Home Blog Page 176

ಹೂವಿನ ಶಿಗ್ಲಿ ಮಠದಲ್ಲಿ ಸಂಕ್ರಾಂತಿ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಡಿನ ಐತಿಹಾಸಿಕ ಪರಂಪರೆಯಲ್ಲಿ ಸಾಧುಗಳು, ಸಂತರು, ಶರಣರು, ಋಷಿಮುನಿಗಳು, ಮಠಾಧೀಶರು ತಮ್ಮ ತಪಃಶಕ್ತಿ, ಸಂಕಲ್ಪ, ಜ್ಞಾನ, ಅನುಭಾವಗಳಿಂದ ಸಮಾಜಸೇವೆ, ತ್ರಿವಿಧ ದಾಸೋಹದ ಮೂಲಕ ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಇದಕ್ಕೆ ಲಕ್ಷ್ಮೇಶ್ವರ ಸಮೀಪದ ಹೂವಿನಶಿಗ್ಲಿ ವಿರಕ್ತಮಠ ಸಾಕ್ಷಿಯಾಗಿದೆ.

ಲಿಂ. ನಿರಂಜನ ಮಹಾಸ್ವಾಮಿಗಳು ಬಸವನಾಡು ಬೀದರ ಜಿಲ್ಲೆ ಔರಾದ್ ತಾಲೂಕಿನ ಸೋನಾಳ ಗ್ರಾಮದಿಂದ 1996ರಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಸ್ವಪ್ನವೊಂದು ಬಿದ್ದು, ಹೂವಿನ ಶಿಗ್ಲಿಯಲ್ಲಿನ ಪಾಳು ಬಿದ್ದಿರುವ ಮಠವನ್ನು ಉದ್ಧರಿಸು ಎಂಬ ವಾಣಿಯನ್ವಯ ಕಲ್ಲು-ಮುಳ್ಳುಗಳಿಂದ ಕೂಡಿದ, ಶಿಥಿಲಾವಸ್ಥೆಯ ಚಿಕ್ಕ ಗುಡಿಯಲ್ಲಿ ನೆಲೆನಿಂತ ಶ್ರೀಗಳು ತಮ್ಮ ಸಂಕಲ್ಪ ಶಕ್ತಿಯಿಂದ ಈ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿದರು. ಆಯುರ್ವೇದ ಔಷಧಿ ಸಿದ್ಧಪಡಿಸಿ ಮಾರಕ ರೋಗಗಳಿಗೆ ದಿವ್ಯೌಷಧಿ ನೀಡಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು.

ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮಿಗಳ ನೆಚ್ಚಿನ ಶಿಷ್ಯರಾಗಿದ್ದ ಲಿಂ. ನಿರಂಜನ ಶ್ರೀಗಳು ಅವರಂತೆಯೇ ಗ್ರಾಮೀಣ ಪ್ರದೇಶಗಳ ಬಡ, ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆಯ ಮೂಲಕ ಗುರುಕುಲ ಶಿಕ್ಷಣ ಆರಂಭಿಸಿ ಬಡ ಮಕ್ಕಳ ಆಶಾಕಿರಣವೇ ಆಗಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿವರ್ಷ ಸಂಕ್ರಾಂತಿಗೆ ನಾಡಿನ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಕ್ಷೇತ್ರದಲ್ಲಿ ಜಾತ್ರಾಮಹೋತ್ಸವದ ನಿಮಿತ್ತ ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿದ್ದರು.

