Home Blog Page 169

ತಪ್ಪಿದ ಚಾಲಕನ ನಿಯಂತ್ರಣ; ಡಿವೈಡರ್ ಗೆ ಲಾರಿ ಡಿಕ್ಕಿ, ವಾಹನ ಸಂಪೂರ್ಣ ನಜ್ಜುಗುಜ್ಜು!

0

ಬೆಂಗಳೂರು:- ಅತಿವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ತಡರಾತ್ರಿ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ನಡೆದಿದೆ.

ಕಬ್ಬಿಣದ ಕಂಬಿಗಳ ಲೋಡ್ ತುಂಬಿಕೊಂಡು ಜಾಲಹಳ್ಳಿ ಮಾರ್ಗದಿಂದ ಬರುತ್ತಿದ್ದ ಲಾರಿ, ಗೊರಗುಂಟೆಪಾಳ್ಯ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರಿ ಪೊಲೀಸರು ಲಾರಿಯನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ.

ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಣವಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆಂದು ರಾಷ್ಟ್ರಮಟ್ಟದ ತೀರ್ಪುಗಾರ ಜಿತೇಂದ್ರ ಸುಣಗಾರ ತಿಳಿಸಿದ್ದಾರೆ.

ಗುಜರಾತಿನಲ್ಲಿ ಅಮೆಚೂರ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷದೊಳಗಿನ ರಾಷ್ಟ್ರಮಟ್ಟದ ಖೋಖೋ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ಭಾಗವಹಿಸಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಣವಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಕ್ಕಾಗಿ ಕಣವಿ ಹೊಸೂರು ಗ್ರಾಮಗಳ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಕಣವಿ ಹೊಸೂರು ಗ್ರಾಮಗಳ ಗುರು-ಹಿರಿಯರು, ಸಂಘ, ಸಂಸ್ಥೆಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಕರ್ನಾಟಕ ರಾಜ್ಯ ಖೋಖೋ ಅಮೆಚೂರ್ ಸಂಸ್ಥೆ ಬೆಂಗಳೂರು, ರಾಜ್ಯ ಕಾರ್ಯದರ್ಶಿಗಳಾದ ಚಿನ್ನಮೂರ್ತಿ, ಸಹ ಕಾರ್ಯದರ್ಶಿ ಜಾಡರ, ಗದಗ ಜಿಲ್ಲಾ ಅಮೆಚೂರ್ ಖೋಖೋ ಸಂಸ್ಥೆಯ ಅಧ್ಯಕ್ಷರಾದ ಅಂದಪ್ಪ ಉಳ್ಳಾಗಡ್ಡಿ ಹಾಗೂ ಕಾರ್ಯದರ್ಶಿ ಮುತ್ತಪ್ಪ ಮಾಳಶೆಟ್ಟಿ, ತರಬೇತಿ ನೀಡಿದ ವೈ.ಬಿ. ಗೋವಣ್ಣವರ ಗುರುಗಳನ್ನು ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಯುವದಿನ ಸಮಾರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸನಾತನ ಸಂಸ್ಕೃತಿಯ ಶಬ್ದಗಳಿಗೆ ಭಾವ ತುಂಬಿ ಜಗದಾದ್ಯಂತ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ಪ್ರೇಮವನ್ನು ಬೆಸೆಯುವ, ಆಧ್ಯಾತ್ಮಿಕ ಚಿಂತನಾ ಶಿಖರವನ್ನು ತಲುಪಲು ಬೇಕಾದ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಸನಾತನ ಸಂಸ್ಕೃತಿಯ ಭಾವಗೀತವೇ ಆಗಿದ್ದಾರೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ‘ರಾಷ್ಟ್ರೀಯ ಯುವದಿನ ಸಮಾರಂಭ’ದಲ್ಲಿ ಮಾತನಾಡಿದರು.

ಪ್ರೊ. ರಾಹುಲ್ ಒಡೆಯರ್ ಮಾತನಾಡುತ್ತಾ, ವಿವೇಕಾನಂದರ ಪಾತ್ರ ನಿರ್ಮಾಣದ ಉಲ್ಲೇಖ ಮಾಡಿ, ಕೇವಲ ಉದ್ಯೋಗ ಪಡೆಯುವ ಉದ್ದೇಶದಿಂದ ಅಲ್ಲದೆ, ಸಮಾಜಕ್ಕೆ ಉಪಯುಕ್ತವಾಗುವ ದೃಷ್ಟಿಯಿಂದ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಯುವದಿನದ ಆಚರಣೆಯ ಪೂರ್ವದಲ್ಲಿ ಆಡಳಿತಾಧಿಕಾರಿಗಳಾದ ಎಂ.ಸಿ. ಹಿರೇಮಠ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಭಾವನಮನಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ ಉಪಸ್ಥಿತರಿದ್ದರು.

