Home Blog Page 173

ಸೈಟ್ ವಿವಾದ: ಯಶ್ ತಾಯಿ ಪುಷ್ಪ ಸಲ್ಲಿಸಿದ್ದ ಅರ್ಜಿಗಳಿಗೆ ಜೆಎಂಎಫ್ಸಿ ಕೋರ್ಟ್ ನಿರಾಕರಣೆ

ಹಾಸನ: ನಟ ಯಶ್ ಅವರ ತಾಯಿ ಪುಷ್ಪ ಅವರಿಗೆ ಸಂಬಂಧಿಸಿದ ಸೈಟ್ ವಿವಾದ ಪ್ರಕರಣದಲ್ಲಿ ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಪುಷ್ಪ ಹಾಗೂ ನಟರಾಜ್ ಅವರು ದೇವರಾಜ್ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಪುಷ್ಪ ಅವರು ವಿದ್ಯಾನಗರದಲ್ಲಿರುವ ಸರ್ವೆ ನಂಬರ್ 90ರ 125×45 ಅಡಿ ಅಳತೆಯ ಸೈಟನ್ನು ಗಿರೀಶ್ ಎಂಬುವರಿಂದ ಖರೀದಿಸಿದ್ದಾಗಿ ಹೇಳಿಕೊಂಡಿದ್ದು, ಸೈಟ್‌ಗೆ ಕಾಂಪೌಂಡ್ ಹಾಕಿದ್ದರು. ಆದರೆ ದೇವರಾಜ್ ಅವರು ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಿದ್ದರಿಂದ ವಿವಾದ ಉಂಟಾಗಿತ್ತು.

ಈ ಪ್ರಕರಣದಲ್ಲಿ ಪುಷ್ಪ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಈ ಹಿಂದೆ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಹಾಗೂ ದೇವರಾಜ್‌ಗೆ ನೋಟಿಸ್ ನೀಡುವ ಮುನ್ನ ಪ್ರತಿಬಂಧಕಾಜ್ಞೆ ನೀಡಬೇಕು ಎಂದು ಕೋರಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಗಳನ್ನು ತಿರಸ್ಕರಿಸಿದೆ.

ಇತ್ತ ದೇವರಾಜ್ ಅವರು, ಮೈಸೂರಿನ ಲಕ್ಷ್ಮಮ್ಮರಿಂದ ಸೈಟನ್ನು ಜಿಪಿಎ ಮೂಲಕ ಪಡೆದಿರುವುದಾಗಿ ಹೇಳಿದ್ದು, ನ್ಯಾಯಾಲಯದ ಆದೇಶದ ಆಧಾರದಲ್ಲಿಯೇ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯ ದೇವರಾಜ್‌ಗೆ ನೋಟಿಸ್ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಜನವರಿ 31ಕ್ಕೆ ನಿಗದಿ ಮಾಡಿದೆ.

ಲಕ್ಕುಂಡಿಯ ಪುರಾತನ ದೇವಾಲಯಗಳಿಗೆ ನಿಧಿಗಳ್ಳರ ಬೆದರಿಕೆ: ಭದ್ರತೆ ಕೊರತೆಯೇ ಇತಿಹಾಸಕ್ಕೆ ಅಪಾಯ?

0

ಗದಗ: ಐತಿಹಾಸಿಕ ಹಾಗೂ ಪುರಾತನ ದೇವಾಲಯಗಳಿಗಾಗಿ ಪ್ರಸಿದ್ಧಿಯಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ, ಇತ್ತೀಚೆಗೆ ನಿಧಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ರಿತ್ತಿ ಕುಟುಂಬದ ಮನೆಯಲ್ಲಿ ನಿಧಿ ಪತ್ತೆಯಾದ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಗ್ರಾಮದಲ್ಲಿರುವ ಎಲ್ಲಾ ಪುರಾತನ ದೇವಾಲಯಗಳತ್ತ ನಿಧಿಗಳ್ಳರ ಗಮನ ಹರಿದಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.