ನಿರಂಜನ ಮಹಾಸ್ವಾಮಿಗಳು 2011ರಲ್ಲಿ ಲಿಂಗೈಕ್ಯರಾದ ಬಳಿಕ ಶ್ರೀಮಠದ ಸಂಪೂರ್ಣ ಜವಾಬ್ದಾರಿ ಹೊತ್ತ ಹಾವೇರಿ ತಾಲೂಕಿನ ಮರೋಳ ಗ್ರಾಮದ ಚನ್ನವೀರ ಶ್ರೀಗಳು ಶ್ರೀಮಠ ಮತ್ತು ಗುರುಕುಲವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಗುರು ನಿರಂಜನ ಪೂರ್ವ ಪ್ರಾಥಮಿಕ ಕನ್ನಡ ಶಾಲೆ, ಶ್ರೀ ಗುರುಕುಲ ವಸತಿ ಪ್ರಾಥಮಿಕ ಶಾಲೆ, ಶ್ರೀ ಗುರುಕುಲ ವಸತಿ ಪ್ರೌಢಶಾಲೆ ಆರಂಭಿಸಿ, ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಸರ್ಕಾರದ ಅನುದಾನವಿಲ್ಲದೇ ನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹ ಸಾಂಗವಾಗಿ ಸಾಗುವಲ್ಲಿ ಶ್ರೀಗಳ ಆಣತಿಯಂತೆ ನಡೆದು ಸಹಾಯ-ಸಹಕಾರ ನೀಡುತ್ತಾ ಬಂದಿರುವ ಗ್ರಾಮಸ್ಥರ ಮತ್ತು ಭಕ್ತರ ಸೇವಾ ಕಾರ್ಯವೂ ಅಷ್ಟೇ ಪ್ರಶಂಸನೀಯ.

ಪ್ರತಿವರ್ಷದಂತೆ ಈ ವರ್ಷವೂ ಜ.13ರಿಂದ 15ರವರೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅನ್ನದಾಸೋಹ, ಜ್ಞಾನ ದಾಸೋಹದ ಜಾತ್ರಾ ಮಹೋತ್ಸವ ಮತ್ತು ಲಿಂ.ಶ್ರೀಗಳ ಪುಣ್ಯಸ್ಮರಣೋತ್ಸವ ಆಚರಿಸಲಾಗುತ್ತದೆ. ಖಡಕ್ ರೊಟ್ಟಿ ಮತ್ತು ಕರಿಂಡಿ ಪ್ರಸಾದವೇ ಈ ಜಾತ್ರೆಯ ವೈಶಿಷ್ಟ್ಯವಾಗಿದೆ. ಜಾತ್ರೆಗೆ ಹೂವಿನ ಶಿಗ್ಲಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಶ್ರೀಮಠಕ್ಕೆ ರೊಟ್ಟಿ ಸೇರಿ ಇತರೆ ಆಹಾರ ಧಾನ್ಯಗಳನ್ನು ಸಮರ್ಪಿಸುತ್ತಾರೆ.

ಜ. 13ರಿಂದ 3 ದಿನಗಳ ಕಾಲ ಹೂವಿನ ಶಿಗ್ಲಿಯ ವಿರಕ್ತಮಠದ 47ನೇ ಜಾತ್ರಾ ಮಹೋತ್ಸವ, ಲಿಂ. ನಿರಂಜನ ಮಹಾಸ್ವಾಮಿಗಳವರ 16ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಪುರಾಣ ಪ್ರವಚನ, ಲಿಂಗದೀಕ್ಷೆ, ಸಾಮೂಹಿಕ ವಿವಾಹ, ತುಲಾಭಾರ ಸೇವೆ, ಧರ್ಮಸಭೆ, ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ವ್ಯವಹಾರಿಕ ಯುಗದಲ್ಲಿ ಕಮರ್ಷಿಯಲ್ ಆಗದೇ, ಸೇವೆಯಾಗಿಯೇ ಮುಂದುವರೆದದ್ದು ಶ್ರೀ ನಿರಂಜನ ಸ್ವಾಮೀಜಿ (ಬಾಬಾನಂದರು) ಹಾಗೂ ಈಗಿನ ಮಠಾಧೀಶರಾದ ಶ್ರೀ ಚನ್ನವೀರ ಸ್ವಾಮೀಜಿ ಅವರಿಗೆ ಸಲ್ಲುವ ಶ್ರೇಯಸ್ಸಾಗಿದೆ. ಈ ಗುರುಕುಲದಲ್ಲಿ ಬಡ, ಅನಾಥರು ಸೇರಿ 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಅವರಿಗೆ ಶಿಕ್ಷಣದ ಜತೆಗೆ ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ವೇದಾಧ್ಯಯನ ನೀಡಿ ಲಿಂ.ಶ್ರೀಗಳ ಮಾರ್ಗದಲ್ಲಿ ಮಠವನ್ನು ವಿಶಿಷ್ಟ ಜಾಗೃತ ಕೇಂದ್ರವನ್ನಾಗಿಸುವತ್ತ ಸಾಗಿದ್ದಾರೆ.

