Home Blog Page 160

ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ: ಓರ್ವ ಪ್ರಯಾಣಿಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

0

ಹಾವೇರಿ: ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 18 ವರ್ಷದ ಬಾವರಸಿಂಗ್ ರಜಪೂತ್ ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಖಾಸಗಿ ಬಸ್ ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಚಾಲಕನಿಗೆ ನಿದ್ರೆಯ ಮಂಪರು ಬಂದಿದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ತಕ್ಷಣ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದ ಹಾವೇರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪಲ್ಟಿಯಾಗಿದ್ದ ಬಸ್‌ನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.

ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ನಿದ್ರೆಯ ಮಂಪರೇ ಅಪಘಾತಕ್ಕೆ ಕಾರಣವೇ ಅಥವಾ ಇತರೆ ತಾಂತ್ರಿಕ ಸಮಸ್ಯೆಯಿಂದ ಬಸ್ ನಿಯಂತ್ರಣ ತಪ್ಪಿತೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ.e

ವಿದ್ಯುತ್ ಸ್ಪರ್ಶಕ್ಕೆ ನವಿಲು ಸಾವು; ತಿನ್ನಲು ಹೋದ ಚಿರತೆಗೂ ವಿದ್ಯುತ್ ಶಾಕ್!

0

ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಮೃತಪಟ್ಟಿದ್ದು, ಅದನ್ನು ತಿನ್ನಲು ಹೋದ ಚಿರತೆಯೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ನಡೆದಿದೆ.

ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ವಿದ್ಯುತ್ ಪರಿವರ್ತಕದ ಬಳಿ ನವಿಲು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿತ್ತು. ನವಿಲನ್ನು ತಿನ್ನಲು ಬಂದ ಚಿರತೆ ಟ್ರಾನ್ಸ್‌ಫಾರ್ಮರ್ ಮೇಲೇರಿದ್ದು, ಅಲ್ಲಿಯೇ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ.

ಘಟನೆ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ನವಿಲು ಹಾಗೂ ಚಿರತೆಯ ಮೃತದೇಹಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. ಈ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಗಂಗೆ ಬೆಟ್ಟದಲ್ಲಿ ಟೆಕ್ಕಿ ಅದ್ವೈತ್ ನಾಪತ್ತೆ: ಲ್ಯಾಪ್‌ಟಾಪ್‌ನಲ್ಲಿತ್ತು ಬೆಚ್ಚಿಬೀಳಿಸುವ ಮಾಹಿತಿ

0

ನೆಲಮಂಗಲ: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ತನಿಖೆಗೆ ಮಹತ್ವದ ಸುಳಿವು ಸಿಕ್ಕಿದೆ. ಅವರ ಲ್ಯಾಪ್‌ಟಾಪ್‌ನಲ್ಲಿ ಪತ್ತೆಯಾದ ಮಾಹಿತಿ ಹಾಗೂ ನಾಪತ್ತೆಯಾಗುವ ಮುನ್ನದ ಚಲನವಲನಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಪ್ರಕರಣದ ಪ್ರತಿಯೊಂದು ಆಯಾಮವನ್ನು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದ ಮಧ್ಯಪ್ರದೇಶದ ಇಂದೋರ್ ಮೂಲದ ಅದ್ವೈತ್ ಉಪಾಧ್ಯಾಯ, ಆಗಸ್ಟ್ 7ರಂದು ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಮೂರನೇ ದಿನವೂ ಅವರಿಗಾಗಿ ಪೊಲೀಸ್, ಎಸ್‌ಡಿಆರ್‌ಎಫ್ ಹಾಗೂ ನುರಿತ ಚಾರಣಿಗರ ತಂಡ ಬೃಹತ್ ಕಾರ್ಯಾಚರಣೆ ನಡೆಸುತ್ತಿದೆ.

ತನಿಖೆಯ ಭಾಗವಾಗಿ ಅದ್ವೈತ್ ಅವರ ನಿವಾಸವನ್ನು ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಅವರ ಲ್ಯಾಪ್‌ಟಾಪ್ ವಶಕ್ಕೆ ಸಿಕ್ಕಿದೆ. ಲ್ಯಾಪ್‌ಟಾಪ್‌ನಲ್ಲಿದ್ದ ಕೆಲವು ಆನ್‌ಲೈನ್ ಹುಡುಕಾಟಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಪ್ರದೇಶಕ್ಕೆ ಸಂಬಂಧಿಸಿದ ಆತಂಕಕಾರಿ ಮಾಹಿತಿಯನ್ನು ಅವರು ಹುಡುಕಿದ್ದರೆಂಬ ಶಂಕೆ ವ್ಯಕ್ತವಾಗಿದೆ.