ರೋಣದಲ್ಲಿ ಕಬಡ್ಡಿ ವೈಭವ: ನಿರೀಕ್ಷೆ ಮೀರಿ ಸೇರಿದ ಕ್ರೀಡಾ ಪ್ರೇಮಿಗಳು

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ್) ಪಾಟೀಲರ ಜನ್ಮದಿನದ ನಿಮಿತ್ತ ಏರ್ಪಡಿಸಿದ್ದ ಪ್ರೋ ಕಬಡ್ಡಿ ವೀಕ್ಷಿಸಲು ನಿರೀಕ್ಷೆಗೂ ಮೀರಿ ಕ್ರೀಡಾಪ್ರೇಮಿಗಳು ಪಾಲ್ಗೊಂಡಿದ್ದರು.

ಕಬಡ್ಡಿ ವೈಭವ ವೀಕ್ಷಿಸಲು ಅನುವಾಗುವಂತೆ 4 ಸಾವಿರ ಜನ ಕುಳಿತು ಪಂದ್ಯಗಳನ್ನು ಆಸ್ವಾದಿಸುವಂತೆ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಆದರೆ, ಜ 13, ಕೊನೆಯ ದಿನ ನಿರೀಕ್ಷೆ ಮೀರಿ ಕ್ರೀಡಾ ಪ್ರೇಮಿಗಳು ಆಗಮಿಸಿದ್ದರಿಂದ ಸಂಘಟಕರು ಜನ ಸಾಗರವನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.

ಕಬಡ್ಡಿ ಫೈನಲ್ ಪಂದ್ಯದ ನಿಮಿತ್ತ ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳನ್ನು ವೀಕ್ಷಿಸಲು ಅಂದಾಜು 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದಂತೆ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಯಿತು. ಶಾಸಕ ಜಿ.ಎಸ್. ಪಾಟೀಲ ಕೂಡ ಕಳೆದ ನಾಲ್ಕು ದಿನಗಳಿಂದ ಮಗನ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮಗಳಿಗೆ ಆಗಮಿಸಿರಲಿಲ್ಲ. ಕೊನೆಯ ದಿನ ರಾತ್ರಿ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ಶಾಸಕರು ಆಗಮಿಸಿದ್ದು ಕಬಡ್ಡಿ ಪಂದ್ಯಾವಳಿಗಳಿಗೆ ಮತ್ತಷ್ಟು ಮೆರುಗು ನೀಡಿತ್ತು.

ಮಕರ ಸಂಕ್ರಾಂತಿ ಸಂಭ್ರಮ| ಕೆ.ಆರ್‌ ಮಾರುಕಟ್ಟೆಯಲ್ಲಿ ಜನಸಂದಣಿ, ಹೂ–ಹಣ್ಣುಗಳ ಬೆಲೆ ದುಬಾರಿ!

0

ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.

ಸುಗ್ಗಿಯ ಸಂಭ್ರಮದಲ್ಲಿ ರಾಜ್ಯದ ಗ್ರಾಮೀಣ ಭಾಗಗಳಷ್ಟೇ ಅಲ್ಲದೆ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಹಬ್ಬದ ಉತ್ಸಾಹ ಜೋರಾಗಿದೆ. ಸಂಕ್ರಾಂತಿಗೆ ಬೇಕಾದ ಹೂ, ಹಣ್ಣು, ಕಬ್ಬು, ತರಕಾರಿ ಖರೀದಿಗೆ ಜನರು ಕೆ.ಆರ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.

ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ದಿನವಾಗಿ ಆಚರಿಸುವ ಸಂಕ್ರಾಂತಿ ಹಬ್ಬಕ್ಕೆ ಎಳ್ಳು–ಬೆಲ್ಲ ಹಂಚಿ ಸಂತೋಷ ಪಡುತ್ತಾರೆ. ಅದಕ್ಕಾಗಿ ರೆಡಿಮೇಡ್ ಎಳ್ಳು–ಬೆಲ್ಲಕ್ಕೂ ಭರ್ಜರಿ ಬೇಡಿಕೆ ಕಂಡುಬಂದಿದೆ. ಆದರೆ ಪ್ರತಿವರ್ಷದಂತೆ ಈ ಬಾರಿ ಕೂಡ ಹೂವಿನ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಬರೆ ಎಳೆದಿದೆ.

