Home Blog Page 184

ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು: ಮಕ್ಕಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು!

0

ಚಿಕ್ಕಮಗಳೂರು: ರಸ್ತೆಯಲ್ಲಿನ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಪ್ರೌಢಶಾಲೆಯ ಮಕ್ಕಳೇ ಮುಂದಾಗಿ ಗುಂಡಿಗಳನ್ನು ಮುಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ನಡೆದಿದೆ.

ಕರ್ಕೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಪಾಲ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ದಿನನಿತ್ಯ ಶಾಲೆಗೆ ತೆರಳುವ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಹಲವು ಬಾರಿ ದೂರು ನೀಡಿದರೂ ಆಡಳಿತದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಮಕ್ಕಳೆ ಸಿಮೆಂಟ್, ಮರಳು ಮತ್ತು ಜಲ್ಲಿಯನ್ನು ತಂದು ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಪ್ಯಾಚ್ ಕೆಲಸ ಮಾಡಿದ್ದಾರೆ.
ಮಕ್ಕಳ ಈ ಸಾಮಾಜಿಕ ಹೊಣೆಗಾರಿಕೆಗೆ ಗ್ರಾಮಸ್ಥರು ಹಾಗೂ ರಸ್ತೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಇದು ಮಕ್ಕಳ ಜವಾಬ್ದಾರಿ ಅಲ್ಲ, ಆದರೆ ಅವರು ಮಾಡಿರುವ ಕೆಲಸ ನಮಗೆ ಪಾಠ” ಎಂದು ಸಾರ್ವಜನಿಕರು ಹೇಳಿದ್ದಾರೆ.ಇದೇ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ ಆಡಳಿತ ವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಮೂಲಭೂತ ಸೌಕರ್ಯ ಒದಗಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ದುಃಖಕರ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಆಕ್ರೋಶಕ್ಕೆ ಮಣಿದ ಕಂಪನಿ: ‘ನಾನ್ ಕನ್ನಡಿಗ HR’ ಜಾಹೀರಾತು ರದ್ದು, ಬಹಿರಂಗ ಕ್ಷಮೆಯಾಚನೆ

0

ಬೆಂಗಳೂರು: ನಾನ್ ಕನ್ನಡಿಗ ಹೆಚ್‌ಆರ್ ಅಭ್ಯರ್ಥಿಯೇ ಬೇಕು ಎಂದು ಉದ್ಯೋಗ ಪ್ರಕಟಣೆ ಹೊರಡಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಖಾಸಗಿ ಕಂಪನಿ ಇದೀಗ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿಕೊಂಡಿದೆ.

ಸ್ಕಿಲ್ ಸೋನಿಕ್ಸ್ (Skill Sonics) ಎಂಬ ಕಂಪನಿ ನೌಕರಿ ಡಾಟ್ ಕಾಮ್‌ನಲ್ಲಿ ನಾನ್ ಕನ್ನಡಿಗ ಹೆಚ್‌ಆರ್ ಅಗತ್ಯ ಎಂಬ ರೀತಿಯ ಪ್ರಕಟಣೆ ನೀಡಿತ್ತು. ಈ ವಿಷಯ ಬೆಳಕಿಗೆ ಬಂದ ಕೂಡಲೇ ಕನ್ನಡಿಗರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಜೆಪಿ ನಗರದ ಸಂಸ್ಥೆಯ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ನೇಮಕಾತಿ ಪ್ರಕಟಣೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತ ಕಂಪನಿ ಮ್ಯಾನೇಜರ್, ಇದು ಕೋಲ್ಕತ್ತಾ ವಿಭಾಗದಿಂದ ನಡೆದ ಅಚಾತುರ್ಯ ಎಂದು ಸ್ಪಷ್ಟನೆ ನೀಡಿದರು. ವಿವಾದ ಸೃಷ್ಟಿಸಿದ ನೇಮಕಾತಿ ಪ್ರಕಟಣೆಯನ್ನು ರದ್ದುಪಡಿಸಿರುವುದಾಗಿ ತಿಳಿಸಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟಾದರೆ ಕ್ಷಮೆ ಇರಲಿ ಎಂದು ಕೈಮುಗಿದು ಕ್ಷಮೆಯಾಚಿಸಿದ್ದಾರೆ.

