Home Blog Page 196

ರಸ್ತೆಯಲ್ಲೇ ಯುವತಿಯನ್ನು ತಬ್ಬಿ ಅತ್ಯಾಚಾರಕ್ಕೆ ಯತ್ನ; ಡೆಲಿವರಿ ಬಾಯ್‌ನಿಂದ ಲೈಂಗಿಕ ಕಿರುಕುಳ

0

ಬೆಂಗಳೂರು:- ನಗರದ ಕೊತ್ತನೂರಿನ ವಿಧಾನಸೌಧ ಲೇಔಟ್‌ನಲ್ಲಿ ಡೆಲಿವರಿ ಬಾಯ್ ಓರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ತಬ್ಬಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಮನೆಯ ಮುಂದೆ ಬಿದ್ದಿದ್ದ ಬಾಕ್ಸ್ ಅನ್ನು ಯುವತಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ, ಆರೋಪಿಯು ರಸ್ತೆಯಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿ ಯುವತಿಯನ್ನು ಕರೆಯುತ್ತಿದ್ದಾನೆ. ಬಳಿಕ ಯುವತಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ತಬ್ಬಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಯುವತಿಯ ಕೆನ್ನೆಗೆ ಹೊಡೆದಿದ್ದಾನೆ.

ಯುವತಿ ಕಿರುಚಾಡುತ್ತಿದ್ದಂತೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಕೊತ್ತನೂರು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ

ಕೊಪ್ಪಳ| ಶಾಲೆಗಳ ಬಿಸಿಯೂಟದಲ್ಲಿ ಹುಳ ಪತ್ತೆ ಪ್ರಕರಣ; ಮೂವರು ಅಧಿಕಾರಿಗಳು ಅಮಾನತು

0

ಕೊಪ್ಪಳ:- ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿ ಅಕ್ಷರ ದಾಸೋಹ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಕುರಿತು ಆದೇಶ ಹೊರಡಿಸಿದ್ದು, ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಅನಿತಾ ಹಾಗೂ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಡಿ ಮತ್ತು ಮಹಾಂತಯ್ಯ ಸೊಪ್ಪಿಮಠ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಕೊಪ್ಪಳ ತಾಲೂಕಿನ ನೃಪತುಂಗ ಶಾಲೆ, ನಿಂಗಾಪೂರ ಶಾಲೆ ಹಾಗೂ ಕುಷ್ಟಗಿ ತಾಲೂಕಿನ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಬಿಸಿಯೂಟದಲ್ಲಿ ಹುಳಗಳು ಕಂಡುಬಂದಿದ್ದು, ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಬೆನ್ನಲ್ಲೇ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ತನಿಖಾ ವರದಿ ಪಡೆದುಕೊಂಡು, ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಈ ಅಮಾನತು ಕ್ರಮ ಜರುಗಿಸಲಾಗಿದೆ.

ಸರ್ಕಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಬೇಕು: ಬೊಮ್ಮಾಯಿ

0

ಬೆಂಗಳೂರು: ಹುಬ್ಬಳ್ಳಿಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರ ಗೊಲಿಸಿರುವ ಪ್ರಕರಣ ಅತ್ಯಂತ ಕ್ರೂರ ಅಮಾನುಷವಾದ ಘಟನೆ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಲಂಗು ಲಗಾಮು ಇಲ್ಲದೆ ಪೊಲಿಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ ಧಾರವಾಡ ಪೊಲಿಸ್ ಕಮಿಷನರ ಅವರನ್ನು ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರ ಗೊಲಿಸಿರುವ ಪ್ರಕರಣ ಅತ್ಯಂತ ಕ್ರೂರ ಅಮಾನುಷವಾದ ಘಟನೆ ಅದು ಪೊಲಿಸ್ ಇಲಾಖೆಯಿಂದ ನಡೆದಿರುವುದು ಈ ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಗೃಹ ಇಲಾಖೆ ಹದಗೆಟ್ಟಿದೆ ಯಾರು ರಕ್ಷಕರಿದ್ದಾರೆ ಅವರು ಭಕ್ಷಕರಾಗಿದ್ದಾರೆ.

