Home Blog Page 19

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹಳದಿ ಮಾರ್ಗಕ್ಕೆ 13ನೇ ರೈಲು, ಶೀಘ್ರದಲ್ಲೇ 5 ನಿಮಿಷಕ್ಕೊಮ್ಮೆ ಸೇವೆ ಲಭ್ಯ

ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಪರಿಣಾಮಕಾರಿ ಪರಿಹಾರವಾಗಿ ಪರಿಗಣಿಸಲಾಗುತ್ತಿರುವ ನಮ್ಮ ಮೆಟ್ರೋದ ಹಳದಿ ಮಾರ್ಗ (ಆರ್.ವಿ. ರಸ್ತೆ–ಬೊಮ್ಮಸಂದ್ರ)ಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೋಮವಾರ 13ನೇ ಮೆಟ್ರೋ ರೈಲನ್ನು ಸ್ವಾಗತಿಸಿದ್ದು, ಹಳದಿ ಮಾರ್ಗದ ಕಾರ್ಯಾಚರಣಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ಆರು ಕೋಚ್‌ಗಳನ್ನು ಒಳಗೊಂಡಿರುವ ಈ ಹೊಸ ರೈಲು ಸೋಮವಾರ ಹೆಬ್ಬಗೋಡಿ ಡಿಪೋಗೆ ತಲುಪಿದೆ. ಸದ್ಯ ಕೋಚ್‌ಗಳನ್ನು ಟ್ರೈಲರ್‌ಗಳಿಂದ ಇಳಿಸುವ ಕಾರ್ಯ ನಡೆಯುತ್ತಿದ್ದು, ನಂತರ ಅವುಗಳನ್ನು ಜೋಡಿಸಿ ಸ್ಟ್ಯಾಟಿಕ್ ಟೆಸ್ಟಿಂಗ್‌ಗಾಗಿ ಇನ್ಸ್‌ಪೆಕ್ಷನ್ ಬೇ ಲೈನ್‌ (IBL)ಗೆ ಕರೆದೊಯ್ಯಲಾಗುತ್ತದೆ.

ಸಾರ್ವಜನಿಕ ಸೇವೆಗೆ ಮುನ್ನ ರೈಲು ಕಡ್ಡಾಯವಾಗಿ ವಿವಿಧ ತಾಂತ್ರಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಿದ್ದು, ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್‌ಗಳ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತದೆ. ಮೆಟ್ರೋ ಸೇವೆಗೆ ಅಡಚಣೆ ಉಂಟಾಗದಂತೆ ಈ ಪರೀಕ್ಷಾ ಕಾರ್ಯಗಳನ್ನು ರಾತ್ರಿ ವೇಳೆಯಲ್ಲೇ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವ ಆಗಸ್ಟ್ 11ರಂದು ಪೂರ್ಣಗೊಳ್ಳಲಿದ್ದು, ಆ ವೇಳೆಗೆ ಒಟ್ಟು 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿವೆ. ಇದರಿಂದ ಪ್ರಯಾಣಿಕರ ನಿರೀಕ್ಷೆಯ ಅವಧಿ ಗಣನೀಯವಾಗಿ ಕಡಿಮೆಯಾಗಲಿದ್ದು, ಪೀಕ್ ಅವರ್‌ನಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ರೈಲು ಸಂಚಾರ ನಡೆಸುವ ಗುರಿ ಹೊಂದಲಾಗಿದೆ.

ಇದಲ್ಲದೆ, ಒಟ್ಟು ರೈಲುಗಳಲ್ಲಿ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿಗಳ ನಿರ್ವಹಣೆಗೆ ಮೀಸಲು ಸಂಗ್ರಹವಾಗಿ ಕಾಯ್ದಿರಿಸಲಾಗುತ್ತದೆ. ಹಳದಿ ಮಾರ್ಗದ ಅಗತ್ಯ ಪೂರೈಸಿದ ಬಳಿಕ ಟಿಆರ್‌ಎಸ್‌ಎಲ್ ಸಂಸ್ಥೆ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗಾಗಿ 18 ಹೊಸ ರೈಲುಗಳ ಪೂರೈಕೆಗೆ ಗಮನಹರಿಸಲಿದೆ.