ಹೂವಿನ ದರ (ಕೆ.ಆರ್‌ ಮಾರುಕಟ್ಟೆ):

ಕನಕಾಂಬರ: ₹700 – ₹800
ಕಾಕಡ: ₹500 – ₹600
ಗುಲಾಬಿ: ₹80
ಸೇವಂತಿ: ₹70
ಹಣ್ಣು ಹಾಗೂ ಇತರೆ ವಸ್ತುಗಳ ಬೆಲೆ:
ಕಬ್ಬು (ಜೋಡಿ): ₹150 – ₹250
ಸೇಬು: ₹160
ದಾಳಿಂಬೆ: ₹140
ಅವರೆಕಾಯಿ: ₹80 – ₹100

ಹಬ್ಬದ ಸಂಭ್ರಮದ ನಡುವೆ ಬೆಲೆ ಏರಿಕೆಯಿಂದ ಜನರು ಸ್ವಲ್ಪ ಅಸಮಾಧಾನಗೊಂಡರೂ, ಸಂಕ್ರಾಂತಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂಪ್ರದಾಯದಂತೆ ಆಚರಿಸಲು ಜನರು ಮುಂದಾಗಿದ್ದಾರೆ.

ಯುಪಿ ವಾರಿಯರ್ಸ್‌ ವಿರುದ್ಧ 7 ವಿಕೆಟ್ ಗಳ ಜಯ; 2 ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್

0

ಶಫಾಲಿ ವರ್ಮಾ ಅವರ ಆಲ್‌ರೌಂಡರ್‌ ಆಟ ಹಾಗೂ ಲಿಜೆಲ್‌ ಲೀ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಯುಪಿ ವಾರಿಯರ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಸತತ ಎರಡು ಸೋಲಿನಿಂದ ಕಂಗಾಲಾಗಿದ್ದ ಡೆಲ್ಲಿ WPLನಲ್ಲಿ ಗೆಲುವಿನ ಖಾತೆ ತೆರೆದಿದೆ. ನವಿ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 154 ರನ್‌ಗಳನ್ನು ಗಳಿಸಿತು. 155 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 158 ರನ್‌ಗಳನ್ನು ಮಾಡಿ ಸುಲಭ ಜಯ ಸಾಧಿಸಿತು.

ಗುರಿ ಬೆನ್ನಟ್ಟುವ ವೇಳೆ ಡೆಲ್ಲಿ ಪರ ಲಿಜೆಲ್‌ ಲೀ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 94 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಲಿಜೆಲ್‌ ಲೀ 44 ಎಸೆತಗಳಲ್ಲಿ 67 ರನ್‌ಗಳ ಭರ್ಜರಿ ಇನಿಂಗ್ಸ್‌ ಆಡಿದರು. ಶಫಾಲಿ ವರ್ಮಾ 32 ಎಸೆತಗಳಲ್ಲಿ 36 ರನ್‌ ಸೇರಿಸಿದರು. ಲಾರಾ ವೋಲ್ವಾರ್ಡ್‌ ಔಟಾಗದೇ 24 ಎಸೆತಗಳಲ್ಲಿ 25 ರನ್‌, ಜೆಮಿಮಾ ರೊಡ್ರಿಗಸ್‌ 12 ಎಸೆತಗಳಲ್ಲಿ 21 ರನ್‌ ಗಳಿಸಿ ಗೆಲುವಿಗೆ ಸಹಾಯ ಮಾಡಿದರು. ಯುಪಿ ಪರ ದೀಪ್ತಿ ಶರ್ಮಾ 2 ಹಾಗೂ ಆಶಾ ಸೋಭಾನಾ 1 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಯುಪಿ ವಾರಿಯರ್ಸ್‌ ಪರ ಹರ್ಲೀನ್ ಡಿಯೋಲ್ 38 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 47 ರನ್‌ ಗಳಿಸಿದರೆ, ಮೆಗ್ ಲ್ಯಾನಿಂಗ್ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್‌ ಸಹಿತ 54 ರನ್‌ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಫೋಬೆ ಲಿಚ್‌ಫೀಲ್ಡ್‌ 20 ಎಸೆತಗಳಲ್ಲಿ 27 ರನ್‌, ಶ್ವೇತಾ ಸೆಹ್ರಾವತ್‌ 12 ಎಸೆತಗಳಲ್ಲಿ 11 ರನ್‌ ಗಳಿಸಿದರು.