ಬೆಲಿ ಎದ್ದು ಹೊಲ ಮೇಯ್ದಿದೆ ಒಬ್ಬ ಮಹಿಳೆಗೆ ರಕ್ಷಣೆ ಬದಲಿಗೆ ವಿವಸ್ತ್ರ ಗೊಳಿಸುವ ಕೆಲಸ ಮಾಡಿದ್ದವರು ಸಮಾಜದಲ್ಲಿ ತಲೆ ಎತ್ತಲು ನಾಲಾಯಕ್ ಇದ್ದಾರೆ‌. ಘಟನೆ ಹೊರ ಬಂದ ನಂತರ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿದರು. ಕಾಂಗ್ರೆಸ್ ಕಾರ್ಪೊರೇಟ್ ರ ದೂರಿನ ಹಿನ್ನಲೆಯಲ್ಲಿ ಆರೆಸ್ಟ್ ಮಾಡಿದ್ದಾರೆ‌. ಏನಾದರೂ ಸಮಸ್ಯೆಯಾಗಿದ್ದತೆ ಬಿಎಲ್ ಒ ಕಂಪ್ಲೆಂಟ್ ಮಾಡಬೆಕಿತ್ತು. ಕಾಂಗ್ರೆಸ್ ಪಕ್ಷದ ಅಣತಿಯಂತೆ ಕಾನೂನು ಬಾಹಿರ ಬಂಧನ ನಡೆದಿದೆ.

ಕಮಿಷನರ್ ಮುಚ್ಚಿ ಹಾಕಲು ಪ್ರಯತ್ಮಸಿರುವುದು ಕ್ರಿಮಿನಲ್ ಅಪರಾಧ, ಕಮಿಷನರ್ ತನ್ನನ್ನು ತಾನು ಬಹಳ ಬುದ್ದಿವಂತ ಅಂದುಕೊಂಡಿದ್ದಾನೆ. ತಾವು ಏನು ಬೇಕಾದರು ಮಾಡಿದರೂ ನಡೆಯುತ್ತೆ ಅಂತ ಅಂದುಕೊಂಡಿದ್ದಾರೆ‌. ಇವರಿಗೆ ಯಾರ ಬೆಂಬಲ ಇದೆ. ಈ ಪ್ರಕರಣದಲ್ಲಿ ಇನ್ಸಪೆಕ್ಟರ ವರ್ಗಾವಣೆ ಆಗಿದೆ. ಆದರೆ, ನೆರವಾಗಿ ಭಾಗಿಯಾಗಿರುವ ಕಾನ್ಸ್ ಟೇಬಲ್ ಮೇಲೆ ಯಾವುದೇ ಕ್ರಮ ಇಲ್ಲ‌. ಒಂದೆಡೆ ಆಗಿರುವ ಘಟನೆ ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಳ್ಳಾರಿಯಲ್ಲಿ ಘಟನೆ ನಡೆದ ತಕ್ಷಣ ಎಸ್ಪಿ ಅಮಾನತು ಮಾಡಿದ್ದಾರೆ. ಆದರೆ, ಹುಬ್ಬಳ್ಳಿ ಪ್ರಕರಣದಲ್ಲಿ ಸರ್ಕಾರ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿದಿನ ಒಂದೊಂದು ಪ್ರಕರಣ ನಡೆಯುತ್ತಿದೆ.

ಲಂಗು ಲಗಾಮು ಇಲ್ಲದೆ ಪೊಲಿಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ ಧಾರವಾಡ ಪೊಲಿಸ್ ಕಮಿಷನರ ಅವರನ್ನು ವರ್ಗಾವಣೆ ಮಾಡಬೇಕು. ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ದುಡ್ಡು ಕೊಟ್ಟವರ ರಕ್ಷಣೆ ಮಾಡುತ್ತಾರೆ. ಈ ಸರ್ಕಾರದಲ್ಲಿ ದ್ವಿಮುಖ ನೀತಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಅಣತಿಯಂತೆ ಪೊಲಿಸರು ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಕೈಮುಗಿದು ಕೇಳಿಕೊಂಡೆ… ಆದರೆ ನನ್ನನ್ನು ಬಿಡಲಿಲ್ಲ: ಸುಜಾತಾ ಹಂಡಿಯಿಂದ ಹಲ್ಲೆಗೊಳಗಾದ ತುಕಾರಾಂ ಕಣ್ಣೀರು

