Home Blog Page 18

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದಲ್ಲಿ ಸಂಕ್ರಾಂತಿ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತವು ಹಬ್ಬ-ಹರಿದಿನಗಳ ತವರೂರು. ಈ ನಾಡಿನಲ್ಲಿ ಯಾವುದೇ ಹಬ್ಬವಿರಲಿ ಅದು ತನ್ನ ವಿಶೇಷತೆ ಹೊಂದಿರುವಂತೆ ಮಕರ ಸಂಕ್ರಾಂತಿ ಕೂಡ ವಿಶಿಷ್ಟ ಹಬ್ಬವಾಗಿದೆ. ನಾವೆಲ್ಲರೂ ಒಂದೇ ಎಂದು ಹೇಳುವುದು ಸಕಲರಿಗೂ ಲೇಸನೆ ಬಯಸುವುದು ನಮ್ಮ ಸಂಸ್ಕೃತಿಯಾಗಿದೆ. ಸಂಕ್ರಾಂತಿಯಂದು ಪುಣ್ಯ ಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುವುದು, ಹೊಸ ಬಟ್ಟೆ ಧರಿಸುವುದು ನಮ್ಮಲ್ಲಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಹೀಗಾಗಿ ಮಕರ-ಸಂಕ್ರಾಂತಿಯು ಸಮಾನತೆ, ಸಂಸ್ಕೃತಿ, ಸಂಪ್ರದಾಯಗಳ ಸಂಗಮವಾಗಿದೆ ಎಂದು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಅಭಿಪ್ರಾಯಪಟ್ಟರು.

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರು ಸಿದ್ಧಲಿಂಗ ನಗರದಲ್ಲಿನ ಬಸವಪ್ರಭೆ ಕ್ಯಾಂಪಸ್‌ನಲ್ಲಿ ನಡೆಸಿದ `ಸಂಕ್ರಾಂತಿ-ಸಂಭ್ರಮ-2026’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶೇಷ ಆಮಂತ್ರಿತರಾಗಿ ಆಗಮಿಸಿದ ಕುರ್ತಕೋಟಿ ಶ್ರದ್ಧಾ ಜ್ಞಾನ ವಿಕಾಸ ಕೇಂದ್ರದ ತರಬೇತುದಾರರಾದ ಅನಿತಾ ಹೆಬಸೂರಮಠ ಮಾತನಾಡಿ, ಮಹಿಳೆಯರಾದವರು ಕೇವಲ ಹಬ್ಬಗಳನ್ನು ಸಂಭ್ರಮಿಸಿದರೆ ಸಾಲದು, ತಮ್ಮಲ್ಲಿ ಕಲಾ-ಕೌಶಲ್ಯಗಳನ್ನು ಬೆಳೆಸಿಕೊಂಡು ಅವಕಾಶ ದೊರೆತಾಗ ಪ್ರದರ್ಶಿಸಿ ಇತರರಿಗೆ ಮಾದರಿಯಾಗಬೇಕೆಂದರು.

