Home Blog Page 185

ಲಕ್ಕುಂಡಿ ನಿಧಿ ಪ್ರಕರಣ: ಗೊಂದಲ ಸೃಷ್ಟಿಸಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ?

0

ಬೆಂಗಳೂರು: ಭೂಮಿಯ ಒಳಗೆ ಯಾವುದೇ ಬೆಲೆಬಾಳುವ ಅಥವಾ ಮೌಲ್ಯಯುತ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿಯಾಗುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಹೆಚ್.ಕೆ. ಪಾಟೀಲ್ (HK Patil) ಸ್ಪಷ್ಟಪಡಿಸಿದ್ದಾರೆ.

ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದೆ ಎನ್ನಲಾದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಕುಟುಂಬದ ಪ್ರಾಮಾಣಿಕತೆಯನ್ನು ಗೌರವಿಸುತ್ತೇವೆ. ಆದರೆ ಅದು ನಿಧಿಯಲ್ಲ, ಕುಟುಂಬದ ಬಂಗಾರ ಎಂಬಂತೆ ಅನಗತ್ಯ ಗೊಂದಲ ಉಂಟು ಮಾಡಲಾಗುತ್ತಿದೆ ಎಂದು ಹೇಳಿದರು. ಈ ಗೊಂದಲಕ್ಕೆ ಅಲ್ಲಿನ ಎಎಸ್ಐ ಅಧಿಕಾರಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ ಸಚಿವರು, ಅನಗತ್ಯ ಗೊಂದಲ ಸೃಷ್ಟಿಸಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಭೂಮಿಯೊಳಗೆ ಸಿಕ್ಕ ಯಾವುದೇ ಮೌಲ್ಯಯುತ ವಸ್ತುಗಳು ಸರ್ಕಾರಕ್ಕೆ ಸೇರಿದ್ದೇ ಆಗುತ್ತದೆ. ಸದ್ಯ ಆ ಬಂಗಾರವನ್ನು ಜಿಲ್ಲಾ ಆಡಳಿತ ಖಜಾನೆಯಲ್ಲಿ ಸುರಕ್ಷಿತವಾಗಿ ಭದ್ರಪಡಿಸಿದೆ ಎಂದು ತಿಳಿಸಿದರು.

ಇದು ಆ ಕುಟುಂಬಕ್ಕೆ ಸೇರಿದ್ದೇ ಅಥವಾ ಆ ಜಾಗದ ಮೂಲ ಮಾಲೀಕರಿಗೆ ಸೇರಿದದ್ದೇ? ರಾಷ್ಟ್ರಕೂಟರ ಕಾಲದದೋ, ಚಾಲುಕ್ಯರ ಕಾಲದ ಐತಿಹಾಸಿಕ ವಸ್ತುವೋ ಎಂಬ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.

ಶೌಚಾಲಯ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನ: ಖಾಲಿ ಕೈಯಲ್ಲಿ ಹಿಂತಿರುಗಿದ ಖದೀಮರು

0

ಕಾರವಾರ: ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ–63ರ ಪಕ್ಕದಲ್ಲೇ ಬ್ಯಾಂಕ್ ಆಫ್ ಬರೋಡಾ ಶಾಖೆ ಇದೆ. ಶೌಚಾಲಯ ಪ್ರದೇಶವನ್ನು ಹೊರತುಪಡಿಸಿ ಇತರೆ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳಿರುವುದನ್ನು ತಿಳಿದ ಖದೀಮರು, ಶೌಚಾಲಯದ ಹಿಂಭಾಗದ ಗೋಡೆಯನ್ನು ಕೊರೆದು ಬ್ಯಾಂಕ್ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಬ್ಯಾಂಕ್‌ನ ಸ್ಟ್ರಾಂಗ್ ರೂಮ್ ಗೋಡೆ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದೆ ಹೋದ ಕಾರಣ ಕಳ್ಳರು ಯಾವುದೇ ಹಣ ಅಥವಾ ವಸ್ತುಗಳನ್ನು ಕಳ್ಳತನ ಮಾಡದೇ ಖಾಲಿ ಕೈಯಲ್ಲಿ ಹಿಂತಿರುಗಿದ್ದಾರೆ.

