Home Blog Page 19

BREAKING NEWS: ಮೊಬೈಲ್ ಆಫ್… ಆದರೂ ಪರ್ವೇಜ್ ಜಾಡು ಪತ್ತೆ!

0

ಗದಗ: KRIDL AEE ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ 18 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಆದರೆ ಪರ್ವೇಜ್ ಎಲ್ಲಿದ್ದಾರೆ ಎಂಬುದರ ಕುರಿತು ಗದಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಪರ್ವೇಜ್ ಆಂಧ್ರಪ್ರದೇಶದ ವಿಜಯವಾಡದಿಂದ ಭೋಪಾಲ್ ಕಡೆಗೆ ಪ್ರಯಾಣಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಜಯವಾಡದಲ್ಲಿ ಅವರ ಮೊಬೈಲ್ ಲೊಕೇಷನ್ ಪತ್ತೆಯಾದ ಬಳಿಕ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಆಫ್ ಮಾಡಿಕೊಂಡಿದ್ದರೂ ಪೊಲೀಸರು ಸಿಸಿ ಕ್ಯಾಮೆರಾಗಳ ಮೂಲಕ ಪರ್ವೇಜ್ ಪ್ರಯಾಣದ ಜಾಡು ಪತ್ತೆಹಚ್ಚಿದ್ದಾರೆ.

ವಿಜಯವಾಡದಿಂದ ಭೋಪಾಲ್‌ವರೆಗೆ ಸುಮಾರು 1200 ಕಿಲೋಮೀಟರ್‌ಗಳಷ್ಟು ದೂರದ ಮಾರ್ಗದಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಗದಗ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಭೋಪಾಲ್‌ನಲ್ಲಿ ಪರ್ವೇಜ್ ಸಂಚರಿಸುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾಪತ್ತೆಯಾದ ಬಳಿಕ 18 ದಿನಗಳಿಂದಲೂ ಪರ್ವೇಜ್ ಮೊಬೈಲ್ ಆನ್ ಮಾಡಿಲ್ಲ. ಹೀಗಾಗಿ ಮೊಬೈಲ್ ಲೊಕೇಷನ್ ಮೂಲಕ ಅವರ ನಿಖರ ಸ್ಥಳ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಆದರೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ಪರ್ವೇಜ್‌ನ ಚಲನವಲನವನ್ನು ಪೊಲೀಸರು ಬೆನ್ನತ್ತಿದ್ದಾರೆ.

ಭೋಪಾಲ್‌ನಲ್ಲಿ ಪರ್ವೇಜ್ ಇರುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಗದಗ ಪೊಲೀಸರ ತಂಡ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ. ಪರ್ವೇಜ್‌ನ ಪ್ರತಿ ಚಲನವಲನದ ಮೇಲೂ ನಿಗಾ ಇರಿಸಲಾಗಿದ್ದು, ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ನಿರಂತರ ಕಾರ್ಯಾಚರಣೆ ಮುಂದುವರಿದಿದೆ.

ರಷ್ಯಾದ Tu-95 ಬಾಂಬರ್ ವಿಮಾನ ಪತನ; 6 ಸಿಬ್ಬಂದಿ ಸಾವು, ಮತ್ತೋರ್ವನಿಗೆ ಗಾಯ

0

ಮಾಸ್ಕೋ: ತರಬೇತಿ ಕಾರ್ಯಾಚರಣೆಯ ವೇಳೆ ರಷ್ಯಾದ ಪರಮಾಣು ಸಾಮರ್ಥ್ಯದ Tu-95 ಕಾರ್ಯತಂತ್ರದ ಬಾಂಬರ್ ವಿಮಾನ ಪತನಗೊಂಡಿದ್ದು, ಆರು ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ರಷ್ಯಾದ ಪೂರ್ವ ಭಾಗದಲ್ಲಿರುವ ಅಮುರ್ ಪ್ರದೇಶದ ಜನವಸತಿಯಿಲ್ಲದ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಅಪಘಾತದಲ್ಲಿ ಮತ್ತೋರ್ವ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ವೇಳೆ ವಿಮಾನದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.

