Home Blog Page 198

ದಾನಶೂರ ಶಿರಸಂಗಿ ಲಿಂಗರಾಜರು

0

ಶಿಕ್ಷಣ ಸೇವೆಯೇ ದೇವರ ಸೇವೆ’ ಎಂಬ ಅಚಲವಾದ ನಂಬಿಕೆಯ ಇಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿಸ್ವಾರ್ಥ ಮನೋಭಾವನೆಯಿಂದ ಸಂಸ್ಥಾನದ ಇಡೀ ಆಸ್ತಿಯನ್ನೇ ಸಮರ್ಪಿಸಿದ ದಾನಶೂರ ಕರ್ಣ ಶಿರಸಂಗಿ ಲಿಂಗರಾಜ ದೇಸಾಯಿಯವರಾಗಿದ್ದಾರೆ.

ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಸುಮಾರು 1861ರ ಜನವರಿ 10ರಂದು ಕೃಷಿ ಕುಟುಂಬದಲ್ಲಿ ಜನಿಸಿದರು. ತಂದೆ ಗೂಳಪ್ಪ ಮಡ್ಲಿ, ತಾಯಿ ಎಲ್ಲವ್ವ ದಂಪತಿಗಳ 6 ಜನ ಮಕ್ಕಳಲ್ಲಿ ರಾಮಪ್ಪ ಎಂಬ ಹೆಸರಿನ ಲಿಂಗರಾಜರು ನಾಲ್ಕನೆಯವರು. ಕೇವಲ 12 ವರ್ಷದವರಿದ್ದಾಗ 1872ರಲ್ಲಿ ನವಲಗುಂದ ಸಂಸ್ಥಾನಕ್ಕೆ ದತ್ತಕರಾದಾಗ ಸಂಸ್ಥಾನದ ಒಡತಿ ಗಂಗಾಬಾಯಿ ಇವರನ್ನು ದತ್ತಕ ಪಡೆದ ತಾಯಿಗಿಂತಲೂ ಅತ್ಯಂತ ಪ್ರೀತಿ-ವಾತ್ಸಲ್ಯದಿಂದ ಬೆಳೆಸಿದರು.

ಲಿಂಗರಾಜರು ಸಿರಸಂಗಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕೊಲ್ಲಾಪುರದಲ್ಲಿ ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಇವರ ದತ್ತಕ ತಂದೆ ಜಾಯಪ್ಪ ಅವರಿಗೆ ಸಿರಸಂಗಿ ಸೇರಿದಂತೆ ಹತ್ತು ಗ್ರಾಮಗಳು ಉಂಬಳಿಯಾಗಿ ಸಿಕ್ಕಿದವು. ಲಿಂಗರಾಜರಿಗೆ ಕೃಷಿ ಕ್ಷೇತ್ರದ ಮೇಲಿದ್ದ ಪ್ರೀತಿಯಿಂದ ಕೆರೆ ಕಟ್ಟಿಸುವುದು, ಸುಧಾರಿತ ಬೀಜ, ಗೊಬ್ಬರ ಬಳಕೆ ಮೂಲಕ ವೈಜ್ಞಾನಿಕ ಕೃಷಿಗೆ ಒತ್ತು ನೀಡಿದರು. ಅನಾಥರ ರಕ್ಷಣೆಗಾಗಿ ಧರ್ಮ ಶಾಲೆಗಳ ಸ್ಥಾಪನೆ ಮಾಡಿದರು. ಧರ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಅಥಣಿ, ಅವರಾಧಿ, ಗದಗ, ಹಾನಗಲ್ ಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 1903ರಲ್ಲಿ ಅಖಿಲ ಭಾರತ ವೀಶಶೈವ ಮಹಾಸಭಾ ಸ್ಥಾಪನೆಯ ಪ್ರಮುಖರಾಗಿದ್ದರು. ಧಾರವಾಡ ಮತ್ತು ಬೆಂಗಳೂರಿನಲ್ಲಿ ನಡೆದ ಮಹಾಸಭಾದ ಅಧ್ಯಕ್ಷತೆ ವಹಿಸಿದ್ದ ಅವರು, ಅಂದು ಸ್ತ್ರೀ ಶಿಕ್ಷಣ, ನೀತಿ ಶಿಕ್ಷಣ, ವ್ಯಾಪಾರ, ಕೃಷಿ, ಸಾಂಸ್ಕೃತಿ, ಧಾರ್ಮಿಕ ಬದುಕಿನ ಬಗ್ಗೆ ಮಂಡಿಸಿದ ವಿಚಾರಗಳು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿವೆ.

ಬದುಕಿನುದ್ದಕ್ಕೂ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಅವರು ತಮ್ಮ ಕೊನೆಯ ದಿನಗಳಲ್ಲಿ ಸಂಸ್ಥಾನದ ಆಸ್ತಿಯನ್ನು ಸಮಾಜಕ್ಕೆ ಸಮರ್ಪಿಸುವ ದೃಢ ನಿರ್ಧಾರದಿಂದ ಇಚ್ಛಾಪತ್ರ ಬರೆದು ಆಗಿನ ಕಲೆಕ್ಟರ್ ಮೇ|| ಜಾಕ್ಸನ್‌ರವರ ಕೈಗಿತ್ತು ತಮ್ಮ ಮರಣಾನಂತರ ವಿಷಯ ಬಹಿರಂಗಪಡಿಸಬೇಕೆಂದು ಮನವಿ ಮಾಡಿದ್ದರು. ಈಗಿನ ಪ್ರಸಿದ್ಧ ಕೆಎಲ್‌ಇ ಸಂಸ್ಥೆಗೆ ಸಂಸ್ಥಾನದ ಆಸ್ತಿಯನ್ನು ಭೂದಾನ ನೀಡಿದ ಯುಗಪುರುಷ ಶಿರಸಂಗಿ ಲಿಂಗರಾಜರು. ಅವರ ಶುದ್ಧ ಮನಸ್ಸಿನ ಸಮರ್ಪಣಾಭಾವದ ಕಾಮಧೇನು, ಶಿಕ್ಷಣ ಪ್ರೇಮಿ ಲಿಂಗರಾಜರು 23-8-1906ರಲ್ಲಿ ನವಲಗುಂದದಲ್ಲಿ ದೈವಾಧೀನರಾದರು.

