Home Blog Page 168

ನಮ್ಮ ಕಾಲದ ಬಗ್ಗೆ ಮಾತನಾಡುವ ಮುನ್ನ ದಾಖಲೆ ತೆರೆದು ನೋಡಲಿ: ಕುಮಾರಸ್ವಾಮಿಗೆ ಮಹದೇವಪ್ಪ ತಿರುಗೇಟು

0

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣಗಳು ನಡೆದಿವೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಯಾರ ಅಧಿಕಾರದ ಅವಧಿಯಲ್ಲಿ ಅಧಿಕಾರಿಗಳಿಗೆ ಏನಾಗಿದೆ ಎಂಬುದನ್ನು ದಾಖಲೆಗಳನ್ನು ತೆರೆದು ನೋಡಲಿ. ಸತ್ಯ ಏನೆಂಬುದು ಆಗ ಸ್ಪಷ್ಟವಾಗುತ್ತದೆ. ಯಾರೇ ಆಗಿರಲಿ, ಅಧಿಕಾರಿಗಳಿಗೆ ಧಮ್ಕಿ ಹಾಕಿದರೆ ಅಥವಾ ಅನ್ಯಾಯ ಮಾಡಿದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದರು.

ಇನ್ನು ಸಿದ್ದರಾಮಯ್ಯ ಅವರನ್ನು ಲೀಸ್ ಬೇಸ್ಡ್ ಸಿಎಂ ಎಂದು ಕುಮಾರಸ್ವಾಮಿ ಟೀಕಿಸಿರುವ ವಿಚಾರಕ್ಕೆ ತಿರುಗೇಟು ನೀಡಿದ ಮಹದೇವಪ್ಪ, “ಸಿದ್ದರಾಮಯ್ಯ ಅವರು ಒಟ್ಟು 7.6 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಅಂಥವರು ಯಾವ ರೀತಿ ಲೀಸ್ ಬೇಸ್ಡ್ ಸಿಎಂ ಆಗುತ್ತಾರೆ?” ಎಂದು ಪ್ರಶ್ನಿಸಿದರು.

“ಲೀಸ್ ಎಂದರೆ ಮೂರು-ನಾಲ್ಕು ತಿಂಗಳು ಮಾತ್ರ. ಆದರೆ ಸಿದ್ದರಾಮಯ್ಯ ಅವರು ದೀರ್ಘಕಾಲ ಸಿಎಂ ಆಗಿ ಆಡಳಿತ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಸ್ವತಃ ಎಷ್ಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂಬುದನ್ನೂ ಜನ ಗಮನಿಸಬೇಕು. ಇವೆಲ್ಲವೂ ಹಾಸ್ಯಾಸ್ಪದ ಮಾತುಗಳು ಅಷ್ಟೇ” ಎಂದು ಮಹದೇವಪ್ಪ ಹೇಳಿದರು.

GBA ಚುನಾವಣೆ ಮೂಲಕ ಕಾಂಗ್ರೆಸ್ ಪತನ ಆರಂಭ: ವಿಪಕ್ಷ ನಾಯಕ ಆರ್. ಅಶೋಕ್

0

ಬೆಂಗಳೂರು: ಮುಂಬೈ ಮಹಾನಗರದ ಜನತೆ ಬಿಜೆಪಿಗೆ ಭರ್ಜರಿ ಬೆಂಬಲ ನೀಡಿದಂತೆ, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿಯೂ ಸಹ ಬೆಂಗಳೂರು ಮಹಾಜನತೆ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೂಲಕವೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪತನದ ಹಾದಿ ಆರಂಭವಾಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ,

ಇದೀಗ ಪ್ರತಿಷ್ಠಿತ ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಪುಣೆ, ನಾಗಪುರ ಹಾಗೂ ಮಹಾರಾಷ್ಟ್ರದ ಎಲ್ಲಾ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ–ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟ ಮತ್ತೊಮ್ಮೆ ಭರ್ಜರಿ ಜಯಭೇರಿ ಬಾರಿಸಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಜನತೆ ಮತ್ತೊಮ್ಮೆ ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ಚಾಲನಾ ಪರವಾನಗಿ ಇಲ್ಲದವರಿಗೆ ವಾಹನ ನೀಡಿದ್ರೆ ಅಪಘಾತಕ್ಕೆ ಮಾಲೀಕನೇ ಹೊಣೆ: ಹೈಕೋರ್ಟ್

