Home Blog Page 162

ರವಿ ದಂಡಿನರಿಗೆ ಪದವೀಧರ ಕ್ಷೇತ್ರದ ಟಿಕೆಟ್ ನೀಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರವಿ ದಂಡಿನ ಅವರಿಗೆ ಟಿಕೆಟ್ ನೀಡಬೇಕು ಎಂದು ನಿವೃತ್ತಿ ಪ್ರಾಚಾರ್ಯ ಉಮೇಶ ಹಿರೇಮಠ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ಈ ನಾಲ್ಕು ಜಿಲ್ಲೆಯನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕನಕದಾಸ ಶಿಕ್ಷಣ ಸಮಿತಿ ಸಂಸ್ಥೆ ದಶಕಗಳಿಂದ ಶಿಕ್ಷಣದಲ್ಲಿ ಸೇವೆ ಸಲ್ಲಿಸುತ್ತಿದೆ. ಕೆಎಸ್‌ಎಸ್ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕಾಲೇಜುಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಯನ್ನು ಪಡೆದು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ರವಿ ದಂಡಿನ ಅವರಿಗೆ ಟಿಕೆಟ್ ನೀಡಿದರೆ ಗೆಲವು ಸುಲಭವಾಗಲಿದೆ ಎಂದರು.

ರವಿ ದಂಡಿನ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ, ಸಂಘಟಕರಾಗಿ, ಹೋರಾಟಗಾರರಾಗಿ, ಯುವಕರ ಕಣ್ಮಣಿಯಾಗಿ, ನಿರಂತರವಾಗಿ, ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪದವೀಧರರ ಹಾಗೂ ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹಗಲಿರುಳು ಶ್ರಮಿಸಿ ಯಶಸ್ವಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೂ ಹಳೆ ಧಾರವಾಡ ಜಿಲ್ಲೆಯ ಭಾಗದಲ್ಲಿ ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯ ನೀಡಿಲ್ಲ. ಹಣ ಬಲ, ರಾಜಕೀಯ ಬಲ ಇದ್ದವರಿಗೆ ಮಾತ್ರ ಈವರೆಗೆ ಟಿಕೆಟ್ ನೀಡಲಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಎಲ್ಲಾ ವರ್ಗದ ಜನರ ಅವಶ್ಯಕತೆ ಇರುವುದರಿಂದ ಹಿಂದುಳಿದ ವರ್ಗಕ್ಕೆ ಸೇರಿದ ರವಿ ದಂಡಿನ ಅವರಿಗೆ ಬಿಜೆಪಿ ಪಕ್ಷದಿಂದ ಈ ಬಾರಿ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ನೀಡಲು ಈ ಮೂಲಕ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದರು.

ನಿವೃತ್ತ ಪ್ರಾಚಾರ್ಯ ವಿ.ಎಸ್. ದಲಾಲಿ, ಬಿ.ಎಸ್. ಕಂಠಿ, ನಿವೃತ್ತ ಉಪ ಪ್ರಾಚಾರ್ಯ ಡಾ. ಜೆ.ಸಿ. ಜಂಪಣ್ಣನವರ, ಮಲ್ಲಿಕಾರ್ಜುನ ಕಿರೇಸೂರ ಮುಂತಾದವರು ಇದ್ದರು.

