Home Blog Page 16

ರಾಜ್ಯ ಪ್ರಶಸ್ತಿಗೆ ಬಾಲ ಪ್ರತಿಭೆ ಸಾನ್ವಿ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ವಿ.ವಿ.ಎಸ್. ಎಂ.ಪಿ. ಪ್ರಕಾಶ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೆ.ಎಲ್. ಸಾನ್ವಿ, ಶ್ರೀ ವಾಲ್ಮೀಕಿ ಕಲಾ ಸೇವಾ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೊಸಪೇಟೆಯ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ ವತಿಯಿಂದ 2025-26ನೇ ಸಾಲಿನ ಪ್ರಶಸ್ತಿಗೆ ಭರತನಾಟ್ಯ ವಿಭಾಗದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಅನುರಾಧ ವಾಲ್ಮೀಕಿ ತಿಳಿಸಿದ್ದಾರೆ.

ರಾಮನಗರದ ವೈ. ಜಯಂತಿ ಮಾಲ ಹಾಗೂ ಲಕ್ಷ್ಮಿಪತಿ ಕುಪ್ಪ ದಂಪತಿಯ ಪುತ್ರಿಯಾಗಿರುವ ಸಾನ್ವಿ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದು, ಹಂಪಿ ಉತ್ಸವ-2026ರ ವೇದಿಕೆಯಲ್ಲೂ ನೃತ್ಯ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಜೂನ್ 28ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ವಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸಾನ್ವಿಯ ಸಾಧನೆಗೆ ಎಂ.ಪಿ. ಪ್ರಕಾಶ್ ಶಾಲೆಯ ಮುಖ್ಯಶಿಕ್ಷಕಿ ಮಧುಮತಿ ಹಾಗೂ ಶಿಕ್ಷಕರ ಬಳಗ, ಆರ್ಯವೈಶ್ಯ ಸಂಘ ಟ್ರಸ್ಟ್ ಅಧ್ಯಕ್ಷ ಕೊರಗಲ್ ರಾಘವೇಂದ್ರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗೆ ವಿಶೇಷ ಅಭಿಯಾನ

ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಸರ್ಕಾರಿ ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ದಾಖಲಿಸಲು ವಿಶೇಷ ಅಭಿಯಾನ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಪುರ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಪರಿಶೀಲನೆ ನಡೆಸಿದ ವೇಳೆ ಐವರು ವಿದ್ಯಾರ್ಥಿಗಳು ದೀರ್ಘಾವಧಿಯಿಂದ ಶಾಲೆಗೆ ಗೈರಾಗಿರುವುದು ಬೆಳಕಿಗೆ ಬಂತು.

ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಇಓ ಶ್ರೀಧರ್ ಚಿನಗುಂಡಿ, ಗೈರುಹಾಜರಾಗಿರುವ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ತಾಲೂಕಿನಾದ್ಯಂತ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪುನಃ ದಾಖಲಿಸುವ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದರು. ಇದಕ್ಕೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಭೇಟಿಯ ವೇಳೆ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಸವಿದ ಇಓ ಅವರು, ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಅಡುಗೆ ಕೊಠಡಿಗೆ ಭೇಟಿ ನೀಡಿ ಆಹಾರ ಸಾಮಗ್ರಿಗಳ ಸಂಗ್ರಹಣೆ ಹಾಗೂ ಶುಚಿತ್ವವನ್ನು ವೀಕ್ಷಿಸಿ, ಮನೆಯ ಮಕ್ಕಳಿಗೆ ಸಿದ್ಧಪಡಿಸುವ ಗುಣಮಟ್ಟದಲ್ಲೇ ಶಾಲಾ ಮಕ್ಕಳಿಗೂ ಆಹಾರ ತಯಾರಿಸುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.

