಕಟೌಟ್‌ಗಳು ಮುರಿದು ಕೆಳಗೆ ಬಿದ್ದ ಪರಿಣಾಮ ಅಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೂಡಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಶಾರದಾ ಕ್ಯಾರಕಟ್ಟಿ ಎಂಬ ಮಹಿಳೆ ಕೂಡ ಇದ್ದಾರೆ. ಶಾರದಾ ಅವರು ಹುಬ್ಬಳ್ಳಿ ಗಂಗಾಧರ ನಗರದ ಸೆಟಲ್‌ಮೆಂಟ್ ಬಡಾವಣೆಯ ನಿವಾಸಿಯಾಗಿದ್ದು, ಮನೆ ಪಡೆಯಲು ಮಗ ಶಶಿಕಾಂತ ಜೊತೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದರು.

ಕಟೌಟ್ ಬೀಳುವ ಸಂದರ್ಭದಲ್ಲಿ ಮಗ ಶಶಿಕಾಂತ್ ತಪ್ಪಿಸಿಕೊಂಡಿದ್ದು, ತಾಯಿ ಶಾರದಾ ಮೇಲೆ ಕಟೌಟ್ ಬಿದ್ದು ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದೊಡ್ಡ ಕಟೌಟ್ ಅಳವಡಿಸುವ ವೇಳೆ ಸುರಕ್ಷತಾ ಕ್ರಮ ಪಾಲನೆಯಿಲ್ಲದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಸ್ನೇಹಿತನಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಯುವಕನ ಕೊಲೆ!

0

ರಾಯಚೂರು: ನಗರದ ಜಹೀರಾಬಾದ್ ಪ್ರದೇಶದ ಮಾವಿನ ಕೆರೆ ಬಳಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಹತ್ಯೆಗೀಡಾದ ಯುವಕನನ್ನು 22 ವರ್ಷದ ವಿಶಾಲ್ ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈ ಘಟನೆಯ ಸಂಬಂಧ ರಾಜು ಮತ್ತು ಬಸವರಾಜ್ ಎಂಬ ಇಬ್ಬರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.

ಶುಕ್ರವಾರ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ, ವಿಶಾಲ್ ತನ್ನ ಸ್ನೇಹಿತನಿಗೆ ಆರೋಪಿಗಳು ಬೈದಿದ್ದನ್ನು ಪ್ರಶ್ನಿಸಲು ಹೋಗಿದ್ದಾನೆ. ಈ ವೇಳೆ ಮೂವರ ನಡುವೆ ಮಾತಿನ ಚಕಮಕಿ ಉಂಟಾಗಿ, ಗಲಾಟೆ ತೀವ್ರಗೊಂಡಿದೆ.

ಮಾತಿನ ಜಗಳ ತೀವ್ರವಾದ ಬಳಿಕ, ಇಬ್ಬರು ಆರೋಪಿಗಳು ವಿಶಾಲ್ ಮೇಲೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಚಳಿ–ಒಣಹವೆ ಮುಂದುವರಿಕೆ: ಹವಾಮಾನ ಇಲಾಖೆ

0

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಶೀತ ಹಾಗೂ ಒಣಹವೆಯ ವಾತಾವರಣ ಮುಂದುವರಿದಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದೂ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ತೀವ್ರ ಚಳಿಯ ಜೊತೆಗೆ ಒಣಹವೆಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಇಂದು ಶೀತದೊಂದಿಗೆ ಮಂಜು ಮುಸುಕಿದ ವಾತಾವರಣ ಇರಲಿದ್ದು, ಮಕ್ಕಳು, ವೃದ್ಧರು ಹಾಗೂ ಅಸ್ವಸ್ಥರು ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

