Home Blog Page 197

ಇ–ಖರೀದಿ ಪ್ರಕ್ರಿಯೆ ತಾಂತ್ರಿಕ ಪರಿಷ್ಕರಣೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು: ಸಾರ್ವಜನಿಕ ಕಾಮಗಾರಿಗಳಿಗೆ ಬಿಡ್‌ ಸಲ್ಲಿಸುವ ವೇಳೆ ಅಸ್ತಿತ್ವದಲ್ಲಿರುವ ಇ–ಖರೀದಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಗುರುತಿಸಿ, ರಾಜ್ಯದ ಇ–ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಜತೆಗೆ, ಪ್ರಸ್ತುತ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ವಂಚನೆಯನ್ನು ತೊಡೆದುಹಾಕುವ ಉದ್ದೇಶದಿಂದ ಉನ್ನತ ಮಟ್ಟದ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಟೆಂಡರ್ ದಾಖಲೆಗಳ ರಿಯಲ್–ಟೈಮ್ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮ–2000ರ ನಿಯಮ 26ಎ ಅಡಿಯಲ್ಲಿ, ಮಂಗಳೂರು ಮಹಾನಗರ ಪಾಲಿಕೆಗೆ ಬಿಡ್ ಸಲ್ಲಿಸುವ ವೇಳೆ ನಕಲಿ ಪರವಾನಗಿಗಳು, ಅಸ್ತಿತ್ವದಲ್ಲಿಲ್ಲದ ಕಾಮಗಾರಿ ಆದೇಶಗಳು ಹಾಗೂ ನಿಗದಿಗಿಂತ ಅಧಿಕ ವೆಚ್ಚದ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಆರೋಪದ ಮೇಲೆ ಸಾರ್ವಜನಿಕ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ನಿಷೇಧಿಸಿರುವುದನ್ನು ಪ್ರಶ್ನಿಸಿ ಮಂಗಳೂರು ಮೂಲದ ಗುತ್ತಿಗೆದಾರ ಅನಂತಕೃಷ್ಣ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮಹತ್ವದ ನಿರ್ದೇಶನಗಳನ್ನು ನೀಡಿದೆ.

ರಾಜ್ಯದ ಎಲ್ಲಾ ಸಾರ್ವಜನಿಕ ಖರೀದಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇ–ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕವೇ ನಡೆಯಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಬಿಡ್ಡರ್‌ಗಳು ಸಲ್ಲಿಸುವ ಟೆಂಡರ್ ದಾಖಲೆಗಳನ್ನು ಮುಖಾಮುಖಿ ಹಸ್ತಕ್ಷೇಪವಿಲ್ಲದೆ ಸ್ವಯಂ ಪರಿಶೀಲಿಸಲು, ಇ–ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮತ್ತು ವಿವಿಧ ಸರ್ಕಾರಿ ಡೇಟಾಬೇಸ್‌ಗಳ ನಡುವೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ (ಎಪಿಐ) ಏಕೀಕರಣವನ್ನು ಸ್ಥಾಪಿಸಿ ಕಾರ್ಯಗತಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಇದು ಒಂದೇ ಒಂದು ಪ್ರಕರಣಕ್ಕೆ ಸೀಮಿತವಲ್ಲ; ನಕಲಿ ಟೆಂಡರ್ ದಾಖಲೆಗಳನ್ನು ಸಲ್ಲಿಸುವ ಪ್ರವೃತ್ತಿ ಸಾರ್ವಜನಿಕ ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡಿದ್ದು, ಬಿಡ್ಡಿಂಗ್ ವ್ಯವಸ್ಥೆಯ ಸಮಗ್ರತೆಗೆ ಗಂಭೀರ ಧಕ್ಕೆ ತಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಖರೀದಿ ಪ್ರಕ್ರಿಯೆಯ ಪಾರದರ್ಶಕತೆ ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟ, ನಿಯಮಗಳ ಅನುಸರಣೆ, ವ್ಯಾಪಾರ–ವೃತ್ತಿಯ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ರಕ್ಷಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಕೇವಲ ಆಡಳಿತಾತ್ಮಕ ಕಡ್ಡಾಯವಲ್ಲ; ಸಂವಿಧಾನದ ವಿಧಿ 14 (ಸಮಾನತೆ) ಮತ್ತು ವಿಧಿ 19 ರಲ್ಲಿ ಅಡಕವಾದ ತತ್ವಗಳನ್ನು ಆಧರಿಸಿದ ಸಾಂವಿಧಾನಿಕ ಆದೇಶವಾಗಿದೆ ಎಂದು ಪೀಠ ಹೇಳಿದೆ.

