Home Blog Page 170

ದಿ. ಮಾಮಲೇದೇಸಾಯಿ ಇಂದಿನ ಪೀಳಿಗೆಗೆ ಆದರ್ಶ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಹಂದಿಗನೂರ ದೇಶಗತಿ ಮನೆತನ ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ಇತಿಹಾಸ ಹಾಗೂ ಪರಂಪರೆಯಯುಳ್ಳ ಮನೆತನವಾಗಿದೆ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ ದಿ. ಆರ್.ಬಿ. ಮಾಮಲೇದೇಸಾಯಿ ಯಾವುದೇ ಆಡಂಬರವಿಲ್ಲದ, ಸೌಜನ್ಯದ, ಮೌಲ್ಯಾಧಾರಿತ ಜೀವನ ನಡೆಸಿದ ವ್ಯಕ್ತಿಗಳಾಗಿದ್ದರು. ಅವರ ಜೀವನದ ಯಶೋಗಾಥೆ ಇಂದಿನ ಪೀಳಿಗೆಗೆ ಅನುಕರಣೀಯ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲ್ಪಟ್ಟ ಹಾವೇರಿ ಜಿಲ್ಲೆಯ ಹಂದಿಗನೂರ ದೇಶಗತಿ ಮನೆತನದ ದಿ. ಆರ್.ಬಿ. ಮಾಮಲೇದೇಸಾಯಿ ಅವರ ದತ್ತಿ ಸಂಸ್ಮರಣೆ ಹಾಗೂ ಡಾ. ಮಲ್ಲಿಕಾರ್ಜುನ ಪಾಟೀಲ ಬರೆದ ಆರ್.ಬಿ. ಮಾಮಲೇದೇಸಾಯಿ ಜೀವನ ಸಾಧನೆ ಕೃತಿ ಲೋಕಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಸರ್ಕಾರ ರೈತರ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಲು ಸಿ.ಪಿ.ಸಿ ಕಾನೂನು ಮೂಲಕ ತಿದ್ದುಪಡಿ ತಂದಿದೆ. ದಿ. ಆರ್.ಬಿ. ಮಾಮಲೇದೇಸಾಯಿಯವರ ಜೀವನ ಸಾಧನೆ ಹಾಗೂ ಕೃಷಿ ಸಮಸ್ಯೆಗಳ ಪರಿಹಾರ ಕುರಿತು ದತ್ತಿ ಮೂಲಕ ಅವರ ಕುಟುಂಬದವರು ಪ್ರತಿ ವರ್ಷ ಮಾಡಲು ನಿರ್ಧರಿಸಿದ್ದು ಅಭಿನಂದನೀಯ ಎಂದರು.

ಮಾಜಿ ಶಾಸಕರಾದ ಅಮೃತ ದೇಸಾಯಿ ಮಾತನಾಡಿ, ದಿ. ಆರ್.ಬಿ. ಮಾಮಲೇದೇಸಾಯಿ ಅವರ 14 ಜನ ಮೊಮ್ಮಕ್ಕಳಲ್ಲಿ ನಾನೂ ಒಬ್ಬ. ನಮ್ಮ ಅಜ್ಜನವರೇ ಸರಳ ಬದುಕಿನ ಪಾಠ ಹೇಳಿ ನಮಗೆಲ್ಲ ಸಂಸ್ಕಾರ ನೀಡಿದ್ದರೆಂದರು.

ಅಧ್ಯಕ್ಷತೆ ವಹಿಸಿದ್ದ ಎ.ಬಿ. ದೇಸಾಯಿ ಮಾತನಾಡಿ, ಕ್ಷೇತ್ರ ಯಾವುದಾದರೂ ಇರಲಿ, ಮೊದಲು ಅಲ್ಲ್ಲಿ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮುಖ್ಯ. ದಿ. ಆರ್.ಬಿ. ಮಾಮಲೇದೇಸಾಯಿ ಅವರೊಬ್ಬ ತತ್ವನಿಷ್ಠ, ಕಾರ್ಯತತ್ಪರ, ನ್ಯಾಯ ನಿಷ್ಠುರಿಗಳಾಗಿದ್ದರು. ಸತ್ಯಶುದ್ಧ ಕಾಯಕ ಜೀವಿಗಳಾಗಿದ್ದರು ಎಂದು ಹೇಳಿದರು.

ಮಹೇಶ ಮಾಮಲೇದೇಸಾಯಿ ದತ್ತಿ ಆಶಯದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಹಂದಿಗನೂರ ದೇಶಗತಿ ಅರವಿಂದ ಮಾಮಲೇದೇಸಾಯಿ, ಯಶೋಧಾಬಾಯಿ ದೇಸಾಯಿ, ಜಿ.ಕೆ. ವೆಂಕಟೇಶ, ಡಾ. ತೇಜಸ್ವಿ ಕಟ್ಟಿಮನಿ, ಶಂಕರ ಹಲಗತ್ತಿ, ಡಾ. ಮಲ್ಲಿಕಾರ್ಜುನ ಪಾಟೀಲ ಇದ್ದರು.