ಈ ಹಿಂದೆ ಲಕ್ಕುಂಡಿ ಹೊರವಲಯದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಳ್ಳರು ಬಸವಣ್ಣನ ಮೂರ್ತಿಯ ಪಕ್ಕದಲ್ಲೇ ಸುಮಾರು ಆರು ರಿಂದ ಏಳು ಅಡಿ ಆಳದವರೆಗೆ ಅಗೆದು ನಿಧಿ ಹುಡುಕಲು ಯತ್ನಿಸಿದ್ದ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ನಿಂಬೆಹಣ್ಣು ಸೇರಿದಂತೆ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳನ್ನು ದೇವಸ್ಥಾನ ಆವರಣದಲ್ಲಿ ಬಳಕೆ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಈ ದೇವಸ್ಥಾನದಲ್ಲೇ ಎರಡು–ಮೂರು ಬಾರಿ ಇಂತಹ ಘಟನೆಗಳು ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು.

ಲಕ್ಕುಂಡಿಯಲ್ಲಿ “ಎಲ್ಲಿ ಅಗೆದರೂ ಚಿನ್ನ ಸಿಗುತ್ತದೆ” ಎಂಬ ಜನಪ್ರಚಲಿತ ನಂಬಿಕೆ, ನಿಧಿಗಳ್ಳರ ಚಟುವಟಿಕೆಗೆ ಇಂಧನವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ದೇವಾಲಯಗಳಲ್ಲಿ ಯಥೇಚ್ಛ ನಿಧಿ ಅಡಗಿದೆ ಎಂಬ ಭ್ರಮೆಯಿಂದ, ಶತಮಾನಗಳ ಪುರಾತನ ಸ್ಮಾರಕಗಳು ಅಪಾಯಕ್ಕೆ ಒಳಗಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ, ಪುರಾತನ ದೇವಾಲಯಗಳ ರಕ್ಷಣೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು, ಇತಿಹಾಸವನ್ನು ಉಳಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ: ತಹಶೀಲ್ದಾರ್‌ಗೂ ನಿಂದನೆ

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಇದೀಗ ಮತ್ತೊಂದು ಆರೋಪ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಅವರು ನಗರಸಭೆ ಆಯುಕ್ತೆ ಅಮೃತಾ, ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಸಂಭಾಷಣೆಯ ಆಡಿಯೋ ರೆಕಾರ್ಡ್ ಇಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ.

ಪೌರಾಯುಕ್ತೆಗೆ ನಿಂದನೆ ಮತ್ತು ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಲು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಶಿಡ್ಲಘಟ್ಟ ಠಾಣೆಯ ಸಿಐ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಹಾಗೂ ಸೈಬರ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಬಂಧನ ಭೀತಿಯಿಂದ ರಾಜೀವ್ ಗೌಡ ಪರಾರಿಯಾಗಿದ್ದು, ಆತನ ಎರಡು ಮೊಬೈಲ್‌ಗಳು ಸ್ವಿಚ್ ಆಫ್ ಆಗಿರುವುದು ಪೊಲೀಸರಿಗೆ ಮತ್ತಷ್ಟು ಶಂಕೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಂದಿರಾನಗರ, ಸಂಜಯ್ ನಗರ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ತಂಡಗಳಿಂದ ಶೋಧ ಕಾರ್ಯ ಮುಂದುವರೆದಿದೆ.

ಇದರ ನಡುವೆ, ರಾಜೀವ್ ಗೌಡ ಬಂಧನವಾಗದಿದ್ದರೆ ಶಿಡ್ಲಘಟ್ಟ ಬಂದ್ ನಡೆಸುವುದಾಗಿ ಎನ್ಡಿಎ ನಾಯಕರು ಎಚ್ಚರಿಕೆ ನೀಡಿರುವುದರಿಂದ, ಪ್ರಕರಣ ರಾಜಕೀಯವಾಗಿ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡಿದೆ.

