Home Blog Page 197

Bengaluru: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಬೈಕ್​​ ಸವಾರಿಗೆ ಬಿತ್ತು ಗೂಸಾ

0

ಬೆಂಗಳೂರು: ನಗರದ ಮಹದೇವಪುರ ಪ್ರದೇಶದಲ್ಲಿ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಜೆಪ್ಟೊದಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕ್ರೂರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ, ಹೆಲ್ಮೆಟ್ ಧರಿಸಿದ್ದ ಡೆಲಿವರಿ ಬಾಯ್ ಮೇಲೆ ಇಬ್ಬರು ವ್ಯಕ್ತಿಗಳು ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ರಸ್ತೆಯ ಒಂದು ಬದಿಯಿಂದ ಮುಖ್ಯ ರಸ್ತೆಗೆ ಡೆಲಿವರಿ ಎಕ್ಸಿಕ್ಯೂಟಿವ್ ಬರುತ್ತಿದ್ದ ವೇಳೆ, ದಿಢೀರ್ ಆಗಿ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಅಚಾನಕ್ ಸಂಭವಿಸಿದ ಈ ಘಟನೆಗೆ ಡೆಲಿವರಿ ಬಾಯ್ ಕ್ಷಮೆಯಾಚಿಸಿದ್ದಾನೆ.

ಆದರೆ ಬೈಕ್‌ನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಕೋಪದ ನಿಯಂತ್ರಣ ತಪ್ಪಿ, ಡೆಲಿವರಿ ಬಾಯ್‌ನನ್ನು ತಮ್ಮ ಹೆಲ್ಮೆಟ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದಷ್ಟೇ ಅಲ್ಲದೆ, ಡೆಲಿವರಿ ಬಾಯ್ ಬೈಕ್‌ನಿಂದ ಕೆಳಗೆ ಬಿದ್ದರೂ ಬಿಡದೆ ಕಾಲಿನಿಂದಲೂ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಈ ವೇಳೆ ಡೆಲಿವರಿ ಬಾಯ್ ಸಹಾಯಕ್ಕೆ ಸ್ಥಳೀಯರು ಬಂದಿದ್ದು, ಸಮಾಧಾನಪಡಿಸಿದ್ರೂ ಸುಮ್ಮನಾಗದ ಹಿನ್ನೆಲೆ ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದಾರೆ.

ಈ ಅಮಾನವೀಯ ಹಲ್ಲೆಯ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಮಹದೇವಪುರ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ತನಿಖೆ ಕೈಗೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಜನನಾಯಗನ್’ಗೆ ಯುಎ ಸರ್ಟಿಫಿಕೇಟ್ ನೀಡಲು ಆದೇಶ: ಸೆನ್ಸಾರ್ ಮಂಡಳಿಗೆ ಮದ್ರಾಸ್ ಹೈಕೋರ್ಟ್ ತರಾಟೆ

ದಳಪತಿ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದ ಸೆನ್ಸಾರ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಅಂತ್ಯ ಹಾಡಿದೆ. ಚಿತ್ರಕ್ಕೆ ಅಗತ್ಯ ಬದಲಾವಣೆಗಳ ಬಳಿಕ ಯುಎ ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಚಿತ್ರದ ವಿರುದ್ಧ ಸಲ್ಲಿಸಲಾಗಿದ್ದ ದೂರುಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, “ಮೊದಲು ದೂರು ನೀಡಿ, ನಂತರ ಅದರ ಪರಿಣಾಮಗಳ ಬಗ್ಗೆ ಯೋಚಿಸುವುದು ಅಪಾಯಕಾರಿ ಪ್ರವೃತ್ತಿ. ಇಂತಹ ದೂರುಗಳಿಗೆ ಉತ್ತೇಜನ ನೀಡಬಾರದು” ಎಂದು ಸ್ಪಷ್ಟವಾಗಿ ಹೇಳಿದೆ. ಈ ಆದೇಶದಿಂದ ಸೆನ್ಸಾರ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದ ಚಿತ್ರತಂಡಕ್ಕೆ ಮಹತ್ವದ ರಿಲೀಫ್ ಸಿಕ್ಕಂತಾಗಿದೆ.

ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಜನವರಿ 9ರಂದು ‘ಜನನಾಯಗನ್’ ಸಿನಿಮಾ ಜಾಗತಿಕವಾಗಿ ಬಿಡುಗಡೆಯಾಗಬೇಕಿತ್ತು. ತಮಿಳು ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿರುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ವಿಜಯ್ ಕಟೌಟ್‌ಗಳು ಪ್ರದರ್ಶಿತವಾಗಿದ್ದರೂ, ಸೆನ್ಸಾರ್ ಮಂಡಳಿಯ ವಿಳಂಬದಿಂದ ಬಿಡುಗಡೆ ಮುಂದೂಡಲಾಗಿತ್ತು.

‘ಜನನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ವಿಜಯ್ ಈಗಾಗಲೇ ಮಲೇಷ್ಯಾದ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಇದರಿಂದ ಅಭಿಮಾನಿಗಳು ಈ ಸಿನಿಮಾದ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದರು. ಸೆನ್ಸಾರ್ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧವೂ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿಯೂ ‘ಜನನಾಯಗನ್’ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಬ್ರಿಟನ್‌ನಲ್ಲಿ 260ಕ್ಕೂ ಹೆಚ್ಚು ಶೋಗಳು ಫಿಕ್ಸ್ ಆಗಿದ್ದು, ಇದುವರೆಗೆ 65 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿರುವುದು ಸಿನಿಮಾದ ಮೇಲಿನ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಘಟನೆ ಖಂಡನೀಯ: ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಯಡಿಯೂರಪ್ಪ ಆಗ್ರಹ

0

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆಯಿಂದ ರಾಜ್ಯದ ಮಹಿಳೆಯರಲ್ಲಿ ಭಯ ಮತ್ತು ಆತಂಕ ಉಂಟಾಗಿದೆ. ಇಂತಹ ದುರ್ಘಟನೆಗಳ ಬಳಿಕ ಮುಂದೇನು ಎಂಬ ಚಿಂತೆ ಮಹಿಳೆಯರಲ್ಲಿ ಮೂಡಿರುವುದು ಆತಂಕಕಾರಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆ ತೀವ್ರ ಖಂಡನೀಯ ಎಂದು ಹೇಳಿದರು.

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಘಟನೆಗೆ ಕಾರಣಕರ್ತರ ವಿರುದ್ಧ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಕ್ರಮ ವಹಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದರ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ವಿವಸ್ತ್ರ ಕೇಸ್ ಬೆನ್ನಲ್ಲೇ ವಿಡಿಯೋ ವೈರಲ್.. ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಅಸಲಿ ಮುಖ ಬಯಲು!

0

ಹುಬ್ಬಳ್ಳಿ: ಇತ್ತೀಚೆಗೆ ವಿವಸ್ತ್ರ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಗೆ ಸಂಬಂಧಿಸಿದ ಹಳೆಯ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹಣಕ್ಕಾಗಿ ಹನಿಟ್ರ್ಯಾಪ್ ನಡೆಸಿ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿವೆ.

