Home Blog Page 18

ರಾಯಚೂರಿನಲ್ಲಿ ಮಳೆಯ ರೌದ್ರಾವತಾರ! ಜನಜೀವನ ಸಂಪೂರ್ಣ ಅಸ್ತವ್ಯಸ್ತ

ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ಬೆಳ್ಳಂಬೆಳಗ್ಗೆಯೇ ಆರಂಭವಾದ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಅವಾಂತರಗಳು ಉಂಟಾಗಿವೆ.

ನಿರಂತರ ಮಳೆಯ ಪರಿಣಾಮ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಾಯಚೂರು ತಾಲೂಕಿನ ಇಡಪನೂರಿನಲ್ಲಿ ಹಳ್ಳದ ನೀರು ಕಿರು ಸೇತುವೆ ಮೇಲೆ ಹರಿದಿದೆ. ಇದರಿಂದ ಮೀರಾಪುರ ಹಾಗೂ ಯರಗೇರಾ ಮಾರ್ಗದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

ನಗರದ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಮಳೆ ನೀರು ಸರಿಯಾಗಿ ಹರಿಯದೆ ರಸ್ತೆಗಳು ಜಲಾವೃತಗೊಂಡಿವೆ. ವಾಹನ ಸವಾರರು ನೀರಿನಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದೇ ವೇಳೆ ಹಳೆ ಆಶ್ರಯ ಕಾಲೋನಿಯಲ್ಲಿ ಸಯ್ಯದಾ ನಸಿಮುನ್ ಅವರ ಮನೆ ಸೇರಿದಂತೆ ಹಲವೆಡೆ ಚರಂಡಿ ಮಿಶ್ರಿತ ಮಳೆನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.

ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ: ಕೊಲೆ ಆರೋಪಿ ಕಾಲಿಗೆ ಗುಂಡೇಟು!

ಶಿವಮೊಗ್ಗ: ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್‌ನಲ್ಲಿ ನಡೆದಿದೆ.

ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಅವರ ಮೇಲೆ ಆರೋಪಿ ಮಧು ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಮೊದಲು ಎಚ್ಚರಿಕೆಗಾಗಿ ಏರ್ ಫೈರ್ ಮಾಡಿದ್ದಾರೆ. ಆದರೆ ಆರೋಪಿ ಮಾತು ಕೇಳದ ಹಿನ್ನೆಲೆಯಲ್ಲಿ ಕೋಟೆ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡೇಟಿಗೆ ಒಳಗಾದ ಆರೋಪಿ ಮಧು ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಹಿಂದೆ ಶಿವಮೊಗ್ಗದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹನನ್ನು ಎದುರಾಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಪೊಲೀಸರು ಮಧು ಸೇರಿದಂತೆ ಐವರನ್ನು ಬಂಧಿಸಿದ್ದರು.

ಹಾಸನದಲ್ಲಿ ದಾರುಣ ಘಟನೆ! ಜಾಂಡೀಸ್‌ನಿಂದ ವಿದ್ಯಾರ್ಥಿನಿ ಸಾವು

ಹಾಸನ: ತೀವ್ರ ಜ್ವರ ಹಾಗೂ ಜಾಂಡೀಸ್‌ನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಪ್ರೀತಿ (20) ಎಂದು ಗುರುತಿಸಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಲೋಕೇಶ್.ಟಿ.ಕೆ. ಮತ್ತು ಶೋಭಾ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ. ಪ್ರೀತಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ಓದುತ್ತಿದ್ದಳು ಎಂದು ತಿಳಿದುಬಂದಿದೆ.

ಕೆಲ ದಿನಗಳಿಂದ ತೀವ್ರ ಜ್ವರ ಹಾಗೂ ಜಾಂಡೀಸ್‌ನಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ವಿದ್ಯಾರ್ಥಿನಿಯ ಅಕಾಲಿಕ ನಿಧನದಿಂದ ಕಾಲೇಜು ಸಿಬ್ಬಂದಿ ಹಾಗೂ ಸಹಪಾಠಿಗಳು ಆಘಾತಕ್ಕೊಳಗಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.

ವಾರಾಂತ್ಯದಲ್ಲಿ ಚಿನ್ನದ ದರ ಮತ್ತೆ ಏರಿಕೆ! 1.49 ಗಡಿ ದಾಟಿದ ಅಪರಂಜಿ, ಗ್ರಾಹಕರು ಕಂಗಾಲು

0

ನವದೆಹಲಿ: ವಾರಾಂತ್ಯದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.