 ದಕ್ಷಿಣ ಒಳನಾಡಿನಲ್ಲಿ ಒಣಹವೆ

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳು

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಪ್ರದೇಶ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಇಂದು ಒಣಹವೆಯ ವಾತಾವರಣ ಇರಲಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ತೀವ್ರ ಚಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಹೊದಿಕೆ ಬಳಕೆ, ಬಿಸಿ ಆಹಾರ ಸೇವನೆ ಹಾಗೂ ಸಮತೋಲನ ಆಹಾರಕ್ಕೆ ಆದ್ಯತೆ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾದಿಂದ ರಾಜ್ಯಪಾಲರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ನೊಂದ ಅಮಾಯಕ ಮಹಿಳೆಯರು ದೂರು ನೀಡಲು ಕಚೇರಿಗೆ ಬಂದರೆ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಡಿಐಜಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತ್ತು ಮಾಡಿದೆ. ಆದರೆ ರಾಮಚಂದ್ರ ರಾವ್ ಅವರನ್ನು ಕೆಲಸದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.

ಶಿಡ್ಲಘಟ್ಟ ನಗರಸಭೆಯ ಆಯುಕ್ತರಾದ ಅಮೃತಾ ಗೌಡರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಗರಸಭೆ ಕಚೇರಿಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ ರಾಜೀವಗೌಡನ ಮೇಲೆ ಎಫ್‌ಐಆರ್ ಆಗಿ 8 ದಿನಗಳೇ ಕಳೆದರೂ ಇನ್ನೂ ಬಂಧಿಸಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ನಿರ್ಮಲಾ ಕೊಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಜಯಶ್ರೀ ಉಗಲಾಟದ, ಜಿಲ್ಲಾ ಕಾರ್ಯದರ್ಶಿ ಅಶೋಕ ಕುಡತಿನಿ, ಮಖಂಡರಾದ ಶ್ರೀಪತಿ ಉಡುಪಿ, ಅಶೋಕ ಸಂಕಣ್ಣವರ, ಗದಗ ನಗರ ಮಂಡಲ ಉಪಾಧ್ಯಕ್ಷರಾದ ಪದ್ಮಿನಿ ಮುತ್ತಲದಿನ್ನಿ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿಜಯಲಕ್ಷಿಮೀ ಮಾನ್ವಿ, ಪ್ರಧಾನ ಕಾರ್ಯದರ್ಶಿಗಳಾದ ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ರೇಖಾ ಬಂಗಾರಶೆಟ್ಟರ, ಮಂಜುನಾಥ ಶಾಂತಗೇರಿ, ಗದಗ ನಗರ ಮಂಡಲ ಕಾರ್ಯದರ್ಶಿಯಾದ ಸಿದ್ರಾಮೇಶ ಹಿರೇಮಠ, ಪ್ರಮುಖರಾದ ಅಶ್ವಿನಿ ಜಗತಾಪ್, ವಂದನಾ ವರ್ಣೇಕರ್, ಜಯಶ್ರೀ ಅಣ್ಣಿಗೇರಿ, ನಗರಸಭಾ ಸದಸ್ಯೆ ಲಕ್ಷಿಮೀ ಶಂಕರ ಕಾಕಿ, ಮಾಧುಸಾ ಮೇರವಾಡೆ, ರಾಚಯ್ಯ ಹೊಸಮಠ, ದೇವೆಂದ್ರಪ್ಪ ಹೂಗಾರ, ವಿರೂಪಾಕ್ಷಪ್ಪ ಐಲಿ, ಪ್ರೀತಿ ಶಿವಪ್ಪನಮಠ, ರೇಖಾ ಗೌಳಿ, ರವಿ ಮಾನ್ವಿ, ವಿನೋದ ಹಂಸನೂರ ಮುಂತಾದವರಿದ್ದರು.

ಕಾರ್ಕಳ| ಭೀಕರ ಅಪಘಾತ; ಮೀಯಾರು ಬಳಿ ಮೂವರು ಸಾವು, 8 ಮಂದಿಗೆ ಗಂಭೀರ ಗಾಯ!

