Home Blog Page 167

ಪೌರಾಯುಕ್ತೆಗೆ ಧಮ್ಕಿ ಪ್ರಕರಣದಲ್ಲಿ ರಾಜೀವ್ ಗೌಡ ಸಂಕಷ್ಟ: ಕೆಪಿಸಿಸಿ ಶಿಸ್ತು ನೋಟಿಸ್ ಜಾರಿ

0

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಆರೋಪ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ತಂದಿಟ್ಟಿದೆ. ಶಿಡ್ಲಘಟ್ಟದಲ್ಲಿ ನಡೆದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕೆಪಿಸಿಸಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ರಾಜೀವ್ ಗೌಡಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರವಾಗಿ ಪೌರಾಯುಕ್ತರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವಾಗ, ರಾಜೀವ್ ಗೌಡ ಅವರು ಅಸಭ್ಯ ಪದಗಳನ್ನು ಬಳಸಿ ವ್ಯಕ್ತಿಗತ ನಿಂದನೆ ಮಾಡಿದ್ದಾರೆ. ಈ ಸಂಭಾಷಣೆ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು, ಪಕ್ಷದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಕೆಪಿಸಿಸಿ ಸ್ಪಷ್ಟಪಡಿಸಿದೆ.

ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಪ್ರಕರಣ ಎಂದು ಪರಿಗಣಿಸಿ, ಈ ನೋಟಿಸ್ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಸಮರ್ಪಕ ಉತ್ತರ ನೀಡದಿದ್ದಲ್ಲಿ ಶಿಸ್ತು ಸಮಿತಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಬೆಳವಣಿಗೆ ಶಿಡ್ಲಘಟ್ಟ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ರಾಜ್ಯ ಕಾಂಗ್ರೆಸ್ ವಲಯದಲ್ಲೂ ಸಂಚಲನ ಮೂಡಿಸಿದೆ.

ಕಾಗಿನೆಲೆ ಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

0

ಬೆಂಗಳೂರು/ರಾಯಚೂರು: ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ನಿಧನರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ ಮತ್ತು ಶ್ರದ್ಧೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ. ಶ್ರೀ ಮಠದ ಭಕ್ತಾದಿಗಳು ಹಾಗೂ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ” ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ (50) ಅವರು ಗುರುವಾರ ಬೆಳಗಿನ ಜಾವ 3:30ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಸ್ವಾಮೀಜಿ ಇತ್ತೀಚೆಗೆ ಜ.12, 13 ಮತ್ತು 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ, ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಪೂಜಾರಿಗಳ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ್ದರು. ರಾಜಕೀಯ ಹಸ್ತಕ್ಷೇಪವಿಲ್ಲದ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಕಳೆದ ಒಂದು ವಾರದಿಂದ ನಿರಂತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಊಟ ಮತ್ತು ವಿಶ್ರಾಂತಿ ಸರಿಯಾಗಿ ಆಗದೆ, ಬುಧವಾರ ರಾತ್ರಿ ಲೋ ಬಿಪಿಯಿಂದ ಬಳಲಿದ್ದು, ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಶ್ರೀಗಳ ನಿಧನಕ್ಕೆ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಹಾಗೂ ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ.

ಪೈರಸಿ ವಿರುದ್ಧ ಜಗ್ಗೇಶ್ ಏಕಾಂಗಿ ಹೋರಾಟ: “ಚಿತ್ರರಂಗದಿಂದ ಯಾರೂ ಬೆಂಬಲ ಕೊಡಲಿಲ್ಲ” – ರಾಜ್ಯಸಭೆಯಲ್ಲಿ ಸರ್ಕಾರದಿಂದ ಭರವಸೆ

ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಕೇಂದ್ರ ಸರ್ಕಾರದಿಂದ ಸ್ಪಂದನೆ ದೊರೆತಿದೆ. ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮ, ಆಧುನಿಕ ತಂತ್ರಜ್ಞಾನ ಬಳಸಿ ಪತ್ತೆ, ದಂಡ ಹಾಗೂ ಜೈಲು ಶಿಕ್ಷೆ, ಜೊತೆಗೆ ಪೈರಸಿ ಆ್ಯಪ್‌ಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿವರ ಹಂಚಿಕೊಂಡಿರುವ ಜಗ್ಗೇಶ್, ಇದು ವೈಯಕ್ತಿಕವಾಗಿ ಹಾಗೂ ಭಾರತೀಯ ಚಿತ್ರರಂಗದ ಪರವಾಗಿ ಸಂತೋಷದ ವಿಚಾರ ಎಂದು ಹೇಳಿದ್ದಾರೆ. ಆದರೆ, ಪೈರಸಿ ವಿರುದ್ಧ ಹೋರಾಟದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಸದಸ್ಯರಿಂದ ಬೆಂಬಲ ಸಿಗದಿರುವುದು ತಮ್ಮನ್ನು ನೋಯಿಸಿದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.

