Home Blog Page 176

ಪಾಲಕರ ಆಚಾರ-ವಿಚಾರವೇ ಮಕ್ಕಳಿಗೆ ಆದರ್ಶ: ಮಂಜುನಾಥ ಅಕ್ಕಸಾಲಿ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಮಕ್ಕಳ ವ್ಯಕ್ತಿತ್ವ ವಿಕಸನ ಸಾಕಾರಗೊಳ್ಳಬೇಕಾದರೆ ಪಾಲಕರು ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಗದಗ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಮಂಜುನಾಥ ಅಕ್ಕಸಾಲಿ ಹೇಳಿದರು.
ಬೆಟಗೇರಿಯ ಕಾಳಿಕಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಾಸಿಕ ಚಿಂತನಗೋಷ್ಠಿ, ಮೌನೇಶ್ವರ ವಚನ ಪಠಣ, ಭಕ್ತರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದು, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ವೇದಿಕೆ ಒದಗಿಸಬೇಕು. ಇಷ್ಟವಿಲ್ಲದ ವಿಷಯಗಳನ್ನು ಓದಲು ಒತ್ತಾಯಿಸಬಾರದು. ಪ್ರತಿಯೊಬ್ಬ ಮಗುವಿನ ಪ್ರತಿಭೆ ವಿಭಿನ್ನವಾಗಿದ್ದು, ಎಲ್ಲರನ್ನೂ ಒಂದೇ ಮಾನದಂಡದಿಂದ ಅಳೆಯುವುದು ತಪ್ಪು ಎಂದು ಹೇಳಿದರು.
ಮಕ್ಕಳು ಸನ್ಮಾರ್ಗದಲ್ಲಿ ನಡೆದು ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕಾದರೆ ಪಾಲಕರ ಆಚಾರ-ವಿಚಾರ, ನಡೆ-ನುಡಿ ಹಾಗೂ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೊಯಲಾ ಇಂಗ್ಲಿಷ್ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ತನ್ವಿ ಪ್ರಸನ್ನ ಅರ್ಕಸಾಲಿ ಮೌನೇಶ್ವರ ವಚನ ಪಠಣದ ಮೂಲಕ ಗಮನ ಸೆಳೆದಳು. ಬಾಲವಿನಾಯಕ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷಾ ವಿಶ್ವನಾಥ ಕಮ್ಮಾರ ನೃತ್ಯ ಪ್ರದರ್ಶನ ನೀಡಿ ಭಕ್ತರನ್ನು ರಂಜಿಸಿದಳು.
ದೇವಸ್ಥಾನದ ಸಾಂಸ್ಕೃತಿಕ ವಿಭಾಗದ ಸಂಚಾಲಕ ವಿಶ್ವನಾಥ ಯ. ಕಮ್ಮಾರ, ವಿಜಯಕುಮಾರ ಬೆಂತೂರ, ಮಹೇಶ ಬಡಿಗೇರ ಸೇರಿದಂತೆ ಭಕ್ತರು ಕಾಳಿಕಾಸ್ತುತಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ ಮಾತನಾಡಿ, ಪ್ರತಿ ತಿಂಗಳು ನಡೆಯುವ ಇಂತಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಿ ಮೆರಗು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ಕುಟುಂಬಗಳನ್ನು ಗೌರವಿಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಮಹಿಳಾ ಮಂಡಳದ ಪದಾಧಿಕಾರಿಗಳು, ಟ್ರಸ್ಟ್ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ತ್ಯಾಗ, ಸಮರ್ಪಣೆ- ಮಾನವೀಯತೆಯ ಸಂದೇಶವೇ ಬಕ್ರೀದ್