ಕಂಪನಿಗಳ ನೋಂದಣಿ ಸಂಸ್ಥೆ, ಜಿಎಸ್‌ಟಿ ಇಂಡಿಯಾ ಪೋರ್ಟಲ್, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ವೃತ್ತಿಪರ ಸಂಸ್ಥೆಗಳು, ನಿಗಮ–ಮಂಡಳಿಗಳು, ಪರಿಸರ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಸ್ಮಾರ್ಟ್ ಸಿಟಿ ಘಟಕಗಳು, ಮೂಲಸೌಕರ್ಯ ಅಭಿವೃದ್ಧಿ ಮಂಡಳಿಗಳು, ಪುರಸಭೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಜಿಲ್ಲಾಡಳಿತಗಳೊಂದಿಗೆ ಸಮಾಲೋಚನೆ ನಡೆಸಿ ಎಪಿಐ ಏಕೀಕರಣ ಜಾರಿಗೆ ತರಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

WPL 2026; ಮುಂಬೈ ವಿರುದ್ದ ಗೆಲುವಿನ ಬೆನ್ನಲ್ಲೇ RCB ತಂಡಕ್ಕೆ ಬಿಗ್ ಶಾಕ್; ಪ್ರಮುಖ ವೇಗಿ ಔಟ್!

0

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್–4ರ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಆದರೆ ಈ ಜಯದ ಸಂಭ್ರಮದ ನಡುವೆಯೇ ಆರ್‌ಸಿಬಿಗೆ ದೊಡ್ಡ ಆಘಾತ ಎದುರಾಗಿದೆ.

ತಂಡದ ಪ್ರಮುಖ ವೇಗಿ ಪೂಜಾ ವಸ್ತ್ರಾಕರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ವೈದ್ಯರ ಸಲಹೆ ಮೇರೆಗೆ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಐದು ಪಂದ್ಯಗಳಿಗೆ ಲಭ್ಯರಾಗುವುದಿಲ್ಲ. ಪೂಜಾ ವಸ್ತ್ರಾಕರ್ ಆರ್‌ಸಿಬಿ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ಅವರ ಅನುಪಸ್ಥಿತಿ ತಂಡದ ಬೌಲಿಂಗ್ ಸಂಯೋಜನೆಗೆ ಸವಾಲಾಗಿ ಪರಿಣಮಿಸಿದೆ.

ಮೊದಲ ಪಂದ್ಯದಲ್ಲೇ ಪೂಜಾ ಹೊರಗುಳಿದಿದ್ದ ಕಾರಣ ಇಂಗ್ಲೆಂಡ್ ವೇಗಿ ಲಿನ್ಸೆ ಸ್ಮಿತ್ ಅವರನ್ನು ಆರ್‌ಸಿಬಿ ಕಣಕ್ಕಿಳಿಸಿತ್ತು. ಆದರೆ ಸ್ಮಿತ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅವರು ಎರಡು ಓವರ್‌ಗಳಲ್ಲಿ 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಪೂಜಾ ವಸ್ತ್ರಾಕರ್ ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರನ್ನೇ ಆರ್‌ಸಿಬಿ ಆಡುವ ಸಾಧ್ಯತೆ ಇದೆ.