ಮಕ್ಕಳ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ: ಶಾಸಕ ಸಿ.ಸಿ. ಪಾಟೀಲ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ಮಕ್ಕಳಿಗೆ ನಿರಾಶೆಯಾಗದಂತೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸಲಹೆ ನೀಡಿದರು.

ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿಯು ಸ್ವಾಮಿ ವಿವೇಕಾನಂದರ 144ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ, ಮಹಿಳಾ ಹಾಗೂ ವಿಶೇಷಚೇತನರ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳ ಬೇಡಿಕೆಗಳು ಬಹಳಷ್ಟು ಇರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು, ಅವರಿಗೆ ನಿರಾಶೆಯಾದರೆ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು. ಈ ಪ್ರೌಢಶಾಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಇಂತಹ ಗ್ರಾಮ ಸಭೆಗಳಿಂದ ತಿಳುವಳಿಕೆ ಬರುತ್ತದೆ. ಈ ದಿಸೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅಧಿಕಾರಿಗಳು ಅವರ ಸಮಸ್ಯೆಗೆ ಈ ಸಭೆಯಲ್ಲಿ ಸ್ಪಂದಿಸಬೇಕು ಎಂದರು.

ಬಿ.ಇ.ಒ ವಿ.ವಿ. ನಡುವಿನಮನಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಜನಪ್ರತಿನಿಧಿಗಳ ಸಹಾಯ-ಸಹಕಾರದೊಂದಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾ.ಪಂ ಅನುದಾನದ ಇತಿಮಿತಿಯಲ್ಲಿ ಗ್ರಾಮದ ಅಭಿವೃದ್ಧಿಯೊಂದಿಗೆ ಮಕ್ಕಳ ಶೈಕ್ಷಣಿಕ ಪರಿಸರ ನಿರ್ಮಿಸಲು ಪ್ರಯತ್ನ ಮಾಡಿದ್ದೇನೆ. ಈವರೆಗೆ ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ, ಜಿ.ಪಂ ಯೋಜನಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ, ಸಮಾಜ ಕಲ್ಯಾಣ ಇಲಾಖೆಯ ನಂದಾ ಹಣಬರಟ್ಟಿ, ಗ್ರಾಮೀಣ ಸಿ.ಪಿ.ಐ ಸಿದ್ಧರಾಮೇಶ ಗಡೇದ, ಸಿ.ಡಿ.ಪಿ.ಒ ಮೇಲ್ವಿಚಾರಕಿ ಕಮತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೂಪಾ ಬೆಟಗೇರಿ, ಪೊಲೀಸ್ ಇಲಾಖೆಯ ಭಾರತಿ ಚಳಗೇರಿ, ವಿಕಲಚೇತನ ಇಲಾಖೆಯ ಖಾಜಾಹುಸೇನ ಕಾತರಕಿ, ಸಖಿ ಒನ್ ಕೇಂದ್ರದ ಸುಜಾತಾ ಶಾಸ್ತ್ರಿಮಠ, ಅಶ್ವಿನಿ ಹಿರೇಮಠ, ಅಂಗನವಾಡಿ ಮೇಲ್ವಿಚಾರಕಿ ಶಾಹಿದಬೇಗಂ ಹತ್ತಿವಾಲೆ, ಕಾರ್ಮಿಕ ಇಲಾಖೆಯ ಶ್ರೀಶೈಲ ಸೋಮನಕಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾಗಿ ನಂದೀಶ ಕಲಬಂಡಿ, ಪಾರ್ವತಿ ಪಾಟೀಲ, ಗವಿಶಿದ್ದಪ್ಪ ಯಲಿಶಿರುಂಜ, ರಮಾಜಾನ ತಹಸೀಲ್ದಾರ, ಗ್ರಾ.ಪಂ ಸದಸ್ಯರು ವೇದಿಕೆಯಲ್ಲಿದ್ದರು. ಪಿ.ಡಿ.ಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೈ.ವೈ. ಬೆಟಗೇರಿ ನಿರೂಪಿಸಿದರು. ಕಾರ್ಯದರ್ಶಿ ಎಂ.ಎ. ಗಾಜಿ ವಂದಿಸಿದರು.

ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸಂಚರಿಸುವ ರಸ್ತೆಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗಾಗಲೇ ನೂರಾರು ಕುಟುಂಬಗಳು ಸರಕಾರದ ಅನುದಾನವನ್ನು ಪಡೆದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೂ ಸಹ ಬಯಲು ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅವರಿಗೆ ನೀಡಿದ ಅನುದಾನವನ್ನು ಮರಳಿ ಪಡೆಯಲಾಗುವುದು. ಶಾಲೆ, ಸರಕಾರಿ ಕಾರ್ಯಾಲಯದ ಹತ್ತಿರ ವಾಹನಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವವರಿಗೆ 100 ರೂ ದಂಡ ವಿಧಿಸಲಾಗುವುದು ಎಂದು ಪಿ.ಡಿ.ಒ ಅಮೀರನಾಯಕ ಎಚ್ಚರಿಕೆ ನೀಡಿದರು.

ಬಾಕ್ಸ್

ಮಹಿಳಾ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಖಿ ಒನ್ ಕೇಂದ್ರದ ಅಶ್ವಿನಿ ಶಾಸ್ತ್ರಿಮಠ, ಮಹಿಳೆಯರು ತಮ್ಮ ಶೋಷಣೆ ಮತ್ತು ದೌರ್ಜನ್ಯವನ್ನು ವಿರೋಧಿಸಲು ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು. ಪೊಲೀಸ್ ಇಲಾಖೆಯ ಭಾರತಿ ಚಳಗೇರಿ ಮಾತನಾಡಿ, ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಗದ್ದಲದ ಪ್ರದೇಶದಲ್ಲಿ ಹಾಕಿಕೊಳ್ಳಬೇಡಿ, ಮೊಬೈಲಿನಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನು ಹಾಕಬೇಡಿ ಎಂದು ಎಚ್ಚರಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾಹಿದಬೇಗಂ ಹತ್ತಿವಾಲೆ, ಸಿ.ಡಿ.ಪಿ.ಒ ಮೇಲ್ವಿಚಾರಕಿ ಕಮತ ಮಾತನಾಡಿದರು. ಖಾಜಾಹುಸೇನ ಕಾತರಕಿ ವಿಕಲಚೇತನರಿಗೆ ಸರಕಾರದಿಂದ ದೊರೆಯುವ ಸೌಲಭ್ಯದ ಕುರಿತು ವಿವರಿಸಿದರು.

ಪ್ರಚಾರ ವಾಹನಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಗದಗ ಜಿಲ್ಲೆಯಾದ್ಯಂತ ಬಾಲ ಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಸಂದೇಶ ಸಾರುವ ಅಟೋ ಪ್ರಚಾರಕ್ಕೆ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ಸಂದೇಶ ಸಾರುವ ಕರಪತ್ರ, ಪೋಸ್ಟರ್‌ಗಳು ಹಾಗೂ ಸ್ಟಿಕರ್‌ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಗದಗ ಕಾರ್ಮಿಕ ನಿರೀಕ್ಷಕರಾದ ಸುಷ್ಮಾ, ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸೇರಿದಂತೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸಂಭ್ರಮದ ಭೋಗಿ ಹಬ್ಬ ಆಚರಣೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕರ ಸಂಕ್ರಾಂತಿಯ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ನರೇಗಲ್ಲ ಹೋಬಳಿಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಧನುರ್ಮಾಸದಲ್ಲಿ ಬರುವ ಭೋಗಿ ಹಬ್ಬ ವಿಶೇಷತೆಯಿಂದ ಕೂಡಿದೆ. ಸುಮಂಗಲೆಯರು ವೈದಿಕ ಮುತ್ತೈದೆಯರಿಗೆ ಮರದ ಬಾಗಿನ ನೀಡುವ ಮೂಲಕ ಹಬ್ಬವನ್ನು ಆಚರಿಸಿದರು. ಸೂರ್ಯ ದಕ್ಷಿಣಾಯನದಿಂದ ಉತ್ತರಾಯನದ ಕಡೆಗೆ ಚಲಿಸುವ ಮಹಾ ಪರ್ವವೇ ಸಂಕ್ರಮಣ ಎನಿಸಿಕೊಳ್ಳುತ್ತದೆ. ಮಕರ ಸಂಕ್ರಮಣದ ಮೊದಲ ಹಬ್ಬವೇ ಭೋಗಿ ಹಬ್ಬವಾಗಿದೆ.