ಮಹಾತ್ಮರ ಬದುಕು ನಮಗೆಲ್ಲ ದಾರಿದೀಪ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದ ಬೆಳಕೇ ಆಗಿದ್ದ ಮಹಾತ್ಮರ ಆದರ್ಶ, ಮೌಲ್ಯ, ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಸಮೀಪದ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ ಲಿಂ.ನಿರಂಜನ ಮಹಾಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆಸಿದ `ಮಹಾತ್ಮರ ಬದುಕು-ಬೆಳಕು’ ಚಿಂತನಗೋಷ್ಠಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮರ ದಿವ್ಯ ಜ್ಞಾನ, ಅನುಭವ ಮತ್ತು ಸತ್ಸಂಗದಿಂದ ಸುಂದರ ಬದುಕು ಸಾಧ್ಯವಾಗುತ್ತದೆ. ಲಿಂ.ನಿರಂಜನ ಮಹಾಸ್ವಾಮಿಗಳಂತಹ ಮಹಾತ್ಮರ ಬದುಕು ನಮಗೆಲ್ಲ ದಾರಿದೀಪವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈಗಿನ ಶ್ರೀಗಳು ಗುರುಕುಲದ ನೂರಾರು ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಕುಂದಗೋಳ ಶ್ರೀ ಅಭಿನವ ಬಸವಣ್ಣಜ್ಜನವರು, ನವಲಗುಂದದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಗುಡ್ಡದ ಆನ್ವೇರಿ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು, ಹಿರೇಮಲ್ಲನಕೇರಿಯ ಚನ್ನಬಸವ ಮಹಾಸ್ವಾಮಿಗಳು, ಕಮಡೊಳ್ಳಿಯ ಶ್ರೀ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಮುಖಂಡರುಗಳಾದ ಗವಿಸಿದ್ದಪ್ಪ ದ್ಯಾಮಣ್ಣವರ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಶಿವಪುತ್ರಪ್ಪ ಕಲಕೋಟಿ, ಬಸವರಾಜ ಕೋಳಿವಾಡ, ಬಸವರಾಜ ಗಾಂಜಿ, ಪುಲಕೇಶಿ ಉಪನಾಳ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ನಾಯಿಕೆರೂರು ಗ್ರಾಮದ ಸದ್ಭಕ್ತರು ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಈಶ್ವರ ಮೆಡ್ಲೇರಿ ನಿರೂಪಿಸಿದರು. ಕೆ.ಎಸ್. ಇಟಗಿಮಠ, ರೇಣುಕಗೌಡ ಪಾಟೀಲ, ಶಿವಾನಂದ ಕಟ್ಟಿಮನಿ, ಶರಸೂರಿ, ಮಹಾದೇವ ಬಿಷ್ಟಣ್ಣವರ ನಿರ್ವಹಿಸಿದರು.

ನೇತೃತ್ವ ವಹಿಸಿದ್ದ ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಜನ್ಮ ದೇವರು ಕೊಟ್ಟ ಭಾಗ್ಯ ಮತ್ತು ಸತ್ಕಾರ್ಯ ಮಾಡಲೊಂದು ಅವಕಾಶ. ನಿತ್ಯ ಜೀವನದ ಹೋರಾಟ, ಜಂಜಾಟಗಳ ನಡುವೆಯೂ ಕೈಲಾದ ಮಟ್ಟಿಗೆ ಧರ್ಮ, ಶಿಕ್ಷಣ, ಸಾಮಾಜಿಕ ಸೇವೆ ಮಾಡಬೇಕು ಎಂಬುದು ಲಿಂ. ಶ್ರೀಗಳ ಇಚ್ಛೆಯಾಗಿತ್ತು. ಶ್ರೀಮಠದಲ್ಲಿ ನಿತ್ಯ ನೂರಾರು ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಸೇವೆ ನಡೆಸುವುದಕ್ಕೆ ಭಕ್ತರು ನೀಡುತ್ತಿರುವ ಸಹಕಾರ ಅಪಾರವಾಗಿದೆ. ಲಕ್ಷ್ಮೇಶ್ವರದಲ್ಲಿ ಶ್ರೀಮಠದ ಧಾರ್ಮಿಕ ಪಾಠಶಾಲೆ ನಿರ್ಮಿಸಲಾಗುತ್ತಿದ್ದು, ಭಕ್ತರು ಕೈಜೋಡಿಸುವಂತೆ ತಿಳಿಸಿದರು.

