Home Blog Page 20

ಚಳಿ ತಾಳಲಾರದೇ ಇದ್ದಿಲಿನಿಂದ ಬೆಂಕಿ ಹಾಕಿ ನಿದ್ರೆ: ಉಸಿರುಗಟ್ಟಿ ಮೂವರು ಯುವಕರು ಸಾವು!

0

ಬೆಳಗಾವಿ:- ಕೊರೆಯುವ ಚಳಿಯಿಂದ ಹಾಗೂ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದ ಮೂವರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.

ಕೊರೆಯುವ ಚಳಿಯಿಂದ ಹಾಗೂ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಯುವಕರು ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದರು ಎನ್ನಲಾಗಿದೆ. ಈ ವೇಳೆ ದಟ್ಟ ಹೊಗೆ ಹಾಗೂ ಸರಿಯಾದ ಆಮ್ಲಜನಕ ಪೂರೈಕೆಯಾಗದೇ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಓರ್ವ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ನಿನ್ನೆ ರಾತ್ರಿಯಿಂದ ಸಂಜೆ 4 ಗಂಟೆಯವರೆಗೂ ಯಾರೇ ಬಾಗಿಲು ಬಡಿದರೂ ಸಹ ಕೇಳಿಲ್ಲ ಹಾಗೂ ಬಾಗಿಲು ತೆರೆದಿಲ್ಲ ಕೋಣೆಯಲ್ಲಿ ಎಲ್ಲಿಯೂ ವೆಂಟಿಲೇಶನ್ ಇಲ್ಲದೇ ಆಮ್ಲಜನಕ ಕೊರತೆಯಿಂದ ರಿಹಾನ್, ಮೊಹಿನ್, ಸರ್ಫರಾಜ ಎಂಬ ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ಧು ಶಾಹಾನವಾಜ ಸ್ಥಿತಿ ಗಂಭೀರವಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿಯಲ್ಲಿ ಸಂಭವಸಿರೋ ಈ ಘೋರ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ. ಯುವರಕ ಸಾವು ಸ್ವಾಭಾವಿಕವೋ ಅಥವಾ ಇನ್ಯಾರದ್ದೋ ಕೈವಾಡವಿದೆಯೋ ಎನ್ನುವ ನಿಟ್ಟಿನಲ್ಲೂ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಲ್ಲಿ ಲಕ್ಷ-ಲಕ್ಷ ಪಂಗನಾಮ: ಖಾಕಿ ಮೊರೆ ಹೋದ 45ರ ವ್ಯಕ್ತಿ!

0

ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಬೆಂಗಳೂರಿನ 45 ವರ್ಷದ ವ್ಯಕ್ತಿಗೆ 42 ಲಕ್ಷಕ್ಕೂ ಹೆಚ್ಚು ಹಣ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಹೆಚ್ಚಿನ ಲಾಭ ಸಿಗಲಿದೆ ಎಂಬ ಆಮಿಷಕ್ಕೆ ಬಲಿಯಾದ ವ್ಯಕ್ತಿಯು, ಈಗ ಪೊಲೀಸರ ಮೊರೆ ಹೋಗಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಅಶುತೋಷ್ ಶರ್ಮಾ ಎನ್ನುವ ವ್ಯಕ್ತಿ ಕ್ರಿಪ್ಟೋ ಹೂಡಿಕೆ ಕುರಿತು ಮಾರ್ಗದರ್ಶನ ನೀಡುತ್ತೇನೆ ಎಂದು ಸಂಪರ್ಕಿಸಿದ್ದ. ನಂತರ ಟೆಲಿಗ್ರಾಂ ಗುಂಪಿಗೆ ಸೇರಿಸಿ, ಹೂಡಿಕೆಗೆ ಶೇ.15ರಷ್ಟು ಲಾಭ ಸಿಗುತ್ತದೆ ಎಂದು ಖಚಿತಪಡಿಸಿದ್ದ. ಪ್ರಾರಂಭದಲ್ಲಿ ಮಾಡಿದ ಸ್ವಲ್ಪ ಹೂಡಿಕೆಗೆ ಲಾಭ ತೋರಿಸಿದ್ದರಿಂದ ಸಂತ್ರಸ್ತರಿಗೆ ನಂಬಿಕೆ ಬಂದು, ಇನ್ನಷ್ಟು ಹಣ ಹೂಡಿಕೆ ಮಾಡಲಾಗಿತ್ತು.