ಪವಿತ್ರಾ ಗೌಡಗೆ ಕೋರ್ಟ್ ರಿಲೀಫ್: ವಾರಕ್ಕೊಮ್ಮೆ ಮನೆಯೂಟಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡಗೆ ಕೊನೆಗೂ ಕೋರ್ಟ್‌ ರಿಲೀಫ್ ನೀಡಿದೆ. ವಾರಕ್ಕೊಮ್ಮೆ ಮನೆಯೂಟ ನೀಡಲು ನ್ಯಾಯಾಲಯ ಅನುಮತಿ ನೀಡಿದೆ.

ಜ.12ರಂದು ನಡೆದ ವಿಚಾರಣೆಯಲ್ಲಿ, ಪವಿತ್ರಾ ಗೌಡ ಅವರ ಆರೋಗ್ಯ ಸಮಸ್ಯೆಗಳನ್ನು ಗಮನಿಸಿದ ನ್ಯಾಯಾಲಯ, ವಾರಕ್ಕೊಮ್ಮೆ ಮನೆಯೂಟ ಕೊಡಬೇಕು ಎಂದು ಸೂಚಿಸಿದೆ. ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಮೇರೆಗೆ ಊಟ ನೀಡುವಂತೆ ಕೋರ್ಟ್ ಆದೇಶಿಸಿದೆ.

ಈ ಹಿಂದೆ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಜೈಲಿನ ಊಟದಿಂದ ಆರೋಗ್ಯ ಹದಗೆಡುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲಿಗೆ ನ್ಯಾಯಾಲಯ ದಿನಕ್ಕೊಮ್ಮೆ ಮನೆಯೂಟಕ್ಕೆ ಅವಕಾಶ ನೀಡಿತ್ತು.

ಆದರೆ ಕಾರಾಗೃಹ ಇಲಾಖೆ, ಇದರಿಂದ ಜೈಲಿನಲ್ಲಿರುವ ಸಾವಿರಾರು ಕೈದಿಗಳು ಇದೇ ರೀತಿಯ ಬೇಡಿಕೆ ಇಡಬಹುದು ಎಂದು ಆತಂಕ ವ್ಯಕ್ತಪಡಿಸಿ, ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪವಿತ್ರಾ ಗೌಡ ಪರ ವಕೀಲರು, ಜೈಲಿನ ಆಹಾರದಿಂದ ಚರ್ಮರೋಗ, ಗುಳ್ಳೆಗಳು, ಫುಡ್ ಪಾಯಿಸನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲೇ ಇದೀಗ ಕೋರ್ಟ್ ಮಧ್ಯಮ ಮಾರ್ಗವಾಗಿ ವಾರಕ್ಕೆ ಒಮ್ಮೆ ಮನೆಯೂಟಕ್ಕೆ ಅವಕಾಶ ನೀಡಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಜ.13ರಂದು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ

0

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದಿನ ಸಬರಮತಿ ಆಶ್ರಮದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026ದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಜರ್ಮನ್ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರೊಂದಿಗೆ ಉತ್ಸವದಲ್ಲಿ ಗಾಳಿಪಟ ಹಾರಿಸಿದ್ದಾರೆ.

ಆಶ್ರಮಕ್ಕೆ ಆಗಮಿಸಿದ ಬಳಿಕ ಇಬ್ಬರೂ ನಾಯಕರು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಪುಷ್ಪ ನಮನ ಸಲ್ಲಿಸಿದರು. ಮೆರ್ಜ್ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿಯೂ ಸಹಿ ಹಾಕಿದರು. ನಂತರ ಸಬರಮತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ, ವಾತಾವರಣದ ಮೋಜನ್ನು ಅನುಭವಿಸಿದರು.

