Home Blog Page 184

KSRTC ಬಸ್‌ಗಳಲ್ಲಿ ಪ್ರಯಾಣಿಸೋ ಮಹಿಳೆಯರೇ ಈಕೆಯ ಟಾರ್ಗೆಟ್; 22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳಿ ಅರೆಸ್ಟ್!

0

ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳವು ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ಸುಮಾರು 22 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಹಿಳೆ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದವಳಾಗಿದ್ದು, ದೇವಸ್ಥಾನಗಳಿಗೆ ತೆರಳುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಜಂಗಮಕೋಟೆ ಕ್ರಾಸ್‌ನಿಂದ ಸೂಲಿಬೆಲೆಗೆ ತೆರಳುವ ಬಸ್‌ಗಳಲ್ಲಿ ಕಳವು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ, ಕುಪ್ಪಂ ಮೂಲದ ಮೀನಾಕ್ಷಿ ಎಂಬಾಕೆಯನ್ನು ಬಂಧಿಸಿ, ಆಕೆಯ ಬಳಿಯಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಟಾಕ್ಸಿಕ್’ ಟೀಸರ್‌ಗೆ ವಿರೋಧ: ಆಪ್ ಮಹಿಳಾ ಘಟಕದಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು!

0

ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕವು ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ.

ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಯಲ್ಲಿ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಲಭ್ಯವಿರದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ನೀಡಲಾಗಿದೆ.
ಟೀಸರ್‌ನಲ್ಲಿ ಕನ್ನಡ ಸಾಂಸ್ಕೃತಿಕ ಮೌಲ್ಯಗಳಿಗೆ ಅಪಮಾನವಾಗುವಂತಹ ದೃಶ್ಯಗಳಿದ್ದು, ಅವುಗಳನ್ನು ತಕ್ಷಣ ತೆಗೆದುಹಾಕುವಂತೆ ಹಾಗೂ ಟೀಸರ್ ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ. ಜೊತೆಗೆ ಸೆನ್ಸಾರ್ ಮಂಡಳಿಯೂ ಈ ವಿಷಯವನ್ನು ಪರಿಶೀಲಿಸಬೇಕು ಎಂದು ಆಪ್ ಮಹಿಳಾ ಘಟಕ ಆಗ್ರಹಿಸಿದೆ.

ಈ ಕುರಿತು ಮಾತನಾಡಿದ ಆಪ್ ಮಹಿಳಾ ಘಟಕದ ಕಾರ್ಯದರ್ಶಿ ಉಷಾ, “ಯಶ್ ಅವರು ತಮ್ಮ ಸಿನಿಮಾಗಳನ್ನು ಇಡೀ ಕುಟುಂಬ ಒಟ್ಟಿಗೆ ನೋಡಬಹುದಾದಂತಿರಬೇಕು ಎಂದು ಹೇಳುತ್ತಾರೆ. ಆದರೆ ಟೀಸರ್‌ನಲ್ಲಿರುವ ದೃಶ್ಯಗಳಲ್ಲಿ ಆ ಕಂಫರ್ಟ್ ಎಲ್ಲಿ ಇದೆ? ಕನ್ನಡ ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಳ್ಳಬೇಕಾದರೆ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಸಿನಿಮಾಗಳಾಗಬೇಕು, ಈ ರೀತಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

0

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (74) ಅವರ ಆರೋಗ್ಯದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನವರಿ 10ರಂದು ಧನಕರ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಎರಡು ಬಾರಿ ಪ್ರಜ್ಞೆ ತಪ್ಪಿದ್ದಾಗಿ ತಿಳಿದುಬಂದಿದೆ. ವೈದ್ಯರ ಸಲಹೆ ಮೇರೆಗೆ ಇಂದು (ಸೋಮವಾರ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ತಪಾಸಣೆಯ ಭಾಗವಾಗಿ MRI ಸ್ಕ್ಯಾನಿಂಗ್ ನಡೆಸಲು ನಿರ್ಧರಿಸಲಾಗಿದೆ.

ಏನಾಗಿತ್ತು?