ಈ ನಡುವೆ ನಾಪತ್ತೆಯಾಗುವ ಕೆಲ ದಿನಗಳ ಮುನ್ನವೇ ಅದ್ವೈತ್ ಶಿವಗಂಗೆಗೆ ಭೇಟಿ ನೀಡಿ ಶಾಂತಲಾ ಡ್ರಾಪ್ ಪ್ರದೇಶದ ಸುತ್ತಮುತ್ತ ಓಡಾಡಿದ್ದರು ಎಂಬ ಮಾಹಿತಿಯೂ ಪೊಲೀಸ್ ತನಿಖೆಯಲ್ಲಿ ಹೊರಬಂದಿದೆ ಎನ್ನಲಾಗಿದೆ. ಹೀಗಾಗಿ ಅವರ ನಾಪತ್ತೆ ಪೂರ್ವನಿಯೋಜಿತವಾಗಿತ್ತೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಟ್ರೆಕ್ಕಿಂಗ್‌ಗೆ ತೆರಳಿದ ದಿನ ಬೆಟ್ಟ ಹತ್ತುವ ವೇಳೆ ಅದ್ವೈತ್ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಾಪ್ತಿ ಚೌಹಾಣ್ ಅವರಿಗೆ ಫೋಟೋವೊಂದನ್ನು ಕಳುಹಿಸಿದ್ದರು. ಅದಾದ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.

ಇದರ ನಡುವೆ ಬೆಟ್ಟದ ತುತ್ತತುದಿಯಲ್ಲಿ ಇತರ ಚಾರಣಿಗರು ತೆಗೆದಿದ್ದ ಫೋಟೋಗಳಲ್ಲಿ ಅದ್ವೈತ್ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಇದೇ ಸುಳಿವಿನ ಆಧಾರದಲ್ಲಿ ಪೊಲೀಸರು ಶಾಂತಲಾ ಡ್ರಾಪ್ ಹಾಗೂ ಸುತ್ತಮುತ್ತಲಿನ ದುರ್ಗಮ ಪ್ರದೇಶಗಳತ್ತ ಶೋಧ ಕಾರ್ಯವನ್ನು ಕೇಂದ್ರೀಕರಿಸಿದ್ದಾರೆ.

ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಎಸ್‌ಡಿಆರ್‌ಎಫ್ ತಂಡ ಮತ್ತು ಅನುಭವಿ ಚಾರಣಿಗರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾಗಳ ಮೂಲಕ ಆಳವಾದ ಕಂದಕ, ಕಡಿದಾದ ಬಂಡೆಗಳು ಮತ್ತು ಸಾಮಾನ್ಯವಾಗಿ ತಲುಪಲು ಕಷ್ಟವಾಗುವ ಪ್ರದೇಶಗಳನ್ನು ಪರಿಶೀಲಿಸಲಾಗುತ್ತಿದೆ.

ಶಾಂತಲಾ ಡ್ರಾಪ್ ಶಿವಗಂಗೆ ಬೆಟ್ಟದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾಗಿದೆ. ಆಳವಾದ ಕಂದಕ, ಕಡಿದಾದ ಬಂಡೆಗಳು ಮತ್ತು ದುರ್ಗಮ ಭೌಗೋಳಿಕ ಪರಿಸ್ಥಿತಿ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಆದರೂ ತಂಡಗಳು ಸಾಧ್ಯವಿರುವ ಎಲ್ಲ ಪ್ರದೇಶಗಳನ್ನು ಜಾಲಾಡುತ್ತಿವೆ.

ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟದ ತುತ್ತತುದಿಯ ಈ ಪ್ರದೇಶಕ್ಕೆ ‘ಶಾಂತಲಾ ಡ್ರಾಪ್’ ಎಂಬ ಹೆಸರು ಬಂದಿದೆ. ಹೊಯ್ಸಳ ರಾಜ ವಿಷ್ಣುವರ್ಧನನ ಪತ್ನಿ ಹಾಗೂ ನಾಟ್ಯರಾಣಿ ಶಾಂತಲೆ ಈ ಪ್ರದೇಶದಲ್ಲಿ ಮರಣ ಹೊಂದಿದ್ದಾಳೆ ಎಂಬ ಸ್ಥಳೀಯ ಜನಪದ ನಂಬಿಕೆಯಿದೆ.