ಹುಬ್ಬಳ್ಳಿ: “ನಾನು ಕೈಮುಗಿದು ಕೇಳಿಕೊಂಡೆ… ಆದರೆ ನನ್ನನ್ನು ಬಿಡಲಿಲ್ಲ” — ಇದು ಸುಜಾತಾ ಹಂಡಿ ಪ್ರಕರಣದಲ್ಲಿ ಹಲ್ಲೆ ಮತ್ತು ಅಪಹರಣಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸುವ ಕೃಷಿಕ ಹಾಗೂ ಕನ್ನಡ ಪರ ಹೋರಾಟಗಾರ ತುಕಾರಾಂನ ಮಾಧ್ಯಮಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

2023ರಲ್ಲಿ ಫೋನ್ ಮೂಲಕ ಪರಿಚಯವಾದ ಮಹಿಳೆ, ಮಗುವಿನ ಹೃದಯ ಚಿಕಿತ್ಸೆಗೆ 50 ಸಾವಿರ ರೂ. ಬೇಕೆಂದು ಕೇಳಿದ್ದಾಳೆ. ಸಹಾಯ ಮಾಡುವ ಉದ್ದೇಶದಿಂದ ಎಸ್‌ಡಿಎಂ ಆಸ್ಪತ್ರೆಗೆ ಹೋದಾಗ, ಪಕ್ಕದ ಪೆಟ್ರೋಲ್ ಬಂಕ್‌ಗೆ ಬರಲು ಹೇಳಿ ಅಲ್ಲಿ ಮೂವರು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಉಣಕಲ್ ಕಡೆ ಕರೆದೊಯ್ದರು ಎಂದು ತುಕಾರಾಂ ವಿವರಿಸಿದರು.

ಅಲ್ಲಿ 2 ಲಕ್ಷ ರೂ. ಹಣ ಮತ್ತು ಒಡವೆ ಕಸಿದುಕೊಂಡು, ಹಳಿಯಾಳ ಬಳಿಯ ಮನೆಯಲ್ಲಿ ಕೂಡಿ ಹಾಕಿ ದಿನಗಳ ಕಾಲ ಚಿತ್ರಹಿಂಸೆ ನೀಡಿದರು. ಕುಡಿದು ಬಂದು ಹಣ ನೀಡುವಂತೆ ಒತ್ತಡ ಹೇರಿದರು. ಸುಜಾತಾ ಹಂಡಿ ಬಂದು ಧಮಕಿ ಹಾಕಿದ್ದು, ಮಹೇಶ್ ಟೆಂಗಿನಕಾಯಿ ನನ್ನ ಬೆನ್ನಿಗಿದ್ದಾರೆ ಎಂದು ಬೆದರಿಸಿದರು ಎಂದು ಆರೋಪಿಸಿದರು.

ಯಲ್ಲಾಪುರದ ಕಾಡು, ದಾಂಡೇಲಿ, ಬ್ಯಾಹಟ್ಟಿ, ಅಣ್ಣಿಗೇರಿ ಸೇರಿದಂತೆ ಹಲವು ಕಡೆಗಳಿಗೆ ಕರೆದೊಯ್ದು ಹಣಕ್ಕಾಗಿ ಹಿಂಸಿಸಿದರು. ನನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡು ಸಂಬಂಧಿಕರಿಂದ 1.50 ಲಕ್ಷ ರೂ. ಪಡೆದುಕೊಂಡರು. ಒಟ್ಟಾರೆ 6 ಲಕ್ಷ ರೂ. ಕಸಿದುಕೊಂಡ ಬಳಿಕ ನನ್ನನ್ನು ಬಿಟ್ಟುಬಿಟ್ಟರು ಎಂದು ತುಕಾರಾಂ ಹೇಳಿದರು.

ಈ ಘಟನೆ ನನ್ನನ್ನು ಆತ್ಮಹತ್ಯೆ ಯೋಚನೆಗೂ ತಳ್ಳಿತ್ತು. ಆದರೆ ಹಲವರು ನನಗೆ ಧೈರ್ಯ ತುಂಬಿದರು. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ಒದಗಿಸಬೇಕು ಎಂದು ತುಕಾರಾಂ ಕಣ್ಣೀರಿಟ್ಟರು.

ದಳಪತಿ ವಿಜಯ್‌ಗೆ ಮತ್ತೆ ಶಾಕ್‌: ಜ.21 ರವರೆಗೆ ‘ಜನನಾಯಗನ್’ ರಿಲೀಸ್‌ ಮಾಡುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌ ಆದೇಶ

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನನಾಯಗನ್’ ಸಿನಿಮಾದ ಬಿಡುಗಡೆ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಮದ್ರಾಸ್ ಹೈಕೋರ್ಟ್ ಜನವರಿ 21ರವರೆಗೆ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಿದೆ.