ಕಾರ್ಯಕ್ರಮದಲ್ಲಿ ಲಲಿತಾ ಕಡಗದ, ಗಂಗಾ ಹುಚ್ಚಣ್ಣವರ, ಅಂಬಿಕಾ ರೂಡಗಿ, ಸುಮಾ ಸುರೇಬಾನ, ಜಯಲಕ್ಷ್ಮೀ ಸಜ್ಜನರ, ರೇಖಾ ಗಾಣಿಗೇರ, ಪ್ರಭಾವತಿ ಕುಲಕರ್ಣಿ, ಶೋಭಾ ಭಾಂಡಗೆ, ಕಸ್ತೂರಿ ಮರಿಗೌಡ್ರ, ಅನ್ನಪೂರ್ಣ ಅಸೂಟಿ, ಪುಷ್ಪಾ ಹಿರೇಮಠ, ಮಹಾದೇವಿ ಚರಂತಿಮಠ, ಶಾಂತಾ ಮುಂದಿನಮನಿ, ವೀಣಾ ಅಕ್ಕಿ, ಗಿರಿಜಾ ಅಂಗಡಿ, ಶಕುಂತಲಾ ಬ್ಯಾಳಿ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಕರ ಸಂಕ್ರಾಂತಿ ಪ್ರಯುಕ್ತ ನಡೆಸಿದ ಮನೋಲ್ಲಾಸ ಕ್ರೀಡೆಗಳಾದ ಬಾಹ್ಯಾಂತರಿಕ ಶಕ್ತಿ ಪ್ರದರ್ಶನ ಸ್ಪರ್ಧೆಯಲ್ಲಿ ಅರುಣಾ ಇಂಗಳಳ್ಳಿ-ಪ್ರಥಮ, ಜಯಶ್ರೀ ವಸ್ತ್ರದ-ದ್ವಿತೀಯ, ಸಂಗೀತಾ ನಾಕೋಡ-ತೃತೀಯ ಸ್ಥಾನ ಪಡೆದರು. ಜಾಗೃತ ಜಾಣ್ಮೆ ಸ್ಪರ್ಧೆಯಲ್ಲಿ ವಿಜಯಲಕ್ಷ್ಮೀ ಮೇಕಳಿ-ಪ್ರಥಮ, ಅರುಣಾ ಇಂಗಳಳ್ಳಿ-ದ್ವಿತೀಯ, ಗೌರಿ ಜಿರಂಕಳಿ-ತೃತೀಯ ಸ್ಥಾನ ಪಡೆದರು. ಯೋಗಾಸನದ ಚಿತ್ರ ನೋಡಿ ಆಸನದ ಹೆಸರು ಹೇಳುವ ಸ್ಪರ್ಧೆಯಲ್ಲಿ ಜಯಶ್ರೀ ಡಾವಣಗೇರಿ-ಪ್ರಥಮ, ವೀಣಾ ಮಾಲಿಪಾಟೀಲ-ದ್ವಿತೀಯ, ಗೌರಿ ಜಿರಂಕಳಿ-ತೃತೀಯ ಸ್ಥಾನ ಪಡೆದರು.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.28ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸತ್ಯಾಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿಯು ಜಾರಿಗೆ ತಂದ ಅಪಾಯಕಾರಿ ಕೃಷಿ ಕಾಯ್ದೆಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಜ. 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಕೊಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಾತಿಗೆ ತಪ್ಪಿದ್ದಾರೆ. ಇವರನ್ನು ಎಚ್ಚರಿಸಲು ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಜಿಲ್ಲೆಯ ಕಪ್ಪತ್ತಗುಡ್ಡದ ಅಂಚಿನಲ್ಲಿರುವ ಅರಣ್ಯ ಒತ್ತುವರಿದಾರ ರೈತರಿಗೆ ಸರ್ಕಾರದಿಂದ ಪಟ್ಟಾ ದೊರಕಿಸಿಕೊಡಬೇಕು, ರೈತರ ಹೊಲಗಳಲ್ಲಿ ಹಾವು, ಚೇಳು ಕಡಿದು, ಟ್ರ್ಯಾಕ್ಟರ್‌ಗಳಿಂದ ಬಿದ್ದು ಸಾವನ್ನಪ್ಪಿರುತ್ತಾರೆ. ಆದ್ದರಿಂದ, ಕಟ್ಟಡ ಕೂಲಿ ಕಾರ್ಮಿಕರಂತೆ ಮಂಡಳಿಯಿಂದ ಬರುವ ಸೌಲಭ್ಯಗಳನ್ನು ಕೃಷಿ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಸಹಾಯಧನವನ್ನು ಒದಗಿಸಿಕೊಡಬೇಕು ಹಾಗೂ ಜಿಲ್ಲೆಯ ಹುಲಿಗುಡ್ಡದ ಏತ ನೀರಾವರಿ ಅಪೂರ್ಣವಾಗಿದ್ದು, ಇಡೀ ಗದಗ ಜಿಲ್ಲೆಯಾದ್ಯಂತ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಆದ್ದರಿಂದ ಪ್ರತಿ ರೈತರ ಹೊಲಗಳಿಗೆ ಚಿಟಕಾಲುವೆ ಮತ್ತು ಪೈಪ್‌ಲೈನ್ ಮುಖಾಂತರ ಸಂಪೂರ್ಣ ನೀರಾವರಿ ಒದಗಿಸಿಕೊಡಬೇಕು, ಜಿಲ್ಲೆಯ ಜಾಲವಾಡಗಿ ಏತ ನೀರಾವರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬರುವ ಬಜೆಟ್‌ನಲ್ಲಿ ಸರ್ಕಾರದಿಂದ ಹಣ ನಿಗದಿ ಮಾಡಬೇಕು ಇತ್ಯಾದಿ ಇನ್ನೂ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ನವಲಗುಂದ, ದೃವಕುಮಾರ ಹೂಗಾರ, ಮಂಜುನಾಥ ವಡ್ಡರ, ವೀರೇಶ ಮಾಂಡ್ರೆ, ಶಾಂತಪ್ಪ ಹೊಳ್ಳೆಣ್ಣವರ, ಎಂ.ಪಿ. ಶಾಲಾವಾಡಿ, ಮಂಜುನಗೌಡ ರಾಮನಗೌಡ್ರು, ಗಿರೀಶ ಹೊಸಮನಿ ಇತರರು ಇದ್ದರು.

