Home Blog Page 19

ದೇಶದ ಜನತೆಗೆ ಗುರು ಪೂರ್ಣಿಮೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ: ಗುರುವಿನ ಮಹತ್ವ ಸಾರಿದ ಸಂಸ್ಕೃತ ಶ್ಲೋಕ

0

ನವದೆಹಲಿ: ಗುರು ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ. ಗುರುಗಳು ಕೇವಲ ಅಕ್ಷರ ಜ್ಞಾನ ನೀಡುವವರಲ್ಲ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿ, ಉತ್ತಮ ಚಿಂತನೆ ಹಾಗೂ ಮೌಲ್ಯಗಳನ್ನು ಬೆಳೆಸಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಶಕ್ತಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಗುರುವಿನ ಮಹತ್ವವನ್ನು ವಿವರಿಸುವ ಸಂಸ್ಕೃತ ಸುಭಾಷಿತವೊಂದನ್ನು ಉಲ್ಲೇಖಿಸಿದ್ದಾರೆ.

“ಪ್ರೇರಕಃ ಸೂಚಕಶ್ಚೈವ ವಾಚಕೋ ದರ್ಶಕಸ್ತಥಾ। ಶಿಕ್ಷಕಃ ಬೋಧಕಶ್ಚೈವ ಷಡೇತೇ ಗುರವಃ ಸ್ಮೃತಾಃ”

ಈ ಶ್ಲೋಕದ ಅರ್ಥವನ್ನು ವಿವರಿಸಿರುವ ಪ್ರಧಾನಿ, ಪ್ರೇರಕ ಪ್ರೇರಣೆ ನೀಡುವವನು, ಸೂಚಕ ಸರಿಯಾದ ದಾರಿಯನ್ನು ತೋರಿಸುವವನು, ವಾಚಕ ಜ್ಞಾನವನ್ನು ಹಂಚುವವನು, ದರ್ಶಕ ಸನ್ಮಾರ್ಗದತ್ತ ಮುನ್ನಡೆಸುವವನು, ಶಿಕ್ಷಕ ವಿದ್ಯೆ ಮತ್ತು ಕೌಶಲ್ಯ ಬೋಧಿಸುವವನು ಹಾಗೂ ಬೋಧಕ ಜೀವನದ ಸತ್ಯವನ್ನು ಅರಿವಿಗೆ ತರುವವನು ಎಂದು ಹೇಳಿದ್ದಾರೆ. ಈ ಆರು ರೂಪಗಳೂ ಗುರುವಿನ ಶ್ರೇಷ್ಠ ಸ್ವರೂಪಗಳೆಂದು ಸ್ಮರಿಸಿದ್ದಾರೆ.

ಪ್ರಧಾನಿ ತಮ್ಮ ಸಂದೇಶದಲ್ಲಿ, “ಗುರುವು ಜ್ಞಾನ ಧಾರೆ ಎರೆಯುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತಾರೆ. ಸದುಲೋಚನೆ ಹಾಗೂ ಸಂಸ್ಕಾರಗಳೊಂದಿಗೆ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುತ್ತಾರೆ. ಅಂತಹ ಮಹಾನ್ ಗುರುಗಳ ಆದರ್ಶಗಳನ್ನು ನಮ್ಮ ಬದುಕಿನ ದಾರಿದೀಪವನ್ನಾಗಿ ಮಾಡಿಕೊಳ್ಳೋಣ” ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ಪ್ರೇಯಸಿಗೆ ಕೊನೆಯ ಕರೆ ಮಾಡಿ ರೈಲಿಗೆ ತಲೆಕೊಟ್ಟ ಯುವಕ: 400 ಮೀಟರ್ ದೂರದಲ್ಲಿ ಪತ್ತೆಯಾದ ರುಂಡು!