ಶಶಿಧರ ತೋಡಕರ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸತೀಶ ತುರಮರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಸಿ.ಎಸ್. ಪಾಟೀಲ, ಡಾ. ಡಿ.ಎಂ. ಹಿರೇಮಠ, ನಾಗರಾಜ ಗುರಿಕಾರ, ಎನ್.ಆರ್. ಬಾಳಿಕಾಯಿ, ದಾನಪ್ಪ ಕಬ್ಬೇರ, ಬಿ.ಎಲ್. ಶಿವಳ್ಳಿ, ಶಂಕರ ಬೆಟಗೇರಿ, ಬಿ.ಎಸ್. ಶಿರೋಳ, ಡಾ. ಎಸ್.ಆರ್. ರಾಮನಗೌಡರ, ಡಾ. ಪಾರ್ವತಿ ಮತ್ತು ಸುರೇಶ ಹಾಲಭಾವಿ, ಬಿ.ಡಿ. ಹಿರೇಮಠ, ಪ್ರತಾಪ ಚವ್ಹಾಣ, ಎಸ್.ಜಿ. ಪಾಟೀಲ, ಚನಬಸಪ್ಪ ಮರದ, ಡಾ. ಲಿಂಗರಾಜ ಅಂಗಡಿ, ಎಂ.ಎಂ. ಚಿಕ್ಕಮಠ, ಬಸವರಾಜ ಕಪಲಿ, ಆಯ್.ಎಲ್. ಪಾಟೀಲ, ತೆಲಸಂಗ ಹಾಗೂ ಮಾಮಲೇದೇಸಾಯಿ ಕುಟುಂಬಸ್ಥರಾದ ದರ್ಶನ, ವಿಜಯ, ಉಮೇಶ, ಇಂದಿರಾ, ಶೀಲಾ, ಶ್ರೀನಿವಾಸ (ರಾಜು) ಕುಲಕರ್ಣಿ ಸೇರಿದಂತೆ ಮಾಮಲೇದೇಸಾಯಿ ಅಭಿಮಾನಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

ದಿ. ಆರ್.ಬಿ. ಮಾಮಲೇದೇಸಾಯಿಯವರ ಜೊತೆ ನನಗೆ ಭಾವನಾತ್ಮಕ ಸಂಬಂಧವಿತ್ತು. ಅವರು ರೈತರ ಬಗ್ಗೆ ಅಪಾರ ಕಳಕಳಿಯುಳ್ಳವರಾಗಿದ್ದರು. ಅಂದಿನ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರು ಮಧ್ಯವರ್ತಿಗಳ ಹಾವಳಿಯಿಂದಲ್ಲದೇ ವಿವಿಧ ರೀತಿಯಲ್ಲಿ ಶೋಷಣೆಗೆ ಒಳಪಡುವುದನ್ನು ನಿಯಂತ್ರಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭಿಸಲು ಶ್ರಮವಹಿಸಿದ ಕೀರ್ತಿ ಆರ್.ಬಿ. ಮಾಮಲೇದೇಸಾಯಿ ಅವರಿಗೆ ಸಲ್ಲಬೇಕು ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.

ವಿದ್ಯಾರ್ಥಿಗಳು ಸ್ಥಿರತೆ, ಹೊಂದಾಣಿಕೆಯನ್ನು ಅಳವಡಿಸಿಕೊಳ್ಳಿ: ಕೃಷ್ಣಗೌಡ ಎಚ್.ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಪರೀಕ್ಷಾ ಅವಧಿಯು ವಿದ್ಯಾರ್ಥಿಯ ಶೈಕ್ಷಣಿಕ ಪ್ರಯಾಣದಲ್ಲಿ ನಿರ್ಣಾಯಕ ಹಂತವಾಗಿದೆ. ವಿದ್ಯಾರ್ಥಿಗಳು ಒತ್ತಡ ಮುಕ್ತರಾಗಿ ಪರೀಕ್ಷೆಗೆ ಸಜ್ಜಾಗಲು ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.

ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ಉತ್ಕರ್ಷತೆಯೆಡೆಗೆ’ ವಿದ್ಯಾರ್ಥಿ ಸ್ನೇಹಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿಯು ನಿರ್ಣಾಯಕ ಶೈಕ್ಷಣಿಕ ಅವಧಿಯಲ್ಲಿ ಕಲಿಯುವವರನ್ನು ಬೆಂಬಲಿಸುತ್ತಿದೆ. ವಿದ್ಯಾರ್ಥಿಗಳು ಶಾಲಾ ತರಗತಿಗಳಲ್ಲಿ ಶೈಕ್ಷಣಿಕವಾಗಿ ಸಿದ್ಧರಾಗಿದ್ದರೂ ವೈಫಲ್ಯದ ಭಯ, ಇತರರೊಂದಿಗೆ ಹೋಲಿಕೆ ಮತ್ತು ನಿರೀಕ್ಷೆಗಳ ಬಗೆಗಿನ ಆತಂಕದಿಂದ ಒತ್ತಡದಲ್ಲಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಪ್ರೇರಣೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿ ಸ್ನೇಹಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಯೋಗಕ್ಷೇಮವು ಪ್ರತ್ಯೇಕವಾಗಿ ಪರಿಹರಿಸಬೇಕಾದ ವೈಯಕ್ತಿಕ ಕಾಳಜಿಯಲ್ಲ. ಪರೀಕ್ಷೆಯ ಸಮಯದಲ್ಲಿ ಮಗುವಿನ ಭಾವನಾತ್ಮಕ ಅನುಭವವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಂಯೋಜಿತ ಪ್ರಭಾವದಿಂದ ರೂಪುಗೊಳ್ಳುತ್ತದೆ. ಈ ಹಂತದಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳು ಸ್ಥಿರತೆ, ತಿಳುವಳಿಕೆ ಮತ್ತು ಹೊಂದಾಣಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪರೀಕ್ಷೆಗೆ ಸಂಬಂಧಿಸಿದ ಒತ್ತಡ ಮತ್ತು ಭಾವನಾತ್ಮಕ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು, ಭಯ, ಆತಂಕ ಮತ್ತು ಸ್ವಯಂ-ಅನುಮಾನವನ್ನು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಸಾಧನಗಳನ್ನು ಅಭಿವೃದ್ಧಿಪಡಿಸಲು, ದೈನಂದಿನ ಸಂವಹನವು ಒತ್ತಡವನ್ನು ಹೇಗೆ ಕಡಿಮೆ ಮಾಡುತ್ತದೆ ಅಥವಾ ತೀವ್ರಗೊಳಿಸುತ್ತದೆ ಎಂಬುದನ್ನು ಗುರುತಿಸಲು ಪೋಷಕರು ಮತ್ತು ಶಿಕ್ಷಕರಿಗೆ ಅನುವು ಮಾಡಿಕೊಡುವುದು ಹಾಗೂ ವಿದ್ಯಾರ್ಥಿಗಳು ಮನೆ ಮತ್ತು ಶಾಲೆಗಳಲ್ಲಿ ಸ್ಥಿರತೆ ಮತ್ತು ಭರವಸೆಯನ್ನು ಅನುಭವಿಸುವಂತೆ ಭಾವನಾತ್ಮಕ ಜೋಡಣೆಯನ್ನು ನಿರ್ಮಿಸುವಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ತಾ.ಪಂ ಮಾಜಿ ಅಧ್ಯಕ್ಷ ಮೋಹನ ದುರಗಣ್ಣವರ, ಮುಖಂಡರಾದ ಚಂದ್ರಪ್ಪ ಕರಿಕಟ್ಟಿ, ಡಾ. ವೇಮನ ಸಾವಕಾರ, ಸಚಿನ್ ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಹುಲಕೋಟಿ ಗ್ರಾ.ಪಂ ಸರ್ವ ಸದಸ್ಯರು ಹಾಜರಿದ್ದರು.

ವಿದ್ಯಾರ್ಥಿಗಳು ಶಾಂತತೆ ಮತ್ತು ಸ್ಪಷ್ಟತೆಯೊಂದಿಗೆ ಪರೀಕ್ಷೆಗಳನ್ನು ಎದುರಿಸಿದಾಗ ಉತ್ತಮ ಫಲಿತಾಂಶ ಹೊಂದಬಹುದು. ಈ ಹಿನ್ನೆಲೆಯಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿಯು `ಉತ್ಕರ್ಷತೆಯೆಡೆಗೆ’ ವಿದ್ಯಾರ್ಥಿ ಸ್ನೇಹಿ ಕಾರ್ಯಾಗಾರ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಪರೀಕ್ಷೆಯ ಭಯವನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದೆ.

  • ಕೃಷ್ಣಗೌಡ ಎಚ್. ಪಾಟೀಲ.
    ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರು.

ಶ್ರೀ ಸಿದ್ಧರಾಮೇಶ್ವರರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಅವರ ಜೀವನವು ನಮಗೆ ಪ್ರೇರಣೆಯಾಗಿದೆ. ಅವರು ಸಮಾಜಕ್ಕೆ ಧರ್ಮ, ಸೇವೆ ಮತ್ತು ಶ್ರದ್ಧೆಯ ತತ್ವಗಳನ್ನು ಅರ್ಥಮಾಡಿಸಿದರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.

ಅವರು ಬುಧವಾರ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಅವರ ಜೀವನ ಮತ್ತು ಬೋಧನೆಗಳು ನಮಗೆ ಮಾರ್ಗದರ್ಶನವನ್ನು ನೀಡುತ್ತಿವೆ. ಅವರು ತಮ್ಮ ಜೀವನದಲ್ಲಿ ಧರ್ಮ, ಶ್ರದ್ಧೆ ಮತ್ತು ಸೇವೆಯ ಮಹತ್ವವನ್ನು ಪ್ರತಿಪಾದಿಸಿ, ಸಮುದಾಯವನ್ನು ಪ್ರೇರೇಪಿಸಿದ್ದಾರೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ರವಿ ಶೇಷಗಿರಿ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಎಲ್.ಭೋವಿ, ಪಾಲಿಕೆ ಮಾಜಿ ಸದಸ್ಯ ಬಸವರಾಜ ಹ.ಮುತ್ತಳ್ಳಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಮಹಾನಗರ ಪಾಲಿಕೆ ಸದಸ್ಯ ತುಳಸಪ್ಪ ಪೂಜಾರ ವಂದಿಸಿದರು.

ಸಮಾಜದ ಮುಖಂಡರಾದ ಕಾಶಪ್ಪ ನಾಗಪ್ಪ ಹಿರೇಮನಿ, ಗೋವಿಂದಪ್ಪ ಬಿ.ಬಂಡಿವಡ್ಡರ, ಮಲ್ಲೇಶಿ ಎನ್.ಮುನವಳ್ಳಿ, ಯಲ್ಲಪ್ಪ ಗೋ.ಬಂಡಿವಡ್ಡರ, ಭೀಮಪ್ಪ ಎಫ್.ನೇಮಿಕಲ್, ಮಂಜುನಾಥ ಟಿ.ಹಿರೇಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶಾಕೀರ ಸನದಿ ಮಾತನಾಡಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜೀವನವು ನಮಗೆ ನಿಷ್ಠೆ, ಧರ್ಮ ಮತ್ತು ಸೇವೆಯ ಮಹತ್ವವನ್ನು ಕಲಿಸಿದೆ. ಅವರು ತಮ್ಮ ಜ್ಞಾನ ಮತ್ತು ಸಾಧನೆಯ ಮೂಲಕ ಸಮಾಜದಲ್ಲಿ ಅಪಾರ ಬದಲಾವಣೆಗಳನ್ನು ತಂದು, ನಮಗೆ ಪ್ರೇರಣೆ ನೀಡಿದ್ದಾರೆ ಮತ್ತು ಸಿದ್ಧರಾಮೇಶ್ವರರ ಮಾರ್ಗದರ್ಶನವು ನಮಗೆ ಸಾಮಾಜಿಕ ನ್ಯಾಯ, ಪ್ರಗತಿ ಮತ್ತು ಸಹಬಾಳ್ವೆಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.