ಘಟನೆಯ ಮಾಹಿತಿ ಪಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ತಜ್ಞರ ತಂಡದಿಂದ ಪರಿಶೋಧನೆ ಕಾರ್ಯ ಕೈಗೊಳ್ಳಲಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿ; ಅದು ಸರಕಾರದ ಸೊತ್ತು; ಹಂಪಿ ಪುರಾತತ್ವ ಇಲಾಖೆಯ ಅಧಿಕಾರಿ ಸ್ಪಷ್ಟನೆ

0

ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಂಪಿ ವಿಭಾಗದ ನಿರ್ದೇಶಕ ಶೇಜೇಶ್ವರ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಪತ್ತೆಯಾದ ಆಭರಣಗಳು ಯಾವ ಕಾಲಕ್ಕೆ ಸೇರಿದವು? ಯಾರ ಆಳ್ವಿಕೆಗೆ ಸಂಬಂಧಿಸಿದೆ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, 1962ರ ಕಾಯ್ದೆ ಅನ್ವಯ 10 ರೂ ಮೌಲ್ಯಕ್ಕಿಂತ ಹೆಚ್ಚಿನ ವಸ್ತುಗಳು ಸರ್ಕಾರಕ್ಕೆ ಸೇರಬೇಕು. ಭೂಮಿಗೆ ಅಂಟಿಕೊಂಡಿರುವುದು ಅಥವಾ ಒಂದು ಅಡಿ ಆಳಕ್ಕಿಂತ ಕೆಳಗೆ ಸಿಕ್ಕ ನಿಧಿ ಸರ್ಕಾರದ ಆಸ್ತಿಯಾಗುತ್ತದೆ.

ಆದರೆ, ಸಿಕ್ಕ ನಿಧಿಯ ಮೌಲ್ಯದ ಐದನೇ ಒಂದು ಭಾಗ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಪರಿಹಾರವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಮನೆ ನಿರ್ಮಾಣಕ್ಕೆ ಅಧಿಕಾರಿಗಳ ಸಹಕಾರ ಮತ್ತು ಅನುಮತಿ ನೀಡಲಾಗುತ್ತದೆ
ಈ ಪ್ರಕರಣ ಇದೀಗ ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂ ಕೋರ್ಟ್ ಆದೇಶ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಚುನಾವಣೆ ನಡೆಸುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಜೂನ್ 30ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ ಐದು ಪಾಲಿಕೆಗಳಿಗೆ ಚುನಾವಣೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.

ಜಿಬಿಎ ಚುನಾವಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.

ಈ ವೇಳೆ ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಮೀಸಲಾತಿ ಪ್ರಕ್ರಿಯೆಯ ಅಂತಿಮ ಹಂತ ನಡೆಯುತ್ತಿದ್ದು, ಅದು ಫೆಬ್ರವರಿ 28ರವರೆಗೆ ಮುಂದುವರಿಯಲಿದೆ. ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ ಎಂದು ಕೋರ್ಟ್‌ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಪರ ವಕೀಲರು, ಮಾರ್ಚ್ 16ರೊಳಗೆ ಮತದಾರರ ಪಟ್ಟಿಯ ಪರಿಶೀಲನೆ ಮುಕ್ತಾಯಗೊಳ್ಳಲಿದೆ. ನಂತರ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿರುವುದರಿಂದ, ಮೇ ಅಂತ್ಯದವರೆಗೂ ಸಮಯ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಎಷ್ಟು ಸಮಯ ಬೇಕು ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಆಯೋಗ, ಜೂನ್ ವರೆಗೆ ಸಮಯ ಬೇಕಾಗಬಹುದು ಎಂದು ತಿಳಿಸಿತು.

ಎಲ್ಲ ವಾದಗಳನ್ನು ಆಲಿಸಿದ ಬಳಿಕ, ಸುಪ್ರೀಂ ಕೋರ್ಟ್ ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಆದೇಶ ನೀಡಿತು. ಜೊತೆಗೆ, ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತೆ ಸಮಯ ಕೇಳಬಾರದು ಎಂದು ಕಠಿಣ ಎಚ್ಚರಿಕೆಯನ್ನೂ ನೀಡಿದೆ.