ಚೀನಾ ಗಡಿಯ ಸಮೀಪದ ಝೇಯಾ ನದಿಯ ದಡದಲ್ಲಿರುವ ಕ್ರಾಸ್ನೊಯಾರೊವೊ ಗ್ರಾಮದ ಬಳಿ ವಿಮಾನ ಪತನಗೊಂಡಿದೆ ಎಂದು ಪ್ರಾದೇಶಿಕ ಆಡಳಿತ ಮಾಹಿತಿ ನೀಡಿದೆ.

ವಿಮಾನ ಪತನಕ್ಕೂ ಮುನ್ನ ಪೈಲಟ್‌ಗಳು ಅದನ್ನು ವಸತಿ ಪ್ರದೇಶಗಳಿಂದ ದೂರಕ್ಕೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tu-95 ನಾಲ್ಕು ಎಂಜಿನ್‌ಗಳ ಟರ್ಬೊಪ್ರೊಪ್ ಕಾರ್ಯತಂತ್ರದ ಬಾಂಬರ್ ಆಗಿದ್ದು, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಶೀತಲ ಸಮರದ ಕಾಲದಿಂದಲೂ ರಷ್ಯಾ ಈ ವಿಮಾನವನ್ನು ತನ್ನ ಸೇನೆಯಲ್ಲಿ ಬಳಸುತ್ತಿದೆ.

ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಅವಧಿಯಲ್ಲೂ ರಷ್ಯಾ, ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಲು Tu-95 ವಿಮಾನಗಳನ್ನು ವ್ಯಾಪಕವಾಗಿ ಬಳಸಿದೆ.

ಹಾಸನದಲ್ಲಿ ಭೀಕರ ಅಪಘಾತ; ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು, ಮತ್ತೋರ್ವ ವಿದ್ಯಾರ್ಥಿನಿ ಗಂಭೀರ

0

ಹಾಸನ: ನಗರದ ವಿಶ್ವಕರ್ಮ ವೃತ್ತದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಲಿಖಿತಾ (18) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಚಿನ್ಮಯಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜು ಮುಗಿಸಿ ಮನೆಗೆ ತೆರಳಿದ್ದ ಲಿಖಿತಾ, ಬಳಿಕ ಗೆಳತಿ ಚಿನ್ಮಯಿ ಜೊತೆ ಸ್ಕೂಟರ್‌ನಲ್ಲಿ ನಗರಕ್ಕೆ ತೆರಳಿದ್ದರು. ಹಾಸನ ಬಸ್ ನಿಲ್ದಾಣದ ಕಡೆಯಿಂದ ಡೈರಿ ಕಡೆಗೆ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಲಿಖಿತಾ ಮೃತಪಟ್ಟಿದ್ದು, ಚಿನ್ಮಯಿ ಗಾಯಗೊಂಡಿದ್ದಾರೆ.

ಲಾರಿ ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಗರದೊಳಗೆ ಭಾರಿ ಗಾತ್ರದ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಿರುವುದಕ್ಕೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಕರ್ಮ ವೃತ್ತದಲ್ಲಿ ಸೂಕ್ತ ಸಂಚಾರ ಫಲಕಗಳು ಹಾಗೂ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಹೊಟ್ಟೆ ಉಬ್ಬರ, ಗ್ಯಾಸ್‌, ಮಲಬದ್ಧತೆ ಕಾಡುತ್ತಿದೆಯಾ? ಬಿರುಬಿಸಿಲಿನ ದಿನಗಳಲ್ಲಿ ಈ ಆಹಾರಗಳಿಂದ ದೂರವಿರುವುದು ಉತ್ತಮ!

0

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವುದು ಸಾಮಾನ್ಯ. ಬಿಸಿಲು ಮತ್ತು ಸೆಖೆಯಿಂದ ಬಳಲುವುದಷ್ಟೇ ಅಲ್ಲದೆ, ಊಟದ ಬಳಿಕ ಹೊಟ್ಟೆ ಉಬ್ಬರ, ಎದೆ ಉರಿ, ಗ್ಯಾಸ್, ಮಲಬದ್ಧತೆ ಹಾಗೂ ಹೊಟ್ಟೆ ಭಾರವಾದ ಅನುಭವದಂತಹ ಜೀರ್ಣಕ್ರಿಯೆ ಸಮಸ್ಯೆಗಳು ಹಲವರನ್ನು ಕಾಡುತ್ತವೆ. ಅತಿಯಾದ ಬಿಸಿಲು ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.

ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದೇಕೆ?

  • ರಕ್ತಸಂಚಾರ ಕಡಿಮೆಯಾಗುವುದು: ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಂಟ್ರೋಲ್ ಮಾಡಲು ರಕ್ತವು ಹೆಚ್ಚಾಗಿ ಚರ್ಮದ ಕಡೆಗೆ ಹರಿಯುತ್ತದೆ. ಇದರಿಂದ ಹೊಟ್ಟೆ ಹಾಗೂ ಕರುಳಿಗೆ ಹೋಗುವ ರಕ್ತದ ಪ್ರಮಾಣ ಕಡಿಮೆಯಾಗಿ ಆಹಾರ ಜೀರ್ಣವಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ.
  • ಜೀರ್ಣಕಾರಿ ಕಿಣ್ವಗಳ ಕುಸಿತ: ಅತಿಯಾದ ಬಿಸಿಲಿನಿಂದ ಹೊಟ್ಟೆಯಲ್ಲಿರುವ ಕಿಣ್ವಗಳ (Enzymes) ಕಾರ್ಯಕ್ಷಮತೆ ಕಡಿಮೆಯಾಗಿ ವಿಶೇಷವಾಗಿ ಪ್ರೋಟೀನ್ ಹಾಗೂ ಕೊಬ್ಬಿನ ಆಹಾರ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ.
  • ನಿರ್ಜಲೀಕರಣ: ಸಾಕಷ್ಟು ನೀರು ಕುಡಿಯದಿದ್ದರೆ ಜೀರ್ಣರಸ ದಪ್ಪಗಾಗಿ, ಕರುಳಿನಲ್ಲಿ ಆಹಾರದ ಚಲನೆ ಮಂದಗತಿಯಲ್ಲಿ ಸಾಗುತ್ತದೆ.
  • ಊಟದ ಸಮಯದಲ್ಲಿ ಅಸಮರ್ಪಕತೆ: ಹಸಿವು ಕಡಿಮೆಯಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನ ಊಟ ಬಿಟ್ಟು, ರಾತ್ರಿ ವೇಳೆ ಹೆಚ್ಚು ತಿನ್ನುವುದು ಆಸಿಡಿಟಿ ಮತ್ತು ಎದೆ ಉರಿಯನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು: ಎದೆ ಉರಿ, ಗ್ಯಾಸ್ಟ್ರೈಟಿಸ್, ಹೊಟ್ಟೆ ಉಬ್ಬರ, ಮಲಬದ್ಧತೆ, ಅತಿಸಾರ, ಆಹಾರ ವಿಷಬಾಧೆ (ಫುಡ್ ಪಾಯಿಸನ್), ಕರುಳಿನ ಸೋಂಕು ಮತ್ತು ಐಬಿಎಸ್ (IBS) ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಈ ಲಕ್ಷಣಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಬೇಸಿಗೆಯಲ್ಲಿ ತಪ್ಪಿಸಲೇಬೇಕಾದ ಆಹಾರಗಳು:

  1. ಖಾರಯುಕ್ತ ರಸ್ತೆಬದಿಯ ಆಹಾರ: ತೀವ್ರ ಖಾರವು ಹೊಟ್ಟೆಯ ಒಳಪದರವನ್ನು ಕೆರಳಿಸಿ ಗ್ಯಾಸ್ಟ್ರೈಟಿಸ್ ಹೆಚ್ಚಿಸುತ್ತದೆ.
  2. ರಸ್ತೆಬದಿಯ ಜ್ಯೂಸ್: ಅಶುದ್ಧ ನೀರಿನ ಐಸ್ ಬಳಸಿರುವ ಜ್ಯೂಸ್‌ನಿಂದ ಸೋಂಕು ಉಂಟಾಗಬಹುದು.
  3. ತಂಪು ಪಾನೀಯಗಳು: ಕಾರ್ಬೊನೇಟೆಡ್ ಪಾನೀಯಗಳು ನಂತರ ಹೊಟ್ಟೆ ಉಬ್ಬರ ಹೆಚ್ಚಿಸುತ್ತವೆ.
  4. ಖಾಲಿ ಹೊಟ್ಟೆಯಲ್ಲಿ ನೋವು ನಿವಾರಕ ಮಾತ್ರೆ: ಐಬುಪ್ರೊಫೆನ್ ಅಥವಾ ಆಸ್ಪಿರಿನ್‌ನಂತಹ ಮಾತ್ರೆಗಳು ಹೊಟ್ಟೆಯ ಒಳಪದರಕ್ಕೆ ಹಾನಿ ಮಾಡುತ್ತವೆ.
  5. ರಾತ್ರಿ ವೇಳೆ ಎಣ್ಣೆಯುಕ್ತ ಆಹಾರ: ಮರುದಿನ ತೀವ್ರ ಆಸಿಡಿಟಿಗೆ ಕಾರಣವಾಗಬಹುದು.
  6. ಕತ್ತರಿಸಿ ಇಟ್ಟ ಹಣ್ಣುಗಳು: ಬಿಸಿಯಲ್ಲಿ ಕತ್ತರಿಸಿಟ್ಟ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತವೆ.

ಆರೋಗ್ಯಕರ ಜೀರ್ಣಕ್ರಿಯೆಗೆ ಏನು ಮಾಡಬೇಕು?

  • ದಿನಕ್ಕೆ 2.5 ರಿಂದ 3 ಲೀಟರ್ ನೀರು ಕುಡಿಯಿರಿ.
  • ಮಜ್ಜಿಗೆ, ಎಳನೀರು, ನಿಂಬೆಹಣ್ಣಿನ ಶರಬತ್ತಿನಂತಹ ನೈಸರ್ಗಿಕ ಪಾನೀಯ ಸೇವಿಸಿ.
  • ಒಂದೇ ಬಾರಿ ಹೆಚ್ಚಿಗೆ ತಿನ್ನದೇ ಸ್ವಲ್ಪ ಪ್ರಮಾಣದಲ್ಲಿ, ಆಗಾಗ್ಗೆ ಆಹಾರ ಸೇವಿಸಿ.
  • ಹಣ್ಣು, ತರಕಾರಿ ಮತ್ತು ನಾರಿನಂಶ ಹೆಚ್ಚಿರುವ ತಾಜಾ ಆಹಾರ ಸೇವಿಸಿ.
  • ದಿನವೂ ಲಘು ವ್ಯಾಯಾಮ ಅಥವಾ ಸ್ವಲ್ಪ ಸಮಯ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಕೊನಘಟ್ಟದಲ್ಲಿ ಮಳೆ ಅವಾಂತರ; ರಸ್ತೆಗೆ ನುಗ್ಗಿದ ನೀರು, ಹಾಲು ಹಾಕಲು ರೈತರ ಪರದಾಟ

0

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ರಸ್ತೆಗೆ ನೀರು ನುಗ್ಗಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಬೆಳಗಿನ ಜಾವ ಸುರಿದ ಮಳೆಯಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತುಕೊಂಡಿದೆ. ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.

ಪ್ರತಿದಿನದಂತೆ ಬೆಳಗ್ಗೆ ಹಾಲು ಹಾಕಲು ತೆರಳುತ್ತಿದ್ದ ರೈತರು ಮಳೆಯ ನಡುವೆಯೇ ನೀರು ತುಂಬಿದ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ನೀರು ನಿಂತಿರುವುದರಿಂದ ವಾಹನಗಳನ್ನು ಚಲಾಯಿಸುವಾಗ ಅಪಘಾತದ ಆತಂಕವೂ ಎದುರಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಳೆ ಬಂದಾಗಲೆಲ್ಲಾ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಈಗಾಗಲೇ ಇರುವ ಚರಂಡಿ ಮತ್ತು ರಾಜಕಾಲುವೆಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿರುವುದೇ ರಸ್ತೆಗೆ ನೀರು ನುಗ್ಗಲು ಪ್ರಮುಖ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಹೂಳು, ಕಸ ಸೇರಿದಂತೆ ತ್ಯಾಜ್ಯ ತುಂಬಿಕೊಂಡಿರುವುದರಿಂದ ಮಳೆ ನೀರು ಮುಂದೆ ಸಾಗದೆ ರಸ್ತೆಯಲ್ಲೇ ನಿಂತುಕೊಳ್ಳುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಮಳೆಗಾಲಕ್ಕೂ ಮುನ್ನವೇ ಚರಂಡಿ ಹಾಗೂ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮಳೆ ಬಂದಾಗಲೆಲ್ಲಾ ಗ್ರಾಮಸ್ಥರು ಇದೇ ಸಮಸ್ಯೆ ಎದುರಿಸುವಂತಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ; ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ, ದಂಪತಿ ಸಾವು

