ದೊಡ್ಡಬಳ್ಳಾಪುರ: ರಾಜ್ಯದಲ್ಲಿ ನೀರಿನಲ್ಲಿ ಮುಳುಗಿ ಮಕ್ಕಳ ಸಾವಿನ ಸರಣಿ ಮುಂದುವರಿದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ನಡೆದ ದುರಂತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಆಟವಾಡಲು ತೆರಳಿದ್ದ ದಕ್ಷಾ (11) ಮತ್ತು ಧನುಷ್ (4) ಎಂಬ ಸಹೋದರ-ಸಹೋದರಿ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನಂತರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳು ಬಿದ್ದು ಸಾವನ್ನಪ್ಪಿದ ಕೃಷಿ ಹೊಂಡವು ಸ್ಥಳೀಯ ರೈತ ಗುರುಮೂರ್ತಿ ಅವರಿಗೆ ಸೇರಿದ್ದು, ಹೊಂಡದ ಸುತ್ತಲೂ ಯಾವುದೇ ಭದ್ರತಾ ಬೇಲಿ ಹಾಕದಿರುವುದು ಘಟನೆಗೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದೇ ವೇಳೆ ರಾಜ್ಯದ ವಿವಿಧೆಡೆ ನೀರಿನ ಹೊಂಡ, ಕೆರೆ ಹಾಗೂ ಸಂಪ್‌ಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ 2 ವರ್ಷದ ಮಗು ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿದ್ದರೆ, ಬಾಗಲಕೋಟೆಯಲ್ಲಿ 18 ತಿಂಗಳ ಮಗು ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗಳು ವರದಿಯಾಗಿವೆ.
ಈ ಘಟನೆಗಳ ಸರಣಿ ಮತ್ತೆ ಮುಂದುವರಿದಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.