ಕಳೆದ ನವೆಂಬರ್ 12, 2023ರಂದು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸುಜಾತಾ ಹಂಡಿ ಹಾಗೂ ಆಕೆಯ ಸಹಚರರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿತ್ತು. ಧಾರವಾಡ ತಾಲ್ಲೂಕಿನ ತುಕಾರಾಮ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ ಮೂಲಕ ಕರೆಸಿಕೊಂಡು, ನಾಲ್ಕು ದಿನಗಳ ಕಾಲ ಅಕ್ರಮವಾಗಿ ಕೂಡಿಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವೇಳೆ ನೈಲಾನ್ ಹಗ್ಗ ಹಾಗೂ ಲಾಂಗ್ ಬಳಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಬಿಡುಗಡೆ ಮಾಡಿದ್ದು, ಅದರಲ್ಲಿ ಹಲ್ಲೆಯ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಹಲ್ಲೆಗೊಳಗಾದ ವ್ಯಕ್ತಿ ಕರುಣೆಗೆ ಮೊರೆಯಿಟ್ಟರೂ ಹಲ್ಲೆ ಮುಂದುವರೆದಿದೆ ಎನ್ನಲಾಗಿದೆ. ತನಿಖೆಯ ವೇಳೆ ಈ ಪ್ರಕರಣದಲ್ಲಿ ಬರೋಬ್ಬರಿ 1.84 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ಸುಜಾತಾ ಹಂಡಿ ಹಾಗೂ ಆಕೆಯ ಸಹಚರರನ್ನು ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ಹಿನ್ನೆಲೆ ಹೊಂದಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಒಬ್ಬರಿಗೆ ಮಾತ್ರ ಪರಿಹಾರ, ಎಂಟು ಜೀವಗಳಿಗೆ ಬೆಲೆಯೇ ಇಲ್ಲವೇ? ಬೆಳಗಾವಿ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ

0

ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಎಂಟು ಕಾರ್ಮಿಕರು ಮೃತಪಟ್ಟಿರುವ ಪ್ರಕರಣದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯ ನಡೆ ಅನುಮಾನಕ್ಕೆ ಕಾರಣವಾಗಿದೆ. ಈ ದುರಂತದ ಬಳಿಕವೂ ಕಾರ್ಖಾನೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಮೃತಪಟ್ಟ ಎಂಟು ಕಾರ್ಮಿಕರ ಪೈಕಿ ಕೇವಲ ಒಬ್ಬ ಕಾರ್ಮಿಕನ ಕುಟುಂಬಕ್ಕೆ ಮಾತ್ರ ಪರಿಹಾರ ಘೋಷಿಸಿರುವ ಕಾರ್ಖಾನೆ, ಉಳಿದ ಕುಟುಂಬಗಳ ಬಗ್ಗೆ ಮೌನ ವಹಿಸಿದೆ. ಮೃತ ಮಂಜುನಾಥ ಕಾಜಗಾರ್ ಕುಟುಂಬದ ನಿರಂತರ ಒತ್ತಾಯದ ಹಿನ್ನೆಲೆ ಅವರಿಗೆ 18 ಲಕ್ಷ ರೂಪಾಯಿ ಪರಿಹಾರ ನೀಡುವ ಮೌಖಿಕ ಭರವಸೆ ನೀಡಲಾಗಿದೆ. ಆದರೆ ಇದು ಅಧಿಕೃತವಾಗಿ ಘೋಷಣೆ ಆಗಿಲ್ಲ.

ಈ ಅನ್ಯಾಯದ ವಿರುದ್ಧ ಬೈಲಹೊಂಗಲದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ, ಕಾರ್ಖಾನೆ ಆಡಳಿತ ಮಂಡಳಿ ಇದುವರೆಗೆ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಮಾಜಿ ಸಂಸದ ಪ್ರಭಾಕರ್ ಕೋರೆ, ಉದ್ಯಮಿ ವಿಜಯ ಮೆಟಗುಡ್ಡ ಹಾಗೂ ವಿಕ್ರಂ ಇನಾಮ್‌ದಾರ್ ಪಾಲುದಾರಿಕೆಯಲ್ಲಿರುವ ಈ ಕಾರ್ಖಾನೆ, ಮೃತರ ಕುಟುಂಬಸ್ಥರಿಗೆ ಸಾಂತ್ವನವನ್ನೂ ತಿಳಿಸದೇ ಮೌನಕ್ಕೆ ಜಾರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ಕಾಂಗ್ರೆಸ್‌ನಲ್ಲಿ ಹೊಂದಾಣಿಕೆ ಕೊರತೆ: ಎಂ.ಎಲ್. ಮೂರ್ತಿ ರಾಜೀನಾಮೆ