ಪೈರಸಿಯಿಂದಾಗಿ ಇತ್ತೀಚೆಗೆ ಬಿಡುಗಡೆಯಾದ ‘ದಿ ಡೆವಿಲ್’, ‘ಮಾರ್ಕ್’, ‘45’ ಸೇರಿದಂತೆ ಹಲವು ಸಿನಿಮಾಗಳು ನಷ್ಟ ಅನುಭವಿಸಿದ್ದವು. ಈ ಹಿಂದೆ ನಟ ಕಿಚ್ಚ ಸುದೀಪ್ ಸಹ ಪೈರಸಿ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು.

ಜಗ್ಗೇಶ್ ಅವರ ಈ ಹೋರಾಟಕ್ಕೆ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭುಗಿಲೆದ್ದ ವಾಲ್ಮೀಕಿ ಭವನ ವಿವಾದ: ಎರಡು ಸಮುದಾಯಗಳ ಮಧ್ಯೆ ಕಲ್ಲು ತೂರಾಟ, ಮನೆ ಮೇಲೆ ನೂರಾರು ಜನರ ದಾಳಿ!

0

ಬೆಳಗಾವಿ: ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಸಂಬಂಧ ಉಂಟಾದ ವಿವಾದ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಎರಡು ಸಮುದಾಯಗಳ ನಡುವೆ ಘರ್ಷಣೆ ಹಾಗೂ ಕಲ್ಲು ತೂರಾಟ ನಡೆದಿದೆ.

ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಸರ್ವೆಗೆ ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೆಲವರಿಂದ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ನೂರಾರು ಮಂದಿ ದಾಳಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ವೇಳೆ ಮನೆಯೊಳಗೆ ಇದ್ದ ಕುಟುಂಬದವರು ಬಾಗಿಲು ಮುಚ್ಚಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ದಾಳಿಯಿಂದ ಮನೆಗೆ ಮತ್ತು ಶೌಚಾಲಯಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ವೃದ್ಧೆಯೊಬ್ಬರು ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಬಳ್ಳಾರಿಯಲ್ಲಿ ಬ್ಯಾನರ್ ಗಲಭೆ ಪ್ರಕರಣ: ಸಿಐಡಿ ತನಿಖೆ ಚುರುಕು – ಸಾರ್ವಜನಿಕರಿಂದ ವಿಡಿಯೋ ಸಂಗ್ರಹಕ್ಕೆ ಮನವಿ

0

ಬಳ್ಳಾರಿ: ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಬ್ಯಾನರ್ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಕಲೆ ಹಾಕಿರುವ ಸಿಐಡಿ ತಂಡ, ಇದೀಗ ಸಾರ್ವಜನಿಕರಿಂದಲೂ ವಿಡಿಯೋ ಹಾಗೂ ಫೋಟೋ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದೆ. ಗಲಭೆಯ ಸಂದರ್ಭದಲ್ಲಿನ ವಿಡಿಯೋಗಳನ್ನು ಹೊಂದಿರುವವರು ಸಿಐಡಿಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ.

ಸಿಐಡಿ ತಂಡವು ವಾಟ್ಸಪ್ ನಂಬರ್ ಒದಗಿಸಿದ್ದು, ಆ ಮೂಲಕ ವಿಡಿಯೋ ತುಣುಕುಗಳನ್ನು ಕಳುಹಿಸಬಹುದು. ವಿಡಿಯೋ ಕಳುಹಿಸುವವರ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುವುದು ಎಂದು ಸಿಐಡಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಗಲಭೆ ಮತ್ತು ಕೊಲೆ ಪ್ರಕರಣವು ರಾಜ್ಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ತನಿಖೆ ಪ್ರಕ್ರಿಯೆಗೆ ವೇಗ ನೀಡಲಾಗಿದೆ.

