Home Blog Page 169

ಸಿಎಂ ಸ್ಥಾನದ ವಿಚಾರವನ್ನು ಮಾಧ್ಯಮಗಳಲ್ಲಿ ಚರ್ಚಿಸುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

0

ನವದೆಹಲಿ: “ಸಿಎಂ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಕೇಳಿದಾಗ, ಈ ರೀತಿ ಉತ್ತರಿಸಿದರು.

ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ, ಈ ಸಭೆಯ ಯೋಜನೆಗಳೇನು ಎಂದು ಕೇಳಿದಾಗ, “ನಮ್ಮ ಪಕ್ಷದ ಯೋಜನೆಗಳನ್ನು ಬಹಿರಂಗಪಡಿಸಲು ಹೇಗೆ ಸಾಧ್ಯ? ಇದನ್ನು ಪಕ್ಷದ ಮಟ್ಟದಲ್ಲಿ ಮಾತ್ರ ಚರ್ಚೆ ಮಾಡಲಾಗುವುದು. ಸಾರ್ವಜನಿಕವಾಗಿ ಅಲ್ಲ. ಏನಾದರೂ ಮಾಹಿತಿ ನೀಡುವುದಿದ್ದರೆ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ, ಅವರು ನೀಡುತ್ತಾರೆ” ಎಂದರು.

ಈ ಪ್ರವಾಸದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ, ನೋಡೋಣ” ಎಂದರು.

ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿದ್ದು, ಹೀಗಾಗಿ ಕಾನೂನು ತಜ್ಞರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ” ಎಂದು ತಿಳಿಸಿದರು.

ಆಸ್ತಿಗಾಗಿ ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ

0

ಮಂಡ್ಯ: ಮಾಯಪ್ಪನಹಳ್ಳಿ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಯೋಗೇಶ್ (30) ಎಂಬ ವ್ಯಕ್ತಿಯನ್ನು ತಮ್ಮ ಅಣ್ಣ ಲಿಂಗರಾಜು ಮತ್ತು ಅಣ್ಣನ ಮಕ್ಕಳು ಭರತ್, ದರ್ಶನ್ ಸೇರಿ 28 ಬಾರಿ ಇರಿದು ಕೊಂದು ಹತ್ಯೆ ಮಾಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪೊಲೀಸ್ ಹೇಳಿಕೆಯಲ್ಲಿ, ದೀರ್ಘಕಾಲದಿಂದ ಲಿಂಗರಾಜು ಮತ್ತು ಯೋಗೇಶ್ ನಡುವೆ ಆಸ್ತಿ ವಿವಾದ ನಡೆದು ಬಂದಿದ್ದು, ಕುಟುಂಬದಲ್ಲಿ ಆಗಾಗ ಜಗಳ ಸಂಭವಿಸುತ್ತಿರುತ್ತಿತ್ತು. ಈ ವಿವಾದವೇ ಕೊನೆಯದಾಗಿ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಯೋಗೇಶ್ ಅವರ ಮದುವೆ ಈ ತಿಂಗಳ 21 ರಂದು ನಿಗದಿಯಾಗಿತ್ತು, ಆದರೆ ದುರಾದೃಷ್ಟವಶಾತ್ ಅಣ್ಣನಿಂದಲೇ ಅವರು ಕೊಲೆಯಾಗಿದ್ದಾರೆ.

ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ, ಸ್ಥಳೀಯರು ಮತ್ತು ಭಾಗವಹಿಸಿದ ಬಂಧು–ಸ್ನೇಹಿತರನ್ನು ಆಘಾತಕ್ಕೊಳಪಡಿಸಿದೆ. ಪೊಲೀಸರು ಆರೋಪಿಗಳನ್ನು ಹುಡುಕಲು ಬಲೆ ಬೀಸಿ ತೀವ್ರ ತನಿಖೆ ಆರಂಭಿಸಿದ್ದಾರೆ.