0

ಚಿಕ್ಕಮಗಳೂರು: ಜಿಲ್ಲೆಯ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಅಸಮಾಧಾನ ತೀವ್ರಗೊಂಡಿರುವ ಸೂಚನೆ ದೊರೆತಿದ್ದು, ಪಕ್ಷದ ಹಿರಿಯ ನಾಯಕ ಎಂ.ಎಲ್. ಮೂರ್ತಿ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮೂರ್ತಿ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಸುಮಾರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಎಂ.ಎಲ್. ಮೂರ್ತಿ, ಜಿಲ್ಲಾ ಅಧ್ಯಕ್ಷ ಹಾಗೂ ಸಿಡಿಎ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ ತಮ್ಮನ್ನು ಯಾವುದೇ ಹುದ್ದೆಗೆ ಪರಿಗಣಿಸದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೂ, ನಾಯಕರ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಮೂರ್ತಿಯವರ ರಾಜೀನಾಮೆ, ಪಕ್ಷದ ಒಳಗಿನ ಭಿನ್ನಮತ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಬಹುದೆಂಬ ಸೂಚನೆ ನೀಡಿದೆ. ಇದು ಕಾಫಿನಾಡ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಂತೆ ಪರಿಣಮಿಸಿದೆ.

“ಇಂಡಸ್ಟ್ರಿ ಬಾಗಿಲು ಹಾಕೋ ಸ್ಥಿತಿ ಬರಬಾರದು”: ಕನ್ನಡ ಚಿತ್ರರಂಗದ ದುಸ್ಥಿತಿಗೆ ಕೆ. ಮಂಜು ಕಿಡಿ

0

ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗೆ ನಿರ್ಮಾಪಕ ಕೆ. ಮಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇವತ್ತಿನ ಕನ್ನಡ ಇಂಡಸ್ಟ್ರಿಯನ್ನು ನೋಡಿದ್ರೆ ಬೇಸರ ಆಗುತ್ತದೆ. ಇಂಡಸ್ಟ್ರಿ ಉಳಿಸಿಕೊಳ್ಳುವ ಕೆಲಸ ಆಗಬೇಕು. ಇಲ್ಲಾಂದ್ರೆ ಇಂಡಸ್ಟ್ರಿ ಕಥೆ ಮುಗಿದು ಹೋಗುತ್ತೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಲೇ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಇಂಡಸ್ಟ್ರಿ ಬಾಗಿಲು ಹಾಕೋದು ಗ್ಯಾರಂಟಿ ಎಂದು ಅವರು ಗಂಭೀರವಾಗಿ ಹೇಳಿದ್ದಾರೆ. “ಯಾರ್ ಯಾರೋ ಮಧ್ಯವರ್ತಿಗಳಿಂದ ಇಂಡಸ್ಟ್ರಿ ಈ ಸ್ಥಿತಿಗೆ ತಲುಪಿದೆ. ಸಿನಿಮಾಗೆ ಇನ್ವೆಸ್ಟ್ ಮಾಡೋಕೆ ತುಂಬಾ ಜನ ಬರುತ್ತಿದ್ದಾರೆ. ಆದರೆ ಅದು ಸರಿಯಾದ ಮಾರ್ಗದಲ್ಲಿ ನಡೆಯುತ್ತಿಲ್ಲ. ಕೆಲ ಮಧ್ಯವರ್ತಿಗಳಿಂದಲೇ ಇಂಡಸ್ಟ್ರಿ ಹಾಳಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.

