ವಿಜಯಸಾಕ್ಷಿ ಸುದ್ದಿ, ಕಲಘಟಗಿ: ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಶ್ರಮಿಸುವ ಅವಶ್ಯಕತೆಯಿದೆ. ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ. ಅರಿವನ್ನು ಜಾಗೃತಗೊಳಿಸಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪುನರುತ್ಥಾನಗೊಳಿಸುವುದೇ ನಿಜವಾದ ಗುರುವಿನ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ದಾಸ್ತಿಕೊಪ್ಪ ಹನ್ನೆರಡು ಮಠದ ಶಿವಾಚಾರ್ಯ ರತ್ನ ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳವರ 35ನೇ ವರ್ಷದ ಪುಣ್ಯಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನದಿಯ ನೀರನ್ನು ಎಷ್ಟು ತುಂಬಿದರೂ ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ 그것ನ್ನು ಖಾಲಿಯಾಗುವುದಿಲ್ಲ. ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ ಸಂಸ್ಕಾರ ದೇವ ಮಾನವರನ್ನು ಸೃಷ್ಟಿಸುತ್ತದೆ. ಜನಮನದಲ್ಲಿ ಮನೆ ಮಾಡಿರುವ ಬಿಕ್ಕಟ್ಟು ಹೋಗಿ ಒಗ್ಗಟ್ಟು ಮೂಡಬೇಕಾಗಿದೆ. ಹಣತೆ ತನಗಾಗಿ ಉರಿಯುವುದಿಲ್ಲ. ಪರಿಸರವನ್ನು ಬೆಳಗಲು ತನ್ನನ್ನು ತಾನು ಸುಟ್ಟುಕೊಂಡು ಉರಿಯುತ್ತದೆ. ಮಹಾತ್ಮರು ಸಮಾಜದ ಓರೆ-ಕೋರೆಗಳನ್ನು ತಿದ್ದಿ ತೀಡಿ ಸನ್ಮಾರ್ಗದಲ್ಲಿ ಕರೆದೊಯ್ಯುವ ಮಹಾನ್ ಶಕ್ತಿಯನ್ನು ಹೊಂದಿದ್ದಾರೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಜೀವನದ ವಿಕಾಸಕ್ಕೆ ಅಮೂಲ್ಯವಾದ ಆಧ್ಯಾತ್ಮದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ. ಹನ್ನೆರಡು ಮಠದ ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಆಚಾರ ವಿಚಾರ ಸಂಪನ್ನರಾಗಿ ಶಿವಾದ್ವೈತ ತತ್ವ ಸಿದ್ಧಾಂತದ ಪ್ರತಿಪಾದಕರಾಗಿ ಗುರುಸ್ಥಲದ ಕೀರ್ತಿ ಕಳಸವನ್ನು ಎತ್ತಿ ಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನೇತೃತ್ವ ವಹಿಸಿದ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಣ ಕಳೆದುಕೊಂಡು ಮನುಷ್ಯ ಬದುಕಬಹುದು. ಆದರೆ ಗುಣ ಕಳೆದುಕೊಂಡು ಬದುಕುವುದು ಕಷ್ಟ. ಶೀಲ, ಶೌರ್ಯ, ಚಟುವಟಿಕೆ, ಪಾಂಡಿತ್ಯ ಮತ್ತು ಮಿತ್ರ ಸಂಗ್ರಹ ಕಳ್ಳರು ಕದಿಯಲಾರದ ಅಕ್ಷಯ ನಿಧಿಗಳು. ಲಿಂ. ಮಡಿವಾಳ ಶಿವಾಚಾರ್ಯರು ತಪಸ್ವಿಗಳಾಗಿ ಧರ್ಮ ತತ್ವದ ಪರಿಪಾಲಕರಾಗಿ ಭಕ್ತರ ಬಾಳಿಗೆ ಬೆಳಕು ತೋರಿದರು ಎಂದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹನುಮಾಪುರ ಕಾಳಿಕಾ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯರು, ರಾಯನಾಳ ರೇವಣಸಿದ್ಧೇಶ್ವರ ಸ್ವಾಮಿಗಳು, ಬೆಲವಂತರ ಹಿರೇಮಠದ ರೇವಣಸಿದ್ಧ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಹನ್ನೆರಡು ಮಠದ ನೂತನ ಪಟ್ಟಾಧ್ಯಕ್ಷರಾದ ಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ವೀರಯ್ಯ ನಾಗಲೋಟಿಮಠ ನಿರೂಪಿಸಿದರು. ಮಲ್ಲಯ್ಯಸ್ವಾಮಿ ತೋಟಗಂಟಿ ಮತ್ತು ಸಹ ಕಲಾವಿದರಿಂದ ಸಂಗೀತ ಸೌರಭ ಜರುಗಿತು. ಸಮಾರಂಭಕ್ಕೂ ಮುನ್ನ ಕಲಘಟಗಿ ನಗರದಲ್ಲಿ ಲಿಂ. ಮಡಿವಾಳ ಶಿವಾಚಾರ್ಯರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ಸಮಾರಂಭ ಉದ್ಘಾಟಿಸಿದ್ದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪರಿಪೂರ್ಣನಾದ ಜ್ಞಾನಿ ಯಾವಾಗಲೂ ತುಂಬಿದ ಕೊಡದಂತೆ. ಬೆಳೆದ ಮರ, ಹರಿಯುವ ನೀರು, ಬೀಸುವ ಗಾಳಿ ಮತ್ತು ನಿಂತ ನೆಲ ತ್ಯಾಗದ ಹಿರಿಮೆಯನ್ನು ಮತ್ತು ಪರೋಪಕಾರವನ್ನು ಎತ್ತಿ ತೋರಿಸುತ್ತವೆ. ಅದೇ ರೀತಿ ಮಡಿವಾಳ ಶಿವಾಚಾರ್ಯರು ಧರ್ಮಮುಖಿಯಾಗಿ, ಸಮಾಜಮುಖಿಯಾಗಿ ಬಾಳಿ ಭಕ್ತ ಸಂಕುಲಕ್ಕೆ ಧರ್ಮದ ಬೆಳಕು ತೋರಿ ಮುನ್ನಡೆಸಿದ ಕೀರ್ತಿವಂತರು ಎಂದರು.