ಅಪ್ರಾಪ್ತೆ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್; ಪ್ರಿಯಕರನ ಕಿರುಕುಳವಾ? ಪೋಷಕರ ಒತ್ತಡವಾ? ಸಾವಿನ ಸುತ್ತ ಅನುಮಾನಗಳ ಹುತ್ತ!

0

ಮೈಸೂರು:- ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಅಪ್ರಾಪ್ತೆ ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಸಾವಿಗೆ ಪ್ರಿಯಕರನ ಪಾತ್ರವಿದೆಯಾ ಅಥವಾ ಪೋಷಕರ ಒತ್ತಡ ಕಾರಣವೇ? ಎಂಬ ಬಗ್ಗೆ ಪರಸ್ಪರ ಆರೋಪ–ಪ್ರತ್ಯಾರೋಪಗಳು ಕೇಳಿಬರುತ್ತಿವೆ. ದಿವ್ಯಾ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಆದಿತ್ಯ ಎಂಬ ಯುವಕನೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇಬ್ಬರೂ ಚಾಮುಂಡಿಬೆಟ್ಟ ಸೇರಿದಂತೆ ಹಲವು ಸ್ಥಳಗಳಿಗೆ ತೆರಳಿದ್ದು, ಅವರ ಸೆಲ್ಫಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಒಂದು ಕಡೆ, ಯುವಕನ ಕಿರುಕುಳದಿಂದ ಬೇಸತ್ತು ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ಆಕೆಯ ಪೋಷಕರ ಒತ್ತಡವೇ ಸಾವಿಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ ದಿವ್ಯಾ–ಆದಿತ್ಯ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ ಬಹಿರಂಗವಾಗಿದ್ದು, ಅದರಲ್ಲಿ ದಿವ್ಯಾ ತನ್ನ ಭಯವನ್ನು ವ್ಯಕ್ತಪಡಿಸಿ, ಆದಿತ್ಯನನ್ನು ಮದುವೆಯಾಗುವಂತೆ ಮನವಿ ಮಾಡಿಕೊಂಡಿದ್ದಾಳೆ.

ಆದಿತ್ಯ ತನ್ನ ಮೇಲೆ ದಿವ್ಯಾ ತಂದೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದು, ತಾನು ಯಾವುದೇ ಕಿರುಕುಳ ನೀಡಿಲ್ಲ ಎಂಬುದಕ್ಕೆ ಸಾಕ್ಷಿಗಳನ್ನು ಪೊಲೀಸರಿಗೆ ಒದಗಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾನೆ. ಘಟನೆಯ ನಿಜಾಂಶವನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯಿಂದಲೇ ದಿವ್ಯಾ ಸಾವಿನ ಹಿಂದಿನ ಅಸಲಿ ಕಾರಣ ಬಹಿರಂಗವಾಗಬೇಕಿದೆ.

ಯಶವಂತಪುರ ಫ್ಲೈಓವರ್ ಬಳಿ ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ; ವಾಹನ ಜಖಂ

0

ಬೆಂಗಳೂರು:- ನಗರದ ಯಶವಂತಪುರ ಫ್ಲೈಓವರ್ ಬಳಿ, ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದ ಘಟನೆ ಜರುಗಿದೆ.

ತುಮಕೂರು ಹೈವೇಯಿಂದ ಯಶವಂತಪುರ ಫ್ಲೈಓವರ್ ಕಡೆ ಮಿನಿ ಟೆಂಪೋ ಬರುತ್ತಿತ್ತು. ಈ ವೇಳೆ ಮುಂಭಾಗ ಬರುತ್ತಿದ್ದ ಕಾರಿನ ಚಾಲಕ ಸಡನ್ ಆಗಿ ಬಲ ಭಾಗಕ್ಕೆ ಬಂದಿದ್ದಾನೆ. ಏಕಾಏಕಿ ಬಲಕ್ಕೆ ಬಂದ ಪರಿಣಾಮ ಹಿಂದೆ ಬರುತ್ತಿದ್ದ ಮಿನಿ ಟೆಂಪೋ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದೆ.

