Home Blog Page 171

ಸಂಭ್ರಮದ ಭೋಗಿ ಹಬ್ಬ ಆಚರಣೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕರ ಸಂಕ್ರಾಂತಿಯ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ನರೇಗಲ್ಲ ಹೋಬಳಿಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಧನುರ್ಮಾಸದಲ್ಲಿ ಬರುವ ಭೋಗಿ ಹಬ್ಬ ವಿಶೇಷತೆಯಿಂದ ಕೂಡಿದೆ. ಸುಮಂಗಲೆಯರು ವೈದಿಕ ಮುತ್ತೈದೆಯರಿಗೆ ಮರದ ಬಾಗಿನ ನೀಡುವ ಮೂಲಕ ಹಬ್ಬವನ್ನು ಆಚರಿಸಿದರು. ಸೂರ್ಯ ದಕ್ಷಿಣಾಯನದಿಂದ ಉತ್ತರಾಯನದ ಕಡೆಗೆ ಚಲಿಸುವ ಮಹಾ ಪರ್ವವೇ ಸಂಕ್ರಮಣ ಎನಿಸಿಕೊಳ್ಳುತ್ತದೆ. ಮಕರ ಸಂಕ್ರಮಣದ ಮೊದಲ ಹಬ್ಬವೇ ಭೋಗಿ ಹಬ್ಬವಾಗಿದೆ.

ಮರದ ಬಾಗಿನ ನೀಡಿ ಬಂದ ನಂತರ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುಗ್ಗಿ, ಗೊಜ್ಜು, ಸೆಜ್ಜಿ ರೊಟ್ಟಿ, ಚಳ್ಳವರಿಕಾಯಿ ಪಲ್ಯ, ಬೆಣ್ಣೆ ಮುಂತಾದವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮನೆ ಮಂದಿಯೆಲ್ಲ ಸೇರಿ ಊಟ ಮಾಡುತ್ತಾರೆ. ಧನುರ್ಮಾಸದಲ್ಲಿ ವಿಶೇಷವಾದ ಚಳಿ ಇರುತ್ತದೆ. ವಿಪರೀತವಾದ ಚಳಿಯನ್ನು ನಮ್ಮ ದೇಹವು ತಡೆದುಕೊಳ್ಳಲು ಬೇಕಾದ ಆಹಾರ ಪದ್ಧತಿಯನ್ನು ಇದರಲ್ಲಿ ಅಡಕಗೊಳಿಸಲಾಗಿದೆ. ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟಿ ಕೈಕಾಲುಗಳು ಒಡೆಯುವುದು ಸರ್ವೇಸಾಮಾನ್ಯ. ಇಂತಹ ಸಂದರ್ಭದಲ್ಲಿ ಎಣ್ಣೆ ಅಂಶಗಳಿರುವ ಪದಾರ್ಥಗಳನ್ನು ಸೇವಿಸಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವಲ್ಲಿ ಎಳ್ಳು ಬಹಳಷ್ಟು ಸಹಾಯ ಮಾಡುತ್ತದೆ. ಅದಕ್ಕಾಗಿ ಎಳ್ಳಿನ ಪದಾರ್ಥಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಶಾಲಾ ಆವರಣದಲ್ಲೇ ಬಡಿದಾಡಿಕೊಂಡ ಅತಿಥಿ ಶಿಕ್ಷಕ–ಎಸ್‌ಡಿಎಂಸಿ ಅಧ್ಯಕ್ಷ! Video Viral

0

ಹಾವೇರಿ:- ಜಿಲ್ಲೆಯ ಹಾನಗಲ್ ಪಟ್ಟಣದ ಸರ್ಕಾರಿ ಮಾದರಿ ಶಾಲೆಯಲ್ಲಿ ಅತಿಥಿ ಶಿಕ್ಷಕ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ನಡೆದಿದೆ.