ಈ ಹಿಂದೆ ‘ಜನನಾಯಗನ್’ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವಂತೆ ಹೈಕೋರ್ಟ್ ಸಿಬಿಎಫ್‌ಸಿಗೆ ಸೂಚನೆ ನೀಡಿತ್ತು. ಆದರೆ ಆ ಆದೇಶದ ವಿರುದ್ಧ ಸಿಬಿಎಫ್‌ಸಿ ಮೇಲ್ಮನವಿ ಸಲ್ಲಿಸಿ, ಚಿತ್ರದ ಕೆಲವು ದೃಶ್ಯಗಳು ಮತ್ತು ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಲಾಂಛನಗಳ ಕುರಿತು ತಜ್ಞರ ಪರಿಶೀಲನೆ ಅಗತ್ಯವಿದೆ ಎಂದು ವಾದ ಮಂಡಿಸಿತು.

ಈ ಹಿನ್ನೆಲೆಯಲ್ಲಿ ನಡೆದ ಹೊಸ ವಿಚಾರಣೆಯ ನಂತರ, ಹೈಕೋರ್ಟ್ ಜ.21ರವರೆಗೆ ಸಿನಿಮಾ ಬಿಡುಗಡೆಗೆ ತಡೆ ವಿಧಿಸಿದೆ. ಅಗತ್ಯ ಬದಲಾವಣೆಗಳನ್ನು ಮಾಡಿದ ಬಳಿಕವೇ ಪ್ರಮಾಣಪತ್ರ ನೀಡಬೇಕು ಎಂಬುದಾಗಿ ಸಿಬಿಎಫ್‌ಸಿಗೆ ಸೂಚನೆ ನೀಡಲಾಗಿದೆ.

ಈಗಾಗಲೇ ಜನವರಿ 7ರಂದು ನಿರ್ಮಾಣ ಸಂಸ್ಥೆ ಸಿನಿಮಾ ಬಿಡುಗಡೆ ಮುಂದೂಡಿರುವುದಾಗಿ ಘೋಷಿಸಿತ್ತು. ಜನವರಿ 9ರಂದು ವಿಶ್ವದಾದ್ಯಂತ ರಿಲೀಸ್ ಆಗಬೇಕಿದ್ದ ‘ಜನನಾಯಗನ್’, ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ ಎಂದು ತಿಳಿಸಲಾಗಿತ್ತು. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ತಂಡ ಹೇಳಿದೆ.

ಪೊಂಗಲ್ ಹಬ್ಬದ ಸಂಭ್ರಮದ ನಡುವೆ ವಿಜಯ್ ಅಭಿಮಾನಿಗಳಿಗೆ ಈ ಬೆಳವಣಿಗೆ ಭಾರೀ ನಿರಾಸೆ ಮೂಡಿಸಿದ್ದು, ಮುಂದಿನ ತೀರ್ಪಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಪರಿಹಾರ ವಿಳಂಬ: ಹಾಸನ ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯ ಆದೇಶ

0

ಹಾಸನ: ಭೂಸ್ವಾಧೀನ ಮಾಡಿಕೊಂಡು ವರ್ಷಗಳಾದರೂ ಪರಿಹಾರ ನೀಡದ ಹಿನ್ನೆಲೆ ಹಾಸನ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿರುವ ಘಟನೆ ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಕೋರ್ಟ್ ಆದೇಶದಂತೆ ರೈತರು ವಕೀಲರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಕಾರನ್ನು ಜಪ್ತಿ ಮಾಡಿದ್ದಾರೆ.

