Home Blog Page 180

ಸಕಲೇಶಪುರದ ಮೂಗಲಿಯಲ್ಲಿ ಆನೆ ದಾಳಿಗೆ ಮಹಿಳೆ ಸಾವು: ಸಂತಾಪ ಸೂಚಿಸಿದ ಸಚಿವ ಈಶ್ವರ ಖಂಡ್ರೆ

0

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. 40 ವರ್ಷದ ಮಹಿಳೆಯ ಜೀವ ಹೋದ ಸುದ್ದಿ ತಿಳಿದ ಸಚಿವ ಈಶ್ವರ ಖಂಡ್ರೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ತಕ್ಷಣ ಕಾರ್ಯಾಚರಣೆಗೆ ಇಳಿಯುವಂತೆ ಕಠಿಣ ಸೂಚನೆ ನೀಡಿದ್ದಾರೆ.

ಆನೆಯನ್ನು ತಕ್ಷಣವೇ ಮರಳಿ ಕಾಡಿಗೆ ಕಳುಹಿಸುವುದು ಅಥವಾ ಸೆರೆಗೆ ಪಡೆಯುವಂತೆ ವನ್ಯಜೀವಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಸನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಬೇಕು ಎಂದು ಆದೇಶಿಸಲಾಗಿದೆ.

“ಹೋದ ಜೀವ ಮರಳಿ ತರಲು ಸಾಧ್ಯವಿಲ್ಲ, ಆದರೆ ಕುಟುಂಬಕ್ಕೆ ಸರ್ಕಾರ ಆಸರೆಯಾಗಬೇಕು” ಎಂದು ಸಚಿವರು ಹೇಳಿದ್ದಾರೆ. ಮೃತರ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಆನೆ ಕಾರ್ಯಪಡೆ ನಿಯೋಜನೆ, ಎಚ್ಚರಿಕೆ ಸಂದೇಶ ಮತ್ತು ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಬಿಎಂಐಸಿ ಯೋಜನೆ ಮರುಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ಅರ್ಜಿಯನ್ನು, ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಅರ್ಜಿದಾರರು ಈಗಾಗಲೇ ಪರಿಹಾರ ಪಡೆದಿರುವುದನ್ನು ಗಮನಿಸಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ನ್ಯಾಯಪೀಠ, ಬಿಎಂಐಸಿ ಯೋಜನೆಯಡಿ ಫೆರಿಫೆರಲ್ ರಸ್ತೆಗಳು ಹಾಗೂ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಭಾರಿ ಪ್ರಮಾಣದ ಸುಂಕ ಸಂಗ್ರಹಿಸಲಾಗುತ್ತಿದೆ. ಆದರೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ಮೂಲಸೌಕರ್ಯ ಕಾರಿಡಾರ್ ಯೋಜನೆ ಕೇವಲ ಕಾಗದಗಳಲ್ಲೇ ಉಳಿದಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯೋಜನಾ ನಿರ್ಮಾಣಕಾರರು ದೊಡ್ಡ ಪ್ರಮಾಣದ ಭೂಮಿಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರೂ, ಎಕ್ಸ್‌ಪ್ರೆಸ್‌ವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಭವಿಷ್ಯದಲ್ಲಿಯೂ ಅದನ್ನು ಪೂರ್ಣಗೊಳಿಸುವ ಯಾವುದೇ ಸ್ಪಷ್ಟ ಸೂಚನೆ ಇಲ್ಲ. ಭೂಮಿ ಸಮರ್ಪಕವಾಗಿ ಬಳಸಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಯೋಜನೆಯನ್ನು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ನಗರದ ಜನದಟ್ಟಣೆ ಕಡಿಮೆ ಮಾಡುವುದು, ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ವ್ಯಾಪಾರ ಹಾಗೂ ವೃತ್ತಿಪರರಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಎಂಐಸಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈ ಉದ್ದೇಶಗಳು ಈಡೇರದೇ ದೂರದ ಕನಸಾಗಿಯೇ ಉಳಿದಿವೆ ಎಂದು ಪೀಠ ತಿಳಿಸಿದೆ. ಟೋಲ್ ಪ್ಲಾಜಾ ಮತ್ತು ಫೆರಿಫೆರಲ್ ರಸ್ತೆಗಳ ಹೊರತು, ಸುಮಾರು 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್ ಎಕ್ಸ್‌ಪ್ರೆಸ್‌ವೇ ಮಾತ್ರ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