ಮರಗಿಡಗಳು ಮತ್ತು ಬೃಹತ್ ಕಲ್ಲುಬಂಡೆಗಳಿಂದ ಆವೃತವಾಗಿರುವ ಈ ಪ್ರದೇಶದ ಅಪಾಯದ ಬಗ್ಗೆ ಹಲವು ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಸದ್ಯ ಅದ್ವೈತ್ ಉಪಾಧ್ಯಾಯರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಅವರ ನಾಪತ್ತೆಯ ಹಿಂದಿನ ನಿಖರ ಕಾರಣವನ್ನು ತನಿಖೆ ಮೂಲಕವೇ ಪತ್ತೆಹಚ್ಚಬೇಕಿದೆ.

ದರ್ಶನ್‌ಗೆ ಕಂಟಕವಾಗುತ್ತಾ ಮಾಫಿ ಅರ್ಜಿಗಳು? ಇಂದು CCH-59 ಕೋರ್ಟ್‌ನಲ್ಲಿ ಮಹತ್ವದ ಆದೇಶ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದೆ.

ಪ್ರಕರಣದ ಆರೋಪಿಗಳಾದ ಪ್ರದೋಷ್ ಹಾಗೂ ವಿನಯ್ ಸಲ್ಲಿಸಿರುವ ಮಾಫಿ ಅರ್ಜಿಗಳ ವಿಚಾರವಾಗಿ ಬೆಂಗಳೂರಿನ CCH-59 ನ್ಯಾಯಾಲಯ ಇಂದು ಮಹತ್ವದ ಆದೇಶ ನೀಡುವ ಸಾಧ್ಯತೆ ಇದೆ.

ಪ್ರಕರಣದ ಆರೋಪಿ ಪ್ರದೋಷ್‌ ಈಗಾಗಲೇ ಮಾಫಿ ಸಾಕ್ಷಿಯಾಗಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು. ಆದರೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಪ್ರದೋಷ್‌ ಅವರ ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ನ್ಯಾಯಾಲಯದಲ್ಲಿ ಪ್ರತಿವಾದಿಸಿದ್ದರು.

ಇದರ ನಡುವೆ ಪ್ರಕರಣದ A10 ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳ ಮಾಫಿ ಅರ್ಜಿಗಳ ವಿಚಾರದಲ್ಲಿ ಪ್ರಾಸಿಕ್ಯೂಷನ್‌ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮಾಫಿ ಅರ್ಜಿಗಳು ದರ್ಶನ್‌ಗೆ ಕಂಟಕವಾಗುತ್ತಾ?

ಮಾಫಿ ಅರ್ಜಿಗಳನ್ನು ನ್ಯಾಯಾಲಯ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಮುಂದಿನ ವಿಚಾರಣೆಗೆ ಅವಕಾಶ ನೀಡಬೇಕಾ ಎಂಬ ವಿಚಾರದಲ್ಲಿ CCH-59 ನ್ಯಾಯಾಲಯ ಇಂದು ಆದೇಶ ನೀಡುವ ಸಾಧ್ಯತೆ ಇದೆ.

ಒಂದು ವೇಳೆ ನ್ಯಾಯಾಲಯ ಮಾಫಿ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡಿದರೆ, ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಹೊಸ ಬೆಳವಣಿಗೆಗಳು ಉಂಟಾಗುವ ಸಾಧ್ಯತೆ ಇದೆ. ಮಾಫಿ ಸಾಕ್ಷಿಗಳ ಹೇಳಿಕೆಗಳು ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಮಹತ್ವ ಪಡೆದುಕೊಂಡರೆ, ಅದು ದರ್ಶನ್ ಪರ ವಾದದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಹಲವು ಬೆಳವಣಿಗೆಗಳು ನಡೆದಿದ್ದು, ಇದೀಗ ಪ್ರದೋಷ್ ಹಾಗೂ ವಿನಯ್ ಅವರ ಮಾಫಿ ಅರ್ಜಿಗಳ ವಿಚಾರ ಮತ್ತೊಂದು ಪ್ರಮುಖ ಹಂತಕ್ಕೆ ತಲುಪಿದೆ. ಹೀಗಾಗಿ ಇಂದು CCH-59 ನ್ಯಾಯಾಲಯ ನೀಡಲಿರುವ ಆದೇಶದತ್ತ ಪ್ರಕರಣದ ಆರೋಪಿಗಳು, ವಕೀಲರು ಹಾಗೂ ಸಾರ್ವಜನಿಕರ ಚಿತ್ತ ನೆಟ್ಟಿದೆ.