ಮತ್ತೊಂದೆಡೆ, ಪ್ರಾಣ ಬೆದರಿಕೆ ಆಡಿಯೋ ವೈರಲ್ ಆದ ಬಳಿಕ, ಸಂಬಂಧಿಕರು ಮತ್ತು ಪ್ರಭಾವಿ ಗುತ್ತಿಗೆದಾರರ ಮೂಲಕ ಪೌರಾಯುಕ್ತೆ ಅಮೃತಾ ಅವರನ್ನು ಪರೋಕ್ಷವಾಗಿ ಸಂಪರ್ಕಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. “ರಾಜಕಾರಣಿಗಳ ವಿರುದ್ಧ ನಿಲ್ಲಿಸಿದರೆ ಮುಂದಿನ ಪೋಸ್ಟಿಂಗ್‌ಗೆ ಸಮಸ್ಯೆಯಾಗಬಹುದು” ಎಂಬ ಸಂದೇಶ ನೀಡಲಾಗಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಮೃತಾ, “ನನಗೆ ಹುದ್ದೆಗಿಂತ ಆತ್ಮಗೌರವ ಮುಖ್ಯ. ಬೇಕಾದರೆ ಮತ್ತೆ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಮರಳುತ್ತೇನೆ. ಸರ್ಕಾರಿ ಸೇವೆಗೆ ಸೇರುವ ಮುನ್ನ ನಾನು ತಿಂಗಳಿಗೆ ₹3 ಲಕ್ಷ ಸಂಬಳ ಪಡೆಯುತ್ತಿದ್ದೆ. ಈ ಘಟನೆ ನನ್ನ ಕುಟುಂಬಕ್ಕೆ ತೀವ್ರ ನೋವು ತಂದಿದೆ” ಎಂದು ಹೇಳಿದ್ದಾರೆ.

ಗುಜರಾತ್ ಗೋಶಾಲೆಗೆ ಸೋನು ಸೂದ್ ₹22 ಲಕ್ಷ ದೇಣಿಗೆ: ಗೋಸೇವೆ ಮೂಲಕ ಮತ್ತೆ ಗಮನ ಸೆಳೆದ ನಟ

ನಟ ಸೋನು ಸೂದ್ ಅವರು ತಮ್ಮ ಸಾಮಾಜಿಕ ಸೇವೆಯ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗುಜರಾತ್‌ನ ವಾರಾಹಿ ಪ್ರದೇಶದಲ್ಲಿರುವ ಗೋಶಾಲೆಗೆ ಭೇಟಿ ನೀಡಿದ ಅವರು, ಗೋವುಗಳ ಆರೈಕೆಗಾಗಿ ₹22 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.

ಸಂಬಂಧಿತ ಗೋಶಾಲೆಯಲ್ಲಿ ಸುಮಾರು 7,000 ಗೋವುಗಳಿಗೆ ಆಶ್ರಯ ನೀಡಲಾಗುತ್ತಿದ್ದು, ಅನಾಥ, ಗಾಯಗೊಂಡ, ಅಂಗವಿಕಲ ಹಾಗೂ ವೃದ್ಧ ಗೋವುಗಳ ರಕ್ಷಣೆ ಮತ್ತು ಆರೈಕೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಕಾರ್ಯದಿಂದ ಪ್ರೇರಿತಗೊಂಡ ಸೋನು ಸೂದ್ ಗೋಶಾಲೆಗೆ ಆರ್ಥಿಕ ನೆರವು ನೀಡಿದ್ದಾರೆ.

ಗೋಶಾಲೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸೋನು ಸೂದ್, “ಇಲ್ಲಿ ನನಗೆ ದೊರೆತ ಪ್ರೀತಿ ಮತ್ತು ಆತ್ಮೀಯತೆ ಹೆಮ್ಮೆ ತಂದಿದೆ. ಗೋ ರಕ್ಷಣೆಯನ್ನು ಈ ರೀತಿಯಲ್ಲಿ ದೇಶದಾದ್ಯಂತ ಜಾರಿಗೆ ತರಬೇಕು. ಗೋವುಗಳು ಕೇವಲ ಕಾಳಜಿಯನ್ನು ಮಾತ್ರ ಬಯಸುತ್ತವೆ. ನಾವು ಹಸುಗಳು ಮತ್ತು ಗೋಶಾಲೆಗಳ ಜೊತೆ ನಿಲ್ಲಬೇಕು” ಎಂದು ಹೇಳಿದರು.

ಸೋನು ಸೂದ್ ಕೋವಿಡ್-19 ಮಹಾಮಾರಿ ಸಮಯದಲ್ಲಿ ದೇಶಾದ್ಯಂತ ವ್ಯಾಪಕ ಸಾಮಾಜಿಕ ಸೇವೆ ನಡೆಸಿದ್ದರು. ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸುವುದು, ಆಕ್ಸಿಜನ್ ಪೂರೈಕೆ, ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ, ಆಹಾರ ವಿತರಣೆ ಸೇರಿದಂತೆ ಹಲವು ಸೇವೆಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಅವರ ಸೇವೆಯನ್ನು ಸರ್ಕಾರದ ಮಟ್ಟದಲ್ಲೂ ಪ್ರಶಂಸಿಸಲಾಗಿದೆ.

ಕೋವಿಡ್ ಬಳಿಕವೂ ಅವರು ಶಿಕ್ಷಣ, ಆರೋಗ್ಯ, ಆರ್ಥಿಕ ನೆರವು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಮಾಜ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಪ್ರತಿ ದಿನವೂ ಸಹಾಯಕ್ಕಾಗಿ ಸಾವಿರಾರು ಮನವಿಗಳು ಬರುತ್ತವೆ ಎಂದು ಸೋನು ಸೂದ್ ತಿಳಿಸಿದ್ದಾರೆ. ಸದ್ಯ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಲಕ್ಕುಂಡಿ ಭೂಮಿಯೊಳಗೆ ಅಡಗಿದೆ ಬಂಗಾರ-ವಜ್ರದ ರಹಸ್ಯ! ನಾಳೆಯಿಂದ ಮಹಾ ಉತ್ಖನನ ಆರಂಭ – ಮತ್ತೆ ನಿಧಿ ಪತ್ತೆಯ ಭೀತಿ

0

ಗದಗ ಜಿಲ್ಲೆಯ ಲಕ್ಕುಂಡಿ… ಇತಿಹಾಸ, ಸಂಪತ್ತು ಮತ್ತು ರಹಸ್ಯಗಳ ಭೂಮಿ! ನಿಧಿ ಪತ್ತೆಯಾದ ಬೆನ್ನಲ್ಲೇ ನಾಳೆಯಿಂದ ಲಕ್ಕುಂಡಿಯಲ್ಲಿ ಮತ್ತೆ ಭಾರೀ ಉತ್ಖನನ ಕಾರ್ಯಕ್ಕೆ ಚಾಲನೆ ಸಿಗಲಿದೆ. ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಿಂದ ಅಧಿಕೃತವಾಗಿ ಉತ್ಖನನ ಆರಂಭವಾಗಲಿದೆ ಎಂದು ಲಕ್ಕುಂಡಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಾಟೀಲ್ ಹಾಗೂ ಆಯುಕ್ತ ಶರಣು ಗೋಗೇರಿ ಮಾಹಿತಿ ನೀಡಿದ್ದಾರೆ.

ಲಕ್ಕುಂಡಿ ಎಂದರೆ ಕೇವಲ ದೇವಸ್ಥಾನಗಳ ಪಟ್ಟಣವಲ್ಲ… ಇದು ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು ಹಾಗೂ ದಾನಚಿಂತಾಮಣಿ ಅತ್ತಿಮಬ್ಬೆಯ ಆಳ್ವಿಕೆಯ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತ ನಾಡು. ಶಿಲ್ಪಕಲೆಯ ಜೊತೆಗೆ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ, ಮುತ್ತು, ನೀಲಮಣಿ ಸೇರಿದಂತೆ ಅಪಾರ ಸಂಪತ್ತು ಭೂಮಿಯೊಳಗೆ ಹುದುಗಿದೆ ಎಂಬ ನಂಬಿಕೆ ಬಲವಾಗಿದೆ.