0

ಉಡುಪಿ :-ಜಿಲ್ಲೆಯ ಕಾರ್ಕಳ ತಾಲೂಕಿನ ಮೀಯಾರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ತೂಫಾನ್ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಮತ್ತು ತೂಫಾನ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಕಾರ್ಕಳ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಗದಗ| ಪಶು ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಕಂಪ್ಯೂಟರ್ ಸೇರಿ ಮಹತ್ತರ ದಾಖಲೆಗಳು ಸುಟ್ಟು ಭಸ್ಮ!

0

ಗದಗ:- ಶಿರಹಟ್ಟಿ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಇಂದು ಸಂಜೆ 7ರ ಸುಮಾರಿಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಹಾನಿಯಾಗಿದೆ.

ಜಿಲ್ಲೆಯ ಶಿರಹಟ್ಟಿ ಪಟ್ಟಣದ ಪಶುಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಂಪ್ಯೂಟರ್, ಕಚೇರಿ ಪೀಠೋಪಕರಣ, ದಾಖಲೆ ಸೇರಿ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ.ಕಚೇರಿ ಅವಧಿ ಮುಗಿದ ಬಳಿಕ ಅವಘಡ ಸಂಭವಿಸಿದ್ದು, ಭಾರೀ ದುರಂತ ತಪ್ಪಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಸಮಿತಿಯವರು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗಣರಾಜ್ಯೋತ್ಸವ ದಿನಾಚರಣೆಯನ್ನು ಜನವರಿ 26ರಂದು ವ್ಯವಸ್ಥಿತವಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಆಚರಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪ-ದೋಷಗಳಾಗದಂತೆ ವ್ಯವಸ್ಥಿತವಾಗಿ ಆಚರಿಸಲು ಕಾರ್ಯನಿರ್ವಹಿಸಬೇಕು ಎಂದರು.

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಹಿಂದಿನ ದಿನ ಹಾಗೂ ಕಾರ್ಯಕ್ರಮದ ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಸ್ವಚ್ಛತೆಯೊಂದಿಗೆ ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು. ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಕೆಗೆ ಕ್ರಮ ವಹಿಸಬೇಕು. ಗಣರಾಜ್ಯೋತ್ಸವ ದಿನದಂದು ಎಲ್ಲ ಕಚೇರಿ ಮತ್ತು ಶಾಲಾ ಕಾಲೇಜುಗಳ ಸಿಬ್ಬಂದಿ ತಮ್ಮ ಕಾರ್ಯಾಲಯದ ಧ್ವಜಾರೋಹಣವನ್ನು ಬೆಳಿಗ್ಗೆ 7.30ರೊಳಗೆ ನೆರವೇರಿಸಿ ಬೆಳಿಗ್ಗೆ 8.30 ಗಂಟೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಬೇಕು. ಅಂದು 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮಕ್ಕೆ ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಕರೆತರುವುದು ಹಾಗೂ ಅವರಿಗೆ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದರು.

ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವ್ಯವಸ್ಥೆ, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಪರೇಡ್, ಮೂಲಭೂತ ಸೌಕರ್ಯಗಳ ವ್ಯವಸ್ಥೆ, ವೇದಿಕೆ ನಿರ್ಮಾಣ, ಅಲ್ಪೋಪಹಾರ, ಸನ್ಮಾನ ಕಾರ್ಯಕ್ರಮ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎನ್. ತುಂಬರಮಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರಮೇಶ್ ಎಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಭೂ ದಾಖಲೆ ಇಲಾಖೆ ಉಪನಿರ್ದೇಶಕ ರುದ್ರಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಕುರಿತು ಆದ್ಯತೆ ವಹಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಕಾರ್ಯಕ್ರಮದ ಸ್ಥಳದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅತಿಥಿಗಳಿಗೆ ಆಸನದ ವ್ಯವಸ್ಥೆ, ಅಲ್ಪೋಪಹಾರದ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

error: Content is protected !!