ಪ್ರಾಮಾಣಿಕವಾಗಿ ಕೈಗೊಂಡ ಕೆಲಸಗಳು ಶಾಶ್ವತವಾಗಿರುತ್ತವೆ: ಸಚಿವ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಹಣ ಮಾತ್ರವೇ ಸಾಕಾಗುವುದಿಲ್ಲ. ಅದರ ಜೊತೆಗೆ ಪ್ರಾಮಾಣಿಕತೆ ಅತ್ಯಂತ ಅಗತ್ಯವಾಗಿದೆ. ಪ್ರಾಮಾಣಿಕವಾಗಿ ಕೈಗೊಂಡ ಕೆಲಸಗಳೇ ಸಮಾಜಕ್ಕೆ ಶಾಶ್ವತ ಫಲ ನೀಡುತ್ತವೆ. ಈ ನಿಟ್ಟಿನಲ್ಲಿ ಇಲ್ಲಿನ ಅಭಿವೃದ್ಧಿ ಕಾರ್ಯಗಳು ನಿಜಕ್ಕೂ ಅಭಿನಂದನಾರ್ಹವಾಗಿವೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಅಂತೂರ-ಬೆಂತೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯನ್ನು ಸದ್ಬಳಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಈ ಕಾನೂನನ್ನು ರದ್ದುಪಡಿಸಿರುವುದು ಗ್ರಾಮೀಣ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಕಾನೂನು ಪುನಃ ಜಾರಿಯಾಗಬೇಕೆಂದು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ಒತ್ತಿ ಹೇಳಿದ ಸಚಿವರು, ಪಕ್ಕದ ಒಂದು ಗ್ರಾಮದಲ್ಲಿ 15 ವರ್ಷಗಳ ಹಿಂದೆಯೇ ಡಿಜಿಟಲ್ ಗ್ರಂಥಾಲಯ ಆರಂಭವಾಗಿದ್ದು, ಇಂದು ಅದು ಎಲ್ಲ ಗ್ರಾಮಗಳಿಗೂ ವಿಸ್ತರಿಸಿರುವುದು ಸಂತಸದ ಸಂಗತಿ. ರೈತರು ಸಹ ಡಿಜಿಟಲ್ ಗ್ರಂಥಾಲಯಗಳನ್ನು ಬಳಸಿಕೊಂಡು ಹೊಸ ತಂತ್ರಜ್ಞಾನ, ಮಾಹಿತಿ ಮತ್ತು ಜ್ಞಾನವನ್ನು ಪಡೆದುಕೊಳ್ಳಬೇಕು. ಇದರಿಂದ ರೈತ ಸಮುದಾಯದಲ್ಲಿ ತಂತ್ರಜ್ಞಾನ ಅರಿವು ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲೂ ಹೊಸ ಬದಲಾವಣೆ ಸಾಧ್ಯವಾಗಲಿದೆ ಎಂದು ಹಾರೈಸಿದರು.

ಗ್ರಾಮದಲ್ಲಿ ಐಆರ್‌ಡಿಎಫ್ ಯೋಜನೆಯಡಿ ನಿರ್ಮಾಣವಾದ ಅಂಗನವಾಡಿ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಬಸ್ ತಂಗುದಾಣ, ಎಸ್‌ಡಿಪಿ ಯೋಜನೆಯಡಿ ನಿರ್ಮಾಣವಾದ ಅಂಗನವಾಡಿ ಹಾಗೂ ಜಿಮ್‌ಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಗಿದೆ. ಇವುಗಳ ಸದ್ಬಳಕೆಯನ್ನು ಗ್ರಾಮದ ಸಾರ್ವಜನಿಕರು ಮಾಡಿಕೊಳ್ಳಬೇಕೆಂದು ಸಚಿವರು ತಿಳಿಸಿದರು.