ಭೂಸುಧಾರಣೆ ಕಾಯ್ದೆ 2020 ಹಾಗೂ ಭೂಸ್ವಾಧೀನ ಕಾಯ್ದೆ 2013ಕ್ಕೆ ತಂದಿರುವ ತಿದ್ದುಪಡಿ ರದ್ದು ಮಾಡಬೇಕು, ಎಂಎಸ್‌ಪಿ ಕನಿಷ್ಠ ಬೆಂಬಲ ಬೆಲೆ ನಿಗದಿ, ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರವನ್ನು ತೆರೆದಿರಲು ಬೇಕಾದ ಸಂಪನ್ಮೂಲ ಕನಿಷ್ಠ 10 ಸಾವಿರ ಕೋಟಿ ಅರವತ ನಿಧಿ ಮೀಸಲಿಡಬೇಕು, ಭೂಸ್ವಾಧೀನ ಕಾಯ್ದೆ 2013ಕ್ಕೆ ವಿರುದ್ಧವಾಗಿ ರೈತರ ಭೂಮಿಯನ್ನು ಬಲವಂತದಿಂದ ಕಿತ್ತುಕೊಳ್ಳುವುದನ್ನು ಕೂಡಲೇ ಕೈಬಿಡಬೇಕು ಇತ್ಯಾದಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಂಕರಗೌಡ ಜಯನಗೌಡರ ಹೇಳಿದರು.

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಪ್ರಾಪ್ತರು ವಾಹನವನ್ನು ಚಾಲನೆ ಮಾಡಬಾರದು. ಇದನ್ನು ಉಲ್ಲಂಘಿಸಿದರೆ 25 ಸಾವಿರ ರೂ ದಂಡ ತೆರಬೇಕಾಗುತ್ತದೆ. ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ವಾಹನದ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಪ್ರತಿ ಶಾಲೆಗಳಲ್ಲಿಯೂ ಸಹ ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಪ್ರತಿಯೊಬ್ಬರೂ ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಅಪಘಾತಗಳು ಸಂಭವಿಸದಂತೆ ಎಚ್ಚರವಾಗಿರಬೇಕು ಎಂದು ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಲಕ್ಷ್ಮೇಶ್ವರದ ನ್ಯಾಯಾಧೀಶ ಸತೀಶ ಎಂ ಹೇಳಿದರು.

ಅವರು ಶುಕ್ರವಾರ ಶಿರಹಟ್ಟಿ ಪಟ್ಟಣದಲ್ಲಿಯ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ರಸ್ತೆ ಸುರಕ್ಷತೆಯ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದಕ್ಕಾಗಿ ಸಾರ್ವಜನಿಕರಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಇದನ್ನು ಎಲ್ಲರೂ ಪಾಲಿಸಿ ಜೀವ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