ಪಿಟಿಆರ್ ಅಡಿಯಲ್ಲಿ ಕಲ್ಪಿಸಲಾದ ನಗರ ದಟ್ಟಣೆ ಕಡಿಮೆ ಮಾಡುವ ಭವಿಷ್ಯಮುಖಿ ಪರಿಕಲ್ಪನೆ ವಿಫಲವಾಗಿದೆ. ಒಪ್ಪಂದವೂ ಯಶಸ್ವಿಯಾಗಿಲ್ಲ. ಇಂತಹ ಸ್ಥಿತಿಯಲ್ಲಿ ಯೋಜನೆಯನ್ನು ಜೀವಂತವಾಗಿಡುವ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ ಪೀಠ, ನಗರ, ನಾಗರಿಕರು, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಹಳೆಯ ಯೋಜನೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಗತ್ಯವಿದ್ದರೆ ಹಳೆಯ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆ ರೂಪಿಸುವುದೇ ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ಇಂದಿನ ಬೆಂಗಳೂರು ನಗರದ ಜನಸಂಖ್ಯೆ 1.40 ಕೋಟಿಗೂ ಅಧಿಕವಾಗಿದೆ. ದಿನನಿತ್ಯದ ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಕುಸಿತ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿದರೆ, ರಾಜ್ಯ ಸರ್ಕಾರವು ನಗರದ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಹೊಸ ಮತ್ತು ಪರಿಣಾಮಕಾರಿ ಯೋಜನೆಗಳ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Lakkundi: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಮುತ್ತು, ಹವಳ ಸೇರಿ ಪುರಾತನ ವಸ್ತುಗಳು ಪತ್ತೆ!

0

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ಕಾಲಕ್ಕೆ ಸೇರಿದ ವಸ್ತುಗಳು ಪತ್ತೆಯಾಗಿವೆ. ಈ ಪತ್ತೆಯಿಂದ ಗ್ರಾಮದಲ್ಲಿ ಹಾಗೂ ಇತಿಹಾಸಾಸಕ್ತರಲ್ಲಿ ಭಾರೀ ಕುತೂಹಲ ಮೂಡಿದೆ. ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಅವರಿಗೆ ಶೋಧ ಕಾರ್ಯದ ವೇಳೆ ಹಲವು ಪುರಾತನ ವಸ್ತುಗಳು ಸಿಕ್ಕಿವೆ. ನಿಧಿ ಸಿಕ್ಕ ಬೆನ್ನಲ್ಲೇ ಈ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಇವುಗಳು ಐತಿಹಾಸಿಕ ಮಹತ್ವ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಪತ್ತೆಯಾದ ವಸ್ತುಗಳಲ್ಲಿ ಮುತ್ತು, ಹವಳ, ಬಿಳಿ ಹವಳ, ನೀಲಮಣಿ, ಸ್ಪಟಿಕ, ಕರಿಪುಕ್ಕಾ ಸೇರಿದಂತೆ ಹಲವು ಪುರಾತನ ಕಾಲದ ವಸ್ತುಗಳು ಸೇರಿವೆ. ಇವುಗಳು ಪ್ರಾಚೀನ ಕಾಲದ ಆಭರಣಗಳು ಅಥವಾ ವಾಣಿಜ್ಯ ವಸ್ತುಗಳಾಗಿರಬಹುದೆಂದು ಊಹಿಸಲಾಗಿದೆ. ಬಸಪ್ಪ ಬಡಿಗೇರ ಅವರು ಹಲವು ವರ್ಷಗಳಿಂದ ಲಕ್ಕುಂಡಿ ಗ್ರಾಮದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಕಾರ್ಯ ನಡೆಸುವುದು ಅವರ ರೂಢಿ. ಈ ಹಿಂದೆ ಕೂಡ ಅವರಿಗೆ ಸಾಕಷ್ಟು ಪುರಾತನ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಪುರಾತನ ನಿಧಿ ಅಡಗಿದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಪತ್ತೆಗಳು ಲಕ್ಕುಂಡಿಯ ಪುರಾತನ ವೈಭವದ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿವೆ.

ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ – ಸೋಶಿಯಲ್ ಮೀಡಿಯಾದ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ಈಶ್ವರ್ ಖಂಡ್ರೆ

0

ಬೀದರ್: ಲಿಂಗೈಕ್ಯ ಚನ್ನಬಸವಪಟ್ಟದ್ದೇವರಿಂದ ‘ಲೋಕನಾಯಕ’ ಎಂಬ ಬಿರುದು ಪಡೆದಿದ್ದ ಶತಾಯುಷಿ ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಈಶ್ವರ್ ಬಿ. ಖಂಡ್ರೆ ಸ್ಪಷ್ಟವಾಗಿ ಹೇಳಿದ್ದಾರೆ.

ಕಳೆದ ಒಂದು ವಾರದಿಂದ ವಯೋಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಭೀಮಣ್ಣ ಖಂಡ್ರೆ ಅವರನ್ನು ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ಮನೆಗೆ ಕಳುಹಿಸಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಯುತ್ತಿದೆ. ವೈದ್ಯರ ಪ್ರಕಾರ ಅವರ ಆರೋಗ್ಯ ಸ್ಥಿರವಾಗಿದೆ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ನೋವು ತಂದಿದೆ ಎಂದು ಈಶ್ವರ್ ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ವದಂತಿಗಳಿಗೆ ಯಾರು ಕಿವಿಗೊಡಬಾರದು, ಬದಲಾಗಿ ತಮ್ಮ ತಂದೆಯವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ರಾಹುಲ್‌ಗಾಂಧಿ ಕೇವಲ 15 ನಿಮಿಷ: ಸಿಎಂ–ಡಿಸಿಎಂ ಭೇಟಿಗೆ ಸಮಯವೇ ಇಲ್ಲ

0

ಮೈಸೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಬರುತ್ತಿದ್ದರೂ, ಈ ಭೇಟಿ ಸಂಪೂರ್ಣವಾಗಿ ‘ಟಚ್ ಅಂಡ್ ಗೋ’ ಆಗಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಕೇವಲ 15 ನಿಮಿಷ ಮಾತ್ರ ಉಳಿಯಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಗಂಭೀರ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ.

ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಲ್ಯಾಂಡ್ ಆಗಲಿರುವ ರಾಹುಲ್, ತಕ್ಷಣವೇ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲುರಿಗೆ ತೆರಳಲಿದ್ದಾರೆ. ಅಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸಂಜೆ 5:45ಕ್ಕೆ ಮತ್ತೆ ಮೈಸೂರಿಗೆ ಮರಳಿ, ಸಂಜೆ 6 ಗಂಟೆಗೆ ದೆಹಲಿಗೆ ಹಾರಾಟ ನಡೆಸಲಿದ್ದಾರೆ.