ಶಾಲಾ ಮಕ್ಕಳ ಅಪಹರಣ ಪ್ರಕರಣದ ತನಿಖೆಗೆ ಸಮಿತಿ ನೇಮಕ: ಜಿಲ್ಲಾಧಿಕಾರಿ ದಿವ್ಯ ಪ್ರಭು

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜನವರಿ 12ರಂದು ಜರುಗಿದ ಕಮಲಾಪುರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅಪಹರಣ ಪ್ರಕರಣದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಕ್ರಮ ಜರುಗಿಸಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳ ಅಪಹರಣ ಆಗಿರುವದರಿಂದ ಈ ಕುರಿತು ತನಿಖೆ ಮಾಡಿ ವರದಿ ನೀಡಲು, ಜಿಲ್ಲಾ ಪಂಚಾಯಿತಿ ಸಿಇಓ ಅವರು ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಸಮಿತಿ ನೀಡುವ ವರದಿ ಪರಿಶೀಲಿಸಿ, ಲೋಪ ಉಂಟಾಗಿದ್ದಲ್ಲಿ ಸಂಬಂಧಿಸಿದವರ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಬುಧವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಪಹರಣದಿಂದ ಸುರಕ್ಷಿತವಾಗಿ ಪಾರಾಗಿ, ಜಿಲ್ಲಾ ಆಸ್ಪತ್ರೆಯ ಸಖಿ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಶಾಲಾ ಆವರಣದಲ್ಲಿ ಸುರಕ್ಷತೆ ಹೆಚ್ಚಿಸುವುದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸೂಕ್ತ ನಿಯಮಗಳನ್ನು ಜಾರಿ ಮಾಡುವುದು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ನಿಯಮಾವಳಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಿಯಾಯೋಜನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲು ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ನಿರ್ದೇಶಿಸಿರುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಮಕ್ಕಳ ಭೇಟಿ ಸಮಯದಲ್ಲಿ, ಮಕ್ಕಳಿಂದಲೇ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಮಕ್ಕಳ ಪಾಲಕರ ಅಭಿಪ್ರಾಯ ಸಂಗ್ರಹಿಸಿದರು. ಅಧಿಕಾರಿಗಳಿಂದ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿ, ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪ್ರಕರಣದ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ. ವರದಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ, ಶಿಕ್ಷಕರು ಶಾಲೆಯಲ್ಲಿ ಇದ್ದು, ಮಕ್ಕಳಿಗೆ ಪಾಠ ಬೋಧನೆ ಮಾಡಬೇಕು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ನಿಗಾವಹಿಸಬೇಕು. ಈ ಕುರಿತು ಪರಿಶೀಲಿಸಿ, ಕ್ರಮ ವಹಿಸಲು ಈಗಾಗಲೇ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಪೊಲೀಸ್ ಇನಸ್ಪೆಕ್ಟರ್ ಪ್ರಭು ಗಂಗೆನಹಳ್ಳಿ ಸೇರಿದಂತೆ ಇತರರು ಇದ್ದರು.

ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು. ಪ್ರಕರಣದ ಕುರಿತು ಸಮಗ್ರ ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಜಿಲ್ಲಾಡಳಿತವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸದರಿ ಪ್ರಕರಣದಲ್ಲಿ ವಿಶೇಷ ಅಭಿಯೋಜಕರ ಅವಶ್ಯಕತೆ ಇದ್ದಲ್ಲಿ ಪೊಲೀಸ್ ಇಲಾಖೆ ಪರಿಶೀಲಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಪ್ರಕರಣದ ಆರೋಪಿಯು ಈ ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸ್ ಮಾಹಿತಿ ಇದ್ದು, ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಐತಿಹಾಸಿಕ ಕ್ಯಾಂಪಸ್ ಸಂದರ್ಶನ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಆರ್‌ಎಂಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನರ್ಸಿಂಗ್ ಅಧಿಕಾರಿ ಹುದ್ದೆಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಿದ್ದು, ಈ ಮಹತ್ವದ ಕಾರ್ಯಕ್ರಮವನ್ನು ಹುಬ್ಬಳ್ಳಿಯ ವಿಹಾನ್ ಹಾರ್ಟ್ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಡೆಸಿತು.

