Home Blog Page 179

ಬೆಂಗಳೂರಿನಲ್ಲಿ‌ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಆರೋಪಿ ಅರೆಸ್ಟ್.!

0

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಎಸ್ಕೇಪ್ ಆರೋಪಿಯನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಯಶವಂತ್(26) ಬಂಧಿತ ಆರೋಪಿಯಾಗಿದ್ದು,  ಡಿಸೆಂಬರ್ 24 ರಂದು ಈ ಘಟನೆ ಸಂಭವಿಸಿತ್ತು. ಧನಲಕ್ಷೀ ಎಂಬ ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ಹೊಂಚು ಹಾಕಿ ಕುಳಿತಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಸರಗಳ್ಳನ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೇ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಯಶವಂತ್‌ನಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಶವಂತ್ ಈ ಹಿಂದೆ ಮೈಸೂರಿನ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಚೈನ್ ಸ್ನಾಚಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಝೈದ್ ಖಾನ್ ನೋಡಲು ಬಂದ ಅಭಿಮಾನಿಗೆ ಅಪಘಾತ: ಆಸ್ಪತ್ರೆಗೆ ದಾಖಲು

ಕಲ್ಟ್ ಚಿತ್ರದ ಪ್ರಮೋಷನ್ ಶೋ ಸಂಭ್ರಮವಾಗಿ ಆರಂಭವಾದರೂ, ಕೊನೆಯಲ್ಲಿ ಅದು ಆತಂಕದ ಕ್ಷಣಗಳಿಗೆ ಕಾರಣವಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಝೈದ್ ಖಾನ್ ಅಭಿಮಾನಿಗೆ ಅಪಘಾತ ಸಂಭವಿಸಿ, ಗಂಭೀರ ಗಾಯಗಳಾಗಿವೆ.

ಕಾರ್ಯಕ್ರಮದಲ್ಲಿ ನಾಯಕ ನಟ ಝೈದ್ ಖಾನ್ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸುತ್ತಿದ್ದರು. ಅಭಿಮಾನಿಗಳ ಭಾರೀ ಜನಸಂದಣಿ ಮಧ್ಯೆ, ಅವರನ್ನು ಹತ್ತಿರದಿಂದ ನೋಡಲು ಮುಂದಾದ ಶಫೀಹುಲ್ಲಾ ಎಂಬ ಯುವಕ ಕಾಲು ಜಾರಿ ನೆಲಕ್ಕುರುಳಿದ್ದಾನೆ. ಪರಿಣಾಮವಾಗಿ ಅವನ ಕಾಲು ಮುರಿದಿದೆ ಎನ್ನಲಾಗಿದೆ.

ಈ ಭರ್ಜರಿ ಕಾರ್ಯಕ್ರಮವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ನೆಹರೂ ಕ್ರೀಡಾಂಗಣದಲ್ಲಿ ಚಿತ್ರತಂಡ, ಕಾರ್ಯಕರ್ತರು ಮತ್ತು ಅಪಾರ ಅಭಿಮಾನಿಗಳು ಸೇರಿದ್ದರು. ಜನಸಂದಣಿ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ತಕ್ಷಣವೇ ಅಲ್ಲಿದ್ದ ಕಾರ್ಯಕರ್ತರು ತಕ್ಷಣ ಸ್ಪಂದಿಸಿ, ಶಫೀಹುಲ್ಲಾರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅಭಿಮಾನಿಗಳ ಸಂಭ್ರಮದ ನಡುವೆ ನಡೆದ ಈ ಅವಘಡ, ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದಂತಾಯಿತು.

ಇದು ನಮ್ಮ ಜೀವನ, ನಮ್ಮ ಖಾಸಗಿ ವಿಷಯ. ಇದನ್ನು ವಿವರಿಸುವ ಅಗತ್ಯ ನನಗೆ ಇಲ್ಲ: ನಟಿ ಹೇಮಾಮಾಲಿನಿ

ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅವರ ನಿಧನದ ಬಳಿಕ ಡಿಯೋಲ್ ಕುಟುಂಬ ಮೌನ ನೋವಿನಲ್ಲಿ ಮುಳುಗಿದೆ. ಆದರೆ ಇದೀಗ ಹೇಮಾ ಮಾಲಿನಿ ತಮ್ಮ ನೋವನ್ನು ಮೊದಲ ಭಾರಿಗೆ ತೆರೆದಿಟ್ಟಿದ್ದಾರೆ.

ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ ಹೇಮಾ ಮಾಲಿನಿ, “ಧರ್ಮೇಂದ್ರ ಅವರ ಸಾವು ನನ್ನ ಜೀವನದ ಅತಿದೊಡ್ಡ ಶೂನ್ಯ. ಆ ನೋವು ಇನ್ನೂ ನನ್ನ ಮನಸ್ಸನ್ನು ಕಾಡುತ್ತಿದೆ. ಎಲ್ಲರೂ ನಾನು ಬಲಶಾಲಿ ಎನ್ನುತ್ತಾರೆ. ಹೌದು, ನಾನು ಬಲಶಾಲಿ… ಆದರೆ ಕೆಲ ಕ್ಷಣಗಳಲ್ಲಿ ಆ ನೋವು ಮಿತಿ ಮೀರುತ್ತದೆ” ಎಂದು ಹೇಳಿದ್ದಾರೆ.

ಧರ್ಮೇಂದ್ರ ಅವರ ಕೊನೆಯ ದಿನಗಳ ನೆನಪನ್ನು ಹಂಚಿಕೊಂಡ ಅವರು, “ಅವರ ಆರೋಗ್ಯ ಸ್ವಲ್ಪ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮನೆಗೆ ತಂದಾಗ ಅವರು ಚೆನ್ನಾಗಿಯೇ ಇದ್ದರು. ಅವರು ಇನ್ನೂ ನಮ್ಮ ಜೊತೆ ಇರುತ್ತಾರೆ ಎಂದು ನಂಬಿದ್ದೆವು. ಹಿಂದೆಯೂ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಅವರು ನಗುತ್ತಾ ವಾಪಸ್ ಬಂದಿದ್ದರು. ಈ ಬಾರಿ ಕೂಡ ಅದೇ ಆಗಬಹುದು ಎಂದು ಭಾವಿಸಿದ್ದೆವು. ಆದರೆ ಅದು ಆಗಲಿಲ್ಲ” ಎಂದು ನೋವಿನಿಂದ ಹೇಳಿದರು.

ಇನ್ನು ಕುಟುಂಬ ಸಂಬಂಧದ ಬಗ್ಗೆ ಹರಡುತ್ತಿರುವ ಗಾಸಿಪ್‌ಗಳ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ಅವರು, “ಜನರಿಗೆ ಗಾಸಿಪ್ ಬೇಕು. ನಮ್ಮ ನಡುವೆ ಏನೋ ಸಮಸ್ಯೆ ಇದೆ ಎಂದು ಜನರು ಯಾಕೆ ಭಾವಿಸುತ್ತಾರೆ ಗೊತ್ತಿಲ್ಲ. ಇದು ನಮ್ಮ ಜೀವನ, ನಮ್ಮ ಖಾಸಗಿ ವಿಷಯ. ಇದನ್ನು ವಿವರಿಸುವ ಅಗತ್ಯ ನನಗೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಧರ್ಮೇಂದ್ರ ಅವರ ಜೀವನದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಹೇಮಾ ಮಾಲಿನಿ, “ಅವರು ಬಯಸಿದ್ದ ಎಲ್ಲವನ್ನೂ ಜೀವನದಲ್ಲಿ ಪಡೆದರು. ಲಕ್ಷಾಂತರ ಜನರು ಅವರನ್ನು ಪ್ರೀತಿಸುತ್ತಾರೆ. ಇದು ಅವರ ಜೀವನದ ದೊಡ್ಡ ಸಾಧನೆ” ಎಂದು ಹೇಳಿದ್ದಾರೆ.

ಶಿಕಾರಿಪುರದ ಶಾಲೆಯಲ್ಲಿ ಶಿಕ್ಷಕ ಆತ್ಮಹತ್ಯೆ; ಆತಂಕಗೊಂಡ ಸ್ಟೂಡೆಂಟ್ಸ್!

0

ಶಿಕಾರಿಪುರ:- ತಾಲ್ಲೂಕಿನ ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಧನಂಜಯ (51) ಅವರು ಮಂಗಳವಾರ ಶಾಲಾ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೆಳಿಗ್ಗೆ ಶಾಲೆಗೆ ಆಗಮಿಸಿ ಪಾಠ ಮಾಡಿದ ಬಳಿಕ ವಿರಾಮ ಸಮಯದಲ್ಲಿ ದಾಖಲೆ ಬರೆಯುವುದಾಗಿ ತಿಳಿಸಿ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಬಾಗಿಲು–ಕಿಟಕಿ ಮುಚ್ಚಿಕೊಂಡಿದ್ದಾರೆ. ಬಳಿಕ ಅನುಮಾನಗೊಂಡ ಇತರೆ ಶಿಕ್ಷಕರು ಬಾಗಿಲು ತೆರೆಯಲು ಪ್ರಯತ್ನಿಸಿ ವಿಫಲರಾದರು. ಮತ್ತೊಂದು ಕಿಟಕಿಯನ್ನು ತೆರೆಯುವಾಗ ಧನಂಜಯ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಗ್ರಾಮಸ್ಥರು ಹಾಗೂ ಶಿಕ್ಷಕರು ಸೇರಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಜೀನಹಳ್ಳಿ ಗ್ರಾಮದ ಮೂಲ ನಿವಾಸಿಯಾಗಿದ್ದ ಧನಂಜಯ ಅವರು ಹೊನ್ನಾಳಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ದುರಂತ; ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು

0

ಹಾಸನ:- ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜರುಗಿದೆ.