ಮುಸ್ಲಿಮರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅಥವಾ ಈದುಲ್ ಅಝ್ಹಾವನ್ನು ವಿಶ್ವದಾದ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಸ್ಲಾಮೀ ಕ್ಯಾಲೆಂಡರಿನ ದುಲ್‌ಹಜ್ ತಿಂಗಳ 10ರಂದು ಆಚರಿಸಲಾಗುವ ಈ ಹಬ್ಬವು ತ್ಯಾಗ, ಸಮರ್ಪಣೆ, ದೇವಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಸಂಕೇತವಾಗಿದೆ.
ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕಿನ ಘಟನೆಗಳನ್ನು ಬಕ್ರೀದ್ ಹಬ್ಬ ನೆನಪಿಸುತ್ತದೆ. ಯಹೂದಿಗಳು, ಕ್ರೈಸ್ತರು ಹಾಗೂ ಮುಸ್ಲಿಮರು ಸಮಾನವಾಗಿ ಗೌರವಿಸುವ ಮಹಾನ್ ವ್ಯಕ್ತಿತ್ವವಾಗಿರುವ ಇಬ್ರಾಹೀಮ್ (ಅಬ್ರಾಹಂ) ಅವರು ಏಕದೇವತ್ವದ ಸಂದೇಶ ಸಾರಿದ ಪ್ರವಾದಿಯಾಗಿದ್ದರು. ಇರಾಕ್‌ನ ಉರ್ ನಗರದಲ್ಲಿ ಜನಿಸಿದ ಅವರು, ದುಷ್ಟ ರಾಜ ನಮ್ರೂದ್‌ನ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಸಮಾಜ ಸುಧಾರಣೆಯ ಹಾದಿ ಹಿಡಿದರು. ಅನೇಕ ಸಂಕಷ್ಟ, ಹಿಂಸೆ, ದೇಶಭ್ರಷ್ಟ ಪರಿಸ್ಥಿತಿಗಳ ನಡುವೆಯೂ ದೇವರ ಮಾರ್ಗದಿಂದ ಹಿಂದೆ ಸರಿಯಲಿಲ್ಲ.
ಪ್ರವಾದಿ ಇಬ್ರಾಹೀಮ್ (ಅ) ಅವರ ಬದುಕು ಅನೇಕ ಸತ್ವಪರೀಕ್ಷೆಗಳಿಂದ ಕೂಡಿತ್ತು. ವೃದ್ಧಾಪ್ಯದಲ್ಲಿ ಪತ್ನಿ ಹಾಜಿರಾ ಮತ್ತು ಪುಟ್ಟ ಮಗ ಇಸ್ಮಾಯಿಲ್ ಅವರನ್ನು ಅರೇಬಿಯಾದ ನಿರ್ಜನ ಮರುಭೂಮಿಯಲ್ಲಿ ಬಿಟ್ಟುಬರಬೇಕಾದ ಸಂದರ್ಭ ಎದುರಾದರೂ ದೇವಾಜ್ಞೆಗೆ ಶರಣಾದರು. ದಾಹದಿಂದ ಅಳುತ್ತಿದ್ದ ಮಗುವಿಗಾಗಿ ತಾಯಿ ಹಾಜಿರಾ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ನೀರಿಗಾಗಿ ಓಡಾಡಿದ ಘಟನೆ ಇಂದಿಗೂ ಹಜ್ ಯಾತ್ರೆಯ ಪ್ರಮುಖ ಆಚರಣೆಯಾಗಿದೆ. ಇದೇ ವೇಳೆ ಇಸ್ಮಾಯಿಲ್ ಅವರ ಕಾಲಿನ ಬಳಿಯಲ್ಲಿ ಉಕ್ಕಿಬಂದ ನೀರಿನ ಚಿಲುಮೆಯೇ ಪವಿತ್ರ ಝಮ್ ಝಮ್ ಎಂದು ಪ್ರಸಿದ್ಧಿಯಾಯಿತು.
ಇಬ್ರಾಹೀಮ್ (ಅ) ಅವರ ಪುತ್ರ ಪ್ರೀತಿ ಹಾಗೂ ದೇವಭಕ್ತಿಯನ್ನು ಪರೀಕ್ಷಿಸಲು ಅಲ್ಲಾಹನು ಪುತ್ರ ಇಸ್ಮಾಯಿಲ್ ಅವರನ್ನು ಬಲಿಕೊಡಬೇಕೆಂದು ಆದೇಶಿಸಿದನೆಂದು ಇಸ್ಲಾಮಿನ ಇತಿಹಾಸ ಹೇಳುತ್ತದೆ. ದೇವರ ಆಜ್ಞೆಗೆ ತಲೆಬಾಗಿದ ಇಬ್ರಾಹೀಮ್ (ಅ) ಪುತ್ರನನ್ನು ಬಲಿಕೊಡಲು ಮುಂದಾದಾಗ, ಅಲ್ಲಾಹನು ಟಗರನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸಿದನು. ಈ ಘಟನೆಯ ಸ್ಮರಣಾರ್ಥವೇ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ.
ಹಬ್ಬದ ದಿನ ಮುಸ್ಲಿಮರು ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್ ಮತ್ತು ಖುತ್ಬಾಗಳಲ್ಲಿ ಭಾಗವಹಿಸುತ್ತಾರೆ. ಹೊಸ ಉಡುಗೆ ತೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಬಂಧು-ಮಿತ್ರರ ಮನೆಗಳಿಗೆ ಭೇಟಿ ನೀಡುತ್ತಾರೆ. ಬಲಿ ಅರ್ಪಿಸಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ಹಂಚಿ, ಒಂದು ಭಾಗವನ್ನು ಬಡವರಿಗೆ ನೀಡುವ ಮೂಲಕ ಸಹೋದರತ್ವ ಮತ್ತು ಹಂಚಿಕೆ ಸಂಸ್ಕೃತಿಯನ್ನು ಈ ಹಬ್ಬ ಸಾರುತ್ತದೆ.
ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ; ಅದು ತ್ಯಾಗ, ದಾನಧರ್ಮ, ಸಹಾನುಭೂತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಸಾರುವ ಹಬ್ಬವಾಗಿದೆ.
— ಡಾ. ತಯಬಅಲಿ ಅ. ಹೊಂಬಳ, ಗದಗ

ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಯ ಟಕ್ಕರ್!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊಸ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿನೂತನ ಹೆಜ್ಜೆ ಇಟ್ಟಿದ್ದು, ಹೊಸದಾಗಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ₹1000 ಠೇವಣಿ ಇಡುವ ಘೋಷಣೆ ಮಾಡಿದೆ.
ಈ ವಿಶಿಷ್ಟ ಪ್ರಯತ್ನ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ.
1ರಿಂದ 5ನೇ ತರಗತಿ ಮಕ್ಕಳಿಗೆ ವಿಶೇಷ ಸೌಲಭ್ಯ
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಗೆ 1ರಿಂದ 5ನೇ ತರಗತಿಯವರೆಗೆ ದಾಖಲಾಗುವ ಪ್ರತಿಯೊಂದು ವಿದ್ಯಾರ್ಥಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ₹1000 ಠೇವಣಿ ಇಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ 10ನೇ ತರಗತಿ ಹಾಗೂ ಪಿಯುಸಿ ಶಿಕ್ಷಣಕ್ಕೆ ಇದು ಸಹಕಾರಿಯಾಗಲಿದೆ ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.
ಇದರ ಜೊತೆಗೆ ಉಚಿತ ಶಾಲಾ ಬ್ಯಾಗ್, ಟೈ-ಬೆಲ್ಟ್, ಶಾಲೆಯ ಹೆಸರುಳ್ಳ ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಸಹ ನೀಡಲು ಶಾಲೆ ಮುಂದಾಗಿದೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಾದರೂ ಇಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದ್ದು, ಟಿವಿ ಹಾಗೂ ಯೂಟ್ಯೂಬ್ ಆಧಾರಿತ ವಿಡಿಯೋ ಪಾಠಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಎಲ್ಲ ತರಗತಿಗಳಲ್ಲೂ ಫ್ಯಾನ್ ವ್ಯವಸ್ಥೆ ಇರುವುದರಿಂದ ಶಾಲೆ ಮಕ್ಕಳಿಗೆ ಆಕರ್ಷಕ ಶಿಕ್ಷಣ ವಾತಾವರಣ ಒದಗಿಸಿದೆ.
ಸರ್ಕಾರದಿಂದ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದರೂ ಹಲವು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಆದರೆ ಬೆಳ್ಳಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಮುದಾಯದ ಸಹಕಾರದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಹೊಸ ಪ್ರಯತ್ನ ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
“ಗ್ರಾಮದ ಸಮುದಾಯ ಮತ್ತು ಶಿಕ್ಷಕರ ಸಹಕಾರದಿಂದ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಈ ಯೋಜನೆ ರೂಪಿಸಲಾಗಿದೆ. ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ, ಶಾಲಾ ಬ್ಯಾಗ್, ಟೈ-ಬೆಲ್ಟ್, ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ.” 
ಗಿರೀಶ ಕೊಡಬಾಳ, ಮುಖ್ಯೋಪಾಧ್ಯಾಯರು
“ಶಾಲೆಯಲ್ಲಿ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ ಹಾಗೂ ಉಚಿತ ಶೈಕ್ಷಣಿಕ ಸಾಮಗ್ರಿ ನೀಡುತ್ತಿರುವುದು ಶಿಕ್ಷಣ ಮತ್ತು ದಾಖಲಾತಿ ಹೆಚ್ಚಿಸಲು ಮಾದರಿಯಾದ ಕಾರ್ಯಕ್ರಮ. ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರ ಇಚ್ಛಾಶಕ್ತಿ ಮತ್ತು ಸಮುದಾಯದ ಸಹಕಾರವೇ ದೊಡ್ಡ ಬಲ.”
ಆರ್.ಎಸ್. ಬುರಡಿ, ಉಪನಿರ್ದೇಶಕರು