ಡಿವೈಡರ್‌ಗೆ ಗುದ್ದಿದ ಪರಿಣಾಮ ಮಿನಿ ಟೆಂಪೋ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸದ್ಯ ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು!

0

ಮಂಡ್ಯ:- ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಪ್ಲಾಸ್ಟಿಕ್ ಗೋದಾಮು ಹೊತ್ತಿ ಉರಿದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಜರುಗಿದೆ.

ಮಹಮದ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಚೀಲದ ಗೋದಾಮಿನಲ್ಲಿ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗೋದಾಮಿದಲ್ಲಿದ್ದ ಕಚ್ಚಾ ಪಾದಾರ್ಥಗಳು ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ಮಾಡಿದ್ದು, ಬೆಂಕಿ ಶಮನ ಮಾಡುವ ಕಾರ್ಯ ಮಾಡಿದ್ದಾರೆ.

ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಚಾಮರಾಜನಗರ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ತಾಯಿ ಹುಲಿ ಸೆರೆ; ಪತ್ತೆಯಾಗದ 4 ಮರಿಹುಲಿಗಳು, ಅರಣ್ಯ ಇಲಾಖೆ ಶೋಧ

0

ಚಾಮರಾಜನಗರ: ಕಳೆದ ತಿಂಗಳು ತನ್ನ ನಾಲ್ಕು ಮರಿಗಳೊಂದಿಗೆ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ತಾಯಿ ಹುಲಿ ಕೊನೆಗೂ ಸೆರೆ ಹಿಡಿಯಲಾಗಿದೆ.

ಆದರೆ ಅದರ ನಾಲ್ಕು ಮರಿಹುಲಿಗಳು ಇನ್ನೂ ನಾಪತ್ತೆಯಾಗಿದ್ದು, ಅರಣ್ಯ ಇಲಾಖೆಗೆ ತಲೆನೋವಾಗಿದೆ. ರೈತರ ತೋಟದಲ್ಲಿ ತಾಯಿ ಹುಲಿ ಮತ್ತು ಮರಿಹುಲಿಗಳ ಸಂಚಾರದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ನೂರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಐದು ಸಾಕಾನೆಗಳೊಂದಿಗೆ ಹತ್ತು ದಿನಗಳ ಕಾಲ ನಡೆಸಿದ ಸೆರೆ ಕಾರ್ಯಾಚರಣೆ ವೇಳೆ ಕೇವಲ ತಾಯಿ ಹುಲಿ ಸೆರೆ ಸಿಕ್ಕಿದ್ದು, ಮರಿ ಹುಲಿಗಳು ನಾಪತ್ತೆಯಾಗಿದೆ.

ಇತ್ತೀಚೆಗೆ, ಬುಲೆಟ್ ಮಾದಪ್ಪ ಎಂಬ ರೈತರಿಗೆ ಸೇರಿದ ಬಾಳೆ ತೋಟದಲ್ಲಿ ಅಳವಡಿಸಿದ ಬೃಹತ್ ಬೋನಿಗೆ ತಾಯಿ ಹುಲಿ ಬಿದ್ದಿದ್ದು, ಹಸುವನ್ನು ಕೊಂದುಹಾಕಿರುವುದು ಗಮನಕ್ಕೆ ಬಂದಿದೆ. ಇನ್ನೊಂದು ತೋಟದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬೆಳಗಿನ ಜಾವ ಒಂದು ಹುಲಿಯ ಸಂಚಾರ ದೃಶ್ಯ ಸಿಕ್ಕಿದ್ದು, ಬೋನಿಗೆ ಬಿದ್ದಿರುವ ಹುಲಿ ಅದೇನಾ ಎಂಬುದು ವೈಜ್ಞಾನಿಕ ಪರಿಶೀಲನೆಯಿಂದ ತಿಳಿಯಬೇಕಿದೆ. ತಾಯಿ ಹುಲಿ ಸೆರೆ ಹಿಡಿದರೂ ಮರಿ ಹುಲಿಗಳನ್ನು ಹಿಡಿಯುವ ಕೆಲಸ ಮುಂದುವರಿಯದೇ ಇದ್ದರೆ, ರೈತರು ನಿತ್ಯ ಆತಂಕದಲ್ಲಿ ಬದುಕಬೇಕಾಗುವ ಸಾಧ್ಯತೆ ಇದೆ.