ಕಳೆದ ಶುಕ್ರವಾರ ಗ್ರಾಂಗೆ ₹270 ಏರಿಕೆಯಾಗಿದ್ದ ಚಿನ್ನದ ದರ, ಈ ವಾರಾಂತ್ಯದಲ್ಲಿ 45 ರೂ.ಗಳಷ್ಟು ಹೆಚ್ಚಳವಾಗಿದೆ.

ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ ₹14,900 ಗಡಿ ದಾಟಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಕೆಯ ಪ್ರವೃತ್ತಿ ಮುಂದುವರಿದಿದೆ. ಇದೇ ವೇಳೆ ಬೆಳ್ಳಿ ಬೆಲೆಯೂ ಪ್ರತಿ ಕಿಲೋಗೆ ₹5ರಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,36,650 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,49,080 ತಲುಪಿದೆ. ಬೆಳ್ಳಿ ಬೆಲೆ 100 ಗ್ರಾಂಗೆ ₹26,000ರಷ್ಟಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ಇದೇ ದರಗಳು ಮುಂದುವರಿದಿದ್ದು, ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಬೆಳ್ಳಿ ದರ ₹27,000ವರೆಗೆ ದಾಖಲಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,908 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,665 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,181 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,908 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,665 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಸರ್ಕಾರಿ ಶಾಲೆಗಳಲ್ಲಿ ಶೂ ಬದಲು ಚಪ್ಪಲಿ ವಿತರಣೆ? ಹೊಸ ನಿಯಮ ತರಲು ಶಿಕ್ಷಣ ಇಲಾಖೆ ಚಿಂತನೆ

ಬೆಂಗಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶೂ–ಸಾಕ್ಸ್ ಯೋಜನೆಯಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಮುಂದಾಗಿದ್ದು, ವಾತಾವರಣಕ್ಕೆ ಅನುಗುಣವಾಗಿ ಶೂ ಅಥವಾ ಚಪ್ಪಲಿ ವಿತರಿಸುವ ಬಗ್ಗೆ ಚಿಂತನೆ ನಡೆಸಿದೆ.

ದೀರ್ಘಕಾಲ ಶೂ ಧರಿಸುವುದರಿಂದ ಕೆಲ ವಿದ್ಯಾರ್ಥಿಗಳಲ್ಲಿ ಕಾಲಿನ ಸೋಂಕುಗಳು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಇಲಾಖೆ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಯಾವ ಪ್ರದೇಶಗಳಲ್ಲಿ ಶೂ ಅಥವಾ ಚಪ್ಪಲಿ ಹೆಚ್ಚು ಸೂಕ್ತ ಎಂಬ ಬಗ್ಗೆ ಜಿಲ್ಲಾ ಉಪನಿರ್ದೇಶಕರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮಳೆ ಹಾಗೂ ಬೇಸಿಗೆ ಎರಡೂ ಕಾಲಘಟ್ಟಗಳಲ್ಲಿ ಚಪ್ಪಲಿ ಧರಿಸುವುದು ಹೆಚ್ಚು ಅನುಕೂಲಕರವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದ್ದು, ಸಾಕ್ಸ್ ಒದ್ದೆಯಾಗುವುದು ಹಾಗೂ ದುರ್ಗಂಧ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಇಲಾಖೆ ಪರಿಗಣಿಸುತ್ತಿದೆ. ಜೊತೆಗೆ ದೀರ್ಘಕಾಲ ಶೂ ಧರಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನೂ ಗಮನದಲ್ಲಿಟ್ಟುಕೊಂಡು ಈ ಬದಲಾವಣೆಯನ್ನು ಪರಿಶೀಲಿಸಲಾಗುತ್ತಿದೆ.

ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಂದು ಜೋಡಿ ಶೂ ಮತ್ತು ಎರಡು ಜೋಡಿ ಸಾಕ್ಸ್ ವಿತರಿಸಲಾಗುತ್ತಿದೆ. ಕಳೆದ ವರ್ಷ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಗುಣವಾಗಿ ₹265 ರಿಂದ ₹325 ರವರೆಗೆ ಅನುದಾನ ನಿಗದಿಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಯೋಜನೆಯಲ್ಲಿ ಬದಲಾವಣೆ ತರಬಹುದೇ ಎಂಬ ಕುತೂಹಲ ಹೆಚ್ಚಾಗಿದೆ.