0

ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಮೊದಲಿಗೆ ತಲೆಯಿಲ್ಲದ ಮೃತದೇಹ ಮಾತ್ರ ಪತ್ತೆಯಾಗಿದ್ದರೆ, ಇದೀಗ ಘಟನೆಯ ಮರುದಿನ ರುಂಡು ಸುಮಾರು 400 ಮೀಟರ್ ದೂರದ ಮೈದಾನದಲ್ಲಿ ಪತ್ತೆಯಾಗಿದೆ. ಮೃತನನ್ನು ಆಂಧ್ರ ಪ್ರದೇಶ ಮೂಲದ 28 ವರ್ಷದ ವಿಶ್ವನಾಥ್ ಎಂದು ಗುರುತಿಸಲಾಗಿದೆ.

ಆರಂಭದಲ್ಲಿ ತಲೆಯಿಲ್ಲದ ಮೃತದೇಹ ಮಾತ್ರ ಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಮಂಗಳವಾರ ಸ್ಥಳೀಯರು ಮೈದಾನದಲ್ಲಿ ಮಾನವ ತಲೆ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಆತ್ಮಹತ್ಯೆ ಮಾಡಿಕೊಂಡಿದ್ದ ವಿಶ್ವನಾಥ್ ಅವರ ರುಂಡು ಎಂಬುದು ದೃಢಪಟ್ಟಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ರೈಲಿಗೆ ತಲೆಕೊಟ್ಟ ಪರಿಣಾಮ ದೇಹ ಮತ್ತು ರುಂಡು ಬೇರ್ಪಟ್ಟಿದ್ದು, ಬಳಿಕ ನಾಯಿಗಳು ರುಂಡನ್ನು ಸುಮಾರು 400 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದ್ದವು ಎಂದು ಶಂಕಿಸಲಾಗಿದೆ. ಪತ್ತೆಯಾದ ರುಂಡನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.

ಇದೇ ವೇಳೆ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಆತ್ಮಹತ್ಯೆಗೆ ಮುನ್ನ ವಿಶ್ವನಾಥ್ ತಮ್ಮ ಪ್ರೇಯಸಿಗೆ ಕರೆ ಮಾಡಿ ಮಾತನಾಡಿದ್ದರು. ಆ ಮಾತುಕತೆಯ ಬಳಿಕವೇ ಅವರು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜೀವ ಅಂತ್ಯಗೊಳಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಗೆ ನಿಖರ ಕಾರಣ ಏನು? ಪ್ರೇಮ ವೈಫಲ್ಯವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಕುರಿತು ರೈಲ್ವೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಯುವಜನರ ಧ್ವನಿಯನ್ನು ಗೌರವಿಸಿ: ನೀಟ್ ಪ್ರತಿಭಟನೆ ಕುರಿತು ಕೇಂದ್ರಕ್ಕೆ ರಾಹುಲ್ ಗಾಂಧಿ ಸಲಹೆ

0

ನವದೆಹಲಿ: ಯುವಜನರ ಧ್ವನಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳನ್ನು ಸಮರ್ಥಿಸಿಕೊಂಡರು.

ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ, ಹಿಂಸೆ ಅಥವಾ ದ್ವೇಷದ ಅಭಿವ್ಯಕ್ತಿಯಲ್ಲ. ಅದು “ಭಾರತದ ಯುವಜನತೆಯ ಭರವಸೆಯ ಅಭಿವ್ಯಕ್ತಿ” ಎಂದು ರಾಹುಲ್ ಗಾಂಧಿ ಹೇಳಿದರು.

ತಮ್ಮ ಆತಂಕ ಹಾಗೂ ದುಗುಡವನ್ನು ವ್ಯಕ್ತಪಡಿಸಲು ಯುವಕರು ಬೀದಿಗಿಳಿದಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿದೆ. ದೇಶದ ಭವಿಷ್ಯವಾಗಿರುವ ಯುವಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದನ್ನು ನೋಡಿದಾಗ ನನಗೆ ಸಂತೋಷ ಹಾಗೂ ಭರವಸೆ ಮೂಡಿದೆ ಎಂದು ಅವರು ಹೇಳಿದರು.