https://www.facebook.com/share/r/1CKpFGBeJg/

ಅತಿಥಿ ಶಿಕ್ಷಕ ನವೀನ್ ಹಾಗೂ SDMC ಅಧ್ಯಕ್ಷ ಸತೀಶ್ ಬೊಸ್ಲೆ ನಡುವೆ ಶಾಲಾ ಮೈದಾನದಲ್ಲೇ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಅತಿಥಿ ಶಿಕ್ಷಕರ ಸಂಬಳ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ SDMC ಅಧ್ಯಕ್ಷನ ವಿರುದ್ಧ ಕೇಳಿಬಂದಿದ್ದು, ಇದೇ ವಿಚಾರದಲ್ಲಿ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮತ್ತೆ ನಡೆದ ಮಾತಿನ ಚಕಮಕಿ ತೀವ್ರ ವಾಗ್ವಾದಕ್ಕೆ ತಿರುಗಿ ಅದು ಹೊಡೆದಾಟಕ್ಕೆ ಕಾರಣವಾಗಿದೆ. ಘಟನೆಯ ವೇಳೆ ಶಾಲಾ ಮೈದಾನದಲ್ಲಿದ್ದವರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದ್ದಾರೆ. ಹೊಡೆದಾಟದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿವೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಹರಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ತಹಸೀಲ್ದಾರ್ ಕಚೇರಿಯಲ್ಲಿ 20 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾ ಬಲೆಗೆ ಬಿದ್ದ ‘FOOD INSPECTOR’

0

ಹಾವೇರಿ:- ಜಿಲ್ಲೆಯ ರಾಣೆಬೆನ್ನೂರು ತಹಸೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಫುಡ್ ಇನ್ಸ್‌ಪೆಕ್ಟರ್ ಲೋಕಾ ಬಲೆಗೆ ಬಿದ್ದಿದ್ದಾರೆ.

ರಾಣೆಬೆನ್ನೂರ ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಅಧಿಕಾರಿ ‘ಶಂಭು’ ಲೋಕಾಯುಕ್ತರ ಬಲೆಗೆ ಬಿದ್ದವರು. ನ್ಯಾಯಬೆಲೆ ಅಂಗಡಿ ಪ್ರಾಧಿಕಾರದ ವರ್ಗಾವಣೆಗೆ ಸಂಬಂಧಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಶಂಭು ಮೇಲೆ ಇದೆ. ರಾಘವೇಂದ್ರ ಎಂಬುವವರಿಂದ ಅನುಕಂಪದ ಆಧಾರದ ಮೇಲೆ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಸುಮಾರು ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿ ಎಂ.ಎಸ್. ಕೌಲೆಪುರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 20,000 ಲಂಚ ಸ್ವೀಕರಿಸುವ ವೇಳೆ ಶಂಭು ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.

ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ನಿರೀಕ್ಷಣಾ ಜಾಮೀನು ಮಂಜೂರು!

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ವಾದ–ಪ್ರತಿವಾದ ಆಲಿಸಿ ಇಂದು ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ವಿಚಾರಣೆ ವೇಳೆ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದ ಮಂಡಿಸಿ, ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರ ಕುರಿತು ಸಿಐಡಿ ಮತ್ತು ಇಡಿ ತನಿಖೆ ನಡೆಸಿದ್ದು, ಮುಂದಿನ ಹಂತದಲ್ಲಿ ಫಲಾನುಭವಿಗಳ ಪತ್ತೆ ಅಗತ್ಯವಿದೆ ಎಂದು ತಿಳಿಸಿದರು. ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಲಾಗಿದೆ; ಹಗರಣದ ಹಣವನ್ನು ಚಿನ್ನ ಮತ್ತು ಬುಲಿಯನ್ ಆಗಿ ಪರಿವರ್ತಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಾಗೇಂದ್ರ ಹಾಗೂ ಅವರ ಸಹಚರರ ಪಾತ್ರವಿದ್ದು, ಕೆಲ ಬೋಗಸ್ ಕಂಪನಿಗಳೂ ಭಾಗಿಯಾಗಿವೆ ಎಂದು ತನಿಖಾಧಿಕಾರಿ ಹೇಳಿ, ಸಾಕ್ಷ್ಯಾಧಾರಗಳಿರುವ ಎರಡು ಸೂಟ್‌ಕೇಸ್ ದಾಖಲೆಗಳನ್ನು ಕೋರ್ಟ್‌ಗೆ ಪ್ರದರ್ಶಿಸಿದರು.

ಇದಕ್ಕೆ ಪ್ರತಿಯಾಗಿ ನಾಗೇಂದ್ರ ಪರ ವಕೀಲರು, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರವು ವೈಯಕ್ತಿಕವಾದದ್ದು; ಸಿಬಿಐ ಉಲ್ಲೇಖಿಸುತ್ತಿರುವ ಟೆಂಡರ್ ಪ್ರಕ್ರಿಯೆಗೆ ಈ ವ್ಯವಹಾರಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸಿದರು. ಇದೀಗ ಕೋರ್ಟ್ ಮಾಜಿ ಸಚಿವ ನಾಗೇಂದ್ರ ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಡ್ರಗ್ಸ್ ಡಿಲೀಂಗ್: ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