ಗುಜರಾತ್ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಅಚಾರ್ಯ ದೇವವ್ರತ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡಿದ್ದರು. ಈ ವೇಳೆ, ಭಾರತ ಮತ್ತು ಜರ್ಮನಿ ನಡುವೆ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳು ಆಚರಿಸಲಾಗುತ್ತಿದ್ದು, ಇದರೊಂದಿಗೆ ಮೆರ್ಜ್ ಭಾರತ ಭೇಟಿ ವಿಶೇಷತೆಯನ್ನು ಪಡೆದಿದೆ.

ಮೂರನೇ ಹಂತದಲ್ಲಿ ತಾಂತ್ರಿಕ ದೋಷ: PSLV ರಾಕೆಟ್ ಉಡಾವಣೆ ವಿಫಲ

0

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬೆಳಗ್ಗೆ 10:18ಕ್ಕೆ PSLV-C62 ರಾಕೆಟ್ ಅನ್ನು ಉಡಾವಣೆ ಮಾಡಿತ್ತು. ಈ ಮಿಷನ್ ಅನ್ವೇಶಾ/EOS- N1 ಉಪಗ್ರಹ ಹಾಗೂ 14 ಸಣ್ಣ ಉಪಗ್ರಹಗಳನ್ನು ತಲುಪಿಸುವ ಉದ್ದೇಶ ಹೊಂದಿತ್ತು.

ಪ್ರಾರಂಭಿಕ ಹಂತದಲ್ಲಿ ರಾಕೆಟ್ ಸಾಧಾರಣವಾಗಿ ಹಾರುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. ಆದರೆ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಂಡು ಬಂದುದರಿಂದ ಮಿಷನ್ ಯಶಸ್ವಿಯಾಗಲಿಲ್ಲ ಎಂದು ISRO ಅಧಿಕೃತವಾಗಿ ಹೇಳಿದೆ.

 “PSLV-C62 ಮಿಷನ್ ಆರಂಭ ಚೆನ್ನಾಗಿತ್ತು. ಆದರೆ ಮೂರನೇ ಹಂತದ ಅಂತ್ಯದ ವೇಳೆಗೆ ವಾಹನ ತನ್ನ ಪಥದಲ್ಲಿ ಬದಲಾವಣೆ ಕಂಡು, ನಿರೀಕ್ಷಿತ ಕಾರ್ಯಕ್ಷಮತೆಯನ್ನು ತಲುಪಲಿಲ್ಲ. ನಾವು ಲಭ್ಯವಿರುವ ಡೇಟಾವನ್ನು ವಿಶ್ಲೇಷಿಸಿ ಶೀಘ್ರವೇ ವಿಫಲತೆಯ ನಿಖರ ಕಾರಣವನ್ನು ಪತ್ತೆ ಮಾಡಲಿದ್ದೇವೆ ಎಂದು ISRO ಅಧ್ಯಕ್ಷ ವಿ ನಾರಾಯಣನ್ ತಿಳಿಸಿದ್ದಾರೆ.

India vs New Zealand: ನನಗೆ ಸಿಗುವ ಟ್ರೋಫಿಗಳನ್ನು ನನ್ನ ತಾಯಿಗೆ ಕಳುಹಿಸುತ್ತೇನೆ: ವಿರಾಟ್ ಕೊಹ್ಲಿ

0

2026ರ ಮೊದಲ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಈ ಗೆಲುವಿನ ಪ್ರಮುಖ ಶಿಲ್ಪಿ ವಿರಾಟ್ ಕೊಹ್ಲಿ ಆಗಿದ್ದಾರೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 300 ರನ್‌ಗಳ ಕಠಿಣ ಗುರಿ ನೀಡಿತು. ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲಿ ಒತ್ತಡ ಇದ್ದರೂ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಇನಿಂಗ್ಸ್‌ನ್ನು ಅದ್ಭುತವಾಗಿ ಕಟ್ಟಿದರು.