ಶಿಕ್ಷಕರ ಚಲನವಲನ ಪುಸ್ತಕ, ಅಡುಗೆ ಸಿಬ್ಬಂದಿಯ ಸ್ಟಾಕ್ ರಿಜಿಸ್ಟರ್ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ಅವರು, ಎಲ್ಲಾ ದಾಖಲಾತಿಗಳನ್ನು ನಿಯಮಿತವಾಗಿ ನವೀಕರಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಶಾಲಾ ಮೈದಾನದ ಕಾಂಪೌಂಡ್ ಗೋಡೆ ಕಾಮಗಾರಿ, ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಗಟಾರ್ ಕಾಮಗಾರಿ ಸ್ಥಳ ಹಾಗೂ ನರೇಗಾ ಯೋಜನೆಯಡಿ ನಿರ್ಮಿಸಲಾದ ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.

ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಹಾಜರಾತಿ, ಪೌಷ್ಟಿಕ ಆಹಾರ ಮತ್ತು ರೇಷನ್ ದಾಸ್ತಾನು ದಾಖಲೆಗಳನ್ನು ಪರಿಶೀಲಿಸಿದರು. ಶಿರೋಳ ಗ್ರಾಮ ಪಂಚಾಯಿತಿ ಕಚೇರಿಗೂ ಭೇಟಿ ನೀಡಿ ಸಿಬ್ಬಂದಿಯ ಹಾಜರಾತಿ ಪುಸ್ತಕ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಪಿಡಿಓ ಮಲ್ಲಪ್ಪ ವಾಲಿ, ನರೇಗಾ ತಾಂತ್ರಿಕ ಸಂಯೋಜಕ ಹನಮಂತ ಡಂಬಳ, ತಾಂತ್ರಿಕ ಸಹಾಯಕ ವೀರಯ್ಯ ಶಹಾಪುರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

“ತಾಲೂಕಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ಗೈರುಹಾಜರಾಗಿರುವ ಮಕ್ಕಳನ್ನು ಗುರುತಿಸಿ ಪುನಃ ಶಾಲೆಗೆ ಸೇರಿಸಲು ವಿಶೇಷ ಅಭಿಯಾನ ಕೈಗೊಳ್ಳಬೇಕು.”

— ಶ್ರೀಧರ್ ಚಿನಗುಂಡಿ, ಇಒ, ತಾಲೂಕು ಪಂಚಾಯತ್, ನರಗುಂದ

ಶಾಲಾ ವಾಹನ ಸುರಕ್ಷತೆಗೆ ಖಡಕ್ ಸೂಚನೆ: 40 ಕಿ.ಮೀ. ವೇಗ ಮಿತಿ ಕಡ್ಡಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗದಗ ಶಹರ ವಲಯದ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಾಲಾ ವಾಹನಗಳ ಚಾಲಕರು ಮತ್ತು ನಿರ್ವಾಹಕರ ಸಭೆ ನಗರದ ಶಹರ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಅರುಣಕುಮಾರ ಕಟ್ಟಿಮನಿ ಮಾತನಾಡಿ, ಶಾಲಾ ವಾಹನಗಳ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಶಾಲಾ ವಾಹನ ಚಾಲಕರು ಅತಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಓವರ್‌ಟೇಕ್ ಮಾಡುವಾಗ ಅಥವಾ ಇತರ ವಾಹನಗಳನ್ನು ಹಿಂದಿಕ್ಕುವ ವೇಳೆ ಯಾವುದೇ ರೀತಿಯ ಅಜಾಗರೂಕತೆ ತೋರಬಾರದು. ಮಕ್ಕಳ ಸುರಕ್ಷತೆಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ನಿಯಮಬದ್ಧವಾಗಿ ವಾಹನ ಚಲಾಯಿಸಬೇಕು ಎಂದು ಸೂಚಿಸಿದರು.

ವಾಹನಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಬಾರದು. ಶಾಲಾ ವಾಹನದ ವೇಗವನ್ನು ಗಂಟೆಗೆ 40 ಕಿ.ಮೀ. ಮಿತಿಯೊಳಗೆ ಕಾಯ್ದುಕೊಳ್ಳಬೇಕು. ವಾಹನಗಳ ಫಿಟ್ನೆಸ್ ಪ್ರಮಾಣಪತ್ರ, ವಿಮೆ ಹಾಗೂ ಇತರೆ ದಾಖಲೆಗಳನ್ನು ನಿಯಮಿತವಾಗಿ ನವೀಕರಿಸಿಕೊಂಡಿರಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಮಾತನಾಡಿ, ಶಾಲಾ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಕಡ್ಡಾಯವಾಗಿದ್ದು, ಅಗ್ನಿಶಾಮಕ ಉಪಕರಣ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿ ಇರಬೇಕು ಎಂದು ಹೇಳಿದರು. ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ನಿರಂತರ ತರಬೇತಿ ಮತ್ತು ಅರಿವು ಮೂಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಚಾಲಕರು ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವಾಹನ ಚಾಲನೆಯ ವೇಳೆ ಮೊಬೈಲ್ ಫೋನ್ ಬಳಕೆ ಮಾಡಬಾರದು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಅಜಾಗರೂಕ ಚಾಲನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ವಾಹನಗಳ ತಾಂತ್ರಿಕ ಸ್ಥಿತಿ, ಬ್ರೇಕ್ ವ್ಯವಸ್ಥೆ, ಟೈರ್‌ಗಳ ಗುಣಮಟ್ಟ ಸೇರಿದಂತೆ ವಿವಿಧ ಸುರಕ್ಷತಾ ಅಂಶಗಳ ಕುರಿತು ಪರಿಶೀಲನೆ ನಡೆಸಲಾಯಿತು. ಸರ್ಕಾರ ಹಾಗೂ ಸಾರಿಗೆ ಇಲಾಖೆ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಎಸ್.ಸಿ. ಪ್ರಭಯ್ಯನಮಠ, ಎಸ್.ಆರ್. ನದಾಫ್, ಎಂ.ಎ. ಯರಗುಡಿ, ಮುರಳಿ ಸೋಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಗದಗ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು, ಶಾಲಾ ವಾಹನ ಚಾಲಕರು ಹಾಗೂ ನಿರ್ವಾಹಕರು ಭಾಗವಹಿಸಿದ್ದರು.

“ಶಾಲಾ ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ವೇಗ ಮಿತಿ, ಜಿಪಿಎಸ್, ಫಸ್ಟ್ ಎಯ್ಡ್ ಕಿಟ್ ಸೇರಿದಂತೆ ಎಲ್ಲ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಅನಿವಾರ್ಯ.”

ಅರುಣಕುಮಾರ ಕಟ್ಟಿಮನಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ

ಪೋಲಿಯೋ ಮುಕ್ತ ಮುಂಡರಗಿಗೆ ಸಜ್ಜು..!

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಗೌಡ ಪಾಟೀಲ ಮಾತನಾಡಿ, ಜೂನ್ 28ರಿಂದ ಜುಲೈ 1ರವರೆಗೆ **ರಾಷ್ಟ್ರೀಯ** ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಜೂನ್ 28ರಂದು ಬೂತ್‌ಗಳಲ್ಲಿ 0ರಿಂದ 5 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುವುದು. ನಂತರ ಜೂನ್ 29ರಿಂದ ಜುಲೈ 1ರವರೆಗೆ ಲಸಿಕೆ ಪಡೆಯದ ಮಕ್ಕಳನ್ನು ಮನೆ-ಮನೆಗೆ ತೆರಳಿ ಪತ್ತೆಹಚ್ಚಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ 104 ಲಸಿಕಾ ತಂಡಗಳು, ಒಂದು ಮೊಬೈಲ್ ತಂಡ ಹಾಗೂ ಐದು ಟ್ರಾನ್ಸಿಟ್ ತಂಡಗಳನ್ನು ರಚಿಸಲಾಗಿದ್ದು, ಒಟ್ಟು 12,597 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಸಜ್ಜನರ ಮಾತನಾಡಿ, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಡಂಗೂರ ಹಾಗೂ ಮೈಕಿಂಗ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿಗಳು ಹಾಗೂ ಪುರಸಭೆಯಿಂದ ಲಸಿಕಾ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಆಯೋಜಿಸಲು, ನಾಲ್ಕು ದಿನಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಹಾಗೂ ಅಗತ್ಯ ವಾಹನ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: 8 ಮಂದಿಯ ವಿರುದ್ಧ ಎಫ್‌ಐಆರ್, ಇಬ್ಬರ ಬಂಧನ!