ಯಗಚಿ ನಾಲೆ ನಿರ್ಮಾಣಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಆಲೂರು ತಾಲೂಕಿನ ಭಕ್ತರವಳ್ಳಿ ಗ್ರಾಮದ ರೈತ ಮರಿಗೌಡ ಅವರಿಗೆ ಸೇರಿದ ಸರ್ವೆ ನಂ. 44/1 ರಲ್ಲಿನ 10.5 ಗುಂಟೆ ಜಮೀನನ್ನು ನೀರಾವರಿ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿಗೆ ಸರ್ಕಾರದಿಂದ 11,22,559 ರೂ. ಪರಿಹಾರ ನೀಡಬೇಕಾಗಿದ್ದರೂ, ದೀರ್ಘಕಾಲ ಕಳೆದರೂ ಹಣ ಪಾವತಿಯಾಗಿರಲಿಲ್ಲ. ಇದರಿಂದ ಬೇಸತ್ತ ರೈತ ಮರಿಗೌಡ ಹಾಗೂ ಅವರ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡುವಂತೆ ಆದೇಶ ನೀಡಿದ ಹಿನ್ನೆಲೆ, ಮಧ್ಯಾಹ್ನ ವಕೀಲ ಮಂಜುನಾಥ್ ಅವರೊಂದಿಗೆ ಆಗಮಿಸಿದ ರೈತರು ಡಿಸಿ ಕಾರನ್ನು ಜಪ್ತಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ನಿರತರಾಗಿದ್ದರು.

ಅವರ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಬಿ.ಎ. ಸ್ಥಳಕ್ಕೆ ಆಗಮಿಸಿ, ಸಂಜೆಯೊಳಗೆ ಪರಿಹಾರ ನೀಡಲಾಗುವುದು, ಸ್ವಲ್ಪ ಸಮಯ ನೀಡಿ ಎಂದು ಮನವಿ ಮಾಡಿದರು. ಆದರೆ, ವಕೀಲರು ಮತ್ತು ರೈತರು ಈ ಮನವಿಗೆ ಒಪ್ಪದೆ, ಜಪ್ತಿ ಮಾಡಲಾದ ಕಾರನ್ನು ಎಳೆದೊಯ್ಯಲು ವಾಹನ ತರಿಸಿದರು.

ಆದರೆ ಇನ್ನೋವಾ ಕಾರನ್ನು ಎಳೆದರೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಚಾಲಕ ವಾಹನವನ್ನು ವಾಪಸ್ ತೆಗೆದುಕೊಂಡು ಹೋದನು. ಸದ್ಯ ರೈತರು ಜಪ್ತಿ ಮಾಡಿದ ಜಿಲ್ಲಾಧಿಕಾರಿಗಳ ಕಾರಿನ ಬಳಿಯೇ ಕುಳಿತುಕೊಂಡಿದ್ದು, ಪರಿಹಾರ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

ಕಾಲೇಜಿನಲ್ಲಿ ಅವಮಾನ, ಕಿರುಕುಳ ಆರೋಪ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ!

0

ಆನೇಕಲ್: ಕಣ್ಣು ನೋವಿನ ಕಾರಣ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಉಪನ್ಯಾಸಕರು ತರಗತಿಯಲ್ಲಿ ಅವಮಾನಿಸಿ ಕಿರುಕುಳ ನೀಡಿದ್ದಾರೆ ಎಂದು ಡೆಂಟಲ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ಮೃತಳನ್ನು ಪರಿಮಳ–ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ (23) ಎಂದು ಗುರುತಿಸಲಾಗಿದೆ. ಯಶಸ್ವಿನಿ ಬೊಮ್ಮನಹಳ್ಳಿ ಖಾಸಗಿ ಕಾಲೇಜಿನಲ್ಲಿ Oral Medicine and Radiology ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದು ಬಂದಿದೆ.

ಬುಧವಾರ (ಜ.7) ಕಣ್ಣು ನೋವಿನಿಂದಾಗಿ ಯಶಸ್ವಿನಿ ಕಾಲೇಜಿಗೆ ರಜೆ ಪಡೆದಿದ್ದರು. ಮಾರನೇ ದಿನ ಕಾಲೇಜಿಗೆ ಹಾಜರಾದಾಗ, “ಯಾವ ಕಣ್ಣಿನ ಡ್ರಾಪ್ಸ್ ಬಳಸಿದ್ದೀಯಾ? ಎಷ್ಟು ಹನಿ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡಿದ್ದೀಯಾ?” ಎಂದು ಉಪನ್ಯಾಸಕರು ಸಹಪಾಠಿಗಳ ಮುಂದೆ ಅವಮಾನಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಆಕೆಗೆ ಸೆಮಿನಾರ್‌ಗೆ ಅವಕಾಶ ನೀಡದೇ, ರೆಡಿಯಾಲಜಿ ಕೇಸ್ ನೀಡದೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಮೃತ ವಿದ್ಯಾರ್ಥಿನಿಯ ತಾಯಿ ಮಾತನಾಡಿ, “ನನ್ನ ಮಗಳಿಗೆ ಕಣ್ಣಿಗೆ ಗಾಯವಾಗಿದ್ದರಿಂದ ನನಗೆ ತಿಳಿಸಿ ರಜೆ ತೆಗೆದುಕೊಂಡಿದ್ದಳು. ಆದರೂ ಉಪನ್ಯಾಸಕರು ವಿದ್ಯಾರ್ಥಿಗಳ ಮುಂದೆ ಅವಮಾನಿಸಿದ್ದಾರೆ. ಉಪನ್ಯಾಸಕರಷ್ಟೇ ಅಲ್ಲ, ಕಾಲೇಜು ಆಡಳಿತ ಮಂಡಳಿಯಿಂದಲೂ ಕಿರುಕುಳ ನೀಡಲಾಗಿದೆ. ಇದನ್ನೆಲ್ಲ ಸಹಿಸಿಕೊಳ್ಳಲಾಗದೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಆರೋಪಿಸಿದರು.

ಘಟನೆಗೆ ಕಾರಣರಾದ ಪ್ರಾಂಶುಪಾಲರು ಹಾಗೂ ಅವಮಾನ ಮಾಡಿದ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಯಶಸ್ವಿನಿಯ ಸಹಪಾಠಿಗಳು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.ಘಟನೆ ಸಂಬಂಧ ಚಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

umakuru-Bengaluru Metro: ಬೆಂಗಳೂರು-ತುಮಕೂರು ಮೆಟ್ರೋ ಕಾಮಗಾರಿ ಆರಂಭದ ಬಗ್ಗೆ ಬಿಗ್ ಅಪ್ಡೇಟ್!

0

ಬೆಂಗಳೂರು: ಬಹುಕಾಲದ ಬೇಡಿಕೆಯಾಗಿದ್ದ ಬೆಂಗಳೂರು–ತುಮಕೂರು ಮೆಟ್ರೋ ಯೋಜನೆಗೆ ಅಧಿಕೃತವಾಗಿ ಘೋಷಣೆ ದೊರೆತಿದ್ದು, ಇದೀಗ ಅಡಿಪಾಯ ಹಂತಕ್ಕೆ ಸಿದ್ಧತೆ ಆರಂಭವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ (BMRCL) ಮಹತ್ವಾಕಾಂಕ್ಷೆಯ ಈ ಅಂತರ್‌ಜಿಲ್ಲಾ ಕಾರಿಡಾರ್‌ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದೆ.

ಈ ಯೋಜನೆಗೆ ಡಿಪಿಆರ್ ಸಲಹಾ ಕಾರ್ಯವನ್ನು ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ನೀಡಲಾಗಿದ್ದು, 59.60 ಕಿ.ಮೀ ಉದ್ದದ ಮೆಟ್ರೋ ಮಾರ್ಗಕ್ಕಾಗಿ 1.2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಟೆಂಡರ್‌ಗಳನ್ನು ನವೆಂಬರ್ 2025ರಲ್ಲಿ ಕರೆಯಲಾಗಿತ್ತು. ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು 20,649 ಕೋಟಿ ರೂ. ಆಗಿದೆ.

ಪ್ರಸ್ತುತ ಯೋಜನೆಗೆ ಸಂಬಂಧಿಸಿದಂತೆ ಸಂಚಾರ ಮತ್ತು ಪ್ರಯಾಣ ಮಾದರಿಗಳ ಅಧ್ಯಯನ, ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಹಾಗೂ ಭೂತಾಂತ್ರಿಕ ತನಿಖೆಗಳು ನಡೆಯುತ್ತಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೆಟ್ರೋ ಮಾರ್ಗವು ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿದ್ದು, ರಾಜ್ಯದ ಅತ್ಯಂತ ದುಬಾರಿ ಸಾರಿಗೆ ಯೋಜನೆಗಳಲ್ಲಿ ಒಂದಾಗಿದೆ.