ಇದೇ ವೇಳೆ, 2027ರೊಳಗೆ ಬೆಮೆಲ್ ಸಂಸ್ಥೆಯು ಹಳದಿ ಮಾರ್ಗಕ್ಕಾಗಿ ಹೆಚ್ಚುವರಿಯಾಗಿ ಆರು ರೈಲುಗಳನ್ನು ಪೂರೈಸುವ ನಿರೀಕ್ಷೆಯಿದ್ದು, ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮೆಟ್ರೋ ಸೇವೆಯನ್ನು ಮತ್ತಷ್ಟು ಬಲಪಡಿಸುವ ಯೋಜನೆ ರೂಪಿಸಲಾಗಿದೆ.

ಹಾರಂಗಿ ಜಲಾಶಯ ಒಳಹರಿವು ತೀವ್ರ ಕುಸಿತ: ರೈತರಲ್ಲಿ ಆತಂಕ

0

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯದ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ. ಪರಿಣಾಮ ರೈತರು ಹಾಗೂ ಗ್ರಾಮೀಣ ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪ್ರಸ್ತುತ ಜಲಾಶಯಕ್ಕೆ 285 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, 180 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಳಹರಿವು ಹಾಗೂ ಹೊರಹರಿವು ಎರಡೂ ಹಲವು ಪಟ್ಟು ಹೆಚ್ಚಾಗಿತ್ತು.

8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 3.0 ಟಿಎಂಸಿ ನೀರು ಸಂಗ್ರಹವಾಗಿದೆ. ಮಳೆ ಕೊರತೆ ಮುಂದುವರಿದರೆ ಕೃಷಿ ನೀರಾವರಿ ಹಾಗೂ ಕಾವೇರಿ ನದಿ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸೋಮವಾರಪೇಟೆ, ಹಾಸನ ಮತ್ತು ಮೈಸೂರು ಭಾಗದ ಗ್ರಾಮೀಣ ಪ್ರದೇಶಗಳಲ್ಲಿಯೂ ನೀರಿನ ಕೊರತೆ ಕುರಿತ ಆತಂಕ ಹೆಚ್ಚಾಗಿದ್ದು, ಪರಿಸ್ಥಿತಿಯನ್ನು ರೈತರು ಕಣ್ಣಿಟ್ಟಿದ್ದಾರೆ.

ಶ್ರೀವಾರಿ ಪ್ರಸಾದಕ್ಕೆ ಹೊಸ ಮಾನದಂಡ: ಟಿಟಿಡಿ–ಸಿಎಸ್ಐಆರ್-ಸಿಎಫ್‌ಟಿಆರ್‌ಐ ಒಡಂಬಡಿಕೆ

0

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ಪ್ರಸಾದ ವ್ಯವಸ್ಥೆಗೆ ವೈಜ್ಞಾನಿಕ ಮಾನದಂಡಗಳನ್ನು ಅಳವಡಿಸಲು ಮೈಸೂರಿನ ಸಿಎಸ್ಐಆರ್-ಸಿಎಫ್‌ಟಿಆರ್‌ಐ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಟಿಟಿಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ಶ್ರೀವಾರಿ ಪ್ರಸಾದದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಕಚ್ಚಾ ವಸ್ತು ಸಂಗ್ರಹಣೆ, ತಯಾರಿಕೆ, ಸಂಗ್ರಹಣೆ ಮತ್ತು ವಿತರಣಾ ಪ್ರಕ್ರಿಯೆಗಳಿಗೆ ವೈಜ್ಞಾನಿಕ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ. ಶೇಖರಣಾ ತಂತ್ರಜ್ಞಾನ, ಪ್ಯಾಕೇಜಿಂಗ್ ಮತ್ತು ಶೆಲ್ಫ್ ಲೈಫ್ ಸುಧಾರಣೆಗೆ ಸಿಎಸ್ಐಆರ್-ಸಿಎಫ್‌ಟಿಆರ್‌ಐ ತಾಂತ್ರಿಕ ನೆರವು ನೀಡಲಿದೆ.