ಪ್ರತಿಭಟನೆಗಳು ಮುಂದಿನ ಪೀಳಿಗೆಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ ರಾಹುಲ್ ಗಾಂಧಿ, ಇದು ಕೋಪ ಅಥವಾ ಹಿಂಸೆಯ ಸಂಕೇತವಲ್ಲ. ದೇಶದ ಯುವಜನರ ಮತ್ತು ಭವಿಷ್ಯದ ಪೀಳಿಗೆಯ ಧ್ವನಿಯಾಗಿದೆ ಎಂದು ತಿಳಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಸತ್ಯ ಮತ್ತು ಜ್ಞಾನದ ಹುಡುಕಾಟದಲ್ಲಿದ್ದಾರೆ. ಯುವ ಸಮುದಾಯದ ಧ್ವನಿಯನ್ನು ಸರ್ಕಾರ ನಿರ್ಲಕ್ಷಿಸದೆ ಆಲಿಸಬೇಕು ಎಂದು ಹೇಳಿದರು.

ಬಿಜೆಪಿಯಲ್ಲಿರುವ ತಮ್ಮ ಸ್ನೇಹಿತರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಯುವಜನರ ಅಭಿವ್ಯಕ್ತಿಯನ್ನು ಗೌರವಿಸಬೇಕು. ಯುವಕರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒತ್ತಿ ಹೇಳಿದರು.

ಆಗಸ್ಟ್ʼನಲ್ಲಿ ಸಾಲು ಸಾಲು ರಜೆ, ಬರೋಬ್ಬರಿ 14 ದಿನ ಬ್ಯಾಂಕ್ʼಗಳು ಬಂದ್: ಬೇಗನೆ ಕೆಲಸ ಮುಗಿಸಿಕೊಳ್ಳಿ!

ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳಿದ್ದರೆ ಗ್ರಾಹಕರು ಮುಂಚಿತವಾಗಿ ರಜಾ ದಿನಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಆಗಸ್ಟ್ ತಿಂಗಳಲ್ಲಿ ಒಟ್ಟು 14 ದಿನ ಬ್ಯಾಂಕ್‌ಗಳು ಬಂದ್ ಇರಲಿವೆ. ಈ ರಜೆಗಳಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಸಾಪ್ತಾಹಿಕ ರಜೆಗಳು ಸೇರಿವೆ.

ಆಗಸ್ಟ್ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ ಹೀಗಿದೆ:

  • ಆಗಸ್ಟ್ 2: ಭಾನುವಾರ – ವಾರದ ರಜೆ
  • ಆಗಸ್ಟ್ 8: ಎರಡನೇ ಶನಿವಾರ – ಬ್ಯಾಂಕ್‌ ರಜೆ
  • ಆಗಸ್ಟ್ 9: ಭಾನುವಾರ – ವಾರದ ರಜೆ
  • ಆಗಸ್ಟ್ 13: ಮಣಿಪುರದಲ್ಲಿ ದೇಶಪ್ರೇಮಿಗಳ ದಿನ
  • ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 16: ಭಾನುವಾರ – ವಾರದ ರಜೆ
  • ಆಗಸ್ಟ್ 22: ನಾಲ್ಕನೇ ಶನಿವಾರ – ಬ್ಯಾಂಕ್‌ ರಜೆ
  • ಆಗಸ್ಟ್ 23: ಭಾನುವಾರ – ವಾರದ ರಜೆ
  • ಆಗಸ್ಟ್ 25: ಈದ್-ಎ-ಮಿಲಾದ್
  • ಆಗಸ್ಟ್ 28: ರಕ್ಷಾ ಬಂಧನ
  • ಆಗಸ್ಟ್ 30: ಭಾನುವಾರ – ವಾರದ ರಜೆ

ಬ್ಯಾಂಕ್‌ ಶಾಖೆಗಳು ರಜೆಯ ದಿನಗಳಲ್ಲಿ ಮುಚ್ಚಿದ್ದರೂ, ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳಬಹುದು. UPI, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಹಾಗೂ IMPS ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.