2024ರ ನವೆಂಬರ್‌ನಲ್ಲಿ ನಡೆದ ಅನ್ವೇಷಣೆಯಲ್ಲೇ ಸಾವಿರಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ನಿಧಿ ಸಿಕ್ಕಿರುವ ಬೆನ್ನಲ್ಲೇ ಉತ್ಖನನ ಕಾರ್ಯಕ್ಕೆ ಮತ್ತಷ್ಟು ವೇಗ ಸಿಗಲಿದೆ. ಅನೇಕ ಭಾಗಗಳಲ್ಲಿ ಇಂದಿಗೂ ರತ್ನ, ಹವಳ, ವಜ್ರ, ವೈಡೂರ್ಯದಂತಹ ವಸ್ತುಗಳು ದೊರೆಯುತ್ತಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ, ಸಿದ್ದರಬಾವಿ, ಚಂದ್ರಮೌಳೇಶ್ವರ ದೇವಸ್ಥಾನದ ಬಳಿ ಸುಮಾರು 5,388 ಚದರ ಅಡಿ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ, ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಉತ್ಖನನ ನಡೆಯುತ್ತಿದೆ.
ಇದಕ್ಕೂ ಮೊದಲು 2004-05ರಲ್ಲಿ ಪ್ರಭುದೇವರ ಮಠದ ದಕ್ಷಿಣ ಭಾಗದಲ್ಲಿ ನಡೆದ ಉತ್ಖನನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಅನೇಕ ಮಹತ್ವದ ಕುರುಹುಗಳು ಪತ್ತೆಯಾಗಿದ್ದವು. ಈಗಿನ ಉತ್ಖನನದಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು, ಶಿಲ್ಪಕಲೆ, ಸ್ಮಾರಕಗಳು ಹಾಗೂ ಅಪರೂಪದ ಆಭರಣಗಳು ಸಿಕ್ಕುವ ಸಾಧ್ಯತೆ ಇದೆ.
ಒಟ್ಟಾರೆ, ಲಕ್ಕುಂಡಿಯ ಭೂಮಿ ಮತ್ತೆ ದೇಶದ ಗಮನ ಸೆಳೆಯಲು ಸಿದ್ಧವಾಗಿದೆ.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಏಳು ಮಹಿಳೆಯರು ಬಲಿ: ಇಡೀ ಗ್ರಾಮದಲ್ಲಿ ಶೋಕ

0

ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿ ನಡೆದ ರಸ್ತೆ ಅಪಘಾತವು ಒಂದೇ ಕುಟುಂಬದ ಏಳು ಮಹಿಳೆಯರನ್ನು ಒಂದೇ ಕ್ಷಣದಲ್ಲಿ ಕಸಿದುಕೊಂಡಿದೆ. ಈ ಭೀಕರ ದುರಂತ ಇಡೀ ರಾಜ್ಯವನ್ನು ಶೋಕದಲ್ಲಿ ಮುಳುಗಿಸಿದೆ. ರಾಷ್ಟ್ರೀಯ ಹೆದ್ದಾರಿ 52ರ ಹರ್ಸಾವಾ ಗ್ರಾಮದ ಬಳಿ ನಡೆದ ಈ ಅಪಘಾತದ ದೃಶ್ಯ ನೋಡಿದವರು ಕಣ್ಣೀರು ಹಾಕದೇ ಇರಲು ಸಾಧ್ಯವಾಗಲಿಲ್ಲ.

