Home Blog Page 19

ಬಿಸಿಲಿನ ಕಾಟ ಹೆಚ್ಚಳ: ಬೆಂಗಳೂರಿನಲ್ಲಿ ಹೆಚ್ಚಿದ ಸೆಕೆ, ಉತ್ತರದಲ್ಲಿ ಸೂರ್ಯನ ಕಾಟ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬೇಸಿಗೆಯ ತಾಪಮಾನ ಜನರನ್ನು ಕಂಗಾಲಾಗಿಸಿದೆ.

ರಾಜಧಾನಿ ಬೆಂಗಳೂರುನಲ್ಲಿ ಇಂದು ಗರಿಷ್ಠ ತಾಪಮಾನ 34°C ರಿಂದ 35°C ತಲುಪುವ ಸಾಧ್ಯತೆಯಿದೆ. ಸಂಜೆ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದರೂ ಉಷ್ಣಾಂಶದಲ್ಲಿ ಹೆಚ್ಚು ಇಳಿಕೆ ಕಾಣುವ ಲಕ್ಷಣಗಳಿಲ್ಲ.

ಉತ್ತರ ಕರ್ನಾಟಕದ ಕಲ್ಬುರ್ಗಿ, ರಾಯಚೂರು ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ತಾಪಮಾನ 40°C ಗಡಿ ದಾಟುತ್ತಿದೆ. ಈ ಭಾಗಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹೊರಗಡೆ ಹೋಗದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಭಾಗಗಳಾದ ಮಂಗಳೂರು ಮತ್ತು ಉಡುಪಿಗಳಲ್ಲಿ ತಾಪಮಾನ ಜೊತೆಗೆ ಆರ್ದ್ರತೆ ಹೆಚ್ಚಾಗಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಗರಿಷ್ಠ ತಾಪಮಾನ ಸುಮಾರು 36°C ದಾಖಲಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಲೆನಾಡು ಪ್ರದೇಶಗಳಾದ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಸಂಜೆ ವೇಳೆಗೆ ತುಂತುರು ಮಳೆಯ ಸಾಧ್ಯತೆ ಇದ್ದರೂ ಅದು ಅತಿ ವಿರಳವಾಗಿದೆ.

ಇನ್ನು ಗದಗನಲ್ಲಿ ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 39°C ಹಾಗೂ ಕನಿಷ್ಠ 24°C ಇರಲಿದೆ. ಮೋಡಗಳ ಸುಳಿವಿಲ್ಲದೆ ತೀವ್ರ ಬಿಸಿಲು ಕಾಡಲಿದೆ.

ಹಾವೇರಿಯಲ್ಲಿ ಗರಿಷ್ಠ 38°C ಹಾಗೂ ಕನಿಷ್ಠ 23°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಕಡಿಮೆ ಇರುವುದರಿಂದ ಸೆಕೆ ಹೆಚ್ಚಾಗಿ ಅನುಭವವಾಗಲಿದೆ.

ಚಿಕ್ಕಮಗಳೂರುನಲ್ಲಿ ಗರಿಷ್ಠ 33°C ಹಾಗೂ ಕನಿಷ್ಠ 19°C ತಾಪಮಾನ ಇರಲಿದ್ದು, ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ. ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಬಹುದು. ಹಾಸನದಲ್ಲಿ ಸಾಮಾನ್ಯ ಬಿಸಿಲು ಮತ್ತು ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ 34°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಮಳೆಯ ಯಾವುದೇ ಸೂಚನೆ ಇಲ್ಲ.