ಈ ಹಿನ್ನೆಲೆ ಕನ್ನಡ ಚಿತ್ರರಂಗಕ್ಕೆ ಬಲಿಷ್ಠ ನಾಯಕತ್ವ ಅಗತ್ಯ ಎಂದು ಕೆ. ಮಂಜು ಅಭಿಪ್ರಾಯಪಟ್ಟಿದ್ದಾರೆ. “ಇನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಥರಾ ಹಿರಿಯರು ನಾಯಕತ್ವ ವಹಿಸಿಕೊಳ್ಳಬೇಕು. ಸೀನಿಯರ್ಸ್ ಮುಂದೆ ಬಂದು ದಿಕ್ಕು ತೋರಿಸಬೇಕು” ಎಂದು ಹೇಳಿದ್ದಾರೆ.

ಈ ಮೂಲಕ ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಪಷ್ಟ ನಾಯಕತ್ವದ ಕೊರತೆ ಇದೆ ಎಂಬುದನ್ನು ಕೆ. ಮಂಜು ನೇರವಾಗಿ ಒಪ್ಪಿಕೊಂಡಂತಾಗಿದೆ.

MI vs RCB: RCB–ಮುಂಬೈ ಮುಖಾಮುಖಿ: ಮೊದಲ ಪಂದ್ಯ ಯಾವಾಗ, ಎಷ್ಟು ಗಂಟೆಗೆ?

0

ಮಹಿಳಾ ಪ್ರೀಮಿಯರ್ ಲೀಗ್ (WPL) ನಾಲ್ಕನೇ ಆವೃತ್ತಿಗೆ ಭರ್ಜರಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡು ಬಾರಿ ಟ್ರೋಫಿ ಗೆದ್ದಿದ್ದರೆ, ಆರ್‌ಸಿಬಿ ಒಂದು ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಹೀಗಾಗಿ, ಆರಂಭಿಕ ಪಂದ್ಯದಲ್ಲೇ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಪಂದ್ಯ ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 7:30ಕ್ಕೆ ಆರಂಭವಾಗಲಿದೆ. ಮುಂಬೈ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದರೆ, ಆರ್‌ಸಿಬಿಗೆ ಸ್ಮೃತಿ ಮಂಧಾನ ನಾಯಕತ್ವ ವಹಿಸಿದ್ದಾರೆ.

ಉಭಯ ತಂಡಗಳ ಬಲಾಬಲ

ಕಾಗದದ ಮೇಲೆ ಮುಂಬೈ ಇಂಡಿಯನ್ಸ್ ತಂಡ ಹೆಚ್ಚು ಬಲಿಷ್ಠವಾಗಿ ಕಾಣಿಸುತ್ತದೆ. ಹರ್ಮನ್‌ಪ್ರೀತ್ ಕೌರ್ ಜೊತೆ ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್-ಬ್ರಂಟ್, ವೆಸ್ಟ್ ಇಂಡೀಸ್ ನಾಯಕಿ ಹೀಲಿ ಮ್ಯಾಥ್ಯೂಸ್ ಪ್ರಮುಖ ಶಕ್ತಿ. ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್, ಆಸ್ಟ್ರೇಲಿಯಾದ ಮಿಲ್ಲಿ ಇಲಿಂಗ್‌ವರ್ತ್ ಹಾಗೂ ಭಾರತದ ಅಮನ್‌ಜೋತ್ ಕೌರ್ ತಂಡದ ಆಳವನ್ನು ಹೆಚ್ಚಿಸಿದ್ದಾರೆ.

ಆರ್‌ಸಿಬಿ ಪಾಳಯದಲ್ಲಿ ನಾಯಕಿ ಸ್ಮೃತಿ ಮಂಧಾನ ಜೊತೆಗೆ ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್, ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್, ದಕ್ಷಿಣ ಆಫ್ರಿಕಾದ ನಾಡಿನ್ ಡಿ ಕ್ಲಾರ್ಕ್ ಪ್ರಮುಖ ಪಾತ್ರವಹಿಸಲಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಪ್ರಸಿದ್ಧಳಾದ ವಿಕೆಟ್‌ಕೀಪರ್ ರಿಚಾ ಘೋಷ್ ಕೂಡ ತಂಡದ ದೊಡ್ಡ ಶಕ್ತಿ.