ವೇಗವಾಗಿ ಚಲಿಸುತ್ತಿದ್ದ ಕಾರು ಮೊದಲು ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆದು, ನಂತರ ಎದುರು ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನೊಳಗೆ ಇದ್ದ ಮಹಿಳೆಯರು ಹೊರಬರಲು ಅವಕಾಶವೇ ಸಿಗದೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅತ್ತೆ, ಐವರು ಸೊಸೆಯಂದಿರು ಮತ್ತು ಮಗಳು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಮತ್ತು ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಮಹಿಳೆಯರೆಲ್ಲರೂ ಫತೇಪುರ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ರಘುನಾಥಪುರ ಗ್ರಾಮದ ನಿವಾಸಿಗಳು ಮತ್ತು ಒಂದೇ ಕುಟುಂಬಕ್ಕೆ ಸೇರಿದವರು. ಇತ್ತೀಚೆಗೆ ಮೋಹಿನಿ ದೇವಿಯ ಅತ್ತಿಗೆ ಕೈಲಾಶ್ ದೇವಿ ನಿಧನರಾದ ಹಿನ್ನೆಲೆಯಲ್ಲಿ ಕುಟುಂಬವು ಲಕ್ಷ್ಮಣಗಢಕ್ಕೆ ಅಂತ್ಯಕ್ರಿಯೆಗೆ ಹೋಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಂಜೆ 4 ಗಂಟೆ ಸುಮಾರಿಗೆ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಒಟ್ಟು ನಾಲ್ಕು ವಾಹನಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದವು. ಮೂರು ವಾಹನಗಳಲ್ಲಿ ಪುರುಷರು ಇದ್ದರು. ಮಹಿಳೆಯರು ಹಾಗೂ ಚಾಲಕ ಒಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಆ ಪ್ರಯಾಣವೇ ಅವರ ಕೊನೆಯ ಪ್ರಯಾಣವಾಗುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹರ್ಸಾವಾ ಗ್ರಾಮದ ಬಳಿ ಚಾಲಕ ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾನೆ. ಅತಿ ವೇಗದ ಕಾರಣ ಕಾರು ನಿಯಂತ್ರಣ ತಪ್ಪಿ ಮೊದಲು ಪಿಕಪ್ ವಾಹನಕ್ಕೆ, ನಂತರ ಎದುರು ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಮಹಿಳೆಯರು ಕಾರಿನೊಳಗೆ ಸಿಲುಕಿಕೊಂಡಿದ್ದು, ಸಾಕಷ್ಟು ಪ್ರಯತ್ನದ ಬಳಿಕ ಹೊರತೆಗೆದಾಗ ಏಳು ಮಂದಿ ಸಾವನ್ನಪ್ಪಿದ್ದುದಾಗಿ ತಿಳಿದುಬಂದಿದೆ.

ಅಪಘಾತದಲ್ಲಿ ಮೋಹಿನಿ ದೇವಿ (80), ಚಂದಾ ದೇವಿ (55), ತುಳಸಿ ದೇವಿ (45), ಬರ್ಖಾ ದೇವಿ (35), ಆಶಾ ದೇವಿ (60), ಸಂತೋಷ್ ದೇವಿ (45) ಮತ್ತು ಇಂದಿರಾ (60) ಮೃತಪಟ್ಟಿದ್ದಾರೆ. ಗಾಯಾಳುಗಳಾದ ಸೋನು (35) ಮತ್ತು ಚಾಲಕ ವಾಸಿಮ್ (25) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವಿನ ಸುದ್ದಿ ಗ್ರಾಮ ತಲುಪಿದ ತಕ್ಷಣ, ರಘುನಾಥಪುರ ಗ್ರಾಮ ಮೌನಕ್ಕೆ ಒಳಗಾಯಿತು. ಆ ರಾತ್ರಿ ಗ್ರಾಮದಲ್ಲಿ ಯಾವುದೇ ಮನೆಗಳಲ್ಲಿ ಒಲೆ ಉರಿಸಲಿಲ್ಲ. ಮನೆಗಳ ಆಧಾರವಾಗಿದ್ದ ಮಹಿಳೆಯರ ನಷ್ಟ ಕುಟುಂಬಗಳನ್ನು ಸಂಪೂರ್ಣವಾಗಿ ಕುಗ್ಗಿಸಿದೆ.