“ಸರ್ಸೆ ಸೆರಗ ಸರ್ಸೆ” ಹಾಡು ವಿವಾದ: ಇದು ಉದ್ದೇಶಪೂರ್ವಕವಲ್ಲ.. ಕ್ಷಮಿಸಿ ಎಂದ ಗಾಯಕಿ ಮಂಗ್ಲಿ

ಕೆಡಿ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ವಿವಾದಕ್ಕೆ ಗಾಯಕಿ ಮಂಗ್ಲಿ ಕ್ಷಮೆಯಾಚಿಸಿದ್ದಾರೆ. ಈ ಹಾಡನ್ನು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದ ಮಂಗ್ಲಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, “ಸಾರ್ವಜನಿಕರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ. ಇದು ಉದ್ದೇಶಪೂರ್ವಕವಲ್ಲ. ಕ್ಷಮಿಸಿ. ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ” ಎಂದು ತಿಳಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಹಾಡನ್ನು ಈಗಾಗಲೇ ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ. ಚಿತ್ರತಂಡದ ಪರವಾಗಿ ಕೂಡ ಕ್ಷಮೆಯಾಚಿಸಿರುವ ಅವರು, ಹೊಸದಾಗಿ ಹಾಡನ್ನು ರೆಕಾರ್ಡ್ ಮಾಡಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಈ ನಡುವೆ, ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ. ಈ ಸಂಬಂಧ ನಿರ್ದೇಶಕ ಪ್ರೇಮ್, ಕೆವಿಎನ್ ಗ್ರೂಪ್, ನಟಿ ನೋರಾ ಫತೇಹಿ, ರಕೀಬ್ ಆಲಂ ಹಾಗೂ ನಟ ಸಂಜಯ್ ದತ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ರೀಲ್ಸ್ʼಗಾಗಿ ಸ್ಟಂಟ್: ಹುಬ್ಬಳ್ಳಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ಸಾವು!

0

ಧಾರವಾಡ: ರೀಲ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಅಪಾಯಕರ ಸ್ಟಂಟ್ ಮಾಡಲು ಹೋಗಿ 15 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೈಸೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕನಾಗಿದ್ದು, ಯುಗಾದಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶೇಜವಾಡಕ್ಕರ್ ಪ್ಲಾಟ್ ಪ್ರದೇಶಕ್ಕೆ ರೀಲ್ಸ್ ಚಿತ್ರೀಕರಣಕ್ಕಾಗಿ ತೆರಳಿದ್ದಾನೆ.

ಆಡಿ ಕಾರು ಮತ್ತು ಬೈಕ್ ಬಳಸಿ ವೇಗದ ಸ್ಟಂಟ್ ಹಾಗೂ ಕ್ರ್ಯಾಶ್ ದೃಶ್ಯ ಚಿತ್ರೀಕರಿಸಲು ಈ ಇಬ್ಬರು ಬಾಲಕರು ಯೋಜನೆ ಮಾಡಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್ ಸವಾರನಾಗಿದ್ದ ನಮೀಷ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ಬಳಿಕ ಸ್ಥಳೀಯರು ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, “ನಾನು ಕಾರು ನಿಲ್ಲಿಸಿದ್ದೆ, ಅವನೇ ವೇಗವಾಗಿ ಬಂದು ಡಿಕ್ಕಿ ಹೊಡೆದನು” ಎಂದು ಆತ ಹೇಳಿಕೊಂಡಿದ್ದಾನೆ. ಕಾರು ತನ್ನ ತಂದೆಯದ್ದೇ ಎಂದು ಕೂಡ ತಿಳಿಸಿದ್ದಾನೆ.

ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರನಾಗಿದ್ದ ನಮೀಷ್ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಯಾದಗಿರಿಯಲ್ಲಿ ತಂದೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಂದೆ ಹತ್ಯೆಗೆ ಮಗನ ಪ್ಲ್ಯಾನ್! ಯಾಕೆ ಗೊತ್ತಾ..?

0

ಯಾದಗಿರಿ: ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಗನೇ ತಂದೆಯನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮಾರ್ಚ್ 12ರ ರಾತ್ರಿ 74 ವರ್ಷದ ಹಂಪಣ್ಣ ಸಜ್ಜನ ಹತ್ಯೆಯಾಗಿತ್ತು. ಘಟನೆಯ ಬಳಿಕ ಅವರ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಕಷ್ಟಪಟ್ಟರು. ಆದರೆ ನಾಲ್ಕು ದಿನಗಳ ಬಳಿಕ ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಟ ಎಂಬ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರಕರಣದ ಹಿನ್ನಲೆ ಬೆಳಕಿಗೆ ಬಂದಿದೆ. ತಿರುಪತಿ ಮೂಲದ ಈ ನಾಲ್ವರು ಹತ್ಯೆ ನಡೆಸಿದರೆ, ಹತ್ಯೆಗೆ ಸುಪಾರಿ ನೀಡಿದ್ದವರು ಮೃತನ ಪುತ್ರ ನರಸರೆಡ್ಡಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಮೊದಲು ಆಸ್ತಿ ವಿಚಾರವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಮೃತನ ಮೊಬೈಲ್ ಪರಿಶೀಲನೆ ವೇಳೆ ಹಲವು ಮಹಿಳೆಯರೊಂದಿಗೆ ತೆಗೆದಿರುವ ಫೋಟೋಗಳು ಪತ್ತೆಯಾಗಿದ್ದು, ಅನೈತಿಕ ಸಂಬಂಧಗಳ ವಿಚಾರ ಹೊರಬಂದಿದೆ.