ಆರೈಕೆ ಮಾಡಲು ಆಗಲಿಲ್ಲವೆಂದು 50 ದಿನದ ಮಗುವಿನ ಕೊಲೆ? ತಾಯಿ ಸೇರಿ ನಾಲ್ವರ ಬಂಧನ!

0

ಬೀದರ್: ಆರೈಕೆ ಮಾಡಲು ಸಾಧ್ಯವಾಗದೆ 50 ದಿನದ ಹಸುಗೂಸನ್ನು ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪದ ಮೇಲೆ ತಾಯಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ (ದೇ) ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ದೇಗಲೂರು ತಾಲೂಕಿನ ಕವಳಗಡ್ಡ ಗ್ರಾಮದ ಸಂಜು ಹಾಗೂ ವಾಣಿಶ್ರೀ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ಬಳಿಕ ದಂಪತಿ ತೆಲಂಗಾಣದ ನಿಜಾಮಾಬಾದ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಹೆರಿಗೆಗಾಗಿ ವಾಣಿಶ್ರೀ ತನ್ನ ತವರು ಮನೆಗೆ ಬಂದಿದ್ದರು. ದಂಪತಿಗೆ 50 ದಿನದ ಗಂಡು ಮಗು ಇದ್ದು, ಮಗುವಿಗೆ ಓಂಕಾರ ಎಂದು ಹೆಸರಿಟ್ಟಿದ್ದರು ಎನ್ನಲಾಗಿದೆ.

ಆದರೆ ಕೆಲ ದಿನಗಳ ಹಿಂದೆ ಮಗು ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಪತ್ನಿ ಶೌಚಕ್ಕೆ ತೆರಳಿದ್ದ ವೇಳೆ ಮಗು ಕಾಣೆಯಾಗಿದ್ದು, ದೇವರು ಮಗುವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಪತಿ ಸಂಜುಗೆ ಹೇಳಲಾಗಿತ್ತು ಎನ್ನಲಾಗಿದೆ.

ಕುಟುಂಬಸ್ಥರ ಹೇಳಿಕೆ ಬಗ್ಗೆ ಅನುಮಾನಗೊಂಡ ಸಂಜು ಸಂತಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಮಗು ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳ ವಿಚಾರಣೆ ನಡೆಸಿದಾಗ ಮಗುವನ್ನು ಕೊಲೆ ಮಾಡಿ ಬಾವಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಆರೈಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ಘಟನೆಗೆ ಮೂಢನಂಬಿಕೆಯೂ ಕಾರಣವಾಗಿರಬಹುದೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ವಾಣಿಶ್ರೀ ಸೇರಿದಂತೆ ಮಾವ ಬಸವರಾಜ್, ಅತ್ತೆ ರತ್ನಮಾ ಹಾಗೂ ಸಹೋದರ ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಕೊಲೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ರಸ್ತೆ ಗುಂಡಿಯೇ ಕೆರೆಯಾಯ್ತು! ನೀರಿಗೆ ಜಿಗಿದು ಯುವಕರಿಂದ ವಿನೂತನ ಪ್ರತಿಭಟನೆ

0

ಮಂಗಳೂರು: ರಸ್ತೆ ಗುಂಡಿ ಹಾಗೂ ಅದರಲ್ಲಿ ನಿಂತಿರುವ ಕೆಸರು ನೀರಿನತ್ತ ಅಧಿಕಾರಿಗಳ ಗಮನ ಸೆಳೆಯಲು ಯುವಕರ ಗುಂಪೊಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮಳೆ ನೀರು ನಿಂತು ಕೆರೆಯಂತಾಗಿರುವ ಬೃಹತ್ ರಸ್ತೆ ಗುಂಡಿಯಲ್ಲೇ ಯುವಕರು ‘ಕೆರೆ-ದಂಡೆ’ ಆಟವಾಡುವ ಮೂಲಕ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು-ಕೇರಳ ಸಂಪರ್ಕಿಸುವ ರಸ್ತೆಯೊಂದರಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ ಎನ್ನಲಾಗಿದೆ. ಮಳೆಯಿಂದಾಗಿ ಈ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಸಂಚಾರ ಕಷ್ಟಕರವಾಗಿದೆ.

ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸ್ಥಳೀಯ ಯುವಕರು, ಅಧಿಕಾರಿಗಳ ಗಮನ ಸೆಳೆಯಲು ವಿನೂತನ ಪ್ರತಿಭಟನೆಯ ಮೊರೆ ಹೋಗಿದ್ದಾರೆ.

ಕೆಸರು ನೀರಿನಿಂದ ತುಂಬಿದ್ದ ಬೃಹತ್ ಗುಂಡಿಯ ಸುತ್ತ ಸೇರಿದ್ದ ಯುವಕರು, ‘ಕೆರೆ’ ಎಂದು ಹೇಳುತ್ತಿದ್ದಂತೆ ನೀರಿಗೆ ಜಿಗಿಯುವುದು ಹಾಗೂ ‘ದಂಡೆ’ ಎಂದಾಗ ಗುಂಡಿಯಿಂದ ಹೊರಗೆ ಬರುವ ಮೂಲಕ ‘ಕೆರೆ-ದಂಡೆ’ ಆಟವಾಡಿದ್ದಾರೆ. ಈ ಮೂಲಕ ರಸ್ತೆಯ ದುಸ್ಥಿತಿಯನ್ನು ವಿಡಂಬನಾತ್ಮಕವಾಗಿ ಪ್ರದರ್ಶಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವಕರ ಈ ವಿನೂತನ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ಗುಂಡಿಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಗುಂಡಿಗಳ ಆಳ ತಿಳಿಯದೆ ವಾಹನ ಸವಾರರು ಅಪಘಾತಕ್ಕೀಡಾಗುವ ಆತಂಕವೂ ಎದುರಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಸ್ಥಿತಿಗತಿ ಪರಿಶೀಲಿಸಿ, ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚೆನ್ನದೇವಿ ಅಗ್ರಹಾರ ಬಳಿ ಭೀಕರ ಅಪಘಾತ; ಲಾರಿ ಡಿಕ್ಕಿಗೆ ಕಾರಿನ ಮುಂಭಾಗ ನಜ್ಜುಗುಜ್ಜು!

0

ಬೆಂಗಳೂರು ಗ್ರಾಮಾಂತರ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನದೇವಿ ಅಗ್ರಹಾರದ ಬಳಿ ನಡೆದಿದೆ.

ನೆಲಮಂಗಲದಿಂದ ದೊಡ್ಡಬಳ್ಳಾಪುರದ ಕಡೆಗೆ ಲಾರಿಯೊಂದು ತೆರಳುತ್ತಿತ್ತು. ಈ ವೇಳೆ ಚೆನ್ನದೇವಿ ಅಗ್ರಹಾರದ ಬಳಿ ರಸ್ತೆ ತಿರುವಿನಲ್ಲಿ ಲಾರಿ ಹಾಗೂ ಕಾರಿನ ನಡುವೆ ಏಕಾಏಕಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.

ಅಪಘಾತದ ಪರಿಣಾಮ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡ ಕಾರು ಚಾಲಕನಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಸ್ತೆಯ ತಿರುವಿನಲ್ಲಿ ವಾಹನಗಳ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯವೂ ನಡೆದಿದೆ.

ಘಟನೆಯ ಕುರಿತು ದೊಡ್ಡಬೆಳವಂಗಲ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ಮುಂದಾಗಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 15 ಬಾಂಗ್ಲಾದೇಶಿ ಪ್ರಜೆಗಳ ಬಂಧನ!