ಬಿಗ್ ಬಾಸ್ ರಣಹದ್ದು ವಿವಾದ: ತಪ್ಪು ಮಾಹಿತಿ ಹಂಚಿದ ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ನೋಟಿಸ್

ರಾಮನಗರದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಮತ್ತೊಂದು ವಿವಾದಕ್ಕೆ ಸಿಲುಕಿದೆ. ರಣಹದ್ದು ಸಂರಕ್ಷಣಾ ಟ್ರಸ್ಟ್ ತಪ್ಪು ಮಾಹಿತಿ ಹರಡಲಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಕಾರ್ಯಕ್ರಮದ ಹೆಡ್‌ಗೆ ನೋಟಿಸ್ ಜಾರಿ ಮಾಡಿದೆ.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ರಣಹದ್ದಿನ ಗುಣಗಳನ್ನು ತಪ್ಪಾಗಿ ವಿವರಿಸುವ ಮೂಲಕ “ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವುದು” ಎಂದು ಹೇಳಿದ್ದಾರೆ. ರಣಹದ್ದುಗಳು ಬೇಟೆಯಾಡುವುದಿಲ್ಲ, ಹದ್ದು ಮತ್ತು ರಣಹದ್ದಿನ ವ್ಯತ್ಯಾಸವೂ ಸ್ಪಷ್ಟವಾಗಿದೆ. ಈ ತಪ್ಪು ವಿವರಣೆ ಪಕ್ಷಿ ಪ್ರೇಮಿಗಳ ಮನಸ್ಸಿನಲ್ಲಿ ಬೇಸರ ಮೂಡಿಸಿದೆ.

ಕೆಲವಾರಗಳ ಹಿಂದೆ ನಡೆದ ಸ್ಪರ್ಧಿಗಳ ಟಾಸ್ಕ್‌ನಲ್ಲಿ, ರಣಹದ್ದಿನ ಫೋಟೋ ಬಳಸಿ ವ್ಯಕ್ತಿಯ ಗುಣಕ್ಕೆ ಹೋಲಿಕೆ ಮಾಡಲಾಗಿತ್ತು. ಈ ಘಟನೆಯ ನಂತರ, ಡಿಆರ್‌ಎಫ್ಓ ಸುಷ್ಮಾ ನೋಟಿಸ್ ನೀಡಿದ್ದು, ಖಾಸಗಿ ಚಾನಲ್ ಸ್ಪಷ್ಟೀಕರಣ ನೀಡಬೇಕಾಗಿ ತಿಳಿಸಲಾಗಿದೆ. ಈ ಮೂಲಕ ಹದ್ದು–ರಣಹದ್ದುಗಳ ವಿಭಿನ್ನತೆಯನ್ನು ಹಾಗೂ ರಕ್ಷಣೆ ಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯರಿಂದ ಸದನದ ಪಾವಿತ್ರ್ಯತೆಗೆ ಧಕ್ಕೆ: ಬಿ.ವೈ. ವಿಜಯೇಂದ್ರ ಆರೋಪ

0

ಬೆಳಗಾವಿ: ಸದನದಲ್ಲಿ ನಾಡಿನ ಜನರ ಒಳಿತಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಸದನವನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸನ ಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ದೇಶದ ಬಡವರು ಹಾಗೂ ಕಾರ್ಮಿಕರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಈ ವಿಷಯದ ಕುರಿತು ಚರ್ಚೆ ಮಾಡುವ ನೆಪದಲ್ಲಿ ವಿಶೇಷ ಅಧಿವೇಶನ ಕರೆದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ದ್ವೇಷ ಸಾಧಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಿಜಯೇಂದ್ರ ದೂರಿದರು.

ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಬಗ್ಗೆ ಪದೇ ಪದೇ ಮಾತನಾಡುವ ಸಿದ್ದರಾಮಯ್ಯ ಅವರೇ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕುತಂತ್ರ ನಡೆಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ನಾಡಿನ ಹಿತವನ್ನು ಮರೆತು, ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಿಷಕಾರುವ ಮೂಲಕ ಜನರನ್ನು ಎತ್ತಿಕಟ್ಟುವುದಲ್ಲೇ ಕಳೆದ ಎರಡು ವರ್ಷಗಳಿಂದ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಣಾಕ್ಷ ರಾಜಕೀಯ ನಡೆ ಅನುಸರಿಸುತ್ತಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದ್ದು, ಮತ್ತೊಂದು ಕಡೆ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಕೈಕೊಡುವ ತಂತ್ರವಾಗಿ ಈ ವಿಶೇಷ ಅಧಿವೇಶನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಪೊಲೀಸ್ ಠಾಣೆ ಮೆಟ್ಟಿಲೇರಿದ ಸಾಕು ನಾಯಿ ಜಗಳ! ಅಷ್ಟಕ್ಕೂ ಆಗಿದ್ದೇನು..?