ಸ್ವಾರ್ಥದ ಯುಗದಲ್ಲಿ ತ್ಯಾಗದ ಸಂದೇಶ ಹೊತ್ತ ಬಕ್ರೀದ್

ಮಾನವ ಜೀವನದಲ್ಲಿ ಹಬ್ಬಗಳು ಕೇವಲ ಸಂಭ್ರಮದ ದಿನಗಳಲ್ಲ; ಅವು ಸಮಾಜದ ಮೌಲ್ಯಗಳನ್ನು ನೆನಪಿಸುವ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಅಂತಹ ಪವಿತ್ರ ಹಬ್ಬಗಳಲ್ಲಿ ಇಸ್ಲಾಂ ಧರ್ಮದ ಮಹತ್ವದ ಹಬ್ಬವಾದ ಬಕ್ರೀದ್ ಅಥವಾ ಈದ್-ಉಲ್-ಅಝ್ಹಾ ವಿಶಿಷ್ಟ ಸ್ಥಾನ ಪಡೆದಿದೆ. ತ್ಯಾಗ ಮತ್ತು ಬಲಿದಾನ ಎಂಬ ಮಹಾನ್ ಮೌಲ್ಯಗಳ ಮೇಲೆ ನಿಂತಿರುವ ಈ ಹಬ್ಬವು ಆತ್ಮಶುದ್ಧಿ, ಮಾನವೀಯತೆ ಮತ್ತು ಸಮಾಜದ ಹೊಣೆಗಾರಿಕೆಯ ಸಂದೇಶ ಸಾರುತ್ತದೆ.
ಬಕ್ರೀದ್ ಹಬ್ಬದ ಮೂಲದಲ್ಲಿ ಪ್ರವಾದಿ ಹಜರತ್ ಇಬ್ರಾಹಿಂ (ಅ) ಅವರ ಅಪಾರ ಭಕ್ತಿ ಮತ್ತು ತ್ಯಾಗದ ಸಂದೇಶ ಅಡಗಿದೆ. ಅಲ್ಲಾಹನ ಆದೇಶಕ್ಕೆ ಶರಣಾಗಿ ತಮ್ಮ ಪ್ರಿಯ ಪುತ್ರನನ್ನೇ ಬಲಿಕೊಡಲು ಸಿದ್ಧರಾದ ಅವರ ನಿಷ್ಠೆ ಇಡೀ ಮಾನವಕುಲಕ್ಕೆ ಆದರ್ಶವಾಗಿದೆ. ಕೊನೆಗೆ ಅಲ್ಲಾಹ ಅವರು ಅವರ ವಿಧೇಯತೆಯನ್ನು ಸ್ವೀಕರಿಸಿ ಪುತ್ರನ ಬದಲು ಪ್ರಾಣಿಯನ್ನು ಬಲಿಯಾಗಿ ಒಪ್ಪಿಕೊಂಡ ಘಟನೆಯು ತ್ಯಾಗದ ಅತ್ಯುನ್ನತ ಸಂಕೇತವಾಗಿ ಉಳಿದಿದೆ.
ಈ ಹಬ್ಬ ನಮಗೆ ಕಲಿಸುವುದು ಕೇವಲ ಪ್ರಾಣಿಯ ಬಲಿ ಅಲ್ಲ; ಅಹಂಕಾರ, ದ್ವೇಷ, ದುರಾಸೆ ಮತ್ತು ಸ್ವಾರ್ಥವನ್ನು ತ್ಯಜಿಸುವುದೇ ನಿಜವಾದ ಬಲಿದಾನ ಎಂಬ ಸತ್ಯ. ಇಂದಿನ ಸಮಾಜದಲ್ಲಿ ಹಣ, ಅಧಿಕಾರ ಮತ್ತು ಸ್ವಾರ್ಥವೇ ಮುಖ್ಯವಾಗುತ್ತಿರುವ ಸಂದರ್ಭದಲ್ಲಿ ಬಕ್ರೀದ್ ಮನುಷ್ಯನಿಗೆ ಮಾನವೀಯತೆಯ ದಾರಿ ತೋರಿಸುತ್ತದೆ.