0

ಬೆಂಗಳೂರು: ಪರವಾನಗಿ ಹೊಂದಿರದ ಚಾಲಕನಿಂದ ರಸ್ತೆ ಅಪಘಾತ ಸಂಭವಿಸಿದರೆ, ಆ ವಾಹನದ ಮಾಲೀಕರೇ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಶಾಲಾ ವಾಹನ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದು ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಮಾನ್ಯ ಚಾಲನಾ ಪರವಾನಗಿ ಹೊಂದಿರದ ಕಾರಣ ಮೃತ ಚಾಲಕನ ಕುಟುಂಬಕ್ಕೆ ಪರಿಹಾರ ಪಾವತಿಸುವಂತೆ ವಾಹನ ಮಾಲೀಕರೂ ಆಗಿರುವ ಶಾಲಾ ಮುಖ್ಯೋಪಾಧ್ಯಾಯರಿಗೆ ನ್ಯಾಯಪೀಠ ಆದೇಶಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೆಂಕುಲಿಪಾಡಿಯ ಬಲ್ಮಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಕೆ. ಮನ್ಮಥರಾವ್ ಅವರ ಪೀಠ ಈ ತೀರ್ಪು ನೀಡಿದೆ.

ಘಟನೆ ನಡೆದ ವೇಳೆ ಬದ್ರುದ್ದೀನ್ ಚಾಲನೆ ಮಾಡುತ್ತಿದ್ದ ಬಸ್‌ವು 7,500 ಕೆ.ಜಿ ಗಿಂತ ಕಡಿಮೆ ತೂಕದ ವಾಹನವಾಗಿದ್ದು, ಅದನ್ನು ಚಾಲನೆ ಮಾಡಲು ಅಗತ್ಯವಾದ ಮಾನ್ಯ ಹಾಗೂ ಅಧಿಕೃತ ಚಾಲನಾ ಪರವಾನಗಿ ಅವರ ಬಳಿ ಇರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಚಾಲಕ ಪರವಾನಗಿ ಹೊಂದಿದ್ದರು ಎಂಬ ವಾದಕ್ಕೆ ಬೆಂಬಲವಾಗಿ ಬಸ್ ಮಾಲೀಕರಾದ ಶಾಲಾ ಮುಖ್ಯೋಪಾಧ್ಯಾಯರು ಯಾವುದೇ ದೃಢ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆ, ಅಧೀನ ನ್ಯಾಯಾಲಯ ನೀಡಿದ್ದ ಪರಿಹಾರ ಪಾವತಿ ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಚಾಲಕರು ಮಾನ್ಯ ಚಾಲನಾ ಪರವಾನಗಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು ವಾಹನ ಮಾಲೀಕರ (ಉದ್ಯೋಗದಾತರ) ಕರ್ತವ್ಯವಾಗಿದೆ. ಈ ಜವಾಬ್ದಾರಿಯನ್ನು ನಿರ್ಲಕ್ಷಿಸಿದರೆ ಹಾಗೂ ಚಾಲಕ ಅಧಿಕೃತ ಪರವಾನಗಿ ಹೊಂದಿರದಿದ್ದರೆ, ಅದು ವಿಮಾ ಪಾಲಿಸಿ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವಾಹನಕ್ಕೆ ವಿಮೆ ಇದ್ದರೂ, ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆಯಿಂದ ವಿಮಾ ಕಂಪನಿ ಮುಕ್ತವಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ!

0

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ) ಸರಕು ಸಾಗಾಟ ಕ್ಷೇತ್ರದಲ್ಲೂ ಹೊಸ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಕೆಐಎಬಿಯಿಂದ ಒಟ್ಟು 5 ಲಕ್ಷ 20 ಸಾವಿರ 985 ಮೆಟ್ರಿಕ್ ಟನ್ ಸರಕು ಸಾಗಾಟವಾಗಿದ್ದು, ಇದು ವಿಮಾನ ನಿಲ್ದಾಣದ ಇತಿಹಾಸದಲ್ಲೇ ಮಹತ್ವದ ಸಾಧನೆಯಾಗಿದೆ.