ಡೆಲ್ಲಿ ಪರ ಬೌಲಿಂಗ್‌ನಲ್ಲಿ ಮರಿಜಾನ್ನೆ ಕಪ್ಪ್ ಹಾಗೂ ಶಫಾಲಿ ವರ್ಮಾ ತಲಾ 2 ವಿಕೆಟ್‌ ಕಿತ್ತರು. ನಂದಿನಿ ಶರ್ಮಾ, ಸ್ನೇಹ್‌ ರಾಣಾ ಮತ್ತು ಶ್ರೀ ಚರಣಿ ತಲಾ 1 ವಿಕೆಟ್‌ ಪಡೆದುಕೊಂಡರು.

BBK12: ಮಿಡ್ ವೀಕ್ ಎಲಿಮಿನೇಷನ್; ರಾತ್ರೋರಾತ್ರಿ ʻಬಿಗ್‌ ಬಾಸ್‌ʼ ಮನೆಯಿಂದ ಧ್ರುವಂತ್‌ ಔಟ್!

0

ʻಬಿಗ್ ಬಾಸ್ʼ ಮನೆಗೆ ಒಂಟಿಯಾಗಿ ಎಂಟ್ರಿ ಕೊಟ್ಟ ಧ್ರುವಂತ್‌, ತಮ್ಮದೇ ವಿಭಿನ್ನ ಸ್ಟೈಲ್‌ನಿಂದ ವೀಕ್ಷಕರನ್ನು ಸಿಕ್ಕಾಪಟ್ಟೆ ಎಂಟರ್‌ಟೈನ್‌ ಮಾಡಿದ್ದರು.

ವಾರದಷ್ಟೇ ಅಲ್ಲ, ಇಡೀ ಸೀಸನ್‌ನಲ್ಲೇ ʻಕಿಚ್ಚನ ಚಪ್ಪಾಳೆʼ ಪಡೆದುಕೊಂಡ ಸ್ಪರ್ಧಿಯಾಗಿದ್ದ ಧ್ರುವಂತ್‌, ಕಿಚ್ಚ ಸುದೀಪ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಈ ಚಪ್ಪಾಳೆಯ ಬಳಿಕ ಧ್ರುವಂತ್ ಅವರ ಆತ್ಮವಿಶ್ವಾಸವೂ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿತ್ತು.

ಆದರೆ ʻಒನ್ ಮ್ಯಾನ್ ಆರ್ಮಿʼ ಆಗಿ ಆಟ ಆಡುತ್ತಿದ್ದೇನೆ ಎಂದುಕೊಂಡಿದ್ದ ಧ್ರುವಂತ್‌ಗೆ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಭಾರೀ ಶಾಕ್ ಎದುರಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ʻಬಿಗ್ ಬಾಸ್ʼ ಮನೆಯಲ್ಲಿ ಉಳಿದಿದ್ದ ಅವರು, ಕೊನೆಯ ಕ್ಷಣದಲ್ಲಿ ಶೋನಿಂದ ಹೊರಬಿದ್ದಿದ್ದಾರೆ.
ಶೋಗೆ ಎಂಟ್ರಿ ಕೊಟ್ಟ ಕೆಲವೇ ವಾರಗಳಲ್ಲಿ ʻಈ ಶೋ ನನಗಲ್ಲ, ಇಲ್ಲಿರೋದಕ್ಕೆ ಇಷ್ಟ ಇಲ್ಲ, ನಾನು ಹೊರಗೆ ಹೋಗಬೇಕುʼ ಎಂದು ಪದೇಪದೇ ಹೇಳುತ್ತಿದ್ದ ಧ್ರುವಂತ್‌, ವೀಕೆಂಡ್ ಎಪಿಸೋಡ್‌ನಲ್ಲೇ ಕಿಚ್ಚ ಸುದೀಪ್ ಅವರ ಎದುರು ʻನಾನು ಮನೆಗೆ ಹೋಗ್ತೀನಿʼ ಎಂದು ಹೇಳಿದ್ದರು. ಆದರೆ ಸೀಕ್ರೆಟ್ ರೂಮ್‌ಗೆ ಹೋಗಿ ಬಂದ ನಂತರ ಅವರ ಆಟದಲ್ಲೇ ದೊಡ್ಡ ಬದಲಾವಣೆ ಕಂಡುಬಂದಿತ್ತು.