ಹಂಪಣ್ಣ ಸಜ್ಜನ ಗ್ರಾಮದಲ್ಲಿ ಕುಟುಂಬದಿಂದ ದೂರವಾಗಿ ಹೊಲದಲ್ಲೇ ವಾಸಿಸುತ್ತಿದ್ದರು. ಪತ್ನಿ ಸಾವಿನ ನಂತರ ಏಕಾಂಗಿಯಾಗಿ ಬದುಕುತ್ತಿದ್ದ ಅವರು, ಮದ್ಯಪಾನ ವ್ಯಸನಕ್ಕೂ ಒಳಗಾಗಿದ್ದರು. ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಹಣದ ಆಮಿಷ ನೀಡಿ ಮಹಿಳೆಯರನ್ನು ಕರೆಸಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದೇ ಕಾರಣದಿಂದ ಕುಟುಂಬದಲ್ಲೂ ಅಸಮಾಧಾನ ಉಂಟಾಗಿದ್ದು, ವಿಶೇಷವಾಗಿ ಮಗನ ಪತ್ನಿಯೊಂದಿಗೆ ಸಹ ಅನೈತಿಕ ವರ್ತನೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ನರಸರೆಡ್ಡಿ ಕೋಪಗೊಂಡು, ನಾಲ್ವರಿಗೆ ಸುಮಾರು ₹2 ಲಕ್ಷ ನೀಡಿ ತಂದೆಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಅನೈತಿಕ ಸಂಬಂಧಗಳ ಹಿನ್ನೆಲೆಯೇ ಈ ಹತ್ಯೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಇದೀಗ ಸ್ಪಷ್ಟತೆ ಸಿಕ್ಕಿದೆ.

ಕರಾವಳಿಯಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬ ಸಂಭ್ರಮ

ಮಂಗಳೂರು: ಕರಾವಳಿ ಭಾಗದಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುವಂತೆ ದಕ್ಷಿಣ ಕನ್ನಡ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಕರೆ ನೀಡಿದ್ದಾರೆ.

ಶವ್ವಾಲ್ ಮಾಸದ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಈದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಸಮುದಾಯದವರು ರಮಝಾನ್ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಿದ್ದರು. ಇಂದು ಚಂದ್ರದರ್ಶನವಾದ ಹಿನ್ನೆಲೆ ಉಪವಾಸ ವ್ರತಕ್ಕೆ ತೆರೆ ಬಿದ್ದು, ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳ ಮೂಲಕ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಾದ್ಯಂತ ಈದ್ ಹಬ್ಬದ ಸಂಭ್ರಮ ಈಗಲೇ ಕಳೆಗಟ್ಟಿದೆ.

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಆಕ್ಷೇಪ

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಬೆಸ್ಕಾಂ ಎಇ ಚೇತನ್ ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗ್ರೂಪ್ ಬಿ ಮತ್ತು ಸಿ ವರ್ಗದ ನೌಕರರ ವರ್ಗಾವಣೆಯಲ್ಲಿ ಸಿಎಂ ಕಚೇರಿಯ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಯಂತಹ ವಿಷಯಗಳಿಗಿಂತ ಮಹತ್ವದ ಆಡಳಿತಾತ್ಮಕ ಕೆಲಸಗಳಿದ್ದು, ಈ ರೀತಿಯ ವಿಷಯಗಳನ್ನು ಸಂಬಂಧಿತ ಇಲಾಖೆಗಳಿಗೇ ಬಿಟ್ಟುಕೊಡಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಟಿ.ಎಂ.ನದಾಫ್ ಒಳಗೊಂಡ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಮುಖ್ಯಮಂತ್ರಿ ಕಚೇರಿ ವರ್ಗಾವಣೆ ಮನವಿಗಳನ್ನು ಸ್ವೀಕರಿಸಬಾರದು ಹಾಗೂ ಇಂತಹ ವಿಚಾರಗಳಿಗೆ ಸಮಯ ವಿನಿಯೋಗಿಸಬಾರದು ಎಂದು ಸೂಚಿಸಿದ ನ್ಯಾಯಾಲಯ, ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ನಿರ್ದೇಶನ ನೀಡಿದೆ.