ಜೇವರ್ಗಿ ಬಳಿ ಸಾರಿಗೆ ಬಸ್‌ಗೆ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ರಕ್ಷಣೆ

0

ಕಲಬುರಗಿ: ಜೇವರ್ಗಿ ತಾಲೂಕಿನ ಮದರಿ ಗ್ರಾಮದ ಬಳಿ ಚಲಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಮದರಿ ಗ್ರಾಮದಿಂದ ಜೇವರ್ಗಿಗೆ ತೆರಳುತ್ತಿದ್ದ ವೇಳೆ ಬಸ್‌ನ ಇಂಜಿನ್ ಭಾಗದಲ್ಲಿ ಅಚಾನಕ್ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬಸ್‌ಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಕಾಣುತ್ತಿದ್ದಂತೆಯೇ ಸ್ಥಳೀಯರು ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಆದರೆ ದಟ್ಟ ಹೊಗೆ ಆವರಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಬಸ್ ಜೇವರ್ಗಿ ಡಿಪೋಗೆ ಸೇರಿದ ಸಾರಿಗೆ ಬಸ್ ಆಗಿದ್ದು, ಘಟನೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮದುವೆಗೆ ನಿರಾಕರಣೆ! ಇಬ್ಬರು ಮಕ್ಕಳ ತಾಯಿಗೆ ಚಾಕು ಇರಿದು ಭೀಕರ ಕೊಲೆ

0

ಕೋಲಾರ: ಕೋಲಾರದ ಬಂಗಾರಪೇಟೆ ತಾಲೂಕಿನ ಜಿಗ್ ಜಾಗ್ ರಸ್ತೆಯ ಬಳಿ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಕತ್ತಹಳ್ಳಿ ಗ್ರಾಮದ ಸುಜಾತ (27) ಎಂದು ಗುರುತಿಸಲಾಗಿದೆ.

ಆರೋಪಿ ಚಿರಂಜೀವಿ ಹೊಸಕೋಟೆಯ ಇಂಡಸ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಈ ಹಿಂದೆ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಣ ವಸೂಲಿಗೆ ಹೋಗುವ ಸಂದರ್ಭದಲ್ಲಿ ಸುಜಾತ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಚಿರಂಜೀವಿ ಸುಜಾತಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದನು. ಆದರೆ ಸುಜಾತ ನಿರಾಕರಿಸಿದ್ದಳು.

ಸುಜಾತ ಗಂಡನಿಂದ ಪ್ರತ್ಯೇಕವಾಗಿ ವಾಸವಾಗುತ್ತಿದ್ದು, ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಕೆಲಸಕ್ಕೆ ಹೊರಟ ಸಮಯದಲ್ಲಿ ಕೋಲಾರದ ಬಳಿ ಆರೋಪಿ ಆಕೆಯನ್ನು ಅಡ್ಡಗಟ್ಟಿ ಚಾಕು ಇರಿದು ಹತ್ಯೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಹಿಂದೆಯೂ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಸುಜಾತ ಮೇಲೆ ಹಲ್ಲೆ ನಡೆದಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಸಮರ್ಪಕ ಕ್ರಮ ಕೈಗೊಳ್ಳದ ಕಾರಣ ಇದೀಗ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಸೈಟ್ ವಿವಾದ: ಯಶ್ ತಾಯಿ ಪುಷ್ಪ ಸಲ್ಲಿಸಿದ್ದ ಅರ್ಜಿಗಳಿಗೆ ಜೆಎಂಎಫ್ಸಿ ಕೋರ್ಟ್ ನಿರಾಕರಣೆ

ಹಾಸನ: ನಟ ಯಶ್ ಅವರ ತಾಯಿ ಪುಷ್ಪ ಅವರಿಗೆ ಸಂಬಂಧಿಸಿದ ಸೈಟ್ ವಿವಾದ ಪ್ರಕರಣದಲ್ಲಿ ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಪುಷ್ಪ ಹಾಗೂ ನಟರಾಜ್ ಅವರು ದೇವರಾಜ್ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಪುಷ್ಪ ಅವರು ವಿದ್ಯಾನಗರದಲ್ಲಿರುವ ಸರ್ವೆ ನಂಬರ್ 90ರ 125×45 ಅಡಿ ಅಳತೆಯ ಸೈಟನ್ನು ಗಿರೀಶ್ ಎಂಬುವರಿಂದ ಖರೀದಿಸಿದ್ದಾಗಿ ಹೇಳಿಕೊಂಡಿದ್ದು, ಸೈಟ್‌ಗೆ ಕಾಂಪೌಂಡ್ ಹಾಕಿದ್ದರು. ಆದರೆ ದೇವರಾಜ್ ಅವರು ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಿದ್ದರಿಂದ ವಿವಾದ ಉಂಟಾಗಿತ್ತು.