ಶನಿವಾರ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಧನಕರ್ ಅವರು ಎರಡು ಬಾರಿ ಪ್ರಜ್ಞೆ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸೂಚಿಸಲಾಗಿತ್ತು. ಬಳಿಕ ಅವರು ಎರಡು ದಿನಗಳ ವಿರಾಮ ಪಡೆದಿದ್ದು, ಆರೋಗ್ಯ ಸ್ಥಿತಿಯ ಸಮಗ್ರ ಪರಿಶೀಲನೆಗಾಗಿ ಇಂದು ಏಮ್ಸ್‌ಗೆ ದಾಖಲಾಗಿದ್ದಾರೆ.

ಕಳೆದ ವರ್ಷ ಜುಲೈ 21ರಂದು ಧನಕರ್ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ವೇಳೆ ಪ್ರತಿಪಕ್ಷಗಳಿಂದ ರಾಜೀನಾಮೆ ಒತ್ತಾಯಪೂರ್ವಕವಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಧನಕರ್ ಅವರು ಕಛ್‌ನ ರಣ್, ಉತ್ತರಾಖಂಡ, ಕೇರಳ ಹಾಗೂ ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮಗಳ ಸಂದರ್ಭದಲ್ಲಿಯೇ ಕೆಲವು ಬಾರಿ ಅವರಿಗೆ ಪ್ರಜ್ಞೆ ತಪ್ಪಿದ ಘಟನೆಗಳು ಸಂಭವಿಸಿದ್ದಾವೆಂದು ವರದಿಗಳು ತಿಳಿಸಿವೆ.

ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯ ಬರ್ಬರ ಕೊಲೆ!

0

ನೆಲಮಂಗಲ:- ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದ ನಡು ರಸ್ತೆಯಲ್ಲಿ ಜರುಗಿದೆ.

ಕೊಲೆಯಾದ ವೃದ್ಧೆಯನ್ನು ದ್ರಾಕ್ಷಾಣಮ್ಮ ಎಂದು ಗುರುತಿಸಲಾಗಿದೆ. ಮೊಮ್ಮಗನ ಮುಂದೆಯೇ ಅಜ್ಜಿಯನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಲೆಯಾದ ದ್ರಾಕ್ಷಾಣಮ್ಮ ಅವರ ಪತಿ ನಾಗರಾಜು 8 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಮೊಮ್ಮಗನನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಯಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ದ್ವೇಷ ಭಾಷಣ ಮಸೂದೆ ವಿವಾದ: ರಾಜ್ಯಪಾಲರ ಮೆಟ್ಟಿಲೇರಿದ ಬಿಜೆಪಿ ನಿಯೋಗ

0

ಬೆಂಗಳೂರು: ರಾಜ್ಯ ಸರ್ಕಾರ ಕಳುಹಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025ಕ್ಕೆ ರಾಜ್ಯಪಾಲರು ಇನ್ನೂ ಸಹಿ ಹಾಕದೆ ತಡೆ ಹಿಡಿದಿರುವ ಬೆನ್ನಲ್ಲೇ, ಬಿಜೆಪಿ ರಾಜ್ಯ ನಾಯಕರು ಮಸೂದೆಗೆ ಸಹಿ ಹಾಕಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕರ ನಿಯೋಗವು ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಯಾವುದೇ ಕಾರಣಕ್ಕೂ ಜನತೆಯ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿದೆ. ಅಲ್ಲದೇ, ಅಗತ್ಯವಿದ್ದಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದೆ. ಈ ಸಂಬಂಧ ಬಿಜೆಪಿ ನಾಯಕರಿಂದ ಆರು ಪುಟಗಳ ಲಿಖಿತ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ.

ಇದೇ ವೇಳೆ, ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣಗಳಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಬಳ್ಳಾರಿ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಜತೆಗೆ ಶಾಸಕ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಪ್ರಾಣಭೀತಿ ಇರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಹಾಗೂ ಅಪರಾಧದ ಸಂಚುಗಳಿರುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಕೋರಿದೆ.

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ: CM ಸಿದ್ದರಾಮಯ್ಯ

0

ಕಲಬುರಗಿ: ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಲಬುರಗಿ ಇವರ ಸಮುಕ್ತಶ್ರಯದಲ್ಲಿ ಕೆಪಿಎಸ್ ಶಾಲಾ ಆವರಣ ಯಡ್ರಾಮಿ ಯಲ್ಲಿ ಆಯೋಜಿಸಲಾಗಿದ್ದ ಪ್ರಜಾಸೌಧ.