ಆದರೆ ದುರ್ದೈವದ ಸಂಗತಿಯೆಂದರೆ, ಸಮಾಜಕ್ಕಾಗಿಯೇ ಸಮರ್ಪಿಸಿಕೊಂಡ ಮಹಾನ್ ಪುರುಷ ಲಿಂಗರಾಜರ ಹುಟ್ಟೂರಿನಲ್ಲಿ ಅವರ ಹೆಸರಿನ ವೃತ್ತವೊಂದನ್ನು ಬಿಟ್ಟರೆ ಮತ್ತೇನಿಲ್ಲ. ಮುಖ್ಯವಾಗಿ ಅವರು ಹುಟ್ಟಿ ಬೆಳೆದ ಮನೆ ಈಗಲೂ ಪಾಳುಬಿದ್ದಿರುವುದು ಖೇದಕರ ಸಂಗತಿ.

ಈ ಕುರಿತು ನಾಡಿನ ಹಿತಕ್ಕಾಗಿ ತಮ್ಮ ಬೆಲೆ ಕಟ್ಟಲಾಗದಷ್ಟು ಆಸ್ತಿಯನ್ನು ದಾನ ಮಾಡಿದ ಲಿಂಗರಾಜರ ಹೆಸರಿನಲ್ಲಿ ಅವರ ಹುಟ್ಟೂರಾದ ಶಿಗ್ಲಿಯಲ್ಲಿ ಅವರ ಸ್ಮಾರಕ ಮತ್ತು ಸಮಾಜಕ್ಕೆ ಉಪಯೋಗವಾಗುವ ಸೇವಾ ಸಂಸ್ಥೆ ಪ್ರಾರಂಭಿಸಬೇಕೆಂಬುದು ಗ್ರಾಮದ ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಸರಕಾರಕ್ಕೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದಾರೆ. ಇದಕ್ಕಾಗಿ ಗ್ರಾ.ಪಂ ವತಿಯಿಂದ ಹೂವಿನ ಶಿಗ್ಲಿ ರಸ್ತೆಯಲ್ಲಿ ನೀಡಿದ 6 ಗುಂಟೆ ನಿವೇಶನದಲ್ಲಿ ಅವರ ಹೆಸರಿನ ಸಮುದಾಯ ಭವನ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಕೈಬಿಡಲಾಗಿದೆ.

ಈ ನಡುವೆ ಪ್ರತಿ ವರ್ಷ ಜನವರಿ 10ರಂದು ಶಿಗ್ಲಿಯ ಲಿಂಗರಾಜರ ಜನ್ಮದಿನಾಚರಣೆಯ ದಿನ ಸಮಾಜ ಬಾಂಧವರು ಮತ್ತು ಗ್ರಾಮಸ್ಥರು ಸೇರಿ ವೃತ್ತದಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸುವ ಕಾರ್ಯ ಮಾತ್ರ ನಡೆಯುತ್ತಿರುವುದು ಸಮಾಧಾನದ ಸಂಗತಿ.

  • ಮಲ್ಲು ಕಳಸಾಪುರ.

ಯೋಜನೆಗಳ ಅನುಷ್ಠಾನಕ್ಕಾಗಿ ಆಸಕ್ತಿಯಿಂದ ಕೆಲಸ ಮಾಡಿ: ಬಿ.ಬಿ. ಅಸೂಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ಪಂಚ ಗ್ಯಾರಂಟಿ ಯೋಜನೆಗಳ ಉದ್ದೇಶವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ. ಪಂಚ ಗ್ಯಾರಂಟಿ ಯೋಜನೆಯ ಮಹತ್ವವನ್ನು ಅರ್ಥೈಸಿಕೊಂಡು ಅವುಗಳ ಸಂಪೂರ್ಣ ಅನುಷ್ಠಾನಕ್ಕಾಗಿ ಸಂಬಂಧಿತ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು. ಸಾರ್ವಜನಿಕರ ಸುರಕ್ಷತೆಗಾಗಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು, ಅವುಗಳು ವ್ಯವಸ್ಥಿತವಾಗಿರುವ ಕುರಿತು ತಪಾಸಣೆ ನಡೆಸಬೇಕು ಎಂದು ತಿಳಿಸಿದರು.

ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಬಡಜನರ ಹಸಿವು ನೀಗಿಸುವಲ್ಲಿ ಅನ್ನಭಾಗ್ಯ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯು ಕಳ್ಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಬಿ. ಅಳಗವಾಡಿ ಮಾತನಾಡಿ, ಪಡಿತರ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಮರ್ಪಕ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಣೆಯಾಗುತ್ತಿರುವ ಕುರಿತು ಸಂಬಂಧಿತ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಬೇಕು ಎಂದರು.

ಪಂಚಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಡಿಸೆಂಬರ್ 2025ರವರೆಗೆ 249353 ನೋಂದಣಿಯಾದ ಅರ್ಜಿಗಳ ಪೈಕಿ 249353 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಾಕರಸಾ ಸಂಸ್ಥೆಯಿಂದ 11-6-2023ರಿಂದ 4-1-2026ರವರೆಗೆ 13.75 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಫೆಬ್ರುವರಿ 2025ರಿಂದ ಡಿಸೆಂಬರ್ 2025ರವರೆಗೆ ಹೆಚ್ಚುವರಿ 5 ಕೆಜಿ ಆಹಾರ ಧಾನ್ಯಗಳ ಹಂಚಿಕೆಯಡಿ ಜಿಲ್ಲೆಯಲ್ಲಿ 4,33,927 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದೆ.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜನವರಿ 2024ರಿಂದ ಸೆಪ್ಟೆಂಬರ್ 2025ರವರೆಗೆ 6356 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಆ ಪೈಕಿ 4048 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಬಾಕಿ ಉಳಿದಿರುವ 2308 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ. ಗೃಹ ಜ್ಯೋತಿ ಯೋಜನೆಯಡಿ ಒಟ್ಟು 278395 ಸ್ಥಾವರಗಳ ಪೈಕಿ 274242 ಸ್ಥಾವರಗಳು ನೋಂದಣಿಯಾಗಿವೆ.

ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿ.ಪಂ ಯೋಜನಾ ನಿರ್ದೇಶಕ ಎಂ.ಎಸ್. ಚಳಗೇರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರಾದ ಶರಣಪ್ಪ ಬೆಟಗೇರಿ, ಶರೀಫ್ ಬಿಳಿಯಲಿ, ನಾಗರಾಜ ಶಿವಪ್ಪ ಮಡಿವಾಳರ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸೀಕಟ್ಟಿ, ಗೀತಾ ಸುರೇಶ ಬೀರಣ್ಣವರ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದ್ದೇವರಮಠ, ಗ್ಯಾರಂಟಿ ಯೋಜನೆಗೆ ಸಂಬಂಧಿತ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬಸ್ ನಿಲ್ದಾಣಗಳ ಸ್ವಚ್ಛತೆ ಮುಖ್ಯವಾಗಿದ್ದು, ಬಸ್ ನಿಲ್ದಾಣದ ಆವರಣ ಸ್ವಚ್ಛವಾಗಿರುವಂತೆ ಹಾಗೂ ಅಲ್ಲಿ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದರು.

ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿವೇಕಾನಂದ ಬಡಾವಣೆ (ರಾಜೀವಗಾಂಧಿ ನಗರ), ಶ್ರೀ ಸಾಯಿಬಾಬಾ ಮಂದಿರದ ಎದುರಿಗೆ ಹಾತಲಗೇರಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಎ. ನಾಗರಾಜ ಗುರುಸ್ವಾಮಿಗಳ 45 ವರ್ಷಗಳ ಅವಿಸ್ಮರಣೀಯ ಸೇವೆ ಮತ್ತು 26 ವರ್ಷಗಳಿಂದ ನಿರಂತರ ಓಂ ಶ್ರೀ ಅಯ್ಯಪ್ಪಸ್ವಾಮಿಯ ನಿತ್ಯ ಪೂಜೆ ಗುರುಸ್ವಾಮಿಗಳು ಹಾಗೂ ಶಿಷ್ಯ ಬಳಗದಿಂದ ನಡೆಸಿಕೊಂಡು ಬಂದಿದೆ.

ಈ ವರ್ಷ ಜ. 7ರಂದು ಮಸಾರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಎ. ನಾಗರಾಜ ಗುರುಸ್ವಾಮಿಗಳು ಹಾಗೂ ಶಿಷ್ಯ ಬಳಗದ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಮೆರವಣಿಗೆಯು ಜ್ಯೋತಿ ಹಾಗೂ ಪೂರ್ಣಕುಂಭದೊಂದಿಗೆ ಜರುಗಿತು. ಜ. 8ರಂದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ಜರುಗಿತು. ಜ. 9ರಂದು ಬೆಳಿಗ್ಗೆ 9 ಗಂಟೆಗೆ ಇರುಮುಡಿ ಕಟ್ಟುವ ಕಾರ್ಯಕ್ರಮ ಜರುಗಿತು.

ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯ: ಮಹೇಶ ಹೊಗೆಸೊಪ್ಪಿನ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ನಿಂದ ನಡೆಯುತ್ತಿರುವ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಪ್ರಾಮಾಣಿಕ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘದ ಸದಸ್ಯ, ಪಕ್ಷಾತೀತ ರೈತಪರ ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಹೇಶ ಹೊಗೆಸೊಪ್ಪಿನ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಹೋರಾಟದ ಫಲವಾಗಿ ರಾಜ್ಯದಲ್ಲಿಯೇ ಪ್ರಥಮವಾಗಿ ಆರಂಭಗೊಂಡ ಟಿಎಪಿಸಿಎಂಎಸ್‌ನ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳ ಮಾರಾಟಕ್ಕಾಗಿ ನೋಂದಣಿ ಮಾಡಿಸಿದ ರೈತರಿಗೆ ಒಂದು ತಿಂಗಳಾದರೂ ಮಾರಾಟಕ್ಕೆ ಅವಕಾಶ ಸಿಗುತ್ತಿಲ್ಲ. ತಡವಾಗಿ ನೋಂದಣಿ ಮಾಡಿಸಿದ ಕೆಲ ಪ್ರಭಾವಿ ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಮಾರಾಟ ಮಹಾಮಂಡಳದ ಅಧಿಕಾರಿಗಳ ಸೂಚನೆಯಂತೆ ಕೆಲ ರೈತರ ಮೆಕ್ಕೆಜೋಳ ಖರೀದಿಸಿದ್ದೇವೆ ಮತ್ತು ಸರದಿಯಲ್ಲಿದ್ದ ರೈತರು ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಈ ಬಗ್ಗೆ ರೈತ ಸಂಘಟನೆಯವರು ಮಾಡುತ್ತಿರುವ ಕೆಲ ಆರೋಪಗಳನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ಅಲ್ಲದೇ ಈಗಾಗಲೇ ಕಡಿಮೆ ದರಕ್ಕೆ ಮೆಕ್ಕೆಜೋಳ ಮಾರಾಟ ಮಾಡಿದ ಎಲ್ಲ ರೈತರಿಗೂ ಸರ್ಕಾರದ 250 ರೂ ಸಹಾಯಧನ ಸಿಗುವಂತಾಗಬೇಕು. ಬೆಂಬಲ ಬೆಲೆಯಡಿ ಮೆಕ್ಕೆಜೋಳ ಮಾರಾಟ ಮಾಡಿ 1 ತಿಂಗಳಾಗಿದ್ದು, ಕೂಡಲೇ ರೈತರ ಖಾತೆಗೆ ಹಣ ಜಮೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ಮುಂದೆ ರಸ್ತೆಬದಿ ಗಾಡಿ ನಿಲ್ಲಿಸಿದ್ರೆ ಕಟ್ಬೇಕು ದುಡ್ಡು; ಬೆಂಗಳೂರು ವಾಹನ ಸವಾರರಿಗೆ ಶಾಕಿಂಗ್ ಸುದ್ದಿ!