ಟ್ರೇಡಿಂಗ್ ಖಾತೆಯಲ್ಲಿ 138,687.22 USDT ಬ್ಯಾಲೆನ್ಸ್ ತೋರಿದ್ದರೂ, ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ “ಬ್ಯಾಂಕ್ ವಿವರಗಳು ತಪ್ಪಾಗಿದೆ” ಎಂದು ಹೇಳಿ, ಅದನ್ನು ಸರಿಪಡಿಸಲು ₹4 ಲಕ್ಷ ಪಾವತಿಸಬೇಕು ಎಂದು ವಂಚಕರು ಮಾಹಿತಿ ನೀಡಿದ್ದಾರೆ. ನಂತರ “ತಡ ಪಾವತಿ ದಂಡ”, “ಕರೆನ್ಸಿ ಪರಿವರ್ತನೆ ಶುಲ್ಕ”, “RBI ತೆರಿಗೆ” ಎಂಬ ಹೆಸರಿನಲ್ಲಿ ಮತ್ತಷ್ಟು ಹಣ ಬೇಡಿಕೆ ಇಟ್ಟಿದ್ದಾರೆ.

ಲಾಭ ಪಡೆಯುವ ಆಸೆಯಿಂದ ಸಂತ್ರಸ್ತರು ಸ್ನೇಹಿತರಿಂದ ಹಾಗೂ ಡಿಜಿಟಲ್ ಸಾಲ ಆಪ್‌ಗಳಿಂದ ಹಣ ಪಡೆಯುತ್ತಾ ಜುಲೈ 3ರಿಂದ ಆಗಸ್ಟ್ 1ರವರೆಗೆ ಒಟ್ಟು ₹42.62 ಲಕ್ಷ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರೂ, ಯಾವುದೇ ಲಾಭ ವಾಪಸ್ ಸಿಗಲಿಲ್ಲ. ಕೊನೆಗೆ ವಂಚನೆ ನಡೆದಿರುವುದು ಅರಿವಾಗಿ ಆತ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಇದೀಗ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಜಿಲ್ಲಾ ಮಟ್ಟದ ಬ್ರೇನ್ ಬಸ್ಟರ್ ಕ್ವಿಜ್ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಬ್ರೇನ್ ಬಸ್ಟರ್ ಕ್ವಿಜ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಿರ್ಣಾಯಕರಾಗಿ ವಿಜ್ಞಾನ ಕ್ಷೇತ್ರದ ವಿಶೇಷ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಶಿಕ್ಷಕರಾದ ಮಹಮ್ಮದ ರಫೀಕ ಸವದತ್ತಿ ಆಗಮಿಸಿ ವಿದ್ಯಾರ್ಥಿಗಳಿಗೆ ಪಿಪಿಟಿ ಮೂಲಕ ಪ್ರಶ್ನೆಗಳನ್ನು ಕೇಳಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ ಎನ್.ಎಮ್. ಕುಡತರಕರ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿಗೆ ರಸಪ್ರಶ್ನೆಗಳಂತಹ ಕಾರ್ಯಕ್ರಮಗಳು ಪೂರಕ ವೇದಿಕೆಯಾಗಿವೆ. ಸಮಯ ನಿರ್ವಹಣೆ, ಏಕಾಗ್ರತೆ, ಕೌಶಲ್ಯಗಳನ್ನು ಸರಿಯಾಗಿ ಅಳವಡಿಸಿಕೊಳ್ಳಿ ಎಂದು ಹೇಳಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿದರು.

ಸ್ಪರ್ಧೆಯಲ್ಲಿ ಮಲಪ್ರಭಾ ತಂಡ-ಜೆ.ಟಿ. ಕಾಲೇಜು ಗಜೇಂದ್ರಗಡ ಪ್ರಥಮ, ಶರಾವತಿ ತಂಡ ಜೆ.ಟಿ. ಕಾಲೇಜು ಗದಗ ದ್ವಿತೀಯ, ತುಂಗಾ ತಂಡ-ಜೆ.ಟಿ. ಕಾಲೇಜು ಗದಗ ತೃತೀಯ ಸ್ಥಾನ ಪಡೆದುಕೊಂಡರು.

ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಹಾಗೂ ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಯೋಜಕರುಗಳಾದ ಪ್ರೊ. ಸವಿತಾ ಪೂಜಾರ, ಪ್ರಿಯಾಂಕಾ ಕಬಾಡಿ, ಯಶವಂತ ಕಲಬುರ್ಗಿ, ಶಾಹಿದಾ ಶಿರಹಟ್ಟಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ಕರವೇ ಜಿಲ್ಲಾ ಉಪಾಧ್ಯಕ್ಷರ ಉಚ್ಛಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕ ಸುಮಾರು 20 ವರ್ಷಗಳ ಕಾಲ ಸಂಘಟನೆ ಗಟ್ಟಿಗೊಳಿಸುತ್ತಾ ಬಂದಿದ್ದು, ಟಿ.ಎ. ನಾರಾಯಣಗೌಡ್ರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡದ ನೆಲ-ಜಲ, ಭಾಷೆ, ಗಡಿ ಯಾವುದೇ ವಿಚಾರದಲ್ಲಿ ಮುನ್ನುಗ್ಗುವ ಸಂಘಟನೆಯಾಗಿದೆ. ಸಂಘಟನೆಯ ತತ್ವ-ಸಿದ್ಧಾಂತಗಳಿಗೆ ವಿರೋಧವಾಗಿ ನಡೆದುಕೊಂಡು ಸಂಘಟನೆಗೆ ಕಳಂಕ ತರುವಂತಹ ಜಿಲ್ಲಾ ಉಪಾಧ್ಯಕ್ಷ ವಿನಾಯಕ ಬದಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ನ. 15ರಂದು ಉಚ್ಛಾಟನೆ ಮಾಡಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಗೆ ಇಂದಿನಿಂದು ಈ ವ್ಯಕ್ತಿ ಯಾವುದೇ ರೀತಿಯಲ್ಲಿಯೂ ಸಂಘಟನೆಯ ಪರವಾಗಿರುವುದಿಲ್ಲವೆಂದು ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಮಹಾಯಾಗದಿಂದ ಲೋಕ ಕಲ್ಯಾಣವಾಗಲಿದೆ: ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು

0

ವಿಜಯಸಾಕ್ಷಿ ಸುದ್ದಿ, ಗದಗ: ಅತಿರುದ್ರ ಯಾಗ ಎಂದರೆ ಕೊನೆ ಇಲ್ಲದ ಯಾಗ ಎಂದರ್ಥ. ಗದಗಿನ ಜನತೆಯ ಸಂಕಲ್ಪದಿಂದ ಮಾಡಿದ ಈ ಮಹಾಯಾಗ ಮುಂದಿನ ದಿನಗಳಲ್ಲಿ ಸ್ಮರಣೀಯವಾಗಲಿದೆ. ಇಲ್ಲಿನ ಜನತೆಯನ್ನು ಶಿವನು ಸದಾ ರಕ್ಷಣೆ ಮಾಡುವನು ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ಹೇಳಿದರು.

ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನ. 11ರಿಂದ 18ರವರೆಗೆ ಜರುಗಿದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಈ ಮಹಾಯಾಗ ವೈಯಕ್ತಿಕವಾಗದೆ ಲೋಕಕಲ್ಯಾಣಕ್ಕಾಗಿ ಮಾಡಲಾಗಿದೆ. ಈ ಮಹಾಯಾಗದಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಶಿವನು ಒಳ್ಳೆಯದನ್ನೇ ಮಾಡುತ್ತಾನೆ. ಎಲ್ಲರೂ ಶಕ್ತಿಮೀರಿ ಸೇವೆ ಮಾಡಿದ್ದಾರೆ. ನಮ್ಮ ಪೂರ್ವಜನ್ಮದ ಪುಣ್ಯದ ಫಲವಾಗಿ ಶಿವನು ನಾವೆಲ್ಲರೂ ಈ ಮಹಾಯಾಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾನೆ. ಇಲ್ಲಿ ನಡೆದ ಮಹಾಯಾಗ ಗದಗಿನ ಜನತೆಯ ಕಲ್ಯಾಣಕ್ಕಾಗಿ ಮಾತ್ರವಲ್ಲ, ಇದು ಜಿಲ್ಲೆ, ರಾಜ್ಯ, ರಷ್್ಟ್ರಕ್ಕೆ, ಇಡೀ ಜಗತ್ತಿನ ಕಲ್ಯಾಣಕ್ಕಾಗಿ ನಡೆದಿದೆ ಎಂದು ಹೇಳಿದರು.

ಮಣಕವಾಡದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ಸಂತರ ಆಗಮನ ವಸಂತದ ಆಗಮನವಾದಂತೆ. ವಸಂತದ ಗಾಳಿ ಬಾಡಿದ ಗಿಡದಲ್ಲಿ ಚಿಗುರು ಮೂಡಿಸುವಂತೆ ಸಾಧು-ಸಂತರುಗಳು ಸತ್ತಂತಿರುವ ಜನರ ಬದುಕನ್ನು ಹಸನುಗೊಳಿಸುತ್ತಾರೆ. ಯಾಗವು ಸಮಸ್ತ ಲೋಕ ಕಲ್ಯಾಣಕ್ಕಾಗಿ ಜನರಿಗೆ ಸುಖ, ಶಾಂತಿ ನೀಡಲಿ ಎಂಬ ಉದ್ದೇಶದ್ದಾಗಿರುತ್ತದೆ. ಯಜ್ಞದಿಂದ ಹೊರಹೊಮ್ಮಿದ ಹೊಗೆಯು ಪರಿಸರವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಲು ಮಹಿಳೆಯರ ಕುಂಭಮೇಳವು ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದವರು ಸ್ವಾರ್ಥಕ್ಕಾಗಿ ಅಲ್ಲ, ಲೋಕಕಲ್ಯಾಣಕ್ಕಾಗಿ ತನು-ಮನ-ಧನದಿಂದ ಸೇವೆ ಮಾಡಿದ್ದಾರೆ. ದೇಶದ ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಜನರು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ ಅಂತಹ ಪವಿತ್ರ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಮಾತನಾಡಿ, ಗದಗಿನಲ್ಲಿ 8 ದಿನಗಳವರೆಗೆ ನಡೆದ ಕುಂಭಮೇಳ ಇತಿಹಾಸ ನಿರ್ಮಿಸಿದೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಂತ ಪೂಜ್ಯಶ್ರೀ ಸಹದೇವಾನಂದ ಗಿರಿ ಜಿ ಮಹಾರಾಜರು ನೇತೃತ್ವ, ಶಿರೋಳ ಮಠದ ಪೂಜ್ಯಶ್ರೀ ಯಚ್ಚರೇಶ್ವರ ಮಹಾಸ್ವಾಮಿಗಳು ಸಮ್ಮುಖವಹಿಸಿದ್ದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ರವಿ ದಂಡಿನ, ಫಕ್ಕೀರಸಾ ಭಾಂಡಗೆ, ಬಿ.ಬಿ. ಅಸೂಟಿ, ರಾಜು ಕುರಡಗಿ, ಬಸವರಾಜ ಬಿಂಗಿ, ವಿ.ಕೆ. ಗುರುಮಠ, ಪ್ರಕಾಶ ಬೊಮ್ಮನಹಳ್ಳಿ, ಗೋಪಾಲ ಅಗರವಾಲ, ಅವಿನಾಶ ಜೈನ, ವೆಂಕಟೇಶ ಕುಲಕರ್ಣಿ, ಲಿಂಗರಾಜ ಗುಡಿಮನಿ, ರಾಘವೇಂದ್ರ ಬರಾಡ, ಸಂತೋಷ ಚನ್ನಪ್ಪನವರ, ನಾರಾಯಣ ಕುಡತರಕರ, ರವಿ ಗುಂಜೀಕರ, ರಮೇಶ್ ಸಜ್ಜಗಾರ, ವಿಜಯಲಕ್ಷ್ಮಿ ಮಾನ್ವಿ, ಪ್ರೀತಿ ಹೊನಗುಡಿ, ಅನುರಾಧಾ ಬಸವಾ, ಮೇಘಾ ಮುದಗಲ್ ಮುಂತಾದವರು ಉಪಸ್ಥಿತರಿದ್ದರು.

ಅತಿರುದ್ರ ಮಹಾಯಾಗ ಸೇವಾ ಸಮಿತಿಯ ಗೌರವಾಧ್ಯಕ್ಷರು ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಮಾತನಾಡಿ, ಗದಗಿನಲ್ಲಿ ನಡೆದ ಅತಿರುದ್ರ ಮಹಾಯಾಗ, ಕಿರಿಯ ಕುಂಭಮೇಳವು ಯಶಸ್ವಿಯಾಗಿ ನಡೆಯಲು ಪೂಜ್ಯಶ್ರೀ ಮಹಾಂತ ಸಹದೇವಾನಂದ ಗಿರಿ ಜಿ ಮಹಾರಾಜರು ಕಾರಣರಾಗಿದ್ದಾರೆ. ಇದೊಂದು ನನ್ನ ಜೀವನದ ಅವಿಸ್ಮರಣೆಯ ದಿನವಾಗಿದೆ. ಗದಗಿನ ಜನತೆ ಎಂಟು ದಿನಗಳವರೆಗೆ ಲೌಕಿಕ ಜಗತ್ತನ್ನು ತೊರೆದು ದೇವಲೋಕದಲ್ಲಿ ಇದ್ದಂತೆ ವಾತಾವರಣ ನಿರ್ಮಾಣವಾಗಿತ್ತು. ಸನಾತನ ಧರ್ಮ, ಹಿಂದೂ ಸಂಸ್ಕೃತಿ ಉಳಿಯಬೇಕಾದರೆ ಸಾಧು-ಸಂತರ ಮಾರ್ಗದರ್ಶನ ಅಗತ್ಯವಿದೆ. ಭಕ್ತರು ಇಲ್ಲಿ ಕಲಿತ ಸಂಸ್ಕಾರವನ್ನು ಮನೆಯಲ್ಲಿ ಮಕ್ಕಳಿಗೆ ಮುಂದುವರೆಸಬೇಕು ಎಂದು ಹೇಳಿದರು.