ಬಕ್ರೀದ್ ಹಬ್ಬದಲ್ಲಿ ಬಲಿಯಾದ ಮಾಂಸವನ್ನು ಕುಟುಂಬ, ಸಂಬಂಧಿಕರು ಮತ್ತು ಬಡವರ ನಡುವೆ ಹಂಚುವ ಪದ್ಧತಿ ಇದೆ. ಇದು ಸಮಾನತೆ ಮತ್ತು ಸಹಾನುಭೂತಿಯ ಮಹಾನ್ ಸಂದೇಶವಾಗಿದೆ. ಹಸಿದವನ ಹೊಟ್ಟೆ ತುಂಬಿದಾಗಲೇ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬ ಮಾನವೀಯ ಮೌಲ್ಯ ಇದರಲ್ಲಿ ಅಡಗಿದೆ.
ಇಂದು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಮತ್ತು ವಿಭಜನೆ ಹೆಚ್ಚಾಗುತ್ತಿರುವುದು ವಿಷಾದನೀಯ. ಆದರೆ ನಿಜವಾದ ಧರ್ಮ ಮನುಷ್ಯನನ್ನು ವಿನಯಶೀಲನನ್ನಾಗಿ, ಸಹೃದಯನನ್ನಾಗಿ ಮಾಡಬೇಕು. ಬಕ್ರೀದ್ ಹಬ್ಬವು ಧರ್ಮಗಳ ನಡುವೆ ಸೌಹಾರ್ದ, ಸಹಬಾಳ್ವೆ ಮತ್ತು ಸಹೋದರತ್ವ ಬೆಳೆಸುವ ಸಂದೇಶ ನೀಡುತ್ತದೆ.
ಪ್ರಸ್ತುತ ಯುವ ಪೀಳಿಗೆ ಯಶಸ್ಸು ಮತ್ತು ಹಣದ ಹಿಂದೆ ಓಡುತ್ತಿರುವ ಸಂದರ್ಭದಲ್ಲಿ ಸಮಾಜದ ಬಗ್ಗೆ ಹೊಣೆಗಾರಿಕೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ದೇಶಕ್ಕೆ ಇಂದು ಬೇಕಾಗಿರುವುದು ತ್ಯಾಗ ಮನೋಭಾವದ ಯುವಕರು. ಕುಟುಂಬ, ಸಮಾಜ ಮತ್ತು ದೇಶಕ್ಕಾಗಿ ದುಡಿಯುವ ಮನಸ್ಸು ಬೆಳೆದಾಗ ಮಾತ್ರ ನಿಜವಾದ ಧರ್ಮ ಉಳಿಯುತ್ತದೆ.
ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಅಲ್ಲ; ಅದು ಮನುಷ್ಯನೊಳಗಿನ ಮಾನವೀಯತೆಯನ್ನು ಎಬ್ಬಿಸುವ ಆತ್ಮಪರಿಶೀಲನೆಯ ಹಬ್ಬ. ತ್ಯಾಗ ಮತ್ತು ಬಲಿದಾನದಿಂದಲೇ ಧರ್ಮದ ಹಾದಿ ಪವಿತ್ರವಾಗುತ್ತದೆ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.
-ಸಿಕಂದರ ಎಂ.ಆರಿ
ಪತ್ರಕರ್ತರು/ವಕೀಲರು