ಸಂಭಾವ್ಯ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ಹಿಲ್ಲಿ ಮ್ಯಾಥ್ಯೂಸ್, ನ್ಯಾಟ್ ಸೈವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜ್ನಾ, ಅಮನ್ಜೋತ್ ಕೌರ್, ಜಿ ಕಮಲಿನಿ, ಶಬ್ನೀಮ್ ಇಸ್ಮಾಯಿಲ್, ಸೈಕಾ ಇಶಾಕ್, ನಿಕೋಲಾ ಕ್ಯಾರಿ, ಪೂನಮ್ ಖೇಮ್ನಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ನಡಿನ್ ಡಿ ಕ್ಲಾರ್ಕ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವಾಲ್, ರಾಧಾ ಯಾದವ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ.

ಕಾಂಗ್ರೆಸ್ʼನವರ ಕಳ್ಳತನ ನಿಂತು ಹೋಗುವ ಭಯದಿಂದ ಜಿ ರಾಮ್ ಜಿ ಯೋಜನೆಗೆ ವಿರೋಧ: ಬೊಮ್ಮಾಯಿ

0

ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 100 ರಿಂದ 125 ದಿನಕ್ಕೆ ಕೂಲಿ ದಿನ ಹೆಚ್ಚಳ ಮಾಡಿದ್ದಾರೆ. ಇದರಿಂದ ಕೂಲಿಕಾರಿಗೆ ಅನುಕೂಲ ಆಗಲಿದೆ. ಈ ಯೋಜನೆಯಲ್ಲಿ ಪ್ರತಿ ಮನೆಯಲ್ಲಿ ಕೆಲಸ ಇರುವವರು, ಇಲ್ಲದವರ ಪಟ್ಟಿ ಮಾಡುವುದು, ಅಭಿವೃದ್ಧಿ ಯೋಜನೆ ರೂಪಿಸುವುದು,

ಅನುಷ್ಠಾನಗೊಳಿಸುವುದು, ಕಾರ್ಮಿಕರಿಗೆ ಕೂಲಿ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗಳಿಗೆ ಇದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಜಿ ರಾಮ್ ಜಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ ಅಂತ ಹೇಳುತ್ತಾರೆ. ವಿಬಿ ಜಿ ರಾಮ್ ಜಿ ವಿಧೆಯಕದ ಕ್ಲಾಸ್ 16 ರಲ್ಲಿ ಗ್ರಾಮ ಪಂಚಾಯತಿಗೆ ಎಲ್ಲಾ ಮನೆಯಲ್ಲಿ ಕೆಲಸ ಇದೆಯಾ ಇಲ್ವಾ ಅಂತ ನೋಡುವ ಹಕ್ಕಿದೆ‌. ಗ್ರಾಮದ ಅಭಿವೃದ್ದಿ ಯೋಜನೆ ರೂಪಿಸುವ ಹಕ್ಕು, ಯೋಜನೆ ಅನುಷ್ಠಾನ ಮಾಡುವ ಅಧಿಕಾರ, ಎಲ್ಲಾ ದಾಖಲೆ ಮಾಡುವ ಅಧಿಕಾರ, ಕೂಲಿ ಕೊಡುವ ಅಧಿಕಾರ ಅವರಿಗೆ ಇದೆ. ಯಾಕೆ ಕಾಂಗ್ರೆಸ್ ನವರು ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ವಿಕಸಿತ ಭಾರತ ಎಂದರೆ ಗ್ರಾಮ ರಾಜ್ಯ ರಾಮರಾಜ್ಯ ಆಗಲಿ ಅಂತ ಯೋಜನೆ ಮಾಡಿದ್ದಾರೆ‌. ಈ ಯೋಜನೆಯಲ್ಲಿ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ಕರ್ನಾಟಕದಲ್ಲಿ ಸುಮಾರು 30 ಸಾವಿರ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ನಮ್ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹ್ವಾನ್ ಅವರು, ಇವತ್ತಿನ ಅಗತ್ಯಕ್ಕೆ ತಕ್ಕಂತೆ ಯೋಜನೆ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಧಾರ ಸೀಡಿಂಗ್,

