Home Blog Page 181

ಪುನೀತ್ ರೆಡ್ಡಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ರೆಡ್ಡಿ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತದ ಜೋನಲ್ ಮಟ್ಟಕ್ಕೆ ಆಯ್ಕೆಯಾದ ಪುನೀತ್ ರೆಡ್ಡಿ ಎನ್.ಎ ಅವರನ್ನು ರೆಡ್ಡಿ ಮಹಿಳಾ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿಯ ಸಾಧನೆಯ ಕುರಿತು ಶೈಲಜಾ ಕವಲೂರು ಮಾತನಾಡುತ್ತಾ, ಬೆಳೆವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಪುನೀತ್ ರೆಡ್ಡಿಯ ಸಾಧನೆ ನಮ್ಮೆಲ್ಲರಿಗೂ ಸಂತಸ ತಂದಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ದಕ್ಷಿಣ ಭಾರತದ ಝೋನಲ್ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನಮ್ಮ ಬಳಗದ ಪರವಾಗಿ ವಿದ್ಯಾರ್ಥಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುಮಾ ಶಿವನಗೌಡರ, ಶೋಭಾ ಪಾಟೀಲ್, ಲತಾ ಮುಂಬಾರಡ್ಡಿ, ಸವಿತಾ ಭರಮಗೌಡರ್, ಶೋಭಾ ಭೂಮರಡ್ಡಿ, ಸವಿತಾ ಹೊಸಮನಿ, ಆಶಾ ಓದುಗೌಡರ, ಕವಿತಾ ಪಾಟೀಲ, ಪೂರ್ಣಿಮಾ ಪಾಟೀಲ್, ವರ್ಷಾ ಮೇಕಳಿ, ಸುಜಾತಾ ರಡ್ಡೇರ, ವಿಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

ಸುನೀತಾ ಕೋನರಡ್ಡಿ ಪ್ರಾರ್ಥಿಸಿದರು. ಸುಧಾ ಹುಚ್ಚಣ್ಣವರ ಸ್ವಾಗತಿಸಿದರು. ವೀಣಾ ತಿರ್ಲಾಪುರ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಶಿರೋಳ್ ವಂದಿಸಿದರು.

ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡಿದರೆ ಕ್ರಮ: ಶಾಸಕ ಸಿ.ಸಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಬಂಗಾರದ ಆಭರಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಸೈಜೇಶ್ವರ ಅವರ ನೇತೃತ್ವದ ತಂಡ ಬಂಗಾರ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿತು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳ ನಿಯಮಗಳು 1962ರ ಪ್ರಕಾರ 10 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಯಾವುದೇ ವಸ್ತು ಭೂಮಿಯೊಳಗೆ ಸಿಕ್ಕರೂ ಅದು ಸರ್ಕಾರಕ್ಕೆ ಸೇರುತ್ತದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೇ ಸಿಕ್ಕರೂ ಅದು `ನಿಧಿ’ ಎಂದೇ ಪರಿಗಣಿಸಲ್ಪಡುತ್ತದೆ ಎಂದು ಸ್ಪಷ್ಟಪಡಿಸಿದರು.

ಈಗ ಸಿಕ್ಕಿರುವ ಆಭರಣಗಳು ಯಾವ ಕಾಲಕ್ಕೆ ಸೇರಿದವು ಮತ್ತು ಯಾರ ಆಳ್ವಿಕೆಗೆ ಒಳಪಟ್ಟಿದ್ದವು ಎಂಬುದರ ಬಗ್ಗೆ ತಜ್ಞರಿಂದ ಸಂಶೋಧನೆ ನಡೆಯಬೇಕಿದೆ. ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಕಾನೂನಿನ ಪ್ರಕಾರ, ಸಿಕ್ಕ ನಿಧಿಯ ಒಟ್ಟು ಮೊತ್ತದಲ್ಲಿ 5ನೇ ಒಂದು ಭಾಗದಷ್ಟು (ಶೇ. 20) ಹಣವನ್ನು ನಿಧಿ ಪತ್ತೆಯಾದ ಕುಟುಂಬಕ್ಕೆ ನೀಡಲಾಗುವುದು ಎಂದರು.

ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಸಿ. ಪಾಟೀಲ, ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಗಂಗವ್ವ ರಿತ್ತಿ ಅವರ ಕಾರ್ಯವನ್ನು ಶ್ಲಾಘಿಸಿ ಸನ್ಮಾನಿಸಿದರು. ದಾನಚಿಂತಾಮಣಿ ಅತ್ತಿಮಬ್ಬೆಯ ಹೆಸರಿನಿಂದ ಖ್ಯಾತಿ ಗಳಿಸಿದ್ದ ಲಕ್ಕುಂಡಿ, ಇಂದು ಗಂಗವ್ವ ಅವರ ಪ್ರಾಮಾಣಿಕತೆಯಿಂದ ಮತ್ತೆ ಸುದ್ದಿಯಾಗಿದೆ. ಈ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸಲಾಗುವುದು. ವಿಶೇಷವಾಗಿ ಅವರು ಮನೆ ಕಟ್ಟಿಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಸಹಾಯ ಮಾಡಲಾಗುವುದು. ಬಂಗಾರ ಪತ್ತೆಯ ವಿಷಯವಾಗಿ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡಿದರೆ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಇತರರು ಉಪಸ್ಥಿತರಿದ್ದರು.

ಲಕ್ಕುಂಡಿಯಲ್ಲಿ ಬಂಗಾರ ಸಿಕ್ಕಿರುವ ಘಟನೆ ಸಂಬಂಧ ಬೆಂಗಳೂರಿನಲ್ಲಿ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಬಂಗಾರವನ್ನು ಸರಕಾರಕ್ಕೆ ಒಪ್ಪಿಸಿದ ಆ ಕುಟುಂಬದ ಪ್ರಾಮಾಣಿಕತೆಯನ್ನು ಗೌರವಿಸುತ್ತೇವೆ. ಆದರೆ ಅದು ನಿಧಿ ಅಲ್ಲ, ಕುಟುಂಬದ ಬಂಗಾರ ಎಂದು ಪುರಾತತ್ವ ಇಲಾಖೆ ಅಧಿಕಾರಿಯೊಬ್ಬರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಂಥ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆ ಕುಟುಂಬದ ಪ್ರಾಮಾಣಿಕತೆಯನ್ನು ನಾವು ಗೌರವಿಸುತ್ತೇವೆ. ಮುಖ್ಯಮಂತ್ರಿಗಳು ಕುಟುಂಬವನ್ನು ಅಭಿನಂದಿಸಿದ್ದಾರೆ. ಸರ್ಕಾರದ ವತಿಯಿಂದಲೂ ಆ ಕುಟುಂಬವನ್ನು ಗೌರವಿಸುವ ಕೆಲಸ ಮಾಡುತ್ತೇವೆ. ಜಿಲ್ಲಾಡಳಿತ ಆ ಬಂಗಾರವನ್ನು ಸುರಕ್ಷಿತವಾಗಿ ಇಡಲಿದೆ. ಸಿಕ್ಕಿರುವ ಬಂಗಾರ ಆ ಕುಟುಂಬಕ್ಕೆ ಸೇರಿದ್ದಾ, ಆ ಜಾಗದ ಮೂಲ ಮಾಲೀಕರಿಗೆ ಸೇರಿದ್ದಾ, ರಾಷ್ಟ್ರಕೂಟರು ಅಥವಾ ಚಾಲುಕ್ಯರ ಕಾಲದ್ದಾ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ವಿವೇಕಾನಂದರ ಸಂದೇಶಗಳು ಯುವಕರಿಗೆ ಪ್ರೇರಣೆ: ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸ್ವಾಮಿ ವಿವೇಕಾನಂದರು ಅಲ್ಪಾಯುಷ್ಯದಲ್ಲೇ ಅಪಾರ ಸಾಧನೆ ಮಾಡಿದ ಮಹಾನ್ ಚಿಂತಕ ಮತ್ತು ಯುಗಪುರುಷರು. ದೇಶದ ಯುವಕರ ಮನಸ್ಸು ಜಾಗೃತವಾಗಿ ರೂಪಿಸುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿದೆ. ಸಾಮಾಜಿಕ ಸೇವೆಯೇ ದೇವರ ಸೇವೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು. ಜಾಗತಿಕ ಐಕ್ಯತೆ, ಮಾನವೀಯ ಮೌಲ್ಯಗಳು ಮತ್ತು ಸೇವಾಭಾವನೆಯ ಮೂಲಕ ಅವರು ವಿಶ್ವದ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀಸ್ವಾಮಿ ಶಿವಪ್ರಿಯಾನಂದಜಿ ಮಹಾರಾಜರು ಮಾತನಾಡಿ, ಸ್ವಾಮಿ ವಿವೇಕಾನಂದರು ಪರಮ ತಪಸ್ವಿಗಳು, ಶಕ್ತಿಯ ಸಂಕೇತ. ದೇಶವು ಸೋಮಾರಿತನ, ಸಣ್ಣತನ, ದ್ವಿಮುಖ ಅಥವಾ ಕಪಟ ರೀತಿಯಿಂದ ವರ್ತಿಸುವವರಿಂದ ತುಂಬಿತುಳುಕುತ್ತಿದೆ. ಈ ನ್ಯೂನತೆಗಳಿಂದ ಹೊರಬಂದು ಪ್ರತಿಯೊಬ್ಬರಲ್ಲಿ ಆತ್ಮ ಶಕ್ತಿಯು ಜಾಗೃತಗೊಳ್ಳುವಂತೆ ಮಾಡಬೇಕು. ಒಂದು ವ್ಯಕ್ತಿ ಅಥವಾ ಒಂದು ದೇಶವು ಶ್ರೇಷ್ಠವಾಗಬೇಕಾದರೆ ಅಸೂಯೆ ಹಾಗೂ ದ್ವೇಷಭಾವನೆ ಇಲ್ಲದಿರುವುದು, ಸತ್ಕಾರ್ಯಗಳನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂಬ ದೃಢ ವಿಶ್ವಾಸ ನಮ್ಮಲ್ಲಿರಬೇಕು. ನಾವು ಒಳ್ಳೆಯವರಾಗಬೇಕು ಹಾಗೂ ಬೇರೆಯವರು ಒಳ್ಳೆಯವರಾಗಲು ಸಹಾಯ ಮಾಡಬೇಕು ಎಂಬ ವಿವೇಕಾನಂದರ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ನಮ್ಮ ಸುಧಾರಣೆಯೊಂದಿಗೆ ದೇಶದ ಪ್ರಗತಿ ಸಾಧ್ಯವೆಂದು ವಿವರಿಸಿದರು.