0

ದೊಡ್ಡಬಳ್ಳಾಪುರ:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೂಗೇನಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನಕ್ಕೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ.

ಮೃತರನ್ನು ಕತ್ತಿಹೊಸಗಳ್ಳಿ ಮೂಲದ ಲಕ್ಷ್ಮಯ್ಯ (55) ಹಾಗೂ ಅನಿತಾ (45) ಎಂದು ಗುರುತಿಸಲಾಗಿದೆ. ರಾತ್ರಿ ಮನೆಯಲ್ಲಿ ಪಿತೃಪಕ್ಷದ ಹಬ್ಬ ಮುಗಿಸಿ ಸಂಬಂಧಿಕರ ಮನೆಗೆ ತೆರಳಿದ್ದ ದಂಪತಿ, ಬಳಿಕ ಅಲ್ಲಿಂದ ಹರಿಕಥೆ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಈ ವೇಳೆ ಹಿಂಬದಿಯಿಂದ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಮೃತಪಟ್ಟಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಫಲಿಸದ 5 ತಿಂಗಳ ಚಿಕಿತ್ಸೆ! ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು

0

ಮಡಿಕೇರಿ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸುಮಾರು 19 ವರ್ಷದ ಗಂಡಾನೆಯೊಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಕಾದಾಟದಲ್ಲಿ ಗಾಯಗೊಂಡು ಮುರಿದ ದಂತದೊಂದಿಗೆ ಶಿಬಿರಕ್ಕೆ ಬಂದಿದ್ದ ಆನೆಗೆ ಅರಣ್ಯ ಇಲಾಖೆ ಕಳೆದ ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ ನೀಡುತ್ತಿತ್ತು. ತಜ್ಞ ವೈದ್ಯರ ತಂಡದಿಂದಲೂ ಆನೆಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ನಡೆಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಆನೆ ಮೃತಪಟ್ಟಿದೆ.

ಆನೆಯನ್ನು ಪ್ರತ್ಯೇಕವಾಗಿಟ್ಟು, ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ವಿಶೇಷ ಆರೈಕೆ ಮಾಡಲಾಗುತ್ತಿತ್ತು. ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕ ಔಷಧಿ, ಗಾಯಗಳಿಗೆ ಚಿಕಿತ್ಸೆ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.

ಹೆಚ್ಚಿನ ತಜ್ಞ ಚಿಕಿತ್ಸೆಯ ಸಲುವಾಗಿ ವೈಲ್ಡ್‌ಲೈಫ್ ಎಸ್‌ಒಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನೂ ಕರೆಸಿ ಜಂಟಿಯಾಗಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಡಿಜಿಟಲ್ ಎಕ್ಸ್‌ರೇ ಪರೀಕ್ಷೆ ನಡೆಸಿದಾಗ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ಪತ್ತೆಯಾಗಿತ್ತು.

ತಜ್ಞ ವೈದ್ಯರ ಸಲಹೆಯಂತೆ ಮುಂದುವರಿದ ಚಿಕಿತ್ಸೆಯ ಭಾಗವಾಗಿ ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡಲು ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಗಾಯಗೊಂಡ ಕಾಲನ್ನು ಸ್ಥಿರವಾಗಿಡಲು ಸೆಪ್ಟೆಂಬರ್ 27ರಂದು ತಜ್ಞರ ಮೂಲಕ ಫೈಬರ್‌ಗ್ಲಾಸ್ ಬ್ಯಾಂಡೇಜ್ ಕೂಡ ಅಳವಡಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ಸುಮಾರು 9.50ರ ವೇಳೆಗೆ ಆನೆ ಏಕಾಏಕಿ ಕುಸಿದು ಬಿದ್ದಿದೆ. ಕೂಡಲೇ ತುರ್ತು ಗ್ಲುಕೋಸ್ ಹಾಗೂ ಐವಿ ಚಿಕಿತ್ಸೆ ಸೇರಿದಂತೆ ತೀವ್ರ ನಿಗಾ ವಹಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಆನೆ ಕೊನೆಯುಸಿರೆಳೆದಿದೆ.