ಮಂತ್ರಾಲಯದಲ್ಲಿ ವಸತಿ ಬಿಕ್ಕಟ್ಟು! ಮಠದ ಪ್ರಾಂಗಣದಲ್ಲೇ ಮಲಗುತ್ತಿದ್ದಾರೆ ಭಕ್ತರು

ರಾಯಚೂರು: ಮಳೆಯ ನಡುವೆಯೂ ಮಂತ್ರಾಲಯಕ್ಕೆ ಭಕ್ತರ ಹರಿವು ನಿರಂತರವಾಗಿ ಹೆಚ್ಚುತ್ತಿದ್ದು, ಸುತ್ತಮುತ್ತಲಿನ ವಸತಿಗೃಹಗಳಲ್ಲಿ ಸಮಸ್ಯೆ ಉಂಟಾಗಿದೆ.

ನಿತ್ಯ ಸುಮಾರು 3 ಸಾವಿರಕ್ಕೂ ಅಧಿಕ ರೂಮ್‌ಗಳು ಸಂಪೂರ್ಣ ಭರ್ತಿಯಾಗಿದ್ದು, ಕನಿಷ್ಠ ವಸತಿಗೂ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಕ್ತರ ಸಂಖ್ಯೆ ಹೆಚ್ಚಿದನ್ನು ಗಮನದಲ್ಲಿಟ್ಟುಕೊಂಡು ಮಠದ ವತಿಯಿಂದ ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದ್ದರೂ ಅದು ಕೂಡ ಸಾಕಾಗದೆ ಭಕ್ತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲವರು ಮಠದ ಪ್ರಾಂಗಣದಲ್ಲೇ ಮಲಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಇದೇ ವೇಳೆ ಖಾಸಗಿ ವಸತಿ ಗೃಹ ಮಾಲೀಕರು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಆರೋಪವೂ ಕೇಳಿಬಂದಿದ್ದು, ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.

ಮಳೆಗಾಲದ ನಡುವೆಯೂ ಮಂತ್ರಾಲಯಕ್ಕೆ ಭಕ್ತರ ಆಗಮನ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಸತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ದಾರುಣ ದುರಂತ! ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವು

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ನೀರಿನಲ್ಲಿ ಮುಳುಗಿ ಮಕ್ಕಳ ಸಾವಿನ ಸರಣಿ ಮುಂದುವರಿದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ನಡೆದ ದುರಂತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಆಟವಾಡಲು ತೆರಳಿದ್ದ ದಕ್ಷಾ (11) ಮತ್ತು ಧನುಷ್ (4) ಎಂಬ ಸಹೋದರ-ಸಹೋದರಿ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನಂತರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಕ್ಕಳು ಬಿದ್ದು ಸಾವನ್ನಪ್ಪಿದ ಕೃಷಿ ಹೊಂಡವು ಸ್ಥಳೀಯ ರೈತ ಗುರುಮೂರ್ತಿ ಅವರಿಗೆ ಸೇರಿದ್ದು, ಹೊಂಡದ ಸುತ್ತಲೂ ಯಾವುದೇ ಭದ್ರತಾ ಬೇಲಿ ಹಾಕದಿರುವುದು ಘಟನೆಗೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದೇ ವೇಳೆ ರಾಜ್ಯದ ವಿವಿಧೆಡೆ ನೀರಿನ ಹೊಂಡ, ಕೆರೆ ಹಾಗೂ ಸಂಪ್‌ಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ 2 ವರ್ಷದ ಮಗು ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿದ್ದರೆ, ಬಾಗಲಕೋಟೆಯಲ್ಲಿ 18 ತಿಂಗಳ ಮಗು ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗಳು ವರದಿಯಾಗಿವೆ.

ಈ ಘಟನೆಗಳ ಸರಣಿ ಮತ್ತೆ ಮುಂದುವರಿದಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

ಗೃಹಲಕ್ಷ್ಮಿ ಹಣ ನಿಲ್ಲುತ್ತಾ? ಸರ್ಕಾರದ ಹೊಸ ನಿರ್ಧಾರದಿಂದ ಶುರುವಾಯ್ತು ಗೊಂದಲ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆ ಇದೀಗ ಪರಿಷ್ಕರಣೆ ಹಂತಕ್ಕೆ ಪ್ರವೇಶಿಸಿದೆ.