0

ಬೆಂಗಳೂರು:ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಡೀಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಚೆ ನಡುಡಿ ಹಾಗೂ ಆಕಾಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೇಗೂರು ವ್ಯಾಪ್ತಿಯಲ್ಲಿ ಹಾಗೂ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು, ಡ್ರಗ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಚಯಸ್ಥರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ–ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಬೆಲೆಗೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು,

ಆರೋಪಿಗಳಿಂದ ಸುಮಾರು 1 ಕೋಟಿ ರೂ. ಮೌಲ್ಯದ 101 ಗ್ರಾಂ ಕೊಕೇನ್ ಹಾಗೂ 481 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಡ್ರಗ್ ಜಾಲದ ಇನ್ನಿತರ ಸಂಪರ್ಕಗಳ ಕುರಿತು ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಲ್ಮೀಕಿ ಹಗರಣ ಕೇಸ್: ಮಾಜಿ ಸಚಿವ‌ ಬಿ.ನಾಗೇಂದ್ರಗೆ ಜಾಮೀನು ಮಂಜೂರು

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ ದೊಡ್ಡ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಸಿಬಿಐ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜ.13) ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ವಾದ–ಪ್ರತಿವಾದ ಆಲಿಸಿ ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿ, ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರ ಕುರಿತು ಸಿಐಡಿ ಹಾಗೂ ಇಡಿ ತನಿಖೆ ನಡೆಸಿರುವುದಾಗಿ ತಿಳಿಸಿದರು. ಹಗರಣದಿಂದ ಲಾಭ ಪಡೆದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದ್ದು, ಕೆಲವು ಮಾಹಿತಿಗಳನ್ನು ತೆರೆದ ನ್ಯಾಯಾಲಯದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಹಗರಣದ ಹಣವನ್ನು ಚಿನ್ನ ಮತ್ತು ಬುಲಿಯನ್ ರೂಪದಲ್ಲಿ ಪರಿವರ್ತಿಸಲಾಗಿದೆ. ಇದರ ಹಿಂದೆ ನಾಗೇಂದ್ರ ಹಾಗೂ ಅವರ ಸಹಚರರು ಭಾಗಿಯಾಗಿದ್ದಾರೆ. ಬೋಗಸ್ ಕಂಪನಿಗಳ ಬಳಕೆಯ ಬಗ್ಗೆ ಸಾಕ್ಷ್ಯಗಳಿವೆ ಎಂದು ತನಿಖಾಧಿಕಾರಿ ತಿಳಿಸಿ, ಕೋರ್ಟ್‌ಗೆ ಎರಡು ಸೂಟ್‌ಕೇಸ್‌ಗಳಷ್ಟು ದಾಖಲೆಗಳನ್ನು ಹಾಜರುಪಡಿಸಿದರು.

ನಾಗೇಂದ್ರ ಪರ ವಕೀಲರು ವಾದ ಮಂಡಿಸಿ, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ಹಣಕಾಸು ವ್ಯವಹಾರ ವೈಯಕ್ತಿಕವಾದದ್ದು. ಸಿಬಿಐ ಉಲ್ಲೇಖಿಸಿರುವ ಟೆಂಡರ್‌ಗಳಿಗೆ ಈ ವ್ಯವಹಾರಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಂಜಾ ದಾರಕ್ಕೆ ಬಲಿಯಾದ ಬೈಕ್ ಸವಾರ: ಸಂಕ್ರಾಂತಿಗೆ ಮಗಳನ್ನ ಕರೆತರಲು ಹೋಗುತ್ತಿದ್ದ ತಂದೆ ಮೃತ್ಯು

0

ಬೀದರ್: ಗಾಳಿಪಟಕ್ಕೆ ಬಳಸುವ ಅಪಾಯಕಾರಿ ಮಾಂಜಾ ದಾರ ಮತ್ತೊಂದು ಅಮಾಯಕ ಜೀವವನ್ನು ಬಲಿ ಪಡೆದಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಯನ್ನು ಮಾಂಜಾ ದಾರ ಕತ್ತರಿಸಿದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಬಂಬುಳಗಿ ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಹೊಸಮನಿ (48) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ, ಹುಮನಾಬಾದ್ ಪಟ್ಟಣದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಮನೆಗೆ ಕರೆತರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ತಾಳಮಡಗಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ಮಾಂಜಾ ದಾರ ಸಂಜೀವ್ ಅವರ ಕುತ್ತಿಗೆಗೆ ಸಿಲುಕಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಪರಿಣಾಮವಾಗಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಜೀವ್ ಕುಮಾರ್ ಹೊಸಮನಿ ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನ ತಂದೆಯಾಗಿದ್ದು, ನಾಲ್ಕೂ ಮಕ್ಕಳು ವಿದ್ಯಾಭ್ಯಾಸದಲ್ಲಿದ್ದಾರೆ. ಕುಟುಂಬದ ಮುಖ್ಯ ಆಧಾರವಾಗಿದ್ದ ಸಂಜೀವ್ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಮೃತದೇಹವನ್ನು ಮನ್ನಾಏಖೆಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಮತ್ತೆ ಮಾಂಜಾ ದಾರದ ಅಪಾಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ

0

ಬೆಂಗಳೂರು: ಬಳ್ಳಾರಿ ವಿಷಯ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಸಂದರ್ಭದಲ್ಲೇ ಶಿಡ್ಲಘಟ್ಟದಲ್ಲೂ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ. ಪತ್ರವನ್ನೂ ನೀಡಿಲ್ಲ ಹಣ ಕಟ್ಟಿಲ್ಲ; ಅನುಮತಿ ಪಡೆದಿಲ್ಲ ಎಂದು ಕಮೀಷನರ್ ಹೇಳಿದ್ದಾಗಿ ಗಮನ ಸೆಳೆದರು.

ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕಾಂಗ್ರೆಸ್ ನಾಯಕರ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗಿದೆ. ದರ್ಪ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ರಾಜೀವ್ ಗೌಡರನ್ನು ಬಂಧಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ಮಾತನಾಡಿದ ಇವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ತಕ್ಷಣ ಬಂಧಿಸಬೇಕು. ಇಲ್ಲವಾದರೆ, ಇದನ್ನು ನಾವು ರಾಜ್ಯಮಟ್ಟದ ವರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕರು ಇಂಥ ದುಂಡಾವರ್ತಿ ಮಾಡುವುದು ಸರಿಯೇ ಎಂದು ಕೇಳಿದರು. ನಿಂದನೆಯ ಹಿನ್ನೆಲೆಯಲ್ಲಿ ಪೌರಕಾರ್ಮಿಕರೂ ಅಲ್ಲಿ ಧರಣಿ ಕುಳಿತಿದ್ದಾರೆ. ಇದನ್ನು ಬಿಜೆಪಿ ವಿಶೇಷ ಆದ್ಯತೆ ಮೇಲೆ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ಷೇಪಿಸಿದರು.

ಇವತ್ತು ಬೆಳಿಗ್ಗೆಯಿಂದ ಮಾಧ್ಯಮಗಳಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ಸಿನ ಮುಖಂಡ ರಾಜೀವ್ ಗೌಡ ಎಂಬ ವ್ಯಕ್ತಿ ಅಲ್ಲಿನ ಮುನ್ಸಿಪಲ್ ಕಮೀಷನರ್‍ರನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟು ಬಿಡುವ ಬೆದರಿಕೆ ಹಾಕಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಿದ ಪೌರ ಕಾರ್ಮಿಕರನ್ನೂ ಕೆಟ್ಟ ಭಾಷೆಯಲ್ಲಿ ನಿಂದಿಸಿ, ಎಲ್ಲರನ್ನೂ ಶಿಡ್ಲಘಟ್ಟ ಬಿಡಿಸಿ ಓಡಿಸುವೆ; ಯಾರ್ಯಾರು ಬ್ಯಾನರ್ ಕಿತ್ತು ಹಾಕಿದವರ ವಿರುದ್ಧ ಕೆಟ್ಟ ಪದ ಬಳಸಿದ್ದಾಗಿ ಆಕ್ಷೇಪಿಸಿದರು.

ತಾಂತ್ರಿಕ ದೋಷದಿಂದ ಕ್ರೇನ್ ಪಲ್ಟಿ: ಬೆಂಗಳೂರು ಮೆಟ್ರೋ ಬ್ಲೂ ಲೈನ್ ಕಾಮಗಾರಿ ವೇಳೆ ತಪ್ಪಿದ ಭಾರೀ ಅನಾಹುತ

0

ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ಬ್ಲೂ ಲೈನ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಭಾರೀ ಅವಘಡ ತಪ್ಪಿದೆ. ನಸುಕಿನ ಜಾವ 3.45ರ ಸುಮಾರಿಗೆ ಬೃಹತ್ ಕ್ರೇನ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಕಾರ್ಮಿಕರು ಅಥವಾ ವಾಹನ ಸವಾರರಿಗೆ ಗಾಯವಾಗಿಲ್ಲ.