ಪೊಲೀಸರು ಹಾಗೂ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಧನುಕಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿ ಮುಕುಲ್ ಶರ್ಮಾ ಎಸ್‌ಕೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹಾಗೂ ರಾಜ್ಯಪಾಲ ಹರಿಭಾವು ಬಾಗ್ಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಮತ್ತೆ ರಸ್ತೆ ಸುರಕ್ಷತೆ ಮತ್ತು ಅತಿ ವೇಗದ ಅಪಾಯಗಳ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.

ಬಿಗ್ ಬಾಸ್ ಫಿನಾಲೆಗೂ ಮುನ್ನ ವೈರಲ್ ಆದ ಸುದೀಪ್–ನಾರಾಯಣ ಗೌಡ ಭೇಟಿ: ಕರವೇ ಸ್ಪಷ್ಟನೆ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಕುತೂಹಲ ತೀವ್ರವಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್ ಮತ್ತು ಮ್ಯೂಟೆಂಟ್ ರಘು ಅವರು ಫಿನಾಲೆ ವಾರದವರೆಗೆ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿರುವ ಫೋಟೋ ವೈರಲ್ ಆಗಿದ್ದು, ಬಿಗ್ ಬಾಸ್ ಸಂಬಂಧಿತ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು ಈ ಭೇಟಿಯನ್ನು ಅಶ್ವಿನಿ ಗೌಡ ಪರವಾಗಿ ಲಾಬಿ ನಡೆಸಲು ನಡೆದ ಭೇಟಿ ಎಂದು ಪ್ರಚಾರ ಮಾಡಿದ್ದಾರೆ.

ಈ ಕುರಿತು ಕರವೇ ಮುಖಂಡ ಧರ್ಮಣ್ಣ ಅವರು ಸ್ಪಷ್ಟನೆ ನೀಡಿದ್ದು, ಈ ಭೇಟಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.   “ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದರು. ಈ ಹಿಂದೆಯೇ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮದುವೆ ಪತ್ರಿಕೆ ನೀಡಲಾಗಿದೆ. ಸುದೀಪ್ ಅವರಿಗೂ ಆಹ್ವಾನ ನೀಡಲು ಭೇಟಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು, “ಈ ಫೋಟೋವನ್ನು ಆಧರಿಸಿ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದರಲ್ಲಿ ನಾರಾಯಣ ಗೌಡ ಮತ್ತು ಸುದೀಪ್ ಅವರ ವಿರೋಧಿಗಳ ಪಾತ್ರ ಇದೆ. ಇದು ಖಂಡನೀಯ” ಎಂದು ಧರ್ಮಣ್ಣ ಹೇಳಿದ್ದಾರೆ.

ಬಿಗ್ ಬಾಸ್ ಮನೆಯ ಆಟದ ವಿಚಾರಕ್ಕೆ ಬಂದ್ರೆ, ಈ ಬಾರಿ ಗಿಲ್ಲಿ ನಟ ಅವರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹಲವರು ಗಿಲ್ಲಿಯೇ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 17 ಮತ್ತು 18ರಂದು ನಡೆಯುವ ಗ್ರ್ಯಾಂಡ್ ಫಿನಾಲೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಗಿಲ್ಲಿಗೆ ಹೆಚ್ಚಿನ ಬೆಂಬಲ ಕಂಡುಬರುತ್ತಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಸಾಲಗಾರರ ಕಾಟ; ತಂಗಿ ವಿರುದ್ಧವೇ ದೂರು ಕೊಟ್ಟ ಖ್ಯಾತ ನಟಿ!