ಸಂದರ್ಶನದಲ್ಲಿ ಭಾಗವಹಿಸಿದ 16 ವಿದ್ಯಾರ್ಥಿಗಳಲ್ಲಿ, 14 ವಿದ್ಯಾರ್ಥಿಗಳನ್ನು ನರ್ಸಿಂಗ್ ಅಧಿಕಾರಿಯ ಪ್ರತಿಷ್ಠಿತ ಪಾತ್ರಕ್ಕೆ ಯಶಸ್ವಿಯಾಗಿ ಆಯ್ಕೆ ಮಾಡಲಾಯಿತು. ಈ ಗಮನಾರ್ಹ ಸಾಧನೆಯು ಸಂಸ್ಥೆಯಲ್ಲಿ ನೀಡಲಾಗುವ ನರ್ಸಿಂಗ್ ಶಿಕ್ಷಣ ಮತ್ತು ತರಬೇತಿಯ ಉನ್ನತ ಮಟ್ಟವನ್ನು ಪ್ರತಿಬಿಂಬಿಸುತ್ತದೆ.

ವಿದ್ಯಾರ್ಥಿಗಳ ಅತ್ಯುತ್ತಮ ಕಾರ್ಯಕ್ಷಮತೆಗೆ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ ಮತ್ತು ಕಾರ್ಯದರ್ಶಿ ಡಾ. ವೇಮನ ಸಾವಕಾರ ಮೆಚ್ಚುಗೆ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ವಿಹಾನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ್ ಪಾಟೀಲ್ ಮತ್ತು ಅವರ ತಂಡದ ಸದಸ್ಯರು ಸಂದರ್ಶನ ನಡೆಸಿದರು. ಡಾ. ಪಾಟೀಲ್ ಮತ್ತು ಅವರ ತಂಡವು ವೃತ್ತಿಪರ ವಿಧಾನವನ್ನು ಪ್ರದರ್ಶಿಸಿತು, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು ಖಚಿತಪಡಿಸಿತು.

ಪ್ರಿನ್ಸಿಪಾಲ್ ಡಾ. ಬಸಯ್ಯ ವಿ.ಎಚ್ ಮತ್ತು ಆರ್‌ಎಂಎಸ್‌ಎಸ್‌ನ ಎಸಿ ಸದಸ್ಯ ಸ್ಟೀಫನ್ ಜಾನ್ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.

ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಎಚ್.ವೈ. ಸಂದಕದ, ರವಿ ಗುಂಜೀಕರ್, ವಿದ್ಯಾಧರ ದೊಡ್ಡಮನಿ, ಚಿನ್ನಪ್ಪ ವಡ್ಡಟ್ಟಿ, ವೆಂಕಟೇಶ ಗೆಜ್ಜಿ, ಆಂಜನೇಯ ಕಟಗಿ, ನಾಗರಡ್ಡಿ ನಿಡಗುಂದಿ, ಸಹದೇವ ಕೋಟಿ, ರಾಘವೇಂದ್ರ ವಿ.ಎಸ್, ತಿಮ್ಮಣ್ಣ ಡೋಣಿ, ವಿಜಯ ಗಿಂಜಿ, ರವಿ ಕೋಟಿ ಸೇರಿದಂತೆ ಗಣ್ಯರು, ಹಿರಿಯರು ಇದ್ದರು.

ಪ್ರಾಮಾಣಿಕ ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ಕಾಮಗಾರಿಯ ತಳಪಾಯದಲ್ಲಿ ಸಿಕ್ಕ ಚಿನ್ನಾಭರಣಗಳ ನಿಧಿಯನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ತಲುಪಿಸಿದ ಬಿ.ಎಚ್. ಪಾಟೀಲ ಸಂಸ್ಥೆಯ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಅವರಿಗೆ ಪಿ.ಯು.ಸಿವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.

ಇಲ್ಲಿಯ ಜನತಾ ವಿದ್ಯಾವರ್ದಕ ಸಂಸ್ಥೆಯ ಬಿ.ಎಚ್. ಪಾಟೀಲ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 8ನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್ ರಿತ್ತಿಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಂಸ್ಥೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರ್ವ ಪದಾಧಿಕಾರಿಗಳ ಸಭೆ ಕರೆದು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.