ಕೊಹ್ಲಿ 91 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್‌ಗಳ ಸಹಿತ 93 ರನ್‌ಗಳನ್ನು ಬಾರಿಸಿ ಔಟಾದರು. ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 49 ಓವರ್‌ಗಳಲ್ಲಿ 306 ರನ್ ಗಳಿಸಿ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.

ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ‘ಇದು ನಿಮ್ಮ ಎಷ್ಟನೇ ಪ್ಲೇಯರ್ ಆಫ್ ದಿ ಮ್ಯಾಚ್?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, “ನಿಜವಾಗಿ ನನಗೆ ಎಷ್ಟನೇದು ಎಂಬುದು ಗೊತ್ತಿಲ್ಲ” ಎಂದು ನಗುತ್ತಾ ಹೇಳಿದರು.

ಇನ್ನೂ ತಮ್ಮ ಪ್ರಶಸ್ತಿಗಳ ಕುರಿತು ಮಾತನಾಡಿದ ಅವರು, “ನನಗೆ ಸಿಗುವ ಟ್ರೋಫಿಗಳನ್ನು ನಾನು ಗುರುಗಾಂವ್‌ನಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೇನೆ. ಅವುಗಳನ್ನು ನೋಡಿ ಅವರು ತುಂಬಾ ಹೆಮ್ಮೆಪಡುತ್ತಾರೆ. ಎಲ್ಲಾ ಪ್ರಶಸ್ತಿಗಳನ್ನು ಅವರೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ” ಎಂದು ಭಾವನಾತ್ಮಕವಾಗಿ ಹೇಳಿದರು. ಈ ಗೆಲುವಿನೊಂದಿಗೆ ಭಾರತ ತಂಡ ಹೊಸ ವರ್ಷದ ಕ್ರಿಕೆಟ್ ಪ್ರಯಾಣವನ್ನು ಆತ್ಮವಿಶ್ವಾಸದಿಂದ ಆರಂಭಿಸಿದೆ.

ಮುಗಿಯುತ್ತಿಲ್ಲ ಹಾವೇರಿ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ: ಕೆಎಂಎಫ್ ಖರೀದಿ ಕೇಂದ್ರಗಳಲ್ಲಿ ರಿಜೆಕ್ಷನ್, ರೈತರ ಆಕ್ರೋಶ