2024ರ ಅವಧಿಗೆ ಹೋಲಿಸಿದರೆ 2025ರಲ್ಲಿ ಸರಕು ಸಾಗಾಟದಲ್ಲಿ ಶೇ.5ರಷ್ಟು ಏರಿಕೆ ದಾಖಲಾಗಿದೆ. ಆಗಸ್ಟ್ 7ರಂದು ಒಂದೇ ದಿನದಲ್ಲಿ 2,207 ಮೆಟ್ರಿಕ್ ಟನ್ ಸರಕು ಸಾಗಾಟ ಮಾಡುವ ಮೂಲಕ ಗರಿಷ್ಠ ದೈನಂದಿನ ಸರಕು ಸಾಗಾಟದ ದಾಖಲೆಯನ್ನೂ ಕೆಐಎಬಿ ತನ್ನ ಮುಡಿಗೆ ಏರಿಸಿಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯವಾಗಿ ಒಟ್ಟು 37 ವಿಮಾನ ನಿಲ್ದಾಣಗಳಿಗೆ ಸರಕು ಸಾಗಾಟ ನಡೆಯುತ್ತಿದೆ. ಭಾರತದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕೆಐಎಬಿ, 8.2 ಎಕರೆ ವಿಸ್ತೀರ್ಣದಲ್ಲಿ 3 ಲಕ್ಷ 70 ಸಾವಿರ ಚದರ ಅಡಿ ವಿಸ್ತಾರದ ಎ-ಗ್ರೇಡ್ ಗೋದಾಮನ್ನು ಹೊಂದಿದೆ.

ಕೆಐಎಬಿಯಿಂದ ಹೆಚ್ಚಾಗಿ ಕೃಷಿ ಉತ್ಪನ್ನಗಳು, ಔಷಧಿಗಳು, ಆಟೋ ಭಾಗಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಸಾಗಾಟ ನಡೆಯುತ್ತಿದೆ. ಚಿಕಾಗೋ, ಸಿಂಗಾಪುರ, ಲಂಡನ್, ಹೀಥ್ರೋ, ಫ್ರಾಂಕ್‌ಫರ್ಟ್ ಮತ್ತು ಲೀಪ್ಜಿಗ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ನಗರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ನಡೆಯುತ್ತಿದೆ. ಈ ಸಾಧನೆಯೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದ ಜಾಗತಿಕ ಮಹತ್ವ ಮತ್ತಷ್ಟು ಹೆಚ್ಚಾಗಿದೆ.

ಕೆಲವರಿಗೆ ಲೂಟಿ ಚಪಲ, ನನಗೆ ಸೇವೆ ಚಪಲ: ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲ. ನನಗೆ ಜನರ ಜತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು ಸಚಿವರು. ಕುಮಾರಸ್ವಾಮಿ ಅವರಿಗೆ ಮಾತನಾಡುವ ಚಪಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿರುವ ಮಾತಿಗೆ ಸಚಿವರು ತಿರುಗೇಟು ಕೊಟ್ಟರು.

ನಿಮ್ಮದೊಂದು ರೀತಿ‌ ಚಪಲ, ನನ್ನದೊಂದು ರೀತಿ ಚಪಲ. ನಿಮ್ಮದು ಹಣ ಮಾಡುವ ಚಪಲ. ನನ್ನದು ನಮ್ಮದು ಜನರ ಸಮ ಸ್ಪಂದಿಸಿ ಅವರ ಬೆಂಬಲ ಪಡೆಯುವ ಚಪಲ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಟೀಕಾಕಾರರಿಗೆ ಟಾಂಗ್ ಕೊಟ್ಟರು ಕೇಂದ್ರ ಸಚಿವರು.

ಸ್ವಜಾತಿಯವರಿಂದಲೇ‌ ಅನ್ಯಾಯ ಆಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಾನು ಆ ವರದಿಯನ್ನು ನೋಡಿದ್ದೇನೆ. ಕಷ್ಟ ಬಂದ ಕ್ಯಾಸ್ಟ್ ಅಂತಾರೆ. ಆದರೆ ಅವರು ಅವರು ಪ್ರತಿನಿಧಿಸುವ ಜಾತಿಗೆ ಏನು ಮಾಡಿದ್ದಾರ ಬೆಳಗ್ಗೆಯಿಂದ ಸಂಜೆವರೆಗೂ‌ ಹಣ ಹೊಡೆಯಬೇಕು ಎನ್ನುವವರು ಅವರು. ಬೇಕು ಅಂತಾರೆ. ಜನರ ಬೆಂಬಲ ಯಾವ ರೀತಿ ಪಡೆಯಬೇಕು ಎನ್ನುವುದಕ್ಕಿಂತ ಕ್ಷಣ ಕ್ಷಣವೂ ರಾಜ್ಯದ ಲೂಟಿ ಮಾಡಬೇಕು ಎಂದು ಕೆಲಸ ಮಾಡ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಜಾತಿ ಹೆಸರಿನಲ್ಲಿ ಬೆಂಬಲ ಕೊಡ್ತಾರಾ? ಎಂದು ಅವರು ಟ್ವೀಟ್ ಟೀಕಿಸಿದರು.