ಆಹಾರದಲ್ಲಿ ಮಾಲಿನ್ಯ ಅಪಾಯ ಕಡಿಮೆ ಮಾಡಿ, ಸ್ಥಿರ ಗುಣಮಟ್ಟ ಕಾಯ್ದುಕೊಳ್ಳುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ.

ನಿವೃತ್ತ ಚೀಫ್ ಇಂಜಿನಿಯರ್ ಮಾಣಿಕರಾವ್ ಕನಕಟ್ಟೆ ಮನೆ ಮೇಲೆ ಲೋಕಾಯುಕ್ತ ದಾಳಿ

0

ಕಲಬುರಗಿ: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ನಿವೃತ್ತ ಪಂಚಾಯತ್ ರಾಜ್ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಾಣಿಕರಾವ್ ಕನಕಟ್ಟೆ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದ ತಂಡ ಕಲಬುರಗಿ ನಗರದ ಗೊದಾತಾಯಿ ಕಾಲೋನಿಯಲ್ಲಿರುವ ಮನೆ ಸೇರಿದಂತೆ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿರುವ ನಿವಾಸ, ತೋಟದ ಮನೆ ಹಾಗೂ ಹುಮನಾಬಾದ್‌ನ ಎರಡು ವಾಣಿಜ್ಯ ಸಂಕೀರ್ಣಗಳ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿ ವೇಳೆ ಮಾಣಿಕರಾವ್ ಕನಕಟ್ಟೆ ಮನೆಯಲ್ಲಿ ಇರಲಿಲ್ಲ. ಅವರು ಬೆಂಗಳೂರಿನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ವಿಚಾರಣೆಗೆ ಕಲಬುರಗಿಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ.

ಶೋಧದ ವೇಳೆ ಹಳ್ಳಿಖೇಡ ಗ್ರಾಮದಲ್ಲಿ ಸುಮಾರು 18 ಎಕರೆ ತೋಟ ಇರುವ ಮಾಹಿತಿ ಪತ್ತೆಯಾಗಿದ್ದು, ಆಸ್ತಿ ದಾಖಲೆಗಳು, ಹೂಡಿಕೆ ವಿವರಗಳು ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿವಿಧ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಇನ್ನಷ್ಟು ತೀವ್ರಗೊಂಡಿದೆ.

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್: ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ

ದಾವಣಗೆರೆ/ಕಲಬುರಗಿ/ಚಿಕ್ಕಮಗಳೂರು: ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ದಾಳಿ ನಡೆಸಿದ್ದಾರೆ. ದಾವಣಗೆರೆ, ಕಲಬುರಗಿ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ದಾವಣಗೆರೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಮೂರು ಅಧಿಕಾರಿಗಳ ವಿರುದ್ಧ 12 ತಂಡಗಳನ್ನು ರಚಿಸಿ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಹುಬ್ಬಳ್ಳಿಯ ಕೆಎಸ್ಆರ್‌ಟಿಸಿ (ವಾಯವ್ಯ) ವಿಭಾಗದ ಮುಖ್ಯ ಮೆಕ್ಯಾನಿಕ್ ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಸಂಬಂಧಿಸಿದ ದಾವಣಗೆರೆ ಹಾಗೂ ಹುಬ್ಬಳ್ಳಿಯ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ದಾಳಿಯ ವೇಳೆ ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಸುಮಾರು ₹40 ಲಕ್ಷ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದೇ ವೇಳೆ ಚಿತ್ರದುರ್ಗ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರಿಗೆ ಸಂಬಂಧಿಸಿದ ದಾವಣಗೆರೆ ಮತ್ತು ಚಿತ್ರದುರ್ಗದ ಐದು ಸ್ಥಳಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಬೆಳಗಾವಿಯ ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರಿಗೆ ಸೇರಿದ ಚಿತ್ರದುರ್ಗ, ದಾವಣಗೆರೆ ಹಾಗೂ ಬೆಳಗಾವಿಯ ವಿವಿಧ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆದಿದೆ.

ಕಲಬುರಗಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದ ತಂಡ ನಗರದ ಗೋದುತಾಯಿ ನಗರದಲ್ಲಿರುವ ನಿವಾಸ, ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್‌ನಲ್ಲಿರುವ ಎರಡು ವಾಣಿಜ್ಯ ಸಂಕೀರ್ಣಗಳು ಹಾಗೂ ತೋಟದ ಮನೆಯನ್ನು ಪರಿಶೀಲಿಸಿದೆ.

ಚಿಕ್ಕಮಗಳೂರಿನಲ್ಲಿಯೂ ಭ್ರಷ್ಟಾಚಾರ ಆರೋಪದಡಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮೋಹನ್ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಿರುಮಲೇಶ್ ನೇತೃತ್ವದ ತಂಡ ಏಕಕಾಲಕ್ಕೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಕಡೂರಿನಲ್ಲಿರುವ ಸಂಬಂಧಿಕರ ನಿವಾಸದಲ್ಲಿಯೂ ಪರಿಶೀಲನೆ ನಡೆಸಿದೆ.

ದಾಳಿ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳು, ನಗದು ಹಾಗೂ ಆಸ್ತಿ ವಿವರಗಳ ಪರಿಶೀಲನೆ ಮುಂದುವರಿದಿದ್ದು, ಅಕ್ರಮ ಆಸ್ತಿ ಗಳಿಕೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ರಾ ರಾಘವ ಲಾರೆನ್ಸ್? ವಿವಾದದ ಬಳಿಕ ಸ್ಪಷ್ಟನೆ ನೀಡಿದ ನಟ

ಚೆನ್ನೈ: ನಟ, ನೃತ್ಯ ನಿರ್ದೇಶಕ ಹಾಗೂ ರಾಜಕೀಯ ಪ್ರವೇಶದ ಬಗ್ಗೆ ಇತ್ತೀಚೆಗೆ ಸುಳಿವು ನೀಡಿದ್ದ ರಾಘವ ಲಾರೆನ್ಸ್, ತಮ್ಮ ಹೇಳಿಕೆಯೊಂದರ ಕಾರಣದಿಂದ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ಹೊಸ ಸರ್ಕಾರದ ಆಡಳಿತವನ್ನು ಸಮರ್ಥಿಸುವ ವೇಳೆ ನೀಡಿದ ಉದಾಹರಣೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲಾರೆನ್ಸ್, ಹೊಸ ಸರ್ಕಾರ ಕೇವಲ ಒಂದು ತಿಂಗಳಷ್ಟೇ ಆಡಳಿತ ನಡೆಸಿದ್ದು, ಅದರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಇನ್ನಷ್ಟು ಸಮಯ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಈ ವೇಳೆ ಹೊಸ ಮನೆಗೆ ಸ್ಥಳಾಂತರವಾದಾಗ ಅಲ್ಲಿನ ವಾತಾವರಣ, ಸೌಲಭ್ಯಗಳು ಮತ್ತು ಸುತ್ತಮುತ್ತಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂಬ ಉದಾಹರಣೆ ನೀಡಿದ್ದರು. ಜೊತೆಗೆ ಬೀದಿ ನಾಯಿಗಳ ಉದಾಹರಣೆಯನ್ನೂ ಉಲ್ಲೇಖಿಸಿದ್ದರು.