ಇದೇ ವೇಳೆ, ಸಿಎಂ ಕಚೇರಿಯಿಂದ ನೀಡುವ ವರ್ಗಾವಣೆ ಪತ್ರಗಳ ಕುರಿತು ಹೈಕೋರ್ಟ್ ಮುಖ್ಯ ಕಾರ್ಯದರ್ಶಿಯ ನಿಲುವನ್ನು ಕೇಳಿತ್ತು. ಪ್ರತಿಯಾಗಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಾಗಿದ್ದು, ಅಂತಿಮವಾಗಿ ಸಂಬಂಧಪಟ್ಟ ಇಲಾಖೆವೇ ವರ್ಗಾವಣೆ ಆದೇಶ ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ವಿಮಾನಯಾನದಲ್ಲಿ ಗೊಂದಲ, ಪ್ರಯಾಣ ವೆಚ್ಚ ಭಾರೀ ಏರಿಕೆ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ವಿಧಿಸಲಾಗಿರುವ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಮತ್ತು ಅಚಾನಕ್ ಹಾರಾಟ ರದ್ದುಪಡಿಸುವ ಘಟನೆಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಅನೇಕ ಮಾರ್ಗಗಳಲ್ಲಿ ಪ್ರಯಾಣ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.

ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ದೇಶದಿಂದ ವಿವಿಧ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಬಹುತೇಕವಾಗಿ ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಂಚರಿಸುತ್ತವೆ.

ಈ ಮಾರ್ಗಗಳಲ್ಲಿ ಉಂಟಾದ ವ್ಯತ್ಯಯಗಳಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಹೆಚ್ಚಿದ ಪ್ರಯಾಣ ವೆಚ್ಚದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಪಡಿಸಲು ಮುಂದಾಗುತ್ತಿದ್ದಾರೆ.

ಸಾಮಾನ್ಯವಾಗಿ ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಪ್ರತಿದಿನ ಸುಮಾರು 25 ರಿಂದ 30 ವಿಮಾನಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಆದರೆ, ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದ ಅನೇಕ ವಿಮಾನ ಸಂಸ್ಥೆಗಳು ತಮ್ಮ ಹಾರಾಟಗಳನ್ನು ಸ್ಥಗಿತಗೊಳಿಸಿರುವುದರಿಂದ ಈ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ.

ಈ ಬೆಳವಣಿಗೆಯಿಂದ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 40%ರವರೆಗೆ ಕುಸಿತ ಕಂಡುಬಂದಿದ್ದು, ಬೆಂಗಳೂರಿನಂತಹ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ದ್ವಾರಗಳಿಗೆ ಇದು ನೇರ ಹೊಡೆತ ನೀಡಿದೆ.

ಲಂಡನ್ʼನಲ್ಲಿ ಪಾನ್ ಉಗುಳಿದ ಇಬ್ಬರು ಭಾರತೀಯರಿಗೆ ₹1.7 ಲಕ್ಷ ದಂಡ!

0

ಲಂಡನ್: ರಸ್ತೆಯಲ್ಲಿ ಪಾನ್ ಉಗುಳಿದ ಪ್ರಕರಣದಲ್ಲಿ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ತಲಾ ಸುಮಾರು ₹1.7 ಲಕ್ಷ ದಂಡ ವಿಧಿಸಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಮೊದಲ ಪ್ರಕರಣದಲ್ಲಿ, ಎಡ್ಗ್ವೇರ್ ನಿವಾಸಿಯಾದ ಅಕ್ಷಿತ್ಕುಮಾರ್ ಭದ್ರೆ ಪಟೇಲ್ (31) ಅವರಿಗೆ ವಾಯುವ್ಯ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 1,391 ಯುರೋ ದಂಡ ವಿಧಿಸಿದೆ.

ಜೂನ್ 11, 2025 ರಂದು ಕಿಂಗ್ಸ್ಬರಿ ಪ್ರದೇಶದ ರಸ್ತೆಯಲ್ಲಿ ಪಾನ್ ಉಗುಳಿದ ಹಿನ್ನೆಲೆಯಲ್ಲಿ ಅವರಿಗೆ ಮೊದಲಿಗೆ 100 ಯುರೋ ದಂಡ ವಿಧಿಸಲಾಗಿತ್ತು. ಆದರೆ, ಅವರು ದಂಡ ಪಾವತಿಸದೇ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ ಸಹ ಹಾಜರಾಗದ ಕಾರಣ, ನ್ಯಾಯಾಲಯವು ಹೆಚ್ಚಿನ ದಂಡ ವಿಧಿಸಿದೆ.