ಗದಗ| ರೀಲ್ಸ್‌ಗೆ ಅಶ್ಲೀಲ ನಿಂದನೆ; ಪೊಲೀಸ್ ಠಾಣೆ ಮುಂದೆ ಮಹಿಳೆಯರಿಂದ ಪ್ರೊಟೆಸ್ಟ್!

0

ಗದಗ:– ಗದಗದಲ್ಲಿ ರೀಲ್ಸ್ ವಿಚಾರವಾಗಿ ಅಶ್ಲೀಲ ನಿಂದನೆ ಆರೋಪದ ಆಡಿಯೋ ವೈರಲ್ ಆಗಿದ್ದು, ಎಸ್.ಎಸ್.ಕೆ ಸಮಾಜದ ಮಹಿಳೆಯರು ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಎಸ್, ಫ್ಯಾಷನ್ ಡ್ರೆಸ್ ಹಾಕಿ ರೀಲ್ಸ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗದಗದ ಬಾಲಾಜಿ ನಗರದ ಮಹಿಳೆಯೊಬ್ಬರು, ಬುದ್ಧಿ ಹೇಳುವ ಬದಲು ತಮ್ಮದೇ ಸಮಾಜದ ಹೆಣ್ಣು ಮಕ್ಕಳಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಎಸ್.ಎಸ್.ಕೆ ಸಮಾಜದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್.ಎಸ್.ಕೆ ಸಮಾಜದ ವಾಟ್ಸಪ್ ಗ್ರೂಪ್‌ಗಳಲ್ಲಿ ಅಶ್ಲೀಲ ಶಬ್ದಗಳ ನಿಂದನೆಯ ಆಡಿಯೋ ವೈರಲ್ ಆಗಿದ್ದು, ಗದಗ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಯುವತಿಯರು ಮತ್ತು ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ಎಸ್.ಎಸ್.ಕೆ ಸಮಾಜದ ಮಹಿಳೆಯರು ಗದಗ ನಗರ ಪೊಲೀಸ್ ಠಾಣೆ ಎದುರು ಜಮಾವಣೆ ನಡೆಸಿ ಪ್ರತಿಭಟನೆ ನಡೆಸಿದರು.

ರೀಲ್ಸ್ ಮಾಡಿದ ಯುವತಿಯರ ವಿಡಿಯೋ ಹಾಗೂ ಫೋಟೋಗಳಿಗೆ ಟ್ಯಾಗ್ ಮಾಡಿ ನಿಂದನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗದಗನ ಮಹಿಳೆ ಈ ಆಡಿಯೋಗಳನ್ನು ಹಲವು ಜಿಲ್ಲೆಗಳ ವಾಟ್ಸಪ್ ಗ್ರೂಪ್‌ಗಳಿಗೆ ಶೇರ್ ಮಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ವಿರೋಧವಾಗಿ ಮಹಿಳೆಯರು ಅವರ ಮನೆಗೆ ತೆರಳಿ ಪ್ರಶ್ನಿಸಿದ್ದಾರೆ.

ಈ ವೇಳೆ ಹುಬ್ಬಳ್ಳಿಯಿಂದ ಬಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.