0

ಲಕ್ನೋ: ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ.

ವಿಶೇಷ ತನಿಖಾ ತಂಡ ಸಲ್ಲಿಸಿರುವ ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೂಲಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರಿಂದ ಹಣ ವಶಪಡಿಸಿಕೊಂಡ ಬಳಿಕ ಅನುಕಲ್ಪ್ ಮಿಶ್ರಾ ಮತ್ತು ಲವಕುಶ್ ಮಿಶ್ರಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 306, 316(5), 317(4), 317(5), 61 ಹಾಗೂ 3(5) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲಿ 8 ಪ್ರಮುಖ ಆರೋಪಿಗಳ ಹೆಸರು ಉಲ್ಲೇಖಿಸಲಾಗಿದ್ದು, ಹಲವಾರು ಅಪರಿಚಿತ ವ್ಯಕ್ತಿಗಳನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಮನೀಶ್ ಯಾದವ್, ರಾಮಶಂಕರ್ ಮಿಶ್ರಾ, ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು, ಸುಭಾಷ್ ಚಂದ್ರ ಮತ್ತು ಕರುಣೇಶ್ ಪಾಂಡೆ ಪ್ರಮುಖ ಆರೋಪಿಗಳಾಗಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ದೇಣಿಗೆ ಹಣ ದುರ್ಬಳಕೆ ಹಾಗೂ ಕಳ್ಳತನದ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

33 ದಿನಗಳ ಅಧಿಕಮಾಸ ವ್ರತಾಚರಣೆಗೆ ಭವ್ಯ ಸಮಾರೋಪ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಅಧಿಕಮಾಸದ ಅಂಗವಾಗಿ ನವನಗರದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ವಿಶ್ವಚೇತನ ಮಹಿಳಾ ಮಂಡಳದಿಂದ ಹಮ್ಮಿಕೊಂಡಿದ್ದ 33 ದಿನಗಳ ಅಧಿಕಮಾಸ ವ್ರತಾಚರಣೆಯು ಉದ್ಯಾಪನೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.

ಅಧಿಕಮಾಸದ ಅವಧಿಯಲ್ಲಿ ಮಹಿಳಾ ಮಂಡಳದ ಸದಸ್ಯರು ಪ್ರತಿದಿನ ಕೃಷ್ಣ ತುಳಸಿ ಕಲ್ಯಾಣ ಪೂಜೆ, ದಂಪತಿಗಳಿಗೆ ಬಾಗಿನ ಅರ್ಪಣೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅಪೂಪ ದಾನ ಸೇರಿದಂತೆ ವಿವಿಧ ಧಾರ್ಮಿಕ ಸೇವಾ ಕಾರ್ಯಗಳನ್ನು ನಡೆಸಿದರು. ಅಲ್ಲದೆ, ವಿವಿಧ ಗೃಹಿಣಿಯರ ಮನೆಗಳಲ್ಲಿ ತುಳಸಿ ಪೂಜೆ ನೆರವೇರಿಸಿ, ಪುರಂದರದಾಸರ ಪದಗಳು ಹಾಗೂ ರಾಮ-ಕೃಷ್ಣ ಭಜನೆಗಳನ್ನು ಹಾಡುವ ಮೂಲಕ ವ್ರತಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಮಾಯಾಚಾರಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಅಧಿಕಮಾಸದ ಮಹತ್ವವನ್ನು ವಿವರಿಸಿ, “ಭಾರತೀಯರ ದಾನ ಸಂಸ್ಕೃತಿಯ ಪ್ರತೀಕವಾಗಿ ಅಧಿಕಮಾಸ ವಿಶೇಷ ಸ್ಥಾನ ಪಡೆದಿದೆ” ಎಂದು ಹೇಳಿದರು.