ಬೆಂಗಳೂರು–ತುಮಕೂರು ಮೆಟ್ರೋ ಮಾರ್ಗವು ಬೆಂಗಳೂರಿನ ಮಾದವರದಿಂದ ಆರಂಭವಾಗಿ ತುಮಕೂರಿನ ನಾಗಣ್ಣನಪಾಳ್ಯವರೆಗೆ ಸಾಗಲಿದೆ. ಒಟ್ಟು 26 ನಿಲ್ದಾಣಗಳನ್ನು ಒಳಗೊಂಡಿರುವ ಈ ಕಾರಿಡಾರ್ ಪೂರ್ಣಗೊಂಡ ಬಳಿಕ, ಬೆಂಗಳೂರಿನ ವಾಯುವ್ಯ ಹೊರವಲಯ ಮತ್ತು ತುಮಕೂರು ನಡುವಿನ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಂಚಾರ ಸೌಲಭ್ಯ ಒದಗಿಸುವ ನಿರೀಕ್ಷೆಯಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಅನುಮೋದಿಸಿದ್ದು, ಅದರ ನಂತರ ಡಿಪಿಆರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಮುಂದಿನ ಹಂತದಲ್ಲಿ ವಿಸ್ತರಣೆಯ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು–ತುಮಕೂರು ಮೆಟ್ರೋ ಯೋಜನೆಯ ಪ್ರಮುಖ ನಿಲ್ದಾಣಗಳು

ಮಕಾಲಿ, ದಾಸನಪುರ, ನೆಲಮಂಗಲ, ನೆಲಮಂಗಲ ಟೋಲ್‌ಗೇಟ್, ಟಿ. ಬೇಗೂರ್, ತಿಪ್ಪಗೊಂಡನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ, ಡಾಬ್ಸ್‌ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಕ್ಯಾತ್ಸಂದ್ರ, ತುಮಕೂರು ಬಸ್ ನಿಲ್ದಾಣ, ತುಡಾ ಲೇಔಟ್ ಮತ್ತು ನಾಗಣ್ಣನಪಾಳ್ಯ.

ಸುಜಾತಾ ಹಂಡಿ ಬಂಧನದ ಬಳಿಕ ಕುಟುಂಬಸ್ಥರಿಗೂ ಸಂಕಷ್ಟ: ಕೇಶ್ವಾಪುರ ಠಾಣೆಯಿಂದ ನೋಟಿಸ್ ಜಾರಿ

0

ಹುಬ್ಬಳ್ಳಿ: ನಗರದಲ್ಲಿ ವಿವಾದಕ್ಕೆ ಕಾರಣವಾಗಿರುವ ಸುಜಾತಾ ಹಂಡಿ ಪ್ರಕರಣದಲ್ಲಿ ಪೊಲೀಸ್ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಕೇಶ್ವಾಪುರ ಪೊಲೀಸ್ ಠಾಣೆ ಪೊಲೀಸರು ಸುಜಾತಾ ಹಂಡಿಯ ಕುಟುಂಬಸ್ಥರಾದ ಸಹೋದರ ಮರಿಯಾದಾಸ್ ಹಾಗೂ ತಾಯಿ ಕಮಲಮ್ಮ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಪೊಲೀಸರು ಮನೆಗೆ ತೆರಳಿ ನೋಟಿಸ್ ನೀಡಿ ಸಹಿ ಪಡೆದುಕೊಂಡಿದ್ದಾರೆ. ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ಪ್ರಕರಣವು ಜನವರಿ 2 ರಂದು ಪ್ರಶಾಂತ್ ಬೊಮ್ಮಾಜಿ ನೀಡಿದ ದೂರಿನ ಆಧಾರದಲ್ಲಿ ದಾಖಲಾಗಿದ್ದು, ಸುಜಾತಾ ಹಂಡಿ ಸೇರಿ ಏಳು ಜನರ ವಿರುದ್ಧ ಕೇಸ್ ದಾಖಲಾಗಿತ್ತು.

ಇದೇ ಪ್ರಕರಣದಲ್ಲಿ ಈಗಾಗಲೇ ಸುಜಾತಾ ಹಂಡಿಯನ್ನು ಬಂಧಿಸಿರುವ ಪೊಲೀಸರು, ತನಿಖೆಯ ಭಾಗವಾಗಿ ಉಳಿದ ಆರೋಪಿಗಳು ಮತ್ತು ಸಂಬಂಧಪಟ್ಟವರ ವಿಚಾರಣೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಕೇಶ್ವಾಪುರ ಠಾಣೆ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ವಿನಯ್ ಕುಲಕರ್ಣಿ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

0

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಿದೆ. ವಿನಯ್ ಕುಲಕರ್ಣಿ ಅವರು ಎರಡನೇ ಬಾರಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರು ನಡೆಸಿದರು.