0

ಹಾವೇರಿ: ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೇ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು, ಮೆಕ್ಕೆಜೋಳ ಬೆಳೆಗಾರರು ತೀವ್ರ ಆತಂಕದಲ್ಲಿದ್ದಾರೆ.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ನಡೆಸಿದ ಹೋರಾಟದ ಬಳಿಕ ಸರ್ಕಾರ ಪ್ರತಿ ರೈತನಿಂದ 12 ಕ್ವಿಂಟಾಲ್ ಖರೀದಿ ಘೋಷಿಸಿ, ನಂತರ 20 ಕ್ವಿಂಟಾಲ್ ಹಾಗೂ ಕೊನೆಗೆ 50 ಕ್ವಿಂಟಾಲ್‌ವರೆಗೆ ಖರೀದಿ ಪ್ರಮಾಣ ಹೆಚ್ಚಿಸಿತ್ತು. ಆದರೆ ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿರುವ ಕೆಎಂಎಫ್ ಖರೀದಿ ಕೇಂದ್ರದಲ್ಲಿ ಖರೀದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ರಿಜೆಕ್ಟ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ನೋಂದಣಿ ವೇಳೆ ಸ್ಯಾಂಪಲ್‌ ಒಪ್ಪಿಗೆಯಾದರೂ, ನಂತರ ತೇವಾಂಶ ಅಧಿಕ, ಫಂಗಸ್ ಇದೆ ಎಂಬ ಕಾರಣ ನೀಡಿ ಮೆಕ್ಕೆಜೋಳವನ್ನು ಖರೀದಿ ಮಾಡದೆ ಹಿಂದಿರುಗಿಸಲಾಗುತ್ತಿದೆ. ಪರಿಣಾಮವಾಗಿ ರೈತರು ಟ್ರಾಕ್ಟರ್‌ಗಳಲ್ಲೇ ಮಲಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಊಟ, ವಸತಿ, ಸಾರಿಗೆ ಖರ್ಚು ಹೆಚ್ಚಿದ್ದು, ಆರ್ಥಿಕ ಸಂಕಷ್ಟ ಗಂಭೀರವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ಕೆಲ ರೈತರು ಮಾತ್ರ ಬೆಳೆ ಮಾರಾಟ ಮಾಡಿ ಸಾಲ ತೀರಿಸಿದ್ದಾರೆ. ಇನ್ನೂ ಅನೇಕ ರೈತರು ಬೆಳೆ ಮಾರಾಟ ಮಾಡಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಮಾರುಕಟ್ಟೆಗೆ ಬೆಳೆ ತಂದ ಬಳಿಕ ನಿಯಮಗಳನ್ನು ಹೇಳಿ ನಿರಾಕರಿಸುವುದು ಅನ್ಯಾಯ ಎಂದು ರೈತರು ಆರೋಪಿಸಿದ್ದು, ಖರೀದಿ ಕೇಂದ್ರಗಳಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ರಾಮಮೂರ್ತಿ ನಗರ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಸಾವು ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು

0

“ರಾಮಮೂರ್ತಿ ನಗರ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಸಾವು: ನಿಗೂಢತೆ ಬಿಚ್ಚಿಟ್ಟ ತನಿಖೆ, ಹತ್ಯೆ ಪ್ರಕರಣವಾಗಿ ದಾಖಲು – 18 ವರ್ಷದ ಯುವಕನ ಬಂಧನ”

ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣದಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ಅಸಹಜ ಸಾವೆಂದು ಪರಿಗಣಿಸಲಾಗಿದ್ದ ಪ್ರಕರಣ, ಪೊಲೀಸ್ ತನಿಖೆ ವೇಳೆ ಹತ್ಯೆಯೆಂದು ದೃಢಪಟ್ಟಿದೆ.

ಪೊಲೀಸರ ತನಿಖೆಯ ಪ್ರಕಾರ, ಶರ್ಮಿಳಾರ ಕೊಲೆಯನ್ನು 18 ವರ್ಷದ ಯುವಕ ಕರ್ಣಲ್ ಕುರೈ ಎಸಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸುಬ್ರಮಣ್ಯ ಲೇಔಟ್‌ನಲ್ಲಿರುವ ಶರ್ಮಿಳಾ ಮನೆಯ ಎದುರಿನ ಮನೆಯಲ್ಲಿ ವಾಸವಿದ್ದ ಕರ್ಣಲ್, ಶರ್ಮಿಳಾರನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದನು. ಆದರೆ ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ.

ಜನವರಿ 3ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿ ಶರ್ಮಿಳಾ ಮನೆಗೆ ನುಗ್ಗಿ, ಆಕೆಯನ್ನು ತಬ್ಬಿ ಅನುಚಿತವಾಗಿ ವರ್ತಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಆತನನ್ನು ತಳ್ಳಿದಾಗ, ಕೋಪಗೊಂಡ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶರ್ಮಿಳಾ ಮಲಗಿದ್ದ ಕೊಠಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಮಂಗಳೂರು ಮೂಲದ ಶರ್ಮಿಳಾ ಕಳೆದ ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್‌ನಲ್ಲಿ ವಾಸವಾಗಿದ್ದು, ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಜನವರಿ 3ರಂದು ರಾತ್ರಿ 10.30ರ ಸುಮಾರಿಗೆ ಮನೆಗೆ ಬೆಂಕಿ ಬಿದ್ದಿರುವುದನ್ನು ಕಂಡ ಮನೆ ಮಾಲೀಕ ವಿಜಯೇಂದ್ರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ, ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಮನೆ ಒಳಗಿನ ವಸ್ತುಗಳು ಸುಟ್ಟುಹೋಗಿದ್ದವು ಹಾಗೂ ಶರ್ಮಿಳಾ ಪ್ರಜ್ಞಾಹೀನಳಾಗಿ ಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಆದಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಮಗ್ರ ತನಿಖೆ ಬಳಿಕ ಇದು ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