ಕೆಪಿಎಸ್ ಶಾಲೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ನಂತರ ವಿವಿಧ ಇಲಾಖೆಗಳ ಕಾರ್ಯಕ್ರಮ ಗಳಿಗೆ ಶಂಕುಸ್ಥಾಪನೆ ನೆರೆವೇರಿಸಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿ ಮಾತನಾಡಿದರು.

ನೂತನವಾಗಿ ಘೋಷಣೆಯಾಗಿರುವ ಯಡ್ರಾಮಿ ತಾಲ್ಲೂಕಿನಲ್ಲಿ, ಜೇವರ್ಗಿ ಮತಕ್ಷೇತ್ರದಲ್ಲಿ 87 ಕಾಮಗಾರಿಗಳ ಕಾಮಗಾರಿಗಳನ್ನು 867.49 ಕೋಟಿ ವೆಚ್ಚದ , 38.29 ಕೋಟಿ ವೆಚ್ಚ ಕಾಮಗಾರಿಗಳಿಗೆ ಉದ್ಘಾಟನೆ ಮಾಡಲಾಗಿದೆ. ಒಟ್ಟಾರೆ 906 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಿರೋಧಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರ ಒಂದರಲ್ಲಿ 906 ಕೋಟಿ ಗಳನ್ನು ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದರು.

ಕೋಗಿಲು ತೆರವು ವಿಚಾರದ NIA ತನಿಖೆಗೆ ಎಸ್.ಆರ್.ವಿಶ್ವನಾಥ್ ಒತ್ತಾಯ

0

ಬೆಂಗಳೂರು: ಕೋಗಿಲು ಬಡಾವಣೆ ಅಕ್ರಮವಾಸಿಗಳ ತೆರವು ಸಂಬಂಧ ಘಟನಾವಳಿಯ ತನಿಖೆಯನ್ನು ಎನ್‍ಐಎಗೆ ವಹಿಸುವಂತೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ. ಯಲಹಂಕದ ಕೋಗಿಲು ಬಡಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೇತೃತ್ವದ ಸತ್ಯಶೋಧನ ತಂಡವು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ವರದಿಯನ್ನು ಸಲ್ಲಿಸಿತು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇರಳದ ಸಿಎಂ, ಕೆ.ಸಿ.ವೇಣುಗೋಪಾಲ್ ಸಾಕಷ್ಟು ಕೂಗಾಡಿದರಲ್ಲವೇ? ತೆರವಾದವರ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಕೇರಳದವರಿಲ್ಲ. ಕೇರಳದ ಮತಕ್ಕಾಗಿ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಕೇರಳದವರು ಇರಲಿ ಬಿಡಲಿ; ಅಲ್ಲಿನ ರಾಜಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಲಿ ಪಡೆಯುವ ಕೆಲಸ ಮಾಡಿದ್ದಾರೆ. ಒಬ್ಬರೇ ಒಬ್ಬರು ಕೇರಳದವರಿಲ್ಲ. ಒಬ್ಬರೇ ಒಬ್ಬರು ಕ್ರಿಶ್ಚಿಯನ್ ಇದ್ದಾರೆ. ನಮಗೆ ಸಿಕ್ಕಿದ ಪಟ್ಟಿಯಲ್ಲಿ ಬಹುತೇಕ ಎಲ್ಲರೂ ಮುಸ್ಲಿಮರೇ ಇದ್ದಾರೆ. ಬೆಂಗಳೂರಿನಲ್ಲಿ ಸರಕಾರಿ ಜಾಗದಲ್ಲಿ ಹೊಸದಾಗಿ ಗುಡಿಸಲು ಹಾಕಿಕೊಂಡವರನ್ನು ಕೂಡಲೇ ಸರಕಾರ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿರುವ 100 ಚಿಂದಿ ಆಯುವವರ ಪೈಕಿ ಶೇ 95 ಜನರು ರೋಹಿಂಗ್ಯಾಗಳೇ ಇದ್ದಾರೆ. ಅವರ ಬಳಿ ಕೆಲವು ಕಾರ್ಡ್‍ಗಳಿವೆ. ನಾವು ಹೋಗಿ ಕೇಳಿದಾಗ ಕೊಟ್ಟಿಲ್ಲ. ವಲಸಿಗರ ಕಾರ್ಡ್ ಅವರ ಬಳಿ ಇದೆ. ಹಣ ಕೊಟ್ಟು ಗಡಿ ದಾಟಿ ಬಂದುದಾಗಿ ಹೇಳುತ್ತಾರೆ. ಪಶ್ಚಿಮ ಬಂಗಾಲದ ಮೂಲಕ ಬರಲು ವ್ಯವಸ್ಥೆ ಕಲ್ಪಿಸುವ ತಂಡವೇ ಇದೆ ಎಂದು ಅವರೇ ಹೇಳಿದ್ದಾಗಿ ವಿವರಿಸಿದರು.