ಕೋಗಿಲು ವಿವಾದ: BJP ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಿದ ಸತ್ಯಶೋಧನಾ ತಂಡ

0

ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ತೆರವಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಸತ್ಯಶೋಧನವು ತಂಡವು ಇಂದು ವರದಿ ಸಲ್ಲಿಸಿತು.

ಘಟನಾವಳಿಗಳನ್ನು ಪರಿಶೀಲಿಸಿ ವರದಿ ಕೊಡಲು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ಸತ್ಯಶೋಧನವು ತಂಡವನ್ನು ನೇಮಿಸಲಾಗಿತ್ತು. ಈ ತಂಡವು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ವರದಿಯನ್ನು ಸಲ್ಲಿಸಿತು.

ಈ ಸಂದರ್ಭದಲ್ಲಿ ಶಾಸಕ ಎಸ್. ಮುನಿರಾಜು, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕ ಅವಿನಾಶ್, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್‍ಉಪಸ್ಥಿತರಿದ್ದರು.

ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು: ಮಕ್ಕಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು!

0

ಚಿಕ್ಕಮಗಳೂರು: ರಸ್ತೆಯಲ್ಲಿನ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಪ್ರೌಢಶಾಲೆಯ ಮಕ್ಕಳೇ ಮುಂದಾಗಿ ಗುಂಡಿಗಳನ್ನು ಮುಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ನಡೆದಿದೆ.

ಕರ್ಕೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಪಾಲ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ದಿನನಿತ್ಯ ಶಾಲೆಗೆ ತೆರಳುವ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಹಲವು ಬಾರಿ ದೂರು ನೀಡಿದರೂ ಆಡಳಿತದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಮಕ್ಕಳೆ ಸಿಮೆಂಟ್, ಮರಳು ಮತ್ತು ಜಲ್ಲಿಯನ್ನು ತಂದು ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಪ್ಯಾಚ್ ಕೆಲಸ ಮಾಡಿದ್ದಾರೆ.
ಮಕ್ಕಳ ಈ ಸಾಮಾಜಿಕ ಹೊಣೆಗಾರಿಕೆಗೆ ಗ್ರಾಮಸ್ಥರು ಹಾಗೂ ರಸ್ತೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಇದು ಮಕ್ಕಳ ಜವಾಬ್ದಾರಿ ಅಲ್ಲ, ಆದರೆ ಅವರು ಮಾಡಿರುವ ಕೆಲಸ ನಮಗೆ ಪಾಠ” ಎಂದು ಸಾರ್ವಜನಿಕರು ಹೇಳಿದ್ದಾರೆ.ಇದೇ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ ಆಡಳಿತ ವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಮೂಲಭೂತ ಸೌಕರ್ಯ ಒದಗಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ದುಃಖಕರ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಆಕ್ರೋಶಕ್ಕೆ ಮಣಿದ ಕಂಪನಿ: ‘ನಾನ್ ಕನ್ನಡಿಗ HR’ ಜಾಹೀರಾತು ರದ್ದು, ಬಹಿರಂಗ ಕ್ಷಮೆಯಾಚನೆ

0

ಬೆಂಗಳೂರು: ನಾನ್ ಕನ್ನಡಿಗ ಹೆಚ್‌ಆರ್ ಅಭ್ಯರ್ಥಿಯೇ ಬೇಕು ಎಂದು ಉದ್ಯೋಗ ಪ್ರಕಟಣೆ ಹೊರಡಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಖಾಸಗಿ ಕಂಪನಿ ಇದೀಗ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿಕೊಂಡಿದೆ.

ಸ್ಕಿಲ್ ಸೋನಿಕ್ಸ್ (Skill Sonics) ಎಂಬ ಕಂಪನಿ ನೌಕರಿ ಡಾಟ್ ಕಾಮ್‌ನಲ್ಲಿ ನಾನ್ ಕನ್ನಡಿಗ ಹೆಚ್‌ಆರ್ ಅಗತ್ಯ ಎಂಬ ರೀತಿಯ ಪ್ರಕಟಣೆ ನೀಡಿತ್ತು. ಈ ವಿಷಯ ಬೆಳಕಿಗೆ ಬಂದ ಕೂಡಲೇ ಕನ್ನಡಿಗರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಜೆಪಿ ನಗರದ ಸಂಸ್ಥೆಯ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ನೇಮಕಾತಿ ಪ್ರಕಟಣೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತ ಕಂಪನಿ ಮ್ಯಾನೇಜರ್, ಇದು ಕೋಲ್ಕತ್ತಾ ವಿಭಾಗದಿಂದ ನಡೆದ ಅಚಾತುರ್ಯ ಎಂದು ಸ್ಪಷ್ಟನೆ ನೀಡಿದರು. ವಿವಾದ ಸೃಷ್ಟಿಸಿದ ನೇಮಕಾತಿ ಪ್ರಕಟಣೆಯನ್ನು ರದ್ದುಪಡಿಸಿರುವುದಾಗಿ ತಿಳಿಸಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟಾದರೆ ಕ್ಷಮೆ ಇರಲಿ ಎಂದು ಕೈಮುಗಿದು ಕ್ಷಮೆಯಾಚಿಸಿದ್ದಾರೆ.

ಪವಿತ್ರಾ ಗೌಡಗೆ ಕೋರ್ಟ್ ರಿಲೀಫ್: ವಾರಕ್ಕೊಮ್ಮೆ ಮನೆಯೂಟಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡಗೆ ಕೊನೆಗೂ ಕೋರ್ಟ್‌ ರಿಲೀಫ್ ನೀಡಿದೆ. ವಾರಕ್ಕೊಮ್ಮೆ ಮನೆಯೂಟ ನೀಡಲು ನ್ಯಾಯಾಲಯ ಅನುಮತಿ ನೀಡಿದೆ.

ಜ.12ರಂದು ನಡೆದ ವಿಚಾರಣೆಯಲ್ಲಿ, ಪವಿತ್ರಾ ಗೌಡ ಅವರ ಆರೋಗ್ಯ ಸಮಸ್ಯೆಗಳನ್ನು ಗಮನಿಸಿದ ನ್ಯಾಯಾಲಯ, ವಾರಕ್ಕೊಮ್ಮೆ ಮನೆಯೂಟ ಕೊಡಬೇಕು ಎಂದು ಸೂಚಿಸಿದೆ. ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಮೇರೆಗೆ ಊಟ ನೀಡುವಂತೆ ಕೋರ್ಟ್ ಆದೇಶಿಸಿದೆ.

ಈ ಹಿಂದೆ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಜೈಲಿನ ಊಟದಿಂದ ಆರೋಗ್ಯ ಹದಗೆಡುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲಿಗೆ ನ್ಯಾಯಾಲಯ ದಿನಕ್ಕೊಮ್ಮೆ ಮನೆಯೂಟಕ್ಕೆ ಅವಕಾಶ ನೀಡಿತ್ತು.

ಆದರೆ ಕಾರಾಗೃಹ ಇಲಾಖೆ, ಇದರಿಂದ ಜೈಲಿನಲ್ಲಿರುವ ಸಾವಿರಾರು ಕೈದಿಗಳು ಇದೇ ರೀತಿಯ ಬೇಡಿಕೆ ಇಡಬಹುದು ಎಂದು ಆತಂಕ ವ್ಯಕ್ತಪಡಿಸಿ, ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪವಿತ್ರಾ ಗೌಡ ಪರ ವಕೀಲರು, ಜೈಲಿನ ಆಹಾರದಿಂದ ಚರ್ಮರೋಗ, ಗುಳ್ಳೆಗಳು, ಫುಡ್ ಪಾಯಿಸನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲೇ ಇದೀಗ ಕೋರ್ಟ್ ಮಧ್ಯಮ ಮಾರ್ಗವಾಗಿ ವಾರಕ್ಕೆ ಒಮ್ಮೆ ಮನೆಯೂಟಕ್ಕೆ ಅವಕಾಶ ನೀಡಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಜ.13ರಂದು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ

0

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದಿನ ಸಬರಮತಿ ಆಶ್ರಮದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026ದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಜರ್ಮನ್ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರೊಂದಿಗೆ ಉತ್ಸವದಲ್ಲಿ ಗಾಳಿಪಟ ಹಾರಿಸಿದ್ದಾರೆ.