0

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ 15 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ 29 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 23 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಒಟ್ಟು 295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ನಿರ್ಮಾಣ ಹಂತದ ಕಟ್ಟಡಗಳು, ತಾತ್ಕಾಲಿಕ ಶೆಡ್‌ಗಳು ಹಾಗೂ ಶಂಕಿತ ಅಡಗುದಾಣಗಳ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆ ವೇಳೆ ಸೂಕ್ತ ದಾಖಲೆಗಳಿಲ್ಲದ ಹಾಗೂ ಶಂಕಿತ ವ್ಯಕ್ತಿಗಳು ಸೇರಿದಂತೆ ಒಟ್ಟು 1,909 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಪೈಕಿ ಅಕ್ರಮವಾಗಿ ನೆಲೆಸಿದ್ದ 15 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಬೇಗೂರಿನಲ್ಲಿ 8, ಪರಪ್ಪನ ಅಗ್ರಹಾರದಲ್ಲಿ 7 ಬಂಧನ:

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಾಲ್ಕು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿದ್ದು, 339 ಮಂದಿಯನ್ನು ಪರಿಶೀಲಿಸಲಾಗಿದೆ. ಈ ವೇಳೆ ಎಂಟು ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪೊಲೀಸ್ ತಂಡಗಳು ದಾಳಿ ನಡೆಸಿ 355 ಮಂದಿಯನ್ನು ವಿಚಾರಣೆಗೊಳಪಡಿಸಿವೆ. ಈ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

21 ಸ್ಥಳಗಳಲ್ಲಿ ಶೋಧ:

ಎಲೆಕ್ಟ್ರಾನಿಕ್ಸ್ ಸಿಟಿ, ಬಂಡೇಪಾಳ್ಯ, ಹುಳಿಮಾವು ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯ 21 ಸ್ಥಳಗಳಲ್ಲೂ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆದರೆ ಈ ಪ್ರದೇಶಗಳಲ್ಲಿ ಯಾವುದೇ ಅಕ್ರಮ ವಿದೇಶಿ ಪ್ರಜೆಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ನಾಗರಿಕ ಹಕ್ಕು ಸಂಘಟನೆಗಳ ದೂರು:

ಇನ್ನು ಪೊಲೀಸ್ ಕಾರ್ಯಾಚರಣೆಯ ವೇಳೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ವಲಸೆ ಕಾರ್ಮಿಕರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿ ಕೆಲವು ನಾಗರಿಕ ಹಕ್ಕು ಸಂಘಟನೆಗಳು ದೂರು ನೀಡಿವೆ. ರಾಜ್ಯ ಗೃಹ ಸಚಿವರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಕುರಿತು ದೂರು ಸಲ್ಲಿಸಲಾಗಿದೆ.

ಈ ಆರೋಪಗಳ ನಡುವೆ ಅಕ್ರಮ ವಿದೇಶಿ ಪ್ರಜೆಗಳ ಪತ್ತೆ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಭೀಕರ ಅಪಘಾತ: ಮನೆಗೆ ನುಗ್ಗಿ ಪಲ್ಟಿಯಾದ ಮರಳು ಲಾರಿ, ಮೂವರಿಗೆ ಗಾಯ

0

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಮರಳು ತುಂಬಿದ್ದ ಲಾರಿಯೊಂದು ಮನೆಗೆ ನುಗ್ಗಿ ಪಲ್ಟಿಯಾದ ಘಟನೆ ಯಲಹಂಕದ ಮಾದನಹಳ್ಳಿ ಬಳಿ ಸೋಮವಾರ ಮುಂಜಾನೆ ನಡೆದಿದೆ.

ಅಪಘಾತದ ಪರಿಣಾಮ ಮನೆಯ ಗೋಡೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಯಲಹಂಕ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದೆ. ಲಾರಿ ಮನೆಯ ಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಗೋಡೆ ಜಖಂಗೊಂಡಿದ್ದು, ಬಳಿಕ ಲಾರಿ ಪಲ್ಟಿಯಾಗಿದೆ. ಮನೆಯಲ್ಲಿದ್ದ ಕೆಲವು ವಸ್ತುಗಳಿಗೂ ಹಾನಿಯಾಗಿದೆ.

ಅಪಘಾತದ ಬಳಿಕ ಲಾರಿ ಅಡಿಯಲ್ಲಿ ಚಾಲಕ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಚಾಲಕನನ್ನು ಹೊರತೆಗೆಯಲು ಕ್ರೇನ್‌ ಮೂಲಕ ಲಾರಿಯನ್ನು ಮೇಲಕ್ಕೆತ್ತುವ ಪ್ರಯತ್ನ ಮುಂದುವರಿದಿದೆ.