ಮರದ ಬಾಗಿನ ನೀಡಿ ಬಂದ ನಂತರ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುಗ್ಗಿ, ಗೊಜ್ಜು, ಸೆಜ್ಜಿ ರೊಟ್ಟಿ, ಚಳ್ಳವರಿಕಾಯಿ ಪಲ್ಯ, ಬೆಣ್ಣೆ ಮುಂತಾದವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮನೆ ಮಂದಿಯೆಲ್ಲ ಸೇರಿ ಊಟ ಮಾಡುತ್ತಾರೆ. ಧನುರ್ಮಾಸದಲ್ಲಿ ವಿಶೇಷವಾದ ಚಳಿ ಇರುತ್ತದೆ. ವಿಪರೀತವಾದ ಚಳಿಯನ್ನು ನಮ್ಮ ದೇಹವು ತಡೆದುಕೊಳ್ಳಲು ಬೇಕಾದ ಆಹಾರ ಪದ್ಧತಿಯನ್ನು ಇದರಲ್ಲಿ ಅಡಕಗೊಳಿಸಲಾಗಿದೆ. ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟಿ ಕೈಕಾಲುಗಳು ಒಡೆಯುವುದು ಸರ್ವೇಸಾಮಾನ್ಯ. ಇಂತಹ ಸಂದರ್ಭದಲ್ಲಿ ಎಣ್ಣೆ ಅಂಶಗಳಿರುವ ಪದಾರ್ಥಗಳನ್ನು ಸೇವಿಸಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವಲ್ಲಿ ಎಳ್ಳು ಬಹಳಷ್ಟು ಸಹಾಯ ಮಾಡುತ್ತದೆ. ಅದಕ್ಕಾಗಿ ಎಳ್ಳಿನ ಪದಾರ್ಥಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಶಾಲಾ ಆವರಣದಲ್ಲೇ ಬಡಿದಾಡಿಕೊಂಡ ಅತಿಥಿ ಶಿಕ್ಷಕ–ಎಸ್‌ಡಿಎಂಸಿ ಅಧ್ಯಕ್ಷ! Video Viral

0

ಹಾವೇರಿ:- ಜಿಲ್ಲೆಯ ಹಾನಗಲ್ ಪಟ್ಟಣದ ಸರ್ಕಾರಿ ಮಾದರಿ ಶಾಲೆಯಲ್ಲಿ ಅತಿಥಿ ಶಿಕ್ಷಕ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ನಡೆದಿದೆ.

https://www.facebook.com/share/r/1CKpFGBeJg/

ಅತಿಥಿ ಶಿಕ್ಷಕ ನವೀನ್ ಹಾಗೂ SDMC ಅಧ್ಯಕ್ಷ ಸತೀಶ್ ಬೊಸ್ಲೆ ನಡುವೆ ಶಾಲಾ ಮೈದಾನದಲ್ಲೇ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಅತಿಥಿ ಶಿಕ್ಷಕರ ಸಂಬಳ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ SDMC ಅಧ್ಯಕ್ಷನ ವಿರುದ್ಧ ಕೇಳಿಬಂದಿದ್ದು, ಇದೇ ವಿಚಾರದಲ್ಲಿ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮತ್ತೆ ನಡೆದ ಮಾತಿನ ಚಕಮಕಿ ತೀವ್ರ ವಾಗ್ವಾದಕ್ಕೆ ತಿರುಗಿ ಅದು ಹೊಡೆದಾಟಕ್ಕೆ ಕಾರಣವಾಗಿದೆ. ಘಟನೆಯ ವೇಳೆ ಶಾಲಾ ಮೈದಾನದಲ್ಲಿದ್ದವರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದ್ದಾರೆ. ಹೊಡೆದಾಟದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿವೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಹರಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ತಹಸೀಲ್ದಾರ್ ಕಚೇರಿಯಲ್ಲಿ 20 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾ ಬಲೆಗೆ ಬಿದ್ದ ‘FOOD INSPECTOR’

0

ಹಾವೇರಿ:- ಜಿಲ್ಲೆಯ ರಾಣೆಬೆನ್ನೂರು ತಹಸೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಫುಡ್ ಇನ್ಸ್‌ಪೆಕ್ಟರ್ ಲೋಕಾ ಬಲೆಗೆ ಬಿದ್ದಿದ್ದಾರೆ.