ಶಾಲೆಯಲ್ಲಿ ಪ್ರಾಮಾಣಿಕತೆಯಿಂದ ಓದುತ್ತಿರುವ ಪ್ರಜ್ವಲ್ ತನ್ನ ಮನೆ ನಿರ್ಮಾಣದ ಪಾಯದಲ್ಲಿ ದೊರೆತ ಅಮೂಲ್ಯವಾದ ಚಿನ್ನಾಭರಣಗಳ ನಿಧಿಯನ್ನು ಸರಕಾರಕ್ಕೆ ನೀಡಿ ಸಾಮಾಜಿಕ ಬದುಕಿನಲ್ಲಿಯೂ ಸಹ ಪ್ರಾಮಾಣಿಕತೆ ತೋರಿದ್ದು, ಅವರ ಭವಿಷ್ಯದ ಶಿಕ್ಷಣಕ್ಕೆ ಜನತಾ ವಿದ್ಯಾವರ್ದಕ ಸಂಸ್ಥೆಯು ಪಿ.ಯು.ವರೆಗೂ ಉಚಿತ ಶಿಕ್ಷಣವನ್ನು ನೀಡುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಐ.ಎನ್. ಕುಂಬಾರ ಮಾತನಾಡಿ, ಪ್ರಜ್ವಲ್‌ನಂತಹ ಪ್ರಾಮಾಣಿಕ ವಿದ್ಯಾರ್ಥಿಗಳು ಮನೆ ಮನೆಯಲ್ಲಿ ಇರಬೇಕು. ಅಂದಾಗ ಮಾತ್ರ ನಮ್ಮ ಸಂಸ್ಥೆ ಮತ್ತು ಗ್ರಾಮಕ್ಕೆ ಕೀರ್ತಿ ಬರುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಎಫ್. ತೋಪಿನ, ಸದಸ್ಯರಾದ ವಿ.ವಿ. ಗಂಧದ, ಕೆ.ಎಂ. ಪಾಟೀಲ, ತಿಪ್ಪಣ್ಣ ಅಂಬಕ್ಕಿ, ಮಲ್ಲಪ್ಪ ಕಮತರ, ಪ್ರಾಚಾರ್ಯ ಬಿ.ವಿ. ಪಾಟೀಲ, ಪ್ರೌಢಶಾಲೆಯ ಹಿರಿಯ ಶಿಕ್ಷಕ ಎ.ಎನ್. ಪೂಜಾರ, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಹೂವಿನ ಶಿಗ್ಲಿ ಮಠದಲ್ಲಿ ಸಂಕ್ರಾಂತಿ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಡಿನ ಐತಿಹಾಸಿಕ ಪರಂಪರೆಯಲ್ಲಿ ಸಾಧುಗಳು, ಸಂತರು, ಶರಣರು, ಋಷಿಮುನಿಗಳು, ಮಠಾಧೀಶರು ತಮ್ಮ ತಪಃಶಕ್ತಿ, ಸಂಕಲ್ಪ, ಜ್ಞಾನ, ಅನುಭಾವಗಳಿಂದ ಸಮಾಜಸೇವೆ, ತ್ರಿವಿಧ ದಾಸೋಹದ ಮೂಲಕ ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಇದಕ್ಕೆ ಲಕ್ಷ್ಮೇಶ್ವರ ಸಮೀಪದ ಹೂವಿನಶಿಗ್ಲಿ ವಿರಕ್ತಮಠ ಸಾಕ್ಷಿಯಾಗಿದೆ.

ಲಿಂ. ನಿರಂಜನ ಮಹಾಸ್ವಾಮಿಗಳು ಬಸವನಾಡು ಬೀದರ ಜಿಲ್ಲೆ ಔರಾದ್ ತಾಲೂಕಿನ ಸೋನಾಳ ಗ್ರಾಮದಿಂದ 1996ರಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಸ್ವಪ್ನವೊಂದು ಬಿದ್ದು, ಹೂವಿನ ಶಿಗ್ಲಿಯಲ್ಲಿನ ಪಾಳು ಬಿದ್ದಿರುವ ಮಠವನ್ನು ಉದ್ಧರಿಸು ಎಂಬ ವಾಣಿಯನ್ವಯ ಕಲ್ಲು-ಮುಳ್ಳುಗಳಿಂದ ಕೂಡಿದ, ಶಿಥಿಲಾವಸ್ಥೆಯ ಚಿಕ್ಕ ಗುಡಿಯಲ್ಲಿ ನೆಲೆನಿಂತ ಶ್ರೀಗಳು ತಮ್ಮ ಸಂಕಲ್ಪ ಶಕ್ತಿಯಿಂದ ಈ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿದರು. ಆಯುರ್ವೇದ ಔಷಧಿ ಸಿದ್ಧಪಡಿಸಿ ಮಾರಕ ರೋಗಗಳಿಗೆ ದಿವ್ಯೌಷಧಿ ನೀಡಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು.

ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮಿಗಳ ನೆಚ್ಚಿನ ಶಿಷ್ಯರಾಗಿದ್ದ ಲಿಂ. ನಿರಂಜನ ಶ್ರೀಗಳು ಅವರಂತೆಯೇ ಗ್ರಾಮೀಣ ಪ್ರದೇಶಗಳ ಬಡ, ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆಯ ಮೂಲಕ ಗುರುಕುಲ ಶಿಕ್ಷಣ ಆರಂಭಿಸಿ ಬಡ ಮಕ್ಕಳ ಆಶಾಕಿರಣವೇ ಆಗಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿವರ್ಷ ಸಂಕ್ರಾಂತಿಗೆ ನಾಡಿನ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಕ್ಷೇತ್ರದಲ್ಲಿ ಜಾತ್ರಾಮಹೋತ್ಸವದ ನಿಮಿತ್ತ ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿದ್ದರು.

ನಿರಂಜನ ಮಹಾಸ್ವಾಮಿಗಳು 2011ರಲ್ಲಿ ಲಿಂಗೈಕ್ಯರಾದ ಬಳಿಕ ಶ್ರೀಮಠದ ಸಂಪೂರ್ಣ ಜವಾಬ್ದಾರಿ ಹೊತ್ತ ಹಾವೇರಿ ತಾಲೂಕಿನ ಮರೋಳ ಗ್ರಾಮದ ಚನ್ನವೀರ ಶ್ರೀಗಳು ಶ್ರೀಮಠ ಮತ್ತು ಗುರುಕುಲವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಗುರು ನಿರಂಜನ ಪೂರ್ವ ಪ್ರಾಥಮಿಕ ಕನ್ನಡ ಶಾಲೆ, ಶ್ರೀ ಗುರುಕುಲ ವಸತಿ ಪ್ರಾಥಮಿಕ ಶಾಲೆ, ಶ್ರೀ ಗುರುಕುಲ ವಸತಿ ಪ್ರೌಢಶಾಲೆ ಆರಂಭಿಸಿ, ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಸರ್ಕಾರದ ಅನುದಾನವಿಲ್ಲದೇ ನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹ ಸಾಂಗವಾಗಿ ಸಾಗುವಲ್ಲಿ ಶ್ರೀಗಳ ಆಣತಿಯಂತೆ ನಡೆದು ಸಹಾಯ-ಸಹಕಾರ ನೀಡುತ್ತಾ ಬಂದಿರುವ ಗ್ರಾಮಸ್ಥರ ಮತ್ತು ಭಕ್ತರ ಸೇವಾ ಕಾರ್ಯವೂ ಅಷ್ಟೇ ಪ್ರಶಂಸನೀಯ.