ಈ ಪ್ರಕರಣದಲ್ಲಿ ಪುಷ್ಪ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಈ ಹಿಂದೆ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಹಾಗೂ ದೇವರಾಜ್‌ಗೆ ನೋಟಿಸ್ ನೀಡುವ ಮುನ್ನ ಪ್ರತಿಬಂಧಕಾಜ್ಞೆ ನೀಡಬೇಕು ಎಂದು ಕೋರಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಗಳನ್ನು ತಿರಸ್ಕರಿಸಿದೆ.

ಇತ್ತ ದೇವರಾಜ್ ಅವರು, ಮೈಸೂರಿನ ಲಕ್ಷ್ಮಮ್ಮರಿಂದ ಸೈಟನ್ನು ಜಿಪಿಎ ಮೂಲಕ ಪಡೆದಿರುವುದಾಗಿ ಹೇಳಿದ್ದು, ನ್ಯಾಯಾಲಯದ ಆದೇಶದ ಆಧಾರದಲ್ಲಿಯೇ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯ ದೇವರಾಜ್‌ಗೆ ನೋಟಿಸ್ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಜನವರಿ 31ಕ್ಕೆ ನಿಗದಿ ಮಾಡಿದೆ.

ಲಕ್ಕುಂಡಿಯ ಪುರಾತನ ದೇವಾಲಯಗಳಿಗೆ ನಿಧಿಗಳ್ಳರ ಬೆದರಿಕೆ: ಭದ್ರತೆ ಕೊರತೆಯೇ ಇತಿಹಾಸಕ್ಕೆ ಅಪಾಯ?

0

ಗದಗ: ಐತಿಹಾಸಿಕ ಹಾಗೂ ಪುರಾತನ ದೇವಾಲಯಗಳಿಗಾಗಿ ಪ್ರಸಿದ್ಧಿಯಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ, ಇತ್ತೀಚೆಗೆ ನಿಧಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ರಿತ್ತಿ ಕುಟುಂಬದ ಮನೆಯಲ್ಲಿ ನಿಧಿ ಪತ್ತೆಯಾದ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಗ್ರಾಮದಲ್ಲಿರುವ ಎಲ್ಲಾ ಪುರಾತನ ದೇವಾಲಯಗಳತ್ತ ನಿಧಿಗಳ್ಳರ ಗಮನ ಹರಿದಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.

ಈ ಹಿಂದೆ ಲಕ್ಕುಂಡಿ ಹೊರವಲಯದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಳ್ಳರು ಬಸವಣ್ಣನ ಮೂರ್ತಿಯ ಪಕ್ಕದಲ್ಲೇ ಸುಮಾರು ಆರು ರಿಂದ ಏಳು ಅಡಿ ಆಳದವರೆಗೆ ಅಗೆದು ನಿಧಿ ಹುಡುಕಲು ಯತ್ನಿಸಿದ್ದ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ನಿಂಬೆಹಣ್ಣು ಸೇರಿದಂತೆ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳನ್ನು ದೇವಸ್ಥಾನ ಆವರಣದಲ್ಲಿ ಬಳಕೆ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಈ ದೇವಸ್ಥಾನದಲ್ಲೇ ಎರಡು–ಮೂರು ಬಾರಿ ಇಂತಹ ಘಟನೆಗಳು ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು.