ಮಾಜಿ ಸಚಿವ ನಾಗೇಂದ್ರಗೆ ಬಿಗ್ ಶಾಕ್: ವಾಲ್ಮೀಕಿ ಹಗರಣದಲ್ಲಿ ಸಿಬಿಐ ವಿಚಾರಣೆಗೆ ನೋಟಿಸ್; ಮತ್ತೆ ಜೈಲು ಭೀತಿ!

0

ಬೆಂಗಳೂರು: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಸಿಬಿಐ ಮಾಜಿ ಸಚಿವ ಬಿ. ನಾಗೇಂದ್ರಗೆ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಈ ಮೂಲಕ ನಾಗೇಂದ್ರಗೆ ಮತ್ತೆ ಬಂಧನದ ಭೀತಿ ಉಂಟುಮಾಡಿದೆ. ವಾಲ್ಮೀಕಿ ಹಗರಣ ಹೊರಬಂದ ನಂತರ, ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಡಿಯಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರು.

ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ನಾಗೇಂದ್ರ, ಸಂಪುಟ ಪುನಾರಚನೆ ವೇಳೆ ತನ್ನ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಇದ್ದರು. ಇದೀಗ ಸಿಬಿಐ ನೋಟಿಸ್ ಜಾರಿ ಮಾಡಿದ್ದು, ನಾಗೇಂದ್ರ ಅವರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ, ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಧ್ಯವರ್ತಿಗಳಿಗೆ ಹಣ ನೀಡದಿರಿ: ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನಲ್ಲಿ ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಅರ್ಜಿದಾರರಿಗೆ ಪಂಚನಾಮೆ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2017ರಿಂದ 2025ರ ಅವಧಿಯಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಾಗರಿಕರ ಮನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಅರ್ಜಿದಾರರ ವಾಸಸ್ಥಳದ ಪರಿಶೀಲನೆ, ವಿಚಾರಣೆ ಹಾಗೂ ಪಂಚನಾಮೆ ನಡೆಸಿ, ಫಲಾನುಭವಿಗಳ ಭಾವಚಿತ್ರ ಮತ್ತು ಅಗತ್ಯ ಮಾಹಿತಿಯನ್ನು ಸ್ಥಳದಲ್ಲೇ ಸಂಗ್ರಹಿಸಲಾಗುತ್ತಿದೆ. ಇದು ಸರಕಾರದ ಅಧಿಕೃತ ಪ್ರಕ್ರಿಯೆಯಾಗಿದೆ.