ಹೊಸಪೇಟೆಯ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀಸ್ವಾಮಿ ಸುಮೇದಾನಂದಜಿ ಮಹಾರಾಜರು ಜಿ.ಎಸ್. ಶಿವರುದ್ರಪ್ಪನವರು ಸ್ವಾಮಿ ವಿವೇಕಾನಂದರ ಕುರಿತು ರಚಿಸಿದ ಗೀತೆಯನ್ನು ಹಾಗೂ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

ವೆಂಕಟೇಶ್ ಅಲ್ಕೋಡ್ ನಾಡಗೀತೆ ಪ್ರಸ್ತುತಪಡಿಸಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸರ್ವರನ್ನು ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯರಲ್ಲಿ ಸ್ವದೇಶಿತನವನ್ನು ಜಾಗೃತಗೊಳಿಸಿದರು. ನಮ್ಮ ಸಂಸ್ಕೃತಿಯ ಬಗ್ಗೆ ನಾವು ಹೆಮ್ಮೆ ಪಡೆಯಬೇಕೆಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡಬೇಕು. ನಾವು ಒಳ್ಳೆಯವರಾಗಿ ಬೇರೆಯವರಿಗೂ ಒಳ್ಳೆಯ ಮಾರ್ಗವನ್ನು ತೋರಿಸಬೇಕು. ದೇಶ ಸುಧಾರಣೆಯಾಗಬೇಕಾದರೆ ಮೊದಲು ನಮ್ಮಲ್ಲಿಯ ಚಿಂತನೆಗಳು, ನಡೆ-ನುಡಿಗಳು ಸುಧಾರಣೆಯಾಗಬೇಕು ಎಂಬ ಮಾತು ಅನುಕರಣೀಯವಾಗಿದೆ ಎಂದರು.

ಸಮಿತಿಯವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಜನವರಿ 26ರಂದು ಜರುಗಲಿರುವ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಆಯಾ ಸಮಿತಿಯವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೇ ವ್ಯವಸ್ಥಿತವಾಗಿ ಆಚರಿಸಲು ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಹಿಂದಿನ ದಿನ ಹಾಗೂ ಕಾರ್ಯಕ್ರಮದ ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಸ್ವಚ್ಛತೆಯೊಂದಿಗೆ ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು. ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಕೆಗೆ ಕ್ರಮ ವಹಿಸಬೇಕು. ಗಣರಾಜ್ಯೋತ್ಸವ ದಿನದಂದು ಎಲ್ಲ ಕಚೇರಿ ಮತ್ತು ಶಾಲಾ-ಕಾಲೇಜುಗಳ ಸಿಬ್ಬಂದಿ ತಮ್ಮ ಕಾರ್ಯಾಲಯದ ಧ್ವಜಾರೋಹಣವನ್ನು ಬೆಳಿಗ್ಗೆ 7.30ರೊಳಗೆ ನೆರವೇರಿಸಿ 8.30 ಗಂಟೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಬೇಕು. 9 ಗಂಟೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದರು.

ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಕುರಿತು ಆದ್ಯತೆ ವಹಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಕಾರ್ಯಕ್ರಮದ ಸ್ಥಳದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮ ಮುಗಿದ ನಂತರವೂ ಸಹ ಆ ಸ್ಥಳ ಮೊದಲಿನ ಹಾಗೆ ಸ್ವಚ್ಛವಾಗಿರುವಂತೆ ಸಂಬಂಧಿತ ಅಧಿಕಾರಿಗಳು ನಿಗಾ ವಹಿಸಬೇಕು. ಅತಿಥಿಗಳಿಗೆ ಆಸನದ ವ್ಯವಸ್ಥೆ, ಅಲ್ಪೋಪಹಾರದ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವ್ಯವಸ್ಥೆ, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಪರೇಡ್, ಮೂಲಭೂತ ಸೌಕರ್ಯಗಳ ವ್ಯವಸ್ಥೆ, ವೇದಿಕೆ ನಿರ್ಮಾಣ, ಅಲ್ಪೋಪಹಾರ, ಆಸನದ ವ್ಯವಸ್ಥೆ, ಸನ್ಮಾನ ಕಾರ್ಯಕ್ರಮ, ಬಂದೋಬಸ್ತ್ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರಮೇಶ್ ಎಸ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಭೂ ದಾಖಲೆ ಇಲಾಖೆ ಉಪನಿರ್ದೇಶಕ ರುದ್ರಗೌಡ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್ ಮಾತನಾಡಿ, ಗಣರಾಜ್ಯೋತ್ಸವ ವ್ಯವಸ್ಥಿತ ಆಚರಣೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಗಣರಾಜ್ಯೋತ್ಸವದ ಆಚರಣೆ ಕುರಿತಂತೆ ವಹಿಸಲಾಗಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕೆಂದು ಸೂಚಿಸಿದರು.

ಸಮಾಜದ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ: ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗಾಣಿಗ ಸಮುದಾಯವು ಕಠಿಣ ಶ್ರಮ ಮತ್ತು ಸ್ವಾಭಿಮಾನದ ಗುಣಗಳನ್ನು ಹೊಂದಿದ್ದು, ಈ ಗುಣಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸಮಾಜಕ್ಕೆ ಕೀರ್ತಿ ತರುವ ಕೆಲಸವಾಗಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ ಹೇಳಿದರು.

ಇಲ್ಲಿನ ಹಾತಲಗೇರಿ ರಸ್ತೆಯ ವಿವೇಕಾನಂದ ನಗರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರ 20 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಊಟದ ಕೊಠಡಿ, ಕಟ್ಟಡದ ಮೇಲ್ಛಾವಣಿಯಲ್ಲಿ ಅಳವಡಿಸಿರುವ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನೆ ಹಾಗೂ 2026ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಿವಿಧ ಸಮಾಜದ ಭವನ ನೋಡಿದರೆ ಗಾಣಿಗ ಸಮಾಜದ ಭವನವನ್ನು ಸುಂದರವಾಗಿ ಹಾಗೂ ವಿಶಾಲವಾಗಿ ನಿರ್ಮಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಗಾಣಿಗ ಸಮುದಾಯ ಭವನವು ಮಾದರಿಯಾಗಿದೆ. ಈ ಭವನದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಗಾಣಿಗ ಸಮಾಜವು ನಮ್ಮ ಕುಟುಂಬದ ಒಂದಿಗೆ ಹಿಂದಿನ ನಿಂದಲೂ ಅವಿನಾಭಾವ ಸಂಬಂಧ ಹೊಂದಿದೆ. ಗಾಣಿಗ ಸಮಾಜವು ನಮ್ಮ ಕೆಲಸಕ್ಕೆ ಹೆಗಲಿಗೆ ಹೆಗಲು ಕೊಟ್ಟು ಶಕ್ತಿ ತುಂಬುತ್ತದೆ. ನಮ್ಮ ಮನೆತನಕ್ಕೆ ರಾಜಕೀಯವಾಗಿ ಗಾಣಿಗ ಸಮಾಜವು ಶಕ್ತಿ ತುಂಬುತ್ತಾ ಬಂದಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಸಹ ಇದೇ ಬೆಂಬಲ ನನಗೆ ನೀಡುವಂತೆ ಕೃಷ್ಣಗೌಡ ಪಾಟೀಲ ಮನವಿ ಮಾಡಿದರು.

ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ದಾನಿಗಳ ಸಹಕಾರದಿಂದ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿತ್ತು. ಶಾಸಕರ ಅನುದಾನದಲ್ಲಿ ಈ ಊಟದ ಮನೆ ನಿರ್ಮಾಣ ಮಾಡಲಾಗಿದೆ ಎಂದರು.

ಗಾಣಿಗ ಸಮಾಜದ ಮುಖಂಡ ದಶರಥ ಗಾಣಿಗೇರ ಮಾತನಾಡಿ, ಗಾಣಿಗ ಸಮಾಜದ ಒಗ್ಗಟ್ಟು ಹೆಚ್ಚಿನ ಪ್ರಮಾಣದಲ್ಲಿ ತೋರಿಸಬೇಕು. ಸಮಾಜವು ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಬದ್ಧರಾಗಿರಬೇಕು ಎಂದರು.

ಕೆಇಬಿ ಇಲಾಖೆಯ ಅಧಿಕಾರಿ ಜವಳಿ, ಸೋಲಾರ್ ಕಂಪನಿಯ ಮ್ಯಾನೇಜರ್ ಶ್ರೀನಿವಾಸ ಮಂಟೂರ ಮಾತನಾಡಿದರು. ಇದೇ ಸಂದರ್ಭದಲ್ಲಿ 2026ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಟ್ರಸ್ಟ್‌ನ ಷಣ್ಮುಖಪ್ಪ ಬಡ್ನಿ, ಬಿ.ಬಿ. ಐನಾಪೂರ, ಮುರುಘರಾಜೇಂದ್ರ ಬಡ್ನಿ, ಗಾಣಿಗ ಸಮಾಜದ ಮುಖಂಡ ಅಶೋಕ ಮಂದಾಲಿ, ಸುರೇಶ ಮರಳಪ್ಪನವರ, ಬಸವರಾಜ ಮೇಟಿ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಹಾಲಪ್ಪ ಲಕ್ಕುಂಡಿ (ಬಣವಿ), ಫಕ್ಕೀರೇಶ ಸಿಂಧಗಿ, ಬಸವರಾಜ ಸುಂಕದ, ಶರಣಗೌಡ ಪವಾಡಿಗೌಡ್ರು, ಬಿ.ಎಸ್. ವಡವಟ್ಟಿ, ನಿಂಗಪ್ಪ ಕೆಂಗಾರ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ಪ್ರಭುರಾಜ ಬಿಂಗಿ, ಹನಮಂತಗೌಡ ದೊಡ್ಡಗೌಡ್ರ, ಐ.ಎಂ. ಕಿರೇಸೂರ, ಬಸವಂತಪ್ಪ ನವಲಳ್ಳಿ, ಬಸವರಾಜ ನವಲಗುಂದ, ತೋಟಪ್ಪ ಗಾಣಿಗೇರ, ಶಿವಣ್ಣ ಹಿಟ್ಟಳ್ಳಿ, ಸೋಮನಗೌಡ ಪಾಟೀಲ, ಪ್ರಕಾಶ ಮುಧೋಳ, ಜಗದೀಶ ಬೆಳವಟಗಿ, ಪುಲಕೇಶಗೌಡ ಪಾಟೀಲ, ಸಂದೀಪ ಕಪ್ಪತ್ತನವರ, ಎಚ್.ಬಿ. ಕೊರಗಲ್ ಇದ್ದರು.