‘ನಾನ್ ಕನ್ನಡ HR’ ನೇಮಕಾತಿ ಜಾಹೀರಾತು: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಖಾಸಗಿ ಕಂಪನಿ!

0

ಬೆಂಗಳೂರು: ಖಾಸಗಿ ಕಂಪನಿಗಳು ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡಿಗರನ್ನು ಕಡೆಗಣಿಸುತ್ತಿವೆ ಎಂಬ ಆರೋಪಗಳು ಮತ್ತೆ ಕೇಳಿಬಂದಿವೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎಂಬ ಖಾಸಗಿ ಕಂಪನಿಯೊಂದು ನೌಕ್ರಿ ಡಾಟ್ ಕಾಮ್‌ನಲ್ಲಿ ಪ್ರಕಟಿಸಿದ ನೇಮಕಾತಿ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕಂಪನಿಯು ಮಾನವ ಸಂಪನ್ಮೂಲ (HR) ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದು, “NON KANNADA HR” ಅಭ್ಯರ್ಥಿಗಳಿಗೆ ಆದ್ಯತೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿರುವುದು ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದೆ. ಈ ಜಾಹೀರಾತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.

ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಆದ್ಯತೆ ನೀಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಕನ್ನಡ ಪರ ಸಂಘಟನೆಗಳೂ ಪ್ರತಿಕ್ರಿಯಿಸಿದ್ದು, ಕನ್ನಡ ನೆಲದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆರೋಪಿಸಿವೆ. ಕಂಪನಿಯು ಕೂಡಲೇ ಕ್ಷಮೆ ಕೇಳಬೇಕು ಹಾಗೂ ವಿವಾದಾತ್ಮಕ ಜಾಹೀರಾತನ್ನು ವಾಪಸ್ ಪಡೆಯಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಶೋಕಿಗಾಗಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ಇಬ್ಬರು ಖದೀಮರು ಅರೆಸ್ಟ್!

0

ಮಂಡ್ಯ: ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸದ್ಧಾಂ ಹುಸೇನ್ ಮತ್ತು ಸೈಯದ್ ಅಯೂಬ್ ಬಂಧಿತರು. ಆರೋಪಿಗಳು ಈ ಹಿಂದೆ 30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು. ಶಿಕ್ಷೆ ಪಡೆದು ಹೊರಬಂದರೂ ಬುದ್ಧಿ ಕಲಿಯದೆ, ಒಂಟಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವುದು, ಮನೆಗಳಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ಮಾಡುವುದು, ಹೀಗೆ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಇತ್ತೀಚೆಗೆ ಕಿರುಗಾವಲು ಪೊಲೀಸರು ತನಿಖೆ ನಡೆಸಿ ಮಹತ್ವದ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31.98 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ಹಾಗೂ ಪಲ್ಸರ್ ಮತ್ತು ಆಕ್ಸಿಸ್ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಹ ಕಳ್ಳತನ ನಡೆಸಿದ್ದಾರೆ ಎಂಬುವುದು ಪೊಲೀಸರ ತನಿಖೆಯಲ್ಲಿ ಹೊರಬಂದಿದೆ.

error: Content is protected !!