ಆದರೆ ಚೆಕ್‌ ಠೇವಣಿ, ಡ್ರಾಫ್ಟ್‌ ಪಡೆಯುವುದು, KYC ನವೀಕರಣ ಅಥವಾ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ಮಾಡಬೇಕಾದ ಯಾವುದೇ ಪ್ರಮುಖ ಕೆಲಸಗಳಿದ್ದರೆ, ರಜಾ ದಿನಗಳಿಗೂ ಮುನ್ನ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.

ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ಗ್ರಾಹಕರು ತಮ್ಮ ರಾಜ್ಯಕ್ಕೆ ಅನ್ವಯವಾಗುವ ರಜಾ ಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

CWRC ತೀರ್ಮಾನ ಸಮಾಧಾನ ತಂದಿಲ್ಲ, ಮೇಲ್ಮನವಿ ಸಲ್ಲಿಸುತ್ತೇವೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶ ನಮಗೆ ಸಮಾಧಾನ ತಂದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವಂತೆ CWRC ನೀಡಿರುವ ಆದೇಶದ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಲಭ್ಯತೆ, ಡೆಡ್ ಸ್ಟೋರೇಜ್ ಹಾಗೂ ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಗಣಿಸಬೇಕಿದೆ ಎಂದರು.

“ಈಗಿರುವ ನೀರಿನಲ್ಲಿ ಡೆಡ್ ಸ್ಟೋರೇಜ್ ಲೆಕ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು, ಮಂಡ್ಯ, ರಾಮನಗರ, ಚನ್ನಪಟ್ಟಣ ಸೇರಿದಂತೆ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಅಗತ್ಯವಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಉಳಿಸಿಕೊಳ್ಳುತ್ತೇವೆ” ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನದಿಂದ ರಾಜ್ಯಕ್ಕೆ ಸಮಾಧಾನವಾಗಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾವೇರಿ ನೀರು ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಬಿಜೆಪಿ ನಾಯಕರು ಸಾಮಾನ್ಯ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಳಿಗುಂಡ್ಲು ಬಳಿ ಪರಿಶೀಲನೆ ನಡೆಸಿದರೆ ರಾಜ್ಯದಿಂದ ಎಷ್ಟು ನೀರು ಹರಿಸಲಾಗಿದೆ ಎಂಬುದು ಗೊತ್ತಾಗುತ್ತದೆ. ಪ್ರಸ್ತುತ 3,500 ಕ್ಯೂಸೆಕ್ ಪ್ರಮಾಣದ ನೀರನ್ನಷ್ಟೇ ಹರಿಸಲಾಗುತ್ತಿದೆ ಎಂದು ಹೇಳಿದರು.

ಸದ್ಯಕ್ಕೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಹಾಗೂ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಮಗೇ ಕುಡಿಯಲು ನೀರಿಲ್ಲ, 3,500 ಕ್ಯೂಸೆಕ್ ಹೇಗೆ ಬಿಡೋದು?: ಕಾವೇರಿ ಆದೇಶಕ್ಕೆ ಡಿಸಿಎಂ ಪರಮೇಶ್ವರ್ ಆಕ್ರೋಶ