0

ಬೆಂಗಳೂರು: ನಗರದಲ್ಲಿ ರಸ್ತೆಬದಿ ಅಕ್ರಮ ಪಾರ್ಕಿಂಗ್‌ಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಬಿಎ (GBA) ಪೇ ಅಂಡ್ ಪಾರ್ಕಿಂಗ್ ನಿಯಮವನ್ನು ಜಾರಿ ಮಾಡಿದೆ.

ಇನ್ಮುಂದೆ ರಸ್ತೆಬದಿ ವಾಹನ ನಿಲ್ಲಿಸಲು ಶುಲ್ಕ ಪಾವತಿ ಕಡ್ಡಾಯವಾಗಲಿದೆ. ಈ ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಪಾರ್ಕಿಂಗ್ ನಿರ್ವಹಣೆಗೆ ಶನಿವಾರ (ಜ.10) ಟೆಂಡರ್ ಕರೆಯಲಾಗಿದೆ ಎಂದು ಜಿಬಿಎ ಕಮಿಷನರ್ ತಿಳಿಸಿದ್ದಾರೆ.

ಬೆಂಗಳೂರು ಸೆಂಟ್ರಲ್ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಮರ್ಷಿಯಲ್ ರೋಡ್, ಡಿಕೆನ್ಸನ್ ರೋಡ್, ಮಿಲ್ಲರ್ಸ್ ರೋಡ್ ಸೇರಿದಂತೆ ಹಲವೆಡೆ ಪೇ ಅಂಡ್ ಪಾರ್ಕಿಂಗ್ ಜಾಗಗಳನ್ನು ಗುರುತಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ. ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಗಂಟೆಗೆ 30 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ತಿಂಗಳ ಪಾಸ್ ವ್ಯವಸ್ಥೆಯೂ ಲಭ್ಯವಾಗಲಿದೆ.

ಪ್ರದೀಪ ಹಿರೇಮಠರಿಗೆ ಪಿಎಚ್‌ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿದ್ಯಾರ್ಥಿ ಪ್ರದೀಪ ಹಿರೇಮಠ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಸ್ವಾಮಿ ಜಗನ್ನಾಥಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಸ್ಪೂರ್ತಿಗೊಂಡು ಶೈಕ್ಷಣಿಕ ಹಂತದಲ್ಲಿ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಕಂಡಿದ್ದಾರೆ.

ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಗಣಿತ ವಿಭಾಗದ ಪ್ರಾಧ್ಯಾಪಕ ಡಾ. ಭಾರತಿ ಶೆಟ್ಟರ್ ಹಾಗೂ ಡಾ. ರಮೇಶ ಜಿ.ಕೆ ಅವರ ಮಾರ್ಗದರ್ಶನದಲ್ಲಿ ‘ಕಾಂಪಿಟೇಷನಲ್ ಸ್ಟಡಿ ಆನ್ ಹೀಟ್ ಟ್ರಾನ್ಸ್‌ಫರ್ ಇನ್ ಮ್ಯಾಗ್ನಟೈಸ್ಡ್ ಫ್ಲುಯಿಡ್ ಫ್ಲೋ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪಡೆದಿದ್ದಾರೆ.