ಸೀಕ್ರೆಟ್ ರೂಮ್‌ನ ಅನುಭವದ ಬಳಿಕ ಧ್ರುವಂತ್ ಅವರ ಆತ್ಮವಿಶ್ವಾಸ ದ್ವಿಗುಣಗೊಂಡಿದ್ದು, ಟಾಸ್ಕ್‌ಗಳಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಧ್ರುವಂತ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ನಿರಾಸೆ ತಂದಿದೆ.

ಧ್ರುವಂತ್ ಹೊರಬಿದ್ದ ಬಳಿಕ ಇದೀಗ ಅಶ್ವಿನಿ ಗೌಡ, ಧನುಷ್, ಗಿಲ್ಲಿ ನಟ, ಕಾವ್ಯ ಶೈವ, ರಘು ಹಾಗೂ ರಕ್ಷಿತಾ ಶೆಟ್ಟಿ ಫಿನಾಲೆಗೆ ಪ್ರವೇಶ ಪಡೆದ ಸ್ಪರ್ಧಿಗಳಾಗಿ ಉಳಿದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ, ಮುಂದೊಂದು ದಿನ ದೇಶದಲ್ಲೇ ಹುಡುಕುವ ಪರಿಸ್ಥಿತಿ ಬರತ್ತೆ; ರಮೇಶ್ ಜಿಗಜಿಣಗಿ

0

ವಿಜಯಪುರ: ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಇರಲ್ಲ ಸತ್ಯನಾಶವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತಿದೆ. ಅದರಂತೆ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಇರಲ್ಲ, ಸತ್ಯನಾಶವಾಗಲಿದೆ. ಮುಂದೊಂದು ದಿನ ದೇಶದಲ್ಲೇ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಾದ ಪರಿಸ್ಥಿತಿ ಬರಲಿದೆ ಎಂದು ಟೀಕಿಸಿದರು.

ನರೇಗಾ ಯೋಜನೆಯ ಕುರಿತು ಮಾತನಾಡಿದ ಜಿಗಜಿಣಗಿ, ಹಿಂದಿನ ದಿನಗಳಲ್ಲಿ ಈ ಯೋಜನೆಗೆ ಸ್ಪಷ್ಟವಾದ ಚೌಕಟ್ಟು ಇರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಿರಾಮ್‌ಜಿ ಹೆಸರಿನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಜನರಿಗೆ ನಿಜವಾದ ಅನುಕೂಲ ಒದಗಿಸುವ ಕೆಲಸ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನರೇಗಾ ಯೋಜನೆ ಸಮರ್ಥವಾಗಿ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ರಾಜ್ಯ ಸರ್ಕಾರಗಳು ನರೇಗಾ ಯೋಜನೆಗೆ ಅನುದಾನ ನೀಡುವುದರಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದವು. ಈಗ 60:40 ಅನುದಾನದ ಪಾಲನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಕಾರಣಕ್ಕೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ದೂರುತ್ತಿದೆ. ಹಿಂದೆ ಯೋಜನೆಯಲ್ಲಿ ಸರಿಯಾದ ಲೆಕ್ಕಾಚಾರವಿಲ್ಲದೆ, ನಕಲಿ ಹೆಸರಿನಲ್ಲಿ ಅನುದಾನ ದುರ್ಬಳಕೆ ಆಗುತ್ತಿತ್ತು. ಈಗ ಈ ಅವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂದು ಜಿಗಜಿಣಗಿ ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ನಡೆಯುತ್ತಾ ಐಪಿಎಲ್?: ಸಮಿತಿ ಮಾರ್ಗಸೂಚಿ ಬಳಿಕವೇ ತೀರ್ಮಾನ – ಕೆಎಸ್‌ಎ

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯಾವಳಿ ಆಯೋಜನೆಗೆ ಸಂಬಂಧಿಸಿದಂತೆ ಸಮಿತಿ ನೀಡಿರುವ ಮಾರ್ಗಸೂಚಿಗಳ ಕುರಿತು ಮಹತ್ವದ ಚರ್ಚೆ ನಡೆದಿದೆ.