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲೇ ಕುಡಿಯುವ ನೀರಿನ ಕೊರತೆ ಇರುವ ಸಂದರ್ಭದಲ್ಲಿ ಇಷ್ಟು ಪ್ರಮಾಣದ ನೀರು ಬಿಡುಗಡೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮಗೇ ಕುಡಿಯಲು ನೀರಿಲ್ಲ. ಹಾಗಿದ್ದಾಗ 3,500 ಕ್ಯೂಸೆಕ್ ನೀರು ಬಿಡಿ ಅಂದ್ರೆ ಹೇಗೆ?” ಎಂದು ಕಿಡಿಕಾರಿದರು. ಈ ವಿಚಾರವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ವಪಕ್ಷ ಸಭೆ ಕರೆಯಲಿದ್ದು, ಮುಂದಿನ ನಡೆ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಆಗಸ್ಟ್‌ 3ರಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಕರ್ನಾಟಕಕ್ಕೆ ಆಗಮಿಸಲಿದ್ದು, ಅವರೊಂದಿಗೆ ಮುಖ್ಯಮಂತ್ರಿ ಈ ವಿಷಯವಾಗಿ ಚರ್ಚಿಸುವ ಸಾಧ್ಯತೆಯೂ ಇದೆ ಎಂದರು. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕೂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮದ ಕುರಿತು ಚರ್ಚಿಸಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಈಗಾಗಲೇ ಪ್ರತಿಭಟನೆ ಆರಂಭಿಸಿದ್ದು, ಸರ್ಕಾರ ಪರಿಸ್ಥಿತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುವ ಅವಕಾಶವಿಲ್ಲ ಎಂದು ಸಂಸತ್ತಿನಲ್ಲಿ ಸ್ಪಷ್ಟನೆ ನೀಡಲಾಗಿದೆ. ಅಂತಿಮವಾಗಿ ನ್ಯಾಯಾಲಯದ ತೀರ್ಪೇ ನಿರ್ಣಾಯಕವಾಗಿದ್ದು, ನ್ಯಾಯಾಲಯ ಸೂಚಿಸಿದಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಹೇಳಿದರು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪತ್ರ ಬರೆಯುವುದು ಅವರ ಹಕ್ಕು. ಆದರೆ, ನ್ಯಾಯಾಲಯದ ತೀರ್ಪೇ ಅಂತಿಮವಾಗಿರುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿಕೆಶಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿಯನ್ನು ಬಿಜೆಪಿ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸಹಜ ಎಂದು ಹೇಳಿದರು.

ಟಿ.ಬಿ. ಡ್ಯಾಂ ಕ್ರೆಸ್ಟ್ ಗೇಟ್ ಉದ್ಘಾಟನೆ ವೇಳೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದರು. ನೆರೆ ರಾಜ್ಯಗಳೊಂದಿಗೆ ಸಂವಾದ ನಡೆಸುವುದು ತಪ್ಪಲ್ಲ. ರಾಜ್ಯಗಳು ಯಾವಾಗಲೂ ಸಂಘರ್ಷದಲ್ಲೇ ಇರಬೇಕು ಎಂಬುದು ಬಿಜೆಪಿಯ ನಿಲುವಾಗಿರಬಹುದು, ಅದಕ್ಕಾಗಿ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ವ್ಯಂಗ್ಯವಾಡಿದರು.

ಊಟದಲ್ಲಿ ವಿಷ ಬೆರೆಸಿ, ಬಳಿಕ ಉಸಿರುಗಟ್ಟಿಸಿ ಹತ್ಯೆ: ಚಿನ್ನದಾಸೆಗೆ ವೃದ್ಧೆಯ ಜೀವ ತೆಗೆದ ಮೂವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಚಿನ್ನಾಭರಣ ದೋಚುವ ಉದ್ದೇಶದಿಂದ 80 ವರ್ಷದ ವೃದ್ಧೆಗೆ ಆಹಾರದಲ್ಲಿ ವಿಷ ಬೆರೆಸಿ, ಬಳಿಕ ಉಸಿರುಗಟ್ಟಿಸಿ ಹತ್ಯೆ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದ್ದು, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಮ್ಟಾಡಿ ಹೀರಾ ನಿವಾಸಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ (30), ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34) ಹಾಗೂ ನರಿಕೊಂಬು ಅಂತರಹೌಸ್ ನಿವಾಸಿ ಸತೀಶ್ ಎ.ಆರ್. (33) ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಪ್ರಕರಣದ ವಿವರಗಳ ಪ್ರಕಾರ, ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ನಿವಾಸಿ ಬೆನೆಡಿಕ್ಟ್ ಕಾರ್ಲೊ (80) ಅವರು ಪತಿ ಇನಾಸ್ ಕಾರ್ಲೊ ಅವರೊಂದಿಗೆ ವಾಸವಾಗಿದ್ದರು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಇನಾಸ್ ಕಾರ್ಲೊ ಹಾಸಿಗೆ ಹಿಡಿದಿದ್ದ ಹಿನ್ನೆಲೆಯಲ್ಲಿ, ಮನೆಯ ಆರೈಕೆಗಾಗಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು.