ಪ್ರತಿವರ್ಷದಂತೆ ಈ ವರ್ಷವೂ ಜ.13ರಿಂದ 15ರವರೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅನ್ನದಾಸೋಹ, ಜ್ಞಾನ ದಾಸೋಹದ ಜಾತ್ರಾ ಮಹೋತ್ಸವ ಮತ್ತು ಲಿಂ.ಶ್ರೀಗಳ ಪುಣ್ಯಸ್ಮರಣೋತ್ಸವ ಆಚರಿಸಲಾಗುತ್ತದೆ. ಖಡಕ್ ರೊಟ್ಟಿ ಮತ್ತು ಕರಿಂಡಿ ಪ್ರಸಾದವೇ ಈ ಜಾತ್ರೆಯ ವೈಶಿಷ್ಟ್ಯವಾಗಿದೆ. ಜಾತ್ರೆಗೆ ಹೂವಿನ ಶಿಗ್ಲಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಶ್ರೀಮಠಕ್ಕೆ ರೊಟ್ಟಿ ಸೇರಿ ಇತರೆ ಆಹಾರ ಧಾನ್ಯಗಳನ್ನು ಸಮರ್ಪಿಸುತ್ತಾರೆ.

ಜ. 13ರಿಂದ 3 ದಿನಗಳ ಕಾಲ ಹೂವಿನ ಶಿಗ್ಲಿಯ ವಿರಕ್ತಮಠದ 47ನೇ ಜಾತ್ರಾ ಮಹೋತ್ಸವ, ಲಿಂ. ನಿರಂಜನ ಮಹಾಸ್ವಾಮಿಗಳವರ 16ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಪುರಾಣ ಪ್ರವಚನ, ಲಿಂಗದೀಕ್ಷೆ, ಸಾಮೂಹಿಕ ವಿವಾಹ, ತುಲಾಭಾರ ಸೇವೆ, ಧರ್ಮಸಭೆ, ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ವ್ಯವಹಾರಿಕ ಯುಗದಲ್ಲಿ ಕಮರ್ಷಿಯಲ್ ಆಗದೇ, ಸೇವೆಯಾಗಿಯೇ ಮುಂದುವರೆದದ್ದು ಶ್ರೀ ನಿರಂಜನ ಸ್ವಾಮೀಜಿ (ಬಾಬಾನಂದರು) ಹಾಗೂ ಈಗಿನ ಮಠಾಧೀಶರಾದ ಶ್ರೀ ಚನ್ನವೀರ ಸ್ವಾಮೀಜಿ ಅವರಿಗೆ ಸಲ್ಲುವ ಶ್ರೇಯಸ್ಸಾಗಿದೆ. ಈ ಗುರುಕುಲದಲ್ಲಿ ಬಡ, ಅನಾಥರು ಸೇರಿ 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಅವರಿಗೆ ಶಿಕ್ಷಣದ ಜತೆಗೆ ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ವೇದಾಧ್ಯಯನ ನೀಡಿ ಲಿಂ.ಶ್ರೀಗಳ ಮಾರ್ಗದಲ್ಲಿ ಮಠವನ್ನು ವಿಶಿಷ್ಟ ಜಾಗೃತ ಕೇಂದ್ರವನ್ನಾಗಿಸುವತ್ತ ಸಾಗಿದ್ದಾರೆ.

ಮಕ್ಕಳ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ: ಶಾಸಕ ಸಿ.ಸಿ. ಪಾಟೀಲ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ಮಕ್ಕಳಿಗೆ ನಿರಾಶೆಯಾಗದಂತೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸಲಹೆ ನೀಡಿದರು.

ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿಯು ಸ್ವಾಮಿ ವಿವೇಕಾನಂದರ 144ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ, ಮಹಿಳಾ ಹಾಗೂ ವಿಶೇಷಚೇತನರ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳ ಬೇಡಿಕೆಗಳು ಬಹಳಷ್ಟು ಇರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು, ಅವರಿಗೆ ನಿರಾಶೆಯಾದರೆ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು. ಈ ಪ್ರೌಢಶಾಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಇಂತಹ ಗ್ರಾಮ ಸಭೆಗಳಿಂದ ತಿಳುವಳಿಕೆ ಬರುತ್ತದೆ. ಈ ದಿಸೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅಧಿಕಾರಿಗಳು ಅವರ ಸಮಸ್ಯೆಗೆ ಈ ಸಭೆಯಲ್ಲಿ ಸ್ಪಂದಿಸಬೇಕು ಎಂದರು.