 

ರಸ್ತೆ ಕಾಮಗಾರಿಗಳಿಗೆ ಸಚಿವರಿಂದ ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಮೃಗಾಲಯ ಮುಖ್ಯ ರಸ್ತೆಯಿಂದ ರವಿ ಹುಲಕೋಟಿ ಇವರ ಮನೆಯವರೆಗಿನ ಸಿಸಿ ರಸ್ತೆ ಕಾಮಗಾರಿ, ಅಸುಂಡಿ-ಕುರ್ತಕೋಟಿ ಗ್ರಾಮದ 36 ಪ್ಲಾಟ್ ಆಶ್ರಯ ಬಡಾವಣೆಯ ರಸ್ತೆ ಸುಧಾರಣೆ ಕಾಮಗಾರಿ, ಅಸುಂಡಿ-ಕುರ್ತಕೋಟಿ ಮುಖ್ಯ ರಸ್ತೆಯಿಂದ ರಾಘವೇಂದ್ರ ಹುಲಕೋಟಿ ಇವರ ಹೊಲದವರೆಗೆ ರಸ್ತೆ ಸುಧಾರಣೆ, ಗದಗ ತಾಲೂಕು ಅಸುಂಡಿ-ಕುರ್ತಕೋಟಿ ಮುಖ್ಯ ರಸ್ತೆಯಿಂದ ಬೆಳ್ಳಿಕೊಪ್ಪ ಹನುಮಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಸೋಮವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿದರು.

ರಸ್ತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ನಿಗದಿತ ಕಾಲಾವಧಿಯಲ್ಲಿಯೇ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ಗ್ರಾಮಸ್ಥರು ಹಾಜರಿದ್ದರು.

ಲಕ್ಕುಂಡಿಯಲ್ಲಿ ಯೋಗಿರಾಜರ ಆರಾಧನೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತಮ್ಮ ಆಧ್ಯಾತ್ಮಿಕ ಯೋಗ ಸಾಧನೆಯೊಂದಿಗೆ ಪ್ರಸಿದ್ಧಿಯಾಗಿರುವ ಇಲ್ಲಿಯ ಯೋಗಿರಾಜ ಮಹಾರಾಜರ 104ನೇ ವರ್ಷದ ಆರಾಧನೆಯು ನ. 18ರಿಂದ ಆರಂಭವಾಗಿದ್ದು, ನ. 20ರವರೆಗೂ ಐತಿಹಾಸಿಕ ವಿದ್ಯಾಶಂಕರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಲಿದೆ.

ಮೂರು ದಿನಗಳವರೆಗೂ ಬೆಳಿಗ್ಗೆ 6 ಗಂಟೆಯಿಂದ ವಿದ್ಯಾಶಂಕರ ದೇವರಿಗೆ ಲಘು ರುದ್ರಾಭಿಷೇಕ, ಗಣಪತಿ ಸಹಸ್ರ ಮೋದಕ ಹೋಮ, ದೀಪೋತ್ಸವ, ಶೇಜಾರತಿ, ಮಂತ್ರ ಪುಷ್ಪ, ಅಷ್ಟಾವಧಾನ ಸೇವೆ, ಕಾಕಡಾರತಿ, ಅಲಂಕಾರ ಪೂಜಾ, ಭೀಮ ಭಿಕ್ಷೆ, ಅವಭೃತ ಸ್ನಾನ, ಬುತ್ತಿ ಪೂಜಾ, ಸತ್ಯ ನಾರಾಯಣ ಪೂಜಾ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಹಾಪ್ರಸಾದ ಜರುಗಲಿದೆ.

ನ. 19ರಂದು ಮುಂಜಾನೆ ಗದಗ ಶ್ರೀಕರಿ ಭಜನಾ ಮಂಡಳಿಯಿಂದ ಭಜನೆ, ಹುಬ್ಬಳ್ಳಿಯ ಅರ್ಪಿತಾ ಜಹಗೀರದಾರ ಅವರಿಂದ ಭಕ್ತಿ ಸಂಗೀತ, ಬೆಂಗಳೂರು ಗೌರಿ ಅರುಣ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ಸಂಜೆ ಶ್ರೀಕಾಂತ ಹೂಲಿ ಅವರಿಂದ ಭಕ್ತಿ ಸಂಗೀತ, ನ. 20ರಂದು ಮುಂಜಾನೆ ಗದಗ ಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ಶಿಕ್ಷಕಿ ಭಾಗ್ಯಶ್ರೀ ಘಳಗಿ ಅವರು ರಚಿಸಿರುವ ಹೆಳವನಕಟ್ಟೆ ಗಿರಿಯಮ್ಮ ನಾಟಕ ಪ್ರದರ್ಶನ ಹಾಗೂ ಕೋಲಾಟ, ಭಜನಾ ಕಾರ್ಯಕ್ರಮಗಳು ಜರುಗುವವು. ನಂತರ ನರೇಗಲ್ಲ ವೆಂಕಟೇಶ ಕುಲಕರ್ಣಿ, ಮಾಲತಿ ಕುಲಕರ್ಣಿ, ಉಮೇಶ ಪಾಟೀಲ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ಯೋಗಿರಾಜ ಭಕ್ತಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ಸಂಗೀತ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರ

0

ವಿಜಯಸಾಕ್ಷಿ ಸುದ್ದಿ, ಗದಗ: ನಾದದಿಂದಲೇ ಈ ಜಗತ್ತು ನಿರ್ಮಾಣಗೊಂಡಿದೆ. ನಮ್ಮ ಉಸಿರಾಟ, ಸುತ್ತಲಿನ ಪರಿಸರದ ಸಂಗತಿಗಳು ಸಂಗೀತದ ಹಿನ್ನೆಲೆಯಲ್ಲಿಯೇ ರೂಪುಗೊಂಡಿವೆ. ಸಂಗೀತ ಲೋಕದ ದಿಗ್ಗಜರಾದ ಡಾ. ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಶಿಷ್ಯ, ಪ್ರಶಿಷ್ಯ ವರ್ಗದ ಮೂಲಕ ಹೊಸ ಸಂಗೀತ ಪರಂಪರೆಗೆ ಮುನ್ನುಡಿಯನ್ನು ಬರೆದು ಸಂಗೀತ ಕ್ಷೇತ್ರದಲ್ಲಿ ಗದುಗಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ರಾಜಗುರು ಪಂ. ಗುರುಸ್ವಾಮಿ ಕಲಕೇರಿ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಗೀತಗಾರ ಡಾ. ಎಸ್.ಎನ್. ಪಾಟೀಲ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಡಾ. ಎಸ್.ಎನ್. ಪಾಟೀಲ ಅವರ ಸಂಸ್ಮರಣೆ ಮಾಡಿದ ಸಿಎನ್‌ಎ ಪಾಟೀಲ ಮಾತನಾಡಿ, ನಾಡಿನ ವಿವಿಧ ಭಾಗಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶಿಷ್ಯವರ್ಗದವರು ವಿದೇಶಗಳಲ್ಲೂ ಹೆಸರು ಮಾಡಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಸಂಗೀತ ಸೇವೆ ಮಾಡಿದ ಎಸ್.ಎನ್. ಪಾಟೀಲ ಅವರು ಸಂಗೀತದ ಏಳ್ಗೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಹೆಸರಿನಲ್ಲಿರುವ ಪ್ರತಿಷ್ಠಾನ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆಯೊಂದನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುತ್ತಿರುವ ಸಾಕ್ಷಿರವಿ ದೇವರಡ್ಡಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ರಾಹುಲ ವಸಂತ ಸಿದ್ಧಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ನೀಲಮ್ಮ ಅಂಗಡಿ ಅವರಿಂದ ಗೀತಗಾಯನ ಜರುಗಿತು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ. ಧನೇಶ ದೇಸಾಯಿ, ಕೆ.ಎಚ್. ಬೇಲೂರ, ಡಾ. ಜಿ.ಬಿ. ಪಾಟೀಲ, ಎಸ್.ಯು. ಸಜ್ಜನಶೆಟ್ಟರ, ರಾಜಶೇಖರ ಕರಡಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ರತ್ನಾ ಪುರಾಂತರ, ಶಶಿಕಾಂತ ಕೊರ್ಲಹಳ್ಳಿ, ಬೂದಪ್ಪ ಅಂಗಡಿ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಎಸ್.ಆರ್. ಚನ್ನಪಗೌಡರ, ರವಿ ದೇವರಡ್ಡಿ, ಉಮಾ ಕಣವಿ, ವಿ.ಎಸ್. ದಿಂಡೂರ, ಸುಶೀಲವ್ವ ಸಾಲಿ, ಕಾಶಮ್ಮ ಕೋಡಮಗ್ಗಿ, ಎಂ.ಬಿ. ಲಿಂಗಧಾಳ, ಈರನಗೌಡ ಮಣಕವಾಡ, ಡಿ.ಜಿ. ಕುಲಕರ್ಣಿ, ರಾ.ಗು. ಕಲಕೇರಿ, ರಾಜಶೇಖರ ದಾನರಡ್ಡಿ, ಚನ್ನವೀರಪ್ಪ ದುಂದೂರ, ಮುತ್ತು ದಿಂಡೂರ, ಡಾ. ಗಂಗೂಬಾಯಿ ಪವಾರ, ಯಾದವ್ವ ಅಂಗಡಿ, ವಸಂತ ಸಿದ್ಧಮ್ಮನಹಳ್ಳಿ, ಗಾಯತ್ರಿ ಸಿದ್ಧಮ್ಮನಹಳ್ಳಿ, ರಾಮಚಂದ್ರ ಮೋನೆ, ಅರುಣರಾಜ ಪುರೋಹಿತ, ಎಂ.ಎಚ್. ಸವದತ್ತಿ, ಕವಿತಾ ದಿಂಡೂರ, ರಾಜೇಶ್ವರಿ ಹೊಳಗುಂದಿ, ಬಿ.ಕೆ. ನಿಂಬನಗೌಡರ, ರವೀಂದ್ರ ಜೋಶಿ, ಷಡಕ್ಷರಿ ಮೆಣಸಿನಕಾಯಿ, ಆನಂದ ಹಡಪದ, ದಾಕ್ಷಾಯಿಣಿ ಗುಗ್ಗರಿ ಮೊದಲಾದವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಪಂ. ಭೀಮಸೇನ ಜೋಶಿ ಅವರ ಕೊಡುಗೆ ಅಪಾರವಾದುದು. ವೀರೇಶ್ವರ ಪುಣ್ಯಾಶ್ರಮದಲ್ಲಿ ಅರಳಿದ ಪಂ. ವೆಂಕಟೇಶಕುಮಾರ ಅವರು ಗದುಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಾಡಿನ ಮೂಲೆ ಮೂಲೆಯಲ್ಲಿರುವ ಸಂಗೀತಗಾರರಿಗೆ ಗದಗ ಮೂಲ ನೆಲೆ ಹಾಗೂ ಶ್ರೇಯಸ್ಸಾಗಿದೆ ಎಂದು ತಿಳಿಸಿದರು.