ಲಾರಿ ಚಾಲಕ ನಿದ್ರೆ ಮಂಪರಿನಲ್ಲಿದ್ದ ವೇಳೆ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಆದರೆ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಚಾಲಕನ ರಕ್ಷಣಾ ಕಾರ್ಯಾಚರಣೆಗೆ ಗ್ಯಾಸ್‌ ಕಟರ್‌ ಬಳಸಲು ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಲಾರಿಯ ಮೇಲ್ಭಾಗವನ್ನು ಕತ್ತರಿಸಿ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಯೋಜಿಸಲಾಗಿದೆ.

ಘಟನಾ ಸ್ಥಳದಲ್ಲಿ ಆಂಬ್ಯುಲೆನ್ಸ್‌ ಬೀಡುಬಿಟ್ಟಿದ್ದು, ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮನೆಯಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡದಿಂದ ಕಾರ್ಯಾಚರಣೆ ಮುಂದುವರಿದಿದ್ದು, ಲಾರಿ ಅಡಿಯಲ್ಲಿ ಸಿಲುಕಿರುವ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಬೆಂಗಳೂರಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ ಚುರುಕು; ಅಕ್ರಮ ವಲಸಿಗರಿಗೆ ಜಾಗ ನೀಡಿದ ಮಾಲೀಕರ ಮೇಲೂ ಕೇಸ್

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಲು ಬೆಂಗಳೂರು ಪೊಲೀಸರು ನಡೆಸುತ್ತಿರುವ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ ಮುಂದುವರಿದಿದೆ.

ಇದರ ಬೆನ್ನಲ್ಲೇ ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ಬಾಡಿಗೆಗೆ ನೀಡಿದ ಆರೋಪದ ಮೇಲೆ ಜಾಗದ ಮಾಲೀಕರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನಗರದ ಹೊರವಲಯದಲ್ಲಿ ಹಣದಾಸೆಗೆ ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ನೀಡಿರುವ ಮಾಲೀಕರ ಮಾಹಿತಿ ಸಂಗ್ರಹಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ವರು ಸೈಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

3,200ಕ್ಕೂ ಹೆಚ್ಚು ದಾಖಲೆ ಪರಿಶೀಲನೆ:

‘ಆಪರೇಷನ್ ಮುಕ್ತ’ ಕಾರ್ಯಾಚರಣೆಯ ಭಾಗವಾಗಿ ಇದುವರೆಗೆ 3,200ಕ್ಕೂ ಹೆಚ್ಚು ಜನರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಒಟ್ಟು 53 ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ 15 ಹಾಗೂ ವೈಟ್‌ಫೀಲ್ಡ್‌ನಲ್ಲಿ 38 ಮಂದಿ ಪತ್ತೆಯಾಗಿದ್ದಾರೆ. ಪತ್ತೆಯಾದವರ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ:

ಪೊಲೀಸರು ನಿನ್ನೆ 500ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಬೆಳ್ಳಂದೂರು, ಬೇಗೂರು, ವೈಟ್‌ಫೀಲ್ಡ್, ಕಾಡುಗೋಡಿ, ಕೆ.ಆರ್.ಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಸುಮಾರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೆಪಾಳ್ಯ, ಹೆಬ್ಬಗೋಡಿ ಹಾಗೂ ಬೇಗೂರು ಸೇರಿದಂತೆ 29 ಕಡೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ವೈಟ್‌ಫೀಲ್ಡ್ ವಿಭಾಗದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಶೆಡ್‌ಗಳಲ್ಲಿ ವಾಸಿಸುತ್ತಿದ್ದವರ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ವಿವಿಧ ಗುರುತಿನ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಜಾಗ ಮಾಲೀಕರ ಬಗ್ಗೆಯೂ ಮಾಹಿತಿ ಸಂಗ್ರಹ:

ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ನೀಡಿರುವ ಮಾಲೀಕರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕಾರ್ಯಾಚರಣೆ ನಡೆಸಿದ 30ಕ್ಕೂ ಹೆಚ್ಚು ಸ್ಥಳಗಳ ಮಾಲೀಕರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದು ಅಥವಾ ಅವರಿಗೆ ಜಾಗ ಒದಗಿಸುವುದರ ಕುರಿತು ಕಾನೂನು ಉಲ್ಲಂಘನೆ ಕಂಡುಬಂದರೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಗುರುತಿನ ದಾಖಲೆಗಳ ಪರಿಶೀಲನೆಯನ್ನೂ ಪೊಲೀಸರು ತೀವ್ರಗೊಳಿಸಿದ್ದಾರೆ.