ಡಿಜಿಟಲೈಜೇಷನ್ ಮಾಡಿದ್ದಾರೆ. ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿ ಹಿಂದಿನ ಸಿಎಂ ವೀರೇಂದ್ರ ಪಾಟೀಲ್ ಅವರ ಹೆಸರಿನಲ್ಲಿ ಕೂಲಿ ಪಡೆದಿದ್ದರು. ಕಾಲಿನ ಹೆಬ್ಬಟ್ಟಿನಿಂದ ಸಹಿ ಮಾಡಿದ್ದರು. ಈ ಯೋಜನೆ ಅನಿಷ್ಠಾನದಲ್ಲಿ ಗುಲಬರ್ಗಾ ಮೊದಲ ಸ್ಥಾನದಲ್ಲಿತ್ತು ಅದನ್ನು ತನಿಖೆ ಮಾಡಿದಾಗ ಅವ್ಯವಹಾರ ಪತ್ತೆಯಾಗಿ ಸಿಬಿಐ ತನಿಖೆ ನಡೆಸಲಾಗಿತ್ತು. ಬೆಳಗಾವಿಯಲ್ಲಿಯೂ ಸಿಬಿಐ ತನಿಖೆ ನಡೆದಿತ್ತು ಎಂದು ಹೇಳಿದರು.

ವಿಬಿ ಜಿ ರಾಮ್ ಜಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ಇದೆ. ಸಂವಿಧಾನದ 73 ನೇ ತಿದ್ದುಪಡಿಯನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಗಿದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ.

ಸದಸ್ಯರು ಇದನ್ನು ಸರಿಯಾಗಿ ಓದಬೇಕು. ಗ್ರಾಮಿಣ ಜನರಿಗೆ ಹೆಚ್ಚಿನ ಸದಪಯೋಗ ನೀಡಲು ಸಕಾರಾತ್ಮವಾಗಿ ಈ ಯೋಜನೆ ಇದೆ. ಇದನ್ನು ಕಾಂಗ್ರೆಸ್ ಕೊರ್ಟ್ ನಲ್ಲಿ ಚಾಲೆಂಜ್ ಮಾಡಲಿ, ಅವರ ನಿಜ ಬಣ್ಣ ಬಯಲಾಗುತ್ತದೆ. ಅಧಿವೇಶನದಲ್ಲಿ ಯೋಜನೆಯ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಈ ಯೋಜ‌ನೆಯಲ್ಲಿ ಗಾಂಧಿಜಿ ಹೆಸರು ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಆಕ್ಷೇಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶೇ 80 ರಷ್ಟು ಯೋಜನೆಗಳು ಜವಾಹರಲಾಲ್ ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿನಲ್ಲಿವೆ. ಇದು ಮೊದಲು ಜವಾಹರ ರೋಜಗಾರ ಯೋಜನೆ ಅಂತ ಇತ್ತು.

ಚುನಾವಣೆ ಬಂದಾಗ ಗಾಂಧಿ ಹೆಸರನ್ನು ದುರುಪಯೊಗ ಪಡೆಸಿಕೊಂಡಿದ್ದಾರೆ. ಗಾಂಧಿಯನ್ನು ರಾಮನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಗಾಂಧಿಯಾವಾಗಲು ರಾಮನ ಹೆಸರು ಹೇಳುತ್ತಿದ್ದರು. ಈಗ ಈ ಯೋಜನೆಗೆ ರಾಮನ ಹೆಸರಿಟ್ಟಿರುವುದಕ್ಕೆ ಗಾಂಧಿ ಆತ್ಮ ಖುಷಿಯಾಗಿರುತ್ತದೆ ಎಂದು ಹೇಳಿದರು.