“ರಾಜೀನಾಮೆ ನೀಡಬೇಡಿ”!ಸಿಎಂ ಸಿದ್ದರಾಮಯ್ಯಗೆ ವಾಟಾಳ್ ನಾಗರಾಜ್ ಮನವಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡಬಾರದೆಂದು ವಿನಂತಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ವಾಟಾಳ್ ನಾಗರಾಜ್, “ಯಾವ ಕಾರಣಕ್ಕೂ ನೀವು ರಾಜೀನಾಮೆ ನೀಡಬಾರದು, ನೀವು ಅಧಿಕಾರದಲ್ಲಿದ್ದದ್ದು ಸಂತೋಷ ತಂದಿದೆ” ಎಂದು ಹೇಳಿ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯೆ ನೀಡಿ ಮುಂದೆ ಸಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿವೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ಬಳಿಕ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರ ಆಪ್ತರು ಹಾಗೂ ಬೆಂಬಲಿಗರು ಸಭೆಗಳನ್ನು ನಡೆಸುತ್ತಿರುವುದು ಗಮನ ಸೆಳೆದಿದೆ.

ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ವಾಟಾಳ್ ನಾಗರಾಜ್ ಅವರ ಭೇಟಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗುತ್ತದೆ ಎಂದು ಅವರು ಈ ಹಿಂದೆ ಹೇಳಿದ್ದನ್ನು ಮತ್ತೆ ಒತ್ತಿಹೇಳಿದ್ದಾರೆ.

ಜಾತಿಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ: ಮುಸ್ಲಿಂ ಸಮುದಾಯ ನಂ.1 ಜಾತಿ! ರಾಜ್ಯ ರಾಜಕೀಯದಲ್ಲಿ ಸಂಚಲನ

ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಅಧಿಕೃತವಾಗಿ ಸ್ವೀಕರಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ವರದಿಯನ್ನು ಸಿಎಂಗೆ ಸಲ್ಲಿಸಿದರು. ಸುಮಾರು 300 ಪುಟಗಳಿರುವ ಈ ವರದಿ ದೀರ್ಘಕಾಲದ ಸಮೀಕ್ಷೆ ಆಧಾರದಲ್ಲಿ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯ ಪ್ರಕಾರ ರಾಜ್ಯದ ವಿವಿಧ ಸಮುದಾಯಗಳ ಜನಸಂಖ್ಯೆ ವಿವರಗಳು ಉಲ್ಲೇಖವಾಗಿದ್ದು, ಮುಸ್ಲಿಂ ಸಮುದಾಯ ಶೇ.14ರಷ್ಟು (75 ರಿಂದ 80 ಲಕ್ಷ ಜನಸಂಖ್ಯೆ) ಅತಿ ದೊಡ್ಡ ಸಮುದಾಯವಾಗಿದೆ ಎಂದು ಹೇಳಲಾಗಿದೆ. ನಂತರ ವೀರಶೈವ–ಲಿಂಗಾಯತ ಶೇ.11ರಷ್ಟು (60 ರಿಂದ 65 ಲಕ್ಷ), ಒಕ್ಕಲಿಗರು ಶೇ.10ರಷ್ಟು (55 ರಿಂದ 60 ಲಕ್ಷ) ಹಾಗೂ ಕುರುಬರು ಶೇ.8ರಷ್ಟು (40 ರಿಂದ 45 ಲಕ್ಷ) ಜನಸಂಖ್ಯೆ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಸಲ್ಲಿಕೆ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ಸಮೀಕ್ಷೆ ಸಂಪೂರ್ಣವಾಗಿ ನಡೆಸಲಾಗಿದ್ದು, ಭಾಗವಹಿಸದವರ ಅಂಕಿಅಂಶಗಳನ್ನು ಸೇರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ವರದಿ ತಾಂತ್ರಿಕ ಹಾಗೂ ಭಾಷಾಂತರ ಕಾರ್ಯದಿಂದಾಗಿ ವಿಳಂಬವಾಗಿದೆ ಎಂದೂ ಅವರು ಹೇಳಿದ್ದಾರೆ.