ಅವರ ಭಾಷೆ ಹಿಂದಿಯೂ ಅಲ್ಲ; ಉರ್ದುವೂ ಅಲ್ಲ. ಅದು ನಮಗೆ ಅರ್ಥವೂ ಆಗುವುದಿಲ್ಲ ಎಂದು ತಿಳಿಸಿದರು. ಬಾಂಗ್ಲಾ ಮತ್ತು ರೋಹಿಂಗ್ಯಾ ಭಾಷೆ ಕೇಳಿದೊಡನೆ ಗೊತ್ತಾಗುತ್ತದೆ. ಮೊನ್ನೆ ಟಿ.ವಿ ಚಾನೆಲ್ ಒಂದರಲ್ಲಿ ಮಹಿಳೆಯೊಬ್ಬರು ಜೈ ಬಾಂಗ್ಲಾ ಹೇಳಿದ್ದನ್ನು ಕೇಳಿದ್ದೇವೆ ಎಂದು ತಿಳಿಸಿದರು. ಅವರು ರಾಜಾರೋಷವಾಗಿ ಇದ್ದಾರೆ ಎಂದರು.

ಫಿನಾಲೆ ಹೊತ್ತಲ್ಲೇ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ ʻರಣ ಹದ್ದುʼ: ದೂರು ದಾಖಲು

ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ. ರಣಹದ್ದು ಕುರಿತು ತಪ್ಪು ಮಾಹಿತಿ ಹರಡಿದ್ದಾರೆ ಎಂಬ ಆರೋಪದಡಿ ಪರಿಸರ ಪ್ರಿಯರು ರಾಮನಗರ ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ಸ್ಪರ್ಧಿಯೊಬ್ಬರ ಕುತ್ತಿಗೆಗೆ ರಣಹದ್ದು ಫೋಟೋ ಹಾಕಿಸಿ “ಹೊಂಚುಹಾಕಿ, ಸಂಚು ಮಾಡಿ, ಸರಿಯಾದ ಸಮಯದಲ್ಲಿ ಲಬಕ್ ಅಂತ ಹಿಡಿಯುವವರು ಯಾರು?” ಎಂದು ಪ್ರಶ್ನಿಸಿದ್ದನ್ನು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.

ಟ್ರಸ್ಟ್ ಹೇಳುವಂತೆ, ರಣಹದ್ದು ಯಾವುದೇ ಜೀವಿಗೆ ಹಾನಿ ಮಾಡುವ ಪಕ್ಷಿ ಅಲ್ಲ. ಅದು ಸತ್ತ ಪ್ರಾಣಿಗಳನ್ನು ಮಾತ್ರ ಸೇವಿಸಿ, ಪರಿಸರದ ಸ್ವಚ್ಛತೆ ಮತ್ತು ಸಮತೋಲನ ಕಾಪಾಡುವ ಅತ್ಯಂತ ಉಪಯುಕ್ತ ಪಕ್ಷಿ. ಈಗಾಗಲೇ ಅಳಿವಿನಂಚಿನಲ್ಲಿರುವ ಈ ಪಕ್ಷಿ ಬಗ್ಗೆ ತಪ್ಪು ಸಂದೇಶ ಹರಡುವುದು ಜನರಲ್ಲಿ ಭ್ರಾಂತಿ ಉಂಟುಮಾಡುತ್ತದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ.

ಈ ಹಿನ್ನೆಲೆ ಬಿಗ್ ಬಾಸ್ ಸಂಸ್ಥೆ ಮತ್ತು ಕಿಚ್ಚ ಸುದೀಪ್ ಅವರಿಗೆ ರಣಹದ್ದು ಕುರಿತು ಸರಿಯಾದ ಅರಿವು ಮೂಡಿಸುವಂತೆ ರಾಮನಗರ ಡಿಸಿಎಫ್ ಮತ್ತು ಆರ್‌ಎಫ್‌ಓ ಮನ್ಸೂರ್ ಅವರಿಗೆ ಅಧಿಕೃತ ದೂರು ನೀಡಲಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜಿರಾಮ್ ಜಿ ವಿಚಾರದಲ್ಲಿ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