ಪ್ರದೀಪ ಹಿರೇಮಠರನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಸಮಸ್ತ ಭಕ್ತರ ಪರವಾಗಿ ಹಾಗೂ ಸ್ವಾಮಿ ವಿವೇಕಾನಂದರ ಅಧ್ಯಯನ ಕೇಂದ್ರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಾಡ್ಗಿಚ್ಚು ತಡೆಗಟ್ಟಲು ಅರಣ್ಯಾಧಿಕಾರಿಗಳ ವಿಭಿನ್ನ ಪ್ರಯತ್ನಕ್ಕೆ ಪ್ರಶಂಸೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲ್ಪಡುವ ಕಪ್ಪತಗುಡ್ಡವನ್ನು ಬೇಸಿಗೆಯ ಕಾಡ್ಗಿಚ್ಚಿನಿಂದ ರಕ್ಷಿಸಲು ಗದಗ ಅರಣ್ಯ ಇಲಾಖೆ ವಿನೂತನ ಕ್ರಮವನ್ನು ಕೈಗೊಂಡಿದೆ. ಬೆಟ್ಟಕ್ಕೆ ಬೆಂಕಿ ಹಚ್ಚುವವರನ್ನು ತಡೆಯಬೇಕು ಎನ್ನುವ ದೂರದೃಷ್ಟಿಯಿಂದ ಕಾಡಿನ ಒಡನಾಡಿಗಳಾದ ಕುರಿಗಾಯಿಗಳನ್ನು ಬೆಟ್ಟದ ರಕ್ಷಕರನ್ನಾಗಿ ಪರಿವರ್ತಿಸಲು ವಿಶೇಷ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಕಪ್ಪತಗುಡ್ಡದ ಹುಲ್ಲು ಅಥವಾ ಭೂಮಿ ಸುಟ್ಟುಹೋದರೆ, ಆ ವರ್ಷ ಮಳೆ ಮತ್ತು ಬೆಳೆಗಳು ಸಮೃದ್ಧವಾಗಿರುತ್ತವೆ ಎಂಬ ಬಲವಾದ ಮೂಢನಂಬಿಕೆ ಈ ಪ್ರದೇಶದ ಜನರಲ್ಲಿದೆ. ಈ ಕಾರಣಕ್ಕಾಗಿ ಕೆಲವರು ಉದ್ದೇಶಪೂರ್ವಕವಾಗಿ ಬೆಟ್ಟಕ್ಕೆ ಬೆಂಕಿ ಹಚ್ಚುತ್ತಾರೆ. ಇಲಾಖೆಯು ಬೆಂಕಿ ತಡೆಗಾಗಿ ಕುರಿಗಾಯಿಗಳ ವಿಶ್ವಾಸ ಗಳಿಸಲು ಉಪಯುಕ್ತ ವಸ್ತುಗಳನ್ನು ಒಳಗೊಂಡಿರುವ ವಿಶೇಷ ಕಿಟ್‌ಗಳನ್ನು ಒದಗಿಸುತ್ತಿದೆ. ಈ ಕಿಟ್‌ಗಳಲ್ಲಿ ಗಟ್ಟಿಮುಟ್ಟಾದ ಬೆನ್ನುಹೊರೆ, ಉಕ್ಕಿನ ನೀರಿನ ಬಾಟಲಿ, ರಾತ್ರಿಯಲ್ಲಿ ಬಳಸಲು ಗುಣಮಟ್ಟದ ಬ್ಯಾಟರಿ ಮತ್ತು ಕಪ್ಪತಗುಡ್ಡದ ಮಹತ್ವವನ್ನು ಎತ್ತಿ ತೋರಿಸುವ ಕರಪತ್ರಗಳು ಸೇರಿವೆ. ಇವುಗಳನ್ನು ಉಚಿತವಾಗಿ ವಿತರಿಸಲಾಗಿದೆ.

ಅರಣ್ಯ ಇಲಾಖೆಯಿಂದ ಕಳೆದ ವರ್ಷ, ಕುರಿಗಾಯಿಗಳ ಗುಡಿಸಲುಗಳಿಗೆ ಭೇಟಿ ನೀಡುವ ಮೂಲಕ ಕಪ್ಪತಗುಡ್ಡದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆದರೆ ಈ ಬಾರಿ, ನಾವು ಪ್ರತಿಯೊಬ್ಬ ಕುರಿಗಾಯಿಯವರನ್ನು ವೈಯಕ್ತಿಕವಾಗಿ ತಲುಪುತ್ತಿದ್ದೇವೆ ಮತ್ತು ಅವರಿಗೆ ಮನವರಿಕೆ ಮಾಡಿಕೊಡುತ್ತಿರುವ ಕಾರಣ ನಮಗೆ ಕುರಿಗಾಯಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ 31 ಹಳ್ಳಿಗಳ ಕುರಿಗಾಯಿಗಳ ಹಟ್ಟಿಗೆ ತೆರಳಿ 700 ಕಿಟ್‌ಗಳನ್ನು ನೀಡಲಾಗಿದೆ ಎನ್ನುತ್ತಾರೆ ಮುಂಡರಗಿ ವಿಭಾಗದ ಆರ್‌ಎಫ್‌ಒ ಮಂಜುನಾಥ ರಾಮಣ್ಣ ಮೇಗಲಮನಿ.

ಕಪ್ಪತಗುಡ್ಡ ಸುತ್ತಮುತ್ತ ಇಲಾಖೆಯು ಕುರುಬರನ್ನು ಮಾತ್ರವಲ್ಲದೆ ಕಪ್ಪತಗುಡ್ಡದ ಸುತ್ತಮುತ್ತಲಿನ ಹಳ್ಳಿಗಳ ಯುವಕರನ್ನು ಆಕರ್ಷಿಸಲು ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಸಹ ಆಯೋಜಿಸಿತ್ತು. 28 ಹಳ್ಳಿಗಳಿಂದ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದರು. ಕಪ್ಪತಗುಡ್ಡದ ಮಡಿಲಿನಲ್ಲಿರುವ ಹಳ್ಳಿಗಳ ಸಮಾಜ ಸೇವೆ, ಜಾನಪದ ಕಲಾವಿದರನ್ನು, ರೈತ ಸಾಧಕರನ್ನು ಹೀಗೆ ವಿವಿಧ ರಂಗದಲ್ಲಿ ಸಾಧನೆ ಮಾಡಿದ 200ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಕಪ್ಪತಗುಡ್ಡದ ರಕ್ಷಣೆಗಾಗಿ ಇಡೀ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಮಾಡಲು ಶ್ರಮಿಸಿರುವ ಆರ್‌ಎಫ್‌ಒ ಮಂಜುನಾಥ ರಾಮಣ್ಣ ಮೇಗಲಮನಿ ಮತ್ತು ಮುಂಡರಗಿ ಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮೇಲಾರಪ್ಪ ಮಡಿವಾಳರ, ಶರಣಪ್ಪ ನೀರಲಗಿ, ಸೋಮನಗೌಡ ಪಾಟೀಲ, ರಾಮಪ್ಪ ಕಿಚಡಿ, ಸಂತೋಷ ಕಗದಾಳ, ಮೌಲಾಸಾಬ ಬನ್ನಿಕೊಪ್ಪ, ರಾಘವೇಂದ್ರ ಹೊಸಮನಿ, ರಾಹುಲ ಬಮ್ಮನಪಾಡ, ಈಶ್ವರ ಮರತೂರ, ಬಸವರಾಜ ಬಾಲವ್ವಗೊಳ, ಐಯ್ಯನಗೌಡರ, ಗಂಗಮ್ಮ ಪೂಜಾರ, ಮಂಜುನಾಥ ದೊಡ್ಡವಾಡ, ಕೃಷ್ಣಾ ಫಮ್ಮಾರ, ಬಸುರಾಜ ಕುರಬರ, ನೂರಹಮ್ಮದ ಲೈನ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಹಿರಿಯ ಅಧಿಕಾರಿಗಳ ಸಲಹೆ-ಸೂಚನೆಯ ಮೇರೆಗೆ ಮುಂಡರಗಿ ಭಾಗದ ಸಾಧಕರನ್ನು ಸನ್ಮಾನಿಸಲಾಯಿತು. ಯುವಕರು ಪರಿಸರ ಪ್ರಿಯರಾಗಬೇಕು ಎನ್ನುವ ಹಿನ್ನೆಲೆ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮತ್ತು ಕಪ್ಪತಗುಡ್ಡ ಬೆಂಕಿ ತಡೆಗಾಗಿ ಕುರಿಗಾಯಿಗಳಿಗೆ ವಿಶೇಷ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮ ಯಶಸ್ವಿಯಾಗಲು ಈ ಭಾಗದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ಪರಿಸರವಾದಿಗಳ ಸಹಕಾರದಿಂದ ಸಾಧ್ಯವಾಗಿದೆ”