ವಿಶ್ವಚೇತನ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನವನಗರದಲ್ಲಿ ಅಧಿಕಮಾಸ ವ್ರತಾಚರಣೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕಾಳಿಕಾ ದೇವಸ್ಥಾನದ ಅರ್ಚಕ ನಾರಾಯಣ ಆಚಾರ್ಯ ಲಕ್ಕುಂಡಿ, ಕಾರ್ಯಕ್ರಮ ಸಂಯೋಜಕರಾದ ಮೀನಾಕ್ಷಿ ಮತ್ತು ಮೋಹನ ಬಡಿಗೇರ, ಶೋಭಾ ಮತ್ತು ಜಕಣಾಚಾರ್ಯ ಕರವೀರಕರ, ಶೋಭಾ ಮತ್ತು ಎಸ್.ಎನ್. ಬಡಿಗೇರ ದಂಪತಿ ಹಾಗೂ ಸಂಗೀತ ಕಲಾವಿದ ವಾಸು ಸೋನಾರ ಅವರನ್ನು ಸನ್ಮಾನಿಸಲಾಯಿತು.

ಸ್ಮಾರ್ಟ್ ಮೀಟರ್, ಡಿಬಿಟಿಗೆ ಸಿಐಟಿಯು ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ನೇರ ನಗದು ವರ್ಗಾವಣೆ (ಡಿಬಿಟಿ) ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಗಳು ರೈತ ವಿರೋಧಿಯಾಗಿದ್ದು, ಸರ್ಕಾರ ಕೂಡಲೇ ಈ ನೀತಿಗಳನ್ನು ಹಿಂಪಡೆಯಬೇಕು ಎಂದು ಸಿಐಟಿಯು ತಾಲೂಕು ಘಟಕ ಆಗ್ರಹಿಸಿದೆ.