ಅಂತೂರ-ಬೆಂತೂರ ಗ್ರಾಮದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದು, ಅವುಗಳು ಪೂರ್ಣಗೊಂಡ ನಂತರ ಜನರಿಗೆ ಅಗತ್ಯ ಮೂಲ ಸೌಕರ್ಯಗಳು ಲಭ್ಯವಾಗಲಿವೆ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಪ್ರಕಾಶಗೌಡ ಪಾಟೀಲ ವಹಿಸಿದ್ದರು. ಉಪಾಧ್ಯಕ್ಷೆ ನೀಲವ್ವ ಬಡ್ನಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಕುರ್ತಕೋಟಿ ಗ್ರಾ.ಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ, ರವಿ ಮೂಲಿಮನಿ, ಎನ್.ಜೆ ಕುರಹಟ್ಟಿ, ಶಿವಪ್ರಕಾಶ ಮಣಕವಾಡ, ನಾರಾಯಣರಾವ್ ವಶೇಕರ್, ಕನಕಪ್ಪ ಹಾದಿಮನಿ, ಹೆಚ್.ಬಿ. ಹದಲಿ, ಕೆ.ಎಲ್. ಪೂಜಾರ, ವಿನೋದ ಹೂಗಾರ, ಹೈದರ ಅಲಿ ನದಾಫ್, ಶರಣಪ್ಪ, ಯಲ್ಲಪ್ಪ ಕುರಹಟ್ಟಿ, ಅಂದಾನಪ್ಪ ಚಿಂಚಲಿ, ರಾಘವೇಂದ್ರ ಓಶೇಕರ, ಪ್ರವೀಣ ಚಾಕಲಬ್ಬಿ, ನಿಂಗಪ್ಪ ಅಮ್ಮಾಗಿ, ಮುದುಕಪ್ಪ ಮನಕವಾಡ, ಪೀರಸಾಬ ನದಾಫ್, ವೈ.ಡಿ. ತಳವಾರ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ ಮುಂತಾದವರು ಇದ್ದರು.

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಮೂಲಸೌಕರ್ಯ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುತ್ತಿದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ, ಸಾರ್ವಜನಿಕ ಕಟ್ಟಡಗಳು ಸೇರಿದಂತೆ ಜನೋಪಯೋಗಿ ಯೋಜನೆಗಳ ಮೂಲಕ ಗ್ರಾಮಗಳ ಜೀವನಮಟ್ಟವನ್ನು ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

ಜ.19ಕ್ಕೆ ಸೈನಿಕ ತರಬೇತಿ ಕೇಂದ್ರ ಆರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಜ. 19ರಂದು ಬೆಳಿಗ್ಗೆ 10.30ಕ್ಕೆ ಸೈನಿಕ ತರಬೇತಿ ಕೇಂದ್ರ ಆರಂಭವಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಿ.ಬಿ. ಮಾಲಗತ್ತಿಮಠ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಿತ್ಯ ನಗರದಲ್ಲಿ 5 ಗುಂಟೆ ಜಾಗೆಯಲ್ಲಿ ಸಮುದಾಯದ ಭವನ ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು, ತಜ್ಞರು ತರಬೇತಿ ನೀಡುವರು ಎಂದರು.

ನಗರದಲ್ಲಿ ಯುವಕರಿಗೆ ತರಬೇತಿಯ ಕೊರತೆ ಇದೆ. ಸೇನೆಯ ಬಗ್ಗೆ ಜಾಗೃತಿ ಮೂಡಿಸುವವರು ಇಲ್ಲವಾಗಿದೆ. ಯುವಕರಿಗೆ ಜಾಗೃತಿ ಜೊತೆಗೆ ಬಿಎಸ್‌ಎಫ್, ಅಗ್ನಿವೀರ ಹಾಗೂ ಕೇಂದ್ರ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುವುದು. ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಜ. 18ರಂದು ಯುವಕರಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಗುವುದು. ಪ್ರಶ್ನೆಪತ್ರಿಕೆಯನ್ನು ಅಗ್ನಿವೀರ ಮಾದರಿಯಲ್ಲೇ ಸಿದ್ಧಪಡಿಸಲಾಗಿದೆ. ತರಬೇತಿ ಕೇಂದ್ರದಲ್ಲೇ ಊಟ-ವಸತಿ ನೀಡಲಾಗುವುದು. ಮೂರು ತಿಂಗಳ ಅವಧಿಗೆ ತರಬೇತಿ ಇರುತ್ತದೆ ಎಂದು ಜಿ.ಬಿ. ಮಾಲಗತ್ತಿಮಠ ತಿಳಿಸಿದರು.