ರಾಣೆಬೆನ್ನೂರ ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಅಧಿಕಾರಿ ‘ಶಂಭು’ ಲೋಕಾಯುಕ್ತರ ಬಲೆಗೆ ಬಿದ್ದವರು. ನ್ಯಾಯಬೆಲೆ ಅಂಗಡಿ ಪ್ರಾಧಿಕಾರದ ವರ್ಗಾವಣೆಗೆ ಸಂಬಂಧಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಶಂಭು ಮೇಲೆ ಇದೆ. ರಾಘವೇಂದ್ರ ಎಂಬುವವರಿಂದ ಅನುಕಂಪದ ಆಧಾರದ ಮೇಲೆ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಸುಮಾರು ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿ ಎಂ.ಎಸ್. ಕೌಲೆಪುರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 20,000 ಲಂಚ ಸ್ವೀಕರಿಸುವ ವೇಳೆ ಶಂಭು ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.

ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ನಿರೀಕ್ಷಣಾ ಜಾಮೀನು ಮಂಜೂರು!

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ವಾದ–ಪ್ರತಿವಾದ ಆಲಿಸಿ ಇಂದು ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ವಿಚಾರಣೆ ವೇಳೆ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದ ಮಂಡಿಸಿ, ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರ ಕುರಿತು ಸಿಐಡಿ ಮತ್ತು ಇಡಿ ತನಿಖೆ ನಡೆಸಿದ್ದು, ಮುಂದಿನ ಹಂತದಲ್ಲಿ ಫಲಾನುಭವಿಗಳ ಪತ್ತೆ ಅಗತ್ಯವಿದೆ ಎಂದು ತಿಳಿಸಿದರು. ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಲಾಗಿದೆ; ಹಗರಣದ ಹಣವನ್ನು ಚಿನ್ನ ಮತ್ತು ಬುಲಿಯನ್ ಆಗಿ ಪರಿವರ್ತಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಾಗೇಂದ್ರ ಹಾಗೂ ಅವರ ಸಹಚರರ ಪಾತ್ರವಿದ್ದು, ಕೆಲ ಬೋಗಸ್ ಕಂಪನಿಗಳೂ ಭಾಗಿಯಾಗಿವೆ ಎಂದು ತನಿಖಾಧಿಕಾರಿ ಹೇಳಿ, ಸಾಕ್ಷ್ಯಾಧಾರಗಳಿರುವ ಎರಡು ಸೂಟ್‌ಕೇಸ್ ದಾಖಲೆಗಳನ್ನು ಕೋರ್ಟ್‌ಗೆ ಪ್ರದರ್ಶಿಸಿದರು.

ಇದಕ್ಕೆ ಪ್ರತಿಯಾಗಿ ನಾಗೇಂದ್ರ ಪರ ವಕೀಲರು, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರವು ವೈಯಕ್ತಿಕವಾದದ್ದು; ಸಿಬಿಐ ಉಲ್ಲೇಖಿಸುತ್ತಿರುವ ಟೆಂಡರ್ ಪ್ರಕ್ರಿಯೆಗೆ ಈ ವ್ಯವಹಾರಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸಿದರು. ಇದೀಗ ಕೋರ್ಟ್ ಮಾಜಿ ಸಚಿವ ನಾಗೇಂದ್ರ ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಡ್ರಗ್ಸ್ ಡಿಲೀಂಗ್: ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

0

ಬೆಂಗಳೂರು:ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಡೀಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಚೆ ನಡುಡಿ ಹಾಗೂ ಆಕಾಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೇಗೂರು ವ್ಯಾಪ್ತಿಯಲ್ಲಿ ಹಾಗೂ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು, ಡ್ರಗ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಚಯಸ್ಥರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ–ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಬೆಲೆಗೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು,

ಆರೋಪಿಗಳಿಂದ ಸುಮಾರು 1 ಕೋಟಿ ರೂ. ಮೌಲ್ಯದ 101 ಗ್ರಾಂ ಕೊಕೇನ್ ಹಾಗೂ 481 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಡ್ರಗ್ ಜಾಲದ ಇನ್ನಿತರ ಸಂಪರ್ಕಗಳ ಕುರಿತು ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಲ್ಮೀಕಿ ಹಗರಣ ಕೇಸ್: ಮಾಜಿ ಸಚಿವ‌ ಬಿ.ನಾಗೇಂದ್ರಗೆ ಜಾಮೀನು ಮಂಜೂರು