ಪಟ್ಟಣದ ಕೆಪಿಟಿಸಿಎಲ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ತಾಲೂಕು ಮುಖ್ಯಸ್ಥ ಜಗನ್ನಾಥ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಮೂಲಕ ಸರ್ಕಾರ ರೈತರು ಹಾಗೂ ವಿದ್ಯುತ್ ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ಹಾಗೂ ಸೌಲಭ್ಯಗಳ ಕೊರತೆ ಇದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರ ಹಿತಕ್ಕೂ ಧಕ್ಕೆ ಉಂಟಾಗಲಿದ್ದು, ಮುಂದಿನ ದಿನಗಳಲ್ಲಿ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಸೇರಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಬದಲು ವಿದ್ಯುತ್ ನೌಕರರ ಹಾಗೂ ರಾಜ್ಯದ 40 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್ ಹೊಂದಿರುವ ರೈತರ ಹಿತವನ್ನು ಕಾಪಾಡಬೇಕು. ಇಲ್ಲದಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಬಳಿಕ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿಯನ್ನು ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಆರ್.ಎಸ್. ಬಸವರಾಜ್, ಕೆಇಬಿ ನೌಕರರು ಹಾಗೂ ಸಿಐಟಿಯು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯೋಗ ಸೃಷ್ಟಿಗೆ ಎಂಎಸ್‌ಎಂಇ ಮಹತ್ವ: ಜಿಲ್ಲಾಧಿಕಾರಿ ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜೂನ್ 27ರಂದು ದೇಶಾದ್ಯಂತ ಆಚರಿಸಲಾಗುವ ರಾಷ್ಟ್ರವ್ಯಾಪಿ ಎಂಎಸ್‌ಎಂಇ (MSME) ದಿನಾಚರಣೆ-2026 ಅಂಗವಾಗಿ ಗದಗ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇ ಕ್ಷೇತ್ರವು ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಅಭಿವೃದ್ಧಿ ಹಾಗೂ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಜೂನ್ 27ರಂದು ನಡೆಯುವ ದಿನಾಚರಣೆಯಲ್ಲಿ ಉದ್ಯಮಿಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಬಳಿಕ ಎಂಎಸ್‌ಎಂಇ ದಿನಾಚರಣೆ-2026ರ ಜಾಗೃತಿ ಪೋಸ್ಟರ್‌ಗಳನ್ನು ಅನಾವರಣಗೊಳಿಸಲಾಯಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಹತ್ವ, ಉದ್ಯಮಿಗಳಿಗೆ ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಬ್ಯಾಂಕಿಂಗ್ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ. ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಘಟಿತರಾದರೆ ಹಿರಿಯರಿಗೆ ಹೆಚ್ಚಿನ ಸೌಲಭ್ಯ: ಸುವರ್ಣ ಸಿ. ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿರಿಯ ನಾಗರಿಕರು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಬೇಕಾದರೆ ಸಂಘಟಿತರಾಗುವುದು ಅತ್ಯಂತ ಅಗತ್ಯ ಎಂದು ನಿವೃತ್ತ ಶಿಕ್ಷಕಿ ಸುವರ್ಣ ಸಿ. ಹಿರೇಮಠ ಹೇಳಿದರು.

ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಮಿಲ್ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ಹಿರಿಯ ನಾಗರಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಸಂಘದ ಪಾತ್ರ ಮಹತ್ವದ್ದಾಗಿದೆ. ಯುವ ಪೀಳಿಗೆಗೆ ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಅಗತ್ಯವಾಗಿದ್ದು, ಮಕ್ಕಳು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ವೃದ್ಧಾಪ್ಯದಲ್ಲಿಯೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರವೂ ಹಿರಿಯ ನಾಗರಿಕರಿಗೆ ಹೆಚ್ಚಿನ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿ.ಆರ್. ಲಕ್ಕುಂಡಿಮಠ ಹಾಗೂ ಗೌರವಾಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿ, ಹಿರಿಯ ನಾಗರಿಕರ ಸಭೆ ಹಾಗೂ ಚಟುವಟಿಕೆಗಳಿಗೆ ಸೂಕ್ತ ಸ್ಥಳದ ಅವಶ್ಯಕತೆ ಇದ್ದು, ಈ ಬಗ್ಗೆ ಪುರಸಭೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ನಾಗರಿಕರ ಗುರುತಿನ ಚೀಟಿಯ ಮೂಲಕ ಆರೋಗ್ಯ ಸೇವೆ, ಪ್ರಯಾಣ ದರ ರಿಯಾಯಿತಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಹಿರಿಯರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಕೋಲಕಾರ, ಶಕುಂತಲಾ ಅಳಗವಾಡಿ, ಎಲ್.ಆರ್. ಮಲ್ಲಸಮುದ್ರ, ಚಂದ್ರಶೇಖರ ಸೌದತ್ತಿ, ನಂದಿಕೋಲಮಠ, ನಿಂಗಪ್ಪ ಗೊರವರ, ನೀಲಪ್ಪ ಕರ್ಜಕಣ್ಣವರ, ಸೂಗಿರಪ್ಪ ವಾಲಿಶೆಟ್ಟರ, ನಾಗರಾಜ ಸೂರಣಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗಭೂಷಣ ಪವಾಡಶೆಟ್ಟರ ಹಾಗೂ ಐ.ಎಸ್. ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು.