ಈ ವೇಳೆ ಬೆನೆಡಿಕ್ಟ್ ಕಾರ್ಲೊ ಧರಿಸುತ್ತಿದ್ದ ಚಿನ್ನದ ಕರಿಮಣಿ ಸರ ಹಾಗೂ ಮನೆಯಲ್ಲಿದ್ದ ಇತರೆ ಚಿನ್ನಾಭರಣಗಳನ್ನು ಗಮನಿಸಿದ ವಿಲ್ಮಾ, ಅವುಗಳನ್ನು ದೋಚುವ ಉದ್ದೇಶದಿಂದ ಸಂಚು ರೂಪಿಸಿದ್ದಳು. ಈ ವಿಷಯವನ್ನು ಪರಿಚಿತನಾದ ಸತೀಶ್‌ಗೆ ತಿಳಿಸಿದ್ದು, ಆತ ವೃದ್ಧೆಗೆ ಆಹಾರದಲ್ಲಿ ವಿಷ ಬೆರೆಸುವಂತೆ ಸಲಹೆ ನೀಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಅದರಂತೆ 2021ರ ಜನವರಿ 25ರಂದು ರಾತ್ರಿ ವಿಲ್ಮಾ ಆಹಾರದಲ್ಲಿ ವಿಷ ಬೆರೆಸಿದ್ದಳು. ವಿಷ ಸೇವಿಸಿದ ಬಳಿಕ ಬೆನೆಡಿಕ್ಟ್ ಕಾರ್ಲೊ ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಬಳಿಕ ವಿಲ್ಮಾ ಮತ್ತು ಸತೀಶ್ ನಡುವಿನ ಮಾತುಕತೆಯ ನಂತರ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲ್ಲುವ ನಿರ್ಧಾರ ಕೈಗೊಳ್ಳಲಾಗಿತ್ತು.

ಯೋಜನೆಯಂತೆ ಸತೀಶ್, ಚರಣ್ ಕುಮಾರ್‌ನನ್ನು ಮನೆಗೆ ಕಳುಹಿಸಿದ್ದು, ಚಿನ್ನಾಭರಣದಲ್ಲಿ ಪಾಲು ನೀಡುವ ಷರತ್ತಿನ ಮೇರೆಗೆ ಆತ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಬಳಿಕ ವಿಲ್ಮಾ ಮತ್ತು ಚರಣ್ ಕುಮಾರ್ ಸೇರಿ ತಲೆದಿಂಬು ಹಾಗೂ ಬಟ್ಟೆಯನ್ನು ಬಳಸಿ ಬೆನೆಡಿಕ್ಟ್ ಕಾರ್ಲೊ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.