ಫಕ್ಕಿರೇಶ್ವರ ಶ್ರೀಗಳು, ಸಂಗಮೇಶ ದುಂದೂರು, ಸಿದ್ದಣ್ಣ ಪಲ್ಲೇದ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದೀರ್ಘ ಗೋರ್ಪಡೆ, ಎಸ್.ಆರ್. ಪಾಟೀಲ, ಸಿ.ಜಿ. ಸೊನ್ನದ, ಶೇಖಪ್ಪ ಹೊನ್ನಪ್ಪನವರ, ಚನ್ನಯ್ಯ ಬಳಗಾನೂರುಮಠ, ಕುಮಾರಸ್ವಾಮಿ ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ, ಸಿದ್ದಪ್ಪ ಹೂಗಾರು, ವೀಣಾ ಹೂಗಾರ ಇತರರು ಇದ್ದರು

ಬ್ಯಾನರ್ ಗಲಭೆ: ನಾಳೆ ಬಳ್ಳಾರಿಗೆ ಬಿಜೆಪಿ ನಾಯಕರು ಎಂಟ್ರಿ, ಮದ್ಯ ಮಾರಾಟ ನಿಷೇಧ!

0

ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ಬಿಜೆಪಿಗೆ ದೊಡ್ಡ ರಾಜಕೀಯ ಅಸ್ತ್ರವಾಗಿದ್ದು, ಗುಂಡೇಟಿಗೆ ಓರ್ವ ಕಾರ್ಯಕರ್ತ ಸಾವನ್ನಪ್ಪಿದ ಘಟನೆಯನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಬಿಜೆಪಿ ನಾಯಕರಾದ ರೆಡ್ಡಿ ಹಾಗೂ ಶ್ರೀರಾಮುಲು ಸಮರಕ್ಕೆ ಸಜ್ಜಾಗಿದ್ದಾರೆ.

ಇದರ ಭಾಗವಾಗಿ ನಾಳೆ ಬಳ್ಳಾರಿ ನಗರದಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಶಾಂತಿಯಾಗಿ ನಡೆಯುವ ದೃಷ್ಟಿಯಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ನಡುವೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಮದ್ಯ ಮಾರಾಟ ನಿಷೇಧಕ್ಕೆ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ಇಂದು ರಾತ್ರಿ 10 ಗಂಟೆಯಿಂದ ನಾಡಿದ್ದು ಜನವರಿ 18ರ ಬೆಳಿಗ್ಗೆ 6 ಗಂಟೆಯವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ವಿತರಣೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಮದ್ಯದ ಅಂಗಡಿ, ಬಾರ್, ರೆಸ್ಟೋರೆಂಟ್ ಸೇರಿದಂತೆ ಮದ್ಯ ಮಾರಾಟ ನಡೆಯುವ ಎಲ್ಲ ಸ್ಥಳಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಜನವರಿ 1ರಂದು ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಹಾಕಲಾಗಿದ್ದ ಬ್ಯಾನರ್ ವಿಚಾರವಾಗಿ ಉಂಟಾದ ಗುಂಪು ಘರ್ಷಣೆಯನ್ನೇ ಖಂಡಿಸಿ, ಜನವರಿ 17ರಂದು ಬೆಳಿಗ್ಗೆ 10:30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಬಳ್ಳಾರಿ ನಗರ ಎಪಿಎಂಸಿ ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕವರ್ಡ್ ಯಾಕ್ಷನ್ ಪ್ಲಾಟ್‌ಫಾರಂನಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಸಲಿದ್ದಾರೆ.

ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಪೊಲೀಸ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ಕೇಂದ್ರ ಸಚಿವ ಸುರೇಶ್‌ ಗೋಪಿ ಭೇಟಿ!