0

ಕನ್ನಡ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾರುಣ್ಯಾ ರಾಮ್ ಅವರು ತಮ್ಮ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಕಾರುಣ್ಯಾ ಅವರು ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಂಗಿ ಸಮೃದ್ಧಿ, ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬವರ ವಿರುದ್ಧ ಆರೋಪ ಮಾಡಿದ್ದಾರೆ. ದೂರು ಪ್ರಕಾರ, ಸಮೃದ್ಧಿ ರಾಮ್ ಮೇಕಪ್ ಆರ್ಟಿಸ್ಟ್ ಆಗಿದ್ದು, ಬೆಟ್ಟಿಂಗ್ ಮೂಲಕ ಸುಮಾರು ₹25 ಲಕ್ಷ ಸಾಲ ಮಾಡಿಕೊಂಡಿದ್ದು, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ತೀರಿಸಲು ಮನೆಯ ಚಿನ್ನ ಮತ್ತು ಹಣವನ್ನು ವಂಚನೆ ಮಾಡಿದ್ದಾರೆ.

ಪರಿಣಾಮ, ಸಾಲಗಾರರು ಮನೆಗೆ ಬಂದು ಪೀಡಿಸುತ್ತಿದ್ದಾರೆ ಮತ್ತು ಹಣವನ್ನು ಬಳಸಿಕೊಂಡಿದ್ದ ವಿಚಾರವನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೇ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶ, ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ NCR ದಾಖಲಾಗಿತ್ತು. ಈಗ ಕಾರುಣ್ಯ ರಾಮ್‌ ಸಹೋದರಿ ವಿರುದ್ಧ ಸಿಸಿಬಿಯಲ್ಲಿ ದೂರು ನೀಡಿದ್ದಾರೆ.

ಕುಂದಗೋಳದಲ್ಲಿ ಆಘಾತಕಾರಿ ಘಟನೆ; ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ!

0

ಹುಬ್ಬಳ್ಳಿ:- ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಹುಡುಗಾಟ ಆಡುವ ವಯಸ್ಸಿನ ಮಕ್ಕಳೇ ಸಹಪಾಠಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕುಂದಗೋಳ ಪಟ್ಟಣದ ನಿಂಗರಾಜ್ ಅವಾರಿ (16) ಕೊಲೆಯಾದ ಬಾಲಕ. ಕುಂದಗೋಳ ಪಟ್ಟಣದ ಅನುದಾನಿತ ಶಾಲೆಯಲ್ಲಿ ಎಸ್​​ಎಸ್​ಎಲ್​ಸಿ ಓದುತ್ತಿದ್ದ ಆತನನ್ನು ಅದೇ ಶಾಲೆಯ ಓರ್ವ ಬಾಲಕ ಸೇರಿದಂತೆ ಮೂವರು ಬಾಲಕರು ಸೇರಿ ಕೊಲೆ ಮಾಡಿದ್ದಾರೆ.

ಬಾಲಕನ ಕೊಲೆಗೆ ಕಾರಣವಾಗಿದ್ದು ಶಾಲೆಯಲ್ಲಿ ನಡೆದ ಕ್ಷುಲಕ ವಿಚಾರ ಎನ್ನಲಾಗಿದೆ. ನಿಂಗರಾಜ್ ಮತ್ತು ಆತನ ಕೆಲ‌ ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ಆತನ ಸಹಪಾಠಿಯೋರ್ವ ಎಸ್​​ಎಸ್​ಎಲ್​ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ.

ಕೊಲೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಬಾಲಕರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ: ಫೋನ್ ಸ್ವಿಚ್ ಆಫ್ ಮಾಡಿ ‘ಕೈ’ ನಾಯಕ ರಾಜೀವ್ ಗೌಡ ಪರಾರಿ!

0

ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೃತ ಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ ಅವರ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್‌ಗಳು 132, 351(3), 56, 224, 352 ಮತ್ತು 353(2) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ಎರಡು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ.

ಅವರ ಬಂಧನಕ್ಕಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಅವರ ನಿರ್ದೇಶನದಂತೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಎನ್ ಪೊಲೀಸ್‌ಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

error: Content is protected !!