ಸದ್ಯ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದೀರ್ಘಕಾಲದ ಮೂಳೆ ಮುರಿತ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ.

ದುಬಾರೆ ಆನೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆಯ ಸಾವು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವನ್ಯಜೀವಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

ದಸರಾ ಬಂತು… ಶೂ–ಸಾಕ್ಸ್‌ ಬರಲಿಲ್ಲ..! ಶಿರಹಟ್ಟಿ ಸರ್ಕಾರಿ ಶಾಲೆಗಳ ಸಾವಿರಾರು ಮಕ್ಕಳಿಗೆ ಸೌಲಭ್ಯ ಇನ್ನೂ ಮರೀಚಿಕೆ!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿರುವ ಹೊತ್ತಿನಲ್ಲಿ ದಸರಾ ರಜೆ ಸಮೀಪಿಸಿದೆ. ಆದರೆ ಶಿರಹಟ್ಟಿ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದಿಂದ ನೀಡಬೇಕಾದ ಶೂ ಮತ್ತು ಸಾಕ್ಸ್‌ಗಳು ಇನ್ನೂ ಸಂಪೂರ್ಣವಾಗಿ ತಲುಪಿಲ್ಲ. ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ತಾಲೂಕಿನ ೧೫೭ ಸರ್ಕಾರಿ ಶಾಲೆಗಳಲ್ಲಿ ೧೮,೩೧೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ೧೮,೩೧೦ ಜೋಡಿ ಶೂ–ಸಾಕ್ಸ್‌ ಪೂರೈಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸರಬರಾಜುದಾರರಿಗೆ ಇಂಡೆಂಟ್‌ ನೀಡಲಾಗಿದೆ. ಆದರೆ ಈವರೆಗೆ ೧೨,೦೭೬ ವಿದ್ಯಾರ್ಥಿಗಳಿಗೆ ಮಾತ್ರ ಶೂ–ಸಾಕ್ಸ್‌ ಪೂರೈಕೆಯಾಗಿದ್ದು, ಇನ್ನೂ ೬,೨೩೪ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿಲ್ಲ.

ಪೂರೈಕೆಯಾಗಿರುವ ಶೂ–ಸಾಕ್ಸ್‌ಗಳನ್ನು ಸಹ ವಿದ್ಯಾರ್ಥಿಗಳಿಗೆ ವಿತರಿಸಿಲ್ಲ. ಎಲ್ಲ ಅಳತೆಯ ಶೂ–ಸಾಕ್ಸ್‌ಗಳು ಬಂದಿಲ್ಲದಿರುವುದು ಹಾಗೂ ಬಂದಿರುವವುಗಳಲ್ಲಿಯೂ ವಿದ್ಯಾರ್ಥಿಗಳ ಅಳತೆಗೆ ಸಂಬಂಧಿಸಿದ ಗೊಂದಲವಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾದ ಬಳಿಕವೇ ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸೌಲಭ್ಯ ಕೊಡುವ ಯೋಜನೆ… ತಲುಪಿಸುವಲ್ಲಿ ವಿಳಂಬ

ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಶೂ–ಸಾಕ್ಸ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಆದರೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಕ್ಕಳಿಗೆ ತಲುಪಬೇಕಾದ ಶೂ–ಸಾಕ್ಸ್‌ಗಳು ದಸರಾ ರಜೆ ಸಮೀಪಿಸಿದರೂ ಸಿಗದಿರುವುದು ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ‘ನಮಗೆ ಶೂ–ಸಾಕ್ಸ್‌ ಯಾವಾಗ ಸಿಗುತ್ತದೆ?’ ಎಂದು ಪ್ರಶ್ನಿಸುತ್ತಿದ್ದಾರೆ. ಶಿರಹಟ್ಟಿ ಸಮೀಪದ ಹರಿಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಕಳೆದ ವರ್ಷ ಶೂ–ಸಾಕ್ಸ್‌ ವಿತರಿಸಿರಲಿಲ್ಲ. ಪ್ರಸಕ್ತ ವರ್ಷವೂ ವಿತರಣೆ ಆಗಿಲ್ಲ ಎನ್ನಲಾಗಿದೆ.

ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರ ಕಲ್ಪಿಸುವ ಸೌಲಭ್ಯಗಳು ಸಕಾಲದಲ್ಲಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಕೋಟ್

ತಾಲೂಕಿನಲ್ಲಿ ಎಲ್ಲ ಅಳತೆಯ ಶೂ–ಸಾಕ್ಸ್‌ಗಳು ಬಂದಿಲ್ಲ. ಈ ಕಾರಣದಿಂದ ಪೂರೈಕೆಯಾಗಿರುವ ಶೂ–ಸಾಕ್ಸ್‌ಗಳನ್ನು ವಿತರಿಸಿಲ್ಲ. ಈ ಕುರಿತು ಇಲಾಖೆಯ ಆಯುಕ್ತರು, ಉಪನಿರ್ದೇಶಕರು ಹಾಗೂ ಸರಬರಾಜುದಾರರಿಗೆ ಪತ್ರ ಬರೆಯಲಾಗಿದೆ.
— ಎಸ್.ವಿ. ಶೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ

ಜಿಯೋ ನೆಟ್‌ವರ್ಕ್ ಕೈಕೊಟ್ಟು ಗ್ರಾಹಕರ ಗೋಳು..!: ಹದಿನೈದು ದಿನಗಳಿಂದ ಕರೆ, ಇಂಟರ್‌ನೆಟ್ ಸೇವೆ ವ್ಯತ್ಯಯ?

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಸಮೀಪದ ಜಕ್ಕಲಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಜಿಯೋ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಕರೆ ಹಾಗೂ ಇಂಟರ್‌ನೆಟ್ ಸೇವೆ ಪದೇಪದೆ ವ್ಯತ್ಯಯವಾಗುತ್ತಿರುವುದರಿಂದ ನೂರಾರು ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ನೆಟ್‌ವರ್ಕ್‌ಗಾಗಿ ಗ್ರಾಹಕರು ಮೊಬೈಲ್ ಹಿಡಿದು ಮನೆಗಳಿಂದ ಹೊರಬಂದು ಎತ್ತರದ ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಮೊಬೈಲ್‌ನಲ್ಲಿ ನೆಟ್‌ವರ್ಕ್ ಕಾಣಿಸಿಕೊಂಡರೂ ಕರೆ ಸಂಪರ್ಕವಾಗುವುದಿಲ್ಲ. ಸಂಪರ್ಕವಾದರೂ ಧ್ವನಿ ಸ್ಪಷ್ಟವಾಗಿ ಕೇಳಿಸದಿರುವುದು ಗ್ರಾಹಕರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿದೆ.

ಇಂಟರ್‌ನೆಟ್ ವೇಗವೂ ತೀರಾ ಕಡಿಮೆಯಾಗಿದ್ದು, ಆನ್‌ಲೈನ್ ವಹಿವಾಟು, ಡಿಜಿಟಲ್ ಪಾವತಿ, ಶಿಕ್ಷಣ ಹಾಗೂ ವಿವಿಧ ಅಗತ್ಯ ಸೇವೆಗಳಿಗೆ ಮೊಬೈಲ್ ಡೇಟಾ ಅವಲಂಬಿಸಿರುವ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ಹಲವರು ಪರದಾಡುವಂತಾಗಿದೆ. ತುರ್ತು ಸಂದರ್ಭದಲ್ಲಿ ಕರೆ ಮಾಡಲು ಸಾಧ್ಯವಾಗದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಬೇರೆ ನೆಟ್‌ವರ್ಕ್‌ಗೆ ಪೋರ್ಟ್‌