ಇದಕ್ಕೂ ಮುನ್ನ ತಹಸೀಲ್ದಾರ ಕಚೇರಿಯಿಂದ ಜಾಥಾ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಪಂಚಾಯತ್ ಸಭಾಭವನದವರೆಗೆ ತಲುಪಿತು. ಈ ಸಂದರ್ಭದಲ್ಲಿ ವಿವಿಧ ಶಾಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಉಪ ತಹಸೀಲ್ದಾರ ವಿ.ಎ. ಮುಳಗುಂದಮಠ, ಬಿಇಓ ಎಚ್.ನಾಣಕಿನಾಯ್ಕ, ಸರ್ಕಾರಿ ಸಹಾಯಕ ಅಭಿಯೋಜಕಿ ಎಚ್.ಎ. ಗುಂಜಾಳ, ಎನ್.ಸಿ. ಪಾಟೀಲ, ಅರುಣ ಎಫ್.ಕಟ್ಟಿಮನಿ, ರಾಜು ನಾಯಕ ಮುಂತಾದವರು ಉಪಸ್ಥಿತರಿದ್ದರು.

ಬೆಳ್ಳಟ್ಟಿಯಲ್ಲಿ ವಿಜೃಂಭಣೆಯ ಹಿಂದೂ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಹೋಬಳಿ ಮಟ್ಟದ ಹಿಂದೂ ಸಮ್ಮೇಳನವು ಸಡಗರ ಸಂಭ್ರಮದಿಂದ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಬೃಹತ್ ಭಾವಚಿತ್ರ ಮೆರವಣಿಗೆಯ ಮೂಲಕ ಶೋಭಾಯಾತ್ರೆ ಹಾಗೂ ಸಂಜೆ 5 ಗಂಟೆಗೆ ಶ್ರೀ ಭೀಮರಡ್ಡಿ ಸರ್ಕಲ್‌ನಲ್ಲಿ ಬೃಹತ್ ಸಮಾವೇಶ ನಡೆಯಿತು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಬನ್ನಿಕೊಪ್ಪದ ಸುಜ್ಞಾನದೇವ ಸ್ವಾಮೀಜಿ, ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ರಾಜೇಂದ್ರಕುಮಾರ ಹಲಗಲಿ ವಹಿಸಿ ಮಾತನಾಡಿದರು. ದಿಕ್ಸೂಚಿ ಭಾಷಣವನ್ನು ನಾಗಪುರದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಭಾರತೀಯ ಶಿಕ್ಷಣ ಮಂಡಲದ ಶಂಕರಾನಂದಜಿ ನೀಡಿದರು.

ಜ. 26ರಂದು ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಮಾರಂಭ, ಸಾಂಸ್ಕೃತಿಕ ಸಂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗಜೇಂದ್ರಗಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಜ. 26ರಂದು ಬೆಳಗಾವಿಯ ನಂದಗಡದಲ್ಲಿ ರಾಜ್ಯ ಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಎಸ್. ಸೋಂಪೂರ ಹೇಳಿದರು.

ಶುಕ್ರವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಧಾರವಾಡದ ರೇವಣಸಿದ್ದೇಶ್ವರ ಪೀಠದ ಶ್ರೀ ಬಸವರಾಜ ದೇವರು, ರಾಜಗುರು ಮಡಿವಾಳ ಮಹಾಸ್ವಾಮಿಗಳು, ಚನ್ನವೀರ ದೇವರು ದಿವ್ಯ ಸಾನ್ನಿಧ್ಯ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭುವನೇಶ್ವರಿ ಭಾವಚಿತ್ರ ಅನಾವರಣಗೊಳಿಸುವರು, ವಿಧಾನ ಪರಿಷತ್ ಶಾಸಕ ಚನ್ನರಾಜ ಹಟ್ಟಿಹೊಳಿ ತಾಯಿ ಚನ್ನಮ್ಮ ಭಾವಚಿತ್ರ ಅನಾವರಣಗೊಳಿಸುವರು. ಶಾಸಕ ದೊಡ್ಡನಗೌಡ ಪಾಟೀಲ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅನಾವರಣಗೊಳಿಸುವರು ಎಂದು ತಿಳಿಸಿದರು.