ಆಶ್ರಮಕ್ಕೆ ಆಗಮಿಸಿದ ಬಳಿಕ ಇಬ್ಬರೂ ನಾಯಕರು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಪುಷ್ಪ ನಮನ ಸಲ್ಲಿಸಿದರು. ಮೆರ್ಜ್ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿಯೂ ಸಹಿ ಹಾಕಿದರು. ನಂತರ ಸಬರಮತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ, ವಾತಾವರಣದ ಮೋಜನ್ನು ಅನುಭವಿಸಿದರು.

ಗುಜರಾತ್ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಅಚಾರ್ಯ ದೇವವ್ರತ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡಿದ್ದರು. ಈ ವೇಳೆ, ಭಾರತ ಮತ್ತು ಜರ್ಮನಿ ನಡುವೆ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳು ಆಚರಿಸಲಾಗುತ್ತಿದ್ದು, ಇದರೊಂದಿಗೆ ಮೆರ್ಜ್ ಭಾರತ ಭೇಟಿ ವಿಶೇಷತೆಯನ್ನು ಪಡೆದಿದೆ.

ಮೂರನೇ ಹಂತದಲ್ಲಿ ತಾಂತ್ರಿಕ ದೋಷ: PSLV ರಾಕೆಟ್ ಉಡಾವಣೆ ವಿಫಲ

0

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬೆಳಗ್ಗೆ 10:18ಕ್ಕೆ PSLV-C62 ರಾಕೆಟ್ ಅನ್ನು ಉಡಾವಣೆ ಮಾಡಿತ್ತು. ಈ ಮಿಷನ್ ಅನ್ವೇಶಾ/EOS- N1 ಉಪಗ್ರಹ ಹಾಗೂ 14 ಸಣ್ಣ ಉಪಗ್ರಹಗಳನ್ನು ತಲುಪಿಸುವ ಉದ್ದೇಶ ಹೊಂದಿತ್ತು.

ಪ್ರಾರಂಭಿಕ ಹಂತದಲ್ಲಿ ರಾಕೆಟ್ ಸಾಧಾರಣವಾಗಿ ಹಾರುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. ಆದರೆ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಂಡು ಬಂದುದರಿಂದ ಮಿಷನ್ ಯಶಸ್ವಿಯಾಗಲಿಲ್ಲ ಎಂದು ISRO ಅಧಿಕೃತವಾಗಿ ಹೇಳಿದೆ.

 “PSLV-C62 ಮಿಷನ್ ಆರಂಭ ಚೆನ್ನಾಗಿತ್ತು. ಆದರೆ ಮೂರನೇ ಹಂತದ ಅಂತ್ಯದ ವೇಳೆಗೆ ವಾಹನ ತನ್ನ ಪಥದಲ್ಲಿ ಬದಲಾವಣೆ ಕಂಡು, ನಿರೀಕ್ಷಿತ ಕಾರ್ಯಕ್ಷಮತೆಯನ್ನು ತಲುಪಲಿಲ್ಲ. ನಾವು ಲಭ್ಯವಿರುವ ಡೇಟಾವನ್ನು ವಿಶ್ಲೇಷಿಸಿ ಶೀಘ್ರವೇ ವಿಫಲತೆಯ ನಿಖರ ಕಾರಣವನ್ನು ಪತ್ತೆ ಮಾಡಲಿದ್ದೇವೆ ಎಂದು ISRO ಅಧ್ಯಕ್ಷ ವಿ ನಾರಾಯಣನ್ ತಿಳಿಸಿದ್ದಾರೆ.

error: Content is protected !!