ಬಿ.ಇ.ಒ ವಿ.ವಿ. ನಡುವಿನಮನಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಜನಪ್ರತಿನಿಧಿಗಳ ಸಹಾಯ-ಸಹಕಾರದೊಂದಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾ.ಪಂ ಅನುದಾನದ ಇತಿಮಿತಿಯಲ್ಲಿ ಗ್ರಾಮದ ಅಭಿವೃದ್ಧಿಯೊಂದಿಗೆ ಮಕ್ಕಳ ಶೈಕ್ಷಣಿಕ ಪರಿಸರ ನಿರ್ಮಿಸಲು ಪ್ರಯತ್ನ ಮಾಡಿದ್ದೇನೆ. ಈವರೆಗೆ ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ, ಜಿ.ಪಂ ಯೋಜನಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ, ಸಮಾಜ ಕಲ್ಯಾಣ ಇಲಾಖೆಯ ನಂದಾ ಹಣಬರಟ್ಟಿ, ಗ್ರಾಮೀಣ ಸಿ.ಪಿ.ಐ ಸಿದ್ಧರಾಮೇಶ ಗಡೇದ, ಸಿ.ಡಿ.ಪಿ.ಒ ಮೇಲ್ವಿಚಾರಕಿ ಕಮತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೂಪಾ ಬೆಟಗೇರಿ, ಪೊಲೀಸ್ ಇಲಾಖೆಯ ಭಾರತಿ ಚಳಗೇರಿ, ವಿಕಲಚೇತನ ಇಲಾಖೆಯ ಖಾಜಾಹುಸೇನ ಕಾತರಕಿ, ಸಖಿ ಒನ್ ಕೇಂದ್ರದ ಸುಜಾತಾ ಶಾಸ್ತ್ರಿಮಠ, ಅಶ್ವಿನಿ ಹಿರೇಮಠ, ಅಂಗನವಾಡಿ ಮೇಲ್ವಿಚಾರಕಿ ಶಾಹಿದಬೇಗಂ ಹತ್ತಿವಾಲೆ, ಕಾರ್ಮಿಕ ಇಲಾಖೆಯ ಶ್ರೀಶೈಲ ಸೋಮನಕಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾಗಿ ನಂದೀಶ ಕಲಬಂಡಿ, ಪಾರ್ವತಿ ಪಾಟೀಲ, ಗವಿಶಿದ್ದಪ್ಪ ಯಲಿಶಿರುಂಜ, ರಮಾಜಾನ ತಹಸೀಲ್ದಾರ, ಗ್ರಾ.ಪಂ ಸದಸ್ಯರು ವೇದಿಕೆಯಲ್ಲಿದ್ದರು. ಪಿ.ಡಿ.ಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೈ.ವೈ. ಬೆಟಗೇರಿ ನಿರೂಪಿಸಿದರು. ಕಾರ್ಯದರ್ಶಿ ಎಂ.ಎ. ಗಾಜಿ ವಂದಿಸಿದರು.

ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸಂಚರಿಸುವ ರಸ್ತೆಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗಾಗಲೇ ನೂರಾರು ಕುಟುಂಬಗಳು ಸರಕಾರದ ಅನುದಾನವನ್ನು ಪಡೆದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೂ ಸಹ ಬಯಲು ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅವರಿಗೆ ನೀಡಿದ ಅನುದಾನವನ್ನು ಮರಳಿ ಪಡೆಯಲಾಗುವುದು. ಶಾಲೆ, ಸರಕಾರಿ ಕಾರ್ಯಾಲಯದ ಹತ್ತಿರ ವಾಹನಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವವರಿಗೆ 100 ರೂ ದಂಡ ವಿಧಿಸಲಾಗುವುದು ಎಂದು ಪಿ.ಡಿ.ಒ ಅಮೀರನಾಯಕ ಎಚ್ಚರಿಕೆ ನೀಡಿದರು.

ಬಾಕ್ಸ್

ಮಹಿಳಾ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಖಿ ಒನ್ ಕೇಂದ್ರದ ಅಶ್ವಿನಿ ಶಾಸ್ತ್ರಿಮಠ, ಮಹಿಳೆಯರು ತಮ್ಮ ಶೋಷಣೆ ಮತ್ತು ದೌರ್ಜನ್ಯವನ್ನು ವಿರೋಧಿಸಲು ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು. ಪೊಲೀಸ್ ಇಲಾಖೆಯ ಭಾರತಿ ಚಳಗೇರಿ ಮಾತನಾಡಿ, ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಗದ್ದಲದ ಪ್ರದೇಶದಲ್ಲಿ ಹಾಕಿಕೊಳ್ಳಬೇಡಿ, ಮೊಬೈಲಿನಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನು ಹಾಕಬೇಡಿ ಎಂದು ಎಚ್ಚರಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾಹಿದಬೇಗಂ ಹತ್ತಿವಾಲೆ, ಸಿ.ಡಿ.ಪಿ.ಒ ಮೇಲ್ವಿಚಾರಕಿ ಕಮತ ಮಾತನಾಡಿದರು. ಖಾಜಾಹುಸೇನ ಕಾತರಕಿ ವಿಕಲಚೇತನರಿಗೆ ಸರಕಾರದಿಂದ ದೊರೆಯುವ ಸೌಲಭ್ಯದ ಕುರಿತು ವಿವರಿಸಿದರು.

ಪ್ರಚಾರ ವಾಹನಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಗದಗ ಜಿಲ್ಲೆಯಾದ್ಯಂತ ಬಾಲ ಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಸಂದೇಶ ಸಾರುವ ಅಟೋ ಪ್ರಚಾರಕ್ಕೆ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ಸಂದೇಶ ಸಾರುವ ಕರಪತ್ರ, ಪೋಸ್ಟರ್‌ಗಳು ಹಾಗೂ ಸ್ಟಿಕರ್‌ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಗದಗ ಕಾರ್ಮಿಕ ನಿರೀಕ್ಷಕರಾದ ಸುಷ್ಮಾ, ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸೇರಿದಂತೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!