ಜಾತಿಗಣತಿ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಟ್ಕಳದಲ್ಲಿನ ಅಶಾಂತಿಗೆ ಸರ್ಕಾರದ ನೀತಿಗಳೇ ಕಾರಣ! ಕಾಗೇರಿ ಗಂಭೀರ ಆರೋಪ

ಕಾರವಾರ: ಭಟ್ಕಳದ ಮುರಿನಕಟ್ಟೆ ಧ್ವಂಸ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ ಮಾಡಿದ್ದಾರೆ.

ಭಟ್ಕಳದಲ್ಲಿ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಗೆ ಸರ್ಕಾರದ ನೀತಿಗಳೇ ಕಾರಣ. ಅಲ್ಪಸಂಖ್ಯಾತರ ಮೇಲಿನ ಕೆಲವು ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದೇ ಇಂತಹ ಕೃತ್ಯಗಳಿಗೆ ಪ್ರೇರಣೆ ನೀಡಿದೆ ಎಂದು ದೂರಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ ಅವರು, ಮುರಿನಕಟ್ಟೆ ಸ್ಥಳಾಂತರ ವಿಚಾರದಲ್ಲಿ ಯಾವುದೇ ಕೋಮು ಭಾವನೆಗಳಿಗೆ ನೋವುಂಟಾಗಿಲ್ಲ, ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ದುಃಖದ ವಾತಾವರಣವಿತ್ತು. ಇಂತಹ ಸಂದರ್ಭದಲ್ಲೇ ಸಾವಿರಾರು ಜನರು ಸೇರಿ ಕಟ್ಟೆ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಪೊಲೀಸರ ಮೇಲೆಯೂ ಹಲ್ಲೆ ನಡೆದಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಗೇರಿ ಆಗ್ರಹಿಸಿದ್ದಾರೆ. ಜೊತೆಗೆ ಈ ಘಟನೆಯನ್ನು ಖಂಡಿಸಿ ಮೇ 29ರಂದು ಭಟ್ಕಳದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಹೃದಯವಿದ್ರಾವಕ ದುರಂತ! ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಬೈರಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ರಸ್ತೆಬದಿ ನಿಂತಿದ್ದ ಲಾರಿಗೆ ಅತಿವೇಗವಾಗಿ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ಬುಲೆರೋ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಬಳ್ಳಾರಿ ಮೂಲದ ವೆಂಕಟೇಶ್(28), ಶಿವಮ್ಮ(25), ಮೀನಾಕ್ಷಿ(16), ಪೂಜಾ(4) ಹಾಗೂ ಪರುಶುರಾಮ(1.5) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ಸ್ಥಳೀಯರಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.

ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರನ್ನು ಮೊಳಕಾಲ್ಮೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಮೊಳಕಾಲ್ಮೂರು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಔಷಧಿ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ: ವೈದ್ಯರ ಸಲಹೆ ಕಡ್ಡಾಯ!

ಅನಾರೋಗ್ಯ ಬಂದಾಗ ಔಷಧಿ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಆದರೆ ಔಷಧಿ ಸೇವನೆಯ ವೇಳೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಫಾರ್ಮಾಸಿಸ್ಟ್ ನರೇಂದ್ರ ಕುಮಾರ್ ಶರ್ಮಾ ಅವರ ಪ್ರಕಾರ, ಸ್ವಯಂ ಔಷಧಿ ಸೇವನೆ, ಡೋಸ್ ಮಧ್ಯದಲ್ಲೇ ನಿಲ್ಲಿಸುವುದು ಮತ್ತು ವೈದ್ಯರ ಸಲಹೆ ಇಲ್ಲದೆ ಔಷಧಿ ಬದಲಾಯಿಸುವುದು ಅಪಾಯಕಾರಿಯಾಗಬಹುದು. ವಿಶೇಷವಾಗಿ ಆಂಟಿಬಯೋಟಿಕ್‌ಗಳನ್ನು ಸರಿಯಾಗಿ ಬಳಸದಿದ್ದರೆ “ಸೂಪರ್‌ಬಗ್” ಎಂಬ ಪರಿಸ್ಥಿತಿ ಉಂಟಾಗಿ ಔಷಧಿಗಳು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗದೇ ಹೋಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳು:

ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ:
ಜ್ವರ, ಶೀತ, ಕೆಮ್ಮು ಬಂದಾಗ ಹಲವರು ತಾವೇ ಔಷಧಿ ತೆಗೆದುಕೊಳ್ಳುತ್ತಾರೆ. ಇದು ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೋರ್ಸ್ ಪೂರ್ಣಗೊಳಿಸದೇ ಔಷಧಿ ನಿಲ್ಲಿಸುವುದು:
ಆರೋಗ್ಯ ಸ್ವಲ್ಪ ಸುಧಾರಿಸಿದ ತಕ್ಷಣ ಆಂಟಿಬಯೋಟಿಕ್ ನಿಲ್ಲಿಸುವುದರಿಂದ ಸೋಂಕು ಮತ್ತೆ ತೀವ್ರವಾಗುವ ಅಪಾಯ ಹೆಚ್ಚುತ್ತದೆ.

ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸದಿರುವುದು:
ಔಷಧಿ ಸಮಯ ತಪ್ಪಿಸುವುದು, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅಥವಾ ಎಕ್ಸ್‌ಪೈರಿ ದಿನಾಂಕ ಪರಿಶೀಲಿಸದೇ ಸೇವಿಸುವುದು ಅಪಾಯಕಾರಿ ಎಂದು ಹೇಳಲಾಗಿದೆ.

ಪೇನ್‌ಕಿಲ್ಲರ್‌ಗಳ ಅತಿಯಾದ ಬಳಕೆ ಅಪಾಯಕಾರಿಯೇ?

ತಜ್ಞರ ಪ್ರಕಾರ, ನೋವು ನಿವಾರಕ ಔಷಧಿಗಳನ್ನು ಅತಿಯಾಗಿ ಬಳಸುವುದರಿಂದ ಕಿಡ್ನಿ ಮತ್ತು ಲಿವರ್ ಮೇಲೆ ಹಾನಿ ಉಂಟಾಗಬಹುದು. ಇದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಜನರಿಕ್ ಮತ್ತು ಬ್ರಾಂಡೆಡ್ ಔಷಧಿ ವ್ಯತ್ಯಾಸ:

ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಳಲ್ಲಿ ಇರುವ ಸಕ್ರಿಯ ಅಂಶ (salt) ಒಂದೇ ಆಗಿರುತ್ತದೆ. ವ್ಯತ್ಯಾಸ ಕೇವಲ ಕಂಪನಿ ಮತ್ತು ಬೆಲೆಯಲ್ಲಿ ಮಾತ್ರ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯರ ಸಲಹೆಯೊಂದಿಗೆ ಸರಿಯಾದ ರೀತಿಯಲ್ಲಿ ಬಳಸಿದರೆ ಜನರಿಕ್ ಔಷಧಿಯೂ ಪರಿಣಾಮಕಾರಿಯೇ ಎಂದು ಅವರು ಹೇಳಿದ್ದಾರೆ.

ರಾಜ್ಯದ ಹಲವೆಡೆ ನಾಳೆ ಗುಡುಗು ಸಹಿತ ಮಳೆ! 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ!

ಬೆಂಗಳೂರು: ಕರ್ನಾಟಕದಲ್ಲಿ ನಾಳೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಅರಬ್ಬಿ ಸಮುದ್ರದಿಂದ ತೇವಾಂಶಯುಕ್ತ ಗಾಳಿಯ ಹರಿವು ಬಲವಾಗುತ್ತಿರುವುದು ಹಾಗೂ ಮುಂಗಾರು ಪೂರ್ವ ಹವಾಮಾನ ಬದಲಾವಣೆಗಳು ಮಳೆಯ ಪ್ರಮಾಣ ಹೆಚ್ಚಿಸಲು ಕಾರಣವಾಗಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಹವಾಮಾನ ಕೇಂದ್ರದ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.

ಮೇ 29ರವರೆಗೆ ಉತ್ತರ ಒಳನಾಡಿನಲ್ಲಿ ಗಂಟೆಗೆ 50–60 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನಲ್ಲಿಯೂ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ ಎಂದು ಮಾಹಿತಿ ನೀಡಲಾಗಿದೆ. ಮೇ 29ರಿಂದ ಮೇ 31ರವರೆಗೆ ಗಾಳಿಯ ವೇಗ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಕೆಲವೆಡೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.