ಇಡೀ ವೇಳಾಪಟ್ಟಿ ನೋಡಿದರೆ, ಮೈಸೂರು ಭೇಟಿ ಸಂಪೂರ್ಣವಾಗಿ ತಾಂತ್ರಿಕ ನಿಲ್ದಾಣದಂತೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್ ಒಳಾಂಗಣ ರಾಜಕೀಯ, ರಾಜ್ಯದ ಮಹತ್ವದ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ನಡೆಯುವ ಸಾಧ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

ನಟೋರಿಯಸ್ ರಾಬರಿ ಗ್ಯಾಂಗ್ ಬಂಧನ: 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಡ್ಡೆ ಹುಡುಗರು

0

ಬೆಂಗಳೂರು: ಅಪ್ರಾಪ್ತ ವಯಸ್ಸಿನಲ್ಲೇ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಡ್ಡೆ ಹುಡುಗರ ನಟೋರಿಯಸ್ ರಾಬರಿ ಗ್ಯಾಂಗ್‌ನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಜುವೆನಿಲ್ ಹೌಸ್‌ನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಈ ಗ್ಯಾಂಗ್‌ನಿಂದ ಜನರಲ್ಲಿ ಭೀತಿ ಮೂಡಿತ್ತು.

ಬಂಧಿತ ಆರೋಪಿಗಳನ್ನು ಸುರೇಶ್ @ ಸೂರಿ, ಶಶಿಕುಮಾರ್ ಮತ್ತು ಅಕಿಲ್ @ ಕೋಜ ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಹಲವಾರು ರಾಬರಿ ಪ್ರಕರಣಗಳಲ್ಲಿ ಬಂಧಿತರಾಗಿ ಜುವೆನಿಲ್ ಹೌಸ್‌ಗೆ ಕಳುಹಿಸಲ್ಪಟ್ಟಿದ್ದ ಆರೋಪಿಗಳು, ಮೇಜರ್ ಆದ ಬಳಿಕ ಮತ್ತೆ ಗ್ಯಾಂಗ್ ಕಟ್ಟಿಕೊಂಡು ಅಪರಾಧಗಳಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಹೊಸ ವರ್ಷದ ಹಿಂದಿನ ದಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಾಕು ಚೂರಿ ತೋರಿಸಿ ಸುಮಾರು ಒಂದು ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಹಣ ನೀಡದಿದ್ದರೆ ಚಾಕುವಿನಿಂದ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನನ್ನು ಅಡ್ಡಗಟ್ಟಿ ಹಣ ಕೇಳಿ, ಹಣ ನೀಡದ ಹಿನ್ನೆಲೆಯಲ್ಲಿ ಕಾರಿನ ಗ್ಲಾಸ್ ಒಡೆದು ಚಾಕುವಿನಿಂದ ಇರಿತ ನಡೆಸಿದ್ದ ಆರೋಪವೂ ಈ ಗ್ಯಾಂಗ್ ಮೇಲೆ ಇದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಜುವೆನಿಲ್ ಹೌಸ್‌ಗೆ ಕಳುಹಿಸಲಾಗಿತ್ತು.

ಆರೋಪಿಗಳು ಸೂರ್ಯ ಸಿಟಿ, ಮಾದನಾಯಕನಹಳ್ಳಿ, ಹೆಬ್ಬಗೋಡಿ, ಬ್ಯಾಡರಹಳ್ಳಿ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಕನಿಷ್ಠ ಏಳು ಕಡೆಗಳಲ್ಲಿ ರಾತ್ರಿ ವೇಳೆ ರಾಬರಿ ನಡೆಸಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ವಕೀಲನೊಬ್ಬರನ್ನು ಹಾಗೂ ಬ್ಯಾಡರಹಳ್ಳಿಯಲ್ಲಿ ಲಾರಿ ಚಾಲಕನನ್ನು ರಾಬರಿ ಮಾಡಿರುವ ಆರೋಪವಿದೆ.

ಇದರ ಜೊತೆಗೆ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ಪ್ರೇಮಿಗಳನ್ನೂ ರಾಬರಿ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.ಹೊಸ ವರ್ಷದ ರಾಬರಿ ಪ್ರಕರಣದ ತನಿಖೆ ನಡೆಸಿದ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ನಟೋರಿಯಸ್ ರಾಬರಿಕೋರರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣ: ರಿಹ್ಯಾಬ್ ಸೆಂಟರ್‌ʼನ 8 ಸಿಬ್ಬಂದಿ ಬಂಧನ