0

ಉಡುಪಿ: ಮಲೆಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ಕೇಂದ್ರ ಸಚಿವ ಸುರೇಶ್‌ ಗೋಪಿ ಅವರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೃಷ್ಣಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಠದ ದಿವಾನರು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸುರೇಶ್‌ ಗೋಪಿ ಅವರು ಪರಂಪರೆಯಂತೆ ಶ್ರೀಕೃಷ್ಣನ ದರ್ಶನ ಪಡೆದು ಭಕ್ತಿಭಾವ ವ್ಯಕ್ತಪಡಿಸಿದರು.
ಈ ವೇಳೆ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳನ್ನು ಸಚಿವರು ಭೇಟಿಯಾಗಿ ಆಶೀರ್ವಾದ ಪಡೆದರು.

ತೀರ್ಥರ ಪರ್ಯಾಯ ಸಮಾಪ್ತಿ ಸಂದರ್ಭದಲ್ಲಿ ಈ ಭೇಟಿ ನಡೆದಿದ್ದು, ಮಠದ ಪರವಾಗಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಕೇಂದ್ರ ಸಚಿವ ಸುರೇಶ್‌ ಗೋಪಿ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.

ರಾತ್ರಿ ಹೊತ್ತಲ್ಲಿ ಜಾನುವಾರು ಕಳ್ಳತನ; ಹಾನಗಲ್ ಮೂಲದ 6 ಆರೋಪಿಗಳು ಅರೆಸ್ಟ್

0

ಉತ್ತರ ಕನ್ನಡ:-ಜಿಲ್ಲೆಯ ಶಿರಸಿ ತಾಲೂಕಿನ ಬಿಳಗೇರಿ–ಸುರಗುಪ್ಪ ಗ್ರಾಮದಲ್ಲಿ ಜನವರಿ 9ರ ರಾತ್ರಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಈ ಸಂಬಂಧ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮೂಲದ 6 ಮಂದಿ ಅಂತರ ಜಿಲ್ಲಾ ಜಾನುವಾರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹಿರೂರು ಗ್ರಾಮದ ಗೊಲ್ಲರ ಬಿಡಾರದ
ಮೋಹನ ಶೇಖಪ್ಪ ಗೊಲ್ಲರ (25),ಬಸವರಾಜ ಅಮ್ಮಣಪ್ಪ ಗೊಲ್ಲರ (35), ಅವಿನಾಶ @ ಅಭಿಲಾಷ ರುದ್ದಪ್ಪ ಗೊಲ್ಲರ (22), ಸುರೇಶ ಫಕೀರಪ್ಪ ಗೊಲ್ಲರ, ಕೊಪ್ಪರಶಿಕೊಪ್ಪ (35), ಬಸವರಾಜ ಫಕೀರಪ್ಪ ಗೊಲ್ಲರ (47), ಮತ್ತು ಅಯೂಬ ಅನೀಮ್ ಸಾಬ (54) ಎಂದು ಗುರುತಿಸಲಾಗಿದೆ.

ಜನವರಿ 9ರ ರಾತ್ರಿ ರಾಮಚಂದ್ರ ಗೌಡ ಹಾಗೂ ಅವರ ಸಹೋದರರ ಹೊಲದಲ್ಲಿದ್ದ ಕೊಟ್ಟಿಗೆಯಿಂದ 3 ಹಸುಗಳು ಮತ್ತು 4 ಎತ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಬಂಧಿತರಿಂದ ಮೂರು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದು, ಕೃತ್ಯಕ್ಕೆ ಬಳಸಿದ್ದ ಸುಮಾರು ₹3 ಲಕ್ಷ ಮೌಲ್ಯದ ಪಿಕ್‌ಅಪ್ ವಾಹನ ಹಾಗೂ ಒಂದು ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಅಂತರ ಜಿಲ್ಲಾ ಮಟ್ಟದಲ್ಲಿ ಜಾನುವಾರು ಕಳ್ಳತನ ನಡೆಸುತ್ತಿದ್ದ ಈ ಗ್ಯಾಂಗ್‌ನ್ನು ಬಂಧಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಮ್ಮ ಕಾಲದ ಬಗ್ಗೆ ಮಾತನಾಡುವ ಮುನ್ನ ದಾಖಲೆ ತೆರೆದು ನೋಡಲಿ: ಕುಮಾರಸ್ವಾಮಿಗೆ ಮಹದೇವಪ್ಪ ತಿರುಗೇಟು