ಹತ್ಯೆಯ ಬಳಿಕ ಮೃತೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಕಿವಿಯೋಲೆ, ಬಳೆ, ಉಂಗುರ, ಚೈನ್ ಸೇರಿದಂತೆ ಸುಮಾರು ₹2.75 ಲಕ್ಷ ಮೌಲ್ಯದ, 61.070 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದಾರೆ. ನಂತರ ವಿಷದ ಉಳಿದ ಅಂಶವನ್ನು ರಸ್ತೆಯ ತೋಡಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

2021ರ ಜನವರಿ 26ರಂದು ಪ್ರಕರಣ ಬೆಳಕಿಗೆ ಬಂದಿದ್ದು, ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸ್ ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಮೂವರು ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.

₹1 ಕೋಟಿ ಬಹುಮಾನ ಘೋಷಿಸಲಾಗಿದ್ದ ಮೋಸ್ಟ್ ವಾಂಟೆಡ್ ಮಾವೋವಾದಿ ಬಂಧನ!

0

ರಾಂಚಿ: ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ₹1 ಕೋಟಿ ಬಹುಮಾನ ಘೋಷಿಸಲಾಗಿದ್ದ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಮಿಸಿರ್ ಬೆಸ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಧನ್ಬಾದ್ ಜಿಲ್ಲೆಯಲ್ಲಿ ನಡೆದ ಈ ಕಾರ್ಯಾಚರಣೆಯನ್ನು ಎಡಪಂಥೀಯ ಉಗ್ರವಾದ (LWE) ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮಿಸಿರ್ ಬೆಸ್ರಾ ಹಲವು ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ದೇಶದ ಮೋಸ್ಟ್ ವಾಂಟೆಡ್ ಬಂಡುಕೋರರಲ್ಲಿ ಒಬ್ಬನಾಗಿದ್ದ. ಆತನ ಬಂಧನದಿಂದ ಜಾರ್ಖಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಪ್ರಸ್ತುತ ಜಾರ್ಖಂಡ್ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ನಿಷೇಧಿತ ನಕ್ಸಲ್ ಸಂಘಟನೆಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿವೆ. ಮಿಸಿರ್ ಬೆಸ್ರಾ ಬಂಧನವು ಈ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, 2026ರ ಜನವರಿಯಲ್ಲಿ ಜಾರ್ಖಂಡ್‌ನ ಸಾರಂಡಾ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ₹1 ಕೋಟಿ ಬಹುಮಾನ ಘೋಷಿಸಲಾಗಿದ್ದ ನಕ್ಸಲ್ ಕಮಾಂಡರ್ ಅನಾಲ್ ದಾ ಅಲಿಯಾಸ್ ತೂಫಾನ್ ಹತನಾಗಿದ್ದ. ಕೋಬ್ರಾ ಬೆಟಾಲಿಯನ್ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ನಡೆಸಿದ ಆ ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ನಕ್ಸಲರು ಸಾವನ್ನಪ್ಪಿದ್ದರು.

ಬಂಗಾರ ಖರೀದಿದಾರರಿಗೆ ಸಿಹಿಸುದ್ದಿ: ಡಾಲರ್ ಬಲದಿಂದ ಚಿನ್ನ-ಬೆಳ್ಳಿ ಬೆಲೆ ಇಳಿಕೆ! ಇಂದಿನ ದರ ಎಷ್ಟು?

ಬೆಂಗಳೂರು: ಡಾಲರ್ ಮೌಲ್ಯ ಬಲಗೊಂಡಿರುವ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದೆ.

ಮಂಗಳವಾರ ಒಂದೇ ದಿನದಲ್ಲಿ ಭಾರೀ ಕುಸಿತ ಕಂಡಿದ್ದ ಚಿನ್ನದ ದರ, ಬುಧವಾರ (ಜುಲೈ 29) ಮತ್ತಷ್ಟು ಇಳಿಕೆಯಾಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಮತ್ತೆ ₹13 ಸಾವಿರದ ಸಮೀಪಕ್ಕೆ ಬಂದಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ದಾಖಲಾಗಿದೆ.