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ ದೊಡ್ಡ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಸಿಬಿಐ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜ.13) ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ವಾದ–ಪ್ರತಿವಾದ ಆಲಿಸಿ ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿ, ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರ ಕುರಿತು ಸಿಐಡಿ ಹಾಗೂ ಇಡಿ ತನಿಖೆ ನಡೆಸಿರುವುದಾಗಿ ತಿಳಿಸಿದರು. ಹಗರಣದಿಂದ ಲಾಭ ಪಡೆದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದ್ದು, ಕೆಲವು ಮಾಹಿತಿಗಳನ್ನು ತೆರೆದ ನ್ಯಾಯಾಲಯದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಹಗರಣದ ಹಣವನ್ನು ಚಿನ್ನ ಮತ್ತು ಬುಲಿಯನ್ ರೂಪದಲ್ಲಿ ಪರಿವರ್ತಿಸಲಾಗಿದೆ. ಇದರ ಹಿಂದೆ ನಾಗೇಂದ್ರ ಹಾಗೂ ಅವರ ಸಹಚರರು ಭಾಗಿಯಾಗಿದ್ದಾರೆ. ಬೋಗಸ್ ಕಂಪನಿಗಳ ಬಳಕೆಯ ಬಗ್ಗೆ ಸಾಕ್ಷ್ಯಗಳಿವೆ ಎಂದು ತನಿಖಾಧಿಕಾರಿ ತಿಳಿಸಿ, ಕೋರ್ಟ್‌ಗೆ ಎರಡು ಸೂಟ್‌ಕೇಸ್‌ಗಳಷ್ಟು ದಾಖಲೆಗಳನ್ನು ಹಾಜರುಪಡಿಸಿದರು.

ನಾಗೇಂದ್ರ ಪರ ವಕೀಲರು ವಾದ ಮಂಡಿಸಿ, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ಹಣಕಾಸು ವ್ಯವಹಾರ ವೈಯಕ್ತಿಕವಾದದ್ದು. ಸಿಬಿಐ ಉಲ್ಲೇಖಿಸಿರುವ ಟೆಂಡರ್‌ಗಳಿಗೆ ಈ ವ್ಯವಹಾರಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಂಜಾ ದಾರಕ್ಕೆ ಬಲಿಯಾದ ಬೈಕ್ ಸವಾರ: ಸಂಕ್ರಾಂತಿಗೆ ಮಗಳನ್ನ ಕರೆತರಲು ಹೋಗುತ್ತಿದ್ದ ತಂದೆ ಮೃತ್ಯು

0

ಬೀದರ್: ಗಾಳಿಪಟಕ್ಕೆ ಬಳಸುವ ಅಪಾಯಕಾರಿ ಮಾಂಜಾ ದಾರ ಮತ್ತೊಂದು ಅಮಾಯಕ ಜೀವವನ್ನು ಬಲಿ ಪಡೆದಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಯನ್ನು ಮಾಂಜಾ ದಾರ ಕತ್ತರಿಸಿದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಬಂಬುಳಗಿ ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಹೊಸಮನಿ (48) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ, ಹುಮನಾಬಾದ್ ಪಟ್ಟಣದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಮನೆಗೆ ಕರೆತರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ತಾಳಮಡಗಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ಮಾಂಜಾ ದಾರ ಸಂಜೀವ್ ಅವರ ಕುತ್ತಿಗೆಗೆ ಸಿಲುಕಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಪರಿಣಾಮವಾಗಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಜೀವ್ ಕುಮಾರ್ ಹೊಸಮನಿ ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನ ತಂದೆಯಾಗಿದ್ದು, ನಾಲ್ಕೂ ಮಕ್ಕಳು ವಿದ್ಯಾಭ್ಯಾಸದಲ್ಲಿದ್ದಾರೆ. ಕುಟುಂಬದ ಮುಖ್ಯ ಆಧಾರವಾಗಿದ್ದ ಸಂಜೀವ್ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಮೃತದೇಹವನ್ನು ಮನ್ನಾಏಖೆಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಮತ್ತೆ ಮಾಂಜಾ ದಾರದ ಅಪಾಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

error: Content is protected !!