0

ಬೆಂಗಳೂರು: ಜಿರಾಮ್ಜಿ ವಿಚಾರದಲ್ಲಿ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ ಮತ್ತು ಹೋರಾಟವನ್ನು ಇಲ್ಲಿ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ ಮಾಡಿದ ಬಳಿಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪವನ್ನು ತಿರಸ್ಕರಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ನಾನು ಯಾರ ಹೇಳಿಕೆಗೂ ತಕ್ಷಣ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಜಿರಾಮ್ಜಿ ವಿರುದ್ಧ ಹೋರಾಟ ನಿಲ್ಲುವುದಿಲ್ಲ ಮತ್ತು ಇದನ್ನು ಇಲ್ಲಿ ಬಿಡುವುದಿಲ್ಲಎಂದು ತಿಳಿಸಿದ್ದಾರೆ.

ಖರ್ಗೆ, ಮನ್ರೇಗಾ ಕಾರ್ಯಕ್ರಮದ ಮೂಲಕ ರೈತಕೃಷಿಕರಿಗೆ ಕೊಡುಗೆ ನೀಡಲಾಗಿದೆ ಎಂದಿದ್ದು, ಇದನ್ನು ಪ್ರಧಾನಿ ಮನ್ಮೋಹನ್ ಸಿಂಗ್ ಕಾಲದ ಬಡವರಿಗೆ ಸಹಾಯ ಮಾಡುವ ಕಾನೂನಾತ್ಮಕ ಯೋಜನೆಯೊಂದಿಗೆ ಹೋಲಿಸಿದ್ದಾರೆ. ಆದರೆ, ಸರ್ಕಾರ ಬಡವರಿಗೆ ಸಹಾಯ ಮಾಡುವ ಕಾನೂನಿಗೆ ವಿರೋಧವಂತೆ ಕೆಲಸ ಮಾಡುತ್ತಿರುವಂತೆ ಖರ್ಗೆ ಆರೋಪಿಸಿದ್ದಾರೆ.

ಅವರು, “ಪಂಚಾಯತ್ ಮಟ್ಟದಲ್ಲಿ ನಡೆಯುವ ಕಾರ್ಯಗಳಿಗೆ ಅಡ್ಡಿಯಾಗುವ ಯೋಜನೆ ರೂಪಿಸಲಾಗಿದೆ. 60:40 ಶೇರ್ ಹಂಚಿಕೆಯಲ್ಲಿ ರಾಜ್ಯದ ಮೇಲೆ 30% ಹೆಚ್ಚುವರಿ ಭಾರವನ್ನು ಹಾಕುತ್ತಿದ್ದಾರೆಎಂದು ವಾಗ್ದಾಳಿ ನಡೆಸಿದ್ದಾರೆ.

ಶರಾವತಿ ಹಿನ್ನೀರಿನಲ್ಲಿ ಪಶುವೈದ್ಯ ಮುಳುಗಿ ದುರ್ಮರಣ!

0

ಶಿವಮೊಗ್ಗ: ಸಾಗರದ ಹಕ್ರೆ ಬಳಿಯ ಶರಾವತಿ ಹಿನ್ನೀರಿನಲ್ಲಿ ಮುಳುಗಿ, ಪಶು ವೈದ್ಯರು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಸುನೀಲ್ (38) ಎಂದು ಗುರುತಿಸಲಾಗಿದೆ. ಅವರು ಸಾಗರದ ಮಾಸೂರಿನ ಪಶು ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ, ಕುಟುಂಬ ಸಮೇತ ಶರಾವತಿ ಹಿನ್ನೀರಿಗೆ ಪಿಕ್ನಿಕ್ಗೆ ತೆರಳಿದ್ದರು. ವೇಳೆ ನೀರಿನಲ್ಲಿ ಈಜಲು ಹೋಗಿದಾಗ ಮುಳುಗಿ ಸಾವನ್ನಪ್ಪಿದ್ದಾರೆ.

ಸುನೀಲ್ ನೀರಿನಲ್ಲಿ ನಾಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಸ್ಥಳೀಯ ಪೊಲೀಸರು ಮಾಹಿತಿ ನೀಡಿದರು. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವನ್ನು ನೀರಿನಿಂದ ಮೇಲಕ್ಕೆತ್ತಿದರು. ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!