0

ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ರಿಹ್ಯಾಬ್ ಸೆಂಟರ್‌ಗೆ ಸಂಬಂಧಿಸಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ನವೀನ್, ಅಖಿಲ್, ನಾರಾಯಣ @ ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್ ಹಾಗೂ ಮೈಸೂರು ಮೂಲದ ರವಿ ಎಂದು ಗುರುತಿಸಲಾಗಿದೆ. ನವೀನ್ ರಿಹ್ಯಾಬ್ ಸೆಂಟರ್‌ನ ಇನ್‌ಚಾರ್ಜ್ ಆಗಿದ್ದರೆ, ಅಖಿಲ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ.

ನಾರಾಯಣ @ ನಾಣಿ ವಿದ್ಯಾರ್ಥಿಯಾಗಿದ್ದು ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಹಿತೇಶ್ ಕುಮಾರ್ ಹಾಗೂ ಮಂಜು ಮೊದಲು ರಿಹ್ಯಾಬ್ ಸೆಂಟರ್‌ಗೆ ಸೇರಿಕೊಂಡು ನಂತರ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಸಾಹಿಲ್ ಅಹಮದ್, ನವೀನ್ ಕುಮಾರ್ ಮತ್ತು ರವಿ ರಿಹ್ಯಾಬ್ ಸೆಂಟರ್ ಸಿಬ್ಬಂದಿಯಾಗಿದ್ದರು ಎಂದು ಸಿಐಡಿ ತಿಳಿಸಿದೆ.

ಯುವಕ ದರ್ಶನ್ ಗೇಟ್ ಹೊಡೆದು ಹೋಗುತ್ತೇನೆ ಎಂದು ಹೇಳಿದ್ದ ಹಿನ್ನೆಲೆ ಆರೋಪಿಗಳು ಫೈಬರ್ ಲಾಠಿ, ಪ್ಲಾಸ್ಟಿಕ್ ಪೈಪ್ ಬ್ಯಾಟ್ ಮತ್ತು ಮರದ ತುಂಡುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಾದ ಮೂರು ದಿನಗಳ ಬಳಿಕ ದರ್ಶನ್ ಸಾವನ್ನಪ್ಪಿದ್ದಾನೆ.

ಕಳೆದ ನವೆಂಬರ್ 26ರಂದು ದರ್ಶನ್ ಮೃತಪಟ್ಟಿದ್ದ. ಡೆಲಿವರಿ ಬಾಯ್‌ಗೆ ಹಲ್ಲೆ ಮಾಡಿದ ಆರೋಪದ ಮೇರೆಗೆ ವಿವೇಕನಗರ ಪೊಲೀಸರು ದರ್ಶನ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರಿಂದಲೂ ಥಳಿತ ನಡೆದಿತ್ತು ಎಂಬ ಆರೋಪಗಳಿವೆ.
ಮೂರು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟ ಬಳಿಕ, ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್‌ಗೆ ದರ್ಶನ್‌ನನ್ನು ಪೊಲೀಸರು ಸೇರಿಸಿದ್ದರು.

ರಿಹ್ಯಾಬ್ ಸೆಂಟರ್‌ನಲ್ಲಿ ಲೋ ಬಿಪಿಯಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಮೃತದೇಹ ಕಂಡ ತಾಯಿ ಆದಿಲಕ್ಷ್ಮಿ ವಿವೇಕನಗರ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವೇಕನಗರ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು.

ಪರಿಣಾಮವಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ತನಿಖೆ ವೇಳೆ ರಿಹ್ಯಾಬ್ ಸೆಂಟರ್ ಸಿಬ್ಬಂದಿಗಳ ವಿರುದ್ಧ ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.

‘ಜೈ ಬಾಂಗ್ಲಾ’ ಘೋಷಣೆ: ಮುಸ್ಲಿಂ ಮಹಿಳೆ ವಶಕ್ಕೆ ಪಡೆದ ಹೆಬ್ಬಗೋಡಿ ಪೋಲೀಸರು!