ಗುಡ್ ರಿಟರ್ನ್ಸ್ ವರದಿ ಪ್ರಕಾರ, 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂಗೆ ₹66 ಇಳಿಕೆಯಾಗಿದ್ದು, ಹೊಸ ದರ ₹14,351 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹660 ಇಳಿಕೆಯಾಗಿ ₹1,43,510ಕ್ಕೆ ತಲುಪಿದೆ.

22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯೂ ಪ್ರತಿ ಗ್ರಾಂಗೆ ₹60 ಇಳಿಕೆಯಾಗಿ ₹13,155ಕ್ಕೆ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆ ₹600 ಇಳಿಕೆಯಾಗಿ ₹1,31,550 ಆಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ಬೆಲೆ ₹14,351 ಆಗಿದ್ದು, ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ ಬೆಳ್ಳಿ ₹235ಕ್ಕೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹2,35,000ಕ್ಕೆ ದಾಖಲಾಗಿದೆ.

ಜುಲೈ ತಿಂಗಳ ಆರಂಭದಲ್ಲಿ, ಅಂದರೆ ಜುಲೈ 1ರಂದು 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ₹12,905 ಆಗಿದ್ದು, ಇದೇ ತಿಂಗಳ ಜುಲೈ 3ರಂದು ಗರಿಷ್ಠ ₹13,475ಕ್ಕೆ ಏರಿಕೆಯಾಗಿತ್ತು. 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ಕೂಡ ಒಂದು ಹಂತದಲ್ಲಿ ₹1,47,000ವರೆಗೆ ತಲುಪಿದ್ದರೆ, ಇದೀಗ ಅದು ₹1,43,510ಕ್ಕೆ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಬಲಿಷ್ಠವಾಗಿರುವುದು ಹಾಗೂ ಹೂಡಿಕೆದಾರರ ಖರೀದಿ ಧೋರಣೆಯಲ್ಲಿ ಬದಲಾವಣೆ ಕಂಡುಬಂದಿರುವುದರಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ದಾಖಲಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಹೆರಿಗೆ: ಪ್ರಿಯಕರನ ವಿರುದ್ಧ ಪೋಕ್ಸೋ ಕೇಸ್, ಆರೋಪಿ ಪರಾರಿ!

ಚಿತ್ರದುರ್ಗ: ಪ್ರೀತಿಯ ಬಲೆಗೆ ಬಿದ್ದಿದ್ದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪ್ರಿಯಕರ ಕರಿಯಣ್ಣ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮಾಹಿತಿಯ ಪ್ರಕಾರ, ಅಪ್ರಾಪ್ತ ಬಾಲಕಿ ಹಾಸ್ಟೆಲ್‌ನಲ್ಲಿ ವಾಸವಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಗೂಡ್ಸ್ ವಾಹನ ಚಾಲಕನಾಗಿದ್ದ ಕರಿಯಣ್ಣನೊಂದಿಗೆ ಆಕೆಗೆ ಪರಿಚಯವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಕೆಲ ದಿನಗಳ ಬಳಿಕ ಬಾಲಕಿ ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು, ಆಕೆಯ ತಾಯಿ ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಬಾಲಕಿ ಅಪ್ರಾಪ್ತೆ ಎಂಬುದು ತಿಳಿದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಹಿರಿಯೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಗಂಭೀರತೆ ಪರಿಗಣಿಸಿದ ಪೊಲೀಸರು ಬಾಲಕಿಯ ಪ್ರಿಯಕರ ಕರಿಯಣ್ಣ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇನ್ನು ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಸಖಿ ಕೇಂದ್ರ’ಕ್ಕೆ ಸ್ಥಳಾಂತರಿಸಲಾಗಿದ್ದು, ಆಕೆಗೆ ಆರೈಕೆ, ಕೌನ್ಸೆಲಿಂಗ್ ಹಾಗೂ ಅಗತ್ಯ ಕಾನೂನು ನೆರವು ನೀಡಲಾಗುತ್ತಿದೆ.

ಈ ಕುರಿತು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.