ಈ ಹೇಳಿಕೆಯ ವಿಡಿಯೋ ತುಣುಕುಗಳು ವೈರಲ್ ಆದ ಬಳಿಕ, ಜನರನ್ನು ಬೀದಿ ನಾಯಿಗಳಿಗೆ ಹೋಲಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ರಾಜಕೀಯ ವಲಯದವರು ಲಾರೆನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿವಾದದ ಬೆನ್ನಲ್ಲೇ ಪೂರ್ಣ ವಿಡಿಯೋವನ್ನು ಹಂಚಿಕೊಂಡಿರುವ ಲಾರೆನ್ಸ್, ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯನ್ನು ವಿವರಿಸುವ ಸಲುವಾಗಿ ಮಾತ್ರ ಆ ಉದಾಹರಣೆಯನ್ನು ಬಳಸಿದ್ದು, ಜನರನ್ನು ಅವಹೇಳನ ಮಾಡುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಲಾರೆನ್ಸ್ ಅವರ ಹೇಳಿಕೆ ಮತ್ತು ಅದಕ್ಕೆ ಸಂಬಂಧಿಸಿದ ಸ್ಪಷ್ಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಹಾಗೂ ಸಿನಿ ವಲಯದಲ್ಲೂ ಗಮನ ಸೆಳೆದಿದೆ.

ಕಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ಕನ್ನಡದ ನಟಿ ಸಂಯುಕ್ತಾ ಹೆಗಡೆ ಎಂಟ್ರಿ: ಕಿರಿಕ್‌ ಬೆಡಗಿಗೆ ಸಿಕ್ತು ಕರಿಯರ್‌ನ ಬಿಗ್ ಆಫರ್

ಚೆನ್ನೈ: ಕನ್ನಡ ಚಿತ್ರರಂಗದಿಂದ ಆರಂಭವಾದ ಸಂಯುಕ್ತಾ ಹೆಗಡೆ ಅವರ ಸಿನಿಪಯಣ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಚಿಯಾನ್ ವಿಕ್ರಮ್ ನಾಯಕನಾಗಿ ನಟಿಸುತ್ತಿರುವ ‘ಚಿಯಾನ್ 63’ ಸಿನಿಮಾದ ಪ್ರಮುಖ ಪಾತ್ರಕ್ಕೆ ಸಂಯುಕ್ತಾ ಆಯ್ಕೆಯಾಗಿದ್ದು, ಇದು ಅವರ ಕರಿಯರ್‌ನ ಅತಿದೊಡ್ಡ ಅವಕಾಶಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿದೆ.

ಆನಂದ್ ಶಂಕರ್ ನಿರ್ದೇಶನದ ಈ ಚಿತ್ರ ಸಂಪೂರ್ಣ ಫ್ಯಾಮಿಲಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ನಿರ್ಮಾಣವಾಗುತ್ತಿದೆ. ‘ಇರು ಮುಗನ್’ ಚಿತ್ರದ ಬಳಿಕ ಸುಮಾರು ಹತ್ತು ವರ್ಷಗಳ ನಂತರ ವಿಕ್ರಮ್-ಆನಂದ್ ಶಂಕರ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದರಿಂದ ಸಿನಿಮಾ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ.

‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡದಲ್ಲಿ ಗುರುತಿಸಿಕೊಂಡ ಸಂಯುಕ್ತಾ, ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗಗಳಲ್ಲಿ ಸಕ್ರಿಯರಾದರು. ‘ಕೋಮಾಲಿ’, ‘ಮನ್ಮಥ ಲೀಲೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲೂ ಅವಕಾಶಗಳನ್ನು ಪಡೆದುಕೊಂಡಿರುವ ಅವರು, ಈಗ ಕಾಲಿವುಡ್‌ನ ಬಿಗ್‌ಸ್ಟಾರ್ ವಿಕ್ರಮ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಒಮ್ಮೆ ಕನ್ನಡ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ವಿವಾದಕ್ಕೆ ಸಿಲುಕಿ ಮಧ್ಯದಲ್ಲೇ ಹೊರಬಿದ್ದಿದ್ದ ಸಂಯುಕ್ತಾ, ಬಳಿಕ ಸಂಪೂರ್ಣವಾಗಿ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದರು. ಇದೀಗ ‘ಚಿಯಾನ್ 63’ ಮೂಲಕ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.