ಗಾಣಿಗ ಸಮಾಜವು ವೃತ್ತಿಯನ್ನು ಅವಲಂಬಿಸಿ ಉನ್ನತ ಮಟ್ಟಕ್ಕೇರಿದ ಸಮಾಜವಾಗಿದೆ. ಪರಿಶುದ್ಧ ಗಾಣದ ಎಣ್ಣೆಯನ್ನು ತೆಗೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜಕ್ಕೆ ಸಂಸ್ಕಾರ ಕಲಿಸುವ ಹಿರಿಯರನ್ನು ಕಡೆಗಣಿಸದೆ ಸದಾ ಗೌರವದಿಂದ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನ ಯುವ ಪೀಳಿಗೆಗೆ ಅಗತ್ಯ. ಬದುಕಿನಲ್ಲಿನ ನೋವು-ನಲಿವು ಕಂಡ ಹಿರಿಯರ ಅನುಭವದ ಮಾತುಗಳನ್ನು ಪಾಲಿಸಿದಲ್ಲಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂದು ಕೃಷ್ಣಗೌಡ ಪಾಟೀಲ ಹೇಳಿದರು.

KSRTC ಬಸ್‌ಗಳಲ್ಲಿ ಪ್ರಯಾಣಿಸೋ ಮಹಿಳೆಯರೇ ಈಕೆಯ ಟಾರ್ಗೆಟ್; 22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳಿ ಅರೆಸ್ಟ್!

0

ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳವು ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ಸುಮಾರು 22 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಹಿಳೆ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದವಳಾಗಿದ್ದು, ದೇವಸ್ಥಾನಗಳಿಗೆ ತೆರಳುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಜಂಗಮಕೋಟೆ ಕ್ರಾಸ್‌ನಿಂದ ಸೂಲಿಬೆಲೆಗೆ ತೆರಳುವ ಬಸ್‌ಗಳಲ್ಲಿ ಕಳವು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ, ಕುಪ್ಪಂ ಮೂಲದ ಮೀನಾಕ್ಷಿ ಎಂಬಾಕೆಯನ್ನು ಬಂಧಿಸಿ, ಆಕೆಯ ಬಳಿಯಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಟಾಕ್ಸಿಕ್’ ಟೀಸರ್‌ಗೆ ವಿರೋಧ: ಆಪ್ ಮಹಿಳಾ ಘಟಕದಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು!

0

ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕವು ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ.

ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಯಲ್ಲಿ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಲಭ್ಯವಿರದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ನೀಡಲಾಗಿದೆ.
ಟೀಸರ್‌ನಲ್ಲಿ ಕನ್ನಡ ಸಾಂಸ್ಕೃತಿಕ ಮೌಲ್ಯಗಳಿಗೆ ಅಪಮಾನವಾಗುವಂತಹ ದೃಶ್ಯಗಳಿದ್ದು, ಅವುಗಳನ್ನು ತಕ್ಷಣ ತೆಗೆದುಹಾಕುವಂತೆ ಹಾಗೂ ಟೀಸರ್ ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ. ಜೊತೆಗೆ ಸೆನ್ಸಾರ್ ಮಂಡಳಿಯೂ ಈ ವಿಷಯವನ್ನು ಪರಿಶೀಲಿಸಬೇಕು ಎಂದು ಆಪ್ ಮಹಿಳಾ ಘಟಕ ಆಗ್ರಹಿಸಿದೆ.

ಈ ಕುರಿತು ಮಾತನಾಡಿದ ಆಪ್ ಮಹಿಳಾ ಘಟಕದ ಕಾರ್ಯದರ್ಶಿ ಉಷಾ, “ಯಶ್ ಅವರು ತಮ್ಮ ಸಿನಿಮಾಗಳನ್ನು ಇಡೀ ಕುಟುಂಬ ಒಟ್ಟಿಗೆ ನೋಡಬಹುದಾದಂತಿರಬೇಕು ಎಂದು ಹೇಳುತ್ತಾರೆ. ಆದರೆ ಟೀಸರ್‌ನಲ್ಲಿರುವ ದೃಶ್ಯಗಳಲ್ಲಿ ಆ ಕಂಫರ್ಟ್ ಎಲ್ಲಿ ಇದೆ? ಕನ್ನಡ ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಳ್ಳಬೇಕಾದರೆ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಸಿನಿಮಾಗಳಾಗಬೇಕು, ಈ ರೀತಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

0

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (74) ಅವರ ಆರೋಗ್ಯದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನವರಿ 10ರಂದು ಧನಕರ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಎರಡು ಬಾರಿ ಪ್ರಜ್ಞೆ ತಪ್ಪಿದ್ದಾಗಿ ತಿಳಿದುಬಂದಿದೆ. ವೈದ್ಯರ ಸಲಹೆ ಮೇರೆಗೆ ಇಂದು (ಸೋಮವಾರ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ತಪಾಸಣೆಯ ಭಾಗವಾಗಿ MRI ಸ್ಕ್ಯಾನಿಂಗ್ ನಡೆಸಲು ನಿರ್ಧರಿಸಲಾಗಿದೆ.