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳ್ಳಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ಪ್ರತಿಷ್ಠಾನದಿಂದ ಕಳೆದ 16 ವರ್ಷಗಳಿಂದ ರಾಯಣ್ಣ ಹುತಾತ್ಮ ದಿನಾಚರಣೆ ಆಚರಿಸುತ್ತಾ ಬಂದಿದ್ದು, ಈ ವರ್ಷ ಇನ್ನೂ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹಿಂದಿನ ಸರ್ಕಾರ ಆದೇಶ ಹೊರಡಿಸಿದಂತೆ ಆಗಸ್ಟ್ 15 ಹಾಗೂ ಜನವರಿ 26ರಂದು ಎಲ್ಲ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಗಿತ್ತು. ಅದು ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಹೇಳಿದರು.

ಅಹಿಂದ ನಾಯಕಿ ಭಾಗ್ಯಶ್ರೀ ಬಾಬಣ್ಣ ಮಾತನಾಡಿ, ರಾಜ್ಯಮಟ್ಟದ ಈ ಕಾರ್ಯಕ್ರಮಕ್ಕೆ ಎಲ್ಲಾ ಜಿಲ್ಲೆಯಿಂದ ಹೆಚ್ಚಿನ ಜನರು ಆಗಮಿಸಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶೇಖಣ್ಣ ಕಾಳೆ, ಹೇಮಂತ, ನಾಗರಾಜು ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಜ್ಞರ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಬಿ.ಎಸ್. ಪಾಟೀಲರಿಗೆ ರಾಜ್ಯ ಮಟ್ಟದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರಶಸ್ತಿ ನೀಡಲಾಗುವುದು ಎಂದು ಹೆಚ್.ಎಸ್. ಸೋಂಪೂರ ತಿಳಿಸಿದರು.

ಜ.25ರಂದು ಶ್ರೀ ಹೊಳಲಮ್ಮದೇವಿಯ ಪ್ರಾಣ ಪ್ರತಿಷ್ಠಾಪನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರಿಂದ ಗರ್ಭಗುಡಿಯನ್ನು ಮುಚ್ಚಲಾಗಿತ್ತು.

ಇದೀಗ ಶ್ರೀ ಹೊಳಲಮ್ಮದೇವಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಜ.23ರ ಶುಕ್ರವಾರ ಸಾಯಂಕಾಲ 5.30ಕ್ಕೆ ಗೋಮಾತಾ ಪೂಜೆ, ಮುತ್ತೈದೆಯರಿಂದ ಪೂರ್ಣಕುಂಭ ಪೂಜಾ ಪ್ರವೇಶ ಕಾರ್ಯಕ್ರಮ ನೆರವೇರಿದ್ದು, ಜ.24ರಂದು ದೇವತಾ ಶಾಂತಿ ಪೂಜಾ ಕಾರ್ಯಕ್ರಮ ಜರುಗಲಿದೆ. ಜ.25ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಹೊಳಲಮ್ಮ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವತಾ ಶಾಂತಿಹೋಮ, ಗೋ ಹೋಮ, ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಇವರ ಅಮೃತ ಹಸ್ತದಿಂದ ನೆರವೇರಲಿದೆ ಎಂದು ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಎಸ್ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ; ಸೀಟ್‌ ಬೆಲ್ಟ್‌ ನಿಂದ ಉಳೀತು ವೃದ್ದ ದಂಪತಿ ಜೀವ!

0

ರಾಮನಗರ:- ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವೃದ್ಧ ದಂಪತಿ ಪ್ರಯಾಣಿಸುತ್ತಿದ್ದ ಕಾರು ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ ಮೂರ್ನಾಲ್ಕು ಪಲ್ಟಿಯಾದ ಘಟನೆ ಜರುಗಿದೆ.

ಕಳೆದ ಡಿಸೆಂಬರ್‌ನಲ್ಲಿ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬಳಿ ಈ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಸೀಟ್ ಬೆಲ್ಟ್ ಧರಿಸಿದ್ದರಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಮೂಲದ 84 ವರ್ಷದ ಅಬ್ದುಲ್ ಫಜಲ್ ತಮ್ಮ ಪತ್ನಿ ಜೊತೆ ಸಂಬಂಧಿಕರ ಮದುವೆಗೆ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಎಕ್ಸ್‌ಪ್ರೆಸ್‌ವೇ ಎಕ್ಸಿಟ್ ಬಳಿ ಬಸ್ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿಯಾಗಿತ್ತು. ಡಿಕ್ಕಿ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದಿತ್ತು.