ಚಿತ್ರದಲ್ಲಿ ವಿಕ್ರಮ್ ಜೊತೆಗೆ ಊರ್ವಶಿ, ಎಂ.ಎಸ್. ಭಾಸ್ಕರ್, ರಿಯಾ ಶಿಬು ಸೇರಿದಂತೆ ಪ್ರಮುಖ ಕಲಾವಿದರು ನಟಿಸುತ್ತಿದ್ದು, ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಉಳಿದ ಪಾತ್ರವರ್ಗದ ಮಾಹಿತಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

‘ನಟಿ ಸಂಚಿತಾ ಉಗಾಲೆ ನನ್ನ ಪ್ರೇಯಸಿ ಅಲ್ಲ’: ಸಹನಟನ ಸ್ಪೋಟಕ ಹೇಳಿಕೆ

ಮುಂಬೈ: ಹಿಂದಿ ಕಿರುತೆರೆ ನಟಿ ಸಂಚಿತಾ ಉಗಾಲೆ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 22 ವರ್ಷದ ನಟಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಅವರ ವೈಯಕ್ತಿಕ ಜೀವನದ ಕುರಿತು ಹಲವು ಮಾಹಿತಿ ಹೊರಬಿದ್ದಿವೆ.

ಪ್ರಕರಣದ ಬೆನ್ನಲ್ಲೇ ಸಹನಟ ಉಜ್ವಲ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮತ್ತು ಸಂಚಿತಾ ನಡುವಿನ ಪ್ರೇಮ ಸಂಬಂಧದ ಸುದ್ದಿಗಳನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ. “ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧ ಇರಲಿಲ್ಲ. ಸಂಚಿತಾ ಬೇರೊಬ್ಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಇತ್ತೀಚಿನ ದಿನಗಳಲ್ಲಿ ಆ ಸಂಬಂಧದಿಂದಾಗಿ ಅವರು ಮಾನಸಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು” ಎಂದು ಹೇಳಿದ್ದಾರೆ.

ಅವರು ಮುಂದುವರಿದು, ಕಳೆದ ಕೆಲವು ದಿನಗಳಿಂದ ಊರಿನಲ್ಲಿ ಇದ್ದ ಕಾರಣ ಸಂಚಿತಾ ಅವರೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ, ನಟಿಯ ಪರಿಸ್ಥಿತಿಯನ್ನು ಅರಿತಿದ್ದ ನಿರ್ಮಾಣ ಸಂಸ್ಥೆ ಕೂಡ ಅವರಿಗೆ ಮಾನಸಿಕ ಧೈರ್ಯ ತುಂಬುವ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದಾರೆ.

ನಟಿ ಸಾವಿನ ಹಿಂದೆ ವೈಯಕ್ತಿಕ ಸಂಬಂಧಗಳ ಒತ್ತಡ ಕಾರಣವಾಗಿದೆಯೇ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸಂಚಿತಾ ಅವರ ವೈಯಕ್ತಿಕ ಜೀವನ, ಆಪ್ತರ ಸಂಪರ್ಕ ಮತ್ತು ಮಾಜಿ ಸಂಗಾತಿಯ ಹಿನ್ನೆಲೆಯನ್ನೂ ಪರಿಶೀಲಿಸಲಾಗುತ್ತಿದೆ. ಪ್ರಕರಣದ ತನಿಖಾ ವರದಿ ಬಳಿಕವೇ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.

