ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ 2 ಮತ್ತು 3ನೇ ತಿರುವಿನ ಬಳಿ ಒಂಟಿ ಸಲಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ (ಜ.9) ರಾತ್ರಿ ಕಾಡಾನೆ ರಸ್ತೆ ಮೇಲೆ ಮರ ಕೆಡವಿ, ರಸ್ತೆಯಲ್ಲೇ ನಿಂತ ಪರಿಣಾಮ ಚಿಕ್ಕಮಗಳೂರು ಹಾಗೂ ಮಂಗಳೂರು ಕಡೆಗೆ ಸಾಗುವ ಮಾರ್ಗದಲ್ಲಿ ಸುಮಾರು 2 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದ ಘಟನೆ ನಡೆದಿದೆ. ಕೆಲವರು ಪರಿಸ್ಥಿತಿಯನ್ನು ಗಮನಿಸಿ ತಮ್ಮ ವಾಹನಗಳನ್ನು ವಾಪಸ್ ತಿರುಗಿಸಿಕೊಂಡು ತೆರಳಿದ್ದಾರೆ.
ಈ ಹಿಂದೆಯೂ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡ ಘಟನೆಗಳು ವರದಿಯಾಗಿದ್ದು, ಇದೀಗ ಮತ್ತೆ ಆತಂಕ ಹೆಚ್ಚಿಸಿದೆ. ಕಾಡಾನೆ ಕಾಣಿಸಿಕೊಂಡ ಹಿನ್ನೆಲೆ, ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