ಇನ್ನೊಂದು ಪ್ರಕರಣದಲ್ಲಿ, ರುಯಿಸ್ಲಿಪ್ ನಿವಾಸಿ ಹಿತೇಶ್ ಪಟೇಲ್ (32) ಅವರಿಗೂ ಇದೇ ಪ್ರಮಾಣದ 1,391 ಯುರೋ (ಸುಮಾರು ₹1.7 ಲಕ್ಷ) ದಂಡ ವಿಧಿಸಲಾಗಿದೆ. ಜೂನ್ 12, 2025 ರಂದು ವೆಂಬ್ಲಿ ಹಿಲ್ ರಸ್ತೆಯಲ್ಲಿ ಪಾನ್ ಉಗುಳಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಅವರು ಸಹ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿ ದಂಡ ವಿಧಿಸಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು: ರಾಜತಾಂತ್ರಿಕತೆಗೆ ಮರಳುವಂತೆ ಪ್ರಧಾನಿ ಮೋದಿ ಒತ್ತಾಯ

0

ನವದೆಹಲಿ: ಮಧ್ಯ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿದ ಮೋದಿ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ತುರ್ತು ಕ್ರಮ ಅಗತ್ಯವಿದೆ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳುವುದು ಮುಖ್ಯವೆಂದು ಹೇಳಿದ್ದಾರೆ. ಈ ಕುರಿತು ಅವರು ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸಲು ಪರಸ್ಪರ ಸಮನ್ವಯವನ್ನು ಮುಂದುವರಿಸುವ ಬಗ್ಗೆ ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನಗಳ ಭಾಗವಾಗಿ ಮೋದಿ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಒಮಾನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್ ಸೈದ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಭಾರತಕ್ಕೆ ಭಾರೀ ಸಾಧನೆ: ಜಗತ್ತಿನಲ್ಲಿ 3ನೇ ಸ್ಥಾನ – ಪ್ರಹ್ಲಾದ್ ಜೋಶಿ

0

ನವದೆಹಲಿ: ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಇದು ಊಹಿಸಲಸಾಧ್ಯವಾದ ಮಹತ್ವದ ಸಾಧನೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

WION ವರ್ಲ್ಡ್ ಪಲ್ಸ್ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 2030ರೊಳಗೆ 500 ಗಿಗಾವಾಟ್ (GW) ನವೀಕರಿಸಬಹುದಾದ ಇಂಧನ ಗುರಿ ಸಾಧಿಸಲು ಭಾರತ ವೇಗವಾಗಿ ಸಾಗುತ್ತಿದೆ ಎಂದರು. ಶುದ್ಧ ಇಂಧನ ಕ್ಷೇತ್ರದಲ್ಲಿ ದೇಶವು ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.

ಭಾರತದ ಮಾಡ್ಯೂಲ್ ಹಾಗೂ ಉತ್ಪಾದನಾ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಿದೆ. ದೇಶದ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 35 ಗಿಗಾವಾಟ್‌ಗೆ ತಲುಪಿದ್ದು, 55 ಲಕ್ಷ ಸ್ಥಾಪನೆಗಳ ಮೂಲಕ ನಿರ್ವಹಿಸಲಾಗುತ್ತಿದೆ. ಇದರಲ್ಲಿ 31 ಲಕ್ಷ ಮನೆಗಳು ಒಳಗೊಂಡಿವೆ ಎಂದು ವಿವರಿಸಿದರು.

ಇದೇ ವೇಳೆ, PM ಸೂರ್ಯಘರ್ ಮತ್ತು PM ಕುಸುಮ್ ಯೋಜನೆಗಳ ಅಡಿಯಲ್ಲಿ 23 ಲಕ್ಷ ಸೌರಶಕ್ತಿ ಆಧಾರಿತ ನೀರಾವರಿ ಪಂಪುಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ದಶಕದ ಹಿಂದೆ ಊಹಿಸಲಾಗದ ಮೈಲುಗಲ್ಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹತ್ತರ ಪರಿವರ್ತನೆ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

error: Content is protected !!