ಈ ಹಿನ್ನೆಲೆಯಲ್ಲಿ ಫಲಾನುಭವಿಗಳಲ್ಲಿ ಹಣ ಕಳೆದುಕೊಳ್ಳುವ ಭೀತಿ ಹಾಗೂ ಗೊಂದಲ ಉಂಟಾಗಿದೆ.

ಪ್ರತಿ ತಿಂಗಳು ಕುಟುಂಬದ ಯಜಮಾನಿ ಖಾತೆಗೆ ₹2000 ಹಣ ಜಮೆಯಾಗುತ್ತಿರುವ ಈ ಯೋಜನೆಯ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಆರ್ಥಿಕ ನೆರವು ಸಿಗುತ್ತಿದ್ದು, ಸಾಕಷ್ಟು ಜನರಿಗೆ ಇದು ಸಹಾಯಕವಾಗಿದೆ. ಆದರೆ ಈಗ ಯೋಜನೆಯಲ್ಲಿನ ದುರ್ಬಳಕೆ ಮತ್ತು ಅನರ್ಹ ಫಲಾನುಭವಿಗಳ ಕುರಿತು ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ.

ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳು ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಯೋಜನೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿಯೇ ಸುಮಾರು ₹100 ಕೋಟಿ ಹಣ ಅನರ್ಹರ ಖಾತೆಗೆ ಹೋಗಿರುವುದು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆದಿರುವ ಘಟನೆಗಳು ಬೆಳಕಿಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಪರಿಶೀಲನೆ ಮತ್ತು ಮರು ನೋಂದಣಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ “ಆಪರೇಷನ್ ಗೃಹಲಕ್ಷ್ಮಿ” ಹೆಸರಿನಲ್ಲಿ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಆರಂಭಿಸಿದ್ದು, ಅನರ್ಹರನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಈವರೆಗೆ ಸುಮಾರು 4.30 ಲಕ್ಷ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಪರಿಶೀಲನೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಒಟ್ಟು 1.20 ಕೋಟಿಗೂ ಅಧಿಕ ಫಲಾನುಭವಿಗಳು ಈ ಯೋಜನೆಯಡಿ ಇದ್ದು, ಮೃತರಾದವರ ಹೆಸರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಕ್ರಮದಿಂದ ನೂರಾರು ಕೋಟಿ ರೂಪಾಯಿ ಸರ್ಕಾರಕ್ಕೆ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಸರ್ಕಾರದ ಗುರಿ ಯೋಜನೆ ನಿಲ್ಲಿಸುವುದಲ್ಲ, ಬದಲಿಗೆ ಅರ್ಹ ಫಲಾನುಭವಿಗಳಿಗೆ ಮಾತ್ರ ಲಾಭ ತಲುಪಿಸುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದ್ದಾರೆ.

ಇಬ್ಬರು ಪಾಟೀಲ್‌ಗಳ ನಡುವೆ ಸಚಿವ ಸ್ಥಾನ ಸಮರ: ಹೈಕಮಾಂಡ್ ಮೇಲೆ ಒತ್ತಡ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆ ಸಮೀಪಿಸುತ್ತಿದ್ದಂತೆ ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನದ ರಾಜಕೀಯ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಜಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ್ ಪರ ಬೆಂಬಲಿಗರು ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನ ಆರಂಭಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನಗಳು ಜೋರಾಗಿವೆ. ಒಂದೆಡೆ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಮಹಿಳೆಯರು ಕಣ್ಣೀರಿನ ಮನವಿ ಮಾಡಿದರೆ, ಮತ್ತೊಂದೆಡೆ ಜಿ.ಎಸ್. ಪಾಟೀಲ್ ಪರ ಕಾರ್ಯಕರ್ತರು ಬೃಹತ್ ಪಾದಯಾತ್ರೆಯ ಘೋಷಣೆ ಮಾಡುವ ಮೂಲಕ ರಾಜಕೀಯ ಕಣ ರಂಗೇರಿಸಿದ್ದಾರೆ.