0

ಹುಬ್ಬಳ್ಳಿ: ಬೀದಿ ನಾಯಿಗಳ ವಿಚಾರ ದೇಶದ ಸರ್ವೋಚ್ಚ ನ್ಯಾಯಾಲಯದವರೆಗೂ ತಲುಪಿರುವ ನಡುವೆಯೇ, ಈಗ ಸಾಕು ನಾಯಿಯ ಕಾಟ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ವರದಿಯಾಗಿದೆ. ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಗುರುದೇವ ನಗರ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಗುರುದೇವ ನಗರ ನಿವಾಸಿ ಪರಶುರಾಮ ಎಂಬವರು, ವಿಲ್ಸನ್ ಮತ್ತು ವೈಷ್ಣವಿ ಎಂಬ ದಂಪತಿಯ ವಿರುದ್ಧ ಸಾಕು ನಾಯಿ ವಿಚಾರವಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.  ಆರೋಪಿಗಳು ಸಾಕಿರುವ ರಾಟ್‌ ವೀಲರ್ ನಾಯಿ ಮದನ ಎಂಬ ಬಾಲಕನಿಗೆ ಕಚ್ಚಿದೆ ಎನ್ನಲಾಗಿದೆ.

ಈ ವೇಳೆ ಬಾಲಕನನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪರಶುರಾಮ ಅವರ ಮೇಲೆಯೇ ವಿಲ್ಸನ್ ಮತ್ತು ವೈಷ್ಣವಿ ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ‘ನಮ್ಮ ನಾಯಿಗೆ ಹೊಡೆದಿದ್ದೀರಿ’ ಎಂದು ಆರೋಪಿಸಿ ವಿಲ್ಸನ್ ಪರಶುರಾಮ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಅವರ ಮನೆಗೆ ಬಂದು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆ ಜನವರಿ 14ರಂದು ನಡೆದಿದ್ದು, ಅದೇ ದಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಕು ನಾಯಿಗಳ ಅಟ್ಟಹಾಸದಿಂದ ಗುರುದೇವ ನಗರ ನಿವಾಸಿಗಳು ಕಂಗಾಲಾಗಿದ್ದು, ಈ ಹಿಂದೆ ಕೂಡ ಸಾಕು ನಾಯಿಯಿಂದ ತೊಂದರೆ ಎದುರಿಸಿದ್ದೇವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಶುರಾಮ ಆಗ್ರಹಿಸಿದ್ದಾರೆ.

ದೂರು ಸ್ವೀಕರಿಸಿರುವ ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಖಲೆಗಳು ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

ಪತಿ-ಪತ್ನಿ ಜಗಳ: ಬೆಂಕಿ ಹಚ್ಚಿ 4 ವರ್ಷದ ಮಗಳ ಕೊಂದು ತಾಯಿ ಆತ್ಮಹತ್ಯೆ

0

ಬೆಂಗಳೂರು: ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಮಗಳನ್ನು ಬೆಂಕಿ ಹಚ್ಚಿ ಕೊಂದ ಬಳಿಕ ತಾಯಿಯೇ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತರನ್ನು ಸೀತಾ (29) ಮತ್ತು ಅವರ ಪುತ್ರಿ ಸೃಷ್ಟಿ (4) ಎಂದು ಗುರುತಿಸಲಾಗಿದೆ. ಈ ಘಟನೆ ಸಂಜಯನಗರದ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದ್ದು, ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ.

ನಿನ್ನೆ ಸಂಜೆ ಸುಮಾರು 7.30ರ ವೇಳೆಗೆ ಈ ಘಟನೆ ನಡೆದಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯನಗರ ಪೊಲೀಸರು ತನಿಖೆ ಆರಂಭಿಸಿದ್ದು, ಪತಿ-ಪತ್ನಿ ನಡುವಿನ ಜಗಳವೇ ಈ ದುರ್ಘಟನೆಗೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ವಿವರಗಳು ತನಿಖೆಯಿಂದ ಹೊರಬೀಳಬೇಕಿದೆ.

ಲಕ್ಕುಂಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಸಂಭ್ರಮ

0

ಲಕ್ಕುಂಡಿ: ಭಾರತ ಕಂಡ ಮಹಾನ್ ಆಧ್ಯಾತ್ಮಿಕ ಚಿಂತಕ ಹಾಗೂ ಯುವಶಕ್ತಿಗೆ ಪ್ರೇರಣೆಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ ಎಂದು ಹಿರಿಯ ಶಿಕ್ಷಕ ಬಸವರಾಜ ಗರ್ಜಪ್ಪನವರ ಹೇಳಿದರು.