 

ನ.20ರಂದು ಶ್ರೀ ಗುರು ಗಡ್ಡದೇವರಮಠದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಗುರು ಗಡ್ಡದೇವರಮಠದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಕಾರ್ತಿಕೋತ್ಸವ ಕಾರ್ಯಕ್ರಮ ನ.20ರಂದು ಸಂಜೆ 6.30ಕ್ಕೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಶ್ರೀಮಠದ ವಂಶಸ್ಥರು ಹಾಗೂ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ತಿಳಿಸಿದರು.

ಅವರು ಈ ಕುರಿತು ಮಂಗಳವಾರ ಗುರುಗಡ್ಡದೇವರ ಮಠದ ಆವರಣದಲ್ಲಿ ಮಾಹಿತಿ ನೀಡಿ, ಶ್ರೀಮಠವು ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿದ್ದು, ಈ ಭಾಗದ ಜನರ ಶ್ರದ್ಧಾ-ಭಕ್ತಿ ಕೇಂದ್ರವಾಗಿದೆ. ಇದು ಜಾಗೃತ ಮಠವಾಗಿದ್ದು, ಶ್ರೀಮಠದ ಭಕ್ತರು ತಾಲೂಕಿನ ಗೋವನಾಳ, ಗುಲಗಂಜಿಕೊಪ್ಪ, ಹರ್ಲಾಪೂರ ಮುಂತಾದ ಕಡೆ ಇದ್ದಾರೆ. ಗುರುಗಡ್ಡದೇವರಮಠ ಶ್ರೀಗಳು ಇಲ್ಲಿಯೇ ನೆಲೆನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಸಂಪ್ರದಾಯದಂತೆ ಗುರುವಾರ ಶ್ರೀಮಠದಲ್ಲಿ ಸಹಸ್ರ ದೀಪಗಳೊಂದಿಗೆ ಕಾರ್ತಿಕೋತ್ಸವವನ್ನು ವೈಭವದಿಂದ ಆಚರಿಸುವುದಾಗಿ ಹೇಳಿದರು.

ಕಾರ್ತಿಕೋತ್ಸವದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯವನ್ನು ವಹಿಸಲಿದ್ದು, ಲಕ್ಷ್ಮೇಶ್ವರದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಈ ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರುಗಳಾದ ಗಂಗಣ್ಣ ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಈಶ್ವರ, ಸುಜಾತಾ ದೊಡ್ಡಮನಿ, ಪುರಸಭೆ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಆಗಮಿಸುವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸವರಾಜ ಬೆಂಡಿಗೇರಿ, ಚಂಬಣ್ಣ ಬಾಳಿಕಾಯಿ, ಈರಣ್ಣ ಅಂಕಲಕೋಟಿ, ಸುಭಾಸ ಓದುನವರ, ಕಿರಣ ನವಲೆ, ಶಿವಯೋಗಿ ಗಡ್ಡದೇವರಮಠ, ಎಂ.ಕೆ. ಕಳ್ಳಿಮಠ, ಮಲ್ಲಯ್ಯ ಭಕ್ತಿಮಠ, ವೆಂಕಟೇಶ ಮಾತಾಡೆ, ಪ್ರಕಾಶ ಕೊಂಚಿಗೇರಿಮಠ, ಮಲ್ಲನಗೌಡ ಪಾಟೀಲ, ಕೊಟ್ರಪ್ಪ ಮುಳಗುಂದ, ಆನಂದ ಲಿಂಗಶೆಟ್ಟಿ, ಶಿವಾನಂದ ಲಿಂಗಶೆಟ್ಟಿ, ಶಿವಯೋಗಿ ಗಡ್ಡದೇವರಮಠ, ಗುರುರಾಜ ಕೂಸನೂರಮಠ, ಪಂಚಯ್ಯ ಕೂಸನೂರಮಠ ಮುಂತಾದವರು ಹಾಜರಿದ್ದರು.