“ಹಿರಿಯ ನಾಗರಿಕರು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಬೇಕಾದರೆ ಸಂಘಟಿತರಾಗುವುದು ಅತ್ಯಂತ ಅಗತ್ಯ.”

— ಸುವರ್ಣ ಸಿ. ಹಿರೇಮಠ

ಪಿಂಚಣಿ ಪಡೆಯುವವರ ಗಮನಕ್ಕೆ: ದಾಖಲೆ ಇಲ್ಲದಿದ್ದರೆ ನಿಮ್ಮ ಖಾತೆಯೂ ರದ್ದಾಗುತ್ತೆ ಎಚ್ಚರ!

ಬೆಂಗಳೂರು: ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಬಳಿಕ ಇದೀಗ ಪಿಂಚಣಿ ಯೋಜನೆಗಳಲ್ಲೂ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಅನರ್ಹರು ಪಿಂಚಣಿ ಪಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸಂಯೋಜನೆ ಆ್ಯಪ್ ಮೂಲಕ ಫಲಾನುಭವಿಗಳ ಪರಿಶೀಲನೆ ನಡೆಸಿ, ಅರ್ಹರಿಗೆ ಮಾತ್ರ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ವಿವಿಧ ಪಿಂಚಣಿ ಯೋಜನೆಗಳಡಿ ಒಟ್ಟು 83,11,493 ಫಲಾನುಭವಿಗಳಿದ್ದು, ಪ್ರಾಥಮಿಕ ಪರಿಶೀಲನೆಯಲ್ಲಿ 23,13,664 ಖಾತೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಮಗ್ರ ಪರಿಶೀಲನೆ ಆರಂಭಿಸಿದೆ.

ಸಂದೇಹಾಸ್ಪದ ಖಾತೆಗಳ ಪೈಕಿ 3,35,610 ಫಲಾನುಭವಿಗಳು ಪಿಂಚಣಿಗೆ ಅರ್ಹರಾಗಿದ್ದಾರೆ ಎಂದು ಗ್ರಾಮ ಆಡಳಿತಾಧಿಕಾರಿಗಳ ವರದಿಯಲ್ಲಿ ದೃಢಪಟ್ಟಿದೆ. ಉಳಿದ ಪ್ರಕರಣಗಳ ಪರಿಶೀಲನೆ ಮುಂದುವರಿದಿದೆ.

ಮೇ ತಿಂಗಳಲ್ಲಿ 63,04,554 ಫಲಾನುಭವಿಗಳಿಗೆ ಪಿಂಚಣಿ ಪಾವತಿಸಲಾಗಿದ್ದು, ತಪ್ಪು ಮಾಹಿತಿ ಅಥವಾ ನಕಲಿ ದಾಖಲೆ ಸಲ್ಲಿಸಿ ಪಿಂಚಣಿ ಪಡೆಯುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಯಸ್ಸಿನ ದೃಢೀಕರಣ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಅಕ್ರಮ ಕಂಡುಬಂದವರ ಪಿಂಚಣಿಯನ್ನು ರದ್ದುಪಡಿಸಲಾಗಿದೆ.

ಪರಿಶೀಲನೆ ವೇಳೆ ದಾಖಲೆ ಸಲ್ಲಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ಪ್ರಮಾಣಪತ್ರ ಒದಗಿಸದ 16,42,303 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ ನೋಟಿಸ್ ನೀಡಲಿದ್ದು, ಸಂಬಂಧಪಟ್ಟ ಫಲಾನುಭವಿಗಳು 30 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಬೇಕಿದೆ.

ಕಂದಾಯ ಇಲಾಖೆ ಜಂಟಿ ನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದು, ಪಿಂಚಣಿ ಯೋಜನೆಗಳು ನಿಜವಾದ ಅರ್ಹರಿಗೆ ತಲುಪುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.