ಘಟನೆ ಸಂಭವಿಸಿದ ವೇಳೆ ಸುತ್ತಮುತ್ತ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಭಾರವಾದ ಉಕ್ಕಿನ ಗಿರ್ಡರ್ ಎತ್ತುವ ಸಂದರ್ಭದಲ್ಲಿ ಕ್ರೇನ್ ಏಕಾಏಕಿ ಸಮತೋಲನ ಕಳೆದುಕೊಂಡು ಕೆಳಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ನೀಡಿದ ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ ಸದಾಶಿವ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉಕ್ಕಿನ ಗಿರ್ಡರ್ ಎತ್ತುವಾಗ ಕ್ರೇನ್‌ನ ಒಂದು ಭಾಗ ಏಕಾಏಕಿ ಮೇಲಕ್ಕೆ ಚಲಿಸಿ ಸಮತೋಲನ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.

ಘಟನೆಯ ಎಕ್ಸ್‌ಕ್ಲೂಸಿವ್ ದೃಶ್ಯಗಳು ಲಭ್ಯವಾಗಿದ್ದು, ಇಂದು ಮುಂಜಾನೆ ಸುಮಾರು 3.20ರ ವೇಳೆಗೆ ಅಪಘಾತ ನಡೆದಿರುವುದು ದೃಢಪಟ್ಟಿದೆ. ವಾಹನಗಳ ಓಡಾಟದ ಸಮಯದಲ್ಲೇ ಕ್ರೇನ್ ಪಲ್ಟಿಯಾಗಿರುವುದಾಗಿ ಹೇಳಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಬೆಂಗಳೂರು ನಗರದಲ್ಲಿ ಹಲವು ಭಾಗಗಳಲ್ಲಿ ಮೆಟ್ರೋ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ಕೆಲ ರಸ್ತೆಗಳಲ್ಲೀಗಾಗಲೇ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಇಂತಹ ಘಟನೆಗಳು ಸಾರ್ವಜನಿಕ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.

ಸಿಎಂ–ಡಿಸಿಎಂ ಗೊಂದಲಕ್ಕೆ ತೆರೆ: ರಾಹುಲ್ ಗಾಂಧಿಯಿಂದ ದೆಹಲಿಗೆ ಆಹ್ವಾನ – ಅಶೋಕ್ ಪಟ್ಟಣ್

0

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ವಿಚಾರಗಳನ್ನು ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ದೆಹಲಿಗೆ ಆಹ್ವಾನಿಸಿದ್ದಾರೆ ಎಂದು ವಿಧಾನಸಭಾ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುವ ಮಾತುಕತೆಯಲ್ಲಿ ಎಲ್ಲಾ ಗೊಂದಲಗಳಿಗೆ ಅಂತ್ಯ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್ ಪಟ್ಟಣ್, ನಿನ್ನೆ ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಯಾವುದೇ ಅಧಿಕೃತ ಚರ್ಚೆ ನಡೆಸಿಲ್ಲ. ಆದರೆ ಇಬ್ಬರನ್ನೂ ದೆಹಲಿಗೆ ಬರಲು ಸೂಚಿಸಿದ್ದಾರೆ. ದೆಹಲಿಗೆ ಹೋದ ನಂತರ ಎಲ್ಲ ವಿಚಾರಗಳನ್ನು ಸರಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವಿವರಿಸಿದರು.

ಡಿಕೆ ಶಿವಕುಮಾರ್ ಮಾತನಾಡಬೇಕು ಎಂದು ಕೇಳಿಕೊಂಡ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ಬರಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಂಕ್ರಾಂತಿ ಬಳಿಕ ಇಬ್ಬರೂ ದೆಹಲಿಗೆ ತೆರಳಿ ಮಾತುಕತೆ ನಡೆಸಲಿದ್ದು, ಶೇ.100ರಷ್ಟು ಗೊಂದಲಗಳು ಪರಿಹಾರವಾಗಲಿವೆ ಎಂದು ಅಶೋಕ್ ಪಟ್ಟಣ್ ವಿಶ್ವಾಸ ವ್ಯಕ್ತಪಡಿಸಿದರು.

ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ರನ್‌ವೇಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಹುಲ್ ಗಾಂಧಿ ಬಂದ ಸಂದರ್ಭದಲ್ಲಿ ಸಾಮಾನ್ಯ ಮಾತುಕತೆ ಮಾತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದರು.

error: Content is protected !!