ಒಂದು ಕಡೆ ಗದಗ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಘಟಕದ ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ ಮತ್ತು ಕಾರ್ಯಕರ್ತೆಯರು ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಭಾವನಾತ್ಮಕ ಮನವಿ ಮಾಡಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಲ ಮಹಿಳೆಯರು ಕಣ್ಣೀರು ಹಾಕುತ್ತಾ, “ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಅವರು ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯವುಳ್ಳ ನಾಯಕರು” ಎಂದು ಹೈಕಮಾಂಡ್‌ಗೆ ಸಂದೇಶ ರವಾನಿಸಿದರು.

ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್.ಕೆ. ಪಾಟೀಲ್ ಅವರನ್ನು ಕೈಬಿಟ್ಟಿರುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ. ಬಡವರು, ರೈತರು ಹಾಗೂ ಸಾಮಾನ್ಯ ಜನರ ಪರ ನಿರಂತರವಾಗಿ ಕೆಲಸ ಮಾಡಿದ ಅನುಭವಿ ನಾಯಕನಿಗೆ ನ್ಯಾಯ ಸಿಗಬೇಕು. ಎರಡನೇ ಹಂತದಲ್ಲಿ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಬೇಕು ಎಂದು ಒತ್ತಾಯಿಸಿದರು.

ಜಿ.ಎಸ್. ಪಾಟೀಲ್ ಪರ ಶಿರಹಟ್ಟಿಯಿಂದ ಶಕ್ತಿ ಪ್ರದರ್ಶನ

ಇನ್ನೊಂದೆಡೆ ರೋಣ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಗದಗ ಜಿಲ್ಲೆಯ ಶಿರಹಟ್ಟಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈರಣ್ಣ ಕೋಟಿ, 2013ರ ಚುನಾವಣೆಯಲ್ಲಿ ಗದಗ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಜಿ.ಎಸ್. ಪಾಟೀಲ್ ಅವರ ಸಂಘಟನಾ ಶಕ್ತಿ ಪ್ರಮುಖ ಕಾರಣವಾಗಿತ್ತು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರನ್ನು ಹೈಕಮಾಂಡ್ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜೂನ್ 16ರಂದು ತುಮಕೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ನಿರ್ಧಾರದತ್ತ ಜಿಲ್ಲೆಯ ಚಿತ್ತ

ಸಚಿವ ಸ್ಥಾನಕ್ಕಾಗಿ ಜಿಲ್ಲೆಯ ಇಬ್ಬರು ಪ್ರಬಲ ನಾಯಕರ ಪರ ಕಾರ್ಯಕರ್ತರು ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಾದ್ಯಂತ ಶಕ್ತಿ ಪ್ರದರ್ಶನ ಆರಂಭಿಸಿರುವುದು ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ಈಗ ಜಿಲ್ಲೆಯ ರಾಜಕೀಯದ ಕೇಂದ್ರ ಬಿಂದುವಾಗಿದೆ.

ಇಬ್ಬರು ನಾಯಕರ ಪರ ಕೇಳಿ ಬಂದ ಪ್ರಮುಖ ವಾದಗಳು

ಎಚ್.ಕೆ. ಪಾಟೀಲ್ ಪರ

  • ಅನುಭವಿ ಹಾಗೂ ಮಾಜಿ ಸಚಿವ
  • ಉತ್ತರ ಕರ್ನಾಟಕದ ಪ್ರಭಾವಿ ನಾಯಕ
  • ಬಡವರ ಪರ ಕೆಲಸ ಮಾಡಿದ ಹಿನ್ನಲೆ
  • ಉಪಮುಖ್ಯಮಂತ್ರಿ ಸ್ಥಾನಕ್ಕೂ ಅರ್ಹರು ಎಂಬ ಬೆಂಬಲಿಗರ ವಾದ

ಜಿ.ಎಸ್. ಪಾಟೀಲ್ ಪರ

  • ನಾಲ್ಕು ಬಾರಿ ಶಾಸಕರಾಗಿ ಆಯ್ಕೆ
  • ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ
  • 2013ರಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಗೆಲುವಿನ ರೂವಾರಿ ಎಂಬ ಬೆಂಬಲಿಗರ ಅಭಿಪ್ರಾಯ
  • ಜೂನ್ 16ರಂದು ಬೃಹತ್ ಪಾದಯಾತ್ರೆ ಘೋಷಣೆ