ಅರ್ಜಿದಾರರ ಪರ ವಕೀಲರು ವಾದ ಮುಂದುವರೆಸಿ, ಕೊಲೆ ಪ್ರಕರಣದಲ್ಲಿ ಕುಲಕರ್ಣಿ ಅವರ ಯಾವುದೇ ಪಾತ್ರವಿಲ್ಲ ಎಂದು ಪ್ರತಿಪಾದಿಸಿದರು. ಅಲ್ಲದೆ, ಕೊಲೆ ನಡೆದ ಸ್ಥಳದಲ್ಲೂ ಅವರು ಹಾಜರಿರಲಿಲ್ಲ. ಪ್ರಕರಣದಲ್ಲಿ ಇತರೆ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು.

ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸುವ ಷರತ್ತುಗಳನ್ನು ಉಲ್ಲಂಘಿಸುವುದು ಮತ್ತು ಜಾಮೀನು ರದ್ದುಪಡಿಸುವುದು ಎರಡು ವಿಭಿನ್ನ ಅಂಶಗಳಾಗಿವೆ ಎಂದು ವಾದಿಸಿದ ವಕೀಲರು, ಅರ್ಜಿದಾರರಿಗೆ ಜಾಮೀನು ನೀಡಿರುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಷರತ್ತು ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಾತ್ರ ಜಾಮೀನು ರದ್ದುಪಡಿಸಲಾಗಿದ್ದು, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ಹೇಳಿದರು.

ಇನ್ನು ಅರ್ಜಿದಾರರ ವಿರುದ್ಧ ಇಬ್ಬರು ಅಧಿಕಾರಿಗಳ ಪಾಟಿ ಸವಾಲು (ಕ್ರಾಸ್ ಎಕ್ಸಾಮಿನೇಶನ್) ಬಾಕಿ ಇರುವುದರಿಂದ, ಜಾಮೀನು ಮಂಜೂರು ಮಾಡಬೇಕೆಂದು ಕುಲಕರ್ಣಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಪ್ರಕರಣದಲ್ಲಿ ತನಿಖಾಧಿಕಾರಿಗಳಲ್ಲದೆ ಇನ್ನೂ ಇಬ್ಬರು ಪ್ರಮುಖ ಸಾಕ್ಷಿಗಳ ವಿಚಾರಣೆ ಬಾಕಿ ಇರುವುದರಿಂದ, ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ವಾದಿಸಿದರು.

ಇದಕ್ಕೂ ಮುನ್ನದ ವಿಚಾರಣೆಯಲ್ಲಿ ಸಿಬಿಐ ಪರ ವಕೀಲರು, ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳನ್ನು ಪಾಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಅರ್ಜಿದಾರರು, ಬಳಿಕ ಅದನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಷರತ್ತು ಉಲ್ಲಂಘನೆಯ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸಿದ ನಂತರ ಮತ್ತೆ ಜಾಮೀನು ನೀಡುವ ಬಗ್ಗೆ ಯಾವುದೇ ನಿರ್ದಿಷ್ಟ ತೀರ್ಪುಗಳಿಲ್ಲ ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ ಪರ ವಕೀಲರು, ಪ್ರಾಸಿಕ್ಯೂಷನ್ ಸಾಕ್ಷಿಯೊಬ್ಬರು ತಮ್ಮ ಕಕ್ಷಿದಾರರಿಗೆ ನಮಸ್ಕರಿಸಿದ್ದಕ್ಕೆ ಪ್ರತಿಯಾಗಿ ಆಶೀರ್ವಾದ ನೀಡಿದ ಕಾರಣಕ್ಕೆ ಜಾಮೀನು ರದ್ದುಪಡಿಸಲಾಗಿದೆ ಎಂದು ಹೇಳಿದರು. ಆದರೆ, ಇದೇ ಸಾಕ್ಷಿಯೊಂದಿಗೆ ಹಸ್ತಲಾಘವ ನಡೆಸಿದ ಇತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ ಎಂದು ವಾದಿಸಿದರು.

ಅಲ್ಲದೆ, ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಘಟನೆ ನಡೆದ ನಾಲ್ಕು ವರ್ಷಗಳ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿದೆ ಎಂಬ ಅಂಶವನ್ನೂ ಉಲ್ಲೇಖಿಸಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಅರ್ಜಿದಾರ ಹಾಗೂ ಸಿಬಿಐ ಪರ ವಾದಗಳನ್ನು ಆಲಿಸಿದ ನ್ಯಾಯಪೀಠ, ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

error: Content is protected !!