ನಾನು ಬಾಯಿ ಚಪಲಕ್ಕೆ ಮಾತಾಡಲ್ಲ. ಇಂಥವರು ನಡೆಸುವ ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಕೊಡ್ತಿದ್ದೇನೆ ಅಷ್ಟೇ. ನಾನು ಮಾತನಾಡುವುದು ನನ್ನ ಮತ್ತು ಜನತೆಯ ಸಂಬಂಧ ಬೆಳೆಸಿಕೊಳ್ಳಲು. ಈ ಅಣ್ಣ ತಮ್ಮಂದಿರದ್ದು ಕಟ್ಟಿಕೊಂಡು ನನಗೇನಾಗಬೇಕು? ದಿನ ಬೆಳಗಾದರೆ ಯಾರ ತಲೆ ಒಡೆಯಬೇಕು? ಯಾರ ಜಮೀನಿಗೆ ಫೆನ್ಸಿಂಗ್ ಹಾಕಬೇಕು? ಯಾವ ರೀತಿ ಅಕ್ರಮವಾಗಿ ಸಂಪಾದನೆ ಮಾಡಬೇಕು ಎನ್ನುವ ಜಾತಿ ಹೆಸರು ಹೇಳಿದಾಕ್ಷಣ ಬೆಂಬಲ ಕೊಡ್ತಾರ? ಎಂದು ಖಾರವಾಗಿ ಪ್ರಶ್ನಿಸಿದರು.

ಕುಟುಂಬದೊಂದಿಗೆ ಗೋಕರ್ಣ ಬೀಚ್‌ನಲ್ಲಿ ಬೋಟಿಂಗ್‌ಗೆ ತೆರಳಿದ್ದ ಬೆಂಗಳೂರಿನ ಮಹಿಳೆ ಸಾವು

0

ಕಾರವಾರ: ಕುಟುಂಬದೊಂದಿಗೆ ಆನಂದದ ಪ್ರವಾಸಕ್ಕೆ ಬಂದಿದ್ದ ಮಹಿಳೆಗೆ ಗೋಕರ್ಣ ಪ್ಯಾರಡೈಸ್ ಬೀಚ್ ಕೊನೆಯ ತಾಣವಾಗಿದ್ದು, ಬೋಟಿಂಗ್ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನೋವುಂಟುಮಾಡಿದೆ.

ಮೃತ ಮಹಿಳೆಯನ್ನು ಬೆಂಗಳೂರು ನಿವಾಸಿ ನಾಗರತಿನಮ್ (58) ಎಂದು ಗುರುತಿಸಲಾಗಿದೆ. ಪ್ರವಾಸದ ಭಾಗವಾಗಿ ಬೀಚ್‌ನಲ್ಲಿ ಬೋಟಿಂಗ್ ಮಾಡಲು ತೆರಳಿದ್ದ ಅವರು, اچಾನಕ್ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಕುಟುಂಬಸ್ಥರು 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ, ಅದು ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪರಿಸ್ಥಿತಿ ಗಂಭೀರವಾಗಿದ್ದರಿಂದ ಕುಮಟಾದಿಂದ ಖಾಸಗಿ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಚಿಕಿತ್ಸೆ ಪಡೆಯುವ ಮುನ್ನವೇ ಮಹಿಳೆ ಮಾರ್ಗಮಧ್ಯೆ ಅಸುನೀಗಿದ್ದಾರೆ. ಈ ಘಟನೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಅಭಿಮಾನಿಗಳ ಪೈಲ್ವಾನ್ ‘ಕೊಬ್ಬರಿ ಹೋರಿ’ ನಿಧನ: ಕರ್ಜಗಿಯಲ್ಲಿ ಭಾವುಕ ವಿದಾಯ, ಸಾವಿರಾರು ಜನರಿಂದ ಗೌರವ ನಮನ

0

ಹಾವೇರಿ: ಕೇವಲ ಒಂದು ಹೋರಿ ಅಲ್ಲ… ಗ್ರಾಮಸ್ಥರ ಹೆಮ್ಮೆ, ಅಭಿಮಾನಿಗಳ ಹೃದಯದ ಹೀರೋ ಆಗಿದ್ದ ‘ಕೊಬ್ಬರಿ ಹೋರಿ’ ಇದೀಗ ಅನಾರೋಗ್ಯದಿಂದ ನಿಧನರಾಗಿದ್ದು, ಕರ್ಜಗಿ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.