ರಾಜಕೀಯ ನಾಡಿಮಿಡಿತ

 “ಸಚಿವ ಸಂಪುಟ ವಿಸ್ತರಣೆ ಘೋಷಣೆಯಾಗುವ ಮುನ್ನವೇ ಗದಗ ಜಿಲ್ಲೆಯಲ್ಲಿ ರಾಜಕೀಯ ತಾಪಮಾನ ಏರಿದೆ. ಎಚ್.ಕೆ. ಪಾಟೀಲ್ ಅವರ ಅನುಭವಕ್ಕೆ ಮಣೆ ಹಾಕುತ್ತದೆಯೇ ಹೈಕಮಾಂಡ್? ಅಥವಾ ನಾಲ್ಕು ಬಾರಿ ಶಾಸಕರಾಗಿರುವ ಜಿ.ಎಸ್. ಪಾಟೀಲ್ ಅವರಿಗೆ ಅವಕಾಶ ನೀಡುತ್ತದೆಯೇ? ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.”

 

ಹೆಚ್‌ಕೆಪಿಗೆ ಸಚಿವ ಸ್ಥಾನ ಕೊಡದಿದ್ದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕು. ಅವರನ್ನು ಸಚಿವ ಸಂಪುಟದಿಂದ ಹೊರಗಿಡುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಗದಗ-ಬೆಟಗೇರಿ ಶಹರ ಮಹಿಳಾ ಕಾಂಗ್ರೆಸ್ ಹೇಳಿದೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದಗ-ಬೆಟಗೇರಿ ಶಹರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಅಕ್ಕಿ, ಮುಖ್ಯಮಂತ್ರಿ ಸ್ಥಾನ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಎಚ್.ಕೆ. ಪಾಟೀಲ ಅವರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿಯೇ ಸ್ಥಾನ ಸಿಗಬೇಕಿತ್ತು. ಆದರೆ ಅವರನ್ನು ಕಡೆಗಣಿಸಲಾಗಿದೆ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಚ್.ಕೆ. ಪಾಟೀಲ ಅವರು ದಿಟ್ಟ, ಪ್ರಾಮಾಣಿಕ, ಕಳಂಕರಹಿತ ಹಾಗೂ ರಾಜ್ಯದ ಹಿರಿಯ ನಾಯಕರಾಗಿದ್ದು, ಪಕ್ಷದ ಸಂಘಟನೆ ಮತ್ತು ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ನಾಯಕರನ್ನು ಸಂಪುಟದಿಂದ ಹೊರಗಿಡುವುದು ಕಾಂಗ್ರೆಸ್ ಕಾರ್ಯಕರ್ತರಿಗೂ ನಿರಾಸೆ ಮೂಡಿಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಮಾತನಾಡಿ, ಗದಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಚಯಿಸುವ ಮೂಲಕ ಎಚ್.ಕೆ. ಪಾಟೀಲ ಅವರು ಜನಪರ ಆಡಳಿತದ ಮಾದರಿ ನಿರ್ಮಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿರುವ ಅವರು ಸಚಿವ ಸ್ಥಾನಕ್ಕೆ ಸಂಪೂರ್ಣ ಅರ್ಹರು ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಅವರ ಅನುಭವ ಮತ್ತು ದೂರದೃಷ್ಟಿಯ ನಾಯಕತ್ವ ಅಗತ್ಯವಿದೆ. ಹೀಗಾಗಿ ಸಚಿವ ಸ್ಥಾನ ಮಾತ್ರವಲ್ಲದೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡುವ ಮೂಲಕ ಗೌರವಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದ್ರಾಕ್ಷಾಯಿಣಿ ಹಾಸಿಲಕರ, ಮೀನಾಕ್ಷಿ ಬೆನಕಣ್ಣವರ, ವೀಣಾ ಕಟ್ನಳ್ಳಿ, ಲಕ್ಷ್ಮೀ ಸಿದ್ದಮನಹಳ್ಳಿ, ಮುಸ್ಕಾನ್ ಸಯ್ಯದ್, ಯಲ್ಲಮ್ಮ ಜಡಿ, ರುದ್ರಮ್ಮ ಕೆರಕಲಮಟ್ಟಿ, ಲತಾ ಗೊಳಗೊಳಕಿ, ವಾಣಿ ಹಿರೇಮಠ ಸೇರಿದಂತೆ ಮಹಿಳಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

error: Content is protected !!