45 ವರ್ಷದ ಪ್ರವೀಣ್ ಮೃತ ವ್ಯಕ್ತಿ. ಮೃತ ಪ್ರವೀಣ್, ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್ ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಜ.12ರ ಸಂಜೆ ಅಂಗಡಿಯಲ್ಲಿ ವರ್ತಕರಿಗೆ ವಸ್ತುಗಳನ್ನು ನೀಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಅಂಗಡಿಯಲ್ಲಿದ್ದ ಅವರ ಪುತ್ರ ಪ್ರವೀಣ್ ಅವರ ಎದೆಯನ್ನು ಒತ್ತಿದ್ದಾನೆ. ಆದರೆ ಪ್ರವೀಣ್ ತಮ್ಮ ಅಂಗಡಿಯಲ್ಲೇ ಉಸಿರು ಚೆಲ್ಲಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ’; ರಾಹುಲ್ ಭೇಟಿ ಬೆನ್ನಲ್ಲೇ ಸಿಎಂ ಆಗುವ ಸುಳಿವು ಕೊಟ್ರಾ ಡಿಕೆಶಿ?

0

ಬೆಂಗಳೂರು:- ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಮಾರ್ಮಿಕ ಸಂದೇಶ ಪ್ರಕಟಿಸಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ನೀವೇನು ಚಿಂತೆ ಮಾಡಬೇಡಿ. ನಿಮ್ಮನ್ನು ಶೀಘ್ರವೇ ದೆಹಲಿಗೆ ಕರೆಸಿಕೊಳ್ಳುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಮೈಸೂರಿನಲ್ಲಿ ಹೈಕಮಾಂಡ್ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಒಂದನ್ನು ಹಂಚಿಕೊಂಡಿದ್ದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಸಿಎಂ ಆಗುವ ಸುಳಿವು ಕೊಟ್ಟರಾ ಡಿಸಿಎಂ ಎಂಬ ಪ್ರಶ್ನೆಯೂ ಮೂಡಿದೆ.

ಇಂದು ಬೆಳಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಡಿಕೆ ಶಿವಕುಮಾರ್, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಸಿಎಂ ಸ್ಥಾನದ ಚರ್ಚೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಿಗ್ ಹಿಂಟ್ ಕೊಟ್ಟರಾ ಎಂಬ ಪ್ರಶ್ನೆ ಮೂಡಿಸಿದೆ.

ಡಿಕೆ ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಹೇಳಿದ್ದೇನು?

ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸೈಡ್​ಗೆ ಕರೆದುಕೊಂಡು ಹೋಗಿದ್ದ ಡಿಕೆ ಶಿವಕುಮಾರ್ ತುಸು ಹೊತ್ತು ಗಂಭೀರವಾಗಿ ಚರ್ಚಿಸುತ್ತಿರುವುದು ಕಂಡುಬಂದಿತ್ತು. ಅದಾದ ನಂತರ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಜತೆಗೂ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲೂ ಸಂಚಲನ ಮೂಡಿಸಿತ್ತು. ಇದೀಗ, ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಹಂಚಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಒಣ ಹವೆ, ಬೆಂಗಳೂರಿಲ್ಲಿ ಚಳಿಯಬ್ಬರ; ಇಂದಿನ ಹವಾಮಾನ ಹೀಗಿದೆ!

0

ಬೆಂಗಳೂರು:- ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ತೀವ್ರ ಚಳಿಯೊಂದಿಗೆ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು ಮುಸುಕಿದ ಶೀತ ವಾತಾವರಣ ಇರಲಿದ್ದು, ಸಾರ್ವಜನಿಕರು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ವರ್ಷಾಂತ್ಯದವರೆಗೂ ರಾಜ್ಯದಲ್ಲಿ ಒಣ ಹವಾಮಾನವೇ ಮುಂದುವರಿಯುವ ಸಾಧ್ಯತೆ ಇದ್ದು, ಹೊಸ ವರ್ಷದ ವೇಳೆಗೆ ಮಳೆಯ ಸೂಚನೆ ಕಾಣಿಸಿಕೊಳ್ಳಬಹುದಾಗಿದೆ.

ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಳಿಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹಿನ್ನೆಲೆ ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ಆಹಾರ ಸೇವಿಸುವುದು ಹಾಗೂ ತಕ್ಕಮಟ್ಟಿನ ಆರೈಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಆರ್‌ಸಿಬಿ ಕಾಲ್ತುಳಿತ ಎಫೆಕ್ಟ್: ಲಾಲ್‌ಬಾಗ್ ಫ್ಲವರ್ ಶೋಗೆ ಬಿಗಿ ಭದ್ರತೆ, ಹೊಸ ರೂಲ್ಸ್ ಜಾರಿ!

0

ಬೆಂಗಳೂರು: ಆರ್‌ಸಿಬಿ ಕಾಲ್ತುಳಿತ ದುರಂತದಿಂದ ಎಚ್ಚೆತ್ತು, ಈ ಬಾರಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಪೊಲೀಸ್ ಮತ್ತು ತೋಟಗಾರಿಕೆ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.

ಗಣರಾಜ್ಯೋತ್ಸವ ಪ್ರಯುಕ್ತ 219ನೇ ಫಲಪುಷ್ಪ ಪ್ರದರ್ಶನ ಇಂದಿನಿಂದ ಜನವರಿ 26ರವರೆಗೆ ನಡೆಯಲಿದ್ದು, ಸುಮಾರು 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಾಧ್ಯತೆ ಇದೆ. ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಜನಸಂದಣಿ ಹೆಚ್ಚುವ ನಿರೀಕ್ಷೆ ಹಿನ್ನೆಲೆ ಎಂಟ್ರಿ–ಎಕ್ಸಿಟ್ ವ್ಯವಸ್ಥೆಗೆ ವಿಶೇಷ ಗಮನ ನೀಡಲಾಗಿದೆ.

ಪ್ರಮುಖ ಆಕರ್ಷಣೆಯಾದ ಗಾಜಿನ ಮನೆ ಸುತ್ತಮುತ್ತ ಈ ಬಾರಿ ‘ನೋ ಮ್ಯಾನ್ ಝೋನ್’ ಘೋಷಿಸಲಾಗಿದ್ದು, ಜನರು ನಿಲ್ಲದೇ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಒಂದೇ ಕಡೆ ಜನಸಂದಣಿ ಹೆಚ್ಚಾಗಿ ಸಮಸ್ಯೆ ಉಂಟಾಗದಂತೆ ತಡೆಯಲು ಉದ್ದೇಶಿಸಲಾಗಿದೆ. ಲಾಲ್‌ಬಾಗ್ ಆವರಣದಲ್ಲಿ 135ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಜನರನ್ನು ಬೇರೆಡೆಗಳಿಗೆ ಡೈವರ್ಟ್ ಮಾಡುವ ವ್ಯವಸ್ಥೆಯೂ ಮಾಡಲಾಗಿದೆ.

ಈ ಬಾರಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕು–ಬರಹ ಆಧಾರಿತ ಪುಷ್ಪವಿನ್ಯಾಸ ಪ್ರಮುಖ ಆಕರ್ಷಣೆಯಾಗಿದ್ದು, 12 ದಿನಗಳ ಕಾಲ ಪ್ರವಾಸಿಗರನ್ನು ಮನಸೂರೆಗೊಳ್ಳಲಿದೆ.

KSRTC ಬಸ್-ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು!

0

ಶಿವಮೊಗ್ಗ:- ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಜರುಗಿದೆ.

ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರಿನಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ, ಮದುವೆ ಮುಗಿಸಿಕೊಂಡು ಶೃಂಗೇರಿಗೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದ ತಕ್ಷಣ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Breaking News; ಪೊಲೀಸ್ ಠಾಣೆ ಸಮೀಪವೇ ರೌಡಿಶೀಟರ್ ಬರ್ಬರ ಹತ್ಯೆ!

0

ಬೆಂಗಳೂರು: ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಮ್ಮನ ಪಾಳ್ಯದಲ್ಲಿ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಶಬ್ಬೀರ್ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದ ಶಬ್ಬೀರ್ ಮೇಲೆ ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬಂಡೆಪಾಳ್ಯ ಮುಖ್ಯ ರಸ್ತೆಯ ಪಕ್ಕದ ಪೊಲೀಸ್ ಠಾಣೆಗೆ ಸಮೀಪದಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗಮ್ಮನ ಪಾಳ್ಯ ರಸ್ತೆಯಲ್ಲಿ ಶಬ್ಬೀರ್‌ನನ್ನು ಆಟ್ಟಾಡಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಬಂಡೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!