ಕರ್ಜಗಿ ಓಂ–112 ಹೆಸರಿನಿಂದ ಪ್ರಸಿದ್ಧಿಯಾಗಿದ್ದ ಈ ಹೋರಿ, ರೈತ ಜಗದೀಶ್ ನಾಗಪ್ಪ ಮಾಣೆಗಾರ ಅವರ ಸಾಕಾಣಿಕೆಯಲ್ಲಿ ಬೆಳೆದಿತ್ತು. ನಾಲ್ಕು ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂಪಾಯಿ ನೀಡಿ ಖರೀದಿಸಲ್ಪಟ್ಟ ಈ ಹೋರಿ, ರಾಜ್ಯಮಟ್ಟದ ಹೋರಿ ಸ್ಪರ್ಧೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿ ಮೂರು ಬೈಕ್‌, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು.

‘ಅಭಿಮಾನಿಗಳ ಪೈಲ್ವಾನ್’ ಎಂದು ಕರೆಸಿಕೊಂಡಿದ್ದ ಕೊಬ್ಬರಿ ಹೋರಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಗ್ರಾಮಕ್ಕೆ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಮಾಲೀಕರು ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಎಲ್ಲರನ್ನೂ ಕಳವಳಗೊಳಿಸಿತು.

ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಕೊಬ್ಬರಿ ಹೋರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ನಂತರ ಮಾಲೀಕರ ಜಮೀನಿನಲ್ಲಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶಿಡ್ಲಘಟ್ಟ ಪ್ರಕರಣ: ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ – ನಿಖಿಲ್ ಕುಮಾರಸ್ವಾಮಿ

0

ಬೆಂಗಳೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಿದ ಆರೋಪದ ಪ್ರಕರಣದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಯ ವಿರುದ್ಧ ಕಾಂಗ್ರೆಸ್ ಮುಖಂಡ ತುಚ್ಚವಾಗಿ ಮಾತನಾಡಿದ್ದಾರೆ. ಇದು ಖಂಡನೀಯ. ಆದರೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಮೌನ ವಹಿಸಿದೆ” ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತಂದಿರುವ ದ್ವೇಷ ಭಾಷಣ ಮಸೂದೆ ಕುರಿತು ತೀವ್ರ ಟೀಕೆ ನಡೆಸಿದ ನಿಖಿಲ್, “ಈ ಬಿಲ್ ಕಾಂಗ್ರೆಸ್ ಮುಖಂಡರಿಗೆ ಅನ್ವಯವಾಗುವುದಿಲ್ಲ. ಇದು ವಿಪಕ್ಷಗಳು ಮತ್ತು ಮಾಧ್ಯಮಗಳ ಧ್ವನಿ ಕಟ್ಟಿಹಾಕಲು ಮಾತ್ರ ಬಳಕೆಯಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಮೌನಗೊಳಿಸುವುದೇ ಇದರ ಉದ್ದೇಶ” ಎಂದು ಕಿಡಿಕಾರಿದರು.

ಶಿಡ್ಲಘಟ್ಟ ಪ್ರಕರಣದ ಮೊದಲ ದಿನವೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಹಿಳಾ ಅಧಿಕಾರಿಗೆ ಕರೆ ಮಾಡಿ ಧೈರ್ಯ ತುಂಬಿದ ವಿಚಾರವನ್ನು ಸ್ಮರಿಸಿದ ನಿಖಿಲ್, “ಈ ಸರ್ಕಾರಕ್ಕೆ ಹೆಣ್ಣುಮಕ್ಕಳಿಗೆ ಕಿಂಚಿತ್ತಾದರೂ ಗೌರವ ಇದ್ದರೆ, ದಯಾ-ದಾಕ್ಷಿಣ್ಯವಿಲ್ಲದೆ ಸಂಬಂಧಿಸಿದ ಕಾಂಗ್ರೆಸ್ ಮುಖಂಡನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ–ಮಿತ್ರಪಕ್ಷಗಳ ಗೆಲುವಿಗೆ ಬೆಂಗಳೂರಿನಲ್ಲಿ ವಿಜಯೋತ್ಸವ

0

ಬೆಂಗಳೂರು: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯ ಬಳಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮುಂಬೈಯಲ್ಲಿ ಅತಿ ದೊಡ್ಡ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಇದು ಸಂತಸದ ವಿಚಾರ ಎಂದರು. ಕಾಂಗ್ರೆಸ್‍ನವರು ಮತಪತ್ರದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಾಗಿ ಹೇಳುತ್ತಿದ್ದರು.