ಮನರೇಗಾ ಕುರಿತು ಪ್ರಹ್ಲಾದ್ ಜೋಶಿ ಸಾರ್ವಜನಿಕ ಚರ್ಚೆಗೆ ಬನ್ನಿ: ಡಿ.ಕೆ. ಶಿವಕುಮಾರ್ ಆಹ್ವಾನ

0

ಬೆಂಗಳೂರು, :“ಮನರೇಗಾ ಯೋಜನೆ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಬಹಿರಂಗ ಚರ್ಚೆಗೆ ಬರಲಿ. ಆ ಮೂಲಕ ಜನರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಬಹುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸವಾಲೆಸೆದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಯುಪಿಎ ಸರ್ಕಾರದ ಅವಧಿಯ ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅಥವಾ ಕೇಂದ್ರ ಸಚಿವರು, ಈ ಮೂವರಲ್ಲಿ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆ ಮೇಲೆ ಚರ್ಚೆಗೆ ಬರಲಿ. ನಾನು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧನಿದ್ದೇನೆ.

ಈ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆಗೆ ನೀಡಲಿ. ಅದು ಎಷ್ಟೇ ಕೋಟಿ ಅವ್ಯವಹಾರವಾದರೂ ತಾಕತ್ತಿದ್ದರೆ ತನಿಖೆ ಮಾಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾವುದೇ ನಾಯಕರು ಇಂತಹ ಆರೋಪ ಮಾಡಲು ಸಾಧ್ಯವಿಲ್ಲ, ಅವರು ನಿಜವಾಗಿಯೂ ಈ ರೀತಿ ಹೇಳಿದ್ದಾರಾ?” ಎಂದು ತಿಳಿಸಿದರು.

ಮನರೇಗಾ ಉಳಿಸಲು 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಳಿದಾಗ, “2 ದಿನ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್ಣ ಚರ್ಚೆ ಮಾಡಲಾಗುವುದು. ಬಿಜೆಪಿಯವರು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಭಿಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಬಗ್ಗೆ ಅವರು ಸಮರ್ಥನೆ ಮಾಡಿಕೊಳ್ಳಲಿ, ಈ ಕಾರ್ಯಕ್ರಮದಿಂದ ಏನೆಲ್ಲಾ ಕೆಟ್ಟ ಪರಿಣಾಮ ಬೀರಲಿದೆ ಎಂದು ನಾವು ಹೇಳುತ್ತೇವೆ” ಎಂದು ತಿಳಿಸಿದರು.

ಕೇರಳದ ಮಲೆಯಾಳಂ ಭಾಷೆ ಬಿಲ್ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನನಗೆ ಇನ್ನು ಸಂಪೂರ್ಣ ಮಾಹಿತಿ ಇಲ್ಲ” ಎಂದು ತಿಳಿಸಿದರು. ನಿಮಗೆ ಸಿಕ್ಕಿರುವ ಅಧಿಕಾರ ನಮಗೆ ಸಿಕ್ಕಿಲ್ಲ ಎಂಬ ಕುಮಾರಸ್ವಾಮಿ ಅವರ ಟ್ವೀಟ್ ಬಗ್ಗೆ ಕೇಳಿದಾಗ, “ಬಹಳ  ಸಂತೋಷ, ಅವರು ಖುಷಿಯಾಗಿ ಸಂತೋಷವಾಗಿರಲಿ” ಎಂದರು.ಡಿಸಿಎಂ ಆದ ತಕ್ಷಣ ವಿಶೇಷ ಕೊಂಬು ಇರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅವರ ಶಾಸಕರುಗಳು ಇದ್ದಾರಲ್ಲಾ ಅವರ ಮೂಲಕ ಈ ವಿಚಾರವನ್ನು ಚರ್ಚೆ ಮಾಡಲು ಹೇಳಲಿ” ಎಂದು ಹೇಳಿದರು.

error: Content is protected !!