ಮಾರ್ಗಸೂಚಿಗಳಲ್ಲಿರುವ ಎಲ್ಲಾ ಅಂಶಗಳನ್ನು ಪೂರ್ಣಗೊಳಿಸಿದ ಬಳಿಕ ಗೃಹ ಸಚಿವರು ಹಾಗೂ ಸಮಿತಿ ಕ್ರಿಕೆಟ್‌ ಪಂದ್ಯಗಳಿಗೆ ಅನುಮತಿ ನೀಡಲಿದ್ದಾರೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಐಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್‌ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಕೆಎಸ್‌ಸಿಎ ಹಾಗೂ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ನಡುವೆ ಸಭೆ ನಡೆಯಿತು. ಸಭೆಯಲ್ಲಿ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಎಂ. ಹಾಕೆ, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ನಂತರ ಮಾತನಾಡಿದ ವಿನಯ್ ಮೃತ್ಯುಂಜಯ, ಗೃಹ ಸಚಿವರು ವಿಶೇಷ ಸಮಿತಿಯನ್ನು ರಚನೆ ಮಾಡಿದ್ದು, ಯಾವುದೇ ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಸಮಿತಿ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಲಿದೆ ಎಂದು ಹೇಳಿದರು. ಇದೇ ಹಿನ್ನೆಲೆ ಹಲವು ಇಲಾಖೆಗಳೊಂದಿಗೆ ನಿರಂತರವಾಗಿ ಸಭೆ ನಡೆಸಲಾಗುತ್ತಿದೆ. ಇಂದಿನ ಸಭೆಯಲ್ಲಿ ಸಮಿತಿ ನೀಡಿರುವ ಮಾರ್ಗಸೂಚಿಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಗಿದೆ. ಎಲ್ಲಾ ಸೂಚನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡ ಬಳಿಕ ಸಮಿತಿಯ ಮುಂದೆ ವಿಷಯವನ್ನು ಇಡಲಾಗುತ್ತದೆ. ನಂತರ ಗೃಹ ಸಚಿವರು ಹಾಗೂ ಸಮಿತಿ ಕ್ರಿಕೆಟ್‌ ಪಂದ್ಯಗಳಿಗೆ ಅನುಮತಿ ನೀಡಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಬೇಕು ಎಂಬ ಉದ್ದೇಶದಿಂದ ಕೆಎಸ್‌ಸಿಎ ಪ್ರಯತ್ನ ಮುಂದುವರಿಸುತ್ತಿದೆ. ಆದರೆ ಪಂದ್ಯಗಳು ಇಲ್ಲಿ ನಡೆಯುತ್ತವೆಯೋ ಇಲ್ಲವೋ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ವಾಟರ್ ಬೆಲ್’ ಕಡ್ಡಾಯ: ಮಕ್ಕಳ ಆರೋಗ್ಯಕ್ಕಾಗಿ ಶಿಕ್ಷಣ ಇಲಾಖೆ ಮಹತ್ವದ ಆದೇಶ

0

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ನೀರು ಕುಡಿಯುವಂತೆ ಜ್ಞಾಪಿಸಲು ಇನ್ಮುಂದೆ ‘ವಾಟರ್ ಬೆಲ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಾಲಾ ಮಕ್ಕಳಲ್ಲಿ ನೀರು ಕುಡಿಯುವ ಅಭ್ಯಾಸಕ್ಕೆ ಅಗತ್ಯವಾದ ಅರಿವು ಕಡಿಮೆಯಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯಂತ ಅಗತ್ಯವಾಗಿದ್ದು, ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಕಾರಣದಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಮಯ ನಿಗದಿಪಡಿಸಿ ವಾಟರ್ ಬೆಲ್ ಹೊಡೆದು ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಆಯೋಗದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ, ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಸುತ್ತೋಲೆ ಹೊರಡಿಸಿ, ಶಾಲೆಗಳಲ್ಲಿ ಆಗಾಗ್ಗೆ ವಾಟರ್ ಬೆಲ್ ಬಾರಿಸಿ ವಿದ್ಯಾರ್ಥಿಗಳಲ್ಲಿ ನೀರು ಕುಡಿಯುವ ಅರಿವು ಮೂಡಿಸಲು ಆದೇಶಿಸಿದೆ. ಈ ಕ್ರಮದಿಂದ ಮಕ್ಕಳ ಆರೋಗ್ಯದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

error: Content is protected !!