  • ಮಂಜುನಾಥ ಮೇಗಲಮನಿ
    ಅರಣ್ಯ ವಲಯಾಧಿಕಾರಿ, ಮುಂಡರಗಿ.

ತಂದೆ-ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಿ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ತಾಯಿಗಿಂತ ಮಿಗಿಲು ಯಾರೂ ಇಲ್ಲ. ತಂದೆ-ತಾಯಿಯೇ ದೇವರು. ಮಾತು ಬಾರದ ಮಗುವಿಗೆ ಮಾತು ಕಲಿಸುವವಳು ಅವ್ವ. ಪ್ರತಿಯೊಬ್ಬರೂ ಬದುಕಿನಲ್ಲಿ ತಂದೆ-ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2779ನೇ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಮಾತು ಸತ್ಯ. ಕೆಟ್ಟ ಮಕ್ಕಳು ಹುಟ್ಟಬಹುದು, ಕೆಟ್ಟ ತಾಯಿ ಇರಲಾರಳು. ಮಕ್ಕಳ ಲಾಲನೆ-ಪಾಲನೆ ಮಾಡುವ ಮೂಲಕ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಅವ್ವ ಹೊರುತ್ತಾಳೆ. ಮಕ್ಕಳಲ್ಲಿ ಬೇಧ-ಭಾವ ಮಾಡದೇ ಸಮಾನವಾಗಿ ಬೆಳೆಸುವ ಅವ್ವ ಮಕ್ಕಳ ಪಾಲಿನ ದೇವರು. ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವ್ವನ ಋಣವನ್ನು ಅವ್ವ ಸೇವಾ ಟ್ರಸ್ಟ್ ಮೂಲಕ ತೀರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಹುಬ್ಬಳ್ಳಿಯ ಎಸ್‌ಜೆಎಂ ಕಾಲೇಜಿನ ಡಾ. ಸುಪ್ರಿಯಾ ಮಾಲಶೆಟ್ಟಿ ಮಾತನಾಡಿ, ಸಾವಿರಾರು ತಂದೆಗಿಂತ ಒಬ್ಬ ತಾಯಿ ಶ್ರೇಷ್ಠ. ಸಕಲರಿಗೂ ಪೂಜ್ಯನೀಯ ತಾಯಿ. ಅವ್ವ ಬದುಕು ನೀಡುವುದರ ಜೊತೆಗೆ ಬದುಕುವ ಕಲೆಯನ್ನು ಕಲಿಸುತ್ತಾಳೆ. ಅವ್ವಳ ಪ್ರೀತಿಯಲ್ಲಿ ಅಪೇಕ್ಷೆ ಇಲ್ಲ. ಮಕ್ಕಳಿಗೋಸ್ಕರ ಏನು ಬೇಕಾದರೂ ಮಾಡುವಳು. ಜೀವನದ ಪಾಠ ಕಲಿಸುತ್ತಾಳೆ. ತಾಯಿಯ ಶ್ರದ್ಧೆ, ಸಹನೆ, ಪ್ರಾಮಾಣಿಕತೆ, ಪ್ರೀತಿ ವರ್ಣಿಸಲಸಾಧ್ಯ. ಬಸವಣ್ಣನವರ ವಚನಗಳು ಅವ್ವನ ಸೆರಗು ಇದ್ದಂತೆ ಎಂದರು.

ಎಲ್‌ಎಲ್‌ಎಂ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಹನಾ ಅನಂತ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ಸನ್ಮಾನೋತ್ತರವಾಗಿ ಮಾತನಾಡಿದ ಸಹನಾ ಕಾರ್ಕಳ, ಮಕ್ಕಳ ಜೀವನದಲ್ಲಿ ಅವ್ವ-ಅಪ್ಪನ ಪಾತ್ರ ಬಹು ದೊಡ್ಡದು ಎಂದರು.

ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶಶಿ ಸಾಲಿ ಮಾತನಾಡಿ, ಸಭಾಪತಿಗಳಾದ ಬಸವರಾಜ ಹೊರಟ್ಟಿಯವರಿಗೆ ತಾಯಿಯ ಬಗ್ಗೆ ಅಪಾರವಾದ ಪ್ರೀತಿ ಇದ್ದುದರಿಂದ ಅವ್ವನ ನೆನಪು ಸದಾ ಇರಲೆಂದು ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಅನೇಕ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದರು.

ಅತಿಥಿಗಳಾಗಿ ಆಗಮಿಸಿದ ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಕ.ಸಾ.ಪ ಧಾರವಾಡ ಅಧ್ಯಕ್ಷ ಲಿಂಗರಾಜ ಅಂಗಡಿ, ಮಾಧ್ಯಮ ಪ್ರತಿನಿಧಿಗಳಾದ ಅನಂತ ಕಾರ್ಕಳ ಉಪಸ್ಥಿತರಿದ್ದರು. ಅವ್ವ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆಯನ್ನು ಗದಗ ಅವ್ವ ಸೇವಾ ಟ್ರಸ್ಟ್ ಸಂಚಾಲಕರಾದ ಡಾ. ಬಸವರಾಜ ಧಾರವಾಡರವರು ಮಾಡಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನಸಂಗೀತ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥಪಠಣವನ್ನು ಅವನಿ ಎಂ. ಪುಣೇಕರ, ವಚನ ಚಿಂತನವನ್ನು ಶ್ರೇಯಾ ಡಿ. ವಿಠ್ಠಲ್ಕರ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂಘ ಗದಗ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ, ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಅತಿಥಿಗಳಾಗಿ ಆಗಮಿಸಿದ ಗದಗಿನ ಅವ್ವ ಸೇವಾ ಟ್ರಸ್ಟ್‌ನ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಮಾತನಾಡಿ, ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಲಿಂ. ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ 2011ರಲ್ಲಿ ಉದ್ಘಾಟನೆಯಾದ ಅವ್ವ ಸೇವಾ ಟ್ರಸ್ಟ್ ಹತ್ತು ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಾಕಿಕೊಂಡು ದೀನ-ದಲಿತರಿಗೆ, ದಿವ್ಯಾಂಗರಿಗೆ, ಮಹಿಳೆಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ವಿಶೇಷ ಸಾಧನೆ ಮಾಡಿದವರಿಗೆ ಗೌರವ ಸಲ್ಲಿಸುತ್ತ ಬಂದಿದೆ. ಶ್ರೀಮಠವು ಶಿವಾನುಭವದ ಮೂಲಕ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ: . ಎಸ್.ಪಿ. ಬಳಿಗಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರುಗಳು ದೇವರ ಸಮಾನ ಮತ್ತು ಸದಾ ಸ್ಮರಣೀಯರು ಎಂದು ಪ್ರಖ್ಯಾತ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಎಸ್.ಪಿ. ಬಳಿಗಾರ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಶಿಗ್ಲಿಯ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆ, ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮತ್ತು ವೈದ್ಯರುಗಳಿಂದ ಅಗಲಿದ ಶಿಕ್ಷಕರ ಸ್ಮರಣಾರ್ಥ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಲ್ಕೈದು ದಶಕಗಳ ಹಿಂದೆ ಗುರು-ಶಿಷ್ಯರ ಸಂಬಂಧ ಅತ್ಯಂತ ಶ್ರೇಷ್ಠವಾಗಿತ್ತು. ಶಿಕ್ಷಣ ಸೇವೆಗಾಗಿಯೇ ಬದುಕನ್ನು ಮೀಸಲಿರಿಸಿದ್ದ ಅವರು ಶಿಕ್ಷಣದ ಜತೆಗೆ ಮಕ್ಕಳಿಗೆ ಮಾನವೀಯ ಮೌಲ್ಯ, ಸಂಸ್ಕಾರ ನೀಡಿ ಪರಿಪೂರ್ಣ ಬದುಕಿಗೆ ಅಣಿಯಾಗಿಸುತ್ತಿದ್ದರು. ಮನುಷ್ಯನಿಗೆ ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯವಾಗಿದ್ದು, ನಿತ್ಯದ ಬದುಕಿನಲ್ಲಿ ದುಶ್ಚಟ, ದುರ್ಗುಣಗಳಿಂದ ದೂರವಿದ್ದು ಸತ್ಸಂಗ, ಸದ್ವಿಚಾರ, ಸಾತ್ವಿಕ ಆಹಾರ, ವ್ಯಾಯಾಮ ರೂಢಿಸಿಕೊಳ್ಳಬೇಕು. ಅಗಲಿದ ಶಿಕ್ಷಕರ ಸ್ಮರಣಾರ್ಥವಾಗಿ ಗ್ರಾಮೀಣ ಭಾಗದ ಬಡವರ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಮಾತನಾಡಿ, ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಈ ಶಾಲೆಯಲ್ಲಿ ಕಲಿತ ಹೃದಯರೋಗ ತಜ್ಞರಾದ ಡಾ. ರವಿ ಸಾಲ್ಮನಿ, ಡಾವಣಗೆರೆ ಎಸ್.ಎಸ್. ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಎನ್.ಕೆ. ಕಾಳಪ್ಪನವರ, ತಜ್ಞ ವೈದ್ಯರಾದ ಪ್ರದೀಪ ಕಲ್ಲೊಳ್ಳಿಮಠ ಸೇರಿ ಸ್ಥಳೀಯ ವೈದ್ಯರುಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು. ಶಿಗ್ಲಿ ಸೇರಿ ಸುತ್ತಲಿನ ಗ್ರಾಮಗಳ 800ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಮತ್ತು ಔಷಧೋಪಚಾರ ನೀಡಲಾಯಿತು.