ಕಾರ್ತಿಕ ದೀಪೋತ್ಸವದ ನಂತರ ಚನ್ನಮ್ಮನವನ ಕಲ್ಯಾಣ ಮಂಟಪದಲ್ಲಿ ಸಭೆ ಜರುಗಲಿದ್ದು, ಶ್ರೀಗಳು, ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ಬಾರಿ ವಿಶಿಷ್ಟವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಬೆಳಗಾವಿಯ ಬೀಟ್ಸ್ ಮೇಕರ್ಸ್ ಇವರಿಂದ ಸಂಗೀತ ನೃತ್ಯ ವೈಭವ ಹಾಗೂ ಹರ್ಲಾಪುರ ಸಾಂಬಯ್ಯ ಹಿರೇಮಠ ಅವರ ತಂಡದಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಾರ್ಯಕ್ರಮ ನಡೆಯಲಿದ್ದು ಶ್ರೀ ಗಡ್ಡಯ್ಯಸ್ವಾಮಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಜಿ.ಎಸ್. ಗಡ್ಡದೇವರಮಠ ತಿಳಿಸಿದರು.

 

ನಶೆ ಮನುಷ್ಯನ ಬದುಕನ್ನೇ ಬಲಿ ಪಡೆಯುತ್ತದೆ: ಡಾ. ದುರಗೇಶ್ ಕೆ.ಆರ್

0

ವಿಜಯಸಾಕ್ಷಿ ಸುದ್ದಿ, ಗದಗ: ನಶಾ ಮುಕ್ತ ಭಾರತ ಅಭಿಯಾನ ಯೋಜನೆಯ 5ನೇ ವಾರ್ಷಿಕೋತ್ಸವ ಆಚರಣೆ ನಿಮಿತ್ತ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಜರುಗಿತು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ಯುವಕರು ಪ್ರತಿ ರಾಷ್ಟ್ರದ ಶಕ್ತಿ ಮತ್ತು ಯುವ ಶಕ್ತಿಯು ಸಮಾಜ, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶವನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎನ್ನುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ನಶೆ ಮನುಷ್ಯನ ಬದುಕನ್ನೇ ಬಲಿ ತೆಗೆದುಕೊಳ್ಳುವ ಮಹಾ ವ್ಯಸನ. ಯುವ ಪೀಳಿಗೆಯನ್ನು ರಕ್ಷಿಸಲು ನಶಾಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಸಮೂಹ ಹೊಣೆಗಾರಿಕೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ ನಶಾಮುಕ್ತ ಭಾರತ ಅಭಿಯಾನ ಏರ್ಪಡಿಸಿ ಅಲ್ಲಿ ‘ಮಾದಕ ದ್ರವ್ಯ ಸೇವನೆಗೆ ಬೇಡ ಹೇಳೋಣ, ಸ್ವಸ್ಥ ಜೀವನ–ನಶಾಮುಕ್ತ ಸಮಾಜ, ಡ್ರಗ್ಸ್‌ಗೆ ದೂರ, ಆರೋಗ್ಯಯುತ ಜೀವನ ನಮ್ಮದಾಗಿಸೋಣ’ ಮೊದಲಾದ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಸಶಸ್ತ್ರ ಮೀಸಲು ಪಡೆ ಡಿವೈಎಸ್‌ಪಿ ವಿದ್ಯಾನಂದ ನಾಯಕ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ ಬಿದರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾಂತೇಶ್ ಕೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಬೂಬ ತುಂಬರಮಟ್ಟಿ, ಆರೋಗ್ಯ ಇಲಾಖೆಯ ರೂಪಸೇನ ಚವ್ಹಾಣ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರತಿನಿಧಿಗಳು ಹಾಜರಿದ್ದರು.

ಶಾಲಾ-ಕಾಲೇಜುಗಳಲ್ಲಿ ನಶಾ ವಿರೋಧಿ ಶಪಥ ಕಾರ್ಯಕ್ರಮ, ಬೃಹತ್ ಜಾಗೃತಿ ಪೋಸ್ಟರ್ ಹಾಗೂ ರಂಗಭೂಮಿ ಪ್ರದರ್ಶನಗಳ ಮೂಲಕ ಯುವಕರನ್ನು ನಶೆಯ ದಾರಿಯಿಂದ ತಿರುಗಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕರೆ ನೀಡಿದರು.

error: Content is protected !!