ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಲು ಸಿಡಿಸಿದ ಪಟಾಕಿಯ ಕಿಡಿ ತಗುಲಿ, ನಗರದ ಚಿಕ್ಕಪೇಟೆ ಪ್ರದೇಶದಲ್ಲಿ ಅಳವಡಿಸಿದ್ದ ಬ್ಯಾನರ್ ಒಂದು ಹೊತ್ತಿ ಉರಿದ ಘಟನೆ ನಡೆದಿದೆ.
ಘಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸಂಕ್ರಾಂತಿ ಹಬ್ಬ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ರಸ್ತೆಯ ಉದ್ಘಾಟನೆ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಆಗಮಿಸಿದ ವೇಳೆ ಸ್ಥಳೀಯರು ಪಟಾಕಿ ಹಚ್ಚುವ ಮೂಲಕ ಸ್ವಾಗತಿಸಿದ್ದಾರೆ. ಈ ಸಂದರ್ಭ ಪಟಾಕಿಯ ಕಿಡಿ ಬ್ಯಾನರ್‌ಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಕೆಆರ್ ಮಾರ್ಕೆಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಕಾರ್ಯಕ್ರಮದ ಆಯೋಜಕ ರಾಘವ್ ಪ್ರತಿಕ್ರಿಯಿಸಿ, ಸಂಜೆ 6.30ರ ಸುಮಾರಿಗೆ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತೆರಳಿದ್ದು, ಎಲ್ಲವೂ ಸುಗಮವಾಗಿ ನಡೆದಿದೆ. ಸಣ್ಣ ಮಟ್ಟದ ಘಟನೆ ನಡೆದಿದ್ದು, ಈಗ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