ನಟ ವಿಜಯ್ ರಾಘವೇಂದ್ರ-ಶ್ರೀಮುರಳಿ ತಾಯಿ ಜಯಮ್ಮ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಜಯಮ್ಮ ಅವರ ನಿಧನದಿಂದ ನಟರಾದ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಕುಟುಂಬ ತೀವ್ರ ಶೋಕಕ್ಕೊಳಗಾಗಿದೆ. ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯವಾಗಿರುವ ಈ ಕುಟುಂಬದ ಯಶಸ್ಸಿನ ಹಿಂದೆ ಜಯಮ್ಮ ಅವರ ಪ್ರೋತ್ಸಾಹ, ತ್ಯಾಗ ಮತ್ತು ನೈತಿಕ ಬೆಂಬಲ ಪ್ರಮುಖ ಪಾತ್ರ ವಹಿಸಿತ್ತು.

ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಗೆದ್ದು ಬಳಿಕ ಪ್ರಮುಖ ನಟನಾಗಿ ಬೆಳೆದ ವಿಜಯ್ ರಾಘವೇಂದ್ರ ಹಾಗೂ ‘ಉಗ್ರಂ’ ಚಿತ್ರದ ಮೂಲಕ ಹೊಸ ಇಮೇಜ್ ಕಟ್ಟಿಕೊಂಡು ‘ರೋರಿಂಗ್ ಸ್ಟಾರ್’ ಆಗಿ ಗುರುತಿಸಿಕೊಂಡ ಶ್ರೀಮುರಳಿ ಅವರ ಸಿನಿ ಬದುಕಿಗೆ ಜಯಮ್ಮ ಅವರ ಬೆಂಬಲ ನಿರಂತರವಾಗಿತ್ತು. ಕುಟುಂಬದ ಎಲ್ಲ ಹಂತಗಳಲ್ಲೂ ಅವರು ಬೆನ್ನೆಲುಬಾಗಿ ನಿಂತಿದ್ದರು.

ರಾಜ್‌ಕುಮಾರ್ ಕುಟುಂಬದ ಸಂಬಂಧಿಕರಾಗಿರುವ ಚಿನ್ನೇಗೌಡರ ಕುಟುಂಬದಲ್ಲಿ ಸಂಭವಿಸಿರುವ ಈ ದುರ್ಘಟನೆ ಸ್ಯಾಂಡಲ್‌ವುಡ್ ವಲಯದಲ್ಲಿ ನೋವು ಮೂಡಿಸಿದೆ. ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು, ಜಯಮ್ಮ ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಯೋಗ ದಿನಾಚರಣೆ ಅರ್ಥಪೂರ್ಣವಾಗಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯುಷ್ ಇಲಾಖೆಯ ವತಿಯಿಂದ ನಡೆದ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಯೋಗ ದಿನಾಚರಣೆಯನ್ನು ಕಡ್ಡಾಯವಾಗಿ ಆಯೋಜಿಸಬೇಕು. ಯೋಗ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಆರೋಗ್ಯ ವೃದ್ಧಿಗೆ ನಿರಂತರ ಅಭ್ಯಾಸವಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಯೋಗ ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕು. ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಯೋಗಾಸಕ್ತರು ಯಾವುದೇ ವಯೋಮಿತಿ ಇಲ್ಲದೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದ ಬೇಗಂ ಮಾತನಾಡಿ, ಜೂನ್ 21ರಂದು ಬೆಳಿಗ್ಗೆ 6.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಯೋಗ ದಿನಾಚರಣೆ ಅಂಗವಾಗಿ ಜೂನ್ 20ರಂದು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9.30ಕ್ಕೆ ಗದಗ-ಬೆಟಗೇರಿ ನಗರ ಆವರಣದಿಂದ ಹೊರಟು ಟಾಂಗಾ ಕೂಟ, ರೋಟರಿ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗವಾಗಿ ನಗರಸಭೆ ಆವರಣ ತಲುಪಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಸಂಜೀವ ನಾರಪ್ಪನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಯೋಗ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಯೋಗವು ಆರೋಗ್ಯಕರ ಜೀವನದ ಮೂಲಮಂತ್ರ. ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯ.”

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

error: Content is protected !!