ವೃದ್ಧ ದಂಪತಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಲಿಚೆಂಟೈನ್ ಪ್ರಧಾನಿಗೆ ಸಚಿವ ಎಂ.ಬಿ.ಪಾಟೀಲ್ ಮನವಿ!

0

ದಾವೋಸ್‌: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಸಂದರ್ಭದಲ್ಲಿ, ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ರಾಜ್ಯ ಸರ್ಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಲಿಚೆಂಟೈನ್ ಪ್ರಧಾನಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿ ಮಾಡಿ, ಆ ದೇಶದ ಕೈಗಾರಿಕಾ ಪರಿಣತಿಯನ್ನು ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದೊಂದಿಗೆ ಸಮರ್ಥವಾಗಿ ಬಳಸಿಕೊಳ್ಳುವ ಕುರಿತು ಫಲಪ್ರದ ಚರ್ಚೆ ನಡೆಸಿದರು. ಈ ವೇಳೆ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಲಿಚೆಂಟೈನ್ ಪ್ರಧಾನಿಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಲಾಯಿತು.

ಇದೇ ವೇಳೆ ಜಾಗತಿಕ ಕ್ಲೌಡ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪನಿಗಳನ್ನು ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅಮೆಜಾನ್ ವೆಬ್ ಸರ್ವಿಸಸ್ ಉಪಾಧ್ಯಕ್ಷ ಮೈಕಲ್ ಪುಂಕೆ ಅವರೊಂದಿಗೆ ವಿವರವಾದ ಮಾತುಕತೆ ನಡೆಸಲಾಗಿದ್ದು, ಕರ್ನಾಟಕದಲ್ಲಿನ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲಸೌಲಭ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಸೆಂಟರ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಅಲ್ಲದೆ ಉದ್ಯಮ ಸ್ನೇಹಿ ವಾತಾವರಣದ ಬಗ್ಗೆ ವೋಲ್ವೊ ಕಂಪನಿಯೂ ತೃಪ್ತಿ ವ್ಯಕ್ತಪಡಿಸಿದ್ದು, ತಯಾರಿಕೆ, ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆಯ ಮೂಲಕ ರಾಜ್ಯದಲ್ಲಿನ ವಾಹನ ತಯಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಸರ್ಕಾರ ಆಹ್ವಾನ ನೀಡಿದೆ.

ಕುಡಿದು ವಾಹನ ಚಾಲನೆ: ಬೆಂಗಳೂರಿನಲ್ಲಿ 11,500 ಡಿಎಲ್ ರದ್ದು, ಶಾಲಾ ಬಸ್ ಚಾಲಕರ ಮೇಲೂ ಕಠಿಣ ಕ್ರಮ!

0

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ವರ್ಷ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ದ 12,900 ಚಾಲಕರ ಪೈಕಿ 11,500 ಜನರ ಚಾಲನಾ ಪರವಾನಗಿಯನ್ನು (ಡಿಎಲ್) ರದ್ದು ಮಾಡಲಾಗಿದೆ.

ಈ ಕುರಿತು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ದು, ಪದೇ ಪದೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಚಾಲಕರ ಡಿಎಲ್‌ಗಳನ್ನು ಪರಿಶೀಲಿಸಿ ರದ್ದುಗೊಳಿಸಲಾಗಿದೆ ಎಂದರು. ಉಳಿದ ಪ್ರಕರಣಗಳ ಪರಿಶೀಲನೆಯೂ ಮುಂದುವರಿದಿದೆ. ಇತ್ತೀಚೆಗೆ ಶಾಲಾ ವಾಹನ ಚಾಲಕರು ಕುಡಿದು ವಾಹನ ಚಾಲನೆ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 5,110 ಶಾಲಾ ವಾಹನಗಳ ತಪಾಸಣೆಯಲ್ಲಿ 26 ಬಸ್ ಚಾಲಕರು ಮದ್ಯಪಾನ ಮಾಡಿಕೊಂಡು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ ಚಾಲಕರ ವಿರುದ್ಧ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಡಿಎಲ್ ರದ್ದುಗೊಳಿಸುವಂತೆ ಆರ್‌ಟಿಒಗೆ ವರದಿ ಸಲ್ಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ: ನಿಖಿಲ್ ಕುಮಾರಸ್ವಾಮಿ