0

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಮುಸ್ಲಿಂ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನು ಸರ್ಬಾನು ಖಾತುನ್ (25) ಎಂದು ಗುರುತಿಸಲಾಗಿದ್ದು, ಅವರು ಪಶ್ಚಿಮ ಬಂಗಾಳ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಬಾನು ಖಾತುನ್ ಹುಲಿಮಂಗಲದ ಪೋಡು ಪ್ರದೇಶ ಸಮೀಪದ ಶೆಡ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಪೊಲೀಸರ ಮಾಹಿತಿಯಂತೆ, ಮೂರು ದಿನಗಳ ಹಿಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸಿ ಶೆಡ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ವಾಸವಾಗಿದ್ದಾರೆನ್ನಲಾದ ಜಹಿದುಲ್ ಇಸ್ಲಾಂ (35) ಮತ್ತು ಫಿರ್ದೋಸ್ (32) ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶೆಡ್‌ಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸಮೀಪದಲ್ಲೇ ವಾಸವಾಗಿದ್ದ ಸರ್ಬಾನು ಖಾತುನ್ ರಸ್ತೆ ಮೂಲಕ ನಡೆದುಕೊಂಡು ಬರುತ್ತಿದ್ದಾಗ ಘಟನೆ ನಡೆದಿದೆ.

ಆ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಮಹಿಳೆ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾರೆನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಹೆಬ್ಬಗೋಡಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ನಂತರ ದಾಖಲೆಗಳ ಪರಿಶೀಲನೆಗಾಗಿ ಮಹಿಳೆಯನ್ನು ಎಫ್‌ಆರ್‌ಆರ್‌ಒ (ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಷನ್ ಆಫೀಸ್) ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ಕುರಿತು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Gold Rate Today; ಚಿನ್ನ-ಬೆಳ್ಳಿ ಮತ್ತೆ ಏರಿಕೆ; ಆಭರಣ ರೇಟ್ ಕೇಳಿದ್ರೆ ದಂಗಾಗ್ತೀರಾ! ಗ್ರಾಂ ಎಷ್ಟು ಗೊತ್ತಾ?

ಚಿನ್ನ, ಬೆಳ್ಳಿ ಬೆಲೆಗಳು ಮತ್ತೆ ಏರಿಕೆ ಕಂಡಿದ್ದು, ಆಭರಣ ಪ್ರಿಯರು ನಿಜಕ್ಕೂ ಕಂಗಾಲಾಗಿದ್ದಾರೆ.

ಇಂದು ಚಿನ್ನದ ಬೆಲೆ 35 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 5 ರೂ ಜಾಸ್ತಿಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 13ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,690 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವ ಅಭ್ಯಾಸವೇ ಕಿಡ್ನಿ ಸ್ಟೋನ್‌ಗೆ ಕಾರಣವೇ? ಇಲ್ಲಿದೆ ಉತ್ತರ

0

ಕೆಲವರಿಗೆ ನೀರು ಕುಡಿಯುವುದು ಎಂದರೆ ಅಸಹ್ಯ ಅಥವಾ ನಿರ್ಲಕ್ಷ್ಯ. ಒತ್ತಡದ ಜೀವನಶೈಲಿ, ಕೆಲಸದ ಚಿಂತೆ, ಬಾಯಾರಿಕೆ ಅನಿಸದಿರುವುದು ಮೊದಲಾದ ಕಾರಣಗಳಿಂದ ಹಲವರು ದಿನಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸುವುದಿಲ್ಲ.

ಆದರೆ ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ.

ನೀರು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಪ್ರಮುಖ ಪಾತ್ರ ವಹಿಸುತ್ತದೆ. ನೀರಿನ ಪ್ರಮಾಣ ಕಡಿಮೆಯಾದಾಗ ದೇಹದ ಒಳ ಸಮತೋಲನ ಹದಗೆಡಲು ಪ್ರಾರಂಭಿಸುತ್ತದೆ. ಆರಂಭದಲ್ಲಿ ಸಣ್ಣ ಲಕ್ಷಣಗಳು ಕಾಣಿಸಿಕೊಂಡರೂ, ಅವುಗಳನ್ನು ನಿರ್ಲಕ್ಷಿಸಿದರೆ ಮುಂದೆ ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಹೇಗೆ ಉಂಟಾಗುತ್ತದೆ?

ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ. ಹಿಮಾಂಶು ವರ್ಮಾ ಅವರ ಪ್ರಕಾರ, ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದಾಗ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮೂತ್ರಪಿಂಡಗಳಲ್ಲಿ ಖನಿಜಗಳು ಮತ್ತು ಲವಣಗಳು ಸರಿಯಾಗಿ ಹೊರಹಾಕಲಾಗದೇ ಸಂಗ್ರಹವಾಗುತ್ತವೆ. ಈ ಸಂಗ್ರಹವೇ ಕ್ರಮೇಣ ಕಲ್ಲುಗಳಾಗಿ ರೂಪುಗೊಳ್ಳುತ್ತದೆ.

ನಿರಂತರವಾಗಿ ಕಡಿಮೆ ನೀರು ಕುಡಿಯುವುದರಿಂದ ಮೂತ್ರ ಹೆಚ್ಚು ಕೇಂದ್ರೀಕೃತವಾಗುತ್ತದೆ. ಇದರಿಂದ ಕಲ್ಲುಗಳ ನಿರ್ಮಾಣದ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಕಡಿಮೆ ಬೆವರು ಬರುವವರು, ಉಪ್ಪು ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸುವವರು, ದೀರ್ಘಕಾಲ ಮೂತ್ರವನ್ನು ಹಿಡಿದಿಟ್ಟುಕೊಳ್ಳುವವರು ಹಾಗೂ ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವವರಲ್ಲಿ ಈ ಅಪಾಯ ಹೆಚ್ಚು ಕಂಡುಬರುತ್ತದೆ.

ನೀರಿನ ಕೊರತೆಯ ಲಕ್ಷಣಗಳು

ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪದೇಪದೇ ದಣಿವು, ಒಣ ಬಾಯಿ, ತಲೆನೋವು ಸಾಮಾನ್ಯವಾಗಿವೆ. ಗಾಢ ಹಳದಿ ಬಣ್ಣದ ಮೂತ್ರ ಬರುವುದು ನಿರ್ಜಲೀಕರಣದ ಪ್ರಮುಖ ಸೂಚಕವಾಗಿದೆ.

ಕೆಲವರಿಗೆ ತಲೆತಿರುಗುವಿಕೆ, ಮಲಬದ್ಧತೆ, ಒಣ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಈ ಸ್ಥಿತಿ ದೀರ್ಘಕಾಲ ಮುಂದುವರಿದರೆ ಮೂತ್ರಪಿಂಡ ಸಂಬಂಧಿತ ತೊಂದರೆಗಳು ಮತ್ತು ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

 ಕಿಡ್ನಿ ಸ್ಟೋನ್ ತಡೆಯುವುದು ಹೇಗೆ?

ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು

ಬಾಯಾರಿಕೆ ಆಗುವ ಮೊದಲು ನೀರು ಕುಡಿಯುವ ಅಭ್ಯಾಸ ಬೆಳೆಸಬೇಕು

ಚಳಿಗಾಲದಲ್ಲಿಯೂ ನೀರಿನ ಸೇವನೆಯನ್ನು ಕಡಿಮೆ ಮಾಡಬಾರದು

ಅತಿಯಾದ ಉಪ್ಪು ಮತ್ತು ಜಂಕ್ ಫುಡ್ ಸೇವನೆ ತಪ್ಪಿಸಬೇಕು

ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಡಬೇಕು

ಸಾಕಷ್ಟು ನೀರು ಕುಡಿಯುವ ಸರಳ ಅಭ್ಯಾಸವೇ ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಸಮಸ್ಯೆಗಳಿಂದ ದೂರ ಇರಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

error: Content is protected !!