ಅದರಲ್ಲೂ ನಮ್ಮ ರಾಜ್ಯದಲ್ಲಿ ಸೋತಿದ್ದಾರೆ. ಈಗ ಮತ್ತೆ ಇವಿಎಂ ಹ್ಯಾಕ್ ಆಗಿದೆ ಎನ್ನಲಿದ್ದಾರೆ ಎಂದು ವ್ಯಂಗ್ಯವಾಡಿದರು. 30 ವರ್ಷಗಳ ನಂತರ ಬಿಜೆಪಿ ಮೇಯರ್ ಚುಕ್ಕಾಣಿ ಹಿಡಿಯುವುದು ಅತ್ಯಂತ ಖುಷಿ ತಂದಿದೆ ಎಂದು ತಿಳಿಸಿದರು.

ಕೇರಳದ ತಿರುವನಂತಪುರದಲ್ಲೂ ನಾವು ಗೆದ್ದಿದ್ದೇವೆ. ನರೇಂದ್ರ ಮೋದಿ ಜೀ ಅವರು ಮಾಡುವ ಕೆಲಸ ಇದಕ್ಕೆ ಕಾರಣ; ಬಿಜೆಪಿಗೆ ಪರ್ಯಾಯ ಯಾವುದೂ ಇಲ್ಲವೆಂದು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಮುಂಬೈ ಜನತೆಯನ್ನು ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ, ನಾಯಕರನ್ನು ಅಭಿನಂದಿಸಿದರು.

ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ ಅವರು ಮಾತನಾಡಿ, ರಾಷ್ಟ್ರದ ಅತ್ಯಂತ ಶ್ರೀಮಂತ ನಗರಪಾಲಿಕೆ ಬೃಹನ್ಮುಂಬೈಯಲ್ಲಿ ಬಿಜೆಪಿ ಮಿತ್ರಕೂಟ ಗೆದ್ದಿದೆ. ಮುಂಬೈ ಜನತೆ ನಿಜವಾದ ಶಿವಸೇನೆ ಯಾರೆಂದು ತೋರಿಸಿದ್ದಾರೆ ಎಂದು ತಿಳಿಸಿದರು. ಅಲ್ಲಿ ಶಿವಸೇನೆ ಹೆಸರಿನಲ್ಲಿ ಬಹಳ ಬೂಟಾಟಿಕೆ ನಡೆಯುತ್ತಿತ್ತು ಎಂದು ನುಡಿದರು.

ನಮ್ಮ ಮೇಲೆ ಠಾಕ್ರೆಯವರ ಕುಟುಂಬ ಮಾಡಿದ ಆರೋಪಗಳೆಲ್ಲವನ್ನೂ ಬದಿಗೊತ್ತಿ ನಿಜವಾದ ಶಿವಸೇನೆ ಯಾವುದು, ರಾಷ್ಟ್ರಕ್ಕೆ ಮುಂಚೂಣಿಯಲ್ಲಿ ಯಾರು ನಡೆಸಿಕೊಂಡು ಹೋಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. ಇದು ಪ್ರಜಾಪ್ರಭುತ್ವದ ನೈಜ ಗೆಲುವು ಎಂದು ವಿಶ್ಲೇಷಿಸಿದರು. ಕಾರ್ಯಕರ್ತರು ಮತ್ತು ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ

0

ಕಂಪ್ಲಿ: ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಸಮೀಪ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಅಪಾರ ಪ್ರಮಾಣದಲ್ಲಿ ಅಡುಗೆ ಎಣ್ಣೆ ರಸ್ತೆಗೆ ಸೋರಿಕೆಯಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಬಕೆಟ್‌, ಕ್ಯಾನ್‌ಗಳು ಮತ್ತು ವಿವಿಧ ಪಾತ್ರೆಗಳನ್ನು ಹಿಡಿದು ಸೋರಿದ ಪಾಮ್ ಆಯಿಲ್ ಅನ್ನು ಸಂಗ್ರಹಿಸಿಕೊಂಡಿದ್ದಾರೆ.

ಅಪಘಾತದಲ್ಲಿ ಅದೃಷ್ಟವಶಾತ್ ಲಾರಿಯ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಂಪ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕರ್ ಪಲ್ಟಿಯಾಗಲು ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!