ಈ ವೇಳೆ ಶಿಕ್ಷಣ ಸಂಸ್ಥೆಯ ಎಫ್.ಡಿ. ಹುನಗುಂದ, ಜಿ.ಎಫ್. ಘಂಟಾಮಠ, ಸಿ.ಎಂ. ರಾಗಿ, ಎಚ್.ಎಫ್. ತಳವಾರ, ಬಿ.ಎಂ. ಕಳಸದ, ಎನ್.ಬಿ. ಪಾಟೀಲ, ವೀರಣ್ಣ ಪವಾಡದ, ಪ್ರವೀಣ ಕಾಳಪ್ಪನವರ, ಡಿ.ವೈ. ಹುನಗುಂದ, ಸೋಮಣ್ಣ ಡಾಣಗಲ್, ಸಿದ್ದಣ್ಣ ಯಲಿಗಾರ, ಸಿ.ಬಿ. ಮುಗಳಿ, ಎಲ್.ಪಿ. ಲಮಾಣಿ, ಪಿ.ಸಿ. ಹಿರೇಮಠ, ಎಸ್.ಎ. ಪಾಟೀಲ, ಎಸ್.ಎಸ್. ಕಳ್ಳಳ್ಳಿ ಮುಂತಾದವರಿದ್ದರು. ಆರ್.ಎಂ. ಜಂಬೇರಾಳ, ಬಿ.ಬಿ. ಚಿಟಗಿ, ಆರ್.ಎಂ. ಬಸಾಪುರ ನಿರೂಪಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಮನುಷ್ಯ ಸಮಾಜ ಜೀವಿಯಾಗಿದ್ದು, ಸಮಾಜಕ್ಕಾಗಿ ಸೇವೆ ಮಾಡುವ ಮನೋಗುಣ ಬೆಳೆಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಕೃಷಿ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿದ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಕಲಿಸಿದ ಗುರುಗಳು, ಹೆತ್ತವರ ಸ್ಮರಣೆಯ ನೆಪದಲ್ಲಿ ಸಮಾಜ ಸೇವೆ ಮಾಡುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ. ಆ ಮೂಲಕ ಬದುಕನ್ನು ಸಾರ್ಥಕಗೊಳಿಸೋಣ. ಶಿಕ್ಷಣ ಕ್ಷೇತ್ರಕ್ಕೆ ಜಿಲ್ಲೆಯಲ್ಲಿಯೇ ಶಿಗ್ಲಿ ಗ್ರಾಮದ ಕೊಡುಗೆ ಶ್ರೇಷ್ಠವಾಗಿದೆ ಎಂದರು.

ಜ. 21ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

0

ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಶತಮಾನದಲ್ಲಿ ಶರಣರ ಅನುಭವ ಮಂಟಪದಲ್ಲಿ ನಿಷ್ಠುರವಾಗಿ ಮಾತನಾಡುವ ಶರಣ ಎಂದರೆ ಅಂಬಿಗರ ಚೌಡಯ್ಯ. ಎಲ್ಲ ಶರಣರಲ್ಲಿ ನಿಜಶರಣ ಎಂದು ಖ್ಯಾತಿ ಪಡೆದ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಈ ಬಾರಿ ಜನವರಿ 21ರಂದು ಅದ್ಧೂರಿಯಾಗಿ ಆಚರಿಸಲು ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸಂಘಟನೆಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಸಭೆಯಲ್ಲಿ ಮಾತನಾಡಿ, ಈ ಬಾರಿ ಜಯಂತಿಗೆ ನಗರದ ಗಣ್ಯ ಮಹನೀಯರನ್ನು ಆಹ್ವಾನಿಸಲಾಗುವುದು. ಬೈಕ್ ರ‍್ಯಾಲಿ, ಡೊಳ್ಳಿನ ಮೆರವಣಿಗೆ, ಕುಂಭ ಮೇಳ ಜರುಗುವುದು. ಕಾರಣ, ಸಮುದಾಯದ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.

ಸಮಾಜ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಗದಗ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ, ದೌರ್ಜನ್ಯ ಸಮಿತಿ ಸದಸ್ಯರಾದ ಸಂಗಮೇಶ ಹಾದಿಮನಿ ಮಾತನಾಡಿ, ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಜಯಂತಿಯನ್ನು 2020ರಿಂದ 2025ರವರೆಗೆ ಸರಳ ರೀತಿಯಲ್ಲಿ ಆಚರಿಸಿಕೊಂಡು ಬರಲಾಗಿತ್ತು. ಪ್ರಸ್ತುತ ಜನವರಿ 21ರಂದು ಅದ್ಧೂರಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದ್ದು, ಸಮಾಜದ ಯುವಕರು, ಹಿರಿಯರು, ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ಆನಂದ ಸುಣಗಾರ, ಬಸವರಾಜ ಗುಡಿಸಾಗರ, ಸುಜಾತಾ ಗುಡಿಸಾಗರ, ಪ್ರವೀಣ ನೀಲಣ್ಣವರ, ರವಿಕುಮಾರ ಗುಡಿಸಾಗರ, ಮಂಜುನಾಥ ಗುಡಿಸಾಗರ, ರಾಜು ಪೂಜಾರ, ಶಿವದೇವ ಹಾದಿಮನಿ, ಮುತ್ತು ಅಂಬಿಗೇರ, ಮಲ್ಲು ಬಾರಕೇರ, ಸುದೀಪ ಕಮತರ, ರಾಜು ಬಿನ್ನಾಳ, ದೇವು ನವಲಗುಂದ, ಹರೀರ ಬಾರಕೇರ, ಗುರು ತಿರ್ಲಾಪೂರ ಮುಂತಾದವರು ಉಪಸ್ಥಿತರಿದ್ದರು.

error: Content is protected !!