ಪಡಿತರ ಚೀಟಿ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ತಾಲೂಕಿನ ಕೆಲವು ಮಧ್ಯವರ್ತಿಗಳು, ದಲ್ಲಾಳಿಗಳು ಹಾಗೂ ಆನ್‌ಲೈನ್ ಅಂಗಡಿಯವರು ಫಲಾನುಭವಿಗಳಿಂದ 5 ಸಾವಿರ ರೂ.ದಿಂದ 7,500 ರೂಪಾಯಿವರೆಗೆ ಹಣಕ್ಕೆ ಬೇಡಿಕೆ ಇಡುತ್ತಿರುವುದು ಕಂಡುಬಂದಿದೆ. ಪಡಿತರ ಚೀಟಿ ಪಡೆಯುವುದು ನಾಗರಿಕರ ಹಕ್ಕು. ಇದಕ್ಕಾಗಿ ಯಾರಿಗೂ ಹಣ ನೀಡುವ ಅಗತ್ಯವಿಲ್ಲ ಎಂದು ಅಶೋಕ ಮಂದಾಲಿ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಯಾರಾದರೂ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಭಯಪಡದೆ ದೂರು ನೀಡಬಹುದು. ಗದಗ ನಗರದ ಮುಳಗುಂದ ನಾಕಾ ಬಳಿಯ ಕೆ.ಎಸ್.ಆರ್.ಟಿ.ಸಿ ಡಿಪೊ ಎದುರಿಗೆ ಇರುವ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಇಲ್ಲವೇ ಮೊಬೈಲ್ ಸಂಖ್ಯೆ-9449446313 ಸಂಪರ್ಕಿಸಿ ದೂರು ಸಲ್ಲಿಸುವಂತೆ ಅಶೋಕ ಮಂದಾಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶದೊಂದಿಗೆ ಯಶಸ್ಸು ಗಳಿಸಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್ ಅವರು ಶುಕ್ರವಾರ ಲಕ್ಕುಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಬಿ.ಎಚ್. ಪಾಟೀಲ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ-1 ವಿಜ್ಞಾನ ವಿಷಯದ ಪರೀಕ್ಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ನೀಡಿರುವ ಮಾರ್ಗದರ್ಶನದಂತೆ ತಾವೆಲ್ಲ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ವಿದ್ಯಾರ್ಥಿವಾರು ಟ್ರ‍್ಯಾಕಿಂಗ್ ವ್ಯವಸ್ಥೆ ಅಡಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ನಿಖರವಾಗಿ ಗುರುತಿಸಿ, ಪರೀಕ್ಷೆಗಳ ಆಧಾರದ ಮೇಲೆ ನಿರಂತರವಾಗಿ ಟ್ರ್ಯಾಕಿಂಗ್ ನಡೆಸಬೇಕು. ವಿದ್ಯಾರ್ಥಿಗಳನ್ನು ಸಾಮರ್ಥ್ಯಾನುಸಾರ ಗುಂಪು ಮಾಡಿ, ಅಗತ್ಯ ಕ್ರಮ ಕೈಗೊಂಡು ಮೌಲ್ಯಮಾಪನ ಮಾಡಿ ಪೋಷಕರ ಸಭೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳಿಸಿ, ಗಮನಿಸಿದ ತಪ್ಪನ್ನು ಸರಿಪಡಿಸಿ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಸತತ ಪ್ರಯತ್ನ ನಿಮ್ಮದಾಗಿರಲಿ ಎಂದರು.

ಓದು–ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿದಿನ ನಿಗದಿತ ಸಮಯದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ನಿಧಾನ ಕಲಿಕೆಯ ಹಾಗೂ ಓದು–ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ, ವಿಶೇಷ ಗಮನ ಹರಿಸಿ ಇಲಾಖೆ ನೀಡಿದ ತರಬೇತಿ ಹಾಗೂ ಮಾರ್ಗದರ್ಶನದಂತೆ ಕನಿಷ್ಠ 40+ ಅಂಕ ಗಳಿಸುವಂತೆ ವಿಶೇಷ ತರಗತಿಗಳು, ಪುನರಾವಲೋಕನ, ಗುಂಪು ಚಟುವಟಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗೆ ಅಪ್ಲೈಡ್ ಪ್ರಶ್ನೆಗಳ ಅಭ್ಯಾಸಕ್ಕೆ ಒತ್ತು ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ, ಎಪಿಸಿಓ ಎಸ್.ಎಸ್. ಕುರಿಯವರ, ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ಹಾಗೂ ಎರಡೂ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ನಮ್ಮೆಲ್ಲರ ಪ್ರಯತ್ನ ಕೇವಲ ಮಕ್ಕಳ ಉತ್ತೀರ್ಣತೆಗಷ್ಟೇ ಸೀಮಿತವಾಗದೆ, ಎಲ್ಲ ವಿದ್ಯಾರ್ಥಿಗಳು ಗುಣಾತ್ಮಕ ಕಲಿಕೆಯನ್ನು ಹೊಂದುವಂತೆ ಪ್ರಯತ್ನಿಸೋಣ. ಸರ್ಕಾರದಿಂದ ನೀಡಿದ 29 ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಫಲಿತಾಂಶವನ್ನು ಶೇ. 100ಕ್ಕೆ ತಲುಪಿಸುವಂತೆ ಎಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

error: Content is protected !!