ಇಲ್ಲಿನ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1862ರ ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದ ಸ್ವಾಮಿ ವಿವೇಕಾನಂದರು ಬಾಲ್ಯದಲ್ಲೇ ರಾಮಾಯಣ, ಮಹಾಭಾರತದ ಕಥೆಗಳ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅರಿತುಕೊಂಡಿದ್ದರು. ದೈವಭಕ್ತಿ, ದೇಶಭಕ್ತಿ, ಆತ್ಮವಿಶ್ವಾಸ, ಧೈರ್ಯ ಮತ್ತು ದೃಢ ಸಂಕಲ್ಪ ಅವರ ಜೀವನದ ಪ್ರಮುಖ ಗುಣಗಳು ಆಗಿವೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಯುವಜನತೆಗೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಗುರುಮಾತೆ ಆರ್.ಬಿ. ಬರದ್ವಾಡ, ಆರ್.ಎಂ. ದಂಡಿನ, ಪಿ.ಬಿ. ಬರದ್ವಾಡ, ಅರ್ಜುನ ಚಲವಾದಿ, ಎ.ಎಂ. ದಂಡಿನ, ಅಂಬುಜಾ ಕುಲಕರ್ಣಿ ಉಪಸ್ಥಿತರಿದ್ದರು.

ಬಳಗಾನೂರಿನ ಶರಣ ಬಳಗದವರು ಆತ್ಮದಲ್ಲಿ ಭಕ್ತಿಯನ್ನು ಬೆಳೆಸಿದ್ದಾರೆ: ಶ್ರೀ ಶಿವಶಾಂತವೀರ ಶರಣರು

0

ಗದಗ: ರೈತನು ಭೂಮಿಯಲ್ಲಿ ಬೆಳೆಯನ್ನು ಬೆಳೆಯುವಂತೆ, ಬಳಗಾನೂರಿನ ಶರಣ ಬಳಗದವರು ಆತ್ಮದಲ್ಲಿ ಭಕ್ತಿಯನ್ನು ಬೆಳೆಸಿದ್ದಾರೆ ಎಂದು ಬಳಗಾನೂರಿನ ಚನ್ನವೀರ ಶರಣರ ಶ್ರೀಮಠದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಹೇಳಿದರು.

ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಮತ್ತು ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು. ಬಳಗಾನೂರು ಗ್ರಾಮವು ಗಾತ್ರದಲ್ಲಿ ಚಿಕ್ಕದಾದರೂ ಹೃದಯ ಶ್ರೀಮಂತಿಕೆಯಲ್ಲಿ ಬಹಳ ದೊಡ್ಡದು. ಭಕ್ತಿ, ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈ ಪಾದಯಾತ್ರೆಯ ಉದ್ದೇಶ ಎಂದು ಹೇಳಿದರು.
ಶರಣರ ದೃಷ್ಟಿಯಲ್ಲಿ ಸಂಸಾರ ಗಾಳಿಗೆ ಅಲುಗುವ ದೀಪದಂತಿದ್ದು, ಚಿನ್ನ, ಬೆಳ್ಳಿ, ಭೂಮಿ ಮತ್ತು ಭೌತಿಕ ಸಂಪತ್ತು ಶಾಶ್ವತವಲ್ಲ. ದೇವರ ಕೃಪೆ, ದಾನ-ಧರ್ಮ ಮತ್ತು ಸೇವೆಯೇ ನಿಜವಾದ ಸುಖವನ್ನು ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಸೊರಟೂರು–ಮಲ್ಲಗಿರಿಸಮುದ್ರದ ಓಂಕಾರೇಶ್ವರ ಶ್ರೀಮಠದ ಪೂಜ್ಯ ಶ್ರೀ ಪಕೀರೇಶ್ವರ ಶ್ರೀಗಳು ಮಾತನಾಡಿ, ಪಾದಯಾತ್ರೆಯಿಂದ ಮನಸ್ಸು ಮತ್ತು ದೇಹಕ್ಕೆ ಶಾಂತಿ ಸಿಗುತ್ತದೆ. ದಾಸೋಹ, ಸ್ವಚ್ಛತೆ, ಸೇವೆ ಮಾಡಿದರೆ ಶರಣರು ಜ್ಞಾನ ಬೆಳಕು ನೀಡುತ್ತಾರೆ ಎಂದರು.