0

ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತ ಮಾತಗಳನ್ನಾಡಲಿ. ಅವರು ರಾಜಕೀಯವಾಗಿ ಬೆಳೆದು ಬಂದ ದಾರಿಯನ್ನ ಮರೆತಿದ್ದಾರೆ. ಆ ದಾರಿಯನ್ನ ಮರೆತಿರುವವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಮಂಡ್ಯದ ಹನಕೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ನಮಗೂ ನಾಲಿಗೆಯಿದೆ ಅವರ ತರ ಹರಿಬಿಡುವುದಿಲ್ಲ. ಸಮಯ ಬಂದಾಗ ಜಿಲ್ಲೆಯ ಜನ ಇದಕ್ಕೆ ಉತ್ತರ ಕೊಡ್ತಾರೆ. ಅವರು ಹೇಳಿಕೆ ಕೊಡುವುದಕ್ಕಿಂತ ಮುಂಚೆ ಯೋಚನೆ ಮಾಡಿ ಮಾತನಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಅನ್ನು ಓಡಿಸುವಂತ ಶಕ್ತಿ ಇರುವುದು ಜಿಲ್ಲೆಯ ಜನತೆಗೆ. ಯಾರನ್ನ ಜಿಲ್ಲೆಯಲ್ಲಿ ಉಳಿಸಿಕೊಬೇಕು ಯಾರನ್ನ ಕಳಿಸಬೇಕು ಎಂದು ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಕಳೆದ ಎರಡೂವರೆ ವರ್ಷದ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನ ನೋಡಿದ್ದಾರೆ. ಇವತ್ತು ಗಲ್ಲಿ ಗಲ್ಲಿ ಗಲ್ಲಿಯಲ್ಲಿ ರಾಜ್ಯ ಸರ್ಕಾರವನ್ನು ಬಾಯಿಗೆ ಬಂದಂಗೆ ಬೈತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ರಾಷ್ಟ್ರಮಟ್ಟದ ನಾಯಕರ ಜೊತೆ ನಮ್ಮ ಮೈತ್ರಿ ಆಗಿದೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ ಮೈತ್ರಿ ಗಟ್ಟಿಯಾಗಿದೆ. ಇಲ್ಲಿನ ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳೋ ಭೀತಿಯಲ್ಲಿ ಮೈತ್ರಿ ಬೇಡ ಅಂತಿದ್ದಾರೆ. ನಾವು ನೀವು ಮೈತ್ರಿ ಬಗ್ಗೆ ಚರ್ಚೆ ಮಾಡಿದ್ರೆ ಏನು ಸಿಗುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಹನಕೆರೆ, ಬೂದನೂರು. ಕೊಮ್ಮೇರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಿದರು.ಕಾರ್ಯಕರ್ತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು. ಮಂಡ್ಯದ ಹನಕರೆ ಬಳಿ ಟ್ರ್ಯಾಕ್ಟರ್ ಗಳ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ, ಹಾರ ಹಾಕಿ ನಿಖಿಲ್ ಕುಮಾರಸ್ವಾಮಿ ಅವರನ್ನ ಜೆಡಿಎಸ್ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಪ್ರಮುಖ ಮುಖಂಡರು ಅದ್ದೂರಿಯಾಗಿ ಸ್ಚಾಗತ ಕೋರಿದರು.

ನಂತರ ಮಂಡ್ಯ ಹುಲಿವಾನ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ಮಹಾದ್ವಾರ, ಶ್ರೀ ಹಿರಿದೇವಮ್ಮ ಶ್ರೀ ಅಚ್ಚಾಳಮ್ಮ ಮತ್ತು ಶ್ರೀ ಅಟ್ಟಿಲಕ್ಕಮ್ಮನವರ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಾಮಸ್ಥರು ಎತ್ತಿನಗಾಡಿ ಮೂಲಕ ಅದ್ದೂರಿ ಸ್ವಾಗತ ಕೋರಿದರು.

error: Content is protected !!