0

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣಗಳು ನಡೆದಿವೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಯಾರ ಅಧಿಕಾರದ ಅವಧಿಯಲ್ಲಿ ಅಧಿಕಾರಿಗಳಿಗೆ ಏನಾಗಿದೆ ಎಂಬುದನ್ನು ದಾಖಲೆಗಳನ್ನು ತೆರೆದು ನೋಡಲಿ. ಸತ್ಯ ಏನೆಂಬುದು ಆಗ ಸ್ಪಷ್ಟವಾಗುತ್ತದೆ. ಯಾರೇ ಆಗಿರಲಿ, ಅಧಿಕಾರಿಗಳಿಗೆ ಧಮ್ಕಿ ಹಾಕಿದರೆ ಅಥವಾ ಅನ್ಯಾಯ ಮಾಡಿದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದರು.

ಇನ್ನು ಸಿದ್ದರಾಮಯ್ಯ ಅವರನ್ನು ಲೀಸ್ ಬೇಸ್ಡ್ ಸಿಎಂ ಎಂದು ಕುಮಾರಸ್ವಾಮಿ ಟೀಕಿಸಿರುವ ವಿಚಾರಕ್ಕೆ ತಿರುಗೇಟು ನೀಡಿದ ಮಹದೇವಪ್ಪ, “ಸಿದ್ದರಾಮಯ್ಯ ಅವರು ಒಟ್ಟು 7.6 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಅಂಥವರು ಯಾವ ರೀತಿ ಲೀಸ್ ಬೇಸ್ಡ್ ಸಿಎಂ ಆಗುತ್ತಾರೆ?” ಎಂದು ಪ್ರಶ್ನಿಸಿದರು.

“ಲೀಸ್ ಎಂದರೆ ಮೂರು-ನಾಲ್ಕು ತಿಂಗಳು ಮಾತ್ರ. ಆದರೆ ಸಿದ್ದರಾಮಯ್ಯ ಅವರು ದೀರ್ಘಕಾಲ ಸಿಎಂ ಆಗಿ ಆಡಳಿತ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಸ್ವತಃ ಎಷ್ಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂಬುದನ್ನೂ ಜನ ಗಮನಿಸಬೇಕು. ಇವೆಲ್ಲವೂ ಹಾಸ್ಯಾಸ್ಪದ ಮಾತುಗಳು ಅಷ್ಟೇ” ಎಂದು ಮಹದೇವಪ್ಪ ಹೇಳಿದರು.

GBA ಚುನಾವಣೆ ಮೂಲಕ ಕಾಂಗ್ರೆಸ್ ಪತನ ಆರಂಭ: ವಿಪಕ್ಷ ನಾಯಕ ಆರ್. ಅಶೋಕ್

0

ಬೆಂಗಳೂರು: ಮುಂಬೈ ಮಹಾನಗರದ ಜನತೆ ಬಿಜೆಪಿಗೆ ಭರ್ಜರಿ ಬೆಂಬಲ ನೀಡಿದಂತೆ, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿಯೂ ಸಹ ಬೆಂಗಳೂರು ಮಹಾಜನತೆ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೂಲಕವೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪತನದ ಹಾದಿ ಆರಂಭವಾಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ,