ಸಮಸ್ಯೆ ನಿರಂತರವಾಗಿರುವ ಹಿನ್ನೆಲೆಯಲ್ಲಿ ಜಿಯೋ ಗ್ರಾಹಕರಲ್ಲಿ ಹಲವರು ತಮ್ಮ ಮೊಬೈಲ್ ಸಂಖ್ಯೆಯನ್ನು ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಸಮಸ್ಯೆ ಮುಂದುವರಿದರೆ ಇನ್ನಷ್ಟು ಗ್ರಾಹಕರು ಜಿಯೋ ಸೇವೆಯಿಂದ ದೂರವಾಗುವ ಸಾಧ್ಯತೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಯೋ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಜಕ್ಕಲಿ ಗ್ರಾಮದ ನೆಟ್‌ವರ್ಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಾಂತ್ರಿಕ ದೋಷವನ್ನು ಶೀಘ್ರ ಪತ್ತೆಹಚ್ಚಿ ಪರಿಹರಿಸಬೇಕು. ಗ್ರಾಮದಲ್ಲಿ ನಿರಂತರ ಹಾಗೂ ಗುಣಮಟ್ಟದ ಮೊಬೈಲ್ ಸೇವೆ ಒದಗಿಸುವ ಮೂಲಕ ಗ್ರಾಹಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪರ್ವೇಜ್ ಪತ್ತೆಗೆ ಸರ್ಕಾರದಿಂದ ಎಲ್ಲ ಕ್ರಮ: ಈಶ್ವರ ಖಂಡ್ರೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಗದಗ ಕೆಆರ್‌ಐಡಿಎಲ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣದಲ್ಲಿ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಪರ್ವೇಜ್ ಅವರ ತಂದೆ ಜಾಫರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು, ಧೈರ್ಯದಿಂದ ಇರುವಂತೆ ತಿಳಿಸಿ, ಪರ್ವೇಜ್‌ರನ್ನು ಪತ್ತೆಹಚ್ಚಲು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಜಿಪಿ ಅವರೊಂದಿಗೆ ಮಾತನಾಡಿ ಪರ್ವೇಜ್‌ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿಯೂ ತಿಳಿಸಿದರು.

ಪರ್ವೇಜ್ ಅವರ ನಾಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಹಣ ಪಾವತಿ ವಿಚಾರವಾಗಿ ಆತಂಕಪಡುವ ಅಗತ್ಯವಿಲ್ಲ. ಪರ್ವೇಜ್ ಸಂಪರ್ಕಕ್ಕೆ ಬಂದರೆ ಯಾವುದೇ ಸಮಸ್ಯೆ ಇದ್ದರೂ ಸರ್ಕಾರದ ಮಟ್ಟದಲ್ಲಿ ಪರಿಹರಿಸುವುದಾಗಿ ಸಚಿವರು ಕುಟುಂಬಕ್ಕೆ ತಿಳಿಸಿದರು.

ಪರ್ವೇಜ್ ನಾಪತ್ತೆ ಹಿನ್ನೆಲೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಮುಖ್ಯ ಎಂಜಿನಿಯರ್‌ಗಳಾದ ತಿಮ್ಮರಾಜಪ್ಪ, ಶ್ರೀನಿವಾಸ್ ಹಾಗೂ ವೇಣುಗೋಪಾಲ್ ಮತ್ತು ಗದಗದ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಕಾಮಗಾರಿಗಳ ಪ್ರಗತಿ, ಅನುದಾನ ಹಾಗೂ ಬಾಕಿ ಪಾವತಿ ಸೇರಿದಂತೆ ಸಂಬಂಧಿತ ವಿಷಯಗಳ ಕುರಿತು ಮಾಹಿತಿ ಪಡೆದ ಸಚಿವರು, ಮುಖ್ಯ ಎಂಜಿನಿಯರ್‌ಗಳು ಕಾಮಗಾರಿ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಪರ್ವೇಜ್ ಅವರ ಪತ್ತೆ ಕಾರ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿರುವುದಾಗಿ ಗದಗ ಪೊಲೀಸರು ಈಗಾಗಲೇ ತಿಳಿಸಿದ್ದಾರೆ. ಪರ್ವೇಜ್ ಅವರ ಕೊನೆಯ ಮೊಬೈಲ್‌ ಸ್ಥಳ ವಿಜಯವಾಡದಲ್ಲಿ ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.