ಏನಾಗಿತ್ತು?

ಶನಿವಾರ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಧನಕರ್ ಅವರು ಎರಡು ಬಾರಿ ಪ್ರಜ್ಞೆ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸೂಚಿಸಲಾಗಿತ್ತು. ಬಳಿಕ ಅವರು ಎರಡು ದಿನಗಳ ವಿರಾಮ ಪಡೆದಿದ್ದು, ಆರೋಗ್ಯ ಸ್ಥಿತಿಯ ಸಮಗ್ರ ಪರಿಶೀಲನೆಗಾಗಿ ಇಂದು ಏಮ್ಸ್‌ಗೆ ದಾಖಲಾಗಿದ್ದಾರೆ.

ಕಳೆದ ವರ್ಷ ಜುಲೈ 21ರಂದು ಧನಕರ್ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ವೇಳೆ ಪ್ರತಿಪಕ್ಷಗಳಿಂದ ರಾಜೀನಾಮೆ ಒತ್ತಾಯಪೂರ್ವಕವಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಧನಕರ್ ಅವರು ಕಛ್‌ನ ರಣ್, ಉತ್ತರಾಖಂಡ, ಕೇರಳ ಹಾಗೂ ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮಗಳ ಸಂದರ್ಭದಲ್ಲಿಯೇ ಕೆಲವು ಬಾರಿ ಅವರಿಗೆ ಪ್ರಜ್ಞೆ ತಪ್ಪಿದ ಘಟನೆಗಳು ಸಂಭವಿಸಿದ್ದಾವೆಂದು ವರದಿಗಳು ತಿಳಿಸಿವೆ.

ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯ ಬರ್ಬರ ಕೊಲೆ!

0

ನೆಲಮಂಗಲ:- ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದ ನಡು ರಸ್ತೆಯಲ್ಲಿ ಜರುಗಿದೆ.

ಕೊಲೆಯಾದ ವೃದ್ಧೆಯನ್ನು ದ್ರಾಕ್ಷಾಣಮ್ಮ ಎಂದು ಗುರುತಿಸಲಾಗಿದೆ. ಮೊಮ್ಮಗನ ಮುಂದೆಯೇ ಅಜ್ಜಿಯನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಲೆಯಾದ ದ್ರಾಕ್ಷಾಣಮ್ಮ ಅವರ ಪತಿ ನಾಗರಾಜು 8 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಮೊಮ್ಮಗನನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಯಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ದ್ವೇಷ ಭಾಷಣ ಮಸೂದೆ ವಿವಾದ: ರಾಜ್ಯಪಾಲರ ಮೆಟ್ಟಿಲೇರಿದ ಬಿಜೆಪಿ ನಿಯೋಗ

0

ಬೆಂಗಳೂರು: ರಾಜ್ಯ ಸರ್ಕಾರ ಕಳುಹಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025ಕ್ಕೆ ರಾಜ್ಯಪಾಲರು ಇನ್ನೂ ಸಹಿ ಹಾಕದೆ ತಡೆ ಹಿಡಿದಿರುವ ಬೆನ್ನಲ್ಲೇ, ಬಿಜೆಪಿ ರಾಜ್ಯ ನಾಯಕರು ಮಸೂದೆಗೆ ಸಹಿ ಹಾಕಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕರ ನಿಯೋಗವು ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಯಾವುದೇ ಕಾರಣಕ್ಕೂ ಜನತೆಯ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿದೆ. ಅಲ್ಲದೇ, ಅಗತ್ಯವಿದ್ದಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದೆ. ಈ ಸಂಬಂಧ ಬಿಜೆಪಿ ನಾಯಕರಿಂದ ಆರು ಪುಟಗಳ ಲಿಖಿತ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ.

ಇದೇ ವೇಳೆ, ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣಗಳಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಬಳ್ಳಾರಿ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಜತೆಗೆ ಶಾಸಕ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಪ್ರಾಣಭೀತಿ ಇರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಹಾಗೂ ಅಪರಾಧದ ಸಂಚುಗಳಿರುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಕೋರಿದೆ.

error: Content is protected !!