ಲಕ್ಕುಂಡಿಯಲ್ಲಿ “ಎಲ್ಲಿ ಅಗೆದರೂ ಚಿನ್ನ ಸಿಗುತ್ತದೆ” ಎಂಬ ಜನಪ್ರಚಲಿತ ನಂಬಿಕೆ, ನಿಧಿಗಳ್ಳರ ಚಟುವಟಿಕೆಗೆ ಇಂಧನವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ದೇವಾಲಯಗಳಲ್ಲಿ ಯಥೇಚ್ಛ ನಿಧಿ ಅಡಗಿದೆ ಎಂಬ ಭ್ರಮೆಯಿಂದ, ಶತಮಾನಗಳ ಪುರಾತನ ಸ್ಮಾರಕಗಳು ಅಪಾಯಕ್ಕೆ ಒಳಗಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ, ಪುರಾತನ ದೇವಾಲಯಗಳ ರಕ್ಷಣೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು, ಇತಿಹಾಸವನ್ನು ಉಳಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ: ತಹಶೀಲ್ದಾರ್‌ಗೂ ನಿಂದನೆ

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಇದೀಗ ಮತ್ತೊಂದು ಆರೋಪ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಅವರು ನಗರಸಭೆ ಆಯುಕ್ತೆ ಅಮೃತಾ, ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಸಂಭಾಷಣೆಯ ಆಡಿಯೋ ರೆಕಾರ್ಡ್ ಇಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ.

ಪೌರಾಯುಕ್ತೆಗೆ ನಿಂದನೆ ಮತ್ತು ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಲು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಶಿಡ್ಲಘಟ್ಟ ಠಾಣೆಯ ಸಿಐ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಹಾಗೂ ಸೈಬರ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಬಂಧನ ಭೀತಿಯಿಂದ ರಾಜೀವ್ ಗೌಡ ಪರಾರಿಯಾಗಿದ್ದು, ಆತನ ಎರಡು ಮೊಬೈಲ್‌ಗಳು ಸ್ವಿಚ್ ಆಫ್ ಆಗಿರುವುದು ಪೊಲೀಸರಿಗೆ ಮತ್ತಷ್ಟು ಶಂಕೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಂದಿರಾನಗರ, ಸಂಜಯ್ ನಗರ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ತಂಡಗಳಿಂದ ಶೋಧ ಕಾರ್ಯ ಮುಂದುವರೆದಿದೆ.

ಇದರ ನಡುವೆ, ರಾಜೀವ್ ಗೌಡ ಬಂಧನವಾಗದಿದ್ದರೆ ಶಿಡ್ಲಘಟ್ಟ ಬಂದ್ ನಡೆಸುವುದಾಗಿ ಎನ್ಡಿಎ ನಾಯಕರು ಎಚ್ಚರಿಕೆ ನೀಡಿರುವುದರಿಂದ, ಪ್ರಕರಣ ರಾಜಕೀಯವಾಗಿ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡಿದೆ.

ಮತ್ತೊಂದೆಡೆ, ಪ್ರಾಣ ಬೆದರಿಕೆ ಆಡಿಯೋ ವೈರಲ್ ಆದ ಬಳಿಕ, ಸಂಬಂಧಿಕರು ಮತ್ತು ಪ್ರಭಾವಿ ಗುತ್ತಿಗೆದಾರರ ಮೂಲಕ ಪೌರಾಯುಕ್ತೆ ಅಮೃತಾ ಅವರನ್ನು ಪರೋಕ್ಷವಾಗಿ ಸಂಪರ್ಕಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. “ರಾಜಕಾರಣಿಗಳ ವಿರುದ್ಧ ನಿಲ್ಲಿಸಿದರೆ ಮುಂದಿನ ಪೋಸ್ಟಿಂಗ್‌ಗೆ ಸಮಸ್ಯೆಯಾಗಬಹುದು” ಎಂಬ ಸಂದೇಶ ನೀಡಲಾಗಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಮೃತಾ, “ನನಗೆ ಹುದ್ದೆಗಿಂತ ಆತ್ಮಗೌರವ ಮುಖ್ಯ. ಬೇಕಾದರೆ ಮತ್ತೆ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಮರಳುತ್ತೇನೆ. ಸರ್ಕಾರಿ ಸೇವೆಗೆ ಸೇರುವ ಮುನ್ನ ನಾನು ತಿಂಗಳಿಗೆ ₹3 ಲಕ್ಷ ಸಂಬಳ ಪಡೆಯುತ್ತಿದ್ದೆ. ಈ ಘಟನೆ ನನ್ನ ಕುಟುಂಬಕ್ಕೆ ತೀವ್ರ ನೋವು ತಂದಿದೆ” ಎಂದು ಹೇಳಿದ್ದಾರೆ.

error: Content is protected !!