ಪಾದಯಾತ್ರೆಯಲ್ಲಿ ವಚನಗಾನ, ಭಕ್ತಿ ಗೀತೆಗಳು ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿತು. ಸೇವಾ ಭಜನಾ ಸಂಘದವರು ಸಾಥ್ ನೀಡಿದರು. ಮಾರ್ಗದ ತುಂಬಾ ರಂಗೋಲಿ, ದೀಪಾಲಂಕಾರ ಮತ್ತು ತೋರಣಗಳಿಂದ ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು.

ಶುಕ್ರವಾರ ಬೆಳಗ್ಗೆ 6 ಗಂಟೆಗೆ ಬಾವಿ ಬಸವಣ್ಣ ದೇವಸ್ಥಾನದಿಂದ ಎರಡನೇ ದಿನದ ಪಾದಯಾತ್ರೆ ಆರಂಭವಾಗಿ ವಿವಿಧ ಪ್ಲಾಟ್‌ಗಳ ಮೂಲಕ ಶ್ರೀಮಠಕ್ಕೆ ತಲುಪಲಿದೆ. ಬಳಿಕ ತುಲಾಭಾರ, ಆಶೀರ್ವಚನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

8 ಕೋಟಿ ವೆಚ್ಚದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ಭವನಕ್ಕೆ ಶಂಕುಸ್ಥಾಪನೆ

0

ವಿಜಯಸಾಕ್ಷಿ ಸುದ್ದಿ,ಗದಗ: ಕುಕನೂರು–ಮುಂಡರಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಂಡಲಗಿರಿ ಗ್ರಾಮದಲ್ಲಿ, ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸರ್ಕಾರಕ್ಕೆ ದಾನ ನೀಡಿದ 2.5 ಎಕರೆ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ಬುದ್ಧ–ಬಸವ–ಅಂಬೇಡ್ಕರ್ ಸಂಕೀರ್ಣದಡಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ಸಾರ್ವಜನಿಕ ಸಮುದಾಯಭವನಕ್ಕೆ ಶಂಕುಸ್ಥಾಪನೆ ನೆರವೇರಿತು.

ಈ ಭವನವು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಶಂಕುಸ್ಥಾಪನೆಯನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಹಣಕಾಸು ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ವಹಿಸಿದ್ದರು.

ಈ ವೇಳೆ ಮಾತನಾಡಿದ ರಾಯರಡ್ಡಿ ಅವರು, ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕಾಗಿದ್ದ ಯಲಬುರ್ಗಾ ಇಂದು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂದರು. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಹೆಸರು, ಉಪ್ಪು ಮತ್ತು ಸಕ್ಕರೆ ನೀಡುವ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ತಿಳಿಸಿದರು.

ತಾಲೂಕಿನ ಪ್ರತಿಹೋಬಳಿಗೂ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ತಳಕಲ್ಲಿನ ಇಂಜಿನಿಯರಿಂಗ್ ಕಾಲೇಜು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಇಟಗಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸಿ, ಅದಕ್ಕೆ ಮಹಾದೇವ ದೇವಾಲಯದ ಹೆಸರಿಡಲಾಗುವುದು ಎಂದು ಘೋಷಿಸಿದರು. ಜೊತೆಗೆ ಕೊಪ್ಪಳ ಜಿಲ್ಲೆಗೆ 300 ಕೋಟಿ ವೆಚ್ಚದ ಹೃದಯ ಮತ್ತು ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರವನ್ನು ಮನವೊಲಿಸುವ ಭರವಸೆ ನೀಡಿದರು.

ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಬಸವರಾಜ ರಾಯರಡ್ಡಿಯವರ ಜನಪರ ಕಾರ್ಯಗಳನ್ನು ಶ್ಲಾಘಿಸಿ, ಜನಸೇವೆಯಲ್ಲೇ ದೇವರನ್ನು ಕಾಣುವ ನಾಯಕರು ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ವಿವಿಧ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು, ವಿದ್ಯಾಪೀಠದ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಂಡಲಗಿರಿ – ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಮುದಾಯಭವನ – 8 ಕೋಟಿ, ಇಟಗಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ 500 ವಿದ್ಯಾರ್ಥಿಗಳ ಹಾಸ್ಟೆಲ್, ಇಟಗಿ ಆದರ್ಶ ಪಿಯು ಕಾಲೇಜು – 4 ಕೋಟಿ, ಇಟಗಿ ಗ್ರಾಮದಲ್ಲಿ ಬಸ್ ನಿಲ್ದಾಣ., ಮಂಡಲಗಿರಿಯಲ್ಲಿ ಆಧುನಿಕ ಬಸ್ ನಿಲ್ದಾಣ – 2 ಕೋಟಿ, ಮಂಡಲಗಿರಿ–ಮಾಳೆಕೊಪ್ಪ ಸಂಪರ್ಕ ರಸ್ತೆ – 1 ಕೋಟಿ

ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದ ರಾಜೀವ್ ಗೌಡ ಪ್ರಕರಣ: ‘ಕೈ’ ಮುಖಂಡನ ಬಂಧನಕ್ಕೆ ಮೂರು ತಂಡ ರಚನೆ

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿವಾದದ ಕೇಂದ್ರದಲ್ಲಿ ನಿಂತಿದ್ದಾರೆ. ನಗರಸಭೆ ಪೌರಾಯುಕ್ತೆ ವಿರುದ್ಧ ಅಶ್ಲೀಲ ಮತ್ತು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದ ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಕಳೆದ ಎರಡು ದಿನದಿಂದ ರಾಜೀವ್ ಗೌಡ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ತಲೆಮರೆಸಿದ್ದಾರೆ.

ಅವರ ಬಂಧನಕ್ಕೆ ಪೊಲೀಸರು 3 ತಂಡ ರಚನೆ ಮಾಡಿದ್ದು, ಗುರುವಾರ ಮನೆಯಲ್ಲಿನ ಮತ್ತು ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಶೋಧ ನಡೆಸಿದರು. ಈ ವೇಳೆ ಪತ್ನಿ ಪೊಲೀಸ್‌ಗಳ ಜೊತೆ ರಂಪಾಟ ಮಾಡಿಕೊಂಡು, ಸರ್ಚ್ ವಾರಂಟ್ ಇಲ್ಲದೇ ಮನೆಯಲ್ಲಿ ಬಾರದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಹೈಕಮಾಂಡ್ ಅಂಗಳಕ್ಕೂ ತಲುಪಿದ್ದು, ಕೆಪಿಸಿಸಿ ವರದಿ ನೀಡುವಂತೆ ಸೂಚಿಸಿದೆ. ಇಲ್ಲಿನ ಉನ್ನತ ಮೂಲಗಳ ಪ್ರಕಾರ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನೇರ ಫೋನ್ ಕರೆ ಮೂಲಕ ವರದಿ ಕೇಳಲಾಗಿದೆ. ನೋಟಿಸ್ ನೀಡಲಾಗಿದ್ದು, ವಾರದೊಳಗೆ ಸೂಕ್ತ ಉತ್ತರ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವ ಹಂತದಲ್ಲಿ ಇದೆ.

ಈ ಘಟನೆ ಶಿಡ್ಲಘಟ್ಟ, ಹೊಸಕೋಟೆ, ದೇವನಹಳ್ಳಿ ಮತ್ತು ಬೆಂಗಳೂರಿನ 9 ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ. ರಿಯಲ್ ಎಸ್ಟೇಟ್ ವಂಚನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಅವರ ಭಾಗಿದಾರಿ ದಾಖಲಾಗಿದೆ.

ಜಿಲ್ಲಾ ಸರ್ಕಾರಿ ನೌಕರರ ಸಂಘ ಮತ್ತು ಸಾರ್ವಜನಿಕರ ಸಂಘಟನೆಗಳು ಇಂದು ಜಿಲ್ಲಾಡಳಿತ ಭವನದ ಮುಂದೆ ರಾಜೀವ್ ಗೌಡನ ಬಂಧನಕ್ಕಾಗಿ ಪ್ರತಿಭಟನೆ ನಡೆಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ರಹೀಂ ಖಾನ್, ಮಹಿಳಾ ಅಧಿಕಾರಿಗೆ ಆಗಿರುವ ಅನ್ಯಾಯಕ್ಕೆ ಬೆಂಬಲ ನೀಡುವ ಆಕ್ರೋಶವೂ ವೀಕ್ಷಿಸಲಾಗುತ್ತಿದೆ.

error: Content is protected !!