ಇದೀಗ ಪ್ರತಿಷ್ಠಿತ ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಪುಣೆ, ನಾಗಪುರ ಹಾಗೂ ಮಹಾರಾಷ್ಟ್ರದ ಎಲ್ಲಾ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ–ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟ ಮತ್ತೊಮ್ಮೆ ಭರ್ಜರಿ ಜಯಭೇರಿ ಬಾರಿಸಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಜನತೆ ಮತ್ತೊಮ್ಮೆ ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ಚಾಲನಾ ಪರವಾನಗಿ ಇಲ್ಲದವರಿಗೆ ವಾಹನ ನೀಡಿದ್ರೆ ಅಪಘಾತಕ್ಕೆ ಮಾಲೀಕನೇ ಹೊಣೆ: ಹೈಕೋರ್ಟ್

0

ಬೆಂಗಳೂರು: ಪರವಾನಗಿ ಹೊಂದಿರದ ಚಾಲಕನಿಂದ ರಸ್ತೆ ಅಪಘಾತ ಸಂಭವಿಸಿದರೆ, ಆ ವಾಹನದ ಮಾಲೀಕರೇ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಶಾಲಾ ವಾಹನ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದು ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಮಾನ್ಯ ಚಾಲನಾ ಪರವಾನಗಿ ಹೊಂದಿರದ ಕಾರಣ ಮೃತ ಚಾಲಕನ ಕುಟುಂಬಕ್ಕೆ ಪರಿಹಾರ ಪಾವತಿಸುವಂತೆ ವಾಹನ ಮಾಲೀಕರೂ ಆಗಿರುವ ಶಾಲಾ ಮುಖ್ಯೋಪಾಧ್ಯಾಯರಿಗೆ ನ್ಯಾಯಪೀಠ ಆದೇಶಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೆಂಕುಲಿಪಾಡಿಯ ಬಲ್ಮಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಕೆ. ಮನ್ಮಥರಾವ್ ಅವರ ಪೀಠ ಈ ತೀರ್ಪು ನೀಡಿದೆ.

ಘಟನೆ ನಡೆದ ವೇಳೆ ಬದ್ರುದ್ದೀನ್ ಚಾಲನೆ ಮಾಡುತ್ತಿದ್ದ ಬಸ್‌ವು 7,500 ಕೆ.ಜಿ ಗಿಂತ ಕಡಿಮೆ ತೂಕದ ವಾಹನವಾಗಿದ್ದು, ಅದನ್ನು ಚಾಲನೆ ಮಾಡಲು ಅಗತ್ಯವಾದ ಮಾನ್ಯ ಹಾಗೂ ಅಧಿಕೃತ ಚಾಲನಾ ಪರವಾನಗಿ ಅವರ ಬಳಿ ಇರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಚಾಲಕ ಪರವಾನಗಿ ಹೊಂದಿದ್ದರು ಎಂಬ ವಾದಕ್ಕೆ ಬೆಂಬಲವಾಗಿ ಬಸ್ ಮಾಲೀಕರಾದ ಶಾಲಾ ಮುಖ್ಯೋಪಾಧ್ಯಾಯರು ಯಾವುದೇ ದೃಢ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆ, ಅಧೀನ ನ್ಯಾಯಾಲಯ ನೀಡಿದ್ದ ಪರಿಹಾರ ಪಾವತಿ ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಚಾಲಕರು ಮಾನ್ಯ ಚಾಲನಾ ಪರವಾನಗಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು ವಾಹನ ಮಾಲೀಕರ (ಉದ್ಯೋಗದಾತರ) ಕರ್ತವ್ಯವಾಗಿದೆ. ಈ ಜವಾಬ್ದಾರಿಯನ್ನು ನಿರ್ಲಕ್ಷಿಸಿದರೆ ಹಾಗೂ ಚಾಲಕ ಅಧಿಕೃತ ಪರವಾನಗಿ ಹೊಂದಿರದಿದ್ದರೆ, ಅದು ವಿಮಾ ಪಾಲಿಸಿ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವಾಹನಕ್ಕೆ ವಿಮೆ ಇದ್ದರೂ, ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆಯಿಂದ ವಿಮಾ ಕಂಪನಿ ಮುಕ್ತವಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

error: Content is protected !!